ಈಶ್ವರವಾದ
ಈಶ್ವರವಾದ -ಈಶ್ವರನ ಅಸ್ತಿತ್ವವನ್ನು ಒಪ್ಪಿದ ಮತಧರ್ಮಗಳು ಈಶ್ವರನಿಗೂ ವಿಶ್ವಕ್ಕೂ ಇರುವ ಸಂಬಂಧ. ಪಾಪಪುಣ್ಯ ಮುಂತಾದ ಪ್ರಶ್ನೆಗಳನ್ನು ಭಿನ್ನ ಭಿನ್ನ ರೀತಿಯಲ್ಲಿ ವಿವರಿಸಿದೆ. ಈಶ್ವರವಾದಿಗಳ ಆ ಎಲ್ಲ ವಿವರಗಳನ್ನಿಲ್ಲಿ ಸಂಗ್ರಹವಾಗಿ ಹೇಳಿದೆ.
ಹಿನ್ನೆಲೆ
ಅವೈದಿಕದೈವವಾದ (ನೋಡಿ- ಅವೈದಿಕದೈವವಾದ) ಈಶ್ವರನನ್ನು ಒಪ್ಪಿಕೊಂಡರೂ ವಿಶ್ವಕ್ಕೂ ಈಶ್ವರನಿಗೂ ಯಾವ ರೀತಿಯ ಸಂಬಂಧವಿದೆಯೆಂಬುದನ್ನು ಸ್ಪಷ್ಟವಾಗಿ ಹೇಳುವುದಿಲ್ಲ. ಅಲ್ಲದೆ ಈ ವಾದದ ಪ್ರಕಾರ ವಿಶ್ವಕ್ಕೆ ಅತಿದೂರನಾಗಿದ್ದು ಅದರ ವಿಷಯದಲ್ಲಿ ಅತ್ಯಂತ ಉದಾಸೀನನೂ ನಿರಾಸಕ್ತನೂ ಆಗಿರಬಹುದು. ವಿಶ್ವದ ಪಾಲನೆಯ ಹೊಣೆಗಾರಿಕೆ ಅವನ ಮೇಲಿಲ್ಲ. ವಿಶ್ವೈಕ್ಯವಾದ ಈಶ್ವರನನ್ನು ವಿಶ್ವೈಕ್ಯನೆಂದು ಹೇಳುವುದೇ ಹೊರತು ಮಾನವ ಈಶ್ವರನನ್ನು ಕಾಣುವ ಬಗೆಯನ್ನಾಗಲೀ ಆರಾಧಿಸುವ ರೀತಿಯನ್ನಾಗಲೀ ಸ್ಪಷ್ಟಪಡಿಸುವುದಿಲ್ಲ. ಸರ್ವವೂ ಅವನೇ, ಒಳ್ಳೆಯದು ಕೆಟ್ಟದ್ದು ಎಲ್ಲವೂ ಅವನೇ ಎಂದು ಹೇಳಿ ನಿಲ್ಲಿಸುತ್ತದೆ. ಈ ವಾದಗಳೆರಡೂ ಈಶ್ವರನ ಕಲ್ಯಾಣಗುಣಗಳ ಮಾತನ್ನೇ ಎತ್ತುವುದಿಲ್ಲ. ಮೂರನೆಯದಾಗಿ ಮಾನವನ ಅಂತರಂಗಸಮ್ಮತವಾದ ಈಶ್ವರವಾದ ತಲೆಯೆತ್ತಿತ್ತು. ಮಾನವನ ಜೀವನದ ಅರ್ಥವೇನು ? ಅವನ ಅಂತಿಮ ಧ್ಯೇಯವೇನು ? ಅವನ ಉದ್ದೇಶವೇನು ? ಎಂಬ ಪ್ರಶ್ನೆಗಳನ್ನೂ ಅವನಿಗೂ ಈಶ್ವರನಿಗೂ, ವಿಶ್ವಕ್ಕೂ ಈಶ್ವರನಿಗೂ ಇರುವ ಸಂಬಂಧವನ್ನೂ ಈಶ್ವರವಾದ ಪರಿಶೀಲಿಸುತ್ತದೆ. ಇದರಲ್ಲಿ ಮತ ಧರ್ಮದ ಕಲ್ಪನೆ ಬರುತ್ತದೆ. ಮಾನವನ ಎಲ್ಲ ಧಾರ್ಮಿಕ ನಂಬಿಕೆಗಳಿಗೂ ನೈತಿಕ ಜೀವನಕ್ಕೂ ಆಧ್ಯಾತ್ಮವಿಕಾಸಕ್ಕೂ ಈಶ್ವರವಾದ ಪೋಷಕವೂ ದ್ಯೋತಕವೂ ಆಗಿದೆ. ಮಾನವನ ಬಾಳಿಗೆ ಒಂದು ಬೆಲೆಯನ್ನು ಕಟ್ಟಿ ಅವನ ಆತ್ಮೋದ್ಧಾರಕ್ಕೆ ಮಾರ್ಗದೀವಿಗೆಯಂತಿದೆ.[೧]
ವ್ಯಾಪ್ತಿಯ ಅರಿವು
ಅವೈದಿಕದೈವವಾದದ ವಿಶ್ವಾತೀತನಾದ ಈಶ್ವರನನ್ನೂ ವಿಶ್ವೈಕ್ಯವಾದದ ವಿಶ್ವೈಕ್ಯನಾದ ಈಶ್ವರನನ್ನೂ ಈಶ್ವರವಾದ ಒಟ್ಟಿಗೆ ಅಂಗೀಕರಿಸುತ್ತದೆ. ವಿಶ್ವಾತೀತನೆಂದರೆ ವಿಶ್ವಕ್ಕೆ ಅಧೀನನಾಗದವ, ಅದನ್ನು ತನ್ನ ಅಧೀನದಲ್ಲಿಟ್ಟುಕೊಂಡು ಪಾಲಿಸುವವ, ಅದರ ಅಳಿವು ಉಳಿವುಗಳಲ್ಲಿ ಪಾತ್ರವಹಿಸುವವ. ವಿಶ್ವೈಕ್ಯನೆಂದರೆ ವಿಶ್ವದಿಂದ ದೂರನಲ್ಲ. ಅದರ ನಿರ್ವಹಣೆ ಅವನಿಗೆ ಸೇರಿದೆ: ಆದರೆ ಆತ ವಿಶ್ವಕ್ಕೆ ನಿಯಮಿತನಾಗಿಲ್ಲ. ಮಾನವನ ಅಂತರಂಗದಲ್ಲಿ ನೆಲಸಿದ್ದರೂ ಅವನ ಕರ್ಮಗಳಿಂದ ಅಸ್ತನಾಗದೆ ಇರುವ ಅಸಂಗಿ, ನಿರ್ವಿಕಾರಿ. ಸರ್ವವ್ಯಾಪಕನಾಗಿದ್ದರೂ ಸರ್ವ ಸ್ವತಂತ್ರ. ಮಾವನೊಂದಿಗೆ ಧಾರ್ಮಿಕ ಸಂಬಂಧವನ್ನು ಅವನ ಮೇಲ್ಮೆಗಾಗಿಯೇ ಇಟ್ಟುಕೊಂಡವ, ತನ್ನ ಲಾಭಕ್ಕಲ್ಲ. ವಿಶ್ವದ ದೋಷಗಳಲ್ಲಿ ಐಕ್ಯನಲ್ಲ.
