ಗಿಲೊಟೀನ್

ಗಿಲೋಟೀನ್ ಯಂತ್ರದಿಂದ ಮೇರಿ ಆಂಟೋಯಿನೆಟ್ಟೆಗೆ ಮರಣದಂಡನೆ ನೀಡುತ್ತಿರುವುದು.

ಫ್ರೆಂಚ್ ಕ್ರಾಂತಿಯ ಸಮಯದಲ್ಲಿ (1789) ಶಿರಚ್ಛೇದನ ದಂಡನೆಯನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದ ಒಂದು ಯಂತ್ರ. ಮೊದಲಿಗೆ ಈ ಯಂತ್ರವನ್ನು ಲೋಹದ ತಗಡು, ಲೋಹದ ಸರಳು, ಕಾಗದದ ರಟ್ಟು ಮುಂತಾದುವನ್ನು ಕತ್ತರಿಸಲು ಬಳಸಲಾಗುತ್ತಿತ್ತು. ಇದಕ್ಕೆ ಕೊಯ್ಯು ಯಂತ್ರ (ಷಿಯರಿಂಗ್ ಮಷೀನ್) ಅಥವಾ ಕೊಯ್ಲುಒತ್ತಗೆ (ಷಿಯಾರಿಂಗ್ ಪ್ರೆಸ್) ಎಂಬ ಹೆಸರುಗಳೂ ಇದ್ದುದುಂಟು.

ಇತಿಹಾಸ

ಶಿರಚ್ಛೇದನಕೋಸ್ಕರ ಇದನ್ನು ಬಳಸಬಹುದೆಂದು ಸಲಹೆ ಮಾಡಿದವ ಜೋಸೆಫ್ ಇಗ್ನೇಸ್ ಗಿಲೊಟೀನ್ (1738-1814) ಎಂಬ ಒಬ್ಬ ಫ್ರೆಂಚ್ ವೈದ್ಯ. ಅಪರಾಧಿ ಗಳಿಗೆ ಅವರ ಮರಣದಂಡನೆಯ ಸಮಯದಲ್ಲಿ ಸಾಧ್ಯವಾದಷ್ಟೂ ಕಡಿಮೆ ಬಾಧೆ ತಟ್ಟಲಿ ಎಂಬುದೇ ಈ ಸಲಹೆಯ ಉದ್ದೇಶ. ಮೊದಲಿಗೆ ಇಂಗ್ಲೆಂಡಿನಲ್ಲಿ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಇಂಗ್ಲೆಂಡಿ ನಲ್ಲಿ ಇದನ್ನು ಹ್ಯಾಲಿಫಾಕ್ಸ್ ಗಿಬ್ಬಟ್ ಎಂದೂ ಸ್ಕಾಟ್ಲೆಂಡಿನಲ್ಲಿ ಮೈಡನ್ ಎಂದೂ ಕರೆಯುತ್ತಿದ್ದರು. ಹ್ಯಾಲಿಫಾಕ್ಸ್ ಅಂಡ್ ಇಟ್ಸ್ ಗಿಬ್ಬಟ್ ಲಾ (1708) ಎಂಬ ಕಿರುಪುಸ್ತಕ ದಲ್ಲೂ ಕ್ಯಾಮ್ಡನ್ ಎಂಬುವ ಬರೆದಿರುವ, ಗಿಬ್ಬನ್ ಸಂಪಾದಿಸಿ ರುವ ಬ್ರಿಟಾನಿಯ (1722) ಎಂಬ ಪುಸ್ತಕದಲ್ಲೂ ಉಲ್ಲೇಖವಿದೆ. ಮೈಡನ್ ಶಿರಚ್ಛೇದಕ ಯಂತ್ರವನ್ನು ಎಡಿನ್ಬರಾದ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಸ್ಕಾಟ್ಲೆಂಡಿನ ರೀಜೆಂಟ್ ಆಗಿದ್ದ ಜೇಮ್ಸ್ ಡೊಗ್ಲಾಸ್ ಮಾರ್ಟನ್ ಎಂಬುವನ ಶಿರಚ್ಛೇದನ (1581) ಮೈಡನಿನಿಂದಾಯಿತು. ಮೈಡನ್ ಶಿರಚ್ಛೇದನಕ್ಕೆ ಅಂತಿಮವಾಗಿ ಒಳಗಾದವರೆಂದರೆ ಸ್ಕಾಟ್ಲೆಂಡಿನ ಮಾಕಿರ್್ವಸ್ ಆಫ್ ಆರ್ಗೈಲ್ (1661) ಮತ್ತು ಅವನ ಮಗ ಅರ್ಲ್ ಆಫ್ ಆರ್ಗೈಲ್ (1685).

ಗಿಲೊಟೀನ್‌ನ ಚಿತ್ರ

ಬಳಕೆ

ಜರ್ಮನಿಯಲ್ಲಿ ಮಧ್ಯಯುಗದ ಸಮಯದಲ್ಲಿ ಈ ಯಂತ್ರ ಬಳಕೆ ಯಲ್ಲಿತ್ತಲ್ಲದೆ ಆಗ ಇದಕ್ಕೆ ಡೈಲಿ, ಹಾಬೆಲ್ ಅಥವಾ ಡೋಲಬ್ರ ಮುಂತಾದ ಹೆಸರುಗಳಿದ್ದವು. ಫ್ರಾನ್ಸಿನಲ್ಲಿ ಕೆಲವೆಡೆ ಮಾತ್ರ ಬಳಕೆಯಲ್ಲಿದ್ದ ಈ ಯಂತ್ರ ಅಲ್ಲಿನ ಒಬ್ಬ ಶಸ್ತ್ರ ವೈದ್ಯ ಮತ್ತು ಒಬ್ಬ ಸರ್ಕಾರಿ ಅಧಿಕಾರಿಯ ಸಲಹೆಯ ಮೇರೆಗೆ ಫ್ರಾನ್ಸಿನ ಇತರ ಭಾಗಗಳಲ್ಲೂ ಬಳಕೆಗೆ ಬಂತು. ಕ್ರಮೇಣ ಫ್ರೆಂಚರು ಗೆದ್ದುಕೊಂಡ ಭಾಗಗಳಲ್ಲೂ ಇದರ ಬಳಕೆ ಹೆಚ್ಚಿತು. ಗಿಲೊಟೀನಿಗೆ ಒಳಗಾದ ಪ್ರಮುಖ ವ್ಯಕ್ತಿಗಳೆಂದರೆ ಫ್ರಾನ್ಸಿನ 14ನೆಯ ಲೂಯಿ ಮತ್ತು ರಾಣಿ ಮೇರಿ ಆಂಟೋಯ್ನಿ. []

ವಿಧಗಳು

ಸನ್ನೆ (ಲೀವರ್) ಗಿಲೊಟೀನ್, ಸಮಾಂತರ (ಪ್ಯಾರಲಲ್) ಗಿಲೊಟೀನ್ ಮತ್ತು ವರ್ತುಳೀಯ (ಸರ್ಕ್ಯೂಲಾರ್) ಗಿಲೊಟೀನ್ ಎಂಬ ಮೂರು ಬಗೆಯ ಯಂತ್ರಗಳುಂಟು. ಮೊದಲ ಬಗೆಯದರಲ್ಲಿ ಎರಡು ಅಲಗುಗಳಿದ್ದು, ಕತ್ತರಿಯಂತೆ ಅದು ಕೆಲಸಮಾಡುತ್ತಿತ್ತು. ಎರಡನೆಯ ಬಗೆಯದರಲ್ಲೂ ಎರಡು ಅಲಗುಗಳಿರುತ್ತಿದ್ದುವು. ಒಂದು ಸ್ಥಿರವಾಗಿದ್ದು ಮತ್ತೊಂದನ್ನು ಯಾಂತ್ರಿಕವಾಗಿ ಆಡಿಸಬೇಕಾಗಿತ್ತು. ವರ್ತುಳೀಯ ಗಿಲೊಟೀನಿನಲ್ಲಿ ಅಲಗುಗಳು ಚಕ್ರಕಾರವಾಗಿರುತ್ತಿದ್ದುವು. ಲೋಹದ ತಗಡು ಅಥವಾ ಪಟ್ಟಿಯನ್ನು ಕತ್ತರಿಸಲು ಈ ಯಂತ್ರವನ್ನು ಉಪಯೋಗಿಸಲಾಗಿತ್ತು.

ಉಲ್ಲೇಖಗಳು

  1. ರಾಬರ್ಟ್ ಫ್ರೆಡ್ರಿಕ್ ಒಪಿ (2013). Guillotine: The Timbers of Justice. History Press. p. 131.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: