ಖಜುರಾಹೊ

ಖಜುರಾಹೊ ಭಾರತದ ಮಧ್ಯಪ್ರದೇಶ ರಾಜ್ಯದ ಛತ್ತರ್ಪುರ್ ಜಿಲ್ಲೆಯ ಛತ್ತರ್ಪುರ್ ಬಳಿಯ ಒಂದು ನಗರವಾಗಿದೆ. ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಖಜುರಾಹೊ ಮಧ್ಯಕಾಲೀನ ಹಿಂದೂ ಮತ್ತು ಜೈನ ದೇವಾಲಯಗಳ ದೇಶದ ಅತಿದೊಡ್ಡ ಗುಂಪನ್ನು ಹೊಂದಿದ್ದು ಅವುಗಳ ಕಾಮಪ್ರಚೋದಕ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಇದು ಬುಂದೇಲ್‍ಖಂಡ್ ಪ್ರದೇಶದ ಭಾಗವಾಗಿದೆ. ದೆಹಲಿಯಿಂದ ೬೨೦ ಕಿಮೀ ದಕ್ಷಿಣದಲ್ಲಿದೆ. ಖಜುರಾಹೊ ಸ್ಮಾರಕಗಳ ಸಮೂಹವನ್ನು ೧೯೮೬ ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಪಟ್ಟಿ ಮಾಡಲಾಗಿದೆ ಮತ್ತು ಇದನ್ನು ಭಾರತದ "ಏಳು ಅದ್ಭುತಗಳಲ್ಲಿ" ಒಂದೆಂದು ಪರಿಗಣಿಸಲಾಗಿದೆ. ಪ್ರಾಚೀನವಾಗಿ "ಖರ್ಜುರವಾಹಕ" ಎಂಬ ಪಟ್ಟಣದ ಹೆಸರು ಸಂಸ್ಕೃತ ಪದವಾದ ಖರ್ಜೂರ್‌ನಿಂದ ಬಂದಿದೆ. ಇಲ್ಲಿನ ಇಡೀ ಪ್ರದೇಶ ಎಂಟು ದ್ವಾರಗಳಿದ್ದ ಕೋಟೆಯಿಂದ ಸುತ್ತುವರಿಯಲ್ಪಟ್ಟಿತ್ತು.

ಮೊದಲಿಗೆ ಎಂಬತ್ತಕ್ಕೂ ಹೆಚ್ಚು ದೇವಸ್ಥಾನಗಳು ಇಲ್ಲಿದ್ದವು. ಆದರೆ ಈಗ ೨೨ ದೇವಸ್ಥಾನಗಳು ಮಾತ್ರ ಸುಮಾರು ಒಳ್ಳೆಯ ಪರಿಸ್ಥಿತಿಯಲ್ಲಿದ್ದು, ೨೨ ಚ. ಕಿಮೀ ವಿಸ್ತೀರ್ಣವುಳ್ಳ ಪ್ರದೇಶದಲ್ಲಿವೆ.

ಇತಿಹಾಸ

ಈ ಪ್ರದೇಶವು ಐತಿಹಾಸಿಕವಾಗಿ ಅನೇಕ ರಾಜ್ಯಗಳು ಮತ್ತು ಸಾಮ್ರಾಜ್ಯಗಳ ಭಾಗವಾಗಿತ್ತು. ಖಜುರಾಹೊವನ್ನು ತನ್ನ ಭೂಪ್ರದೇಶದಲ್ಲಿ ಹೊಂದಿದ್ದ ಅತ್ಯಂತ ಹಳೆಯ ಶಕ್ತಿ ವತ್ಸ. ಈ ಪ್ರದೇಶದ ಅವರ ಉತ್ತರಾಧಿಕಾರಿಗಳಲ್ಲಿ ಮೌರ್ಯರು, ಶುಂಗರು, ಕುಶಾನರು, ಪದ್ಮಾವತಿಯ ನಾಗಾಗಳು, ವಾಕಾಟಕ ರಾಜವಂಶ, ಗುಪ್ತರು, ಪುಷ್ಯಭೂತಿ ರಾಜವಂಶ ಮತ್ತು ಗುರ್ಜರ-ಪ್ರತಿಹಾರ ರಾಜವಂಶ ಸೇರಿವೆ. ನಿರ್ದಿಷ್ಟವಾಗಿ ಗುಪ್ತರ ಕಾಲದಲ್ಲಿಯೇ ಈ ಪ್ರದೇಶದಲ್ಲಿ ವಾಸ್ತುಶಿಲ್ಪ ಮತ್ತು ಕಲೆಯು ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತಾದರೂ ಅವರ ಉತ್ತರಾಧಿಕಾರಿಗಳು ಕಲಾತ್ಮಕ ಸಂಪ್ರದಾಯವನ್ನು ಮುಂದುವರೆಸಿದರು.[]