ತತ್ತ್ವಜ್ಞರು ಈಶ್ವರನ ಅಸ್ತಿತ್ವವನ್ನು ಪ್ರಮಾಣ ಪೂರ್ವಕವಾಗಿ ಸಿದ್ಧಾಂತ ಮಾಡಲು ಪ್ರಯತ್ನಿಸಿದ್ದಾರೆ. ಮೊದಲನೆಯದಾಗಿ ವಿಶ್ವದ ಮೂಲವನ್ನು ಕುರಿತು ಪ್ರಶ್ನೆಮಾಡಿ ಈಶ್ವರನೇ ಸೃಷ್ಟಿಕರ್ತನೆಂದು ವಾದಿಸುತ್ತಾರೆ. ಸರ್ವೇಶ್ವರನ ಇಚ್ಚೆಯಿಂದಲೇ ಸಕಲ ಚರಾಚರಜಗತ್ತು (ಅನಂತಕೋಟಿ ಬ್ರಹ್ಮಾಂಡಗಳೂ) ಸೃಷ್ಟಿಸಲ್ಪಟ್ಟಿತು. ಇತರ ಸಾಧನ ಸಾಮಗ್ರಿಗಳೇನೂ ಈಶ್ವರನಿಗೆ ಬೇಕಾಗಿಲ್ಲ. ಅವನೇ ಸೃಷ್ಟಿಸ್ಥಿತಿ ಲಯಗಳಿಗೆ ಉಪಾದಾನ ಮತ್ತು ನಿಮಿತ್ತ ಕಾರಣನೆಂದು ಈಶ್ವರವಾದಿಗಳು ಹೇಳುತ್ತಾರೆ. ಇನ್ನಾವ ರೀತಿಯಿಂದಲೂ ವೈಜ್ಞಾನಿಕ ದೃಷ್ಟಿಯಿಂದಲೂ ಸೃಷ್ಟಿಯನ್ನು ಎದುರಿಸಲು ಸಾಧ್ಯವಿಲ್ಲವಾದ್ದರಿಂದ ಈಶ್ವರನ ಅಸ್ತಿತ್ವವನ್ನು ಒಪ್ಪಿಕೊಳ್ಳಲೇಬೇಕೆಂದು ಇವರ ವಾದ.
ಮನಸ್ಸು
ಈಶ್ವರನಿರದಿದ್ದರೆ ಈಶ್ವರನ ಕಲ್ಪನೆಯೇ ಬರುತ್ತಿರಲಿಲ್ಲವೆಂಬುದು ಒಂದು ಸಿದ್ಧಾಂತ. ಮಾನವನ ಮನಸ್ಸೇ ಈಶ್ವರನನ್ನು ಸೃಷ್ಟಿಸಲಾರದು. ಅವನಿದ್ದರೆ ಮಾತ್ರ ಮನಸ್ಸಿಗೆ ಗೋಚರನಾಗುತ್ತಾನೆ. ಈ ಸಿದ್ಧಾಂತವನ್ನು ಮೊಟ್ಟಮೊದಲು ಪಾಶ್ಚಾತ್ಯದೇಶದಲ್ಲಿ ಪ್ರಚುರಪಡಿಸಿದವ ಸೇಂಟ್ ಆನ್ಸೆಲ್ಮ್ (1033-1109) (ನೋಡಿ- ಆನ್ಸೆಲ್ಮ್,-ಸೇಂಟ್). ಇವನ ಅನಂತರ 17-18ನೆಯ ಶತಮಾನಗಳಲ್ಲಿ ಡೇಕಾರ್ಟ್, ಲೈಬ್ನಿಟ್ಸ್, ಸ್ಟಿನೋಜû ಎಂಬ ದಾರ್ಶನಿಕರು ಇದನ್ನು ಹೆಚ್ಚು ಪ್ರಚಾರಕ್ಕೆ ತಂದರು. ಸರ್ವತಂತ್ರ ಸ್ವತಂತ್ರನಾದ, ಸ್ವಪರಿಪೂರ್ಣವಾದ, ಸತ್ಯ ಒಂದಿರಲೇಬೇಕೆಂಬ ಭಾವನೆ ಅಲ್ಪನೂ ಅನಿತ್ತನೂ ಆದ ಮಾನವನಿಗೆ ಬರಬೇಕಾದರೆ ಅಂಥ ಸತ್ಯ ಒಂದು ಇರಲೇಬೇಕೆಂಬ ಡೇಕಾರ್ಟ್ ವಾದಿಸಿದ. ಅದನ್ನೇ ಈಶ್ವರ ಎನ್ನಬಹುದು.[೨]
ಪ್ಲೇಟೊ ಮತ್ತು ಅರಿಸ್ಟಾಟಲ್
ಪ್ಲೇಟೊ ಮತ್ತು ಅರಿಸ್ಟಾಟಲ್ ಎಂಬ ಗ್ರೀಸಿನ ದಾರ್ಶನಿಕರು ಜಗತ್ತು ಯಾವ ಆಧಾರದ ಮೇಲೆ ನಿಂತಿದೆ. ನಡೆಯುತ್ತಿದೆ ಎಂಬ ಪ್ರಶ್ನೆಯನ್ನು ಹಾಕಿ ಅದಕ್ಕೆ ಕಾರಣವನ್ನು ಜಗತ್ತಿನಲ್ಲಿರುವ ಯಾವ ಅಂಶವೂ ಸ್ಪಷ್ಟಪಡಿಸದಿರುವುದರಿಂದ ಎಲ್ಲವೂ ನಶ್ವರವೂ ಬದಲಾವಣೆಯಾಗುತ್ತಿರುವುದೂ ಆಗಿರುವುದರಿಂದ ಇದನ್ನು ಮೀರಿರುವ, ಇದರಿಂದ ಬೇರೆಯಾಗಿರುವ ಅನಂತವಾಗಿರುವ ಒಂದು ಶಕ್ತಿ ಅದಕ್ಕೆ ಕಾರಣವಾಗಿರಬೇಕು, ಅದೇ ಈಶ್ವರ, ಎಂದು ತರ್ಕಿಸಿದರು. ಈ ವಾದವನ್ನು ಅಕ್ವಿನಸ್ (ನೋಡಿ- ಅಕ್ವಿನಸ್,-ಸೇಂಟ್-ಥಾಮಸ್) ಎಂಬ ತತ್ವಜ್ಞಾನಿ ಹೆಚ್ಚು ವಿಸ್ತಾರವಾಗಿ ಪ್ರಚಾರಮಾಡಿದ. ಈಶ್ವರನೇ ಆದಿಕಾರಣ ಎಂಬ ಭಾವನೆ ಈ ಸಿದ್ಧಾಂತದಲ್ಲಿ ಮುಖ್ಯವಾದುದು. 20ನೆಯ ಶತಮಾನದಲ್ಲಿ ವೈಟ್‍ಹೆಡ್ ಇದನ್ನು ಅನುಮೋದಿಸಿದ್ದಾನೆ. ನ್ಯಾಯ ವೈಶೇಷಿಕ ಯೋಗದರ್ಶನಗಳು ಈ ಸಿದ್ಧಾಂತವನ್ನೇ ಈಶ್ವರನ ಅಸ್ತಿತ್ವವನ್ನು ಸಾಧಿಸುವಾಗ ಪ್ರಚುರಪಡಿಸಿವೆ.
