ಜಾರ್ಡನ್ ನದಿ
ಜಾರ್ಡನ್ ನದಿಯು ಪಶ್ಚಿಮ ಏಷ್ಯದ ಒಂದು ನದಿ.
ಸು.200ಮೈ.ಉದ್ದವಿರುವ ಈ ನದಿ ಸಿರಿಯದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಮೃತ್ಯು ಸಮುದ್ರವನ್ನು ಅದರ ಉತ್ತರದ ತುದಿಯಲ್ಲಿ ಸೇರುತ್ತದೆ. ಜಾರ್ಡನ್ ಎಂದರೆ ಇಳಿದು ಬರುವ ನದಿ ಅಥವಾ ಡನ್ ಪ್ರದೇಶದ ನದಿ ಎಂದು ಅರ್ಥ. ಇದನ್ನು ನಹ್ರ್-ಅಲ್ ಉರ್ದೂನ್ (ದಂಡಿನ ನದಿ) ಎಂದೂ ಏಷ್-ಷೇರಿಯಾ (ನೀರುದಾಣ) ಎಂದೂ ಕರೆಯುತ್ತಾರೆ. ಇದು ನೈಋತ್ಯ ಏಷ್ಯ ಮೈನರ್‍ನಲ್ಲೇ ಅತ್ಯಂತ ದೊಡ್ಡ ನದಿ.
ಸಮುದ್ರಮಟ್ಟದಿಂದ 1260`ಗಳಷ್ಟು ಎತ್ತರದಲ್ಲಿ ಕಾಣಿಸಿಕೊಳ್ಳುವ ಈ ನದಿ ಸು.200ಮೈ. ಉದ್ದದ ಹರಿವಿನಲ್ಲಿ ಸಮುದ್ರಮಟ್ಟದಿಂದ 1292` ಗಳಷ್ಟು ಕೆಳಕ್ಕೆ ಇಳಿಯುತ್ತದೆ. ಈ ಕಡಿದಾದ ಪತನದ ದೃಷ್ಟಿಯಿಂದಲೂ ಇದಕ್ಕೆ ಭೌಗೋಳಿಕ ಮಹತ್ತ್ವ ದೊರೆತಿದೆ. ಹೀಗೆ ಇದು ಪೌರಾಣಿಕವಾಗಿ, ಐತಿಹಾಸಿಕವಾಗಿ ಹಾಗೂ ಭೌಗೋಳಿಕವಾಗಿ ತುಂಬ ಮಹತ್ತ್ವದ ನದೀಕಣಿವೆ.
ಅಂತಿಲಿಬನಸ್ ಪರ್ವತದ ದಕ್ಷಿಣದ ತುದಿಯಲ್ಲಿಯ ಹಲವಾರು ಮೂಲಗಳಿಂದ ಹಾಗೂ ಹರ್ಮನ್ ಪರ್ವತದ ಕೆಲವು ಮೂಲಗಳಿಂದ ಈ ನದಿ ರೂಪುಗೊಳ್ಳುತ್ತದೆ. ಹರ್ಮನ್ ಪರ್ವತ ಪ್ರದೇಶದ ಹಸ್ಬಿಯ ಎಂಬ ಹಳ್ಳಿಯ ಬಳಿಯದು ಇಂಥ ಒಂದು ಮೂಲ. ಆದ್ದರಿಂದ ಹಸ್ಬನಿ ಎಂಬ ಹೆಸರಿನಿಂದ ಇದರ ಹರಿವು ಪ್ರಾರಂಭವಾಗುತ್ತದೆ. ಇದೇ ಪರ್ವರದ ಬೇರೆ ಎರಡು ಮೂಲಗಳಿಂದ ಉಗಮಿಸುವ ನಹ್ರ್‍ಬನಿಯಾಸ್ ಮತ್ತು ನಹ್ರ್‍ಲೆದ್ದಾನ್ ಇವು ಹಸ್ಬಿಯದೊಡನೆ ಒಂದುಗೂಡುವ ಮೊದಲೇ ಸಂಗಮಿಸುತ್ತವೆ. ಬರ್ಹ್‍ಎಲ್ ಹುಲೆ ಅಥವಾ ಮೆಹೋಮ್ ಸರೋವರಕ್ಕೆ ಬಂದು ಸೇರುವ ಹೊತ್ತಿಗೆ ಇದು ಒಂದು ದೊಡ್ಡ ನದಿಯ ರೂಪ ಪಡೆದಿರುತ್ತದೆ. ಇಲ್ಲಿಂದ ಮುಂದಕ್ಕೆ ಇದನ್ನು ಜಾರ್ಡನ್ ಎಂದು ಕರೆಯುತ್ತಾರೆ. ಇದು ಮೊದಲು 80` ಅಗಲ ಮತ್ತು 4` ಆಳದ ಕಿರಿದಾದ ಪಾತ್ರದಲ್ಲಿ ಪ್ರಬಲ ಪ್ರವಾಹದ ರೂಪದಲ್ಲಿ ಬರುತ್ತದೆ. ದಕ್ಷಿಣ ದಿಕ್ಕಿನಲ್ಲಿ ಸುಮಾರು 10 ಮೈಲಿಗಳಷ್ಟು ದೂರ ಹರಿದ ಮೇಲೆ ಇದು ಗ್ಯಾಲಿಲೀ ಸಮುದ್ರ ಸೇರುತ್ತದೆ. ಹುಲೆ ಸರೋವರದಿಂದ ಗ್ಯಾಲಿಲೀ ವರೆಗಿನ 10 ಮೈ. ಹರಿವಿನಲ್ಲಿಯೇ ಈ ನದಿ ಸುಮಾರು 689`ಗಳಷ್ಟು ಪತನಕ್ಕೆ ಒಳಗಾಗಿರುತ್ತದೆ. ಈ ಸರೋವರದ ದಕ್ಷಿಣ ತುದಿಯನ್ನು ಬಿಟ್ಟು ಹೊರಟ ತರುಣದಲ್ಲೇ, ಎಡದಂಡೆಯಲ್ಲಿ, ನಹರೈಮ್ ಎಂಬಲ್ಲಿ ಯಾರ್ಮೂಕ್ ಉಪನದಿ ಜಾರ್ಡನನ್ನು ಸೇರುತ್ತದೆ. ಮುಂದೆ ಇದು 65 ಮೈ.ಗಳಷ್ಟು ದೂರದ ಫಲವತ್ತಾದ ಕಣಿವೆಯ ಮೂಲಕ ಹಾದುಹೋಗುತ್ತದೆ. ಈ ಕಣಿವೆಯಲ್ಲಿ ಎರಡು ಸ್ತರಗಳುಂಟು. ಮೇಲುಸ್ತರಕ್ಕೆ ಘೋರ್ ಎಂದೂ ಕೆಳಸ್ತರಕ್ಕೆ ಜೋರ್ ಎಂದೂ ಹೆಸರು. ಮೇಲುಸ್ತರ ಬಿರುಕುಗಲ್ಲಿನ ಪ್ರದೇಶವಾದರೆ, ಕೆಳಸ್ತರ ಒಂದು ಮೈಲಿಯಷ್ಟು ಅಗಲದ ನಿಮ್ನ ಪ್ರದೇಶ. ಬೈಬಲಿನಲ್ಲಿ ಉಲ್ಲೇಖವಾಗಿರುವ ಮೈದಾನವೇ ಘೋರ್ ಕಣಿವೆ. ಬೈಬಲಿನ ಕಾಲದಲ್ಲಿ ಈ ಕಣಿವೆಯಲ್ಲಿ ಸಿಂಹಗಳೂ ತೋಳಗಳೂ ನರಿಗಳೂ ವಾಸವಾಗಿದ್ದುವೆಂದು ಹೇಳಲಾಗಿದೆ. ಘೋರ್ ವಲಯ ಗುಡ್ಡಗಾಡಿನಿಂದ ಕೂಡಿದ ಶುಷ್ಕ ಹಗೂ ಬಂಜರುಭೂಮಿ. ಆದರೆ ಕೆಳಕ್ಕೆ ಇಳಿಯುತ್ತ ಬಂದಂತೆ ಈ ಕಣಿವೆ ಸಮತಲವುಳ್ಳದ್ದೂ ಫಲವತ್ತಾದ್ದೂ ಆಗಿ ಪರಿಣಮಿಸುತ್ತದೆ. ಜೆರ್ಕದ ಬಳಿ ಬಂದಂತೆ ವ್ಯವಸಾಯ ಚಟುವಟಿಕೆ ಹಾಗೂ ಜನಸಂದಣಿ ತೀವ್ರವಾಗುತ್ತದೆ. ಕಣಿವೆ ಪ್ರದೇಶ ಚೌಳುಮಣ್ಣಿನಿಂದ ಕೂಡಿರುವುದರಿಂದ ವಿಕ್ಷಾರೀಕರಣ ಮತ್ತು ಸಾಗುವಳಿಗೆ ಹೆಚ್ಚು ನೀರು ಅಗತ್ಯ. ಬಾಳೆ, ಕಿತ್ತಳೆ, ನಿಂಬೆ ಮೊದಲಾದ ಹಣ್ಣುಗಳು, ತರಕರಿಗಳು, ಸಕ್ಕರೆ ಬೀಟ್ ಮತ್ತು ಹತ್ತಿ ಇಲ್ಲಿಯ ಮುಖ್ಯ ಬೆಳೆಗಳು. ಇಲ್ಲಿ ನದಿಯ ನೀರು ಬಗ್ಗಡವಾಗಿದ್ದು ಕಿರುಮೀನುಗಳಿಂದ ತುಂಬಿರುವುದರಿಂದ ಇಲ್ಲಿ ಸ್ವಲ್ಪಮಟ್ಟಿಗೆ ಮೀನುಗಾರಿಕೆಯೂ ಉಂಟು.
ಗ್ಯಾಲಿಲೀ ಸಮುದ್ರದಿಂದ ಮೃತ್ಯು ಸಮುದ್ರದವರೆಗಿನ ಪಯಣದಲ್ಲಿ ಈ ನದಿಗೆ ಹಲವಾರು ಝರಿಗಳೂ ಸಾಕಷ್ಟು ದೊಡ್ಡವಾಗಿರುವ ಕೆಲವೊಂದು ಉಪನದಿಗಳೂ ಬಂದು ಸೇರುತ್ತವೆ. ಅರಬ್, ತೈಯಿಬೇಹ್, ಜಿಗ್‍ಲಾಬ್, ಜುರ್ಮ್, ಯಾಬೀಸ್, ಕುಫ್ರೆಂಜಿ, ರಾಹಿಬ್, ಜಬ್ಬೋಕ್ (ಜಿರ್ಕಾ), ಕುಫೈನ್, ನಿಮ್ರೀನ್ ಮತ್ತು ರಮೇಹ್ ಪೂರ್ವದಂಡೆಯ ಉಪನದಿಗಳು; ಜಲೂದ್, ಬೀರಾ ಮಾಲಿಹ್ ಪರಿಯಾ ಮತ್ತು ಕೆಲ್ಟ್ ಪಶ್ಚಿಮ ದಂಡೆಯಲ್ಲಿ ಬಂದು ಸೇರುವ ಉಪನದಿಗಳು. ಮೋಅಬ್ ಮೈದಾನವನ್ನು ಬಂದುಸೇರುವ ಹೊತ್ತಿಗೆ ಕಣಿವೆಯ ಗರಿಷ್ಠ ಅಗಲ 14 ಮೈ.ಆಗುತ್ತದೆ. ಈ ಮೈದಾನದ ದಕ್ಷಿಣದಲ್ಲಿ ಮೃತ್ಯು ಸಮುದ್ರವನ್ನು ಸೇರಿ ಈ ನದಿ ಅಂತಿಮವಾಗಿ ಅದೃಶ್ಯವಾಗುತ್ತದೆ.
ಈ ನದಿಯ ತೀವ್ರ ಪತನದಿಂದಾಗಿಯೂ ಇದು ಸಾಮಾನ್ಯವಾಗಿ ತೆಟ್ಟೆಯಾಗಿರುವುದರಿಂದಲೂ ಆಳವಾಗಿರುವ ಕೆಲವೆಡೆಗಳಲ್ಲಿ ಸುಳಿಗಳಿರುವುದರಿಂದಲೂ ಇದನ್ನು ಜಲಮಾರ್ಗವಾಗಿ ಬಳಸಿಕೊಳ್ಳುವುದು ಸಾಧ್ಯವಿಲ್ಲ. ಗ್ಯಾಲಿಲೀ ಸಮುದ್ರದಿಂದ ಮುಂದಕ್ಕೆ ಇದರ ಪಾತ್ರದ ಬಹುಭಾಗ ಅಂಕುಡೊಂಕು. ಪ್ರವಾಹಕಾಲವಾದ ಮಾರ್ಚ್ ತಿಂಗಳಲ್ಲಿ ಹರ್ಮನ್ ಪರ್ವತದಿಂದ ಕರಗಿ ಬರುವ ಹಿಮದಿಂದ ನದಿ ತುಂಬಿ ಹರಿಯುತ್ತದೆ. ಉಳಿದ ಕಾಲದಲ್ಲಿ ಇದು 5`ಗಿಂತ ಹೆಚ್ಚಾಗಿ ಎಲ್ಲೂ ಆಳವಾಗಿರುವುದಿಲ್ಲ. ಆಗ ನದಿಯ ಪಾತ್ರದಲ್ಲಿರುವ ಕಲ್ಲುಗಳ ಮೇಲೆ ಕಾಲಿರಿಸಿಕೊಂಡು, ಕಾಲು ಒದ್ದೆಯಾಗದಂತೆ ಈ ನದಿಯನ್ನು ದಾಟಬಹುದು.
ಎಲ್-ಹುಲೆಯಿಂದ ಸುಮಾರು 2 1/2 ಮೈ.ಗಳಷ್ಟು ದೂರದಲ್ಲಿ ಜಿಸಿರ್ ಜೇನತ್‍ಯಾಕೋಬ್ (ಯಾಕೋಬಿನ ಪುತ್ರಿಯರ ಸೇತುವೆ) ಎಂಬ ಸೇತುವೆ ಸಿಕ್ಕುತ್ತದೆ. ಇದು ಡಮಾಸ್ಕಸಿನ ಪ್ರಾಚೀನ ಹೆದ್ದಾರಿ. ಧರ್ಮಯುದ್ಧಗಳ ಅನಂತರದ ಅವಧಿಯಲ್ಲಿ ಈಜಿಪ್ಟಿನಿಂದ ಡಮಸಕ್ಕಸಿಗೆ ಹೋಗುವ ಕಾರವಾನ್ ಮಾರ್ಗದ ಅಂಗವಾಗಿ ಈ ಸೇತುವೆಯನ್ನು ಕಟ್ಟಿರಬೇಕೆಂದು ಹೇಳಲಾಗಿದೆ. ಇತರ ಮುಖ್ಯ ಕೂಡು ಹಾದಿಗಳೆಂದರೆ ಗಶೇರ್ (ರೈಲುಮಾರ್ಗ), ಎಲ್-ಮನ್‍ಷಿಯಾ (ಜಲಪರಿವಹನ ಮಾರ್ಗ) ಮತ್ತು ಅಮ್ಮಾನಿನ ಹೆದ್ದಾರಿಯಾಗಿರುವ ಅಲೆನ್ಬಿ ಸೇತುವೆ. ಆದರೆ ಅರಬ್-ಇಸ್ರೇಲ್ ಘರ್ಷಣೆಗಳಿಂದಾಗಿ ಇವುಗಳ ಬಳಕೆ ತುಂಬ ಸೀಮಿತವಾಗಿದೆ.
ಈ ನದಿಯ ನೀರಾವರಿ ಮತ್ತು ವಿದ್ಯುತ್ ಯೋಜನೆಗಳು ಸಂಬಂಧಪಟ್ಟ ರಾಷ್ಟ್ರಗಳ ನಡುವಣ ಭಿನ್ನಾಭಿಪ್ರಾಯ ಹಾಗೂ ವೈಷಮ್ಯಗಳಿಂದಾಗಿ ಕಾರ್ಯರೂಪಕ್ಕೆ ಬರದೆ ಹೋಗಿವೆ. ಈ ಮಧ್ಯೆ ಇಸ್ರೇಲು ಏಕಪಕ್ಷೀಯವಾಗಿ ಈ ನದಿಯ ನೀರಿನ ಬಳಕೆಗೆ ಕೆಲವು ಕ್ರಮಗಳನ್ನು ಕೈಗೊಂಡಿದೆ.
ಜಾರ್ಡನ್ ನದಿ ಎಂದೂ ರಾಜಕೀಯ ಅಥವಾ ಆರ್ಥಿಕ ಮೇರೆಯಾಗಿ ಪರಿಣಾಮಕಾರಿಯಾದ ಪಾತ್ರ ನಿರ್ವಹಿಸಿಲ್ಲವೆಂದೇ ಹೇಳಬೇಕು. 1918ರಿಂದ 1948ರವರೆಗೆ ಬ್ರಿಟಿಷ್ ಕರಾರಿನ ಮೇರೆಗೆ ಇದು ಪ್ಯಾಲಸ್ಟೈನಿನ ಪೂರ್ವದ ಗಡಿಯಾಗಿತ್ತು. ಇಸ್ರೇಲ್ ಅಸ್ತಿತ್ವಕ್ಕೆ ಬಂದಮೇಲೆ ಯಾರ್ಮೂಕ್ ಸಂಗಮಸ್ಥಳದ ದಕ್ಷಿಣಕ್ಕಿರುವ ಜಾರ್ಡನ್ ನದೀಭಾಗ ಇಸ್ರೇಲಿನ ಅಧಿಪತ್ಯಕ್ಕೊಳಪಟ್ಟಿದೆ. ಇಲ್ಲಿಂದ ಉ.ಅ.32ಲಿ 22` ವರೆಗಿನ ಪ್ರದೇಶದಲ್ಲಿ ಇದು ಇಸ್ರೇಲ್ ಮತ್ತು ಜಾರ್ಡನ್‍ಗಳ ನಡುವಣ ಗಡಿಯಾಗಿ ಪರಿಣಮಿಸಿದೆ. ಇದು ಅಂತರರಾಷ್ಟ್ರೀಯ ಗಡಿಯಾಗಿ ಮಾರ್ಪಟ್ಟಿರುವುದರಿಂದಲೂ ಇದರ ಹಾಗೂ ಇದರ ಉಪನದಿಗಳ ನೀರು ಮೂರು ನಿಸ್ಸೇನೀಕೃತ ವಲಯಗಳ ಅಧಿಕಾರಕ್ಕೆ ಒಳಪಟ್ಟಿರುವುದರಿಂದಲೂ ಇದು ವಿವಾದಕ್ಕೆ ಒಳಗಾದ ನದಿಯಾಗಿ ಉಳಿದಿದೆ.
ಮತಧರ್ಮಗಳೊಂದಿಗೆ ಸಂಬಂಧ
ವಿಶ್ವದ ಅತ್ಯಂತ ಪ್ರಸಿದ್ಧ ನದಿಗಳಲ್ಲಿ ಇದೂ ಒಂದು. ಇದಕ್ಕೆ ಕಾರಣ ಇದು ಕೆಲವು ಮತಧರ್ಮಗಳೊಂದಿಗೆ ಅತ್ಯಂತ ನಿಕಟಸಂಬಂಧ ಹೊಂದಿರುವುದು ಹಾಗೂ ಇದರ ಭೌಗೋಳಿಕ ವೈಶಿಷ್ಟ್ಯ. ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಗಳಲ್ಲಿ ಈ ನದಿಯ ಹೆಸರು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತದೆ. ಇಸ್ಲಾಮ್, ಯಹೂದ್ಯ ಮತ್ತು ಕ್ರೈಸ್ತಧರ್ಮದ ಇತಿಹಾಸಗಳು ಈ ನದಿಯ ನೀರನ್ನು ಪವಿತ್ರವೆಂದೂ ಪಾಪಹಾರವೆಂದೂ ಮುಕ್ತಿಪ್ರದಾಯಕವೆಂದೂ ಭಾವಿಸಿವೆ. ಕ್ರೈಸ್ತಧರ್ಮ ಉಗಮಗೊಂಡದ್ದು ಜಾರ್ಡನ್ ನದೀ ಕಣಿವೆಯಲ್ಲಿ. ಯೆಹೂದ್ಯರ ಇತಿಹಾಸದ ಅನೇಕ ಗಮನಾರ್ಹ ಘಟನೆಗಳು ಸಂಭವಿಸಿದ್ದೂ ಇಲ್ಲೇ. ಈ ನದಿ ಹರಿದು ಹೋಗುವ ಗ್ಯಾಲಿಲೀ ಸಮುದ್ರ ಪ್ರದೇಶ ಬೈಬಲಿನಲ್ಲಿ ಉಕ್ತವಾದ ಹಲವು ಘಟನೆಗಳ ತಾಣ. ಈಸ್ಟರ್ ಹಾಗೂ ಕ್ರಿಸ್ತನ ತೋರ್ಕೆಯ (ಜನವರಿ 6) ದಿನಗಳಂದು ಬಿಳಿಯ ವಸ್ತ್ರಗಳಿಂದ ಅಲಂಕೃತರಾದ ಕ್ರೈಸ್ತ ಯಾತ್ರಿಕರು ಮೆರವಣಿಗೆಯಲ್ಲಿ ಸಾಗಿ ಈ ನದಿಯಲ್ಲಿ ಸ್ನಾನ ಮಾಡುತ್ತಾರೆ. ದೀಕ್ಷಾಧಿಕಾರಿಯಾದ ಜಾನ್ ಈ ನದಿಯಲ್ಲೇ ಏಸುಕ್ರಿಸ್ತನಿಗೆ ದೀಕ್ಷಾಸ್ನಾನ ಮಾಡಿಸಿದನೆಂದು ಹೇಳಲಾಗಿದೆ. ಈ ಜನಶ್ರುತಿಯಿಂದಾಗಿಯೇ ಕ್ರೈಸ್ತ ಯಾತ್ರಿಕರು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಧಾವಿಸುತ್ತಾರೆ. ಒಟ್ಟಿನಲ್ಲಿ ಈ ನದೀವಲಯದ ಸೀಸರಿಯಾ ಫಿಲಿಪ್ಪಿ (ತಪಸ್ಸಾಧನೆಯ ಏಕಾಂತ ಸ್ಥಳ); ಬೆತ್ ಸೈದಾ (ಉಪದೇಶ ನೀಡಿಕೆಯ ಸ್ಥಳ) ಮತ್ತು ಬೆತಬರ (ದೀಕ್ಷಾ ಸ್ಥಳ) ನಗರಗಳು ಕ್ರಿಸ್ತನ ಜೀವನದೊಂದಿಗೆ ಅಭಿನ್ನ ಸಂಬಂಧ ಹೊಂದಿದೆ. ಈ ನದೀಬಯಲಿನಲ್ಲಿ, ಅದರಲ್ಲೂ ಪೂರ್ವದ ಕಡೆ, ಕ್ರಿ.ಪೂ.ಸು.3500ರಷ್ಟು ಹಳೆಯವಾದ ಅನೇಕ ಪ್ರಾಚೀನ ನಿವೇಶನಗಳು 1930ರಲ್ಲಿ ನೆಲ್ಸನ್ ಗ್ಲೂಯೆಕ್ ನಡೆಸಿದ ಅನ್ವೇಷಣೆಗಳಿಂದ ಬೆಳಕಿಗೆ ಬಂದಿವೆ.