ಜರಿ
ಜರಿಯು ಮಿರಿಯಾಪೊಡವರ್ಗದ ಕೈಲೋಪೊಡ ಉಪವರ್ಗಕ್ಕೆ ಸೇರಿದ ಸಂಧಿಪದಿ (ಸೆಂಟಿಪೀಡ್). ಶತಪದಿ, ಲಕ್ಷ್ಮಿಚೇಳು ಪರ್ಯಾಯ ನಾಮಗಳು. ನಿಶಾಚರಿಯಾದ ಇದು ತೇವವಿರುವ ಕತ್ತಲೆ ಪ್ರದೇಶಗಳಲ್ಲಿ ಕಲ್ಲುಗಳ ಕೆಳಗೆ ಬಿರುಕುಗಳಲ್ಲಿ, ಮರದ ತೊಲೆ, ತೊಗಟೆಗಳ ಕೆಳಗೆ ಮತ್ತು ತರಗೆಲೆಗಳಲ್ಲಿ ವಾಸಿಸುತ್ತದೆ. ಇದು ಮಾಂಸಾಹಾರಿ, ಕೀಟಗಳು, ಹುಳುಗಳು, ಮೃದ್ವಂಗಿ ಮತ್ತು ಇತರ ಸಣ್ಣ ಪ್ರಾಣಿಗಳು ಇದರ ಆಹಾರ. ಸಸ್ಯಾಹಾರಿ ಜರಿಗಳೂ ಇಲ್ಲದಿಲ್ಲ. ಉದಾಹಹರಣೆಗೆ ಹ್ಯಾಪ್ಲೋಫೈಲಸ್ ಸಬ್‍ಟೆರೇನಿಯಸ್. ಆರಿಗಳು ವಿಷಜಂತುಗಳು : ಕೆಲವು ಪ್ರಭೇದಗಳ ವಿಷವಂತೂ ಮನುಷ್ಯನಿಗೆ ಬಹಳ ಅಪಾಯಕಾರಿ.
ಜರಿಯ ದೇಹ ಉದ್ದ ಹಾಗೂ ಚಪ್ಪಟೆ. ದೇಹದ ಸುತ್ತ ಬಹಿರ್‍ಕಂಕಾಲ (ಎಕ್ಸೋಸ್ಕಲಿಟನ್) ಇದೆ. ದೇಹದಲ್ಲಿ ಶಿರ ಮತ್ತು ಮುಂಡ ಎಂಬ ಎರಡು ಭಾಗಗಳನ್ನು ಗುರುತಿಸಬಹುದು. ತಲೆಯಲ್ಲಿ ಅನೇಕ ತುಂಡುಗಳಿಂದ ಕೂಡಿದ ಒಂದು ಜೊತೆ ಕುಡಿಮೀಸೆಗಳೂ ಅವುಗಳ ಹಿಂಭಾಗದಲ್ಲಿ ಒಂದು ಜೊತೆ ಕಣ್ಣುಗಳೂ ಇರುವುವು. ತಲೆಯ ಪಾಲಿಯಲ್ಲಿ ಮೇಲುತುಟಿ ಮತ್ತು ಹೈಪೊಫ್ಯಾರಿಂಕ್ಸ್ ಇವೆ. ಇವು ಮತ್ತು ತಲೆಯ ಮಿಕ್ಕ ಉಪಾಂಗಗಳಾದ ಒಂದು ಜೊತೆ ಮ್ಯಾಂಡಿ ಬಲುಗಳು ಮತ್ತು ಎರಡು ಜೊತೆ ಮ್ಯಾಕ್ಸಿಲಗಳು ಜರಿಯ ವದನಾಂಗಗಳು. ಮುಂಡ ಬಲು ಉದ್ದವಾಗಿದ್ದು ಅನೇಕ ಖಂಡಗಳಿಂದ ಕೂಡಿದೆ. ಪ್ರತಿಯೊಂದು ಖಂಡದಲ್ಲೂ ಒಂದು ಜೊತೆ ಕಾಲುಗಳಿರುವುವು. ಪ್ರತಿ ಕಾಲಿನಲ್ಲೂ ಏಳು ಕೀಲುಗಳುಂಟು. ಮುಂಡದ ಹಿಂತುದಿಯಲ್ಲಿ ಟೆಲ್ಸನ್ ಎಂಬ ರಚನೆ ಇದೆ. ಇದರ ಮುಂದಿನ ಖಂಡವೇ ಪ್ರಜನನ ಖಂಡ. ಈ ಖಂಡದ ಅಧೋಭಾಗದಲ್ಲಿ ಜನನ ರಂಧ್ರವಿದೆ. ಜೊತೆಗೆ ಒಂದು ಜೊತೆ ಲಿಂಗಪದಿಗಳು (ಗೋನೊಪಾಡ್ಸ್) ಇರುವುವು. ಮುಂಡದ ಮೊದಲ ಜೊತೆ ಕಾಲುಗಳು ಮ್ಯಾಕ್ಸಿಲಿಪಿಡುಗಳಾಗಿ ಮಾರ್ಪಾಡಾಗಿವೆ. ಅವುಗಳ ತುದಿಯಲ್ಲಿ ವಿಷನಖಗಳುಂಟು. ಜರಿಯ ಉಸಿರಾಟ ಟ್ರೇಕಿಯಗಳ ವ್ಯವಸ್ಥೆಯ ಮೂಲಕ ನಡೆಯುತ್ತದೆ. ಪ್ರತಿಯೊಂದು ಖಂಡದಲ್ಲೂ ಗಾಳಿಯನ್ನು ಎಳೆದುಕೊಳ್ಳಲು ಸಹಾಯಕವಾಗಿ ಒಂದು ಜೊತೆ ಸ್ಟಿಗ್ಮೇಟ ರಂಧ್ರಗಳಿವೆ. ಜರಿ ನಿಶಾಚರಿಯಾದ್ದರಿಂದಲೂ ಯಾವಾಲೂ ಅವಿತಿಟ್ಟುಕೊಂಡೇ ಇರುವುದರಿಂದಲೂ ಜರಿಯ ಪ್ರಜನನದ ಬಗ್ಗೆ ಹೆಚ್ಚು ವಿಚಾರಗಳು ತಿಳಿದಿಲ್ಲ. ಗಂಡು ಹೆಣ್ಣುಗಳ ಮೈಥುನಕ್ರಿಯೆ ಇದುವರೆಗೂ ಕಣ್ಣಿಗೆ ಬಿದ್ದಿಲ್ಲ. ಬಹುಶಃ ಗಂಡು ಬಲೆಯೊಂದರ ಮೇಲೆ ಶುಕ್ರಾಣುಗಳನ್ನು ಸಿಂಪಡಿಸುತ್ತದೆಯೆಂದೂ ಅನಂತರ ಹೆಣ್ಣೊಂದು ಇವನ್ನು ಸಂಗ್ರಹಿಸಿ ನಿಷೇಚನಕ್ರಿಯೆಯಲ್ಲಿ ಬಳಸಿಕೊಳ್ಳುತ್ತದೆಯೆಂದೂ ಹೇಳಲಾಗಿದೆ. ನಿಷೇಚಿತ ಅಂಡಗಳನ್ನು ಗುಂಪಾಗಿ ಇಡುವುದು ಸಾಮಾನ್ಯ ನಡವಳಿಕೆ. ಇವನ್ನು ಹೆಣ್ಣು ಕಾಯುವುದೂ ಉಂಟು. ಕೆಲವು ಸಲ ಮೊಟ್ಟೆಗಳನ್ನು ಒಂಟೊಂಟಿಯಾಗಿ ಮಣ್ಣಿನಲ್ಲಿಡುವುದೂ ಇದೆ. ಮೊಟ್ಟೆಗಳಲ್ಲಿ ಬಂಡಾರ ಅಧಿಕ ಮೊತ್ತದಲ್ಲಿ ಇದೆ. ಭ್ರೂಣದ ಬೆಳೆವಣಿಗೆಯಲ್ಲಿ ಇದು ಉಪಯೋಗವಾಗುತ್ತದೆ.
ವಾನ್ಡೆಲ್‍ರವರ ವರ್ಗೀಕರಣದ ಪ್ರಕಾರ ಕೈಲೋಪೊಡ ವರ್ಗದಲ್ಲಿ 4 ಗಣಗಳಿವೆ.
1 ಸ್ಕುಟಿಗೆರೊಮಾರ್ಫ : ಈ ಗಣದ ಜರಿಗಳಲ್ಲಿ ಬಹಳ ಉದ್ದವಾದ 15 ಜೊತೆ ಕಾಲುಗಳಿವೆ. ಕಣ್ಣುಗಳು ಸಂಕೀರ್ಣ ರೀತಿಯವು. ಕುಡಿಮೀಸೆಗಳು ಬಹು ಉದ್ದ. ಸಾಮಾನ್ಯವಾಗಿ ಮುಂಡದ ಎಲ್ಲ ಖಂಡಗಳ ಬೆನ್ನ ಮಧ್ಯಭಾಗದಲ್ಲಿ ಒಂದೊಂದು ಸ್ಪೈರಕಲ್‍ಗಳಿವೆ. ತಲೆಯ ಮೇಲ್ಭಾಗ ಕಮಾನಿನ ಆಕಾರದ್ದಾಗಿದೆ. ಉದಾಹರಣೆಗೆ ಸ್ಕುಟಿಗೆರ.
2 ಲಿಥೊಬಿಯೊಮಾರ್ಫ : ಇವುಗಳಲ್ಲಿ ಮೊಟಕಾದ 15 ಜೊತೆ ಕಾಲುಗಳಿವೆ. ತಲೆ ಮತ್ತು ಮುಂಡದ ಮೇಲ್ಭಾಗ ಚಪ್ಪಟೆಯಾಗಿದೆ. ಸ್ಪೈರಕಲ್‍ಗಳು ಪಾಶ್ರ್ವಗಳಲ್ಲಿದೆ. ಉದಾಹರಣೆಗೆ ಲಿಥೊಬಿಯಸ್.
3 ಸ್ಕೊಲೊಪೆಂಡ್ರೊಮಾರ್ಫ : ಈ ಗಣದ ಜರಿಗಳು ಬಲವಾದ ದೇಹವುಳ್ಳ ಪ್ರಾಣಿಗಳು. 21-23 ಜೊತೆ ಕಾಲುಗಳನ್ನು ಪಡೆದಿವೆ. ಮುಂಡದ ಅಗ್ರಭಾಗದ ಪಾಶ್ರ್ವಗಳಲ್ಲಿ ಮಾತ್ರ ಸ್ಪೈರಕಲುಗಳು ಇವೆ. ಮುಂಡದ ಮೇಲ್ಭಾಗದಲ್ಲಿರುವ ದೊಡ್ಡ ಫಲಕಗಳು ಮತ್ತು ಸಣ್ಣ ಫಲಕಗಳು ಒಂದಾದ ಮೇಲೆ ಮತ್ತೊಂದು ಕ್ರಮವಾಗಿ ಅಳವಡಿಕೆಯಾಗಿವೆ. ಉದಾಹರಣೆಗೆ ಸ್ಕೊಲೊಪೆಂಡ್ರ.
4 ಜಿಯೊಫೈಲೊಮಾರ್ಫ : ದೇಹವು ನೀಳವಾಗಿ ಹುಳುವಿನ ಹಾಗಿದೆ. ಕಾಲುಗಳು 35 ರಿಂದ 181ರವರೆಗೆ ಇರಬಹುದು. ಕಾಲುಗಳು ಸಣ್ಣವು. ಕಣ್ಣುಗಳಿಲ್ಲ. ಸ್ಪೈರಕಲುಗಳು ಪಾಶ್ರ್ವಗಳಲ್ಲಿವೆ. ಉದಾಹರಣೆಗೆ ಜಿಯೊಫೈಲಸ್.
ಬಾಹ್ಯ ಸಂಪರ್ಕಗಳು
- Chilobase, a web resource for Chilopoda taxonomy Archived 2011-04-23 ವೇಬ್ಯಾಕ್ ಮೆಷಿನ್ ನಲ್ಲಿ.
- Debunking of some centipede myths, American Tarantula Society
- Centipedes of Australia Archived 2019-08-17 ವೇಬ್ಯಾಕ್ ಮೆಷಿನ್ ನಲ್ಲಿ.
- Chilopoda Archived 2009-04-16 ವೇಬ್ಯಾಕ್ ಮೆಷಿನ್ ನಲ್ಲಿ., Tree of Life Web Project
- What do you call a centipede?
- Centipedes of North America
- Tasmanian Centipedes Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.