ಒಂಬತ್ತನೇ ಶತಮಾನದಿಂದ ಚಂದೇಲರು ಈ ಪ್ರದೇಶವನ್ನು ಆಳಿದರು, ಅವರು ಗುರ್ಜರ-ಪ್ರತಿಹಾರರಿಗೆ ಅಧೀನರಾಗಿದ್ದರು. ಧಂಗನ ಆಳ್ವಿಕೆಯಲ್ಲಿ (ಸು. ೯೫೦-೧೦೦೨) ಚಂದೇಲರು ಸ್ವತಂತ್ರರಾದರು ಮತ್ತು ಈ ಸಮಯದಲ್ಲಿ ಅನೇಕ ಪ್ರಮುಖ ದೇವಾಲಯಗಳನ್ನು ನಿರ್ಮಿಸಲಾಯಿತು. ಶೈವ, ವೈಷ್ಣವ ಮತ್ತು ಜೈನ ಧರ್ಮೀಯವಾದ ಈ ಮಂದಿರಗಳು ಆಗಿನ ರಾಜರ ಮತ್ತು ಜನತೆಯ ಸರ್ವಧರ್ಮ ಸಮನ್ವಯ ಭಾವನೆಗಳ ಪ್ರತೀಕಗಳಾಗಿವೆ. ತಮ್ಮ ಆಳ್ವಿಕೆಯಲ್ಲಿ ಚಂದೇಲರು ಖಜುರಾಹೊದ ಸುಮಾರು ಮೂವತ್ತು ದೇವಸ್ಥಾನಗಳನ್ನು ಕ್ರಿ.ಶ. ೯೫೦ ರಿಂದ ೧೦೫೦ ರ ವರೆಗೆ ಕಟ್ಟಿಸಿದರು. ಚಂದೇಲರು ಮೊದಲು ೧೧೮೨ ರಲ್ಲಿ ಶಾಕಾಂಬರಿಯ ಚಹಮಾನರಿಂದ ನಂತರ ೧೨೦೨ ರಲ್ಲಿ ಕುತುಬ್ ಅಲ್-ದಿನ್ ಐಬಕ್ ಅವರಿಂದ ಮಾರಣಾಂತಿಕ ಹೊಡೆತಗಳನ್ನು ಎದುರಿಸಿದರು. ಚಂದೇಲರು ತಮ್ಮ ಚಟುವಟಿಕೆಗಳನ್ನು ಮಹೋಬಾ, ಕಲಿಂಜರ್ ಮತ್ತು ಅಜಯಗಢದ ಕೋಟೆಗಳಿಗೆ ವರ್ಗಾಯಿಸಿದ್ದರಿಂದ ಖಜುರಾಹೊ ಒಂದು ಸಣ್ಣ ಹಳ್ಳಿಗೆ ಸ್ಥಳಾಂತರಗೊಂಡಿತು.

ಇಬ್ನ್ ಬತೂತ್ ಖಜುರಾಹೊಗೆ ಭೇಟಿ ನೀಡಿ ದೇವಾಲಯಗಳು ಮತ್ತು ಕೆಲವು ಸನ್ಯಾಸಿಗಳ ಉಪಸ್ಥಿತಿಯನ್ನು ವಿವರಿಸಿದರು. ೧೪೯೫ ರಲ್ಲಿ ಸಿಕಂದರ್ ಲೋದಿಯಿಂದ ಕೆಲವು ದೇವಾಲಯಗಳು ಹಾನಿಗೊಳಗಾದವು. ೧೬ ನೇ ಶತಮಾನದ ಹೊತ್ತಿಗೆ ಖಜುರಾಹೊ ಒಂದು ಅಮುಖ್ಯ ಸ್ಥಳವಾಯಿತು ಮತ್ತು ೧೮೧೯ ರಲ್ಲಿ ಸಿ.ಜೆ.ಫ್ರಾಂಕ್ಲಿನ್ (ಮಿಲಿಟರಿ ಸರ್ವೇಯರ್) ಮಾತ್ರ ಇದನ್ನು "ಮರುಶೋಧಿಸಿದರು". ಆದಾಗ್ಯೂ ಖಜುರಾಹೊವನ್ನು ಮತ್ತೆ ವಿಶ್ವದ ಗಮನಕ್ಕೆ ತಂದ ನಿಜವಾದ ವ್ಯತ್ಯಾಸವನ್ನು ೧೮೩೮ ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿ.ಎಸ್.ಬರ್ಟ್ (ಬ್ರಿಟಿಷ್ ಸೇನಾ ಕ್ಯಾಪ್ಟನ್) ಗೆ ನೀಡಲಾಗಿದೆ. ೧೮೫೨ ಮತ್ತು ೧೮೫೫ ರ ನಡುವೆ ಮುಂದಿನ ಗಮನಾರ್ಹ ಸಂದರ್ಶಕ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಭೇಟಿ ನೀಡಿದರು.

ದೇವಸ್ಥಾನಗಳ ರಚನೆಯ ವಿವರಗಳು

ನದಿಯ ದಡದಲ್ಲಿ ಎತ್ತರವಾದ ಜಗತಿಗಳ ಮೇಲೆ ಒಂದೊಂದು ಪ್ರತ್ಯೇಕವಾಗಿ ನಿಂತಿರುವ ಈ ದೇವಾಲಯಗಳ ರಚನೆಯಲ್ಲಿ ಯಾವುದೇ ಬಗೆಯ ವ್ಯವಸ್ಥಾಬದ್ಧ ಯೋಜನೆಯೂ ಕಂಡುಬರುವುದಿಲ್ಲ. ಸಣ್ಣವಾದರೂ ಎತ್ತರವಾದ ವಿಶಾಲ ಜಗತಿನ ಮೇಲೆ ನಿಂತಿರುವ ಈ ಮಂದಿರಗಳು ಸ್ವಯಂಪೂರ್ಣವಾದ ಉತ್ತಮ ವಾಸ್ತುಕೃತಿಗಳಾಗಿವೆ. ಗರ್ಭಗೃಹ, ಮಂಟಪ ಮತ್ತು ಅರ್ಧಮಂಟಪಗಳೇ ಈ ಭಾಗಗಳು. ಕೆಲವು ಮಂದಿರಗಳಲ್ಲಿ ಗರ್ಭಗೃಹಕ್ಕೆ ಸೇರಿದಂತೆ ಅಂತರಾಲ, ಮುಂಭಾಗದಲ್ಲಿ ಮಹಾಮಂಟಪ ಮತ್ತು ಪ್ರದಕ್ಷಿಣಮಾರ್ಗಗಳೂ ಇವೆ. ಎತ್ತರವಾದ ಜಗತಿಯ ಮೇಲೆ ತಳಭಾಗದ ಅಂತಸ್ತು, ಗೋಡೆಗಳು, ಬಾಗಿಲು ಕಿಟಕಿಗಳು, ಮೇಲ್ಭಾಗದ ಉನ್ನತವಾದ ಶಿಖರಗಳು ಈ ದೇವಾಲಯಗಳ ಮುಖ್ಯ ಅಂಗಗಳಾಗಿದ್ದು ಕಟ್ಟಡದ ಔನ್ನತ್ಯವನ್ನು ಎತ್ತಿತೋರುತ್ತವೆ. ಹೊರಗೋಡೆಗಳ ಮೇಲಿನ ಅಂಕರಣ ಕೆತ್ತನೆಗಳು ಕಟ್ಟಡಗಳ ಭವ್ಯತೆಯನ್ನು ಹೆಚ್ಚಿಸುತ್ತವೆ. ಆನಂದಮಯ ತೃಪ್ತ ಜೀವನದ ಭಾವವನ್ನು ಬೀರುತ್ತಿರುವ ಮಾನವರ ಮತ್ತು ಸುಂದರ ದೇವತೆಗಳ ಶಿಲ್ಪಗಳು ನೂರಾರು ಸಂಖ್ಯೆಯಲ್ಲಿ ಅಲಂಕರಣ ಕಾರ್ಯದಲ್ಲಿ ಯೋಜಿತವಾಗಿವೆ. ಇವೆಲ್ಲದರಿಂದ ಇಡೀ ಕಟ್ಟಡವೇ ಜೀವಂತವಾಗಿರುವಂತೆ ಭಾಸವಾಗುತ್ತದೆ. ಮುಂಭಾಗದಿಂದ ಮೆಟ್ಟುಲುಮೆಟ್ಟಿಲಾಗಿ ಕಟ್ಟಡದ ಶಿಖರ ಅತ್ಯಂತ ಉನ್ನತ ಭಾಗವಾಗಿದ್ದು ದೇವಾಲಯದ ಪ್ರಾಶಸ್ತ್ಯವನ್ನು ಹೆಚ್ಚಿಸುವಂತೆ ಕಾಣುತ್ತದೆ. ಖಜುರಾಹೊ ದೇವಾಲಯಗಳ ಶಿಖರಗಳು ಬಹಳ ಸುಂದರವಾಗಿವೆ; ಕಟ್ಟಡದ ಎಲ್ಲ ಭಾಗಗಳಿಗೂ ಕೇಂದ್ರಬಿಂದುಗಳಾಗಿವೆ. ಕೇಂದ್ರ ಶಿಖರದ ಸುತ್ತ ಇರುವ ಸಣ್ಣಸಣ್ಣ ಶಿಖರಗಳು ಅದರ ಭವ್ಯತೆಯನ್ನು ಹೆಚ್ಚಿಸಿವೆ.

ದೇವಾಲಯದ ಒಳಭಾಗವನ್ನು ಮತೀಯ ಕಾರ್ಯಗಳಿಗೆ ಹೊಂದುವಂತೆ, ಸ್ಥಳಪರಿಮಿತಿಯನ್ನು ಗಮನದಲ್ಲಿಟ್ಟುಕೊಂಡು, ಯೋಜಿಸಲಾಗಿದೆ. ಕಟ್ಟಡಕ್ಕೆ ಒಂದೇ ಪ್ರವೇಶ ಮಾರ್ಗವಿದ್ದು ಮೆಟ್ಟಿಲುಗಳ ಸರಣಿಯ ಮೂಲಕ ಒಳಹೊಗಬೇಕು. ಈ ರೀತಿ ಅರ್ಧಮಂಟಪಕ್ಕೆ ಪ್ರವೇಶಮಾಡಿ ಕಂಬಗಳಿಂದ ಕೂಡಿದ ಮಂಟಪದೊಳಕ್ಕೆ ಹೋದಾಗ ಅಂತರಾಳದ ಮುಂದೆ ನಿಲ್ಲಬೇಕು. ಅದರ ಮುಂದಿನ ಭಾಗವೇ ಗರ್ಭಗೃಹ. ದೇವಾಲಯದ ಒಂದು ಪಾರ್ಶ್ವದಲ್ಲಿ, ಸಾಮಾನ್ಯವಾಗಿ ಎಡಪಾರ್ಶ್ವದಲ್ಲಿ, ಮಹಾಮಂಟಪ ಮತ್ತು ಗರ್ಭಗೃಹದ ಸುತ್ತ ಪ್ರದಕ್ಷಿಣಮಾರ್ಗ ಇವೆ. ದೇವಾಲಯದ ಒಳಭಾಗದಲ್ಲೂ ಅನೇಕ ಶಿಲ್ಪಗಳು ಅದರ ಅಲಂಕರಣವನ್ನು ಹೆಚ್ಚಿಸುತ್ತವೆ. ಆ ಶಿಲ್ಪಗಳಲ್ಲಿ ಕುಬ್ಜ ಸುಂದರ ಸ್ತ್ರೀ ವಿಗ್ರಹಗಳು ಗಮನಾರ್ಹವಾಗಿವೆ. ಅದರಲ್ಲೂ ಬೋದಿಗೆಗಳ ಮೇಲಿನ ಸೂರುಗಳಲ್ಲಿರುವ ವಿಗ್ರಹಗಳು ಮತ್ತು ಕುಸುರಿ ಕೆಲಸ ಕಲಾ ಐಸಿರಿಯ, ಕಲೆಗಾರನ ಮಹೋನ್ನತೆಯ ಸಾಕ್ಷಿಗಳಾಗಿವೆ. ಮಧ್ಯದ ಮಂಟಪದ ಚಾವಣಿಯಲ್ಲಿರುವ ಭುವನೇಶ್ವರಿ ಖಜುರಾಹೊ ದೇವಾಲಯಗಳ ಅತ್ಯುತ್ಕೃಷ್ಟವಾದ ಕೆತ್ತನೆಗಳಿಂದ ಕೂಡಿದೆ. ಜ್ಯಾಮಿತೀಯ ಆಕಾರದ ವೃತ್ತ, ಅರ್ಧವೃತ್ತ ಮತ್ತು ರೇಖಾವಿನ್ಯಾಸಗಳಿಂದ ಅತ್ಯಂತ ನಯನಮನೋಹರವಾದ ಅಲಂಕರಣವನ್ನು, ಶಿಲ್ಪಗಳನ್ನು ಕಲ್ಲಿನಲ್ಲಿ ಬಿಡಿಸಿದ್ದಾರೆ.

ಕಂದರಿಯಾ ಮಹಾದೇವ್ ದೇಗುಲ

ಇಲ್ಲಿಯ ದೇವಾಲಯಗಳಲ್ಲಿ ಮುಖ್ಯವಾದ ವಾಯವ್ಯ ಭಾಗದ ಸಮೂಹದಲ್ಲಿ ಶೈವ ವೈಷ್ಣವ ಮಂದಿರಗಳಿವೆ. ಇವುಗಳಲ್ಲಿ ಕಂದರಿಯಾ ಮಹಾದೇವ್ ಭಾರತದ ಅತಿ ಸುಂದರ ದೇಗುಲಗಳಲ್ಲೊಂದು. ಬೇಲೂರು, ಹಳೇಬೀಡುಗಳಲ್ಲಿರುವಂತೆ ಎತ್ತರವಾದ ಜಗಲಿಯ ಮೇಲೆ ಇದನ್ನು ಕಟ್ಟಲಾಗಿದೆ. 109 ಅಡಿ ಉದ್ದ 60 ಅಡಿ ಅಗಲ ಮತ್ತು ಭೂಮಿಯ ಮೇಲಿನಿಂದ 116 ಅಡಿ ಎತ್ತರ ಅಥವಾ ಜಗತಿಯಿಂದ 88 ಅಡಿ ಇರುವ ತಳಹದಿಯ ಮೇಲೆ ನಿರ್ಮಿತವಾಗಿದೆ. ಆಕಾರದಲ್ಲಿ ಅಷ್ಟು ಬೃಹತ್ತಾಗಿಲ್ಲದಿದ್ದರೂ ಒಂದು ಘನವಾಗಿ, ಎತ್ತರದಿಂದ ಎತ್ತರಕ್ಕೆ, ಒಂದನ್ನೊಂದು ಮೀರಿ ಏರುತ್ತಿರುವ ಶಿಖರಗಳಿಂದ ಕೊನೆಗೆ ಏಕಮೇವಾದ್ವಿತೀಯವಾಗಿ ನಿಮಿರಿನಿಂತ ಗಿರಿಶೃಂಗದಂಥ ಗರ್ಭಾಂಕಣದ ಶಿಖರದ ಔನ್ನತ್ಯ ಪ್ರೇಕ್ಷಕರ ಹೃನ್ಮನಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಕಲೆಯ ದೃಷ್ಟಿಯಿಂದ ಭುವನೇಶ್ವರದ ದೇವಾಲಯಗಳು ಆಕರ್ಷಣೀಯವಾಗಿದ್ದರೆ, ಮಹಾದೇವ ದೇವಾಲಯ ಬೇಲೂರಿನ ಚನ್ನಕೇಶವ ದೇವಾಲಯದಂತೆ ಒಳಗೂ ಹೊರಗೂ ಮನೋಹರವಾಗಿದೆ. ಅಷ್ಟದಿಕ್ಪಾಲಕರು, ಅಪ್ಸರೆಯರು,[] ಸುರಸುಂದರಿಯರು, ವಿದ್ಯಾಧರೆಯರು ಇತ್ಯಾದಿ ವಿವಿಧ ಭಂಗಿಭಾವಗಳ ರಮಣೀಯ ಶಿಲಾಕೃತಿಗಳು ಇಲ್ಲಿ ಗುಂಪುಗೂಡಿವೆ. ಇಲ್ಲಿಯ ಕಲಾಸಂಪತ್ತು, ಭಾವಪ್ರೇರಕಶಕ್ತಿ ಅತ್ಯದ್ಭುತವಾದುದೆಂದು ಕಲಾವಿಮರ್ಶಕರು ಉದ್ಗಾರವೆತ್ತಿದ್ದಾರೆ.

ಇತರ ದೇವಾಲಯಗಳು

ಈ ಗುಂಪಿನ ವೈಷ್ಣವ ದೇವಾಲಯಗಳಲ್ಲಿ ಚತುರ್ಭುಜ ವಿಷ್ಣುಮಂದಿರ 85 ಅಡಿ ಉದ್ದ ಮತ್ತು 44 ಅಡಿ ಅಗಲವಾಗಿದೆ. ಪಂಚಾಯತನ ಪದ್ಧತಿಯಲ್ಲಿ ನಿರ್ಮಿತವಾಗಿರುವ ಈ ಮಂದಿರಗಳಲ್ಲಿ ಐದು ಗರ್ಭಗೃಹಗಳಿವೆ. ಈ ಹಿಂದೂ ದೇವಾಲಯಗಳ ಮಾದರಿಯಲ್ಲೇ ನಿರ್ಮಿತವಾದ ಆರು ಜೈನ ದೇವಾಲಯಗಳು ಆಗ್ನೇಯ ಭಾಗದಲ್ಲಿದೆ. ಇವುಗಳ ಹೊರಗೋಡೆಗಳ ಮೇಲೆ ತೋರಣಗಳು, ಸ್ತಂಭಿಕೆಗಳು ಮುಂತಾದ ವಾಸ್ತುಕೃತಿಗಳ ಅಲಂಕರಣವಿಲ್ಲದೆ ಅವು ಸರಳವಾಗಿವೆ. ಅವುಗಳ ಸ್ಥಾನದಲ್ಲಿ ಜೋಡಿಸಲಾಗಿರುವ ಮೂರ್ತಿಗಳಿಂದಾಗಿ ಈ ಗೋಡೆಗಳಿಗೆ ವಿಶೇಷವಾದ ಶೋಭೆ ಪ್ರಾಪ್ತವಾಗಿದೆ. ಈ ಜೈನ ಮಂದಿರಗಳಲ್ಲಿ ಮುಖ್ಯವಾದ ಜಿನನಾ ಬಸದಿ 60 ಅಡಿ ಉದ್ದ ಮತ್ತು 30 ಅಡಿ ಅಗಲವಾದ್ದು.

ಈ ಗುಂಪಿನ ಪಕ್ಕದಲ್ಲಿರುವ ಪಾಳಾದ ಜೈನಮಂದಿರವೊಂದು ಗಮನಾರ್ಹವಾದ್ದು. ಘಂಟೈ ಮಂದಿರವೆಂದು ಹೆಸರಾದ ಈ ಮಂದಿರ ಪೂರ್ಣವಾಗಿದ್ದಾಗ ಆ ರೀತಿಯ ಕಟ್ಟಡಗಳಲ್ಲಿ ಮಕುಟಪ್ರಾಯವಾಗಿತ್ತೆಂದು ಹೇಳಬಹುದು. ಈಗ ಉಳಿದಿರುವ ಭಾಗಗಳಲ್ಲಿರುವ, ಉತ್ತಮ ಕೈಚಳಕ ತೋರುವ ಕಂಬಗಳು, ಭವ್ಯ ಕೆತ್ತನೆಗಳಿರುವ ಪ್ರವೇಶದ್ವಾರ ನೋಟಕರ ಕಣ್ಮನಗಳನ್ನು ತಣಿಸುತ್ತವೆ. ಈ ಪರಿಸರದಲ್ಲಿರುವ ಮತ್ತೆ ಕೆಲವು ಮಂದಿರಗಳೂ ಉತ್ತಮ ಕಲಾವಂತಿಕೆಯಿಂದ ಕೂಡಿವೆ; ಕೆಲವು ಪಾಳು ಬಿದ್ದಿವೆ. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ಭಾರತೀಯ ವಾಸ್ತುಕಲೆಯ ಮಹೋನ್ನತ ಘಟ್ಟವನ್ನು ರೂಪಿಸುವ ಉತ್ತಮ ನಿದರ್ಶನಗಳ ಸಾಲಿನಲ್ಲಿ ಸೇರುತ್ತವೆಂದು ನಿಸ್ಸಂದೇಹವಾಗಿ ಹೇಳಬಹುದು. ಭಾರತೀಯ ಶಿಲ್ಪಕಲೆಯ ಪರಾಕಾಷ್ಠೆಯ ಉತ್ತಮ ನಿದರ್ಶನಗಳಲ್ಲಿ ಖಜುರಾಹೊದ ಶಿಲ್ಪಗಳೂ ಸೇರುತ್ತವೆ. ಹಂತಹಂತವಾಗಿ ಕೆತ್ತಲಾದ ನಗ್ನ ಅಪ್ಸರೆಯರ ಅಸಾಧಾರಣ ಸುಂದರ ದೇಹಗಳು ಬಾಗಿ ಬಳುಕುತ್ತ ನೋಟಕರ ಚಿತ್ತವನ್ನು ತಮ್ಮಲ್ಲಿ ಸೆರೆಹಿಡಿಯುತ್ತವೆ. ಸುಂದರ ಸ್ತ್ರೀಯರ ದೇಹಗಳಲ್ಲಿ ತುಂಬಿ ತುಳುಕುವ ವಿವಿಧ ಶೃಂಗಾರ ಪ್ರಧಾನ ಭಾವಭಂಗಿಗಳು, ಪುರುಷರ ಚಿತ್ತವನ್ನು ಕ್ಷೋಭೆಗೊಳಿಸುವ ರಸಮಯ ಸನ್ನಿವೇಶಗಳು ಪ್ರೇಕ್ಷಕರ ಒಂದೊಂದು ನೋಟಕ್ಕೂ ಹೊಸಹೊಸ ಭಾವನೆಗಳನ್ನು ಸೂಚಿಸುತ್ತವೆ. ಮಧ್ಯಯುಗೀನ ಭಾರತೀಯ ಶಿಲ್ಪಿಗಳು ತಮ್ಮ ಅತಿಮಾನುಷ ಕಲಾವಂತಿಕೆಯನ್ನು ಖಜುರಾಹೊ ಮಂದಿರಗಳಲ್ಲಿ ಪ್ರದರ್ಶಿಸಿ ವಿಶ್ವದ ಕಲಾ ಇತಿಹಾಸದಲ್ಲಿ ಅಮರರಾಗಿದ್ದಾರೆ.

ಹವಾಮಾನ

ಖಜುರಾಹೊ (೧೯೮೧–೨೦೧೦, ವಿಪರೀತಗಳು ೧೯೭೦–೨೦೧೦)ದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Record high °C (°F) 34.3
(93.7)
38.6
(101.5)
43.1
(109.6)
46.9
(116.4)
48.4
(119.1)
48.0
(118.4)
45.0
(113)
41.0
(105.8)
39.3
(102.7)
42.8
(109)
37.6
(99.7)
32.8
(91)
48.4
(119.1)
ಅಧಿಕ ಸರಾಸರಿ °C (°F) 24.1
(75.4)
28.0
(82.4)
34.3
(93.7)
40.1
(104.2)
42.8
(109)
40.4
(104.7)
34.3
(93.7)
32.5
(90.5)
33.2
(91.8)
33.8
(92.8)
30.1
(86.2)
26.1
(79)
33.3
(91.9)
ಕಡಮೆ ಸರಾಸರಿ °C (°F) 8.4
(47.1)
10.8
(51.4)
15.8
(60.4)
21.9
(71.4)
26.9
(80.4)
28.4
(83.1)
26.3
(79.3)
25.3
(77.5)
24.1
(75.4)
19.0
(66.2)
13.3
(55.9)
9.2
(48.6)
19.1
(66.4)
Record low °C (°F) 1.0
(33.8)
0.6
(33.1)
6.3
(43.3)
12.6
(54.7)
18.6
(65.5)
21.5
(70.7)
22.4
(72.3)
21.8
(71.2)
17.3
(63.1)
11.7
(53.1)
4.8
(40.6)
3.1
(37.6)
0.6
(33.1)
ಸರಾಸರಿ ಮಳೆ mm (inches) 17.8
(0.701)
22.8
(0.898)
10.6
(0.417)
6.5
(0.256)
15.7
(0.618)
100.0
(3.937)
293.7
(11.563)
377.0
(14.843)
211.6
(8.331)
33.9
(1.335)
6.7
(0.264)
3.8
(0.15)
೧,೧೦೦
(೪೩.೩೦೭)
Average rainy days 1.3 1.6 0.9 0.8 1.5 5.5 13.0 13.6 8.7 1.7 0.5 0.6 49.9
Average relative humidity (%) (at 17:30 IST) 47 37 24 17 20 40 69 76 68 48 44 48 45
Source: ಭಾರತೀಯ ಹವಾಮಾನ ಇಲಾಖೆ[][]

ಜನಸಂಖ್ಯಾಶಾಸ್ತ್ರ

೨೦೧೧ ರ ಜನಗಣತಿಯ ಪ್ರಕಾರ ಖಜುರಾಹೊ ೨೪,೪೮೧ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ಖಜುರಾಹೊ ಸರಾಸರಿ ಸಾಕ್ಷರತಾ ಪ್ರಮಾಣ ೫೩% ಹೊಂದಿದ್ದು ಇದು ರಾಷ್ಟ್ರೀಯ ಸರಾಸರಿ ೭೪.೦೪% ಕ್ಕಿಂತ ಕಡಿಮೆ: ಪುರುಷ ಸಾಕ್ಷರತೆ ೬೨% ಮತ್ತು ಮಹಿಳಾ ಸಾಕ್ಷರತೆ ೪೩%. ಖಜುರಾಹೊದಲ್ಲಿ ಜನಸಂಖ್ಯೆಯ ೧೯% ರಷ್ಟು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.

