ಗುಲಾಬಿಗಳ ಯುದ್ಧಗಳು
![](http://upload.wikimedia.org/wikipedia/commons/thumb/f/f7/MS_Ghent_-_Battle_of_Tewkesbury.jpg/220px-MS_Ghent_-_Battle_of_Tewkesbury.jpg)
ಗುಲಾಬಿಗಳ ಯುದ್ಧಗಳು 1455 - 1487ರ ಕಾಲದಲ್ಲಿ 6ನೆಯ ಹೆನ್ರಿ, 4ನೆಯ ಎಡ್ವರ್ಡ್ ಮತ್ತು 3ನೆಯ ರಿಚರ್ಡರ ಆಳ್ವಿಕೆಯಲ್ಲಿ ನಡೆದ ಅಂತರ್ಯುದ್ಧಗಳು. ಇವು ಬಿಳಿ ಗುಲಾಬಿ ಲಾಂಛನದ ಯಾರ್ಕ್ ಮನೆತನದವರಿಗೂ, ಕೆಂಪು ಗುಲಾಬಿ ಲಾಂಛನದ ಲ್ಯಾಂಕಾಸ್ಟರ್ ಮನೆತನದವರಿಗೂ ನಡೆದ ಯುದ್ಧಗಳಾದ್ದರಿಂದ ಈ ಯುದ್ಧಗಳು ನಡೆದ ಹಲವು ವರ್ಷಗಳ ಅನಂತರ ಇವಕ್ಕೆ ಗುಲಾಬಿಗಳ ಯುದ್ಧಗಳೆಂಬ ಹೆಸರು ಬಂತು.[೧]
ಇವು ಇಂಗ್ಲೆಂಡಿನ ಸಿಂಹಾಸನಕ್ಕಾಗಿ ನಡೆದ ಕದನಗಳೆಂದು ಹೇಳಲಾಗಿದೆಯಾದರೂ ಮೂಲತಃ ಇವು ಸರ್ಕಾರದ ದೌರ್ಬಲ್ಯದ ಮತ್ತು ಆ ಕಾಲದ ಸಾಮಾಜಿಕ ಪರಿಸ್ಥಿತಿಗಳ ಪರಿಣಾಮ. ನೂರು ವರ್ಷಗಳ ಯುದ್ಧದ ಕೊನೆಯ ವೇಳೆಗೆ ಸರ್ಕಾರದ ದೌರ್ಬಲ್ಯ ವ್ಯಕ್ತವಾಗಿತ್ತು. ದೊಡ್ಡ ಪ್ರಭುಗಳು ಕರಾರಿನ ಮೇಲೆ ಖಾಸಗಿ ಸೈನ್ಯಗಳನ್ನು ನೇಮಿಸಿಕೊಳ್ಳುವ ಪದ್ಧತಿ ಬೆಳೆದದ್ದು ಆ ಯುದ್ಧದ ಫಲ. ಇದು ಇಬ್ಬಂದಿ ಊಳಿಗಮಾನ್ಯಪದ್ಧತಿ ಎಂದು ಹೆಸರಾಗಿದೆ. ಇದರಿಂದಾಗಿ ಖಾಸಗಿ ಯುದ್ಧಗಳು ಅನಿವಾರ್ಯವಾಗಿದ್ದವು. ಇಂಗ್ಲೆಂಡಿನಲ್ಲೆಲ್ಲ ಅತಿ ಬಲಿಷ್ಠ ಪ್ರಜೆಗಳು ತುಂಬಿದ್ದರು. ಅರಾಜಕತೆ ಬೆಳೆಯುತ್ತಿದೆಯೆಂಬಂತೆ ತೋರುತ್ತಿತ್ತು. ಲ್ಯಾಂಕಾಸ್ಟ್ರಿಯನರಿಂದ ಕಾನೂನು ಮತ್ತು ಶಿಸ್ತುಪಾಲನೆಯ ಕಾರ್ಯವಾಗದಿದ್ದರೆ ಯಾರ್ಕಿಸ್ಟರು ಅದನ್ನು ಸಾಧಿಸಬಲ್ಲರೆಂದು ಭಾವಿಸಲಾಗಿತ್ತು. ಹೀಗಾಗಿ 1455 ರಿಂದ 1485 ರ ವರೆಗೆ ಇಂಗ್ಲೆಂಡು ತುಂಬ ವೇದನೆ ಅನುಭವಿಸುತ್ತಿತ್ತು. ಶಾಂತಿ ಸುರಾಜ್ಯಭಾರಗಳಿಗಾಗಿ ಅನ್ವೇಷಣೆ ನಡೆದಿತ್ತು.
ಈ ಅವಧಿಯ ಮೂವತ್ತು ವರ್ಷಗಳ ಪೂರ್ತಿ ಹೋರಾಟ ನಡೆಯುತ್ತಲೇ ಇತ್ತೆಂದು ಭಾವಿಸಲಾಗದು. ಗುಲಾಬಿಗಳ ಯುದ್ಧಗಳ ಕದನಗಳು ಮುಖ್ಯವಾಗಿ ಸಣ್ಣವು. ಈ ಯುದ್ಧಗಳಲ್ಲಿ ನಿರತವಾಗಿದ್ದ ಸೈನಿಕರ ಮತ್ತು ಸಾವುನೋವುಗಳ ಬಗ್ಗೆ ಸಮಕಾಲೀನ ಉದಂತಕಾರರು ಕೊಡುವ ಅಂಕಿ-ಅಂಶಗಳು ಉತ್ಪ್ರೇಕ್ಷೆಯಿಂದ ಕೂಡಿವೆ.
ಯುದ್ಧಗಳ ವಿಂಗಡಣೆ
ಗುಲಾಬಿಗಳ ಯುದ್ಧಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. 1455ರಲ್ಲಿ ಸೇಂಟ್ ಆಲ್ಬನ್ಸ್‌ನಲ್ಲಿ 6ನೆಯ ಹೆನ್ರಿಯ ಸೈನ್ಯದ ಮೇಲೆ ಯಾರ್ಕಿನ ಡ್ಯೂಕನ ಸೈನ್ಯ ಏರಿಹೋದಾಗ ಮೊದಲನೆಯ ಭಾಗ ಆರಂಭವಾಗುತ್ತದೆ.[೨] ಎರಡು ಪಕ್ಷಗಳೂ ಕೆಲಕೆಲವು ಕದನಗಳಲ್ಲಿ ವಿಜಯ ಗಳಿಸಿದವು. ಯಾರ್ಕಿನ ಡ್ಯೂಕ್ 1460ರಲ್ಲಿ ಸತ್ತನಾದರೂ[೩][೪] ಮರುವರ್ಷ ಯಾರ್ಕ್ ಮನೆತನದವರಿಗೆ ದೊರಕಿದ ವಿಜಯಗಳಿಂದಾಗಿ ಅವನ ಮಗ ನಾಲ್ಕನೆಯ ಎಡ್ವರ್ಡ್ ಎಂಬ ಅಭಿಧಾನದಿಂದ ಸಿಂಹಾಸನವನ್ನೇರಿದ.[೫]
ಗುಲಾಬಿಗಳ ಯುದ್ಧಗಳ ಎರಡನೆಯ ಘಟ್ಟ ಇಂಗ್ಲೆಂಡಿನ ಉತ್ತರಭಾಗಕ್ಕೆ ಸೀಮಿತವಾಗಿತ್ತು. ಅಲ್ಲಿ 1464ರಲ್ಲಿ ಲ್ಯಾಂಕಾಸ್ಟ್ರಿಯನರು ಎರಡು ಕಡೆಗಳಲ್ಲಿ ಸೋತರು.[೬]
ಮೂರನೆಯ ಅವಧಿಯಲ್ಲಿಯ ಯುದ್ಧಗಳು ನಡೆದದ್ದು 1469-1471ರಲ್ಲಿ 4ನೆಯ ಎಡ್ವರ್ಡ್ ಮತ್ತು ವಾರ್ವಿಕ್ ನಡುವೆ ಆದ್ದು. ಮೊದಲು ವಾರ್ವಿಕ್‌ಗೆ ಜಯ ಲಭಿಸಿತು. ಎಡ್ವರ್ಡ್ ಪದಚ್ಯುತನಾದ.[೭] ಆರನೆಯ ಹೆನ್ರಿ ಸ್ವಲ್ಪಕಾಲ ಮತ್ತೆ ದೊರೆಯಾಗಿದ್ದ.[೮] 1471ರಲ್ಲಿ ಎಡ್ವರ್ಡ್ ಹಿಂದಿರುಗಿ ಬಂದು ಎರಡು ಎಡೆಗಳಲ್ಲಿ ವಾರ್ವಿಕನನ್ನು ಸೋಲಿಸಿ ಮತ್ತೆ ಸಿಂಹಾಸನವನ್ನೇರಿದ.
