ಗುರುಶಿಷ್ಯ ಬಾಂಧವ್ಯ

ಆದಿ ಶಂಕರರು ತಮ್ಮ ಶಿಷ್ಯರೊಂದಿಗೆ

ಗುರು-ಶಿಷ್ಯ ಸಂಪ್ರದಾಯ, ಅಥವಾ ಪರಂಪರೆ ಸಾಂಪ್ರದಾಯಿಕ ಭಾರತೀಯ ಸಂಸ್ಕೃತಿಯಲ್ಲಿ ಮತ್ತು ಹಿಂದೂ ಧರ್ಮ, ಜೈನ ಧರ್ಮ, ಸಿಖ್ ಧರ್ಮ ಮತ್ತು ಬೌದ್ಧ ಧರ್ಮದಂತಹ ಧರ್ಮಗಳಲ್ಲಿ ಗುರುಗಳು ಮತ್ತು ಶಿಷ್ಯರ ಉತ್ತರಾಧಿಕಾರವನ್ನು ಸೂಚಿಸುತ್ತದೆ. ಇದು ಆಧ್ಯಾತ್ಮಿಕ ಸಂಬಂಧ ಮತ್ತು ಮಾರ್ಗದರ್ಶನದ ಸಂಪ್ರದಾಯ ಮತ್ತು ಇದರಲ್ಲಿ ಬೋಧನೆಗಳು ಗುರುವಿನಿಂದ ಶಿಷ್ಯನಿಗೆ ಹರಡಲಾಗುತ್ತದೆ. ವೈದಿಕ, ಆಗಮಿಕ, ವಾಸ್ತುಶಾಸ್ತ್ರೀಯ, ಸಂಗೀತ, ಅಥವಾ ಆಧ್ಯಾತ್ಮಿಕತೆಯಂತಹ ಜ್ಞಾನವನ್ನು ಗುರು ಮತ್ತು ಶಿಷ್ಯನ ನಡುವಿನ ಬೆಳೆಯುತ್ತಿರುವ ಸಂಬಂಧದ ಮೂಲಕ ನೀಡಲಾಗುತ್ತದೆ. ಗುರುವಿನ ಪ್ರಾಮಾಣಿಕತೆ, ಶಿಷ್ಯನ ಗೌರವ, ಬದ್ಧತೆ, ಭಕ್ತಿ ಮತ್ತು ವಿಧೇಯತೆ ಮೇಲೆ ಆಧಾರಿತವಾದ ಈ ಸಂಬಂಧ, ಸೂಕ್ಷ್ಮ ಅಥವಾ ಮುಂದುವರಿದ ಜ್ಞಾನವನ್ನು ತಿಳಿಸಿಕೊಡಲು ಅತ್ಯುತ್ತಮ ಬಗೆಯೆಂದು ಪರಿಗಣಿಸಲಾಗುತ್ತದೆ. ಶಿಷ್ಯನು ಅಂತಿಮವಾಗಿ ಗುರುವು ಹೊಂದಿರುವ ಜ್ಞಾನವನ್ನು ಪಡೆದುಕೊಳ್ಳುತ್ತಾನೆ.

ಗುರುಶಿಷ್ಯ ಬಾಂಧವ್ಯ ಶಿಕ್ಷಣ ಕಾರ್ಯದಲ್ಲಿ ನೇರವಾಗಿ ಪಾತ್ರವಹಿಸುವ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಸಂಬಂಧ. ಯಾವ ಶಿಕ್ಷಣ ವ್ಯವಸ್ಥೆಯಲ್ಲೇ ಆಗಲಿ ಅಧ್ಯಾಪಕರು ತಮ್ಮ ಶಿಷ್ಯವೃಂದದೊಡನೆ ಹೊಂದಿರುವ ವಿಹಿತ ರೀತಿಯ ಸಂಬಂಧ ಅದರ ಯಶಸ್ಸಿಗೆ ಪ್ರಧಾನ ಕಾರಣವಾಗಬಲ್ಲುದು. ಹಿಂದಿನಿಂದಲೂ ಶಿಕ್ಷಣವೇತ್ತರು ಒತ್ತಿಹೇಳುತ್ತ ಬಂದಿರುವ ಈ ಅಂಶವನ್ನು ಈಚಿನ ಸಂಶೋಧನೆಗಳು ದೃಢಪಡಿಸಿವೆ.

ಭಾರತದಲ್ಲಿ ಗುರು ಶಿಷ್ಯ ಬಾಂಧವ್ಯ

ಅಧ್ಯಾಪಕವೃತ್ತಿ ಮಿಕ್ಕೆಲ್ಲ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಿನ ಆದರ್ಶ ನೀತಿನಿಯಮಗಳನ್ನು ಪಾಲಿಸುತ್ತ ಬಂದಿರುವ ಅಂಶ ಸ್ಪಷ್ಟವಾಗಿದೆ. ಪ್ರಾಚೀನ ಕಾಲದಿಂದಲೂ ವಿದ್ಯಾವಂತರು ಬೋಧಿಸುವುದು ತಮ್ಮ ಭಾಗಕ್ಕೆ ಬಂದ ಕರ್ತವ್ಯವೆಂಬ ಅಂಶವನ್ನು ಅರಿತಿದ್ದರು. ಯಾವ ಆದಾಯ ಬರುವಂತಿಲ್ಲದಿದ್ದರೂ ಗುರುವಾದವ ತನ್ನ ಬಳಿಗೆ ಬಂದು ಶಿಕ್ಷಣ ಪಡೆಯಲಾಶಿಸುವ ಯಾವ ವಿದ್ಯಾರ್ಥಿಯನ್ನೂ ಸಾಮಾನ್ಯವಾಗಿ ನಿರಾಕರಿಸುವಂತಿರಲಿಲ್ಲ. ಹಾಗೂ ಬಡವಿದ್ಯಾರ್ಥಿಗಳಾದರೆ ಅವರ ಅನ್ನವಸತಿಗಳಿಗೂ ಇತರ ಅವಶ್ಯಕ ಸೌಲಭ್ಯಗಳಿಗೂ ಅವರೇ ವ್ಯವಸ್ಥೆ ಮಾಡಬೇಕಾಗಿತ್ತು. ಈ ಸಂಪ್ರದಾಯ ಮಧ್ಯಯುಗಗಳಲ್ಲೂ ಅನಂತರದ ದಿನಗಳಲ್ಲೂ ನಡೆದುಕೊಂಡು ಬಂತು. ಇಂದಿಗೂ ಬಂಗಾಳ, ಬಿಹಾರ ಮುಂತಾದೆಡೆಗಳಲ್ಲಿ ಇರತಕ್ಕ ಸಂಸ್ಕøತ ಮಹಾಪಾಠಶಾಲೆಗಳಲ್ಲಿ (ಟೋಲ್) ಇದನ್ನು ಕಾಣಬಹುದು. ವಿದ್ಯಾರ್ಥಿಗೆ ಇಂಥ ಸೌಕರ್ಯವನ್ನು ಏರ್ಪಡಿಸಿಕೊಟ್ಟಮೇಲೆ ಅಧ್ಯಾಪಕರು ತಡಮಾಡದೆ ಅವರ ಶಿಕ್ಷಣ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದರು. ಹಾಗೆ ಮಾಡಿದ್ದ ಪಕ್ಷದಲ್ಲಿ ಶಿಷ್ಯನ ಪಾಪವೆಲ್ಲ ಗುರುಗಳಿಗೆ ವರ್ಗವಾಗುವುದೆಂದು ಕೂರ್ಮಪುರಾಣ ಸೂಚಿಸುತ್ತದೆ. ಯೋಗ್ಯರೆನಿಸಿದ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ದಾನಮಾಡದೆ ಇರತಕ್ಕ ಅಧ್ಯಾಪಕರ ಬಗ್ಗೆ ದೇವತೆಗಳು ಆಗ್ರಹಗೊಳ್ಳುವರೆಂದು ಛಾಂದೋಗ್ಯ ಉಪನಿಷತ್ತು ಎಚ್ಚರಿಸುತ್ತದೆ. ಕೆಲವು ವಿಶಿಷ್ಟ ತಂತ್ರಗಳನ್ನು ಮಾತ್ರ ವಿದ್ಯಾರ್ಥಿಯ ಯೋಗ್ಯತೆಯನ್ನು ಐದು ವರ್ಷಕಾಲ ಚೆನ್ನಾಗಿ ಪರೀಕ್ಷಿಸಿಯೇ ಬೋಧಿಸಬೇಕೆಂಬ ನಿಯಮವೇನೋ ಇತ್ತು. ವೈದ್ಯ ಶಿಕ್ಷಣಕ್ಕೆ ಆರು ತಿಂಗಳ ಕಾಲ ಪರೀಕ್ಷೆ ಮಾಡಿನೋಡಬೇಕಾಗಿತ್ತು. ಅಧ್ಯಾಪಕರೊಬ್ಬರು ವಿದ್ಯಾರ್ಥಿಗೆ ವೇದಶಿಕ್ಷಣವನ್ನು ನಿರಾಕರಿಸಿದ್ದಕ್ಕಾಗಿ ಮುಂದಿನ ಜನ್ಮದಲ್ಲಿ ವೃಕ್ಷವಾಗಿ ಜನಿಸಬೇಕಾಗಿ ಬಂದ ಕಥೆಯನ್ನು ಸ್ಮøತಿಕೌಸ್ತುಭ ಉಲ್ಲೇಖಿಸಿದೆ. ಬೃಹಸ್ಪತಿಯ ದೃಷ್ಟಿಯಲ್ಲಿ ಜ್ಞಾನದಾನ ಅತ್ಯಂತ ಹೆಚ್ಚಿನದೆನಿಸಿತ್ತು. ಕೆಲವು ಶೈಕ್ಷಣಿಕ ಕಾರಣಗಳಿಂದಾಗಿ ಕೆಲವರಿಗೆ ಬೋಧಿಸದಿರಬಹುದೆಂಬ ಅಂಶವೂ ಅಂದು ಪ್ರಚಾರದಲ್ಲಿತ್ತು. ನಿರುಕ್ತಿಯಲ್ಲಿ ತಿಳಿಸುವಂತೆ ನೈತಿಕ ಮತ್ತು ಬೌದ್ಧಿಕ ಶಕ್ತಿ ಇಲ್ಲದವರಿಗೆ, ಅದರಲ್ಲೂ ಪವಿತ್ರ ಸಾಹಿತ್ಯವೆನಿಸಿದ ವೇದಾಧ್ಯಯನಕ್ಕೆ ಅವಕಾಶ ಕೊಡಬಾರದೆಂಬ ಸಂಪ್ರದಾಯವಿತ್ತು. ಆದರೆ ಬೌದ್ಧಶಿಕ್ಷಣಪದ್ಧತಿಯಲ್ಲಿ ಮಂದಬುದ್ಧಿಯವರಿಗೂ ಶಿಕ್ಷಣವೀಯಬೇಕೆಂಬ ಸಂಪ್ರದಾಯವಿತ್ತು. ತಕ್ಷಶಿಲೆಯಲ್ಲಿ ಅಂಥ ಅನೇಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಆದರೆ ಶಿಕ್ಷಣದಿಂದ ಹೆಚ್ಚಿನ ಪ್ರಯೋಜನ ಪಡೆಯಲಾರರೆಂಬ ಅರಿವಾದಾಗ ಅಂಥವರಿಗೆ ಶಿಕ್ಷಣವನ್ನು ಮುಗಿಸುವಂತೆ ಬುದ್ಧಿ ಹೇಳುತ್ತಿದ್ದರು. []

ಇತಿಹಾಸ

ಪ್ರಾಚೀನ ಭಾರತದಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ಇಷ್ಟೇ ಬೋಧನೆಯ ಶುಲ್ಕ ಕೊಡಬೇಕೆಂಬ ಯಾವ ನಿಯಮವೂ ಇರಲಿಲ್ಲ. ಅಧ್ಯಾಪಕರ ಕರ್ತವ್ಯವೇ ಬೋಧಿಸುವ ಕಾರ್ಯವಾಗಿತ್ತು. ಬಡವನೆಂಬ ಕಾರಣದಿಂದ ಯಾರಿಗೂ ಜ್ಞಾನ ಬೋಧನೆಯನ್ನು ನಿರಾಕರಿಸುವಂತಿರಲಿಲ್ಲ. ಹಾಗೂ, ತಾನು ಕಲಿತ ಜ್ಞಾನ ಜೀವನೋಪಾಯಕ್ಕೆ ಮಾತ್ರವೆಂದು ಪರಿಗಣಿಸುವವರನ್ನು ಕಾಳಿದಾಸನಂಥ ಸಾಹಿತಿಗಳೂ ಟೀಕಿಸುವವರು (ಮಾಳವಿಕಾಗ್ನಿ ಮಿತ್ರ). ಶುಲ್ಕವನ್ನು ಅಪೇಕ್ಷಿಸಿ, ನಿಗದಿಯಾದ ಹಣಕ್ಕೆ ಬೋಧಿಸುವ ಅಧ್ಯಾಪಕ ಶ್ರಾದ್ಧವೇ ಮುಂತಾದ ಕರ್ಮಗಳಿಗೆ ಆಹ್ವಾನ ಯೋಗ್ಯನಲ್ಲವೆಂದು ಸ್ಮøತಿಗಳು ಸೂಚಿಸುತ್ತವೆ. ಹಾಗೆ, ಗೊತ್ತುಮಾಡಿದ ಹಣಕ್ಕೆ ವಿದ್ಯೆ ಹೇಳಿದರೆ ಅಧ್ಯಾಪಕ ಮತ್ತು ಶಿಷ್ಯರು ಇಬ್ಬರೂ ನರಕಕ್ಕೆ ಹೋಗುವರೆಂದು ಸೌರಪುರಾಣ ಸೂಚಿಸುತ್ತದೆ. ಆದರೆ ವಿದ್ಯಾರ್ಥಿಗಳಿಂದ ಯಾವ ಪ್ರತಿಫಲವನ್ನೂ ಪಡೆಯಕೂಡದೆಂಬ ನಿಷೇಧವೇನು ಇರಲಿಲ್ಲ. ಕೇವಲ ಮುಂಚೆಯೇ ಗೊತ್ತುಮಾಡಿಕೊಂಡ ನಿಷ್ಕರ್ಷಿತ ಹಣದಾಸೆಗೆ ಪಾಠ ಹೇಳುವುದನ್ನು ಮಾತ್ರ ನಿಷೇಧಿಸಿತ್ತು. ಇಂಥ ಸಂಪ್ರದಾಯ ಪೆರಿಕ್ಲೀಸ್ ಪೂರ್ವದ ಗ್ರೀಸಿನಲ್ಲೂ ಇತ್ತು. ಗುರುಶಿಷ್ಯರ ಅನ್ಯೋನ್ಯ ಬಾಂಧವ್ಯ ಪರಸ್ಪರ ಅಭಿಮಾನ ಗೌರವಗಳ ಮೇಲೆ ರೂಪುಗೊಂಡಿರಬೇಕೇ ಹೊರತು ಆರ್ಥಿಕ ಅವಲಂಬನೆಯ ಮೇಲಲ್ಲ ಎಂಬ ಭಾವನೆ ಅಲ್ಲಿ ಪ್ರಚಾರದಲ್ಲಿತ್ತು. ಅನಂತರ ಬಂದ ಸೋಫಿಸ್ಟರು ಮಾತ್ರ ಹಣಪಡೆದು, ವಿದ್ಯಾರ್ಥಿ ಕೇಳಿದ ವಿದ್ಯೆಕಲಿಸುವ ಸಂಪ್ರದಾಯವನ್ನು ಆಚರಣೆಗೆ ತಂದರು. ಮೊದಮೊದಲು ಈ ಪರಿವರ್ತನೆಯನ್ನು ಶಿಕ್ಷಣವೇತ್ತರು ಅಲ್ಲಗಳೆದರೂ ಕ್ರಿ.ಪೂ. ಮೂರನೆಯ ಶತಮಾನದ ವೇಳೆಗೆ ಅದು ಅಲ್ಲಿ ಸಾಮಾನ್ಯ ಸಂಪ್ರದಾಯವಾಗಿ ಹೋಯಿತು. ಭಾರತದಲ್ಲಿ ಮಾತ್ರ ಸಹಸ್ರಾರು ವರ್ಷಗಳ ಹಿಂದೆ ಆರಂಭವಾದ ಈ ಸಂಪ್ರದಾಯ ಇಂದಿಗೂ ಕೆಲವು ಪಾಠಶಾಲೆಗಳಲ್ಲಿ ಉಳಿದುಕೊಂಡೇ ಬಂದಿದೆ.

ಗುರುದಕ್ಷಿಣೆ

ಶಿಷ್ಯ ಸಲ್ಲಿಸಲಾಶಿಸುವ ಗೌರವಧನವನ್ನು (ಗುರುದಕ್ಷಿಣೆ) ಅಧ್ಯಾಪಕ ಆ ಶಿಕ್ಷಣ ಮುಗಿದ ಅನಂತರವೇ ಸ್ವೀಕರಿಸತಕ್ಕದ್ದೆಂಬ ಸಂಪ್ರದಾಯವಿತ್ತು. ಯಾಜ್ಞವಲ್ಕ್ಯ ತನ್ನ ಶಿಷ್ಯನಾದ ಜನಕನಿಂದ ಗುರುದಕ್ಷಿಣೆಯನ್ನು ಅದೇ ಕಾರಣಕ್ಕಾಗಿ ಅನೇಕ ವೇಳೆ ತಿರಸ್ಕರಿಸಿದ ಉಲ್ಲೇಖವುಂಟು (ಬೃಹದಾರಣ್ಯಕ ಉಪನಿಷತ್). ಕೆಲವರ ದೃಷ್ಟಿಯಲ್ಲಾದರೂ ಇದು ಸೂಕ್ತವೆನಿಸಿರಲಾರದು. ಅಧ್ಯಾಪಕರೂ ಜೀವಿಸಿರಬೇಕಲ್ಲವೇ? ಅದಕ್ಕಾಗಿಯೇ ಒಂದಕ್ಷರ ಕಲಿಸಿದ್ದಕ್ಕೂ ಎಷ್ಟು ಕೊಟ್ಟರೂ ಸಾಲದೆಂಬ ಉಲ್ಲೇಖವುಂಟು (ಪರಾಶರಸ್ಮøತಿಯ ಮೇಲಿನ ಮಾಧವರ ವ್ಯಾಖ್ಯಾನ). ಅನೇಕ ವಿದ್ಯಾರ್ಥಿಗಳಿಗೆ ಒಟ್ಟಿಗೆ ಗುರುದಕ್ಷಿಣೆ ಕೊಡುವುದು ಕಷ್ಟವಾಗುತ್ತಿದ್ದಿರಬೇಕು; ಆದ್ದರಿಂದಲೇ ಅಂದಿಗಂದಿಗೆ ಗುರುದಕ್ಷಿಣೆ ಕೊಡಬಹುದಾದ ಮತ್ತು ಪಡೆಯಬಹುದಾದ ಅವಕಾಶವನ್ನೂ ಕಲ್ಪಿಸಿರುತ್ತದೆ. ಎಂದರೆ ಶಿಕ್ಷಣ ಮುಗಿಯುವವರೆಗೆ ಗುರುದಕ್ಷಿಣೆ ಸ್ವೀಕರಿಸಬಾರದೆಂಬ ವಿಧಿವಾಕ್ಯವಿದ್ದರೂ ಹಾಗೆ ಮಾಡದೆ ವಿದ್ಯಾರ್ಥಿಗಳು ಅವಕಾಶವಾದಾಗ ಕೊಡುತ್ತಿದ್ದರು. ಕೊಡಲು ಶಕ್ತರಾದವರು ಗುರುಕ್ಷಿಣೆ ಕೊಡದೆ ತಪ್ಪಿಸಿಕೊಳ್ಳುವಂತಿರಲಿಲ್ಲ. ಅದರಿಂದ ಅವರು ಸಮಾಜದ ನಿಂದೆಗೆ ಗುರಿಯಾಗಬೇಕಾಗುತಿತ್ತು. ವಿದ್ಯಾರ್ಥಿ ದಿಶೆಯಲ್ಲಿ ಶಿಷ್ಯನಿಗೆ ದೊರಕುವ ಬಹುಮಾನ, ದಾನ-ಇವೆಲ್ಲ ಗುರುಗಳಿಗೇ ಸಲ್ಲಬೇಕೆಂಬ ನ್ಯಾಯವಿತ್ತು. ಹಾಗೂ ಗುರುಗಳು ಕಷ್ಟದಿಶೆಯಲ್ಲಿದ್ದರೆ ಅದರಲ್ಲಿ (ಭಿಕ್ಷಾನ್ನದಲ್ಲೂ) ಮೂರನೆಯ ಒಂದು ಭಾಗವನ್ನು ತಾವು ಪಡೆಯಬೇಕೆಂಬ ವಿಧಾಯಕವಿತ್ತು (ಆಪಸ್ತಂಭ ಧರ್ಮಸೂತ್ರ). ಒಟ್ಟಿನಲ್ಲಿ ಪ್ರಾಚೀನ ಭಾರತದಲ್ಲಿ ಗುರುಗಳು ಶಿಷ್ಯರಿಂದ ನಿಗದಿಮಾಡಿಕೊಂಡು ಹಣ ಪಡೆಯುತ್ತಿರಲಿಲ್ಲ. ಜ್ಞಾನದ ಪ್ರಚಾರ ತಮ್ಮ ಭಾಗಕ್ಕೆ ಬಂದ ಕರ್ತವ್ಯ ಹೊಣೆಗಾರಿಕೆಗಳೆಂದು ಭಾವಿಸಿ ಬಡವಬಲ್ಲಿದರೆನ್ನದೆ ಎಲ್ಲರಿಗೂ ಜ್ಞಾನದಾನ ಮಾಡುತ್ತಿದ್ದರು. ಆದರೂ ಶಿಷ್ಯರು ತಮ್ಮ ಕೈಲಾದುದನ್ನು ಗುರುದಕ್ಷಿಣೆಯಾಗಿ ಸಲ್ಲಿಸುತ್ತಿದ್ದರು.

ಗುರು, ಶಿಷ್ಯನ ಆಧ್ಯಾತ್ಮಿಕ ಪಿತನೆಂಬ ಭಾವೆನೆಯಿದ್ದುದರಿಂದ ಅವರ ನಡುವಣ ಬಾಂಧವ್ಯ ಮಮತೆ ವಾತ್ಸಲ್ಯಗಳಿಂದ ಕೂಡಿರುತ್ತಿತ್ತು. ಇದು ಹಿಂದೂ ಮತ್ತು ಬೌದ್ಧ ಶಿಕ್ಷಣಪದ್ಧತಿಗಳೆರಡಲ್ಲೂ ಪ್ರಧಾನ ಅಂಶವಾಗಿ ಕಂಡುಬರುತ್ತದೆ. ಜ್ಞಾನ ದಾನ ಮಾಡುವ ಅಧ್ಯಾಪಕನನ್ನು ತಂದೆತಾಯಿಗಳಂತೆ ಗೌರವಿಸಬೇಕೆಂದು ನಿರುಕ್ತಿ ಸೂಚಿಸುತ್ತದೆ. ಅಧ್ಯಾಪಕರು ತಮ್ಮ ಶಿಷ್ಯರನ್ನು ತಮ್ಮ ಮಕ್ಕಳಂತೆಯೇ ಕಾಣಬೇಕೆಂದು ಆಪಸ್ತಂಭ ಧರ್ಮಸೂತ್ರ ವಿಧಿಸುತ್ತದೆ. ತಮ್ಮ ಶಿಷ್ಯರ ಬಗ್ಗೆ ಎಲ್ಲ ಆಸಕ್ತಿಯನ್ನೂ ವಹಿಸಬೇಕೆಂದೂ ಅವರಿಗೆ ಬಟ್ಟೆ, ಭಿಕ್ಷಾಪಾತ್ರೆ ಮುಂತಾದುವನ್ನೆಲ್ಲ ಒದಿಗಿಸಿಕೊಡಬೇಕೆಂದೂ ಬುದ್ಧದೇವ ಹೇಳಿದ್ದಾನೆ (ದಿಘ್ಘನಕಾಯ). ಏಳನೆಯ ಶತಮಾನದಲ್ಲಿ ಬೌದ್ಧಮಠಗಳಲ್ಲಿ ಗುರುಗಳು ತಮ್ಮ ಶಿಷ್ಯರು ಆರೋಗ್ಯ ತಪ್ಪಿರುವಾಗ ತಾವೇ ದಾದಿಯಂತೆ ಉಚರಿಸುತ್ತಿದ್ದರೆಂಬ ಅಂಶವನ್ನು ಅಂದು ಇಲ್ಲಿ ಪ್ರವಾಸ ಕೈಕೊಂಡಿದ್ದ ಚೀನ ದೇಶದ ಯಾತ್ರಿಕ ಇತ್ಸಿಂಗ್ ಅಭಿಮಾನದಿಂದ ವಿವರಿಸಿದ್ದಾನೆ (ತಕಾ ಕುಸುವಿನ ಇತ್ಸಿಂಗ್).

ಅಧ್ಯಾಪಕರು ಶಿಷ್ಯರ ಬಗ್ಗೆ ತಳೆದಿದ್ದ ಪುತ್ರವಾತ್ಸಲ್ಯದ ಫಲವಾಗಿ ಅವರ ಭಾಗಕ್ಕೆ ಇತರ ಕೆಲವು ಕರ್ತವ್ಯಗಳೂ ಬೀಳುತ್ತಿದ್ದವು. ಕ್ರಿಸ್ತಶಕದ ಆರಂಭದಲ್ಲಿ ಅದ್ಯಾಪಕರು ತಮ್ಮ ಶಿಷ್ಯರ ಜೀವನದ ಬಗ್ಗೆ ಕಣ್ಣಿಟ್ಟು ನೋಡುತ್ತಿದ್ದರು. ಯಾವುದನ್ನು ಅವರು ಅಭ್ಯಾಸ ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಬಗ್ಗೆ ಸ್ಪಷ್ಟ ತಿಳಿವಳಿಕೆ ನೀಡುತ್ತಿದ್ದರು. ಯಾವುದರ ಬಗ್ಗೆ ಆಸಕ್ತಿಯಿಂದಿರಬೇಕು ಯಾವುದನ್ನು ನಿರ್ಲಕ್ಷಿಸಬೇಕು ಎಂಬುದನ್ನು ಸೂಚಿಸುತ್ತಿದ್ದರು. ಆಹಾರ, ನಿದ್ರೆ, ಆರೋಗ್ಯ ಈ ವಿಷಯಗಳ ಬಗ್ಗೆಯೂ ಸೂಕ್ತ ತಿಳಿವಳಿಕೆ ನೀಡುತ್ತಿದ್ದರು; ಯಾರ ಸಂಗ ಸೇರಬೇಕು, ಯಾರ ಸಂಗ ಬಿಡಬೇಕು, ಯಾವ ಯಾವ ಗ್ರಾಮ ವಿಹಾರಾದಿಗಳನ್ನು ದರ್ಶಿಸಬೇಕು ಎಂಬ ಬಗ್ಗೆಯೂ ತಿಳಿವಳಿಕೆ ಹೇಳುತ್ತಿದ್ದರು (ಮಿಲಿಂದ ಪನ್ನ).

ತಮಗೆ ಗೊತ್ತಿರುವ ವಿದ್ಯೆಯನ್ನು ತಮ್ಮ ಶಿಷ್ಯರಿಗೆ ಅಧ್ಯಾಪಕರು ನಿರ್ವಂಚನೆಯಿಂದ ಹೇಳಬೇಕಾಗಿತ್ತು. ತಮ್ಮ ಪ್ರೌಢಿಮೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದನ್ನೂ ಮರೆಮಾಚುವಂತಿರಲಿಲ್ಲ. ವೈದ್ಯವಿದ್ಯೆಯ ಗುರು ಉಪನಯನ ಸಂಸ್ಕಾರದ ವೇಳೆ ಅಗ್ನಿಸಾಕ್ಷಿಯಾಗಿ, ತನ್ನ ಶಿಷ್ಯನಿಂದ ಯಾವುದನ್ನೂ ಮರೆಮಾಚುವುದುಲ್ಲವೆಂಬ ಭಾಷೆ ಸ್ವೀಕರಿಸಿಬೇಕೆಂದು ಸುಶ್ರುತ ಸೂಚಿಸಿದ್ದಾನೆ. ಬುದ್ಧ ತನ್ನ ಗುರುವಾದ ಅಲಾರಕಲಾಮರಬಳಿ ತನ್ನ ಶಿಕ್ಷಣ ಮುಗಿಸಿದಾಗ ಗುರುಗಳು ಶಿಷ್ಯನನ್ನು ಉದ್ದೇಶಿಸಿ `ನಾವು ಎಂಥ ಸುಖೀ ಸ್ನೇಹಿತರಾಗಿದ್ದೇವೆ! ನಿನ್ನಂಥ ವಿದ್ಯಾರ್ಥಿ ನಿಷ್ಠರನ್ನು ಪಡೆದ ನಾವು ನಿಜವಾಗಿಯೂ ಸುಖೀಗೆಳೆಯರು. ನನಗೆ ಗೊತ್ತಿರುವ ತತ್ತ್ವವನ್ನು ನೀನೂ ಅರಿತಿರುವೆ; ನಿನಗೆ ಗೊತ್ತಿರುವ ತತ್ತ್ವವೇ ನನಗೂ ಗೊತ್ತಿದೆ. ನನ್ನಂತೆ ನೀನೂ ಆಗಿರುವೆ; ನೀನು ಸಾಧಿಸಿರುವುದನ್ನೇ ನಾನೂ ಪಡೆದಿರುವೆ. ಈ ಸಂಘದ ಸಂಯುಕ್ತ ರಕ್ಷಕರಾಗಿ ನಾವು ಇರೋಣ. ಇದು ನನ್ನ ಪ್ರಾರ್ಥನೆ ಎಂದು ನುಡಿದಿರುವುದು ಶಿಷ್ಯರಿಗೆ ಗುರುಗಳು ತಮ್ಮ ಸರ್ವ ಜ್ಞಾನವನ್ನೂ ಧಾರೆಯೆರೆದು ತಮಗೆ ಸರಿಸಮಾನರಾಗಿ ಮಾಡಿ ಆ ಮೂಲಕ ಪಡೆದುಕೊಳ್ಳುತ್ತಿದ್ದ ಸಾರ್ಥಕ್ಯವನ್ನು ಸ್ಪಷ್ಟಪಡಿಸುತ್ತದೆ. ಆ ಸಮಯದಲ್ಲಿ ಗುರುಗಳನ್ನುದ್ದೇಶಿಸಿ ಬುದ್ಧದೇವ ಭಾವಪೂರಿತನಾಗಿ `ಅಂಥ ಜ್ಞಾನಿಯಾದ ನನ್ನ ಗುರು ನನ್ನನ್ನು ಅವರಂತೆಯೇ ಸಿದ್ಧಪಡಿಸಿರುವರು ಎಂದು ಅಭಿಮಾನದಿಂದ ಉತ್ತರಿಸಿದ್ದಾನೆ (ಅರಿಯ ಪರಿವೇಶನ ಸುತ್ತ).

