ಜೀಯಾಂಗ್ಸೂ
ಜೀಯಾಂಗ್ಸೂ ( Jiangsu)- ಚೀನದ ಪೂರ್ವತೀರದ ಒಂದು ಪ್ರಾಂತ್ಯ. ಉತ್ತರದಲ್ಲಿ ಷಾನ್‍ಟಂಗ್, ದಕ್ಷಿಣದಲ್ಲಿ ಜಜೀಯಾಂಗ್ ಮತ್ತು ಪಶ್ಚಿಮದಲ್ಲಿ ಆನ್‍ಹ್ವೇ ಪ್ರಾಂತ್ಯಗಳೂ ಪೂರ್ವದಲ್ಲಿ ಹಳದಿ ಸಮುದ್ರವೂ ಇದರ ಮೇರೆಗಳು. ಚೀನದ ಅತ್ಯಂತ ಚಿಕ್ಕ ಪಾಂತ್ಯಗಳಲ್ಲೊಂದಾದ ಇದರ ವಿಸ್ತೀರ್ಣ 40,927 ಚ.ಮೈ. ಆದರೆ ಇದು ಅಲ್ಲಿಯ ಅತ್ಯಂತ ಜನಸಾಂದ್ರ ಪ್ರಾಂತ್ಯಗಳಲ್ಲೊಂದು. ಜನಸಂಖ್ಯೆ 4,70,000 (1968ರ ಅಂದಾಜು). ರಾಜಧಾನಿ ನ್ಯಾನ್‍ಕಿಂಗ್.
ಭೌಗೋಲಿಕ ಮಾಹಿತಿ
ಪ್ರಾಂತ್ಯದ ನೈಋತ್ಯ ಮತ್ತು ಅತ್ಯಂತ ಉತ್ತರ ಭಾಗಗಳಲ್ಲಿ ಮಾತ್ರ ತಗ್ಗಿನ ಬೆಟ್ಟಗಳಿವೆ. ಉಳಿದ ಪ್ರದೇಶ ಯಾಂಗ್‍ಟ್ಸೀ, ಹ್ವೈ ಹೊ ಮತ್ತು ಹಳದಿ ನದಿಗಳ ಜವುಗು ನೆಲ ಮತ್ತು ಉತ್ತರ ಚೀನ ಬಯಲಿನ ಮುಂದುವರಿದ ಭಾಗ. ಇಡೀ ಕರಾವಳಿ ಪ್ರದೇಶದಲ್ಲಿ ಜನವಸತಿ ಬಹುತೇಕ ಇಲ್ಲ. ಕಡಲ ಕರೆಯಲ್ಲಿ ಹಬ್ಬಿರುವ ಮಣ್ಣು ಮತ್ತು ಮರಳಿನಿಂದಾಗಿ ಜಲಯಾನಕ್ಕೆ ಅಡಚಣೆಯುಂಟಾಗಿದೆ. ಪ್ರಾಂತ್ಯದ ಎರಡು ಮುಖ್ಯ ನಗರಗಳಾದ ಷಾಂಗ್‍ಹೈ ಮತ್ತು ನ್ಯಾನ್‍ಕಿಂಗ್ ನಡುವೆ ಸಂಪರ್ಕ ಕಲ್ಪಿಸಿರುವ ನದಿ ಯಾಂಗ್‍ಟ್ಸೀ. ಷಾಂಗ್‍ಹೈ ಈ ನದಿಯ ಮುಖಜ ಭೂಮಿಯ ಮೇಲೂ ನ್ಯಾನ್‍ಕಿಂಗ್ 240 ಕಿ.ಮೀ. ಪಶ್ಚಿಮಕ್ಕೆ ಪ್ರಾಂತ್ಯದ ಎಲ್ಲೆಯ ಮೇಲೂ ಇವೆ.
