ಕಂಗಾಯಂ (ಗೋವಿನ ತಳಿ)
ಕಂಗಾಯಂ | |
---|---|
ತಳಿಯ ಹೆಸರು | ಕಂಗಾಯಂ |
ಮೂಲ | ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡು |
ವಿಭಾಗ | ಕೆಲಸಗಾರ ತಳಿ |
ಬಣ್ಣ | ಬಣ್ಣ ಬಿಳಿ ಅಥವಾ ಬೂದು |
ಮುಖ | ಅಗಲ ಮುಖದ ನಡುವಿನ ಕಣಿವೆ |
ಕಂಗನಾಡು, ಕೋಂಗು ಅಂತಲೂ ಕರೆಯಲ್ಪಡುವ ಕಂಗಾಯಂನ್ನು ಹಳೆ ಮೈಸೂರು ಪ್ರಾಂತ್ಯದಿಂದ ಮಧುರೈವರೆಗೂ ಕಾಣಬಹುದು. ಕಂಗೆಯಂ ಊರಿನ ಪಲಯಂಕೊಟ್ಟೈ ಪಟ್ಟಗಾರ್ ವಂಶಸ್ಥರು ಈ ತಳಿಯ ಮುಖ್ಯ ಸಂರಕ್ಷಕರಾದುದರಿಂದ ಇದಕ್ಕೆ ಕಂಗಾಯಂ ಎಂದು ಹೆಸರಾಯಿತು. ಇದು ಅಪ್ಪಟ ಕೆಲಸಗಾರ ತಳಿ. ತಮಿಳುನಾಡಿನಲ್ಲಿ ದೊಡ್ಡತಳಿ, ಸಣ್ಣತಳಿ ಎಂದು ವಿಭಾಗಿಸುತ್ತಾರಾದರೂ ಅವುಗಳ ಮಧ್ಯೆ ಭಾರಿ ವ್ಯತ್ಯಾಸವೇನಿಲ್ಲ. ಸಣ್ಣತಳಿ ಹೆಚ್ಚಾಗಿ ಧರ್ಮಪುರಿ, ಪೊಲ್ಲಾಚಿ, ಈರೋಡ್ ಪ್ರಾಂತ್ಯಗಳಲ್ಲಿ ಕಂಡುಬಂದರೆ, ದೊಡ್ಡ ತಳಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಅರವಕುರ್ಚಿ, ದಿಂಡಿಗಲ್ ಪ್ರದೇಶಗಳಲ್ಲಿ. ಕೊರಂಗಾಡು ಎಂದು ಕರೆಯಲ್ಪಡುವ ಬೇಣಗಳಲ್ಲಿ ಇವುಗಳನ್ನು ಕೂಡಿ ಮೇಯಿಸುವ ಕ್ರಮ ವಿಶೇಷ.
ಸಾಮಾನ್ಯವಾಗಿ ಇವುಗಳ ಬಣ್ಣ ಬಿಳಿ ಅಥವಾ ಬೂದು. ಹೋರಿಯ ಭುಜ, ಮುಂಗಾಲು ಸಾಮಾನ್ಯವಾಗಿ ಕಪ್ಪಾದರೂ ಕೆಲವೊಮ್ಮೆ ನಸುಗೆಂಪು ಕೂಡ ಕಾಣಬಹುದು. ಅಗಲ ಮುಖದ ನಡುವಿನ ಕಣಿವೆ ಇದನ್ನು ಉಳಿದ ತಳಿಗಳಿಂದ ಪ್ರತ್ಯೇಕಿಸುತ್ತದೆ. ಇವುಗಳ ಹಾಲಿನ ಇಳುವರಿ ದಿನಕ್ಕೆ ನಾಲ್ಕರಿಂದ ಐದು ಲೀಟರ್.
ಭಾರತೀಯ ಅಮೂಲ್ಯ ಗೋ ಪರಂಪರೆಯಲ್ಲಿ ವಿನಾಶದಂಚಿನಲ್ಲಿರುವ ತಳಿಗಳಲ್ಲಿ ಕಂಗಾಯಮ್ ಕೂಡ ಒಂದು. ತಮಿಳುನಾಡಿನ ಹೈನುಗಾರಿಕೆ ವಿಶ್ವವಿದ್ಯಾಲಯ (TNVASU) ಕಂಗಾಯಮ್ ತಳಿಯ ಜೀವಾಂಕುರ ದ್ರವ ಸಂರಕ್ಷಿಸಿದೆ. ಶ್ರೀ ರಾಮಚಂದ್ರಾಪುರ ಮಠ ಕೂಡ ಕಂಗಾಯಮ್ ಉಳಿವಿಗೆ ಪ್ರಯತ್ನಿಸುತ್ತಿದೆ.
ಪೊಂಗಲ್ (ಸಂಕ್ರಾಂತಿ) ಹಬ್ಬದ ಸಮಯದಲ್ಲಿ ತಮಿಳುನಾಡಿನ ಈರೊಡ್, ಪುದುಕೊಟ್ಟೈ, ಮಧುರೈ ಪ್ರದೇಶಗಳಲ್ಲಿ ನಡೆಯುವ ಜಲ್ಲಿಕಟ್ಟು ಎನ್ನುವ ಹೋರಿಗಳನ್ನು ಬೆದರಿಸಿ ಓಡಿಸಿ ಹಿಡಿಯುವ ಸಾಂಪ್ರದಾಯಿಕ ಪಂದ್ಯದಲ್ಲಿ ಹೋರಿಗಳನ್ನು ಬಳಸಲಾಗುತ್ತದೆ. ಸಂಪೂರ್ಣ ಶಕ್ತಿ ಉಡುಗುವವರೆಗೂ ಹೋರಾಡುವ ಆ ಗೂಳಿಗಳು ಕಂಗಾಯಂ ತಳಿಯವು.
ಚಿತ್ರಗಳು
-
ಹೆಣ್ಣು
-
ಗಂಡು
ಆಧಾರ/ಆಕರ
'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.