ಸೃಷ್ಟಿಯಲ್ಲಿ ಒಂದು ಕ್ರಮ ಮತ್ತು ಮಾನವನಿಂದ ನಿರ್ಮಿತವಾಗದ ಸುವ್ಯವಸ್ಥಿತ ರಚನೆ ಇರುವುದರಿಂದ ಇದನ್ನು ನಿರ್ಮಿಸಿದ ಶಿಲ್ಪಿಯೇ ಈಶ್ವರ ಎಂಬುದು ಮತ್ತೊಂದು ಸಿದ್ಧಾಂತ. ಬುದ್ಧಿಶಕ್ತಿ ಇಲ್ಲದ ಯಾವುದನ್ನೂ ರಚಿಸಲು ಸಾಧ್ಯವಿಲ್ಲ. ಸೃಷ್ಟಿಯಂಥ ಅದ್ಭುತ ರಚನೆಯನ್ನು ಮಾಡಿರುವ ಬುದ್ಧಿಶಕ್ತಿಯೇ ಈಶ್ವರ. ಸೃಷ್ಟಿಯ ವ್ಯಾಪಾರದಲ್ಲಿ ಉದ್ದೇಶವೂ ಕಂಡುಬರುತ್ತದೆ. ಈ ಉದ್ದೇಶ ಮಾನವನದಲ್ಲ. ಭಗವಂತನೆಂಬುವನದು-ಎಂದು ಈಶ್ವರವಾದಿಗಳು ಹೇಳುತ್ತಾರೆ. ಉಪನಿಷತ್ತುಗಳೂ ಪಾಶ್ಚಾತ್ಯದರ್ಶನಗಳೂ ಈ ಸಿದ್ಧಾಂತವನ್ನು ಇತರ ಸಿದ್ಧಾಂತಗಳಿಗಿಂತ ಹೆಚ್ಚು ಅರ್ಥಪೂರ್ಣವೂ ಆಗಿದೆ ಸಮಂಜಸವೂ ಆಗಿದೆ ಎಂದು ಒಪ್ಪಿಕೊಳ್ಳುತ್ತವೆ. ಮೇಲಿನ ಯಾವ ಸಿದ್ಧಾಂತದಲ್ಲೂ ಭಗವಂತನಿಗೂ ಮಾನವನಿಗೂ ಇರುವ ನಿಕಟ ಸಂಬಂಧ ವಿಶದವಾಗಿಲ್ಲ. ಈಶ್ವರನ ಆರಾಧನೆಯ ಅವಶ್ಯಕತೆಯನ್ನಾಗಲೀ ಅದರಿಂದ ಆಗುವ ಭಗವತ್ಪ್ರೇಮವನ್ನು ಅನುಭವ ಮಾಡದೆ ಇರುವ ನಾಸ್ತಿಕರಿಗೆ ಈಶ್ವರನ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಕ್ಕೆ ಇದಾವುದೂ ಸಹಾಯಕವಾಗಿರದೆ ಆಸ್ತಿಕರ ನಂಬಿಕೆಯನ್ನು ಸ್ಥಿರಪಡಿಸುವ ಸಾಧನ ಮಾತ್ರ ಆಗಿವೆ.
ಮತಧರ್ಮದ ಇತಿಹಾಸವನ್ನು ಗಮನಿಸಿದರೆ ಮಾನವ ಕಾಲಕಾಲಕ್ಕೂ ಈಶ್ವರನ ಆರಾಧನೆಗೂ ಅವನ ವಿಶ್ವಾಸವನ್ನು ಗಳಿಸುವುದಕ್ಕೂ ಹಾತೊರೆಯುವ ಸ್ವಭಾವವುಳ್ಳವನೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಇದು ಸ್ವಯಂಪ್ರೇರಿತವಾದ ಆಕಾಂಕ್ಷೆ. ಈಶ್ವರನೆಂಬುವನಿಲ್ಲದಿದ್ದರೆ ಅವನಿಗೆ ತನ್ನ ದುಃಖಕರವಾದ ನಿಸ್ಸಹಾಯಕತೆಯ ಮತ್ತು ಅದನ್ನು ಈಶ್ವರನಿಂದಲೇ ಪರಿಹರಿಸಿಕೊಳ್ಳುವ ಕಾತರತೆಯ ಅನುಭವಗಳು ಹೇಗೆ ಉಂಟಾಗುತ್ತವೆ? ಅವನು ಸ್ವಪರಿಪೂರ್ಣನಾಗದೆ ಇರುವುದಕ್ಕೆ ಕಾರಣವೇನು? ಅವನ ಸಾಧನೆಗೆ ಬೆಲೆಯೇನು? ಮತಧರ್ಮದಲ್ಲಿ ಏನೂ ತಿರುಳಿಲ್ಲವೆ? — ಎಂಬ ಪ್ರಶ್ನೆಗಳು ವಿಚಾರಪರರನ್ನು ಪದೇಪದೇ ಕಾಡಿಸುತ್ತದೆ. ಆಧ್ಯಾತ್ಮ ಮಾರ್ಗದಲ್ಲಿ ಇದುವರೆಗೂ ಸಾಧಿಸಿರುವುದೆಲ್ಲವೂ ವ್ಯರ್ಥ ಎಲ್ಲವೂ ಭ್ರಾಂತಿ ಎಂದು ಹೇಳುವುದು ಸಮ್ಮತವಲ್ಲ. ಮಾನವನ ನಂಬಿಕೆ ಎಷ್ಟು ದೃಢವಾಗಿದೆ ಎಂದೂ ಅದನ್ನು ಹೇಗಾದರೂ ಸಮರ್ಥಿಸುಕೊಳ್ಳಬೇಕು ಎಂದೂ ದಾರ್ಶನಿಕರು ಈ ಸಿದ್ಧಾಂತಗಳನ್ನು ಮುಂದೆ ಇಟ್ಟಿರುವುದನ್ನು ಪರಿಶೀಲಿಸಿದರೆ ಈಶ್ವರನ ಅಸ್ತಿತ್ವದ ಪ್ರಶ್ನೆಯನ್ನು ಅಥವಾ ಈಶ್ವರವಾದವನ್ನು ತಳ್ಳಿಹಾಕಲು ಸುಲಭವಲ್ಲ. ಖಂಡಿಸುವುದೂ ನ್ಯಾಯವಲ್ಲ ಎಂದು ಒಪ್ಪಬೇಕಾಗುತ್ತದೆ.[೩]
ನೈತಿಕ ಜೀವನ
ನೈತಿಕ ಜೀವನಕ್ಕೆ ಬೆಲೆ ಬಂದಿರುವುದು ಈಶ್ವರವಾದದಿಂದ, ನಾಸ್ತಿಕರೂ ನೀತಿಮತರಾಗಿರಬಹುದು. ಅದು ಬಹು ವಿರಳ ಮತ್ತು ಅವರು ವಿಭೂತಿ ಪುರುಷರಂತೆ ಮಾನವಕೋಟಿಗೆ ಗಣ್ಯರಾಗಿಲ್ಲ. ಬುದ್ಧ ಈಶ್ವರವಾದಿಯಲ್ಲದಿದ್ದರೂ ನೈತಿಕ ಜೀವನಕ್ಕೆ ಅತಿಯಾದ ಬೆಲೆಯನ್ನು ಕೊಟ್ಟು ಆದರ್ಶಪುರುಷನಾಗಿದ್ದರೂ ಈಶ್ವರನ ಮಾತನ್ನೆತ್ತದೆ. ಅವನನ್ನು ಖಂಡಿಸದೆ ಸುಮ್ಮನಿದ್ದ. ಇದರಿಂದ ಅನುಯಾಯಿಗಳು ಬೌದ್ಧದರ್ಶನವನ್ನು ಒಂದು ಮತದ ರೂಪಕ್ಕೆ ತಂದು ಅವನನ್ನೆ ಈಶ್ವರನ ಸ್ಥಾನಕ್ಕೇರಿಸಿದರು. ಅದರಲ್ಲಿನ ಲೋಪವನ್ನು ತುಂಬತೊಡಗಿದರು. ಇತರ ಸಿದ್ಧಾಂತಗಳನ್ನು ಕಟುವಾಗಿ ಟೀಕೆ ಮಾಡಿದ ಕ್ಯಾಂಟ್ ಎಂಬ ಪಶ್ಚಾತ್ಯ ತತ್ತ್ವಜ್ಞ ನೈತಿಕ ಜೀವನದ ಅವಶ್ಯಕತೆಯನ್ನು ಸಮರ್ಥಿಸಿದಾಗ ಈಶ್ವರನ ಅಸ್ತಿತ್ವವನ್ನು ಒಪ್ಪಿಕೊಳ್ಳಲೇಬೇಕಾಯಿತು. ಮಾನವನ ನೈತಿಕ ಹೊಣೆಗಾರಿಕೆಯನ್ನು ಅದರ ಸಾಧನೆಯಿಂದ ಅವನಿಗೆ ಬರುವ ಫಲವನ್ನನುಭವಿಸುವ ಅಗತ್ಯವನ್ನೂ ಒಪ್ಪಿಕೊಂಡರೆ ಈಶ್ವರನೇ ಧರ್ಮಾಧರ್ಮಗಳ ನಿಯಾಮಕನೆಂದೂ ನ್ಯಾಯಮೂರ್ತಿಯೆಂದೂ ಹೇಳಬೇಕಾಗುತ್ತದೆ. ಇದನ್ನು ಹಿಂದೂಗಳ ಕರ್ಮಸಿದ್ಧಾಂತ ಸ್ಪಷ್ಟಪಡಿಸುತ್ತದೆ. ಕರ್ಮಮಾಡುವ ಅಧಿಕಾರ ಮಾತ್ರ ಮಾನವನಿಗುಂಟು. ಅದರ ಫಲಕ್ಕೆ ಅಧಿಕಾರವಿಲ್ಲ. ಭಗವದರ್ಪಣ ಬುದ್ಧಿಯಿಂದ ಮಾಡಿದರೆ ಮಾತ್ರ ಅವನಿಗೆ ಸತ್ಫಲ, ಮತ್ತು ಕರ್ಮ ಬಂಧನವಿಲ್ಲ. ಕಾಮ್ಯಕರ್ಮಗಳು ಅವನನ್ನು ಸಂಸಾರಚಕ್ರದಲ್ಲಿ ಬಂಧಿಸುತ್ತದೆ. ನಿಷ್ಕಾಮನಾಗಿ ಬುದ್ಧಿಯಿಂದ ಮಾಡಿದ ಕರ್ಮಗಳು ಅವನ ಬಿಡುಗಡೆಗೆ ಕಾರಣವಾಗುತ್ತದೆ. ಆದ್ದರಿಂದ ಆತ ಕರ್ಮದ ಫಲವನ್ನು ಈಶ್ವರನಿಗೇ ವಹಿಸಬೇಕು. ಮಾನವ ಬಯಸಿದ ಫಲಗಳು ಅವನಿಗೆ ದೊರಕದೇ ಇರುವುದಕ್ಕೆ ಕಾರಣವೇನು? ಅವನಿಗೆ ಅಧರ್ಮ ಲಾಭಕರವಾಗಿ ಕಂಡರೂ ಧರ್ಮಮಾರ್ಗಕ್ಕೆ ಅವನನ್ನು ಎಳೆಯುವ ಶಕ್ತಿಯಾವುದು? ಈ ಪ್ರೇರಣೆ ಮತ್ತು ಧರ್ಮಕ್ಕೆ ಜಯ ಎಂಬ ನಂಬಿಕೆ ಅವನಿಗೆ ಹೇಗೆ ಉಂಟಾಗುತ್ತದೆ?—ಎಂಬ ಪ್ರಶ್ನೆಗಳಿಗೆ ಈಶ್ವರವಾದದಿಂದ ಸಮರ್ಪಕವಾದ ಉತ್ತರಗಳು ಬರುತ್ತವೆ. ಹಾಗೆಯೇ ನೈತಿಕ ಸಿದ್ಧಾಂತ ಭಗವಂತನನ್ನು ಏಕೆ ಭಜಿಸಬೇಕು. ಅವನ ಪ್ರೀತಿಗೆ ಪಾತ್ರರಾಗಲು ಮಾನವರು ಏಕೆ ತೊಳಲಬೇಕು—ಎಂಬುದನ್ನೂ ಸ್ಪಷ್ಟಪಡಿಸುತ್ತದೆ. [೪]