ಹಳದಿ ನದಿಯ ಹಲವು ಹಳೆಯ ಪಾತ್ರಗಳು ಉತ್ತರ ಜೀಯಾಂಗ್ಸೂವನ್ನು ಭೇದಿಸಿವೆ. 1946ರಿಂದ ಈಚೆಗೆ ಷಾಂಟಂಗಿನ ಉತ್ತರಕ್ಕೆ ಈ ನದಿಯ ಪ್ರವಾಹವನ್ನು ಬದಲಿಸಲಾಗಿದೆ. ಹಳದಿ ನದಿ ಮತ್ತು ಯಾಂಗ್‍ಟ್ಸೀ ನದಿಯ ನಡುವೆ ಇರುವ ಆನ್‍ಹ್ವೋ ಪ್ರಾಂತ್ಯದ ನೀರೆಲ್ಲ ಹ್ವೈಹೊ ನದಿಯ ಮುಖಾಂತರ ಜೀಯಾಂಗ್ಸೂಗೆ ಪಶ್ಚಿಮ ಎಲ್ಲೆಯಲ್ಲಿರುವ ಹುಂಗ್‍ಟ್ಸೀ ಹೂ ಸರೋವರ ಸೇರುತ್ತದೆ. ಹಿಂದೆ ಹೆಚ್ಚು ಪ್ರವಾಹ ಬಂದಾಗ ಹಳದಿ ನದಿ ತುಂಬಿ ಹ್ವೈಹೊ ನದಿಯನ್ನು ಸೇರಿ ಅನಂತರ ಮಹಾನಾಲೆಯ ಮುಖಾಂತರ ಯಾಂಗ್‍ಟ್ಸೀ ನದಿಯನ್ನು ಸೇರುತ್ತಿತ್ತು. 7ನೆಯ ಶತಮಾನದಲ್ಲಿ ನಿರ್ಮಿಸಿದ ಈ ನಾಲೆ ಪ್ರಾಂತ್ಯದ ಉದ್ದಕ್ಕೂ ಇದೆ. ಪ್ರಾಂತ್ಯದ ಅತ್ಯಂತ ದೊಡ್ಡ ಸರೋವರ ಟೈಹೂ. ಜೀಯಾಂಗ್ಸೂ ಪ್ರಾಂತ್ಯಕ್ಕೆ ಅನೇಕ ನದಿಗಳೂ ನಾಲೆಗಳೂ ಇವೆ. ಉತ್ತರ ಜೀಯಾಂಗ್ಸೂ ನೀರಾವರಿಯ ಮುಖ್ಯನಾಲೆ ಸು-ಪೇ. ಹುಂಗ್-ಟ್ಸಿ ಹೂನಿಂದ ಹ್ವೈಹೊ ನದಿಯ ನೀರನ್ನು ಬಳಸಿಕೊಳ್ಳಲು ಇದನ್ನು ನಿರ್ಮಿಸಲಾಯಿತು. ನದಿಗಳ ಪ್ರವಾಹವನ್ನು ನಿಯಂತ್ರಿಸಲೂ ನೀರಾವರಿಯ ಉದ್ದೇಶದಿಂದಲೂ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಸಾರಿಗೆ ಸಂಪರ್ಕ
ಷಾಂಗ್‍ಹೈನಲ್ಲಿ ಹರಿಯುವ ವಾಂಗ್ ಪೊಚಿಯಾಂಗ್‍ನ ಪ್ರವಾಹವನ್ನು ನಿಯಂತ್ರಿಸಲು ದಕ್ಷಿಣದಲ್ಲಿ ತೋಡಲಾದ 56 ಕಿ.ಮೀ. ಉದ್ದದ ಕಾಲುವೆ ದೋಣಿ ಸಂಚಾರಕ್ಕೆ ಯೋಗ್ಯ. ಟೈ ಹೂ ಸರೋವರಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ಉತ್ತರದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಸಿನ್‍ಹೈಲಿನ್ ಮತ್ತು ಸೂಚೌ ನಡುವಣ ಲುಂಗ್-ಹೈ ರೈಲುಮಾರ್ಗ ಜೀಯಾಂಗ್ಸೂವನ್ನು ಹಾದುಹೋಗುತ್ತದೆ. ಷಾಂಗ್‍ಹೈನಿಂದ ವಾಯುವ್ಯಾಭಿಮುಖವಾಗಿ ನ್ಯಾನ್‍ಕಿಂಗ್‍ಗೂ ನೈಋತ್ಯದಲ್ಲಿ ಹಾಂಗ್‍ಚೌಗೂ ರೈಲುಮಾರ್ಗಗಳಿವೆ. ಜೀಯಾಂಗ್ಸೂವಿನಲ್ಲಿ ರಸ್ತೆಗಳಿಗಿಂತ ಕಾಲುವೆಗಳು ಹೆಚ್ಚು ಪ್ರಾಮುಖ್ಯಗಳಿಸಿವೆ. ಆದರೆ ಜಲಮಾರ್ಗಗಳು ಹೆಚ್ಚಾಗಿಲ್ಲ.
ವಾಯುಗುಣ
ಹುಂಗ್-ಟ್ಸಿ ಹೂನಿಂದ ಉತ್ತರಕ್ಕೆ ಜೀಯಾಂಗ್ಸೂವಿನ ವಾಯುಗುಣ ಉತ್ತರ ಚೀನ ಬಯಲಿನ ವಾಯುಗುಣದಂತೆ. 25"-30". ಚಳಿಗಾಲ ತೀವ್ರ. ಉತ್ತರ ದಕ್ಷಿಣ ಚೀನಗಳ ವಾಯುಗುಣಗಳನ್ನು ಸ್ಥೂಲವಾಗಿ ವಿಭಾಗಿಸುವ ರೇಖೆ ಹ್ವೈ ಹೊ ನದಿ. ಕೆಳ ಯಾಂಗ್‍ಟ್ಸೀ ನದಿಯ ಪ್ರದೇಶದಲ್ಲಿ ಮಳೆ 42"-45". ಜನವರಿಯ ಸರಾಸರಿ ಉಷ್ಣತೆ 1.0ಚ.-1.70 ಚ. ಇಡೀ ಪ್ರಾಂತ್ಯದಲ್ಲಿ ಬೇಸಗೆಯಲ್ಲಿ ಹೆಚ್ಚು ಸೆಖೆ ಇರುತ್ತದೆ. ಆಗ ತೇವಾಂಶವೂ ಅಧಿಕ.
ಬೇಸಾಯ, ಕೈಗಾರಿಕೆ
ಚಳಿಗಾಲದ ಗೋದಿ, ಬೇಸಗೆ ನವಣೆ ಉತ್ತರದಲ್ಲಿ ಹೆಚ್ಚು. ಬೇಸಗೆಯ ಇತರ ಬೆಳೆಗಳೆಂದರೆ ಹತ್ತಿ, ಜೋಳ, ಮೆಕ್ಕೆಜೋಳ ಮತ್ತು ಆಲೂಗೆಡ್ಡೆ. ಕೆಳ ಯಾಂಗ್‍ಟ್ಸೀ ಬಯಲಿನಲ್ಲಿ ಚಳಿಗಾಲದಲ್ಲಿ ಗೋದಿ ಮತ್ತು ಬಾರ್ಲಿಯೂ ಬೇಸಗೆಯಲ್ಲಿ ಬತ್ತ, ಹತ್ತಿ, ಸೊಯಾಬೀನ್ಸ್ ಮತ್ತು ಉಪ್ಪುನೇರಳೆಯೂ ಬೆಳೆಯುತ್ತವೆ. ಯಾಂಗ್‍ಟ್ಸೀ ನದೀ ಮುಖಜಭೂಮಿಯಲ್ಲಿ ಹತ್ತಿ ಮುಖ್ಯ ಬೆಳೆ. ಷಾಂಗ್‍ಹೈ ಮತ್ತು ಟೈ ಸರೋವರದ ನಡುವಣ ಪ್ರದೇಶದಲ್ಲಿ ಉಪ್ಪು ನೇರಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಚೀನದ ಒಟ್ಟು ಬತ್ತ ಮತ್ತು ಗೋದಿ ಉತ್ಪಾದನೆಯಲ್ಲಿ ಸೇ.10ರಷ್ಟೂ ಹತ್ತಿಯ ಸೇ.20ರಷ್ಟೂ ಜೀಯಾಂಗ್ಸೂವಿನಲ್ಲಿ ಬೆಳೆಯುತ್ತವೆ. ಷಾಂಗ್‍ಹೈ, ವುಷೀ ಮತ್ತು ಸೂಚೌನಲ್ಲಿರುವ ರೇಷ್ಮೆ ನೂಲುವ ಕಾರ್ಖಾನೆಗಳಿಗೆ ರೇಷ್ಮೆಗೂಡುಗಳು ