ಅವಧಾನ ಕಲೆ

ಶತಾವಧಾನಿ ಡಾ. ಆರ್ ಗಣೇಶ ಅವರ ಮೊತ್ತಮೊದಲ ತುಂಬುಗನ್ನಡದ ಶತಾವಧಾನ[೧]

ಅವಧಾನ ಕಲೆ ಒಂದು ರೀತಿಯಲ್ಲಿ ಸರಸ್ವತಿಯ ಆರಾಧನೆ. ಇದರ ಕುರಿತು ಹೇಳಿದರೆ ಹೆಚ್ಚು ಅರ್ಥವಾಗಲಿಕ್ಕಿಲ್ಲ. ಎಲ್ಲಿಯಾದರೂ ಕಾರ್ಯಕ್ರಮ ನಡೆದಾಗ ಕೂತು ನೋಡಿಯೇ ಆಸ್ವಾದಿಸಬೇಕು. ಆದರೆ ಅವಧಾನದ ಕುರಿತು ಒಂದಿಷ್ಟು ಮಾಹಿತಿ ಗೊತ್ತಿದ್ದರೆ ಅದನ್ನು ಆಸ್ವಾದಿಸಲು ಸುಲಭವಾಗುತ್ತದೆ. "ಅವಧಾನ" ಶಬ್ದಶಃ ಅರ್ಥ "ಏಕಾಗ್ರತೆ". ಅದನ್ನೊಂದು ಕಲೆಯನ್ನಾಗಿ ಅಭಿವೃದ್ಧಿ ಪಡಿಸಿದ ಕೀರ್ತಿ ಭಾರತೀಯ ಕವಿ ಪರಂಪರೆಗೆ ಸಲ್ಲಬೇಕು. ಇದು ತೆಲುಗು, ಕನ್ನಡ ಹಾಗು ಸಂಸ್ಕೃತದಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿದೆ. ಇದರಲ್ಲಿ ಅವಧಾನಿ ಹಾಗು ಪೃಚ್ಛಕ ಎಂಬ ಎರಡು ವ್ಯಕ್ತಿ ಸೂಚಕ ಶಬ್ದಗಳು ಬಳಸಲ್ಪಡುತ್ತವೆ.

ಅವಧಾನದ ಸ್ವರೂಪ

'ಪೃಚ್ಛಕ' ಎಂದರೆ ಪ್ರಶ್ನೆ ಕೇಳುವವನು. ಅವಧಾನಿ ಎಂದರೆ ಏಕಾಗ್ರಚಿತ್ತನಾಗಿ ಅವನ ಪ್ರಶ್ನೆಗೆ ಉತ್ತರಿಸುವವನು. ಅವಧಾನದಲ್ಲಿ ಹಲವು ವಿಧಗಳುಂಟು. ಯಕ್ಷಗಾನ ಆಧಾರಿತ, ಸಂಗೀತ ಆಧಾರಿತ,ಚಿತ್ರಕಲೆ ಆಧಾರಿತ, ಸಾಹಿತ್ಯಾಧಾರಿತ ಇತ್ಯಾದಿ. ಅದರಲ್ಲಿ ಪೃಚ್ಛಕರ ಸಂಖ್ಯೆಗನುಗುಣವಾಗಿ ಅಷ್ಟಾವಧಾನ, ಶತಾವಧಾನ, ಸಹಸ್ರಾವಧಾನ ಎಂದೆಲ್ಲ ಇವೆ.

