ಜಯಾ ಬಚ್ಚನ್
ಜಯಾ ಬಚ್ಚನ್ | |
---|---|
Born | ಜಯಾ ಬಾಧುರಿ ೧೯೪೮-೦೪-೦೯ ಜಬಲ್ಪುರ, ಮಧ್ಯ ಪ್ರದೇಶ, ಭಾರತ |
Occupation(s) | ಚಲನಚಿತ್ರ ನಟಿ, ರಾಜಕಾರಣಿ |
Years active | 1963, 1971- 1981, 1998- ಪ್ರಸಕ್ತದವರೆಗೆ |
Spouse | ಅಮಿತಾಬ್ ಬಚ್ಚನ್ |
Children | ಅಭಿಷೇಕ್ ಬಚ್ಚನ್ ಶ್ವೇತಾ ನಂದಾ |
ಜಯಾ ಬಚ್ಚನ್ (ಜನ್ಮ ನಾಮ ಜಯಾ ಭಾದುರಿ ; ಜನನ: 9 ಏಪ್ರಿಲ್ 1948) (ಬೆಂಗಾಲಿ ಭಾಷೆ: জয়া ভাদুড়ী বচ্চন, ಹಿಂದಿ: जया बच्चन), ಒಬ್ಬ ಭಾರತೀಯ ಅಭಿನೇತ್ರಿ ಮತ್ತು ರಾಜಕಾರಣಿ. ಅವರು ಪುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. ಜಯಾ ಹಿಂದಿ ಚಲನಚಿತ್ರರಂಗದ ಖ್ಯಾತ ನಟ ಅಮಿತಾಭ್ ಬಚ್ಚನ್‌ರ ಪತ್ನಿ. ಅವರ ಪುತ್ರ ಅಭಿಷೇಕ್ ಬಚ್ಚನ್ ಸಹ ಒಬ್ಬ ನಟರಾಗಿದ್ದಾರೆ.
ಪ್ರಖ್ಯಾತ ನಿರ್ದೇಶಕ ಸತ್ಯಜಿತ್ ರಾಯ್ ಅವರ ಬಂಗಾಳಿ ಚಲನಚಿತ್ರ ಮಹಾನಗರ್ ನಲ್ಲಿ(1963) ಬಾಲನಟಿಯಾದ ನಂತರ, ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ, 1971ರಲ್ಲಿ ತೆರೆಕಂಡ ಗುಡ್ಡಿ ಚಲನಚಿತ್ರದಲ್ಲಿ ಮುಖ್ಯನಟಿಯಾಗಿ ಕಾಣಿಸಿಕೊಂಡರು. ಜವಾನಿ ದಿವಾನಿ (1972), ಕೋಶಿಶ್ , ಅನಾಮಿಕಾ, ಪಿಯಾ ಕಾ ಘರ್ ಹಾಗೂ ಬಾವರ್ಚಿ ಸೇರಿದಂತೆ, ಹಲವು ಹಿಂದಿ ಚಲನಚಿತ್ರಗಳಲ್ಲಿ ಪ್ರಧಾನ ನಟಿಯಾಗಿ ಅಭಿನಯಿಸಿದರು. ಜಂಜೀರ್ (1973), ಅಭಿಮಾನ್ (1973), ಚುಪ್ಕೆ ಚುಪ್ಕೆ (1975), ಮಿಲಿ (1975) ಹಾಗೂ ಶೋಲೆ (1975) ಇಂತಹ ಚಲನಚಿತ್ರಗಳಲ್ಲಿ ಜಯಾ ತಮ್ಮ ಪತಿ ಅಮಿತಾಭ್‌ರೊಡನೆ ನಟಿಸಿದರು. ಆನಂತರದ ವರ್ಷಗಳಲ್ಲಿ ಜಯಾ ತಮ್ಮ ಚಲನಚಿತ್ರ ರಂಗದ ಚಟುವಟಿಕೆಯನ್ನು ಸೀಮಿತಗೊಳಿಸಿದರು. 1981ರಲ್ಲಿ ಬಿಡುಗಡೆಯಾದ ಯಶ್ ಚೋಪ್ರಾ ನಿರ್ದೇಶನದ ಸಿಲ್‌ಸಿಲಾ ಬಿಡುಗಡೆಯ ನಂತರ ನಟನೆಯಿಂದ ವಿರಾಮ ಪಡೆದುಕೊಂಡರು. 1998ರಲ್ಲಿ ಗೋವಿಂದ್ ನಿಹಲಾನಿ ನಿರ್ದೇಶನದ ಹಜಾರ್ ಚೌರಾಸಿ ಕೀ ಮಾ ಚಲನಚಿತ್ರದೊಡನೆ ಜಯಾ ಚಲನಚಿತ್ರರಂಗಕ್ಕೆ ವಾಪಸಾದರು.
ತಮ್ಮ ವೃತ್ತಿಜೀವನದಲ್ಲಿ ಜಯಾರಿಗೆ ಮೂರು ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗಳು, ಹಾಗು ಮೂರು ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳು ಲಭಿಸಿದವು. ಅಲ್ಲದೇ, 2007ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆಯ ಪ್ರಶಸ್ತಿಗೆ ಅವರು ಪುರಸ್ಕೃತರಾದರು.
ಆರಂಭಿಕ ಜೀವನ
ಬೆಂಗಾಲಿ ಕುಟುಂಬದಲ್ಲಿ, ಇಂದಿರಾ ಮತ್ತು ತರುಣ್ ಕುಮಾರ್ ಭಾದುರಿ ದಂಪತಿಯ ಪುತ್ರಿಯಾಗಿ ಜಯಾ ಜನಿಸಿದರು. ತರುಣ್ ಕುಮಾರ್ ಜಬಲ್ಪುರದಲ್ಲಿ ಒಬ್ಬ ಬರಹಗಾರ, ಪತ್ರಕರ್ತ ಹಾಗೂ ರಂಗ ಕಲಾವಿದರಾಗಿದ್ದರು. ಭೂಪಾಲ್ ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ, ಜಯಾ ವ್ಯಾಸಂಗ ಮಾಡಿದರು. 1966ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಯಾಗೆ ಅತ್ಯುತ್ತಮ ಎನ್‌ಸಿಸಿ ಕೆಡೆಟ್ ಪ್ರಶಸ್ತಿ ಲಭಿಸಿತು.[೧] ನಂತರ, ಅವರು ಪುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದರು.
ವೃತ್ತಿಜೀವನ
1963ರಲ್ಲಿ ತೆರೆಕಂಡ, ಸತ್ಯಜಿತ್ ರಾಯ್ ಅವರ ಬೆಂಗಾಲಿ ಚಲನಚಿತ್ರ ಮಹಾನಗರ್ ನಲ್ಲಿ ಪೋಷಕ ನಟಿಯ ಪಾತ್ರದೊಂದಿಗೆ 15ನೆಯ ಹರೆಯದ ಜಯಾ ತಮ್ಮ ನಟನಾ ವೃತ್ತಿ ಆರಂಭಿಸಿದರು. ಈ ಚಲನಚಿತ್ರದಲ್ಲಿ ಅನಿಲ್ ಚಟರ್ಜಿ ಮತ್ತು ಮಾಧಬಿ ಮುಖರ್ಜಿ ಪ್ರಧಾನ ಪಾತ್ರಗಳಲ್ಲಿದ್ದರು. ಇದಕ್ಕೂ ಮುಂಚೆ, ಎರಡು ಬಂಗಾಳಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು 'ಸುಮನ್ ' [೨] ಎಂಬ 13-ನಿಮಿಷಗಳ ಕಿರುಚಿತ್ರ, ಹಾಗೂ ಇನ್ನೊಂದು, ಧನ್ನಿ ಮೆಯೆ ಎಂಬ ಬೆಂಗಾಲಿ ಹಾಸ್ಯಚಿತ್ರದಲ್ಲಿ ಜಯಾ, ಉತ್ತಮ್ ಕುಮಾರ್‌ನ ನಾದಿನಿಯ ಪಾತ್ರ ನಿರ್ವಹಿಸಿದ್ದರು.[೩]
ಸತ್ಯಜಿತ್ ರಾಯ್ ನಿರ್ದೇಶನದ ಚಲನಚಿತ್ರದಲ್ಲಿ ಅವರ ನಟನೆ ಪ್ರಶಂಸೆ ಗಳಿಸಿದ ನಂತರ ಜಯಾ ಸ್ಪೂರ್ತಿ ಪಡೆದರು. ನಟನೆ ಕಲಿಯಲು ಜಯಾ ಫುಣೆಯಲ್ಲಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಶಿಕ್ಷಣ ಸಂಸ್ಥೆ (ಎಫ್‌ಟಿಐಐ) ಸೇರಿದರು. ಈ ತರಬೇತಿಯ ಅಂತ್ಯದಲ್ಲಿ ಜಯಾರಿಗೆ ಚಿನ್ನದ ಪದಕ ಲಭಿಸಿತು.[೪] 1971ರಲ್ಲಿ ಹೃಷಿಕೇಶ್ ಮುಖರ್ಜಿ ನಿರ್ದೇಶನದ, ಬಹು-ಜನಪ್ರಿಯ ಹಿಂದಿ ಚಲನಚಿತ್ರ ಗುಡ್ಡಿ ಯಲ್ಲಿ ಗುಡ್ಡಿ ಪಾತ್ರಕ್ಕಾಗಿ ಜಯಾರನ್ನು ಆಯ್ಕೆ ಮಾಡಲಾಯಿತು. ಈ ಚಲನಚಿತ್ರದಲ್ಲಿ, ಚಲನಚಿತ್ರ ನಟ ಧರ್ಮೇಂದ್ರ ಅವರ ಕಟ್ಟಾ ಅಭಿಮಾನಿಯಾಗಿದ್ದ ಶಾಲಾ ವಿದ್ಯಾರ್ಥಿನಿಯ ಪಾತ್ರವನ್ನು ಜಯಾ ನಿರ್ವಹಿಸಿದ್ದರು.[೫] 'ಗುಡ್ಡಿ' ಚಲನಚಿತ್ರ ಯಶಸ್ವಿಯಾಯಿತು.[೩] ಅವರು ಮುಂಬಯಿಗೆ ತೆರಳಿ ಇತರೆ ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾದರು. ಆದರೆ ಗುಡ್ಡಿ ಚಲನಚಿತ್ರದಲ್ಲಿ 14 ವರ್ಷದ ಶಾಲಾ ವಿದ್ಯಾರ್ಥಿನಿಯ ಪಾತ್ರ ಹಾಗೂ ಅದಕ್ಕೆ ಸೂಕ್ತವಾದ ಕೋಮಲ ಚೆಲುವಿಕೆಯಿಂದಾಗಿ, ಜಯಾರಿಗೆ 'ಪಕ್ಕದ ಮನೆಯ ಹುಡುಗಿ' ಎಂಬ ಉಪನಾಮ ಲಭಿಸಿತು. ಈ 'ಬಿರುದು' ಅವರ ವೃತ್ತಿಜೀವನದುದ್ದಕ್ಕೂ ಸ್ಥಾಯಿಯಾಗಿಬಿಟ್ಟಿತು. ಅದೇ ರೀತಿಯ ಪಾತ್ರಗಳನ್ನು ಮಾಡುವ ಏಕತಾನತೆಯಿಂದ ಹೊರಬರಲೆಂದು, ಜಯಾ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸತೊಡಗಿದರು. ಜವಾನೀ ದೀವಾನೀ (1972)[೬] ಚಲನಚಿತ್ರದಲ್ಲಿ ಲಾವಣ್ಯ ಪ್ರಧಾನ ಪಾತ್ರ ಮತ್ತು ಅನಾಮಿಕಾ (1973), ಚಲನಚಿತ್ರದಲ್ಲಿ ಮರೆವಿನ ನಾಟಕವಾಡುವ, ನಕಾರಾತ್ಮಕ ಗುಣಗಳುಳ್ಳ ಪ್ರಧಾನ ಪಾತ್ರ ನಿರ್ವಹಿಸಿದರು.[೭] ಆದರೂ, ಜಯಾ ನಾಯಕಿ-ನಟಿಯಾಗಿ ನಿರ್ವಹಿಸಿದ ಪಾತ್ರಗಳಲ್ಲಿ ಹಲವು, ಗುಡ್ಡಿ ಯಂತಹ ಮಧ್ಯಮವರ್ಗದ ಸಂವೇದನಾಶೀಲತೆ ಹೊಂದಿದ ಪಾತ್ರಗಳಾಗಿದ್ದವು. ಗುಲ್ಜಾರ್, ಬಾಸು ಚಟರ್ಜಿ ಹಾಗೂ ಹೃಷಿಕೇಶ್ ಮುಖರ್ಜಿಯಂತಹವರು ನಿರ್ದೇಶಿಸಿದ ಉಪಹಾರ್ (1971), ಪೀಯಾ ಕಾ ಘರ್ (1972), ಪರಿಚಯ್ (1972), ಕೋಶಿಶ್ (1972) ಹಾಗೂ ಬಾವರ್ಚಿ (1972), ಇಂತಹ ಚಲನಚಿತ್ರಗಳಲ್ಲಿ ಮಧ್ಯಮವರ್ಗದ ಸಂವೇದನೆ ಬಿಂಬಿಸುವ ಮನೋಜ್ಞ ಅಭಿನಯ ನೀಡಿದರು.[೫][೮] ಅದೇ ವೇಳೆಗೆ ಜಯಾ ಜನಪ್ರಿಯ ನಾಯಕಿಪಾತ್ರದ ತಾರೆಯಾಗಿದ್ದರು.[೩]
ಜಯಾ ಮುಂದೆ ತಮ್ಮ ಪತಿಯಾಗಲಿರುವ ಅಮಿತಾಭ್ ಬಚನ್‌ರೊಂದಿಗೆ ನಟಿಸಿದ ಮೊದಲ ಚಲನಚಿತ್ರ ಬನ್ಸಿ ಬಿರ್ಜು (1972). ಇದರ ನಂತರ, ಬಿ. ಆರ್. ಇಷಾರಾರವರ, ಏಕ್ ನಝರ್ ಅದೇ ವರ್ಷ ಬಿಡುಗಡೆಯಾಯಿತು.[೩] ಇದಕ್ಕೆ ಮುಂಚೆ ಅಮಿತಾಭ್ ಬಚ್ಚನ್ ನಟಿಸಿದ ಹಲವು ಚಲನಚಿತ್ರಗಳು ವಿಫಲವಾಗಿದ್ದವು. ಸಲೀಂ-ಜಾವೇದ್ ಜೋಡಿ ಚಿತ್ರಕಥೆ ಹೆಣೆದಿದ್ದ ಚಲನಚಿತ್ರ ಜಂಝೀರ್ ಚಲನಚಿತ್ರದಲ್ಲಿ ಅಮಿತಾಭ್‌ರೊಂದಿಗೆ ಹಲವು ನಾಯಕಿನಟಿಯರು ನಟಿಸಲು ನಿರಾಕರಿಸಿದಾಗ, ಜಯಾ ಈ ಚಲನಚಿತ್ರದ ನಾಯಕಿನಟಿಯಾಗಿ ಪ್ರವೇಶಿಸಿದರು. ಈ ಚಲನಚಿತ್ರವು ಭಾರೀ ಯಶಸ್ಸು ಗಳಿಸಿ, ಅಮಿತಾಭ್‌ರಿಗೆ ಸಿನೆಮಾ ವಲಯದಲ್ಲಿ ಆಂಗ್ರಿ ಯಂಗ್ ಮ್ಯಾನ್ ಎಂದು ಗುರುತಿಸಲಾಯಿತು.[೯] ಈ ಚಲನಚಿತ್ರದ ನಂತರ ಬಿಡುಗಡೆಯಾದ ಅಭಿಮಾನ್ (1973), ಹಾಸ್ಯಚಿತ್ರ ಚುಪ್ಕೆ ಚುಪ್ಕೆ (1975) ಮತ್ತು ಶೋಲೆ (1975)ರಲ್ಲಿ ಅಮಿತಾಬ್ ಮತ್ತು ಜಯಾ ನಾಯಕ-ನಾಯಕಿಯಾಗಿ ನಟಿಸಿದರು.
ಶೋಲೆ ಚಲನಚಿತ್ರ ಚಿತ್ರೀಕರಣದ ಸಮಯ, ಅಮಿತಾಭ್-ಜಯಾ ದಂಪತಿಗೆ ಶ್ವೇತಾ ಎಂಬ ಪುತ್ರಿ ಜನಿಸಿದರು. ಇದಾದ ನಂತರ ಜಯಾ ಚಲನಚಿತ್ರರಂಗದಿಂದ ಹಿಂದೆ ಸರಿದು, ತಮ್ಮ ಮಕ್ಕಳನ್ನು ಬೆಳೆಸುವತ್ತ ಗಮನ ಹರಿಸಿದರು. ನಾಯಕಿಯಾಗಿ, ತಮ್ಮ ಪತಿಯೆದುರು ನಟಿಸಿದ ಅಂತಿಮ ಚಲನಚಿತ್ರ ಸಿಲ್ಸಿಲಾ (1981). 1980ರ ದಶಕದ ಉತ್ತರಾರ್ಧದಲ್ಲಿ, ತಮ್ಮ ಪತಿ ನಾಯಕನಾಗಿ ನಟಿಸಿದ ಷಾಹೇಂಷಾಹ್ ಎಂಬ ಚಲನಚಿತ್ರಕ್ಕಾಗಿ ಜಯಾ ಕಥೆ-ಚಿತ್ರಕಥೆ ರಚಿಸಿದರು.
18 ವರ್ಷಗಳ ನಂತರ, ಜಯಾ ಬಚ್ಚನ್ ನಟನಾರಂಗಕ್ಕೆ ಮರಳಿದರು. ಗೋವಿಂದ್ ನಿಹಲಾನಿಯವರ 'ಹಝಾರ್ ಚೌರಾಸೀ ಕೀ ಮಾಂ ' (1998) ಎಂಬ ಚಲನಚಿತ್ರದಲ್ಲಿ ಅವರು ಅಭಿನಯಿಸಿದರು. ಈ ಚಲನಚಿತ್ರವು ನಕ್ಸಲೀಯ ಚಳವಳಿಯ ವಿಷಯದ ಕುರಿತಾಗಿತ್ತು. 2000ರಲ್ಲಿ, ಅವರು ಫಿಝಾ ಎಂಬ ಚಲನಚಿತ್ರದಲ್ಲಿ ಅಭಿನಯಿಸಿದರು. ಈ ಚಲನಚಿತ್ರದಲ್ಲಿ ನಟನೆಗಾಗಿ ಜಯಾರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿತು. ಕರಣ್ ಜೋಹರ್ ನಿರ್ದೇಶಿಸಿದ ಕೌಟುಂಬಿಕ ಚಲನಚಿತ್ರ ಕಭೀ ಖುಷಿ ಕಭೀ ಗಮ್ (2001)ರಲ್ಲಿ ಅವರ ಪತಿ ಅಮಿತಾಭ್‌ರೊಡನೆ ನಟಿಸಿದರು. ಆನಂತರ, ಕರಣ್ ಜೋಹರ್ ನಿರ್ಮಿಸಿದ, ನಿಖಿಲ್ ಆಡ್ವಾಣಿ ನಿರ್ದೇಶಿಸಿದ ಕಲ್ ಹೋ ನಾ ಹೋ (2003)ಚಲನಚಿತ್ರದಲ್ಲಿ ನಟಿಸಿದರು. ಇದರಲ್ಲಿ ಅವರು ಪ್ರೀತಿ ಝಿಂಟಾರ ತಾಯಿಯ ಪಾತ್ರ ನಿರ್ವಹಿಸಿದರು. ಅವರ ಈ ನಟನೆಗಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿತು.[೧೦]
ಲಾಗಾ ಚುನರೀ ಮೇಂ ದಾಗ್ ಚಲನಚಿತ್ರದಲ್ಲಿ ಅವರು ತಮ್ಮ ಪುತ್ರ ಅಭಿಶೇಕ್ ಬಚ್ಚನ್‌ರೊಂದಿಗೆ ಅಭಿನಯಿಸಿದರು.
ರಾಜಕೀಯ ಜೀವನ
ಜಯಾ ಬಚ್ಚನ್ ಸಮಾಜವಾದಿ ಪಕ್ಷದ ಸಂಸತ್ ಸದಸ್ಯೆಯಾಗಿ, ರಾಜ್ಯಸಭೆಗೆ ನೇಮಕಗೊಂಡರು. 2010ರ ಫೆಬ್ರವರಿ ತಿಂಗಳಲ್ಲಿ, ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುವ ಇಂಗಿತ ಪ್ರಕಟಿಸಿದರು.[೧೧]
ವೈಯಕ್ತಿಕ ಜೀವನ
1973ರ ಜೂನ್ 3ರಂದು ಜಯಾ ಅಮಿತಾಭ್ ಬಚ್ಚನ್‌ರನ್ನು ವಿವಾಹವಾದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ: ಶ್ವೇತಾ ಬಚ್ಚನ್-ನಂದಾ ಮತ್ತು ನಟ ಅಭಿಶೇಕ್ ಬಚ್ವನ್ ಶ್ವೇತಾ ಉದ್ಯಮಿ ನಿಖಿಲ್ ನಂದಾರನ್ನು ವಿವಾಹವಾಗಿ ನವದೆಹಲಿಯಲ್ಲಿ ವಾಸವಾಗಿದ್ದಾರೆ. ಇವರಿಗೆ ನವ್ಯಾ ನವೇಲಿ ಮತ್ತು ಅಗಸ್ತ್ಯ ನಂದಾ ಎಂಬ ಇಬ್ಬರು ಮಕ್ಕಳಿದ್ದಾರೆ.[೧೨] ಅಭಿಶೇಕ್ ಬಚ್ಚನ್ ನಟಿ ಐಶ್ವರ್ಯಾ ರೈಯನ್ನು ವಿವಾಹವಾಗಿದ್ದಾರೆ.[೧೩]
ಪ್ರಶಸ್ತಿಗಳು ಮತ್ತು ಮಾನ್ಯತೆ
ಫಿಲ್ಮ್‌ಫೇರ್ ಪ್ರಶಸ್ತಿಗಳು
ವಿಜೇತೆ
- 1974 - ಅಭಿಮಾನ್ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
- 1975 - ಕೋರಾ ಕಾಗಝ್ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
- 1980 - ನೌಕರ್ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
- 1998 - ಹಿಂದಿ ಚಲನಚಿತ್ರರಂಗಕ್ಕೆ ಅಮೂಲ್ಯ ಕೊಡುಗೆಗಾಗಿ ಫಿಲ್ಮ್‌ಫೇರ್ ವಿಶೇಷ ನಟನಾ ಪ್ರಶಸ್ತಿ
- 2001 - ಫಿಝಾ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
- 2002 - ಕಭಿ ಖುಷಿ ಕಭೀ ಗಮ್ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
- 2004 - ಕಲ್ ಹೋ ನಾ ಹೋ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
- 2008 - ಫಿಲ್ಮ್‌ಫೇರ್ ಜೀವಮಾನ ಸಾಧನೆಯ ಪ್ರಶಸ್ತಿ
ನಾಮನಿರ್ದೇಶಿತ
- 1972 - ಗುಡ್ಡಿ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
- 1972 - ಉಪಹಾರ್ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
- 1974 - ಕೋಶಿಶ್ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
- 1976 - ಮಿಲಿ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಉತ್ತಮ ನಟಿ ಪ್ರಶಸ್ತಿ
- 1982 - ಸಿಲ್ಸಿಲಾ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ
ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು
ವಿಜೇತೆ
- 2001 - ಫಿಝಾ ಐಐಎಫ್‌ಎ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
- 2002 - ಕಭಿ ಖುಷಿ ಕಭೀ ಗಮ್ ಚಲನಚಿತ್ರಕ್ಕಾಗಿ ಐಐಎಫ್‌ಎ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
- 2004 - ಕಲ್ ಹೋ ನಾ ಹೋ ಚಲನಚಿತ್ರಕ್ಕಾಗಿ ಐಐಎಫ್‌ಎ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
ಇತರೆ ಚಲನಚಿತ್ರ ಪ್ರಶಸ್ತಿಗಳು
ವಿಜೇತೆ
- 1972 - ಗುಡ್ಡಿ ಚಲನಚಿತ್ರಕ್ಕಾಗಿ ಬಂಗಾಲ್ ಫಿಲ್ಮ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ಅವಾರ್ಡ್ಸ್: ವಿಶೇಷ ಪ್ರಶಸ್ತಿ (ಹಿಂದಿ ಚಲನಚಿತ್ರ) [೧೪]
- 1999 - ಆನಂದಲೋಕ್ ಅವಾರ್ಡ್ಸ್: ವಿಶೇಷ ಸಂಪಾದಕ ಪ್ರಶಸ್ತಿ
- 2001 - ಫಿಝಾ ಚಲನಚಿತ್ರಕ್ಕಾಗಿ ಬಂಗಾಲ ಫಿಲ್ಮ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ಅವಾರ್ಡ್ಸ್: ಅತ್ಯುತ್ತಮ ಪೋಷಕ ನಟಿ [೧೫]
- 2001 - ಫಿಝಾ ಚಲನಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿಗಾಗಿ ಝೀ ಸಿನೆ ಪ್ರಶಸ್ತಿ
- 2002 - ಸ್ಯಾನ್ಸೂಯಿ ವ್ಯೂಯರ್ಸ್ ಛಾಯ್ಸ್ ಅವಾರ್ಡ್ಸ್‌ನಲ್ಲಿ ಕಭಿ ಖುಷಿ ಕಭೀ ಗಮ್ ಚಲನಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ [೧೬]
ಗೌರವಗಳು ಹಾಗೂ ಮನ್ನಣೆಗಳು
- 1992ರಲ್ಲಿ, ಭಾರತ ಸರ್ಕಾರವು ಜಯಾ ಬಚ್ಚನ್‌ರಿಗೆ ರಾಷ್ಟ್ರದ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಪದ್ಮಶ್ರೀ' ನೀಡಿ ಗೌರವಿಸಿತು.
- 1998ರಲ್ಲಿ, ಅವರಿಗೆ ಜೀವಮಾನ ಸಾಧನೆಗಾಗಿ ಒಮೆಗಾ ಉತ್ಕೃಷ್ಟತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಉತ್ತರ ಪ್ರದೇಶ ಸರ್ಕಾರ ನೀಡಿದ ರಾಜ್ಯದ ಅತ್ಯುನ್ನತ 'ಯಶ್ ಭಾರತಿ ಸಮ್ಮಾನ್' ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.[೧೭]
- 2004, ಸ್ಯಾನ್ಸೂಯಿ ಅವಾರ್ಡ್ಸ್‌ನಲ್ಲಿ ಜೀವಮಾನ ಸಾಧನಾ ಪ್ರಶಸ್ತಿ.[೧೮]
- 2010, ಲಂಡನ್‌ನಲ್ಲಿ ಟಂಗ್ಸ್ ಆನ್ ಫೈರ್ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿ [೧೯][೨೦]
ಚಲನಚಿತ್ರಗಳ ಪಟ್ಟಿ
ವರ್ಷ | ಚಲನಚಿತ್ರ | ಪಾತ್ರ | ಇತರ ಟಿಪ್ಪಣಿಗಳು |
---|---|---|---|
1963 | ಮಹಾನಗರ್ | ಬಾನಿ | ಬಂಗಾಳಿ ಚಿತ್ರ |
1971 | ಗುಡ್ಡಿ | ಕುಸುಮ್/ಗುಡ್ಡಿ | ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ |
ಧನ್ನಿ ಮೆಯೆ | ಮೊನಶಾ | ಬಂಗಾಳಿ ಚಿತ್ರ | |
ಉಪಹಾರ್ | ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ | ||
1972 | ಜವಾನಿ ದಿವಾನಿ | ನೀತಾ ಠಾಕುರ್ | |
ಬಾವರ್ಚಿ | ಕೃಷ್ಣಾ ಶರ್ಮ | ||
ಪರಿಚಯ್ | ರಮಾ | ||
ಬನ್ಸಿ ಬಿರ್ಜು | ಬನ್ಸಿ | ||
ಪೀಯಾ ಕಾ ಘರ್ | ಮಾಲತಿ | ||
ಅನ್ನದಾತಾ | |||
ಏಕ್ ನಝರ್ | ಶಬನಮ್ | ||
ಸಮಾಧಿ | |||
ಕೋಶಿಶ್ | ಆರತಿ ಮಾಥುರ್ | ನಾಮನಿರ್ದೇಶಿತ,ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗಾಗಿ | |
ಶೋರ್ | ರಾತ್ ಕಿ ರಾನಿ/ರಾನಿ | ||
ಜಯ್ ಜವಾನ್ ಜಯ್ ಮಕಾನ್ | |||
1973 | ಗಾಯ್ ಔರ್ ಗೋರಿ | ನೀತಾ ಠಾಕುರ್ | |
ಅನಾಮಿಕಾ | ಅನಾಮಿಕಾ/ಕಾಂಚನ್/ ಅರ್ಚನಾ | ||
ಫಾಗುನ್ | ಕೃಷ್ಣಾ ಶರ್ಮಾ | ||
ಜಂಝೀರ್ | ಮಾಲಾ | ||
ಅಭಿಮಾನ್ | ಉಮಾ ಕುಮಾರ್ | ವಿಜೇತೆ, ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ | |
1974 | ಆಹಟ್ | ||
ದಿಲ್ ದೀವಾನಾ | |||
ಕೋರಾ ಕಾಗಜ್ | ಅರ್ಚನಾ ಗುಪ್ತ | ವಿಜೇತೆ, ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ | |
ನಯಾ ದಿನ್ ನಯೀ ರಾತ್ | |||
ದೂಸರೀ ಸೀತಾ | |||
1975 | ಮಿಲಿ | ಮಿಲಿ ಖನ್ನಾ | ನಾಮನಿರ್ದೇಶಿತ, ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ |
ಚುಪ್ಕೆ ಚುಪ್ಕೆ | ವಸುಧಾ ಕುಮಾರ್ | ||
ಶೋಲೆ | ರಾಧಾ | ||
1977 | ಅಭಿ ತೊ ಜೀ ಲೇಂ | ಜಯಾ | |
1978 | ಎಕ್ ಬಾಪ್ ಛೇ ಬೇಟೇ | ||
1979 | ನೌಕರ್ | ಗೀತಾ | ವಿಜೇತೆ, ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ |
1981 | ಸಿಲ್ಸಿಲಾ | ಶೋಭಾ ಮಲ್ಹೋತ್ರಾ | ನಾಮನಿರ್ದೇಶಿತ,ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ |
1998 | ಹಝಾರ್ ಚೌರಾಸೀ ಕೀ ಮಾಂ | ಸುಜಾತಾ ಚಟರ್ಜಿ | |
2000 | ಫಿಝಾ | ತಾಯಿ ನಿಷತ್‌ಬಿ | ವಿಜೇತೆ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ |
2001 | ಕಭಿ ಖುಷಿ ಕಭೀ ಗಮ್ | ನಂದಿನಿ ರಾಯ್‌ಚಂದ್ | ವಿಜೇತೆ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ |
2002 | ಕೊಯಿ ಮೆರೆ ದಿಲ್ ಸೆ ಪೂಛೆ | ಮಾನಸಿ ದೇವಿ | |
2003 | ಕಲ್ ಹೋ ನಾ ಹೋ | ಜೆನ್ನಿಫರ್ ಕಪೂರ್ | ವಿಜೇತೆ, ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ |
2007 | ಲಾಗಾ ಚುನರೀ ಮೇಂ ದಾಗ್ | ಸಾವಿತ್ರಿ ಸಹಾಯ್ | |
2008 | ಲವ್‌ಸಾಂಗ್ಸ್ | ||
ದ್ರೋಣ | |||
2010 | ಆಪ್ ಕೇ ಲಿಯೆ ಹಮ್ |
ಇವನ್ನೂ ಗಮನಿಸಿ
- ಭಾರತೀಯ ಚಲನಚಿತ್ರ ನಟಿಯರ ಪಟ್ಟಿ
ಟಿಪ್ಪಣಿಗಳು
- ↑ ದಾವರ್, ಪಿ. 55
- ↑ ಸುಮನ್ (35mm / B&W / 13 min)
- ↑ ೩.೦ ೩.೧ ೩.೨ ೩.೩ ದಾವರ್, ಪು. 56
- ↑ ಗುಲ್ಜಾರ್, ಪು. 526
- ↑ ೫.೦ ೫.೧ ಬ್ಯಾನರ್ಜಿ, ಪು. 93
- ↑ ಗುಲ್ಜಾರ್, ಪು. 457
- ↑ ಗುಲ್ಜಾರ್, ಪು. 91
- ↑ ಗುಲ್ಜಾರ್, ಪು. 396
- ↑ "Another time, another wedding". The Telegraph. April 22, 2007. Archived from the original on ಅಕ್ಟೋಬರ್ 24, 2012. Retrieved ಜನವರಿ 17, 2011.
- ↑ "Jaya Bachchan - Awards". Bollywood Hungama. Archived from the original on 2011-09-22. Retrieved 2010-06-29.
- ↑ IANS (February 3, 2010). "I'm too upfront for politics: Jaya Bachchan". ದಿ ಟೈಮ್ಸ್ ಆಫ್ ಇಂಡಿಯಾ. Retrieved 2010-06-29.
{cite news}
: Italic or bold markup not allowed in:|publisher=
(help) - ↑ Singh, Sanghita (May 18, 2002). "Nikhil Nanda: The business of life". The Times of India.
- ↑ "Interesting Facts and Figures : Jaya Bhaduri Bachchan". Sindh Today. March 25, 2009. Archived from the original on ಸೆಪ್ಟೆಂಬರ್ 15, 2013. Retrieved ಜನವರಿ 17, 2011.
- ↑ "ಬಿಎಫ್‌ಜೆಎ ಪ್ರಶಸ್ತಿಗಳು". Archived from the original on 2010-01-08. Retrieved 2011-01-17.
- ↑ "ಬಿಎಫ್‌ಜೆಎ ಪ್ರಶಸ್ತಿಗಳು". Archived from the original on 2015-04-02. Retrieved 2011-01-17.
- ↑ "dharma-production.com". Archived from the original on 2011-07-09. Retrieved 2011-01-17.
- ↑ apunkachoice
- ↑ mid-day.com
- ↑ "zeenews.com". Archived from the original on 2016-01-09. Retrieved 2011-01-17.
- ↑ ಜಯಾ ಬಚ್ಚನ್ ಟು ರಿಸೀವ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್ ಇನ್ ಲಂಡನ್ , 19 ಫೆಬ್ರವರಿ 2010, ದಿ ಹಿಂದೂ
ಉಲ್ಲೇಖಗಳು
- Banerjee, Shampa (1988). One Hundred Indian Feature Films: An Annotated Filmography. Taylor & Francis. ISBN 0824094832.
{cite book}
: Unknown parameter|coauthors=
ignored (|author=
suggested) (help) - Gulzar, . (2003). Encyclopaedia of Hindi cinema. Popular Prakashan, Encyclopaedia Britannica (India). ISBN 8179910660.
{cite book}
:|first=
has numeric name (help); Unknown parameter|coauthors=
ignored (|author=
suggested) (help) - Dawar, Ramesh (2006). Bollywood Yesterday-Today-Tomorrow. Star Publications. ISBN 1905863012.
ಬಾಹ್ಯ ಕೊಂಡಿಗಳು