ಕುಷಾಣ ರಾಜವಂಶ

ಕುಷಾಣ ಪ್ರಾಂತ್ಯಗಳು ಮತ್ತು ಕನಿಷ್ಕನ ನಿಯಂತ್ರಣದಲ್ಲಿ ಕುಷಾಣ ಅಧಿಪತ್ಯದ ಗರಿಷ್ಠ ವಿಸ್ತಾರ

ಕುಷಾಣ ರಾಜವಂಶ ಯೂಶಿಗಳಿಂದ ಬ್ಯಾಕ್ಟ್ರಿಯನ್ ಪ್ರಾಂತ್ಯಗಳಲ್ಲಿ ಆರಂಭಿಕ ೧ನೇ ಶತಮಾನದಲ್ಲಿ ರೂಪಗೊಂಡ ಒಂದು ಸಮನ್ವಯದ ಸಾಮ್ರಾಜ್ಯವಾಗಿತ್ತು. ಇದು ಅಫ಼್ಘಾನಿಸ್ತಾನದ ಬಹುತೇಕ ಭಾಗ[], ಮತ್ತು ನಂತರ ಭಾರತೀಯ ಉಪಖಂಡದ ಉತ್ತರ ಭಾಗಗಳನ್ನು (ಕನಿಷ್ಠಪಕ್ಷ ಸಾಕೇತ ಮತ್ತು ವಾರಾಣಸಿ ಹತ್ತಿರದ ಸಾರ್‍ನಾಥ್‍ನಷ್ಟು ದೂರದವರೆಗೆ) ಆವರಿಸುವಂತೆ ಹರಡಿತು. ಈ ಸ್ಥಳದಲ್ಲಿ ಕುಷಾಣ ಸಾಮ್ರಾಟ ಕನಿಷ್ಕನ ಕಾಲದ್ದೆಂದು ಶಾಸನಗಳು ಸಿಕ್ಕಿವೆ. ಸಾಮ್ರಾಟ ಕನಿಷ್ಕನು ಬೌದ್ಧ ಧರ್ಮದ ಮಹಾನ್ ಪೋಷಕನಾಗಿದ್ದನು; ಆದರೆ ಕುಷಾಣರು ಭಾರತೀಯ ಉಪಖಂಡದ ಕಡೆಗೆ ದಕ್ಷಿಣ ದಿಕ್ಕಿನಲ್ಲಿ ವಿಸ್ತರಿಸಿದಂತೆ, ಅವರ ನಂತರದ ನಾಣ್ಯಗಳ ದೇವತೆಗಳು ಈ ಸಾಮ್ರಾಜ್ಯದ ಹೊಸ ಹಿಂದೂ ಅಧಿಕಾಂಶವನ್ನು ಪ್ರತಿಬಿಂಬಿಸಿದವು.

ಕುಷಾಣರು ಯೂಶಿ ಒಕ್ಕೂಟದ ಐದು ಶಾಖೆಗಳಲ್ಲಿ ಒಬ್ಬರು, ಮತ್ತು ಗಾನ್ಸುದಿಂದ ವಲಸೆಹೋಗಿ ಪ್ರಾಚೀನ ಬ್ಯಾಕ್ಟ್ರಿಯಾದಲ್ಲಿ ನೆಲೆಗೊಂಡ ಅಲೆಮಾರಿ ಜನರಾಗಿದ್ದರು. ಕುಷಾಣರು ಬಹುಶಃ ಆರಂಭದಲ್ಲಿ ಆಡಳಿತದ ಉದ್ದೇಶಗಳಿಗಾಗಿ ಗ್ರೀಕ್ ಭಾಷೆಯನ್ನು ಬಳಸಿದರು, ಆದರೆ ಶೀಘ್ರದಲ್ಲೇ ಬ್ಯಾಕ್ಟ್ರಿಯನ್ ಭಾಷೆಯನ್ನು ಬಳಸಲು ಆರಂಭಿಸಿದರು. ಕನಿಷ್ಕನು ತನ್ನ ಸೇನೆಗಳನ್ನು ಕಾರಾಕೋರಮ್ ಪರ್ವತಗಳ ಉತ್ತರಕ್ಕೆ ಕಳುಹಿಸಿ ಅಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಂಡನು. ಗಾಂಧಾರದಿಂದ ಚೀನಾದವರೆಗೆ ನೇರ ರಸ್ತೆ ಕುಷಾಣರ ಹಿಡಿತದಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಉಳಿದಿತ್ತು, ಇದರಿಂದ ಕಾರಾಕೋರಮ್‍ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಕ್ಕೆ ಪ್ರೋತ್ಸಾಹ ಸಿಕ್ಕಿತು ಮತ್ತು ಚೀನಾಕ್ಕೆ ಮಹಾಯಾನ ಬೌದ್ಧ ಧರ್ಮದ ಹರಡಿಕೆಯನ್ನು ಸುಗಮವಾಗಿಸಿತು.

ಕುಷಾಣ ರಾಜವಂಶವು ವಿಶ್ವದ ಅನೇಕ ಸಾಮ್ರಾಜ್ಯಗಳು ಮತ್ತು ಪ್ರದೇಶಗಳೊಂದಿಗೆ ರಾಜತಾಂತ್ರಿಕ ಸಂಪರ್ಕಗಳನ್ನು ಹೊಂದಿತ್ತು. ತತ್ವಶಾಸ್ತ್ರ, ಕಲೆ ಮತ್ತು ವಿಜ್ಞಾನದ ಹೆಚ್ಚಿನ ಭಾಗವನ್ನು ಈ ಸಾಮ್ರಾಜ್ಯದ ಗಡಿಗಳೊಳಗೆಯೇ ಸೃಷ್ಟಿಸಲಾಗಿತ್ತಾದರೂ, ಇಂದು ಸಾಮ್ರಾಜ್ಯದ ಇತಿಹಾಸದ ಏಕೈಕ ಪಠ್ಯ ದಾಖಲೆ ಶಾಸನಗಳು ಮತ್ತು ಇತರ ಭಾಷೆಗಳಲ್ಲಿನ, ವಿಶೇಷವಾಗಿ ಚೀನಿ ಭಾಷೆಯಲ್ಲಿನ, ಕಥನಗಳಿಂದ ಬರುತ್ತದೆ.

ಕುಷಾಣ ರಾಜವಂಶವು ಕ್ರಿ.ಶ. ೩ನೇ ಶತಮಾನದಲ್ಲಿ ಅರೆ ಸ್ವತಂತ್ರ ರಾಜ್ಯಗಳಾಗಿ ಚೂರುಚೂರಾಯಿತು, ಮತ್ತು ಇವನ್ನು ಪಶ್ಚಿಮದಿಂದ ದಾಳಿಮಾಡಿದ ಸಸಾನಿಯನ್ನರಿಗೆ ಅಳಿದುಹೋದವು. ಇದರಿಂದ ಸೊಗ್ಡಿಯಾನಾ, ಬ್ಯಾಕ್ಟಿಯಾ ಮತ್ತು ಗಾಂಧಾರದ ಪ್ರದೇಶಗಳಲ್ಲಿ ಹೊಸ ರಾಜ್ಯದ ಸ್ಥಾಪನೆಯಾಯಿತು. ಕ್ರಿ.ಶ. ೪ನೇ ಶತಮಾನದಲ್ಲಿ ಗುಪ್ತರು ಕೂಡ ಪೂರ್ವದಿಂದ ಮೇಲೆರಗಿದರು. ಕುಷಾಣದ ರಾಜ್ಯಗಳನ್ನು ಅಂತಿಮವಾಗಿ ಉತ್ತರದ ದಾಳಿಕಾರರಾದ ಹುಣರು ನಾಶಮಾಡಿದರು.

ಉಲ್ಲೇಖಗಳು

  1. http://www.kushan.org/general/other/part1.htm Archived 2015-07-07 ವೇಬ್ಯಾಕ್ ಮೆಷಿನ್ ನಲ್ಲಿ. and Si-Yu-Ki, Buddhist Records of the Western World, (Tr. Samuel Beal: Travels of Fa-Hian, The Mission of Sung-Yun and Hwei-S?ng, Books 1–5), Kegan Paul, Trench, Trubner & Co. Ltd. London. 1906 and Hill (2009), pp. 29, 318–350