  • ಅಷ್ಟಾವಧಾನವೊಂದರಲ್ಲಿ ಅಷ್ಟ-ಅಂದರೆ ಎಂಟು ಜನ ಪೃಚ್ಛಕರಿರುತ್ತಾರೆ. ಐದು ಸುತ್ತಿನಲ್ಲಿ ನಡೆಯುವ ಅವಧಾನದಲ್ಲಿ ಮೊದಲ ಸುತ್ತು ಎಲ್ಲ ಪೃಚ್ಛಕರೂ ಒಬ್ಬರಾದ ನಂತರ ಒಬ್ಬರು ಸರದಿಯಲ್ಲಿ ಅವಧಾನಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೆಯೇ ಅವರು ಪ್ರಶ್ನೆ ಕೇಳುತ್ತಿದ್ದಂತೆಯೇ ಅವಧಾನಿಗಳು ಒಂದೊಂದು ಸಾಲು ಪದ್ಯರೂಪದಲ್ಲಿ ಉತ್ತರವನ್ನು ಕೊಡುತ್ತಾ ಹೋಗುತ್ತಾರೆ.ಮುಂದಿನ ಸುತ್ತುಗಳಲ್ಲಿ ಎಲ್ಲ ಪ್ರಶ್ನೆಗಳನ್ನೂ ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡು ಅವಧಾನಿಗಳು ಉಳಿದ ಮೂರು ಸಾಲಿನ ಉತ್ತರ ಕೊಡಬೇಕು.ಈ ನಾಲ್ಕು ಸುತ್ತುಗಳು ಪೂರಣವಾದರೆ ಕೊನೆಗೆ ಐದನೇ ಸುತ್ತಿನಲ್ಲಿ ಆ ನಾಲ್ಕೂ ಸಾಲುಗಳನ್ನು ಒಟ್ಟುಗೂಡಿಸಿ ಹೇಳಬೇಕು. ಇದಕ್ಕೆ ಧಾರಣ ಎನ್ನುತ್ತಾರೆ. ಅವಧಾನಿಗಳು ಪದ್ಯಗಳನ್ನು ರಚಿಸಲು ಯಾವ ಬರಹದ ಸಾಮಗ್ರಿಗಳನ್ನೂ ಬಳಸುವಂತಿಲ್ಲ. ಅವರು ಇವಿಷ್ಟನ್ನೂ ಮನಸ್ಸಿನಲ್ಲೇ ನಿರ್ವಹಿಸಬೇಕು.

ಪೃಚ್ಛಕ ವಿಧಗಳು

ಅಪ್ರಸ್ತುತ ಪ್ರಸಂಗಿ

ಇವರು ಯಾವುದೇ ಸಂದರ್ಭದಲ್ಲಿ ಎಲ್ಲದ್ದಕ್ಕೂ ಹೊರತಾದ 'ಅಪ್ರಸ್ತುತ' ಪ್ರಶ್ನೆಗಳನ್ನು ಕೇಳುತ್ತಾರೆ. ನೋಡುಗರಿಗೆ/ಕೇಳುಗರಿಗೆ ಮನೋರಂಜನೆ ನೀಡಲು ಇವರು ಹಾಸ್ಯಪ್ರಧಾನ ಪ್ರಶ್ನೆಗಳನ್ನೇ ಕೇಳುತ್ತಾರೆ. ಅವಧಾನಿಗಳು ಬೇಸರಿಸಿಕೊಳ್ಳದೆ, ಇವರು ಎಂತಹದೇ ಕಷ್ಟದ ಪ್ರಶ್ನೆ ಕೇಳಿದರೂ ಹಾಸ್ಯತ್ಮಕವಾಗಿ ಉತ್ತರ ನೀಡಿ ಅವರ ಸಮಸ್ಯೆ ಬಗೆಹರಿಸಬೇಕು.

ಉದ್ದಿಷ್ಟಾಕ್ಷರಿ

ಇನ್ನೊಬ್ಬ ಪೃಚ್ಛಕ ಒಂದು ಸಂದರ್ಭವನ್ನು ಕೊಟ್ಟು ಛಂದೋಬದ್ಧ ಪದ್ಯ ರಚಿಸಿಕೊಳ್ಳಲು ಹೇಳುತ್ತಾರೆ. ಆಮೇಲೆ ಅವಧಾನಿಗಳು ಬೇರೆಯವರ ಪ್ರಶ್ನೆಗೆ ಉತ್ತರಿಸುತ್ತಿರುವಾಗ ಮಧ್ಯದಲ್ಲಿ ಯಾವುದೊ ಒಂದು ಸಾಲಿನ ಯಾವುದಾದರೂ ಒಂದು ಅಕ್ಷರ ಕೇಳುತ್ತಾರೆ.

ಸಂಖ್ಯಾಬಂಧ

ಇದು ಹೇಗೆಂದರೆ ಪೃಚ್ಛಕ ಸಂಖ್ಯಾಬಂಧವೊಂದನ್ನು ಕೇಳುತ್ತಾನೆ. ಸಂಖ್ಯಾಬಂಧದಲ್ಲಿ ಸಂಖ್ಯೆಗಳನ್ನು ತುಂಬಿದಾಗ ಕೊನೆಯಲ್ಲಿ ಹೇಗೆ ಕೂಡಿದರೂ ಉತ್ತರ ಒಂದೇ ರೀತಿ ಬರುವಂತೆ ಇರುತ್ತದೆ. ಅವರು ಆಗಾಗ ಇತರರ ಪ್ರಶ್ನೆಗಳ ಮಧ್ಯೆ ಒಂದೊಂದೇ ಸಂಖ್ಯೆಯನ್ನು ಕೇಳುತ್ತಾರೆ. ಇದೆ ರೀತಿ ಅಂತ್ಯದೊಳಗೆ ಅವರು ಎಲ್ಲಾ ಸಂಖ್ಯೆಗಳನ್ನೂ ಕೇಳಿ ಮುಗಿಸುತ್ತಾರೆ.

ನಿಷೇಧಾಕ್ಷರಿ

ಈ ವಿಭಾಗದಲ್ಲಿ ಅವಧಾನಿಗಳು ಪೃಚ್ಛಕರು ಕೊಟ್ಟ ವಸ್ತುವಿಷಯವನ್ನು ಆಧರಿಸಿ ಪದ್ಯ ರಚಿಸಲು ಪ್ರಾರಂಭಿಸಬೇಕು. ಇದರಲ್ಲಿ ಪೃಚ್ಛಕರು ಅವಧಾನಿಗಳ ಪ್ರತಿ ಅಕ್ಷರಕ್ಕೆ ನಿಷೇಧವನ್ನು ಒಡ್ಡುತ್ತಾರೆ. ಅಂದರೆ ಮೊದಲ ಅಕ್ಷರವನ್ನು ಅವಧಾನಿಗಳು ಹೇಳಿದರೆ ಎರಡನೇ ಅಕ್ಷರ ಇದು ಬರಬಾರದು ಎಂದು ಪೃಚ್ಛಕರು ನಿಷೇಧಿಸುತ್ತಾರೆ. ಆಗ ಅವಧಾನಿಗಳು ಅದರ ಬದಲು ಬೇರೆ ಅಕ್ಷರವನ್ನು ಬಳಸಬೇಕು. ಹೀಗೆ ನಾಲ್ಕು ಸುತ್ತುಗಳಲ್ಲೂ ಮುಂದುವರೆದ ಮೇಲೆ ಅವಧಾನಿಗಳು ಸಾರ್ಥಕವಾದ ಪದ್ಯ ರಚನೆ ಮಾಡಿರಬೇಕು.

ಆಶುಕವಿತ್ವ-ವರ್ಣನೆ

ಇದರಲ್ಲಿ ಪೃಚ್ಛಕರು ಒಂದು ಘಟನೆ ಕೊಟ್ಟು ಪದ್ಯ ರಚಿಸಲು ಹೇಳುತ್ತಾರೆ. ಆಶುಕವಿತ್ವವಾದರೆ ನಾಲ್ಕು ಸುತ್ತುಗಳಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳುವ ಅವಕಾಶ ಇರುತ್ತದೆ. ಇದಕ್ಕೆ ಧಾರಣೆ ಇರುವುದಿಲ್ಲ. ವರ್ಣನೆಯಲ್ಲಿ ಒಂದು ಸುತ್ತಿನಲ್ಲಿ ಒಂದು ಪಾದವನ್ನು ಮಾತ್ರ ಹೇಳಿ ಕೊನೆಯಲ್ಲಿ ಪದ್ಯವನ್ನು ಧಾರಣೆಯಿಂದ ಹೇಳಬೇಕು.

ನ್ಯಸ್ತಾಕ್ಷರಿ

"ನ್ಯಸ್ತಾಕ್ಷರಿ"- ಅಂದರೆ ಪ್ರತಿ ಸಾಲಿಗೂ ಒಂದೊಂದು ಅಕ್ಷರ ಕೊಡುತ್ತಾರೆ. ಮತ್ತೂ ಅದರ ಸ್ಥಾನವನ್ನೂ, ಸಂದರ್ಭವನ್ನೂ ಕೊಡುತ್ತಾರೆ. ಅದು ಅವಧಾನಿಗಳು ರಚಿಸುವ ಪದ್ಯದಲ್ಲಿ ಅದೇ ಸ್ಥಾನಗಳಲ್ಲಿ ಬರಬೇಕು. ಇದು ನಿಯಮ. ಅವಧಾನಿಗಳು ಮೊದಲ ಸುತ್ತಿನಲ್ಲಿ ಮೊದಲ ಸಾಲನ್ನು ಮಾತ್ರ ಹೇಳಿ ಉಳಿದವರಿಗೆಲ್ಲ ಮೊದಲ ಸಾಲಿನ ಉತ್ತರ ಕೊಟ್ಟ ನಂತರ ಇವರಿಗೆ ಪುನಃ ಎರಡನೇ ಸಾಲನ್ನು ಹೇಳುತ್ತಾರೆ.

ಸಮಸ್ಯಾ ಪೂರಣ

ಇದರಲ್ಲಿ ಪದ್ಯದ ಕೊನೆ ಸಾಲನ್ನು ಕೊಡುತ್ತಾರೆ. ಅವಧಾನಿಗಳು ಉಳಿದ ಮೂರು ಸಾಲುಗಳನ್ನು ರಚಿಸಿ ಅರ್ಥವತ್ತಾದ ಪದ್ಯ ರಚನೆ ಮಾಡಿ ಉತ್ತರ ನೀಡಬೇಕು. ಇಲ್ಲಿರುವ ಪ್ರಶ್ನೆಗಳಾದರೋ ತೀರ ಅಸಂಬದ್ಧವಾಗಿರುತ್ತದೆ. ಅವನ್ನು ಸರಿಯಾದ ರೀತಿಯಲ್ಲಿ ಪರಿಹರಿಸಬೇಕು. ಇವಕ್ಕೆಲ್ಲ ಅವಧಾನಿಗಳ ಸೃಜನಶೀಲ ಹಾಗೂ ಚಾಟುಪದ್ಯ ರಚನಾ ವೈಶಿಷ್ಟ್ಯಗಳು ಮುಖ್ಯವಾಗಿರುತ್ತವೆ.

ದತ್ತಪದಿ

ಪ್ರತಿ ಸಾಲಿಗೂ ಇಂತಹ ಶಬ್ದ ಇರಬೇಕೆಂದು ನಾಲ್ಕು ಶಬ್ದ ಕೊಡುತ್ತಾರೆ. ಸಂದರ್ಭವನ್ನೂ ಕೊಡುತ್ತಾರೆ. ಅವರು ಕೊಡುವ ಶಬ್ದ ಮತ್ತು ಸಂದರ್ಭಕ್ಕೆ ಯಾವ ಸಂಬಂಧವೋ ಇರುವುದಿಲ್ಲ. ಈ ರೀತಿ ತೊಡಕಿನಲ್ಲಿ ಸಿಕ್ಕದೆ ಒಂದೊಂದು ಸಾರಿ ಒಂದೊಂದು ಸಾಲನ್ನು ಹೇಳಿ ಕೊನೆಯಲ್ಲಿ ಇಡೀ ಶ್ಲೋಕವನ್ನು ಧಾರಣೆ ಮಾಡಬೇಕು.

ಘಂಟಾವಾದನ

ಘಂಟಾ ವಾದನದ ಪೃಚ್ಛಕರು ಆಗಾಗ ಘಂಟೆಯನ್ನು ಒಮ್ಮೆ 'ಠಂ' ಎಂದು ಬಡಿದು ಅವರ ಪಾಡಿಗೆ ಸುಮ್ಮನಿರುತ್ತಾರೆ. ಎಲ್ಲ ಸುತ್ತುಗಳೂ ಮುಗಿದ ನಂತರ ಅವಧಾನಿಗಳು ಅವರು ಬಡಿದ ಘಂಟೆಯ ಲೆಕ್ಕವನ್ನೂ ತಿಳಿಸಬೇಕು.

ಕಾವ್ಯವಾಚನ

ಮಹಾಕಾವ್ಯದ ಶ್ಲೋಕವೊಂದನ್ನು ಉದ್ಧರಿಸಿ ಅದು ಯಾರು ಯಾರಿಗೆ ಹೇಳಿದ್ದು, ಯಾವ ಕಾವ್ಯದ್ದು ಎಂದೆಲ್ಲ ಕೇಳುತ್ತಾರೆ. ಇದಕ್ಕೆ ಕಾವ್ಯವಾಚನ ಎನ್ನುತ್ತಾರೆ. ಅವಧಾನಿಗಳು ಆ ಕಾವ್ಯವನ್ನು ಗುರುತಿಸಿ ಅದರ ಸಂದರ್ಭವನ್ನು ವಿವರಿಸಿ ವ್ಯಾಖ್ಯಾನ ಮಾಡಬೇಕು.

ಚಿತ್ರಕವಿತ್ವ

ಇನ್ನೊಂದು ವಿಭಾಗ ಚಿತ್ರಕವಿತ್ವ. ಇದರಲ್ಲಿ ಚಿತ್ರಕವಿತ್ವದ ವಿವಿಧ ಪ್ರಕಾರಗಳಲ್ಲಿ ಯಾವುದಾದರೂ ಒಂದರಲ್ಲಿ ಪದ್ಯ ರಚಿಸಲು ಕೇಳುತ್ತಾರೆ. ಅವಧಾನಿಗಳು ಬಂಧಾದಿ ಚಿತ್ರಕವಿತಾ ಪ್ರಕಾರಗಳ ಬಗ್ಗೆಯೂ ತಿಳಿದುಕೊಂಡಿರಬೇಕಲ್ಲದೇ ಅದರಲ್ಲಿ ಆಶುವಾಗಿ ಪದ್ಯ ರಚಿಸುವ ಸಾಮರ್ಥ್ಯ ಉಳ್ಳವರಾಗಿರಬೇಕು.ಬಹಳಷ್ಟು ಅವಧಾನಿಗಳು ಈ ವಿಭಾಗವನ್ನು ನಿರ್ವಹಿಸುವುದಿಲ್ಲ.
ಮೇಲೆ ಹೇಳಿದ ವಿಭಾಗಗಳಲ್ಲಿ ಸಾಮಾನ್ಯವಾಗಿ ಎಂಟು ವಿಭಾಗಗಳನ್ನು ಮಾತ್ರ ಇಟ್ಟುಕೊಂಡಾಗ ಅಷ್ಟಾವಧಾನವಾಗುತ್ತದೆ.ಏಕಾಗ್ರತೆಗೆ ಭಂಗವನ್ನು ತರುವ ಸಭಾರಂಜನೆಯನ್ನು ಮಾಡುವ ಅಪ್ರಸ್ತುತಪ್ರಸಂಗವಂತೂ ಇದ್ದೇ ಇರುತ್ತದೆ.ಮತ್ತೆ ಉದ್ದಿಷ್ಟಾಕ್ಷರಿ ಅಥವಾ ಸಂಖ್ಯಾಬಂಧ ಅಥವಾ ಘಂಟಾಗಣನ ಇವುಗಳಲ್ಲಿ ಯಾವುದಾದರೂ ಒಂದು ಇರುತ್ತದೆ. ನಿಷೇಧಾಕ್ಷರಿ, ಸಮಸ್ಯಾಪೂರಣ, ದತ್ತಪದಿ ಇವುಗಳೂ ಸಾಮಾನ್ಯವಾಗಿ ಇರುತ್ತವೆ. ಉಳಿದಂತೆ ಕಾವ್ಯವಾಚನ ಅಥವಾ ಪುರಾಣಪಠಣ, ಆಶುಕವಿತೆ ಇವುಗಳಂತೂ ಇರುತ್ತವೆ.
ಇವುಗಳಲ್ಲದೇ ವ್ಯಸ್ತಾಕ್ಷರಿ, ನಿರ್ದಿಷ್ಟಾಕ್ಷರಿ, ಪುಷ್ಪಗಣನ ಇತ್ಯಾದಿ ಇನ್ನೂ ಹಲವಾರು ವಿಭಾಗಗಳೂ ಇದ್ದವು. ಹಲವರು ಅವಧಾನಿಗಳು ಅವನ್ನೂ ನಿರ್ವಹಿಸುತ್ತಾರೆ. ಈ ವಿಭಾಗಗಳ ಜೊತೆ ಅವಧಾನಿಗಳು ಚದುರಂಗವನ್ನೂ ಆಡುತ್ತಿದ್ದ ಉಲ್ಲೇಖಗಳೂ ಇವೆ. ಈ ಎಲ್ಲ ಪೃಚ್ಛಕರ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಿ ಧಾರಣೆ ಮಾಡಿದರೆ ಅವರನ್ನು "ಅಷ್ಟಾವಧಾನಿಗಳು" ಎನ್ನುತ್ತಾರೆ.