ಮೂರನೆಯ ರಿಚರ್ಡ್‌ನ ವಿರುದ್ಧ ಬಕಿಂಗ್‌ಹ್ಯಾಮ್ ನಡೆಸಿದ ಬಂಡಾಯದಿಂದ ಗುಲಾಬಿಗಳ ಯುದ್ಧಗಳ ಕೊನೆಯ ಘಟ್ಟ ಆರಂಭವಾಯಿತು. ಲ್ಯಾಂಕಾಸ್ಟ್ರಿಯನ್ ಮನೆತನದವನಾದ ರಿಚ್ಮಂಡಿನ ಹೆನ್ರಿ ತನಗಿದ್ದ ಸಿಂಹಾಸನದ ಹಕ್ಕನ್ನು ಸಾಧಿಸಿಕೊಳ್ಳುವುದಕ್ಕಾಗಿ ಮಿಲ್ಫರ್ಡ್ ಹೇವನಿನ ಆಕ್ರಮಣ ನಡೆಸಿ, ಬಾಸ್ವರ್ತ್ ಫೀಲ್ಡಿನಲ್ಲಿ ರಿಚರ್ಡನನ್ನು 1485ರಲ್ಲಿ ಸೋಲಿಸಿದಾಗ ಗುಲಾಬಿ ಯುದ್ಧಗಳು ಮುಗಿದುವು.[೯] ಅವನು 7ನೆಯ ಹೆನ್ರಿಯಾಗಿ ಸಿಂಹಾಸನಾರೋಹಣ ಮಾಡಿದ. ಟ್ಯೂಡರ್ ಮನೆತನದ ಆಳ್ವಿಕೆ ಪ್ರಾರಂಭವಾಯಿತು.
ಉಪಸಂಹಾರ
ಗುಲಾಬಿಗಳ ಯುದ್ಧಗಳು ಅಷ್ಟೇನೂ ದೊಡ್ಡವಾಗಿರಲಿಲ್ಲವಾದರೂ ಅವುಗಳಲ್ಲಿ ನಿರತವಾಗಿದ್ದ ಪಕ್ಷಗಳು ಬಲು ಘೋರವಾಗಿ ಕಾದಾಟ ನಡೆಸಿದವು. ಕದನಗಳಲ್ಲಿ ವಿಜಯ ಗಳಿಸಿದ ಪಕ್ಷಗಳು ಉನ್ಮತ್ತವಾಗಿ ವರ್ತಿಸುತ್ತಿದ್ದದ್ದುಂಟು. ಅತ್ಯಂತ ಕ್ರೂರವಾದ ರೀತಿಯಲ್ಲಿ ಮರಣದಂಡನೆ ವಿಧಿಸುತ್ತಿದ್ದದ್ದುಂಟು. ಆದರೆ ಆಸ್ತಿಗಳಿಗೆ ಅಷ್ಟೇನೂ ಧಕ್ಕೆ ಒದಗಿದಂತೆ ಕಾಣುವುದಿಲ್ಲ. ಈ ಘರ್ಷಣೆಯಲ್ಲಿ ಪಟ್ಟಣಗಳು ನೇರವಾಗಿ ಭಾಗವಹಿಸಲಿಲ್ಲ. ಆದರೆ ಈ ಯುದ್ಧಗಳ ಪರಿಣಾಮಗಳು ಅವುಗಳ ಮೇಲೂ ಉಂಟಾದುವು. ಯುದ್ಧಗಳಿಂದ ವ್ಯಾಪಾರೋದ್ಯಮಿಗಳಿಗೆ ಅಡಚಣೆಯಾದ್ದುಂಟು. ಶ್ರೀಮಂತ ಪ್ರಭುಗಳು ಮತ್ತು ಯುದ್ಧಕ್ಕಾಗಿ ಅವರಿಂದ ನೇಮಕವಾದವರು ಮಾತ್ರ ಯುದ್ಧದಲ್ಲಿ ನಿರತರಾಗಿದ್ದರು. ಯುದ್ಧಕ್ಕೆ ಕಾರಣವಾದ ಅರಾಜಕತೆಯಿಂದ ಲಾಭ ಪಡೆದಿದ್ದವರು ಈ ವರ್ಗದವರೇ. ಗ್ರಾಮದ ಶ್ರೀಮಂತರೂ ಇವರನ್ನೇ ಅನುಸರಿಸಿದರು. ಯುದ್ಧದಿಂದ ಅತಿಯಾಗಿ ನೊಂದವರು ಈ ಜನರೇ. ಗುಲಾಬಿಗಳ ಯುದ್ಧದಿಂದ ಹಳೆಯ ಶ್ರೀಮಂತ ವರ್ಗ ಅಳಿಸಿ ಹೋಯಿತೆನ್ನುವುದು ಸರಿಯಲ್ಲ. ಟ್ಯೂಡರ್ ದೊರೆಗಳ ಒಳ್ಳೆಯ ಆಳ್ವಿಕೆಯ ಕಾಲದಲ್ಲಿ ಮಧ್ಯಮವರ್ಗ ವರ್ಧಿಷ್ಣುವಾಯಿತು. ಆಡಳಿತದಲ್ಲಿ ಅವರು ಹೆಚ್ಚು ಹೆಚ್ಚಾಗಿ ಪ್ರಭಾವ ಬೀರತೊಡಗಿದರು.
ಉಲ್ಲೇಖಗಳು
- ↑ Hume, David. "EDWARD IV". The History of England in Three Volumes. Vol. I.B.
- ↑ Davies 2000, p. 147.
- ↑ Sadler 2011, p. 60.
- ↑ Jones 2014, p. 187.
- ↑ "Edward IV". www.westminster-abbey.org. Retrieved 2 August 2021.
- ↑ Ross 1974, p. 61.
- ↑ Pollard 2007, pp. 65–66.
- ↑ Pollard 2007, p. 71.
- ↑ Kendall, p. 368.
ಗ್ರಂಥಸೂಚಿ
- Davies, C.S.L. (2000). "Government and Politics in England: problems of succession". In Haigh, Christopher (ed.). [[[:ಟೆಂಪ್ಲೇಟು:Googlebooks]] The Cambridge Historical Encyclopedia of Great Britain and Ireland]. Cambridge University Press.
{cite book}
: Check|url=
value (help) - Sadler, John (2011). Towton: The Battle of Palm Sunday Field 1461. Pen & Sword Military. ISBN 978-1-84415-965-9.
- Jones, Dan (2014). The Hollow Crown: The Wars of the Roses and the Rise of the Tudors. Faber & Faber. ISBN 978-0-571-28809-0.
- Ross, Charles D. (1974). Edward IV. English Monarchs Series. Berkeley: University of California Press. ISBN 978-0-520-02781-7.
- —— (2007). Warwick the Kingmaker: Politics, Power and Fame. London. ISBN 978-1-847-25182-4.
![](http://upload.wikimedia.org/wikipedia/commons/thumb/4/4c/Wikisource-logo.svg/50px-Wikisource-logo.svg.png)