ವಾಸಿಸುವಾಗ ವಿದ್ಯಾರ್ಥಿ

ಅಧ್ಯಾಪಕರ ಮನೆಯಲ್ಲಿ ವಾಸಿಸುವಾಗ ವಿದ್ಯಾರ್ಥಿ ಅವರ ಮನೆಗೆಲಸಗಳನ್ನು ಮಾಡಬೇಕಾಗುತ್ತಿತ್ತು. ಸಾಮಾನ್ಯವಾಗಿ ಗುರುದಕ್ಷಿಣೆ ಕೊಡಲು ಶಕ್ತಿಯಿಲ್ಲದ ಬಡವಿದ್ಯಾರ್ಥಿಗಳಿಂದ ಮಾತ್ರ ಅವರು ಅಂಥ ಸೇವಾ ಕಾರ್ಯಾವನ್ನು ಕೈಗೊಳ್ಳುತ್ತಿದ್ದರು. ಆದರೆ ತಮ್ಮ ಸೇವಾ ಕಾರ್ಯದಿಂದ ವಿದ್ಯಾರ್ಥಿಯ ಶಿಕ್ಷಣಕ್ಕೆ ಅಡ್ಡಿಬರದಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೆ, ತಮ್ಮ ಮನೆಗೆಲಸ ಮಾಡುವಾಗ ವಿದ್ಯಾರ್ಥಿಯ ಕ್ಷೇಮ ಚಿಂತನೆಯನ್ನೂ ಅವರು ಮಾಡಬೇಕಾಗಿತ್ತು. ಆ ಕಾರ್ಯದಲ್ಲಿ ತೊಡಗಿರುವಾಗ ಯಾವ ವಿದ್ಯಾರ್ಥಿಯಾದರೂ ಆಕಸ್ಮಿಕಕ್ಕೆ ಸಿಕ್ಕಿ ಮಡಿದರೆ ಅವರು ಘೋರ ತಪಸ್ಸನ್ನಾಚರಿಸಿ ಪ್ರಾಯಶ್ಚಿತ ಮಾಡಿಕೊಳ್ಳಬೇಕೆಂದು ಬೋಧಾಯನ ಧರ್ಮಸೂತ್ರ ಸೂಚಿಸುತ್ತದೆ. ಆದರೂ ಆಗ ಧೌಮ್ಯರಂಥ ಕೆಲವು ಗುರುಗಳು ಶಿಷ್ಯರಿಂದ ಅಧಿಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವವರಿದ್ದಿರಬೇಕು. ಹಾಗೆಯೇ ಅವರನ್ನು ಕೆಲಸಕ್ಕೆ ಹಚ್ಚಲು ಹಿಂಜರಿಯುತ್ತದ್ದ ಗುರುಗಳೂ ಇರುತ್ತಿದ್ದರು (ಮಹಾಭಾರತ).

ಶಿಸ್ತಿನ ಸಮಸ್ಯೆ: ಸಾಮಾನ್ಯವಾಗಿ ಗುರುಶಿಷ್ಯರಲ್ಲಿ ಸಂಪೂರ್ಣ ಅರಿವಿದ್ದುದರಿಂದ ಶಿಸ್ತಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಆದರೆ ಅಂದಂದೇ ತುಂಟತನದ ವಿದ್ಯಾರ್ಥಿಗಳ ಬಗ್ಗೆ ಶಿಸ್ತಿನ ಕಾರ್ಯಕ್ರಮ ಅಗತ್ಯವಾಗುತ್ತಿತ್ತು ಕೆಲವರಿಗೆ ದೇಹದಂಡನೆಯೂ ಅಗತ್ಯವೆನಿಸಿರಬೇಕು. ಆದರೆ ಮನು ಒಳ್ಳೆಯ ಮಾತಿನಿಂದಲೇ ಅವರನ್ನು ಸನ್ಮಾರ್ಗಕ್ಕೆ ತರಬೇಕೆಂದು ವಾದಿಸಿದ್ದಾನೆ. ಉಪವಾಸ, ತಣ್ಣೀರು ಸ್ನಾನ ಅಥವಾ ಹೊರ ಹಾಕುವುದು ಈ ಮೊದಲಾದ ಶಿಕ್ಷೆಗಳ ಮೂಲಕ ಅಂಥವರನ್ನು ಒಳ್ಳೆಯ ನಡತೆಗೆ ತಿರುಗಿಸಬೇಕೆಂದು ಆಪಸ್ತಂಭ ಧರ್ಮಸೂತ್ರ ಸೂಚಿಸುತ್ತದೆ. ಸಾಮಾನ್ಯವಾಗಿ ದೇಹದಂಡನೆ ತ್ಯಾಜ್ಯವೆಂದು ಪರಿಗಣಿಸಿದ್ದರೂ ಕೆಲವು ವೇಳೆ ಅದು ಅಗತ್ಯ ಚಿಕಿತ್ಸೆಯೇ ಆಗುತ್ತಿತ್ತು. ಅದರೆ ತೀರ ಕ್ರೂರವಾಗಿರುವಂತಿರಲ್ಲಿಲ್ಲ; ಕೇವಲ ಸಣ್ಣ ಬೆತ್ತದಿಂದ ಕುಂಡಿಯ ಮೇಲೆ ಹೊಡಿಯಬಹುದಾಗಿತ್ತು. ಅಧ್ಯಾಪಕರು ಆ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ರೀತ್ಯ ಶಿಕ್ಷಾರ್ಹರಾಗುತ್ತಿದ್ದರು.

ಶಿಷ್ಯರು ಗುರುಗಳ ಮನೆಯಲ್ಲೆ ವಾಸಿಸುವಾಗ ಮೊದಮೊದಲು ವಿವಾಹ ಸಂಬಂಧವೂ ಆಗುತ್ತಿದ್ದುದುಂಟು. ಆದರೆ ಅನಂತರದ ದಿನಗಳಲ್ಲಿ ಅದು ನಿಷಿದ್ಧವೆನಿಸಿರಬೇಕು. ಗುರುಪುತ್ರಿಯಾದ ದೇವಯಾನಿ ತನ್ನನ್ನು ಮದುವೆಯಾಗಬಯಸಿದಾಗ ಶಿಷ್ಯನಾದ ಕಚ ಆ ಕಾರಣದಿಂದಲೇ ಒಪ್ಪಲಿಲ್ಲ. ಬಹುಶಃ ಹಲವಾರು ವಿದ್ಯಾರ್ಥಿಗಳಿದ್ದ ಮನೆಯಲ್ಲಿ ಸ್ಪರ್ಧೆಗೆ ಅವಕಾಶವಾಗಿ ತೊಂದರೆ ಉದ್ಭವಿಸುವುದೆಂಬ ಕಾರಣದಿಂದ ಈ ನಿಷೇಧ ಪ್ರವೃತ್ತಿ ಕಾಲಕ್ರಮದಲ್ಲಿ ಬೆಳೆದುಕೊಂಡಿರಬೇಕು. ಆದರೆ ಕೆಲವು ಗುರುಗಳು ತಮ್ಮ ಶಿಷ್ಯರನ್ನು ಅಳಿಯಂದಿರನ್ನಾಗಿ ಆರಿಸಿಕೊಳ್ಳುವುದರಲ್ಲಿ ಆಸಕ್ತಿ ಹೊಂದಿದ್ದುದು ಬೌದ್ಧ ಜಾತಕಗಳಿಂದ ತಿಳಿದುಬರುತ್ತದೆ. ಹಾಗೆ ಗುರುಗಳೇ ಆರಿಸಿಕೊಂಡಾಗ ಶಿಷ್ಯ ನಿರಾಕರಿಸುವಂತಿರಲಿಲ್ಲ.

ಶಿಷ್ಯರ ಕರ್ತವ್ಯ: ಶಿಷ್ಯರು ತಮ್ಮ ಗುರುಗಳ ಬಗ್ಗೆ ಕಾಯೇನ ಮನಸಾ ವಾಚಾ ಗೌರವದಿಂದ ನಡೆದುಕೊಳ್ಳಬೇಕಾಗಿತ್ತು. ಬೆಳಗ್ಗೆ ಮುಂಚಿತವಾಗಿ ಎದ್ದು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕಾಗಿತ್ತು. ಅಧ್ಯಾಪಕರಿಗಿಂತ ಎತ್ತರದ ಸ್ಥಳದಲ್ಲಿ ಕೂರುವುದಾಗಲಿ ಅವರಿಗಿಂತ ಹೆಚ್ಚಿನ ಅಲಂಕೃತ ಉಡುಪು ಧರಿಸುವುದಾಗಲಿ ನಿಷಿದ್ಧವೆನಿಸಿತ್ತು. ಆದರೆ ಅವರ ದುರ್ನಡತೆಗಳ ಬಗ್ಗೆ ಶಿಷ್ಯರು ಕಣ್ಣು ಮುಚ್ಚಿಕೊಂಡಿರಬೇಕೆಂದು ಎಲ್ಲಿಯೂ ಸೂಚಿಸಿಲ್ಲ. ಹಿಂದೆ ಟೀಕಿಸುವುದರ ಬದಲು ಅದನ್ನು ಅವರಲ್ಲಿ ಚರ್ಚಿಸಬಹುದಾಗಿತ್ತು. ಹಾಗೂ ಗೌತಮನಂಥವರು ಅಂಥ ಗುರುಗಳ ಬಗ್ಗೆ ವಿದ್ಯಾರ್ಥಿ ವಿಧೇಯನಾಗಿರುವುದು ಸೂಕ್ತವೇ ಎಂದೂ ಅನುಮಾನಿಸಿರುವರು. ಅಂಥವರು ನೀಡುವ ಉಪದೇಶ ಪರಿಣಾಮಕಾರಿಯಾಗಲಾರದೆಂಬ ಭಾವನೆಯೇ ಇದಕ್ಕೆ ಕಾರಣ.

ಗುರುವಿನ ನಮ್ರಸೇವಕನಾಗಿ, ಅವರ ಮಗನಂತೆ ಶಿಷ್ಯ ಅವರಿಗೆ ಸೇವೆ ಸಲ್ಲಿಸಬೇಕೆಂಬ ಭಾವನೆ ಸ್ವಾಭಾವಿಕವಾಗಿ ಅಂದಿನ ಗುರುಶಿಷ್ಯರ ಸಂಬಂಧದಲ್ಲಿ ಎದ್ದು ಕಾಣುತ್ತಿತ್ತು. ಅವರಿಗೆ ಹಲ್ಲುಜ್ಜುವ ಕಡ್ಡಿ ಒದಗಿಸುವುದು, ಸ್ನಾನಕ್ಕೆ ನೀರು ಕೊಡುವುದು, ಅವರ ಆಸನವನ್ನು ಸಿದ್ಧಪಡಿಸುವುದು, ಅವರ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ದನಕರುಗಳಿದ್ದರೆ ಅವನ್ನು ಮೇಯಿಸುವುದು ಇವನ್ನೆಲ್ಲ ವಿದ್ಯಾರ್ಥಿ ಮಾಡಬೇಕಾಗಿತ್ತು. ಆದರೆ ಆ ಕಾರ್ಯ ಅವರ ಶಿಕ್ಷಣಕ್ಕೆ ಅಡ್ಡಿಯೆನಿಸುತ್ತಿರಲಿಲ್ಲ. ಶ್ರೀಮಂತ ವಿದ್ಯಾರ್ಥಿಗಳಾದರೆ ಅವರು ಅವನ್ನು ಕೇವಲ ಸೇವಾಸೂಚಕವಾಗಿ ಮಾತ್ರ ನಿರ್ವಹಿಸಬೇಕಾಗಿತ್ತು. ಹಗಲು ವೇಳೆ ತಮ್ಮ ಮನೆಗೆಲಸದಲ್ಲಿ ತೊಡಗಿರುವುದಾದರೆ ಅಂಥ ವಿದ್ಯಾರ್ಥಿಗಳಿಗೆ ಗುರುಗಳು ರಾತ್ರಿ ಪಾಠ ಹೇಳುತ್ತಿದ್ದರು.

ವೈದಿಕ ಕಾಲದಲ್ಲಿ ಶಿಕ್ಷಣ ವೈಯಕ್ತಿಕವಾಗಿದ್ದುದರಿಂದ ಗುರು ಶಿಷ್ಯರ ಬಾಂಧವ್ಯ ಕೇವಲ ವೈಯಕ್ತಿಕ ಸ್ವರೂಪದ್ದಾಗಿತ್ತು. ಕ್ರಿಸ್ತಪೂರ್ವದಲ್ಲೆ ಬೌದ್ಧಯುಗದಲ್ಲಿ ಶಿಕ್ಷಣ ವ್ಯವಸ್ಥಿತ ಸ್ವರೂಪವನ್ನು ತಾಳಿ ಮಠಗಳೂ ಸಂಘಗಳೂ ಅಸ್ತಿತ್ವಕ್ಕೆ ಬಂದುವು. ಹಿಂದೂ ಶಿಕ್ಷಣ ಪದ್ಧತಿಯಲ್ಲಾದರೆ ಈ ಪರಿವರ್ತನೆಯಾದ್ದು 9 ನೆಯ ಶತಕದ ಆರಂಭದಿಂದ ಮಾತ್ರ. ಬೌದ್ಧ ಶಿಕ್ಷಣ ಪದ್ಧತಿಯಲ್ಲಿ ಶಿಷ್ಯರ ನಿಷ್ಠೆ ಗುರುಗಳಿಗಿಂತ ಸಂಘಕ್ಕೇ ಮೀಸಲಾಗಿತ್ತು.

ಮುಂದಿನ ಜೀವನದಲ್ಲಿ ಗುರುಗಳ ಪ್ರಭಾವ: ಶಿಕ್ಷಣ ಮುಗಿದ ಮೇಲೆ ವಿದ್ಯಾರ್ಥಿಗಳು ತಮ್ಮ ಗುರುಗಳೊಡನೆ ಸಂಪರ್ಕ ಹೊಂದಿರುತ್ತಿದ್ದರು. ಆಗಾಗ ಅವರನ್ನು ನೋಡಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಿದ್ದರು. ಸಾಧ್ಯವಾದಷ್ಟು ಗುರುದಕ್ಷಿಣೆಯನ್ನೂ ನೀಡುತ್ತಿದ್ದರು. ಅದರಿಂದ ಅಧ್ಯಾಪಕರೂ ತಮ್ಮ ಶಿಷ್ಯರು ಎಷ್ಟರ ಮಟ್ಟಿಗೆ ಜ್ಞಾನಾರ್ಜನೆಯನ್ನು ಮುಂದುವರಿಸುತ್ತಿದ್ದರು, ಎಷ್ಟರ ಮಟ್ಟಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವರು, ಯಾವ ಹೊಸ ಜ್ಞಾನವನ್ನು ದರ್ಶಿಸಿರುವರು ಎಂಬುದನ್ನು ಅರಿತುಕೊಳ್ಳುತ್ತಿದ್ದರು. ಹೀಗೆ ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯಲ್ಲಿ ಗುರುಶಿಷ್ಯ ಬಾಂಧವ್ಯ ಅಜೀವವೂ ಮುಂದುವರಿಯುತ್ತಿತ್ತು. ಅದು ಪರಸ್ಪರ ಪರಿಣಾಮಕಾರಿಯೂ ಆಗಿರುತ್ತಿತ್ತು. ಪ್ರಾಚೀನ ಭಾರತದ ವ್ಯವಸ್ಥೆಯ ಧ್ಯೇಯವೇನಿತ್ತೆಂಬುದನ್ನು ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ಗುರೂಪದೇಶ ಭಾಗ ಬಹಳ ಚೆನ್ನಾಗಿ ವಿವರಿಸಿದೆ. (ನೋಡಿ- ಉಪದೇಶ-ಭಾಷಣ) ಆಧುನಿಕ ಶಿಕ್ಷಣದಲ್ಲಿ ಗುರುಶಿಷ್ಯ ಬಾಂಧವ್ಯಸಾರ್ವತ್ರಿಕ ಶಿಕ್ಷಣ ಪ್ರಚಾರಕ್ಕೆ ಬಂದು ಒಬ್ಬೊಬ್ಬ ಅಧ್ಯಾಪಕನೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಾಗಿರುವ ಆಧುನಿಕ ಕಾಲದಲ್ಲಿ ಅಧ್ಯಾಪಕರು ಹಿಂದಿನಂತೆ ತಮ್ಮ ವಿದ್ಯಾರ್ಥಿಗಳೊಡನೆ ನಿಕಟ ಸಂಬಂಧವನ್ನು ಹೊಂದಿರುವುದು ಸ್ವಾಭಾವಿಕವಾಗಿ ಅಸಾಧ್ಯವೆನಿಸಿದ್ದರೂ ಶಿಕ್ಷಣದ ಕಾರ್ಯಕ್ರಮದ ಯಶಸ್ಸಿಗೆ ಉಚಿತ ರೀತಿಯ ಸಂಬಂಧದ ಮಹತ್ತ್ವವನ್ನೂ ಎಲ್ಲ ಶಿಕ್ಷಣವೇತ್ತರೂ ಮನಗಂಡುಕೊಂಡಿರುವರು. ಹಾಗೂ ಸೂಕ್ತವೂ ಅನಿವಾರ್ಯವೂ ಆದಷ್ಟು ಮಟ್ಟಿಗಾದರೂ ಅಂಥ ಸಂಬಂಧವನ್ನು ಉಳಿಸಿಕೊಳ್ಳಬೇಕೆಂದು ಒತ್ತಿ ಹೇಳಿರುವರು. ಈ ಬಗೆಗೆ ಸಂಶೋಧನೆಗಳು ನಡೆದಿವೆ. ಆ ಸಂಶೋಧನೆಗಳಲ್ಲಿ ಯಾವ ರೀತಿಯ ಸಂಬಂಧಗಳು ಶಿಕ್ಷಣವನ್ನು ಪರಿಣಾಮಕಾರಗೊಳಿಸಬಲ್ಲವೆಂಬುದನ್ನು ವಿಶ್ಲೇಷಿಸಿ ತೋರಿಸಿಕೊಟ್ಟಿವೆ. ಅಂಥ ಅಂಶಗಳನ್ನು ಇಲ್ಲಿ ಪರಿಶೀಲಿಸಬಹುದು.