ಸಾರಿಗೆ

ವಾಯು

ಖಜುರಾಹೊ ವಿಮಾನ ನಿಲ್ದಾಣವು ದೆಹಲಿ ಮತ್ತು ವಾರಣಾಸಿಗೆ ವಿಮಾನಗಳನ್ನು ಹೊಂದಿದೆ. ಈ ವಿಮಾನ ನಿಲ್ದಾಣವು ಖಜುರಾಹೊ ಪಟ್ಟಣದ ದಕ್ಷಿಣಕ್ಕೆ ೩ ಕಿ.ಮೀ ದೂರದಲ್ಲಿದೆ. ಹತ್ತಿರದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೇವಾಲಯ ಸಂಕೀರ್ಣಕ್ಕೆ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಇದನ್ನು ೧೯೭೮ ರಲ್ಲಿ ತೆರೆಯಲಾಯಿತು. ಈ ವಿಮಾನ ನಿಲ್ದಾಣದ ಕಾರ್ಯಸಾಧ್ಯತೆ ಮತ್ತು ವಿಶ್ವ ಪರಂಪರೆಯ ತಾಣ ಮತ್ತು ಪರಿಸರದ ಮೇಲೆ ಅದರ ಪರಿಣಾಮದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.[]

ರೈಲು

ಖಜುರಾಹೊ ರೈಲ್ವೆ ನಿಲ್ದಾಣವು ಛತ್ತರ್ಪುರ್, ಟಿಕಾಮ್ಗರ್, ಝಾನ್ಸಿ, ಗ್ವಾಲಿಯರ್, ಆಗ್ರಾ ಮತ್ತು ಮಥುರಾ ಮೂಲಕ ದೆಹಲಿಗೆ ದೈನಂದಿನ ರೈಲಿನ ಮೂಲಕ ಪಟ್ಟಣವನ್ನು ಸಂಪರ್ಕಿಸುತ್ತದೆ. ಇದು ಆಗ್ರಾ, ಜೈಪುರ, ಭೋಪಾಲ್ ಮತ್ತು ಉದಯಪುರಗಳಿಗೆ ಸಂಪರ್ಕಿಸುವ ದೈನಂದಿನ ರೈಲನ್ನು ಒದಗಿಸುತ್ತದೆ. ಸ್ಥಳೀಯ ದೈನಂದಿನ ರೈಲು ಕಾನ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ ಹಾಗೂ ವಾರಣಾಸಿಗೆ ವಾರಕ್ಕೆ ಮೂರು ಬಾರಿ ಸಂಪರ್ಕ ಹೊಂದಿದೆ. ಪ್ರಸ್ತುತ, ಖಜುರಾಹೊ ನವದೆಹಲಿಯೊಂದಿಗೆ ಎರಡು ರೈಲುಗಳ ಮೂಲಕ ಸಂಪರ್ಕ ಹೊಂದಿದೆ, ಅವುಗಳೆಂದರೆ ಕುರುಕ್ಷೇತ್ರದಿಂದ ಹೊರಡುವ ಗೀತಾ ಜಯಂತಿ ಎಕ್ಸ್‌ಪ್ರೆಸ್ ಮತ್ತು ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್.[]

ಉಲ್ಲೇಖಗಳು

  1. Schellinger, Paul; Salkin, Robert, eds. (1996). International Dictionary of Historic Places, Volume 5: Asia and Oceania. Chicago: Fitzroy Dearborn Publishers. pp. 468–469. ISBN 1-884964-04-4.
  2. Abram 2003, pp. 420–21.
  3. "Station: Khajuraho Climatological Table 1981–2010" (PDF). Climatological Normals 1981–2010. India Meteorological Department. January 2015. pp. 409–410. Archived from the original (PDF) on 5 February 2020. Retrieved 29 December 2020.
  4. "Extremes of Temperature & Rainfall for Indian Stations (Up to 2012)" (PDF). India Meteorological Department. December 2016. p. M121. Archived from the original (PDF) on 5 February 2020. Retrieved 29 December 2020.
  5. "ಆರ್ಕೈವ್ ನಕಲು". Archived from the original on 2020-03-12. Retrieved 2024-11-10.
  6. http://indiarailinfo.com/departures/khajuraho-kurj/6710

ಗ್ರಂಥಸೂಚಿ

ಬಾಹ್ಯ ಸಂಪರ್ಕಗಳು



ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: