ಗಯಾನ (ಪ್ರದೇಶ)
ಗಯಾನ ಎನ್ನುವುದು ದಕ್ಷಿಣ ಅಮೆರಿಕಾದ ಈಶಾನ್ಯದಲ್ಲಿ, ಅಮೆಜಾನ್, ನೇಗ್ರೊ, ಓರಿನೋಕೋ ನದಿಗಳ ನಡುವೆ ಇರುವ ಪ್ರದೇಶ.[೧][೨]: 17 ಗಯಾನ, ಸುರಿನಾಮ್, ಫ್ರೆಂಚ್ ಗಯಾನ ಇವೂ, ಬ್ರಜ಼ಿಲ್, ವೆನಿಜ್ವೀಲಗಳ ಅಂಚಿನ ಭಾಗಗಳೂ ಇದರೊಳಗೆ ಸೇರುತ್ತವೆ.
ಭೌತಲಕ್ಷಣ
ಇಡೀ ಗಯಾನ ಪ್ರದೇಶ ಅಟ್ಲಾಂಟಿಕ್ ಸಾಗರ ಮತ್ತು ಓರಿನೋಕೋ ನದಿಪ್ರದೇಶದಿಂದ ಥಟ್ಟನೆ ಮೇಲೆದ್ದು ನಿಂತ ಪ್ರಸ್ಥಭೂಮಿಯಾಗಿದೆ. ದಕ್ಷಿಣ ಭಾಗದಲ್ಲಿ ಹೆಚ್ಚು ಎತ್ತರವಾದ, ಚಪ್ಪಟೆ ತಲೆಯ ಪರ್ವತಗಳಿವೆ. ವೆನಿಜ಼್ವೀಲ-ಗೈಯಾನ ಎಲ್ಲೆಯಲ್ಲಿರುವ ರಾರೈಮಾ ಅತ್ಯುನ್ನತ ಶಿಖರ (9,220').[೩] ವೆನಿಜ಼್ವೀಲ-ಬ್ರಜ಼ಿಲ್ ನಡುವೆ ಇರುವ ಸೆರ ಪರೀಮ ಪರ್ವತ ಶಿಖರದ ಎತ್ತರ 8,000 ಅಡಿ. ದಕ್ಷಿಣದಿಂದ ಒಳನಾಡಿನ ಪ್ರಸ್ಥಭೂಮಿಯ ಕಡೆಗೆ ಇಳಿಜಾರಾಗಿದೆ. ತೀರಪ್ರದೇಶ ಜವುಗು ನೆಲದಿಂದ ಕೂಡಿದ್ದು, ಓರಿನೋಕೋ ಮತ್ತು ಅದರ ಉಪನದಿಗಳು ಗಯಾನದ ಪಶ್ಚಿಮ ಭಾಗದಲ್ಲಿ ಹರಿಯುತ್ತವೆ. ವ್ರಾಂಕ್ರೂ ಮತ್ತು ಟ್ರೊಂಬೇಟಸ್ -ಇವು ದಕ್ಷಿಣಕ್ಕೆ ಹರಿದು ಅಮೆಜ಼ಾನ್ ನದಿಯನ್ನು ಸೇರುತ್ತವೆ. ಉತ್ತರದಲ್ಲಿ ಅಟ್ಲಾಂಟಿಕ್ ಸಾಗರವನ್ನು ಸೇರುವ ನದಿಗಳಲ್ಲಿ ಮುಖ್ಯವಾದವು ಎಸೆಕ್ವೀಬೋ, ಬರ್ಬೀಸ್, ಕೊರೆಂಟೈನ್, ಸುರಿನಾಂ, ಮತ್ತು ಮರೋನಿ. ಗಯಾನದಲ್ಲಿ ಅನೇಕ ಸುಂದರ ಜಲಪಾತಗಳಿವೆ. ಪೊಟಾರೋ ನದಿಯ ಕೈಯಿಟೂರ್ ಜಲಪಾತ (741'), ಐಪೋಬೆ ನದಿಯ ಮರೀನ ಜಲಪಾತ (500')[೪] ಇವು ಮುಖ್ಯವಾದವು.
ವಾಯಗುಣ
ಗಯಾನ ಸಮಭಾಜಕೀಯ ವಾಯುಗುಣ ಪ್ರದೇಶದಲ್ಲಿದೆ. ಈಶಾನ್ಯ ಮಾರುತಕ್ಕೆ ಎದುರಾಗಿರುವ ಈ ಪ್ರದೇಶದಲ್ಲಿ ಸೆಕೆಯೂ ಮಳೆಯೂ ಹೆಚ್ಚು. ಉಷ್ಣತೆ 750 ಫ್ಯಾ,-850 ಫ್ಯಾ. ನೆಲದ ಎತ್ತರ ಹೆಚ್ಚಿದಂತೆ ಹೆಚ್ಚು ತಂಪಾಗಿದೆ. ಕರಾವಳಿಯಲ್ಲಿ ಸಮುದ್ರದ ಗಾಳಿಯಿಂದಾಗಿ ಹವೆ ತಂಪಾಗಿರುತ್ತದೆ. ಕಡಲ ಬಳಿಯಲ್ಲಿ ವಾರ್ಷಿಕ ಮಳೆ 100" ಗಿಂತ ಕಡಿಮೆಯಿಲ್ಲ; ಉತ್ತರದ ಎತ್ತರ ನೆಲದಲ್ಲಿ ಇನ್ನೂ ಹೆಚ್ಚು. ಅಮೆಜ಼ಾನ್ ನದಿಯ ಕಡೆ ಬಹಳ ಕಡಿಮೆ. ಆಗಸ್ಟ್‌ನಿಂದ ಜನವರಿಯವರೆಗೆ ಮಳೆಗಾಲ.
ಸಸ್ಯಪ್ರಾಣಿ ಜೀವನ
ಒಳನಾಡಿನ ಎತ್ತರದ ಪ್ರಸ್ಥಭೂಮಿ ಮತ್ತು ಕರಾವಳಿ ವಿನಾ ಉಳಿದಲ್ಲೆಲ್ಲ ದಟ್ಟವಾಗಿ ಕಾಡು ಹರಡಿದೆ. ಕರಾವಳಿಯ ತಗ್ಗು ನೆಲದಲ್ಲಿ ಗುಲ್ಮವೃಕ್ಷಗಳು ಹೆಚ್ಚು. ಕಾಡಿನಲ್ಲಿ ಅನೇಕ ಚೌಬೀನೆ ಮರಗಳೂ, ರಬ್ಬರ್ ಮರಗಳೂ, ಸೀತೆ ಹೂವು, ತಾಳೆ, ಬಳ್ಳಿ ಮುಂತಾದವು ಬೆಳೆಯುತ್ತವೆ. ಜಾಗ್ವಾರ್, ಪ್ಯೂಮ, ಟ್ಯಾಪಿರ್, ಕೋತಿ, ಆರ್ಮಡಿಲೋ ಮುಂತಾಗಿ ಬಗೆಬಗೆಯ ಪ್ರಾಣಿಗಳೂ, ಹಕ್ಕಿಗಳೂ, ಹಾವುಗಳೂ, ಮೊಸಳೆಗಳೂ ವಿಶೇಷವಾಗಿವೆ.
ಇತಿಹಾಸ
ಗಯಾನ ಪ್ರದೇಶವನ್ನು ಮೊಟ್ಟಮೊದಲು ಕೊಲಂಬಸ್ ಕಂಡನಾದರೂ ಮೊದಮೊದಲು ಐರೋಪ್ಯರು ಇದರತ್ತ ಆಕರ್ಷಿತರಾಗಲಿಲ್ಲ. ಪ್ರಾರಂಭದಲ್ಲಿ ಇಲ್ಲಿಗೆ ಬಂದ ಐರೋಪ್ಯರು ಇಂಗ್ಲಿಷರು, ಡಚ್ಚರು. ಇಂಗ್ಲಿಷರು 1604ರಲ್ಲಿ ಪ್ರಥಮವಾಗಿ ಇಲ್ಲಿ ವಸಾಹತು ಸ್ಥಾಪಿಸಿದರು. ಇಲ್ಲಿಯ ನೆಲಸುಗಾರರು ಜೀವನ ನಡೆಸುವುದೇ ಕಷ್ಟವಾಗಿ, ಇವರ ಪೈಕಿ ಅಳಿದುಳಿದವರನ್ನು 1606ರಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗಬೇಕಾಯಿತು. 1609-13ರಲ್ಲಿ ಬಂದ ನೆಲಸುಗಾರರು ಇಲ್ಲಿ ಉಳಿಯಲಾಗಲಿಲ್ಲ. 1617-18ರಲ್ಲಿ ಓರಿನೋಕೋ ನದಿಯ ಮೇಲೆ ರ‍್ಯಾಲೆ ಕೈಗೊಂಡ ಯಾನ ವಿಫಲವಾಯಿತು. 1619ರಲ್ಲಿ ಸ್ಥಾಪಿತವಾಗಿ 1635ರವರೆಗೆ ಚಟುವಟಿಕೆಯಿಂದಿದ್ದ ಗಯಾನ ಕಂಪನಿಯ ನೆಲಸುನಾಡುಗಳಲ್ಲೂ ಜನರು ಉಳಿಯಲಿಲ್ಲ. ಸುರಿನಾಮಿನ ವಸತಿ ಮಾತ್ರ ಪ್ರವರ್ಧಮಾನಕ್ಕೆ ಬಂತು. ಆದರೆ ಆಂಗ್ಲೋ-ಡಚ್ ಯುದ್ಧದ ಕಾಲದಲ್ಲಿ ಇದನ್ನು ವಶಪಡಿಸಿಕೊಂಡರು (1667). ಈ ಪ್ರದೇಶದಲ್ಲಿ ನೆಲಸಲು ಡಚ್ಚರೂ ಕೈಗೊಂಡ ಪ್ರಥಮ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. 1621ರಲ್ಲಿ ಡಚ್ ವೆಸ್ಟ್ ಇಂಡಿಯ ಕಂಪನಿ ಸ್ಥಾಪಿತವಾಯಿತು. ಅದು ಸ್ಥಾಪಿಸಿದ ವ್ಯಾಪಾರ ಕೋಠಿಗಳು ಕ್ರಮೇಣ ವಸಾಹತುಗಳಾಗಿ ಬೆಳೆದವು. 1781ರಲ್ಲಿ ಬ್ರಿಟಿಷರಿಗೂ ಡಚ್ಚರಿಗೂ ಯುದ್ಧ ಸಂಭವಿಸಿದಾಗ ಡಚ್ಚರ ಮೂರು ವಸಾಹತುಗಳನ್ನು ಬ್ರಿಟಿಷರು ಆಕ್ರಮಿಸಿಕೊಂಡರು. 1782ರಲ್ಲಿ ಅವನ್ನು ಫ್ರೆಂಚರು ವಶಪಡಿಕೊಂಡು ಎರಡು ವರ್ಷ ಆಳ್ವಿಕೆ ನಡೆಸಿದರು. ಅನಂತರ ಅದು ಡಚ್ಚರಿಗೆ ವಾಪಾಸುಬಂತು. ಫ್ರೆಂಚರ ಆಡಳಿತಕ್ಕೊಳಪಟ್ಟಿರುವ ಗಿನಿ ಪ್ರದೇಶ 17ನೆಯ ಶತಮಾನದಲ್ಲಿ ಅವರ ಆಕ್ರಮಣಕ್ಕೆ ಒಳಪಟ್ಟಿತು. ಬ್ರಿಟಿಷರೂ ಡಚ್ಚರೂ ಇದನ್ನು ಸ್ವಲ್ಪ ಸ್ವಲ್ಪ ಹಿಡಿದುಕೊಂಡಿದ್ದರು. 18ನೆಯ ಶತಮಾನದಲ್ಲಿ ಅಂತಿಮವಾಗಿ ಬ್ರಿಟಿಷ್, ಫ್ರೆಂಚ್ ಮತ್ತು ಡಚ್ ಗಯಾನಗಳು ರೂಪುಗೊಂಡವು. ಮುಂದೆ ಬ್ರಿಟಿಷ್ ಗಯಾನ ಸ್ವತಂತ್ರವಾಗಿ ಗೈಯಾನ ಎನಿಸಿಕೊಂಡಿತು.[೫][page needed] ಡಚ್ ಗಯಾನಕ್ಕೆ ಸುರಿನಾಂ ಎಂಬ ಹೆಸರಿದೆ.
ಉಲ್ಲೇಖಗಳು
- ↑ Robert Harcourt, A Relation of a Voyage to Guiana (1613; repr., London Hakluyt Society Press, 1928), p. 4
- ↑ Hyles, Joshua (2010). Guiana and the Shadows of Empire (Master's thesis). Baylor University. hdl:2104/7936.
- ↑ "Monte Roraima, Venezuela". Peakbagger.com.
- ↑ https://www.wondermondo.com/marina-fall-on-ipobe/
- ↑ Thomas J. Spinner, A political and social history of Guyana, 1945-1983 (1984).