ನಾಗರಿಕತೆಯಲ್ಲಿ ಮಾನವ ಮುಂದುವರೆದಂತೆಲ್ಲ ಭಗವಂತನ ವ್ಯಕ್ತಿತ್ವದ ಸಂಶೋಧನೆಯಲ್ಲಿ ಆಳವಾಗಿ ಪ್ರವೇಶಿಸತೊಡಗಿದ. ಅವನಿಗೂ ಈಶ್ವರನಿಗೂ ಪರಸ್ಪರ ಸಂಬಂಧ ಬೆಳೆಯುವಂತೆ ತೋರಿತು. ಮತಧರ್ಮಗಳು ತಲೆಯೆತ್ತಿ ಸಗುಣ ಬ್ರಹ್ಮನನ್ನು ಪ್ರತಿಪಾದಿಸಿದವು. ಎಲ್ಲವನ್ನೂ ತೊರೆದು ಭಗವತ್ಪ್ರೇಮದ ಅನುಭವಕ್ಕೆ ಹಾತೊರೆದು ಸಾಕ್ಷಾತ್ಕಾರವನ್ನು ಪಡೆದ ಮಹಾಪುರುಷರ ಮತ್ತು ಜ್ಞಾನಿಗಳ ಪರಂಪರೆ ಮತಗಳಲ್ಲಿ ಕಾಣಿಸಿಕೊಂಡಿತು. ಸಾಕ್ಷಾತ್ಕಾರವನ್ನು ಪಡೆದ ಧನ್ಯರಾದವರು ತಮ್ಮ ಅಪೂರ್ವ ಆನಂದದ ಅನುಭವಗಳನ್ನು ಹಾಡಿಹೊಗಳಿದ್ದಾರೆ. ಅವರು ಅನುಭವಿಸಿದ್ದು ಭ್ರಮೆ ಮಾತ್ರವಲ್ಲ. ಅದಕ್ಕಾಗಿ ಅವರು ಸಾಧನೆ ಮಾಡಿದವರು. ಅಂತರ್ಮುಖರಾಗಿ ಏಕಾಗ್ರಚಿತ್ತರಾಗಿ ಸಮಾಧಿಸ್ಥಿತಿಯಲ್ಲಿ ಈಶ್ವರನನ್ನು ಅವರು ಕಂಡರು. ಇಂಥವರು ಮುಖ್ಯವಾದ ಮತಧರ್ಮಗಳಲ್ಲಿ—ಯೆಹೂದಿಮತ, ಕ್ರೈಸ್ತಮತ, ಹಿಂದೂಮತ—ಮುಂತಾದವುಗಳಲ್ಲಿ ಸುಪ್ರಸಿದ್ಧರಾಗಿದ್ದಾರೆ. ಈ ಸಾಧುಸಂತರನ್ನು ಕಿರಿಯ ಪೀಳಿಗೆಯವರು ದೇವತೆಗಳ ಸ್ಥಾನಕ್ಕೇರಿಸಿರುವುದೂ ಉಂಟು. ಅವರ ಅಮೃತವಾಣಿಯನ್ನು ಪೂಜಿಸುವುದೂ ಉಂಟು.
ಗುಣಗಳು
ಈಶ್ವರವಾದಿಗಳು ಈಶ್ವರನ ಕೆಲವು ಗುಣಗಳನ್ನು ಒಪ್ಪಿಕೊಳ್ಳಲೇಬೇಕು. ಸರ್ವಜ್ಞತ್ವ, ಸರ್ವಶಕ್ತಿತ್ವ, ಸರ್ವವ್ಯಾಪಕತ್ವ ಇತ್ಯಾದಿ ಗುಣಗಳನ್ನು ಒಪ್ಪದಿದ್ದರೆ, ಸೃಷ್ಟಿಸ್ಥಿತಿಲಯಗಳಿಗೆ ಈಶ್ವರನಿಗೆ ಸೇರಿದ್ದೆಂದು ಹೇಳಲಾಗುವುದಿಲ್ಲ. ಈ ಮೂರು ಗುಣಗಳೂ ಪರಸ್ಪರ ಸಂಬಂಧವುಳ್ಳವಾದ್ದರಿಂದ ಒಂದನ್ನು ಒಪ್ಪಿದರೆ ಮೂರನ್ನೂ ಒಪ್ಪಿಕೊಂಡಂತಾಗುತ್ತದೆ. ಜ್ಞಾನ ಶಕ್ತಿಗಳು ಪರಸ್ಪರಾನುವರ್ತಿಗಳು. ಭೂತಭವಿಷ್ಯದ್ ವರ್ತಮಾನಗಳೆಲ್ಲವೂ ಈಶ್ವರನ ಜ್ಞಾನಾಧೀನ. ಕಾಲನಿಯಾಮಕನಾದ್ದರಿಂದ ಕಾಲಾತೀತನೂ ಅನಾದಿ ಅನಂತನೂ ಎಂದು ಹೇಳಬೇಕಾಗುತ್ತದೆ; ಯಾವುದು ನಶಿಸಿದರೂ ಅವನು ಉಳಿಯುತ್ತಾನೆಂದೂ ಹೇಳಬೇಕಾಗುತ್ತದೆ. ಅವನೇ ಸಾಧನ ಸಾಮಗ್ರಿಗಳನ್ನು ಸೃಷ್ಟಿಸಿಕೊಳ್ಳುವುದರಿಂದ ಅವನ ಶಕ್ತಿಗೆ ಯಾವುದರಿಂದಲೂ ಪರಿಮಿತಿ ಇಲ್ಲವೆನ್ನಬೇಕಾಗುತ್ತದೆ. ಅವನು ಸರ್ವವನ್ನೂ ನೋಡುವ ಸಾಕ್ಷಿಯಾದ್ದರಿಂದ ಅವನಿಲ್ಲದ ಸ್ಥಳವಿಲ್ಲ. ಒಳಗೂ ಹೊರಗೂ ಆತ ವ್ಯಾಪಿಸಿದ್ದಾನೆ. ಹೀಗೆ ಸರ್ವಜ್ಞತ್ವ, ಸರ್ವಶಕ್ತಿತ್ವ, ಸರ್ವವ್ಯಾಪಕತ್ವವನ್ನು ಒಪ್ಪಿಕೊಂಡಂತೆ ಆಯಿತು.
ಉಪನಿಷತ್
ಉಪನಿಷತ್ತುಗಳು ಈಶ್ವರನ ಅಂದರೆ ಬ್ರಹ್ಮನ ಸ್ವರೂಪವನ್ನು ವಿಶದವಾಗಿ ಚರ್ಚಿಸಿವೆ. ಅಣುರೇಣುತೃಣಕಾಷ್ಠದಲ್ಲಿರುವ ಅಣೋರಣೀಯಾನ್ ಎಂದೂ ಮಹತೋಮಹೀಯಾನ್ ಎಂದೂ ನಿರ್ಣಯಿಸುತ್ತದೆ. ಅವನ ಸ್ವರೂಪ ಮಾನವನ ಅಲ್ಪಮತಿಗೆ ನಿಲುಕದುದು. ಆದರೂ ಆ ಪರಬ್ರಹ್ಮನ ಸ್ವರೂಪವನ್ನು ತಿಳಿಯುವ ಮತ್ತು ಕಾಣುವ ಹಂಬಲ ಮಾನವನಿಗೆ ಬಿಟ್ಟಿಲ್ಲವಾದ್ದರಿಂದ ಅವನು ತನ್ನ ಮತಿಗೆ ನಿಲುಕುವ ಶ್ರೇಷ್ಠ ಗುಣಗಳೆಲ್ಲ ಈಶ್ವರನಲ್ಲಿ ಮೂರ್ತಿಮತ್ತಾಗಿವೆ ಎಂದು ಮನಮುಟ್ಟಿ ಭಾವಿಸುತ್ತಾನೆ. ಅವನ ಕಲ್ಯಾಣಗುಣಗಳನ್ನು ನೆನೆನೆನೆದು ಹಾಡಿ ಹಾಡಿ ತೃಪ್ತನಾಗುತ್ತಾನೆ. ಅವನಿಗೆ ಅತ್ಯಂತ ಆನಂದದಾಯಕವಾದ ಚೆಲುವನ್ನು ಕೊಟ್ಟು ಸಾಕಾರನನ್ನಾಗಿ ಮಾಡುತ್ತಾನೆ. ಅವನ ಕೃಪಾಕಟಾಕ್ಷವನ್ನು ವರ್ಣಿಸುತ್ತಾನೆ. ಹೀಗೆ ಈಶ್ವರವಾದಿಗಳು ಈಶ್ವರನಿಗೆ ಪರಿಪೂರ್ಣ ವ್ಯಕ್ತಿತ್ವವುಂಟು. ಅವನು ನಿರಾಕಾನಲ್ಲ, ನಿರ್ಗುಣನಲ್ಲ, ನಿಷ್ಪ್ರಪಂಚನಲ್ಲ. ಅಲ್ಪನಾದ ಮಾನವನ ಮೊರೆಯನ್ನು ಲಾಲಿಸುವವನಾದ್ದರಿಂದ ಅವನು ಪ್ರಭುವಿನ ಸ್ಥಾನದಲ್ಲಿದ್ದರೂ ಅತ್ಯಂತ ದಯಾಳುವಾದ ತಂದೆ, ಕರುಣಾಸಾಗರ, ಪ್ರೇಮಮಯ ಮೂರ್ತಿ. ಅವನ ಕೃಪಾಕಟಾಕ್ಷದಿಂದಲೇ ಸರ್ವದುಃಖವೂ ನಾಶವಾಗಿ ಮುಕ್ತನಾಗುತ್ತಾನೆಂದು ಭಕ್ತ ಅವನಿಗೆ ಶರಣು ಹೋಗುತ್ತಾನೆ. ತನ್ನ ಅಂತರಂಗವನ್ನು ಈಶ್ವರನಲ್ಲಿ ತೋಡಿಕೊಳ್ಳುತ್ತಾನೆ. ಶಾಂತಿಯನ್ನು ಹೊಂದುವುದಕ್ಕೆ ಭಗವಂತನೇ ಎಂದು ನಂಬುತ್ತಾನೆ. [೫]
ಇಷ್ಟೆಲ್ಲವನ್ನೂ ಒಪ್ಪಿಕೊಂಡ ಮೇಲೆ ಈಶ್ವರನೊಬ್ಬನೇ ಪರಮದೈವವೆಂದೂ ಉಳಿದುದೆಲ್ಲವೂ ಅವನ ಅಧೀನವೆಂದೂ ಒಪ್ಪಿಕೊಳ್ಳಬೇಕಾಗಿರುವುದರಿಂದ ಈಶ್ವರವಾದದಲ್ಲಿ ಏಕದೇವತಾ ತತ್ತ್ವವೂ ಅಡಗಿದೆ. ಮಾನವರೆಲ್ಲರಿಗೂ ಒಬ್ಬನೇ ದೈವವೆಂದು ಮೋಸಸ್, ಕ್ರಿಸ್ತ, ಪೈಗಂಬರರು ಸಾರಿದರು. ಮಾನವ ಕುಲಕ್ಕೆಲ್ಲ ಒಂದೇ ಮತವಿರಬೇಕೆಂದವರು ಪ್ರಚಾರಮಾಡಿದರು. ಅವರ ಅನುಯಾಯಿಗಳು ಇತರ ಮತಗಳನ್ನು ತೊಡೆದು ಹಾಕುವ ಪ್ರಯತ್ನವನ್ನೂ ಮಾಡಿದರು. ಆದರೆ ಈಶ್ವರವಾದ ಯಾವ ಒಂದು ಮತಕ್ಕೂ ಒಳಪಟ್ಟಿಲ್ಲ. ಮೀಸಲಾಗಿಲ್ಲ. ಅದರ ಒಲವು ಮತ ಸಂಬಂಧವಾದ ನಿರ್ಬಂಧಗಳಲ್ಲಿ, ಸಂಪ್ರದಾಯಗಳಲ್ಲಿ ಅಡಗಿಲ್ಲ. ಮಾನವನಿಗೂ ಈಶ್ವರನಿಗೂ ಇರುವ ಸಂಬಂಧ ಅತಿ ಗೂಢವಾದುದೂ ಅಂತರಂಗ ಸಂಬಂಧದ್ದೂ ಆದ್ದರಿಂದ ಗಾಢವಾದ ಭಕ್ತಿ ಶ್ರದ್ಧೆಗಳಲ್ಲಿ ಅದು ಅಡಗಿದೆ. ಇದನ್ನು ನಿಯಮ ನಿಬಂಧನೆಗಳಿಂದಾಗಲೀ ಆಚಾರ ವ್ಯವಹಾರಗಳಿಂದಾಗಲೀ ಪ್ರಚೋದಿಸಲಾಗುವುದಿಲ್ಲ. ಆದರೂ ಕೆಲವು ಸತ್ಸಂಪ್ರದಾಯಗಳು, ಸದಾಚಾರಗಳು ಮತಶ್ರದ್ಧಗೆ ಸಹಾಯಕವಾಗಬಲ್ಲವು. ಎಲ್ಲ ಮಕ್ಕಳ ಎಳೆಯ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಬಲ್ಲವು; ಎಲ್ಲ ಮತಗಳ ಈಶ್ವರನೂ ಒಬ್ಬನೇ ಎಂಬ ಬೋಧನೆಯಿಂದ ಪರಮತ ದ್ವೇಷವನ್ನು ತಡೆಗಟ್ಟಬಹುದು. ಗಾಂಧೀಜಿಯವರು ಪ್ರಾರ್ಥನಾಸಭೆಗಳ ಮೂಲಕ ಈ ಬೋಧನೆಯನ್ನು ಮಾಡಿ ಅದನ್ನು ಲೋಕಕ್ಕೆಲ್ಲ ಮನಗಾಣಿಸಿದರು.
ಅಧರ್ಮ
ಅಧರ್ಮಕ್ಕೆ ಈಶ್ವರ ಹೊಣೆಗಾರನೇ? ಪ್ರಕೃತಿಸಹಜವಾದ ಕೆಡಕಿಗೆ ಅವನೇ ಕರ್ತನೇ? ಎಂಬ ಪ್ರಶ್ನೆಗಳು ತತ್ತ್ವಜ್ಞರನ್ನು ಬಾಧಿಸುತ್ತವೆ. ಈಶ್ವರವಾದಿಗಳು ಇದಕ್ಕೆ ಉತ್ತರಕೊಡಲು ಸಿದ್ಧರಾಗಲೇಬೇಕು. ಎಲ್ಲವನ್ನೂ ಈಶ್ವರನೇ ಸೃಷ್ಟಿಸಿದನೆಂದು ಹೇಳಿ ನಿಲ್ಲಿಸುವ ಹಾಗಿಲ್ಲ. ಸೃಷ್ಟಿಯ ಅಚಾತುರ್ಯಗಳಿಗೆ ಕಲ್ಯಾಣ-ಗುಣಪರಿಪೂರ್ಣನಾದ ಈಶ್ವರ ಹೇಗೆ ಕಾರಣ? ಉತ್ತರ ಕೊಡುವಾಗ ಈಶ್ವರವಾದಿಗಳು ಹೀಗೆ ಹೇಳುತ್ತಾರೆ. ಮಾನವ ಎಲ್ಲ ನೆಟ್ಟಗಿರುವ ವಿಶ್ವದಲ್ಲಿ ಸಾಧಿಸುವುದಾದರೂ ಏನಿದೆ? ಅವನಿಗೆ ಸಾವುನೋವುಗಳೇ ಇರದಿದ್ದಲ್ಲಿ ಅವನ ಜೀವನಕ್ಕೂ ಅಚೇತನವಸ್ತುವಾದ ಕಲ್ಲುಬಂಡೆಗೂ ವ್ಯತ್ಯಾಸವೇ ಇರಲಾರದು. ಹಾಗಿದ್ದಲ್ಲಿ ಅವನ ಶಕ್ತಿ ಸಾಮಥ್ರ್ಯಗಳೆಲ್ಲ ನಿರರ್ಥಕ. ಪ್ರಕೃತಿಯ ಅಡ್ಡಿ ಆತಂಕಗಳನ್ನು ಅದುರಿಸುವುದೇ ಅವನ ಸಾಹಸ. ಪ್ರಕೃತಿಯಿಂದ ಆಗುವ ವಿಪತ್ತುಗಳು ಅದರ ಸಾಮಾನ್ಯ ನಿಯಮವಲ್ಲ. ಈಶ್ವರಸೃಷ್ಟಿಯಲ್ಲಿ ಕ್ರಮವೇ ನಿಯಮವಾಗಿದೆ. ಪ್ರಕೃತಿಯ ಕುಂದುಕೊರತೆಗಳನ್ನು ಮಾನವನ ಹಿತಕ್ಕಾಗಿಯೇ ಬಿಡಲಾಗಿದೆ. ಸಾವುನೋವುಗಳಿಂದ ಭಗವಂತನ ಕೃಪೆಗೆ ಹೆಚ್ಚು ಪಾತ್ರರಾಗುತ್ತೇವೆ. ಮಾನವನ ಹೃದಯಪರಿಪಾಕಕ್ಕೆ ಅವುಗಳಿಂದ ದಾರಿಯಾಗುತ್ತದೆ. ಕೆಲವು ಮತಗಳು ಭಗವಂತನಿಗೆ ಪ್ರತಿಪಕ್ಷವಾದ ಒಂದು ದುಷ್ಟಶಕ್ತಿಯೇ ಎಲ್ಲ ಕೆಡುಕಿಗೂ ಅಧರ್ಮಕ್ಕೂ ಕಾರಣ ಎಂದು ಹೇಳುತ್ತವೆ. ಇದು ಈಶ್ವರವಾದಕ್ಕೆ ಸಮಂಜಸವಾದ ವಾದವಲ್ಲ; ಈಶ್ವರನ ಸರ್ವಶಕ್ತಿತ್ವಕ್ಕೆ ಇದು ಭಂಗ ತರುತ್ತದೆ.[೬]
ಪ್ರಕೃತಿಯ ಲೋಪದೋಶಗಳ ಪ್ರಶ್ನೆಯನ್ನು ಬಿಡಿಸಿದಷ್ಟು ಸುಲಭವಾಗಿ ಅಧರ್ಮದ ಪ್ರಶ್ನೆಯನ್ನು ಬಿಡಿಸಲಾಗುವುದಿಲ್ಲ. ಈಶ್ವರವಾದದಲ್ಲಿ ಅಧರ್ಮದ ಪ್ರಶ್ನೆಗೆ ಇನ್ನೂ ವಿಸ್ತಾರವಾಗಿ ಉತ್ತರ ಕೊಡಬೇಕಾಗುತ್ತದೆ. ಮಾನವನನ್ನು ಅಧರ್ಮಕ್ಕೆ ಪ್ರೇರಿಸಿ ಅವನ ಮೇಲ್ಮೆಯನ್ನು ಈಶ್ವರ ಹೇಗೆ ಉಂಟುಮಾಡಬಲ್ಲ ? ಅಧರ್ಮದಿಂದ ನಿರ್ದೋಷಿಗಳಿಗೂ ಹಾನಿಯಲ್ಲವೇ ? ಈ ಪ್ರಶ್ನೆಗಳು ತಲೆ ಎತ್ತುತ್ತವೆ. ಈಶ್ವರ ಮಾನವನನ್ನೇ ಅಧರ್ಮಕ್ಕೆ ಹೊಣೆಗಾರನನ್ನಾಗಿ ಮಾಡಿದ್ದಾನೆ. ಅವನಿಗೆ ಧರ್ಮಾಧರ್ಮಗಳ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ—ಎಂದು ಈಶ್ವರವಾದದ ಉತ್ತರ. ಮಾನವನ ಅಧರ್ಮಕ್ಕೆ ಈಶ್ವರನ ಪ್ರೇರಣೆಯಲ್ಲ, ಮಾನವ ಸ್ವಭಾವವೇ ಕಾರಣ. ಅಜ್ಞಾನವೇ ಪಾಪಕ್ಕೆ ಕಾರಣ. ಆದರೂ ಪಾಪವನ್ನು ಮಾಡುವ ಬುದ್ಧಿಯನ್ನೂ ಅದಕ್ಕೆ ಸಾಧನಗಳನ್ನೂ ಭಗವಂತನೇ ಕೊಟ್ಟಿರುವನಲ್ಲವೇ? ಅವನು ಅಪರೋಕ್ಷವಾಗಿಯಾದರೂ ಅಧರ್ಮಕ್ಕೆ ಕಾರಣನಾದಂತಾಗಲಿಲ್ಲವೇ?—ಎಂದು ಪ್ರಶ್ನಿಸಬಹುದು. ಮಾನವನಿಗೆ ಅಧರ್ಮ ಮಾಡುವ ಸ್ವಾತಂತ್ರ್ಯವನ್ನು ಈಶ್ವರ ಕೊಟ್ಟಿರುವುದರಲ್ಲಿ ಒಂದು ರಹಸ್ಯವಿದೆ. ಅವನು ತನ್ನ ಮುಕ್ತಿಯನ್ನು ತಾನೇ ಸಾಧಿಸಲಿ ಎಂದು ಈ ಸ್ವಾತಂತ್ರ್ಯವನ್ನು ಕೊಟ್ಟಿರುವುದರಿಂದ ಭಗವಂತ ಮಾನವನಿಗೆ ಗಣ್ಯಸ್ಥಾನವನ್ನೇ ಕೊಟ್ಟಂತಾಯಿತಲ್ಲದೆ ತನ್ನ ಅಡಿಯಾಳು ಎಂಬ ತುಚ್ಛ ಭಾವನೆಯಿಂದ ಕಾಣುವುದಿಲ್ಲವೆಂದಂತಾಯಿತು. ಮತ್ತೊಂದು ಕಾರಣ, ಮಾನವ ಪಾಪಮಾಡಿ ಪಶ್ಚಾತ್ತಾಪದಿಂದ ಪುಟಕ್ಕೆ ಹಾಕಿದ ಚಿನ್ನದಂತೆ ಪರಿಶುದ್ಧನಾಗುವುದಿಲ್ಲವೇ? ತನಗೆ ಧರ್ಮವನ್ನು ಮಾಡುವುದಕ್ಕೆ ಅವಕಾಶವಿದ್ದರೂ ಅಧರ್ಮದ ದಾರಿಯನ್ನು ಹಿಡಿದುದಕ್ಕೆ ಮಾನವ ನೊಂದು, ಬೆಂದು, ಧರ್ಮದ ಬೆಲೆಯನ್ನು ಮತ್ತೂ ಚೆನ್ನಾಗಿ ಕಂಡುಕೊಳ್ಳುತ್ತಾನೆ. ಇದರಿಂದ ಆತ್ಮೋದ್ಧಾರದ ಮಾರ್ಗದಲ್ಲಿ ಮೇಲು ಮೇಲಕ್ಕೆ ಏರುವಂತಾಗುತ್ತದೆ. ಅವನ ಕಣ್ಣು ತೆರೆದಂತೆ ಆಗುತ್ತದೆ.
ಕರ್ಮಸಿದ್ಧಾಂತ
ಕರ್ಮಸಿದ್ಧಾಂತ ಮಾನವನ ಜನ್ಮಾಂತರಗಳಿಂದ ಅವನ ಕರ್ಮಗಳನ್ನು ವಿವರಿಸುತ್ತದೆ. ಅವನಿಗೆ ಹಿಂದಿನ ಜನ್ಮಗಳಿಂದ ಈ ಜನ್ಮದ ಸ್ಥಿತಿಗತಿಗಳು ಪ್ರಾಪ್ತವಾಗುತ್ತವೆ. ಆದ್ದರಿಂದ ಅವನು ಮುಂದಿನ ಜನ್ಮ ಉತ್ತಮವಾಗಲೆಂದು ಈ ಜನ್ಮದಲ್ಲಿ ಕರ್ಮವನ್ನು ಎಚ್ಚರಿಕೆಯಿಂದ ಮಾಡಬೇಕು. ಭಗವಂತ ನ್ಯಾಯ ಪಕ್ಷಪಾತಿ, ಧರ್ಮ ಪಕ್ಷಪಾತಿ ಎಂಬುದನ್ನು ಮರೆಯಬಾರದು. ಅವನು ಅಧರ್ಮಕ್ಕೆ ತಕ್ಕ ಫಲವನ್ನೇ ಕೊಡುತ್ತಾನೆ. ಅವನ ವಿಶ್ವಾಸಕ್ಕೆ ಪಾತ್ರನಾಗಬೇಕಾದರೆ ಧರ್ಮದ ಮಾರ್ಗವನ್ನೇ ಹಿಡಿಯಬೇಕೆಂದು ಅರಿತು ಎಷ್ಟು ಕಷ್ಟನಷ್ಟಗಳನ್ನಾದರೂ ಸಹಿಸಬೇಕು. ಕರ್ಮಸಿದ್ಧಾಂತ ಮಾನವನ ನೈತಿಕ ಸ್ವಾತಂತ್ರ್ಯವನ್ನು ಈ ರೀತಿ ವಿವರಿಸುತ್ತದೆ. ಭಗವಂತನ ಕೃಪೆಗೆ ಅರ್ಹತೆಯನ್ನು ಪಡೆದುಕೊಳ್ಳುವ ಕೀರ್ತಿ ಮಾನವನಿಗೆ ಸೇರುತ್ತದೆ. ಪಾಪ ಪರಿಹಾರವಾದ ಮೇಲೆಯೇ ಭಗವಂತ ತನ್ನಲ್ಲಿಗೆ ಬರಮಾಡಿಕೊಳ್ಳುತ್ತಾನೆ. ಅದುವರೆಗೂ ಮಾನವ ತೊಳಲಾಡಬೇಕು. ನಿರಂತರ ಶ್ರಮಿಸಬೇಕು.
ಈ ರೀತಿ, ಈಶ್ವರವಾದದ ಪ್ರಕಾರ ಈಶ್ವರನಿಗೂ ಅಧರ್ಮ, ಅನಿಷ್ಟಗಳಿಗೂ ಸಂಬಂಧವನ್ನು ಕಲ್ಪಿಸಲಾಗುವುದಿಲ್ಲ. ಈಶ್ವರವಾದ ಈಶ್ವರ ಕಲ್ಯಾಣಗುಣ ಪರಿಪೂರ್ಣನಾಗಿಯೇ ಉಳಿಯುತ್ತಾನೆ.
ಉಲ್ಲೇಖಗಳು
- ↑ https://books.google.co.in/books?id=aSU6pc28W6UC&pg=PA126&lpg=PA126&dq=iswaravada&source=bl&ots=ik3xruyn1I&sig=ACfU3U1LViSCTHRgsimFjrsmguIrwPXXGg&hl=en&sa=X&ved=2ahUKEwjGlL_Ul_3mAhWbyDgGHWncD7oQ6AEwAXoECAoQAQ
- ↑ https://plato.stanford.edu/entries/spinoza/
- ↑ https://plato.stanford.edu/entries/concepts-god/
- ↑ https://plato.stanford.edu/entries/kant-moral/
- ↑ "ಆರ್ಕೈವ್ ನಕಲು". Archived from the original on 2020-01-12. Retrieved 2020-01-12.
- ↑ https://books.google.co.in/books?id=p4BvDwAAQBAJ&pg=PA5&lpg=PA5&dq=adharma+ethics&source=bl&ots=XeyIgu9z3f&sig=ACfU3U22tcsr80Z0IxQttyDzuP5x1TJ5jA&hl=en&sa=X&ved=2ahUKEwiD85nGmP3mAhWUzDgGHaUYBzcQ6AEwGnoECAgQAQ