ಅಧ್ಯಾಪಕರು ವಿದ್ಯಾರ್ಥಿಗಳ ಬಗ್ಗೆ ಸಹನೆ, ದಯೆ, ಕ್ಷಮೆ, ಸಹಕಾರ, ಸ್ವಾತಂತ್ರ್ಯಕ್ಕೆ ಪುರಸ್ಕಾರ, ನ್ಯಾಯಪರತೆ, ಪಕ್ಷಪಾತರಾಹಿತ್ಯತೆ, ಸರಸಪ್ರವೃತ್ತಿ, ದೃಢಚಿತ್ತ, ಒಳ್ಳೆಯದರ ಬಗ್ಗೆ ಮೆಚ್ಚಿಕೆ ಮುಂತಾದ ಋಜು ಸಂಬಂಧವನ್ನು ಹೊಂದಿರಬೇಕು. ಮಕ್ಕಳ ಮೇಲೆ ಅದು ಸತ್ಪರಿಣಾಮವನ್ನು ಬೀರಬಲ್ಲದು.ಮಕ್ಕಳಿಗೆ ಭೀತಿ ಹುಟ್ಟಿಸದೇ ಪ್ರೀತಿ ವಿಶ್ವಾಸಗಳಿಂದ ಅವರನ್ನು ಕಾಣುತ್ತ ಅವರು ತಮ್ಮ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿಕೊಳ್ಳಲು ಅವಕಾಶವೀಯುವ ಮನೋಭಾವವನ್ನು ತಳೆದಿರುವುದು, ದರ್ಪ ತೋರಿಸದೇ ಯಾವುದೋ ಕಾರ್ಯವನ್ನು ಅವರ ಮೇಲೆ ಕಡ್ಡಾಯವಾಗಿ ಹೊರಿಸಲು ಯತ್ನಿಸದೇ, ಅವರಲ್ಲಿ ಪ್ರಕಾಶನಕ್ಕೆ ಹಾತೊರೆಯುತ್ತಿರುವ ಆಸಕ್ತಿಗಳಿಗೆ ಯುಕ್ತ ಚಟುವಟಿಕೆಗಳನ್ನು ಒದಗಿಸುವುದು, ಚೆನ್ನಾಗಿ ಕೆಲಸ ಮಾಡುವ ಮಕ್ಕಳಿಗೆ ಪ್ರೋತ್ಸಾಹ ನೀಡುವುದು, ಮಿಕ್ಕವರಿಗೆ ಅನುಕಂಪೆಯಿಂದ, ಮಮತೆಯಿಂದ ಮಾರ್ಗದರ್ಶನ ನೀಡುವುದು, ತಮ್ಮ ವೈಯಕ್ತಿಕ ಸಮಸ್ಯೆಗಳ ಫಲವಾಗಿ ಉದ್ರಿಕ್ತರಾಗದೆ ಮಕ್ಕಳ ಬಗ್ಗೆ ವಿಹಿತ ರೀತಿಯಲ್ಲಿ ನಡೆದುಕೊಳ್ಳುವುದು, ಭಾವನೆಯಲ್ಲೂ ಕೃತಿಯಲ್ಲೂ ಎಲ್ಲ ವಿದ್ಯಾರ್ಥಿಗಳಲ್ಲೂ ಸಮಾನ ದೃಷ್ಟಿಯನ್ನು ವ್ಯಕ್ತಪಡಿಸುವುದು, ಪ್ರತಿಭಾವಂತ ಮಕ್ಕಳ ಪ್ರತಿಭೆಗೊಪ್ಪುವಂತೆ ಕಾರ್ಯಕ್ರಮ ಹಾಕಿಕೊಡುವುದು. ಹಿಂದುಳಿದವರಿಗೆ ವೈಯಕ್ತಿಕ ಗಮನನೀಡಿ ಅವರೂ ತಕ್ಕಷ್ಟು ಶಿಕ್ಷಣ ಪಡೆಯುವಂತೆ ಮಾಡುವುದು-ಈ ರೀತಿಯಲ್ಲಿ ವರ್ತಿಸುವುದರಿಂದ ಅವರ ಬೋಧನೆ ಪರಿಣಾಮಕಾರಿಯಾಗುವುದು.

ಉದ್ಯಮಗಳನ್ನು ಆಚರಿಸುವಾಗ, ಹೊಸ ಕಾರ್ಯಕ್ರಮಗಳನ್ನು ಯೋಚಿಸುವಾಗ, ಸಾಮಾಜಿಕ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ, ಉತ್ತರಗಳನ್ನು ತಿದ್ದುವಾಗ, ಮೌಲ್ಯಗಳನ್ನು ನಿಷ್ಕರ್ಷಿಸುವಾಗ ಮಕ್ಕಳ ಸಹಕಾರವನ್ನು ರೂಢಿಸಿಕೊಂಡು ಎಲ್ಲರಿಗೂ ಒಂದೊಂದು ಕ್ಷೇತ್ರದಲ್ಲಿ ನಾಯಕತ್ವದ ಕರ್ತವ್ಯ ಹೊಣೆಗಾರಿಕೆಗಳನ್ನು ವಹಿಸುವುದೂ ಆ ಮೂಲಕ ಮಕ್ಕಳಿಗೆ ತೃಪ್ತಿಯನ್ನುಂಟು ಮಾಡುವುದೂ ಶಿಕ್ಷಣದ ಮೇಲೆ ಸತ್ಪರಿಣಾಮ ಬೀರಬಲ್ಲವು.

ಸಾಧ್ಯವಾದ ಮಟ್ಟಿಗೆ ಎಲ್ಲ ಮಕ್ಕಳ ಪರಿಚಯವನ್ನೂ ಮಾಡಿಕೊಂಡು ಅವರವರ ಮಾನಸಿಕ, ಸಂವೇಗಾತ್ಮಕ, ಸಾಮಾಜಿಕ, ನೈತಿಕ ಮತ್ತು ದೈಹಿಕ ಸ್ವರೂಪವನ್ನು ಅರಿತಿರುವುದು ಅವರ ಶಿಕ್ಷಣವನ್ನು ಸುಗಮವಾಗಿಸಲು ನೆರವಾಗುತ್ತದೆ. ತಮ್ಮ ಹಿತಾಸಕ್ತಿಯೂ ಪುರೋಭಿವೃದ್ಧಿಯೂ ಅಧ್ಯಾಪಕರ ಅಕಾಂಕ್ಷೆಯಾಗಿದೆ ಎಂಬುದನ್ನು ಮಕ್ಕಳು ಕಾರ್ಯತಃ ಮನಗಾಣುವಂತೆ ನಡೆದುಕೊಂಡಲ್ಲಿ ಶಿಕ್ಷಣ ಪರಿಣಾಮಕಾರಿಯಾಗುತ್ತದೆ.

