ಆರ್ಷೇಯ ಯುಗ

ಆರ್ಷೇಯ ಯುಗ ಎಂದರೆ ಸುಮಾರು 600 ದಶಲಕ್ಷ ವರ್ಷಗಳಿಗಿಂತ ಹಿಂದಿನ ಕಾಲಕ್ಕೇ ಭೂ ವಿಜ್ಞಾನದ ಕಾಲಪಟ್ಟಿಯಲ್ಲಿ ಇರುವ ಹೆಸರು (ಆರ್ಕೀಯನ್ ಈರಾ). ಆರ್ಕೀಯನ್ ಪದ ಶಿಲಾಸಮುದಾಯದ ಅತಿ ಪ್ರಾಚೀನಕಾಲಕ್ಕೆ ಅನ್ವಯಿಸುತ್ತದೆ.

ಪದದ ಹುಟ್ಟು

ಅಲ್ಲದೆ ಇದು ಬಹುವಚನದಲ್ಲಿ (ಆರ್ಕೀಯನ್ಸ್) ಆ ಕಾಲದ ಶಿಲಾಸಮೂಹಗಳಿಗೂ ರೂಢಿಯಿಂದ ಅನ್ವಯವಾಗುತ್ತದೆ. ಈ ಪದ ಗ್ರೀಕ್ ಭಾಷೆಯ ಆರ್ಕೇಯ್ಸ್ (ಪುರಾತನ) ಮತ್ತು ಆರ್ಕಿ (ಆರಂಭ) ಎಂಬ ಮೂಲಶಬ್ದಗಳಿಂದ ನಿಷ್ಪನ್ನವಾಗಿದೆ. ಉತ್ತರ ಅಮೆರಿಕದ ಸುಪೀರಿಯರ್ ಸರೋವರದ ಸುತ್ತಮುತ್ತಲ ಅಥವಾ ಕೆನೇಡಿಯನ್ ಶೀಲ್ಡ್ ಪ್ರದೇಶದ ಕೇಂಬ್ರಿಯನ್ ಶಿಲಾಸ್ತೋಮಗಳಿಗಿಂತ ಹಿಂದಿನ ಶಿಲಾಸಮೂಹಗಳನ್ನು ಗುರುತಿಸಲು ಈ ಪದವನ್ನು ಮೊತ್ತಮೊದಲು ಬಳಸಿದರು (ಜೆ. ಡಿ. ನಾನಾ. 1872). ಈ ಸಮುದಾಯದಲ್ಲಿ ಶೀಣಿ ಕಲ್ಲುಗಳು (ಗ್ರಾನೈಟಿಕ್ ನೀಸಸ್) ಸ್ಫಟಿಕೀಕರಿಸಿದ ಪದರುಶಿಲೆಗಳು (ಕ್ರಿಸ್ಟಲೈನ್‍ಷಿಸ್ಟ್) ಮಾರ್ಪಟ್ಟ ಪ್ರಸ್ತರೀ ಶಿಲೆಗಳು (ಮೆಟ-ಸೆಡಿಮೆಂಟ್ಸ್) ರೂಪಾಂತರಗೊಳ್ಳದ ಜೀವಾವಶೇಷವಿಲ್ಲದ ಶಿಲೆಗಳು; ಮತ್ತು ಭೂಗರ್ಭದಿಂದ ಹೊರಬಂದ ಕಣಶಿಲೆ (ಎರಪ್ಟಿವ್ ಗ್ರಾನೈಟ್) ಇವು ಸೇರಿದ್ದುವು. ಮುಂದೆ 1875ರಲ್ಲಿ, ಆರ್ಕೀಯನ್ ಪದವನ್ನು ಅತಿ ಮಡಿಕೆ ಬಿದ್ದು ಹೆಚ್ಚು ರೂಪಾಂತರಗೊಂಡ ಪದರ ಶಿಲೆಗಳು ಮತ್ತು ಶೀಣಿಕಲ್ಲುಗಳ ಸಮೂಹಕ್ಕೆ ಮಾತ್ರ ಡಾನಾ ಅನ್ವಯಿಸಿದ. ಅವುಗಳ ಮೇಲ್ಪದರವಾಗಿ ಅವಸಾದನ ವಿಳಂಬನದಿಂದ (ಸ್ಟ್ರ್ಯಾಟಿಗ್ರಾಫಿಕ್ ಬ್ರೇಕ್) ಕೂಡಿದ್ದು ಜೀವಾವಶೇಷಗಳಿಲ್ಲದ ಮತ್ತು ಅಷ್ಟು ರೂಪಾಂತರ ಹೊಂದದೆ ಇರುವ ಶಿಲಾಪದರಗಳನ್ನು ಪ್ರತ್ಯೇಕಿಸಿದೆ. ಅಲ್ಲಿಂದೀಚೆಗೆ ಆರ್ಕೀಯನ್ ಪದದ ನಿರೂಪಣೆ ಮತ್ತೆ ಕೆಲವು ಬದಲಾವಣೆಗಳನ್ನು ಹೊಂದುತ್ತ ಬಂದಿದೆ. ಅಮೆರಿಕ ಸಂಯುಕ್ತಸಂಸ್ಥಾನಗಳ ಮತ್ತು ಕೆನಡದ ಭೂಶಾಸ್ತ್ರಜ್ಞರಲ್ಲಿ ಯಾವ ಸ್ತೋಮಗಳಿಗೆ ಆರ್ಕೀಯನ್ ಅಥವಾ ಆರ್ಷೇಯ ಪದ ನಿಖರವಾಗಿ ಅನ್ವಯಿಸುವುದೆಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ.[]

ಘಟಕ ಶಿಲಾಸಮೂಹಗಳು (ಕಾಂಪೊನೆಂಟ್ ರಾಕ್ಸ್)

ಕೆನೆಡಿಯನ್ ಶೀಲ್ಡಿನ ಶಿಲಾಸಮೂಹಗಳ ಖಚಿತ ಪರಿಶೋಧನೆಗಳಿಂದ ಅವು ವಿವಿಧ ಪದರುಶಿಲೆಗಳು, ಕಣಶಿಲೆಯಂಥ ಶೀಣಿಕಲ್ಲುಗಳು ಮತ್ತು ಕಣಶಿಲೆಗಳನ್ನು ಒಳಗೊಂಡಿವೆ ಎಂದು ಕಂಡುಬಂದಿದೆ. ವಿವಿಧ ಜ್ವಾಲಾಮುಖಿಜ ಶಿಲೆಗಳು ಮತ್ತು ಪ್ರಸ್ತರೀ ಶಿಲೆಗಳು ಅಧಿಕ ರೂಪಾಂತರ ಹೊಂದಿ ಪದರುಶಿಲೆಗಳಾದುವೆಂದೂ ಮುಂಚೆಯಿಂದಿದ್ದ ವಿವಿಧ ಶಿಲೆಗಳು ರೂಪಾಂತರಹೊಂದಿ ಕಣಶಿಲೆಯಂಥ ಶೀಣಿಕಲ್ಲುಗಳು ಆದುವೆಂದೂ ತೋರಿಬಂದಿದೆ. ಇವುಗಳ ಜೊತೆಯಲ್ಲಿರುವ ನಿರ್ದಿಷ್ಟ ಕಣಶಿಲೆಗಳು, ಭೂಗರ್ಭದಲ್ಲಿ ಜನಿಸಿ ಮೈಲ್ಮೈಯ ಶಿಲೆಗಳನ್ನೂ ಶೀಣಿಕಲ್ಲುಗಳನ್ನೂ ಒಳಹೊಕ್ಕಿರುವುದು ಖಚಿತವಾಗಿದೆ. ಈ ಪ್ರದೇಶದ ಆರ್ಷೇಯ ಶಿಲಾಸ್ತೋಮಗಳನ್ನು ಕೀವಾಟನ್ ಪದರು ಶಿಲೆಗಳು ಮತ್ತು ಲಾರೆನ್‍ಷಿಯನ್ ಗ್ರಾನೈಟ್ ಎಂದು ಎರಡು ವರ್ಗಗಳಾಗಿ ವಿಭಾಗಿಸಲಾಗಿದೆ.