ಅವಧಾನದ ವಿಧಗಳು

  • ದಶಾವಧಾನ- ಹತ್ತುಜನ ಪೃಚ್ಛಕರಿಗೆ ಉತ್ತರಿಸುವುದು.
  • ತ್ರಿಗುಣಿತ ಅಷ್ಟಾವಧಾನ ;- ಪೃಚ್ಛಕರ ಮೂರು ಇಂತಹ ಗುಂಪುಗಳನ್ನು ಇಟ್ಟುಕೊಂಡು ಅಂದರೆ 24 ಪೃಚ್ಛಕರನ್ನು ಇಟ್ಟುಕೊಂಡು ಅವಧಾನ ಮಾಡುವುದು, ಇದು ಮೂರು ಅಷ್ಟಾವಧಾನಕ್ಕೆ ಸಮ.
  • ಶತಾವಧಾನ ಎಂದರೆ ಇಂತಹ ಪೃಚ್ಛಕರು ನೂರು ಜನ. ಒಂದಷ್ಟು ದತ್ತಪದಿ ಒಂದಷ್ಟು ಸಮಸ್ಯಾ ಪೂರಣ ಮತ್ತೊಂದಿಷ್ಟು ವರ್ಣನೆ ಇವೆಲ್ಲ ಇರುತ್ತವೆ. ಹೀಗೆ ಅದರಲ್ಲಿಯೂ ವೈವಿಧ್ಯತೆಗಳಿರುತ್ತವೆ. ಅವರೆಲ್ಲರಿಗೂ ಉತ್ತರ ನೀಡಿ ಧಾರಣೆ ಮಾಡಿದರೆ ಅವರನ್ನು ಶತಾವಧಾನಿಗಳು ಎಂದು ಕರೆಯಬಹುದು.
  • ಸಹಸ್ರಾವಧಾನ ಎಂದರೆ ಹೀಗೆ ಒಂದು ಸಾವಿರ ಜನ ಪೃಚ್ಛಕರಿರುತ್ತಾರೆ. multiple concentration ಎನ್ನಬಹುದಾದಂತಹ ಇದರಲ್ಲಿ ಮನುಷ್ಯನ ಏಕಾಗ್ರತಾ ಸಾಮರ್ಥ್ಯ ಗೊತ್ತಾಗುತ್ತದೆ.
  • ಅಷ್ಟಾವಧಾನಿಗಳು ಬಹಳಷ್ಟು ಜನ ಇದ್ದರಾದರೂ ಉಳಿದ ವಿಭಾಗದ ಅವಧಾನಿಗಳು ತುಂಬಾ ವಿರಳ. ಅಷ್ಟಾವಧಾನ ಮೂರು ಘಂಟೆ ನಡೆದರೆ ಶತಾವಧಾನ ಮೂರು ದಿನ ನಡೆಯುತ್ತದೆ. ಸಹಸ್ರಾವಧಾನ ಮೂವತ್ತು ದಿನ ಅಂದರೆ ಒಂದು ತಿಂಗಳ ಕಾಲ ನಡೆಯುತ್ತದೆ.
  • ಕರ್ನಾಟಕದಲ್ಲಿ ಪ್ರಸಿದ್ದರಾದವರು ಶತಾವಧಾನಿ ಆರ್. ಗಣೇಶ್. ಕನ್ನಡದಲ್ಲಿ ಅವಧಾನ ಕಲೆ ಎಂಬ ಶತಾವಧಾನಿ ಆರ್ ಗಣೇಶ್ ಅವರ ಪುಸ್ತಕ ಓದಿದರೆ ಇದರ ಬಗ್ಗೆ ಮಾಹಿತಿ ಇನ್ನು ಹೆಚ್ಚಾಗಿ ಸಿಗುತ್ತದೆ .
ಆರ್ ಗಣೇಶ ಅವರ ಸಾವಿರದ ಅಷ್ಟಾವಧಾನ

ಉಲ್ಲೇಖನ