ಗುರುಗಳ ನಿತ್ಯ ಜೀವನದಲ್ಲಿ ಆದರ್ಶ ವ್ಯಕ್ತಪಟ್ಟರೆ ಮಕ್ಕಳಿಗೆ ಅವರಲ್ಲಿ ಅಭಿಮಾನ ಮೂಡುತ್ತದೆ. ಆಗ ಅವರ ನಡೆನುಡಿಗಳನ್ನು ಅನುಕರಿಸಿ ನಡೆಯುವುದು ವಿಹಿತವೆಂಬುದು ಸ್ವಪ್ರೇರಣೆಯಿಂದ ಉದ್ಭವಿಸಿ ಕಲಿವು ಸುಲಭವಾಗಿ ಸಿದ್ಧಿಸುತ್ತದೆ.

ತಾವು ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಕಿರಿಯ ಅಧ್ಯಾಪಕರು ಎಂಬ ಭಾವನೆಯನ್ನೂ ತಳೆದಿದ್ದು, ತಾವು ಕಿರಿಯ ತಂಡವೊಂದರ ಯೋಗಕ್ಷೇಮವನ್ನೂ ಪುರೋಭಿವೃದ್ಧಿಯನ್ನೂ ಸಾಧಿಸಬೇಕಾಗಿರುವ ಹಿರಿಯ ನಾಯಕರು ಎಂದು ಭಾವಿಸಿ ವರ್ತಿಸಿದಲ್ಲಿ ಅಧ್ಯಾಪಕರ ಉದ್ದೇಶ ಸಫಲವಾಗುತ್ತದೆ,

ಸರಸಪ್ರಸನ್ನತೆ, ಸ್ವಾಭಿಮಾನ, ಕರ್ತವ್ಯಪ್ರಜ್ಞೆ ಈ ಆದರ್ಶಗಳನ್ನೂ ಅಧ್ಯಾಪಕರು ಪಾಲಿಸಿದರೆ ಅವರಲ್ಲಿ ಕಂಡುಬರುವ ಸಹಾನುಭೂತಿ ಗಾಂಭೀರ್ಯಗಳು ಮಕ್ಕಳಲ್ಲೂ ತದನುಗುಣವಾದ ಮನೋಭಾವಗಳನ್ನು ಪೋಷಿಸಿ ಆದರಣೀಯ ವ್ಯಕ್ತಿತ್ವವನ್ನು ಮೂಡಿಸುತ್ತದೆ.

ಮಕ್ಕಳನ್ನು ಮೆಚ್ಚಿಸಲು ಅವರೊಡನೆ ತೀರ ಸಲುಗೆಯಿಂದ, ಸುಮ್ಮಾನದಿಂದ ನಡೆದುಕೊಳ್ಳುವುದರಿಂದ ಅವರ ಬಗ್ಗೆ ಕ್ರಮಕ್ರಮವಾಗಿ ಮಕ್ಕಳು ಹೀನ ಭಾವನೆಯನ್ನು ಬೆಳೆಸಿಕೊಳ್ಳುವರು. ಅದರ ಫಲವಾಗಿ ಬೋಧನೆ ಪ್ರಭಾವ ಹೀನವಾಗುವುದು. ಜೊತೆಗೆ ಮಕ್ಕಳಲ್ಲಿ ಅಶಿಸ್ತು ತಲೆಹಾಕಿಕೊಳ್ಳುವುದು.

ಮಕ್ಕಳಲ್ಲಿ ಕಂಡುಬರುವ ಮೊಂಡಾಟ, ತುಂಟಾಟ, ಅವಧಾನವಿಹೀನತೆ ಇವಾವುವನ್ನೇ ಆಗಲಿ ನಿವಾರಿಸಲು ಯತ್ನಿಸುವಾಗ ಬೈದು ಹಿಯ್ಯಾಳಿಸದೆ, ಆಗಲಿ ನೋಡುವ ಎಂದು ಸುಮ್ಮನೆ ಬಿಡದೆ, ಸಕಾಲದಲ್ಲಿ ಸರಿಯಾದ ರೀತಿಯಲ್ಲಿ ಎಚ್ಚರಿಸುವುದು ಅವರ ಶೈಕ್ಷಣಿಕ ಬೆಳೆವಣಿಗೆಗೆ ಸೂಕ್ತ ಮಾರ್ಗದರ್ಶನವೆನಿಸುತ್ತದೆ.

ಮಕ್ಕಳಲ್ಲಿ ನಿಯಮಪಾಲನೆಯ ಗುಣವನ್ನು ಬೆಳೆಸುವುದು ಅಗತ್ಯವಾದರೂ ಅಧ್ಯಾಪಕರೂ ಆ ಕಾರ್ಯದಲ್ಲಿ ಸರ್ವಾಧಿಕಾರಿಯಂತೆ ವರ್ತಿಸದೆ ಕೌಶಲ್ಯದಿಂದ ವರ್ತಿಸುವುದರಿಂದ ತಮ್ಮ ಬಗ್ಗೆ ಅಧ್ಯಾಪಕರು ಕಠೋರತನದಿಂದಿರುವರೆಂದು ಭಾವಿಸುವುದನ್ನು ತಪ್ಪಿಸಬಹುದು.

ವಿದ್ಯಾರ್ಥಿಗಳು ತಮಗೆ ಒಳ್ಳೆಯವರಾಗಿ ತೋರತಕ್ಕ ಅಧ್ಯಾಪಕರಲ್ಲಿ ಕಂಡುಕೊಂಡಿರುವ ಬಾಂಧವ್ಯವನ್ನು ಕುರಿತು ಸಂಶೋಧನೆಗಳೂ ನಡೆದಿವೆ. ತಮ್ಮ ಕಲಿವಿಗೆ ತರಗತಿಯಲ್ಲೂ ಹೊರಗೂ ಆಸಕ್ತಿ ವಹಿಸಿ ನೆರವಾಗುವುದು, ಹರ್ಷಚಿತ್ತದಿಂದ ಇರುವುದು, ಸರಸಪ್ರವೃತ್ತಿಯಿಂದ ನಡೆದುಕೊಂಡು ಗಂಭೀರವಾದರೂ ವಿದ್ಯಾರ್ಥಿಗಳ ವಿನೋದಾದಿ ಹುಡುಗತನವನ್ನು ಅರ್ಥಮಾಡಿಕೊಳ್ಳವುದು, ಹಿರಿಯರಾದರೂ ವಿದ್ಯಾರ್ಥಿಗಳ ಮಿತ್ರರಂತೆ ನಡೆದುಕೊಳ್ಳುವುದು, ವಿದ್ಯಾರ್ಥಿಗಳ ಕಷ್ಟಗಳನ್ನು ಅರಿತು ಅರ್ಥಮಾಡಿಕೊಳ್ಳುವುದರಲ್ಲಿ ಆಸಕ್ತಿ ವಹಿಸುವುದು, ತಮ್ಮ ಆದರ್ಶದಿಂದ ವಿದ್ಯಾರ್ಥಿಗಳಲ್ಲಿ ತಾವೂ ಕ್ರಿಯಾಶೀಲರಾಗಬೇಕೆಂಬ ಪ್ರಜ್ಞೆ ಮೂಡಿಸುವುದು-ಈ ಸಂಬಂಧವುಳ್ಳ ಅಧ್ಯಾಪಕರು ಅವರ ಮೆಚ್ಚಿಗೆಗೆ ಪಾತ್ರರಾಗುವರು.


ಉಲ್ಲೇಖಗಳು