ಕೆನೇಡಿಯನ್ ಶೀಲ್ಡಿನ ಶಿಲಾವರ್ಗಗಳನ್ನು ಹೋಲುವ ಶಿಲಾಸ್ತೋಮಗಳು ಉತ್ತರ ಅಮೆರಿಕದಲ್ಲಿ ಲ್ಯಾಬ್ರಡಾರ್ ದ್ವೀಪ. ಕೊಲರ್ಯಾಡೋ ನದಿಯ ತಳಭಾಗ ಮತ್ತು ಇನ್ನೂ ಕೆಲವು ಪ್ರದೇಶಗಳಲ್ಲಿಯೂ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಮಧ್ಯಯೂರೋಪಿನ ಬಾಲ್ಟಿಕ್ ಪ್ರದೇಶ, ಭಾರತ ಮತ್ತು ಪ್ರಪಂಚದ ಇನ್ನೂ ಕೆಲವು ಭಾಗಗಳಲ್ಲಿಯೂ ಕಂಡುಬಂದಿದೆ.[]

ಭಾರತದಲ್ಲಿ ಆರ್ಷೇಯ ಶಿಲಾವರ್ಗಗಳು

ಕೆನೆಡಿಯನ್ ಶೀಲ್ಡಿನ ಆರ್ಷೇಯ ಶಿಲೆಗಳನ್ನು ಹೋಲುವ ಪದರುಶಿಲೆಗಳು, ಶೀಣಿಕಲ್ಲುಗಳು ಮತ್ತು ಕಣಶಿಲೆಗಳು ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ಪ್ರಮಾಣಗಳ ತುಕಡಿಗಳಾಗಿ ಹರಡಿರುತ್ತವೆ. ಆರ್ಷೇಯ ಶಿಲಾಸ್ತೋಮಗಳು ದಕ್ಷಿಣ ಭಾರತದ ಹೆಚ್ಚುಭಾಗ ರಾಜಾಸ್ಥಾನ, ಮಧ್ಯಪ್ರದೇಶ, ಬಿಹಾರ್ ಮತ್ತು ಒರಿಸ್ಸ ಪೂರ್ವಘಟ್ಟಗಳು ಮತ್ತು ಆಂಧ್ರಪ್ರದೇಶದ ಕೆಲವು ಭಾಗ ಇಲ್ಲೆಲ್ಲ ಹರಡಿವೆ. ಈ ಪ್ರದೇಶಗಳ ಆರ್ಷೇಯ ಶಿಲಾಸ್ತೋಮಗಳ ಒಟ್ಟು ವಿಸ್ತೀರ್ಣ ಸುಮಾರು 1,80,000 ಚ.ಮೈ. ಉತ್ತರ ಅಕ್ಷಾಂಶ 160ಯಿಂದ ಕೆಳಗೆ ದಕ್ಷಿಣ ಭಾರತದ ಹೆಚ್ಚು ಭಾಗ ಆರ್ಷೇಯ ಶಿಲೆಗಳನ್ನು ಒಳಗೊಂಡಿದೆ. ಭಾರತ ಭೂಶೋಧನಾ ಶಾಖೆ 1857ರಲ್ಲಿ ಸ್ಥಾಪಿತವಾದ ಅನಂತರ ಕೆಲವು ವರ್ಷಗಳವರೆಗೂ ದಕ್ಷಿಣ ಭಾರತದ ಆರ್ಷೇಯ ಶಿಲೆಗಳನ್ನು ವಿಭಾಗಿಸದೆ ಎಲ್ಲವನ್ನೂ ಒಟ್ಟುಗೂಡಿಸಿ ಪ್ರಾಚೀನ ಶಿಲಾಜಾಲವೆಂದು ಮೂಲಭೂತ ನಕಾಸೆಗಳಲ್ಲಿ ತೋರಿಸುತ್ತಿದ್ದರು. 1875ರಲ್ಲಿ ಆರ್. ಬಿ. ಫೂಟ್ ಆಗಿನ ದಕ್ಷಿಣ ಮಹಾರಾಷ್ಟ್ರ ಪ್ರದೇಶದಲ್ಲಿ ಶಿಲಾಸ್ತೋಮ ಪರಿಶೋಧನೆ ನಡೆಸಿ ನಕ್ಷೆಯನ್ನು ತಯಾರಿಸುತ್ತಿದ್ದಾಗ ಅಲ್ಲಿನ ಆರ್ಷೇಯ ಶಿಲಾಸ್ತೋಮಜಾಲದಿಂದ ವಿವಿಧ ಪದರುಶಿಲೆಗಳ ಸಮೂಹವನ್ನು ಬೇರ್ಪಡಿಸಿ ಅವುಗಳನ್ನು ಪ್ರತ್ಯೇಕ ವರ್ಗವಾಗಿ ವಿಂಗಡಿಸಿದ. ಈ ಪದರು ಶಿಲೆಗಳು ಧಾರವಾಡ ಪ್ರದೇಶದಲ್ಲಿ ಹರಡಿರುವುದು ಕಂಡುಬಂದಿರುವುದರಿಂದ, ಆ ಶಿಲಾಸ್ತೋಮಕ್ಕೆ ಧಾರವಾಡ ವರ್ಗ ಎಂದು ಹೆಸರುಕೊಟ್ಟ. ಧಾರವಾಡ ಪದರು ಶಿಲೆಗಳು ಎಂದೂ ಕರೆಯುವುದಿದೆ. 1895ರಲ್ಲಿ ಪದರುಶಿಲೆಗಳ ಜೊತೆಯಲ್ಲಿರುವ ಕಣಶಿಲೆಯಂಥ ಶೀಣಿಕಲ್ಲುಗಳನ್ನೂ ಕಣಶಿಲೆಗಳನ್ನೂ ಒಟ್ಟುಗೂಡಿಸಿ ಆ ವರ್ಗಕ್ಕೆ ಆರ್ಷೇಯ ಪದವನ್ನು ಫೂಟ್ ಉಪಯೋಗಿಸಿದ. ಫೂಟ್ ಪ್ರಯೋಗಿಸಿದ ಆರ್ಷೇಯ ಪದ ಕಣಶಿಲೆಯಂಥ ಶೀಣಿಕಲ್ಲುಗಳಿಗೆ ಮತ್ತು ಕಣಶಿಲೆಗಳಿಗೆ ಮಾತ್ರ ಅನ್ವಯಿಸಿದ್ದಿತು. 1906ರಲ್ಲಿ ಹಾಲೆಂಡನ್ನು ಉತ್ತರ ಅಮೆರಿಕದಲ್ಲಿರುವ ಸುಪೀರಿಯರ್ ಸರೋವರ ಪ್ರದೇಶದ ಹ್ಯುರೋನಿಯನ್ ಶಿಲಾವರ್ಗಕ್ಕೆ ಹೋಲಬಹುದಾದ ಧಾರವಾಡದ ವರ್ಗಕ್ಕೂ ಜೀವಾವಶೇಷವಿಲ್ಲದ, ರೂಪಾಂತರ ಹೊಂದದ, ದ್ವೀಪಕಲ್ಪ ಭಾಗದಲ್ಲಿರುವ ಕಡಪ, ಕರ್ನೂಲ್, ವಿಂಧ್ಯ ಮುಂತಾದ ಪ್ರಸ್ತರೀ ಶಿಲಾವರ್ಗಗಳಿಗೂ ಆಗಾಧ ಅವಸಾಧನ ವಿಳಂಬನವಿರುವುದನ್ನು ಗಮನಕ್ಕೆ ತಂದು ಆರ್ಷೇಯ ಪದವನ್ನು ಧಾರವಾಡ ವರ್ಗಕ್ಕೂ ಅನ್ವಯಿಸಬೇಕೆಂದು ವಾದಿಸಿದ. ಈ ಅಭಿಪ್ರಾಯವನ್ನು ಫರ್‍ಮರ್ ಮುಂತಾದ ಭೂ ವಿಜ್ಞಾನಿಗಳೂ ಅಂಗೀಕರಿಸಿದರು. ಆದುದರಿಂದ ಈಗ ಆರ್ಷೇಯ ಗುಂಪಿನಲ್ಲಿ ಕಣಶಿಲೆಗಳು ಮತ್ತು ಕಣಶಿಲೆಯೆಂಥ ಶೀಣಿಕಲ್ಲುಗಳೂ ಅಲ್ಲದೆ, ಧಾರವಾಡ ಶಿಲಾಸ್ತೋಮಗಳೂ ಸೇರಿವೆ.[]

ಕರ್ನಾಟಕ

ಆರ್ಷೇಯ ಶಿಲಾಸ್ತೋಮಗಳು ಕರ್ನಾಟಕ ರಾಜ್ಯದಲ್ಲಿ ಅಧಿಕವಾಗಿವೆ. ಈ ರಾಜ್ಯದಲ್ಲಿ ಧಾರವಾಡ ಪದರುಶಿಲೆಗಳು ಉತ್ತರ-ದಕ್ಷಿಣವಾಗಿ ಮತ್ತು ಉತ್ತರ-ವಾಯವ್ಯ ದಕ್ಷಿಣ-ಆಗ್ನೇಯ ಮುಖವಾಗಿ ಸುಮಾರು 7-8 ಪಟ್ಟೆಗಳಂತೆ ಹಬ್ಬಿವೆ. ಈ ಪಟ್ಟೆಗಳಲ್ಲಿ ಅತಿ ದೊಡ್ಡವು ಉದ್ದದಲ್ಲಿ 250 ಮೈಲಿಗಳ ಮೇಲ್ಪಟ್ಟೂ ಅಗಲದಲ್ಲಿ 10-20 ಮೈಲುಗಳವರೆಗೂ ಇರುತ್ತವೆ. ಈಗಿನ ಮೈಸೂರು ರಾಜ್ಯದಲ್ಲಿ 58,000 ಚ. ಮೈಲುಗಳಷ್ಟು ಪ್ರದೇಶಗಳಲ್ಲಿ ಧಾರವಾಡ ಪದರುಶಿಲೆಗಳಿವೆ. ಉಳಿದ 50,000 ಚ. ಮೈಲುಗಳ ಪ್ರದೇಶ ಕಣಶಿಲೆ ಮತ್ತು ಪದರುಕಣಶಿಲೆಗಳಿಂದ ಕೂಡಿದೆ. ಮೈಸೂರಿನಲ್ಲಿ ಧಾರವಾಡ ವರ್ಗವನ್ನು ಮೇಲು, ಮಧ್ಯ ಮತ್ತು ತಳಭಾಗಗಳೆಂದು 3 ವಿಭಾಗಗಳಾಗಿ ವಿಂಗಡಿಸಿದೆ.

ಸೂಕ್ಷ್ಮವಾಗಿ ಮೇಲೆ ವಿವರಿಸಿರುವ ಮೈಸೂರು ರಾಜ್ಯದ ಆರ್ಷೇಯ ಶಿಲಾಸ್ತೋಮಗಳನ್ನು ಸ್ವಲ್ಪ ಹೆಚ್ಚು ಕಡಿಮೆ ಹೋಲುವ ಆರ್ಷೇಯ ಶಿಲಾಸಮೂಹಗಳು ರಾಜಾಸ್ಥಾನದ ಕೆಲವೆಡೆಗಳಲ್ಲಿವೆ. ಅಲ್ಲಿನ ಪದರು ಶಿಲಾಸ್ತೋಮದ ಹೆಸರು ಅರಾವಳೀ ವರ್ಗ. ಈ ಪದರುಶಿಲೆಗಳ ತಳದಲ್ಲಿರುವ ಕಣಶಿಲೆ ಮತ್ತು ಶೀಣಿಕಲ್ಲುಗಳನ್ನು ಪಟ್ಟೆ ಆಕೃತಿಯ ನೈಸ್ ಮತ್ತು ಬುಂದೇಲ್ ಖಂಡ ನೈಸ್ ಎಂದು ಕರೆದಿದೆ. ಇವು ಮುಖ್ಯವಾಗಿ ಜೇಡಿ ಮಣ್ಣಿನ ರೂಪಾಂತರಗಳು. ಇವುಗಳೊಂದಿಗೆ ಬೆಣಚು ಪದರುಶಿಲೆಗಳು ರೂಪಾಂತರಿಸಿದ ಸುಣ್ಣಕಲ್ಲುಗಳು ಮತ್ತು ಇತರ ವಿಧದ ಪ್ರಸ್ತರೀ ಶಿಲೆಗಳೂ ಸೇರಿವೆ.

ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಪದರಶಿಲಾಸ್ತೋಮಗಳು ಪೂರ್ವ-ಈಶಾನ್ಯ ಪಶ್ಚಿಮ-ನೈಋತ್ಯ ಮುಖವಾಗಿ ಹರಡಿವೆ. ಈ ಶಿಲಾಸ್ತೋಮಗಳನ್ನು ಪಶ್ಚಿಮ ಭಾಗದಲ್ಲಿ ಸಾಸರ್ ಮತ್ತು ಸಕೋಲಿ ಶ್ರೇಣಿಗಳೆಂದೂ ಪೂರ್ವಭಾಗದಲ್ಲಿ ಸೋಣವಾಣಿ ಮತ್ತು ಚಿಲ್ಪಿಘಟ್ಟಶ್ರೇಣಿಗಳು ಎಂದೂ ಕರೆದಿದೆ. ಇದು ಉತ್ತರದ ಮತ್ತು ದಕ್ಷಿಣದ ಎರಡು ಪಟ್ಟೆಗಳಾಗಿ ವಿಭಾಗವಾಗಿದೆ. ಉತ್ತರ ಪಟ್ಟೆ ನಾಗಪುರ, ಚಿಂದವಾರ ಮತ್ತು ಬಾಲಘಾಟಿ ಜಿಲ್ಲೆಗಳಲ್ಲಿ ಪ್ರಸರಿಸಿರುತ್ತದೆಯಲ್ಲದೆ ಅದು ಇಲ್ಲಿ ಹೆಚ್ಚು ರೂಪಾಂತರಿಸಿದ ಸಾಸರ್ ಶ್ರೇಣಿಯನ್ನು ಒಳಗೊಂಡಿದೆ. ದಕ್ಷಿಣಪಟ್ಟೆ ಸಾಸರ್ ಮತ್ತು ಸಕೋಲೆ ಶ್ರೇಣಿಗಳೆರಡನ್ನೂ ಒಳಗೊಂಡು, ನಾಗಪುರ ಮತ್ತು ಭಂಡಾರ ಜಿಲ್ಲೆಗಳ ದಕ್ಷಿಣಭಾಗದಲ್ಲಿ ಪ್ರಸರಿಸಿದೆ. ಈ ಪ್ರದೇಶದಲ್ಲಿ ಪದರುಶಿಲಾ ಶ್ರೇಣಿಗಳು ಹೆಚ್ಚು ರೂಪಾಂತರಿಸಿಲ್ಲ. ಕಣಶಿಲೆ ಮತ್ತು ಶೀಣಿಕಲ್ಲುಗಳನ್ನು ಹಿರಿಯ ಪಟ್ಟೆರೂಪದ ನೈಸ್‍ಗಳೆಂದೂ ಕಿರಿಯ ಆಮ್ಲ ಕಣಶಿಲೆಗಳೆಂದೂ ಎರಡು ಗುಂಪಾಗಿ ವಿಭಾಗಿಸಿದೆ.

ಮಧ್ಯಪ್ರದೇಶದ ಉತ್ತರ ಮತ್ತು ದಕ್ಷಿಣ ವಿಭಾಗದ ಪದರ ಶಿಲಾಪಟ್ಟೆಗಳು ಪೂರ್ವಾಭಿಮುಖವಾಗಿ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಮುಂದುವರಿದಿವೆ. ಉತ್ತರ ವಿಭಾಗದ ಪಟ್ಟೆಗೆ ಶೋಣಾನದಿ ಕಣಿವೆಯ ಮತ್ತು ಹಜಾರಿಬಾಗ ಗಯಾಮಾಂಘಿರ್ ಪ್ರದೇಶಗಳ ಬಾಹ್ಯಶಿಲಾಸ್ತರಗಳು ಸೇರಿವೆ. ದಕ್ಷಿಣ ವಿಭಾಗದ ಪಟ್ಟೆಯ ಪೂರ್ವಾಭಿಮುಖ ಮುಂದೆಳೆಯಲ್ಲಿ ಸಿಂಗಭೂಮ್ ಕಿಯೋಂಝಾರ್ ಬೊನಾಯ್ ಮಯೂರ್‍ಬಂಜ್ ಪ್ರದೇಶಗಳ ಆರ್ಷೇಯ ಶಿಲಾಸ್ತೋಮಗಳಿವೆ. ಇವುಗಳನ್ನು ಕೊಲಾನ್‍ಶ್ರೇಣಿ, ಕಬ್ಬಿಣದ ಅದುರು ಶ್ರೇಣಿ ಮತ್ತು ಪ್ರಾಚೀನ ರೂಪಾಂತರ ಶಿಲೆಗಳು ಎಂದು ಮೂರು ವಿಭಾಗಮಾಡಿದೆ. ಇವುಗಳಲ್ಲಿ ಪ್ರಾಚೀನ ರೂಪಾಂತರ ಶಿಲಾಸ್ತೋಮ ಅತ್ಯಂತ ಹಿರಿಯದು. ಈ ಪ್ರದೇಶ ಕಣಶಿಲೆ ಮತ್ತು ಕಣಶಿಲಾರೂಪದ ಶೀಣಿಕಲ್ಲುಗಳು (ಡೋಮ್ ನೈಸ್) ಮತ್ತು ಛೋಟಾನಾಗಪುರ ಕಣಶಿಲಾ ನೈಸ್ ಎಂದು ಎರಡು ವಿಭಾಗಗಳಾಗಿ ಹೆಸರುಗೊಂಡಿವೆ. ಇಲ್ಲಿನ ರಾಂಚಿ ಕಣಶಿಲೆಗಳು ಉತ್ತರ ಮತ್ತು ದಕ್ಷಿಣ ಪದರುಶಿಲಾಪಟ್ಟೆಗಳ ಮಧ್ಯದಲ್ಲಿ ಹೊರಬಂದು ಅವುಗಳನ್ನು ಪ್ರತ್ಯೇಕಿಸಿರುತ್ತವೆ. ಅದುರು_ಜನನ ಈ ಕಾಲಘಟ್ಟ ಆದುದು ಎಂದು ಅಂದಾಜು.

ಪೂರ್ವ ಭಾರತ

ಪೂರ್ವಘಟ್ಟಗಳ ಆರ್ಷೇಯ ಶಿಲಾಸ್ತೋಮಗಳು ಹೆಚ್ಚು ರೂಪಾಂತರಿಸಿದ ಪದರುಶಿಲೆಗಳನ್ನು ಒಳಗೊಂಡಿವೆ. ಈ ಶಿಲಾಸ್ತೋಮದ ಹೆಸರು ಖಾಂಡ್‍ಲೈಟ್ಸ್, ಹೈಪರ್‍ಸ್ತೀನ್ ಗ್ರಾನುಲೈಟ್ ಅಥವಾ ಚಾರ್ನಕೈಟ್ ಎಂಬ ಶಿಲೆಗಳಿಂದಲೂ ಮತ್ತು ಕೆಲವು ಪದರುಶಿಲೆಗಳ (ಕ್ವಾಟ್‍ಸೈಟ್ಸ್) ಗುಂಪಿಗೆ ಸೇರಿ ಸಿಲ್ಲಿನುನೈಟ್, ಗ್ರಾಫೈಟ್ ಗಾರ್ನೆಟ್ಸ್ ಮತ್ತು ಕಲ್ಮಷ ಮರಳು ಕಲ್ಲುಗಳು ಇವನ್ನೂ ಉಷ್ಣ ರೂಪಾಂತರವಾಗುವಾಗ ಉತ್ಪನ್ನವಾಗುವ ಇತರ ಖನಿಜಗಳನ್ನೂ ಒಳಗೊಂಡಿವೆ. ಇವು ಅರಾವಳೀ ಪದರುಶಿಲೆಗಳಂತೆ ಘಟ್ಟಪ್ರದೇಶದ ಪೂರ್ವಭಾಗದಲ್ಲಿ ಈಶಾನ್ಯ ನೈಋತ್ಯಾಭಿಮುಖವಾಗಿವೆ; ಅದಕ್ಕೆ ಪಶ್ಚಿಮಭಾಗದಲ್ಲಿ ವಾಯವ್ಯ-ಆಗ್ನೇಯಾಭಿಮುಖವಾಗಿ ಹರಡಿವೆ. ಇತರ ಆರ್ಷೇಯ ಪ್ರದೇಶಗಳಂತೆ ಇಲ್ಲಿಯ ಪದರುಶಿಲೆಗಳೂ ಕಣಶಿಲೆ ಮತ್ತು ಶೀಣಿಕಲ್ಲುಗಳೊಂದಿಗೆ ಕೂಡಿವೆ.

ಮೇಲೆ ಸೂಕ್ಷ್ಮವಾಗಿ ವಿವರಿಸಿರುವ ಖಾಂಡಲೈಟ್ ಪದರುಶಿಲೆಗಳು ನೈಋತ್ಯಾಭಿಮುಖವಾಗಿ ಮುಂದುವರಿದು ಆಂಧ್ರಪ್ರದೇಶದ ಪೂರ್ವಘಟ್ಟಗಳಲ್ಲಿ ಇದುವರೆಗೆ ಬೇರೆ ಹೆಸರಿನಿಂದ ಕರೆಯಲ್ಪಟ್ಟಿದ್ದ ಬೆಜವಾಡ ನೈಸ್ ಆಗಿ ಪರಿಣಮಿಸಿವೆ. ಇವುಗಳೊಂದಿಗೆ ಕಣಶಿಲೆಗಳು, ಶೀಣಿಕಲ್ಲುಗಳು ಮತ್ತು ಪೆಗ್ಮಟೈಟ್‍ಗಳು ಬೆರೆತಿವೆ. ಅವುಗಳನ್ನು ಸಾಧಾರಣವಾಗಿ ನೆಲ್ಲೂರು ಪೆಗ್ಮಟೈಟ್ಸ್ ಎಂದು ಕರೆಯವುದು ರೂಢಿ.

ಇತರೇ ಭಾರತ

ಮೇಲೆ ವಿವರಿಸಿರುವ ಬೇರೆ ಬೇರೆ ಆರ್ಷೇಯ ಪ್ರದೇಶಗಳ ಪದರುಶಿಲೆಗಳನ್ನೂ ಅವುಗಳೊಂದಿಗಿರುವ ಕಣಶಿಲೆ ಮತ್ತು ಶೀಣಿಕಲ್ಲುಗಳನ್ನೂ ವಿಭಾಗಿಸಿ ಒಂದು ಪ್ರದೇಶದ ಆರ್ಷೇಯ ಶಿಲೆಗಳನ್ನು ಮತ್ತೊಂದು ಪ್ರದೇಶದ ಆರ್ಷೇಯ ಶಿಲೆಗಳೊಂದಿಗೆ ಪರಸ್ಪರ ಸಂಬಂಧ ಏರ್ಪಡಿಸಿ ಸರಿತೂಗಿಸುವುದು ಈಗಿರುವ ಖಚಿತ ಪ್ರಮಾಣಗಳ ಅಭಾವದಿಂದ ಕಷ್ಟತರವಾಗಿದೆ. 1936ರಲ್ಲಿ ಫರ್ಮನ್ ಭಾರತ ಪ್ರದೇಶಗಳ ಪದರುಶಿಲೆಗಳ ಪರಸ್ಪರ ಸಂಬಂಧವೇರ್ಪಡಿಸಲು 8 ವಿವಿಧ ಪ್ರಮಾಣದ ಆಧಾರಗಳಿಂದ ಪ್ರಯತ್ನಿಸಿದೆ. ಈ ಪ್ರಮಾಣಗಳಲ್ಲಿ ಶಿಲೋತ್ಪತ್ತಿಯ ಖಚಿತಕಾಲವನ್ನು ಕಂಡುಹಿಡಿಯಲು ಈಚೆಗೆ ಬಂದಿರುವ ವಿಕಿರಣ ನಿರ್ದಿಷ್ಟಕಾಲಮಾಪಕ ಪದ್ಧತಿಗಳೂ (ರೇಡಿಯೊ ಮೆಟ್ರಿಕ್ ಡಿಟರ್ಮಿನೇಷನ್ ಆಫ್ ಅಬ್ಸಲ್ಯೂಟ್ ಏಜಸ್) ಯುರೇನಿಯಂ ಮತ್ತು ಹೀಲಿಯಂ ಪದ್ಧತಿಗಳೂ ಸೇರಿವೆ. ಇವರ ಪ್ರಯತ್ನಗಳಲ್ಲದೆ ಇನ್ನೂ ಅನೇಕ ಭೂವಿಜ್ಞಾನಿಗಳು ಆರ್ಷೇಯ ಶಿಲೆಗಳ ಪರಸ್ಪರ ಸಂಬಂಧವೇರ್ಪಡಿಸಲು ಪ್ರಯತ್ನಪಟ್ಟಿರುತ್ತಾರೆ. ಆದರೂ ಅವರ ಹೇಳಿಕೆಗಳಲ್ಲಿ ಇನ್ನೂ ಭಿನ್ನಾಭಿಪ್ರಾಯಗಳಿರುವುದರಿಂದ ಈ ಶಿಲಾಸ್ತೋಮಗಳ ಪರಸ್ಪರ ಸಂಬಂಧವನ್ನು ಇದುವರೆಗೆ ಏರ್ಪಡಿಸಿರುವುದು ನಿರ್ದಿಷ್ಟವಾಗಿಲ್ಲವಾಗಿ ಈ ಹೇಳಿಕೆಗಳನ್ನು ನಿಸ್ಸಂದೇಹವಾಗಿ ಅಂಗೀಕರಿಸಲಾಗಿಲ್ಲ.

ಕಾಲದ ಘಟ್ಟದ ನಿಗದಿ

ವಿಕಿರಣ ನಿರ್ದಿಷ್ಟಕಾಲಮಾಪಕ ಪ್ರಯೋಗಗಳಿಂದ ಪ್ರಪಂಚದ ಬೇರೆ ಬೇರೆ ಪ್ರದೇಶಗಳಲ್ಲಿರುವ ಆರ್ಷೇಯ ಶಿಲೆಗಳು ರೂಪುಗೊಂಡ ಖಚಿತ ಕಾಲ ಪ್ರಮಾಣವನ್ನು ಕಂಡುಹಿಡಿಯುವುದು ಈಗ ಸುಮಾರು 30-40 ವರ್ಷಗಳಿಂದೀಚೆಗೆ ಒಳಗೊಂಡು, ಪ್ರೀ ಕೇಂಬ್ರಿಯನ್ ಶಿಲಾವರ್ಗಗಳ ಜನನ ಕಾಲಗಳು ಸುಮಾರು 600 ದಶಲಕ್ಷ ವರ್ಷಗಳ ಹಿಂದಿನಿಂದ 3,000 ದಶಲಕ್ಷ ವರ್ಷಗಳವರೆಗೂ ವ್ಯಾಪಿಸಿರುವುದಾಗಿ ತಿಳಿದುಬರುತ್ತದೆ. ಭಾರತದ ಆರ್ಷೇಯ ಶಿಲೆಗಳ ಪೈಕಿ ಕೇವಲ ಕೆಲವುದರ ಕಾಲ ಪ್ರಮಾಣಗಳನ್ನು ಮಾತ್ರ ನಿರ್ಧರಿಸಲಾಗಿದೆ. ಈ ನಿರ್ಧಾರಗಳು ನಿರ್ದಿಷ್ಟವಾಗಿ ಜನನಕಾಲ ತಿಳಿಯಲು ಸಾಕಷ್ಟು ಇಲ್ಲದಿದ್ದರೂ ಪದರುಶಿಲಾವರ್ಗಗಳ ಪರಮಾವಧಿ ಆಯಸ್ಸು 1,500 ದಶಲಕ್ಷಗಳಿಂದ 25,000 ದಶಲಕ್ಷ ವರ್ಷಗಳವರೆಗೂ ವ್ಯಾಪಕವಾಗಿದೆಯೆಂದು ಕಂಡುಬಂದಿದೆ. ಮತ್ತು ಕಣಶಿಲಾವರ್ಗಗಳ ಈ ವಯಸ್ಸು ಸುಮಾರು 900 ದಶಲಕ್ಷ ವರ್ಷಗಳಿಂದ 1,750 ದಶಲಕ್ಷಗಳವರೆಗೂ ವಿಸ್ತಾರಗೊಂಡಿದೆಯೆಂದು ತಿಳಿದುಬಂದಿದೆ. ಈಗ ನಿರ್ಧರಿಸುವ ಆರ್ಷೇಯ ಶಿಲಾವರ್ಗಗಳ ಉತ್ಪನ್ನ ಕಾಲಾವಧಿಯನ್ನು ಅನುಸರಿಸಿ ಭಾರತದ ಆರ್ಷೇಯ ಶಿಲಾವರ್ಗಗಳ ಪರಸ್ಪರ ಸಂಬಂಧ ಮತ್ತು ಹೋಲಿಕೆಗಳನ್ನು ಈ ಪಟ್ಟಿಯಲ್ಲಿ ಕಾಣಬಹುದು.

ಆರ್ಷೇಯ ಪ್ರದೇಶಗಳಲ್ಲಿರುವ ಶಿಲಾಸ್ತೋಮಗಳ ಪರಸ್ಪರ ಸಂಬಂಧವನ್ನು ತೋರಿಸುವ ಪಟ್ಟಿ.

ಕಾಲ ದಶಲಕ್ಷ ವರ್ಷಗಳು ದಕ್ಷಿಣ ಭಾರತ (ಮೈಸೂರು) ರಾಜಾಸ್ಥಾನ ಮಧ್ಯ ಪ್ರದೇಶ ಬಿಹಾರ್ ಮತ್ತು ಒರಿಸ್ಸ ಪೂರ್ವಘಟ್ಟ ಪ್ರದೇಶ ಆಂಧ್ರ ಪ್ರದೇಶ

900-1500 (?) ಕ್ಲೋಸ್‍ಪೇಟ್ ಗ್ರಾನೈಟ್ ಬುಂದೇಲ್ ಖಂಡ ನೈಸ್ ಆಮ್ಲ ಗ್ರಾನೈಟ್ ಡೋಮ್ ನೈಸ್ ಗ್ರಾನೈಟ್ -

1570-1750 ಪೆನಿನ್‍ಸುಲಾರ್ ನೈಸ್ ಅರಾವಳಿ ಅನಂತರದ ನೈಸ್ ಪಟ್ಟೆರೂಪ ನೈಸ್ ಛೋಟಾ ನಾಗಪುರ ನೈಸ್ - ನೆಲ್ಲೂರ್ ಪೆಗ್ಮಟೈಟ್

1600-2000 (?) ಮೇಲಿನ ಧಾರವಾಡ ವರ್ಗ ರಯಾಲೋ ಶ್ರೇಣಿ ಸಕೋಲಿ ಶ್ರೇಣಿ ಕೊಲಾನ್ ಶ್ರೇಣಿ - -

2300-2450 ಛಾಂಪಿಯನ್ ನೈಸ್ ರಯಾಲೋ ಶ್ರೇಣಿ ಮತ್ತು ಪಾರ್ಲಗ್ರಾನೈಟ್‍ಗಳು - - - -

>2500 ಮಧ್ಯ ಧಾರವಾಡ ವರ್ಗ ಅರಾವಳಿ - ಸಾಸರ್ ಶ್ರೇಣಿ ಐರನ್ ಓರ್ ಶ್ರೇಣಿ ಖಾಂಡ ಲೈಟ್ ಬೆಜವಾಡ ನೈಸ್


ತಳ ಧಾರವಾಡ ವರ್ಗ - - ಓಲ್ಡರ್ ಮೆಟ ಮಾರ್ಫಿಕ್ಸ್ - -

ತಳಹದಿ ಶಿಲೆಗಳ ಹುಟ್ಟಿನ ಬಗೆ

ಆರ್ಷೇಯ ವರ್ಗದ ತಳಹದಿ ಶಿಲೆಗಳು : ಕೆನೇಡಿಯನ್ ಶೀಲ್ಡ್ ಕೊಲರೇಡೊ ದಕ್ಷಿಣವಲಯ, ದಕ್ಷಿಣ ಆಫ್ರಿಕ ಮತ್ತು ಇತರ ಆರ್ಷೇಯ ಪ್ರದೇಶಗಳಂತೆ, ಭಾರತದಲ್ಲಿಯೂ ಯಾವ ತಳಹದಿ ಶಿಲೆಗಳ ಮೇಲೆ ಆರ್ಷೇಯ ಸಮೂಹದ ಅತ್ಯಂತ ಪುರಾತನ ಶಿಲೆಗಳು ಅಂದರೆ ಜ್ವಾಲಾಮುಖಿಜ ಶಿಲೆಗಳು ಮತ್ತು ಪ್ರಾಚೀನ ಪ್ರಸ್ತರೀ ಶಿಲೆಗಳು (ಏನ್ಷಂಟ್ ಸೆಡಿಮೆಂಟ್ಸ್) ನೆಲೆಗೊಂಡು ಬೆಳೆದುವೆಂದು ಇದುವರೆಗೂ ಪತ್ತೆಯಾಗಿಲ್ಲ. ಆ ತಳಹದಿ ಶಿಲೆಗಳು ಎಂಥವು ಅವುಗಳ ಗತಿಯೇನಾಯಿತು ಅವುಗಳನ್ನು ಎಲ್ಲಿ ಗುರ್ತಿಸಬಹುದು ಎಂಬುದು ತಿಳಿದುಬಂದಿಲ್ಲ. ಮಧ್ಯ ಯೂರೋಪಿನ ಬಾಲ್ಟಿಕ್ ಷೀಲ್ಡ್‍ಗೆ ಸೇರಿದ ಸ್ಕಾಂಡಿನೇವಿಯ, ಫಿನ್‍ಲೆಂಡ್, ಉಕ್ರೇನ್, ಮುಂತಾದ ಪ್ರದೇಶಗಳಲ್ಲಿ ಆರ್ಷೇಯ ಶಿಲಾವರ್ಗಗಳಿಗಿಂತ ಹಿಂದಿನ ಕ್ಯಾಟರ್ಕಿಯನ್ ಎಂಬ ಹೆಸರಿನ ಶಿಲಾಸ್ತೋಮಗಳನ್ನು ಕಂಡುಹಿಡಿಯಲಾಗಿದೆ. ಈ ಶಿಲಾಸ್ತೋಮಗಳನ್ನು ಹೋಲುವ ಆರ್ಷೇಯ ಶಿಲೆಗಳಿಗಿಂತ ಪ್ರಾಚೀನ ಶಿಲಾವರ್ಗಗಳು ಭಾರತದಲ್ಲಿಯೂ ಇರುವುದೇ ಎಂಬುದನ್ನು ನಿರ್ದಿಷ್ಟವಾಗಿ ತಿಳಿಯಲು ಇನ್ನು ಮುಂದೆ ವಿಕಿರಣಕಾಲಮಾಪಕ ಪ್ರಯೋಗಗಳಿಂದ ನಿಷ್ಕರ್ಷಿಸಬೇಕಾಗಿದೆ. ಆರ್ಷೇಯ ಗುಂಪಿನ ಶಿಲಾಸ್ತೋಮಗಳು, ಸ್ತರವಿಭಾಗದಲ್ಲಿ ಎಲ್ಲಿಂದ ಎಲ್ಲಿಯವರೆಗೆ ಇರಬೇಕೆನ್ನುವ ವಿಷಯದಲ್ಲೂ, ಆರ್ಷೇಯ ಅನಂತರದ ಪ್ರಸ್ತರೀ ಶಿಲೋತ್ಪತ್ತಿಯ ಅಧಿಕ ವಿರಾಮವನ್ನು (ಈಪಾರ್ಕಿಯನ್ ಇಂಟರ್ವಲ್) ನಿರ್ದಿಷ್ಟವಾಗಿ ಸ್ತರವಿವರ ಶ್ರೇಣಿಯಲ್ಲಿ ಎಲ್ಲಿ ಸೇರಿಸಬಹುದೆಂಬ ವಿಚಾರದಲ್ಲೂ ಕೆನಡ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳ ಭೂಶಾಸ್ತ್ರಜ್ಞರ ಭಿನ್ನಾಭಿಪ್ರಾಯಗಳಿವೆ. ಆದುದರಿಂದ ಈಚೆಗೆ ಆರ್ಷೇಯ ಎಂಬುದನ್ನು ಸಂಪೂರ್ಣವಾಗಿ ತ್ಯಜಿಸಿ, ಕೇಂಬ್ರಿಯನ್ ಶಿಲಾವರ್ಗಕ್ಕಿಂತ ಹಿಂದಿನ ಶಿಲಾವರ್ಗಗಳೆಲ್ಲವನ್ನೂ ಪ್ರೀಕೇಂಬ್ರಿಯನ್ ಎಂದು ಕರೆಯುವುದು ರೂಢಿಗೆ ಬರುತ್ತಲಿದೆ. ಭಾರತದಲ್ಲಿ ಈ ಬದಲಾವಣೆಯ ಅಗತ್ಯವಿಲ್ಲ. ಆರ್ಷೇಯ ಶಿಲಾ ಗುಂಪುಗಳಿಗೂ ಮತ್ತು ಪ್ರೀಕೇಂಬ್ರಿಯನ್ ಶಿಲಾವರ್ಗಕ್ಕೂ ನಿಖರವಾಗಿ ಕಂಡುಬರುವ ಅವಸಾದನ ವಿಳಂಬನವಿದೆ. ಆರ್ಷೇಯ ಅನಂತರದ ಪ್ರಸ್ತರೀಶಿಲೋತ್ಪತ್ತಿಯ ಅಧಿಕ ವಿರಾಮ ಹೆಚ್ಚು ಮಡಿಕೆಗೊಂಡಿರುವ ಪದರುಶಿಲೆ ಮತ್ತು ನೈಸ್ ಶಿಲೆಗಳ ಗುಂಪಿಗೂ ಮತ್ತು ಅವುಗಳ ಮೇಲೆ ಖಚಿತ ಅವಸಾದನ ವಿಳಂಬನದಿಂದ ಮಧ್ಯವಿರುವುದು, ಭಾರತದ ಪ್ರೀಕೇಂಬ್ರಿಯನ್ ಕಾಲದ ಕಣಶಿಲೆಗಳೆಲ್ಲವೂ ಪದರುಶಿಲೆಗಳು ರೂಪುಗೊಂಡ ಬಹುಕಾಲಾನಂತರ ಅವುಗಳನ್ನು ಒಳಹೊಕ್ಕು ಉದ್ಭವಿಸಿವೆ. ಮತ್ತು ರೂಪಾಂತರಹೊಂದಿಲ್ಲದ ಪ್ರೀಕೇಂಬ್ರಿಯನ್ ಪ್ರಸ್ತರೀಶಿಲಾವರ್ಗದ ಕಡಪ, ಕರ್ನೂಲ್, ವಿಂಧ್ಯನ್ ಮತ್ತು ಇತರ ಇಂಥವೇ ವರ್ಗಗಗಳ ತಳಹದಿಯಲ್ಲಿದ್ದು ಅವುಗಳೊಂದಿಗಿರುವ ಶಿಲಾಸಮೂಹಗಳನ್ನು ಕಣಶಿಲೆಗಳಿಗಿಂತ ಹಿಂದಿನ ವರ್ಗಕ್ಕೆ ಸೇರಿದ ಆರ್ಷೇಯ ವಿಭಾಗಗಳೋ ಅಥವಾ ಅನಂತರ ಜನಿತವಾದ ಪ್ರೀಕೇಂಬ್ರಿಯನ್ ಶಿಲಾವರ್ಗಕ್ಕೆ ಸೇರಿದವುಗಳೋ ಎಂಬುದನ್ನು ನಿರ್ಧರಿಸಲು ಸಹಾಯಕವಾಗಿವೆ.[]

ಪ್ರೀಕೇಂಬ್ರಿಯನ್ ವರ್ಗಗಳು-ಅಂದರೆ ನಿರ್ದಿಷ್ಟ ಕೇಂಬ್ರಿಯನ್ ಶಿಲಾವರ್ಗಕ್ಕಿಂತ ಹಿಂದಿನ ಎಲ್ಲ ಶಿಲಾವರ್ಗಗಳು-ಅತಿ ಪ್ರಾಚೀನವಾಗಿವೆ. ಅವುಗಳ ಕಾಲಾವಧಿ ಸುಮಾರು 500 ದಶಲಕ್ಷ ವರ್ಷಗಳ ಹಿಂದಿನಿಂದ 3,000 ದಶಲಕ್ಷ ವರ್ಷಗಳ ಮೇಲ್ಪಟ್ಟಿರುತ್ತದೆ. ಈ ಅದ್ಭುತ ಕಾಲಾವಧಿಯ ವಿವಿಧ ಕಾಲದ ಶಿಲಾವರ್ಗಗಳೆಲ್ಲವನ್ನೂ ಪ್ರೀಕೇಂಬ್ರಿಯನ್ ಎಂಬ ಒಂದೇ ಹೆಸರಿನಲ್ಲಿ ಸೇರಿಸುವುದು ಸಮಂಜಸವಾಗಿ ತೋರುವುದಿಲ್ಲ. ಆರ್ಷೇಯ ಪದವನ್ನು ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಹಿಂದೆ ಉಪಯೋಗಿಸಿದ್ದಂತೆ ಕೀವಾಟಿನ ಪದರುಶಿಲೆ ಮತ್ತು ಲಾರೆನ್‍ಷಿಯನ್ ಕಣಶಿಲೆ ಶ್ರೇಣಿಗಳಿಗೂ ಮತ್ತು ಇತರ ಪ್ರದೇಶಗಳಲ್ಲಿ ಅವುಗಳಿಗೆ ಸಮಾನವಾದ ಶಿಲಾವರ್ಗಗಳಿಗೂ ಉಪಯೋಗಿಸಿ ಅವುಗಳಿಗಿಂತ ಖಚಿತವಾಗಿ ಹಿಂದಿನ ಶಿಲಾವರ್ಗಗಳಿಗೆ ಬಾಲ್ಟಿಕ್ ಷೀಲ್ಡ್ ಪ್ರದೇಶದಲ್ಲಿ ಕೊಟ್ಟಿರುವ ಕ್ಯಾಟಾರ್ಕಿಯನ್ ಎಂಬ ಹೆಸರನ್ನು ಉಪಯೋಗಿಸುವುದು ಸೂಕ್ತವೆಂದು ಕಂಡುಬರುವುದು. ಆರ್ಷೇಯ ವರ್ಗಕ್ಕಿಂತ ಅಂದರೆ ಲಾರೆನ್‍ಷಿಯನ್ ಶಿಲಾವರ್ಗದ ಅನಂತರ ಉತ್ಪನ್ನವಾಗಿ ರೂಪಾಂತರಗೊಳ್ಳದ, ಉತ್ತರ ಅಮೆರಿಕದ ಅಲಿಗಾಂಕಿಯನ್ ಪ್ರಸ್ತರೀ ಶಿಲೆಗಳಿಗಿಂತ ಮುನ್ನಿನ ಶಿಲಾವರ್ಗಗಳನ್ನು ಈಪಾರ್ಕಿಯನ್ ಎಂದು ಕರೆಯಬಹುದು. ಪ್ರೀಕೇಂಬ್ರಿಯನ್ ವರ್ಗವೊಂದನ್ನೇ ಕಾಲ ವ್ಯತ್ಯಾಸಗಳ ಆಧಾರದ ಮೇಲೆ 3-4 ವಿಭಾಗ ಮಾಡಬಹುದು.

ವಿಕಿರಣಕಾಲಮಾಪಕ ನಿರ್ಧಾರಗಳಿಂದ ಪ್ರಾಚೀನ ಕಾಲದಲ್ಲಿ ಭೂಮಿಯ ಒತ್ತಡದ ಬದಲಾವಣೆಗಳು ಕ್ರಮವಾಗಿ 350-500 ದಶಲಕ್ಷ ವರ್ಷಗಳಿಗೊಮ್ಮೆ ಮಾರ್ಪಟ್ಟಿರುವುದೆಂದೂ ಈ ಪ್ರತಿಯೊಂದು ಒತ್ತಡ ಬದಲಾವಣೆಗಳ ಕಾಲ ಸುಮಾರು 175 ದಶಲಕ್ಷದಿಂದ 250 ದಶಲಕ್ಷಗಳವರೆಗೂ ಇದ್ದಿತ್ತೆಂದೂ ತಿಳಿದುಬಂದಿದೆ. ಈ ಆಧಾರದ ಮೇಲೆ ಪ್ರಪಂಚದಲ್ಲಿ ವಿವಿಧ ಪ್ರದೇಶಗಳಲ್ಲಿ ಕಂಡುಬರುವ ಕೇಂಬ್ರಿಯನ್ ಶಿಲಾವರ್ಗಕ್ಕಿಂತ ಹಿಂದಿನ ಶಿಲಾವರ್ಗಗಳನ್ನು ಸ್ಥೂಲವಾಗಿ ಪರಸ್ಪರ ಸಂಬಂಧಗಳನ್ನು ಏರ್ಪಡಿಸಲು ಅಥವಾ ತಿಳಿಯಲು ಪ್ರೀಕೇಂಬ್ರಿಯನ್ ಶಿಲಾವರ್ಗಗಳನ್ನು ಅವುಗಳ ನಿರ್ದಿಷ್ಟ ಕಾಲವನ್ನನುಸರಿಸಿ 8 ತಂಡಗಳಾಗಿ ವಿಭಾಗಿಸಿ, ಸಮಂಜಸವಾಗಿ ಕಂಡುಬರುವ, ಎಲ್ಲ ಪ್ರದೇಶಗಳಲ್ಲಿಯೂ ಉಪಯೋಗಿಸಲಾಗುವ ಹೆಸರುಗಳನ್ನು ಕೊಡುವುದು ಸೂಕ್ತವೆಂದು ತೋರುವುದು.[]

ಕಾಲಮಾನ (ದಶಲಕ್ಷ ವರ್ಷಗಳಲ್ಲಿ)

ಸೂಚಿಸಿರುವ ಹೆಸರುಗಳು

600-800 ... ಅತಿಮೇಲಿನ ಪ್ರೀಕೇಂಬ್ರಿಯನ್

800-1,000 ... ಮೇಲಿನ ಪ್ರೀಕೇಂಬ್ರಿಯನ್

1,000-1,200 ... ಮಧ್ಯದ ಪ್ರೀಕೇಂಬ್ರಿಯನ್

1,200-1,500 ... ತಳದ ಪ್ರೀಕೇಂಬ್ರಿಯನ್

1,500-1,800 ... ಇಪಾರ್ಕಿಯನ್

1,800-2,500 ... ಮೆಸಾರ್ಕಿಯನ್

2,500-3,500 ... ಕ್ಯಾಟಾರ್ಕಿಯನ್

>3,500 ... ಪ್ರೊಟೊಲಿಥಿಕ್


ಇಂಥ ವಿಭಾಗ ಕೃತಕ ಅಥವಾ ಅಸ್ವಾಭಾವಿಕ ಎಂದು ಕಂಡುಬರಬಹುದು. ಆದರೆ ಇದು ಕೇಂಬ್ರಿಯನ್ ವರ್ಗದ ಹಿಂದಿನ ಎಲ್ಲ ಶಿಲಾವರ್ಗಗಳನ್ನೂ ಪ್ರೀಕೇಂಬ್ರಿಯನ್ ಎಂಬ ಒಂದೇ ಹೆಸರಿನಿಂದ ಕರೆಯುವ ಅಸಮಂಜಸ ಅಗತ್ಯವನ್ನು ತಪ್ಪಿಸುತ್ತದೆ.

ಖನಿಜ ಸಂಪತ್ತು

ಆರ್ಥಿಕದೃಷ್ಟಿಯಿಂದ ಉಪಯುಕ್ತವಾದ ಅನೇಕ ಖನಿಜಗಳು ಆರ್ಷೇಯ ಶಿಲಾಸ್ತೋಮಗಳಲ್ಲಿವೆ. ಭಾರತದಲ್ಲಿ ಪದರು ಶಿಲಾಸ್ತೋಮ ಚಿನ್ನ, ಕಬ್ಬಿಣದ ಅದುರು, ಮ್ಯಾಂಗನೀಸ್ ಅದುರು, ಕ್ರೋಮೈಟ್, ತಾಮ್ರ, ಸೀಸ, ಸತು, ಪಾಷಾಣ ಮತ್ತು ಸುರಮ (ಆಂಟಿಮೊನಿ) ಅದುರುಗಳನ್ನೂ ಲೋಹೇತರ ಖನಿಜಗಳಲ್ಲಿ ಕಲ್ನಾರು, ಕುರಂದ (ಕೊರ್ಯಾಂಡಮ್), ಗಾರ್ನೆಟ್ಸ್ ಅಥವಾ ಕೆಂಪು ಹರಳು, ಕಯನೈಟ್ ಮತ್ತು ಸಿಲ್ಲಿಮನೈಟ್, ಸುಣ್ಣಕಲ್ಲು ಮತ್ತು ಅಮೃತಶಿಲೆ, ಶ್ವೇತ ಸುಧಾಶಿಲೆ (ಮ್ಯಾಗ್ನಸೈಟ್), ಖನಿಜವರ್ಣಗಳು (ಮಿನರಲ್ ಪಿಗ್‍ಮೆಂಟ್ಸ್), ಹೇಮಾಕ್ಷಿ (ಪೈರೈಟ್), ಬಳಪದ ಕಲ್ಲುಗಳು, ವರ್ಮಿಕ್ಯುಲೈಟ್ ಮುಂತಾದ ಅನೇಕ ಖನಿಜ ನಿಕ್ಷೇಪಗಳನ್ನು ಒಳಗೊಂಡಿದೆ. ಕಣಶಿಲೆ ಮತ್ತು ಶೀಣಿಕಲ್ಲುಗಳ ಪೆಗ್ಮಟೈಟ್ ಸಿರಗಳಲ್ಲಿ ಬೆಣಚು ಫೆಲಾಸ್ಟಾರ್ ಅಭ್ರಕ, ಬಿಳೀ ಜೇಚು, ಪಚ್ಚೆಕಲ್ಲು, ಮಾನಜೈಟ್, ಸಾಮರಸ್ಕೈಟ್, ಕೊಲಂಬೈಟ್ ಮತ್ತು ಇತರ ವಿಕಿರಣಶಕ್ತಿ ತೋರುವ ಅಪೂರ್ವ ಮೂಲಧಾತು ಖನಿಜಗಳಿರುತ್ತವೆ


ಉಲ್ಲೇಖಗಳು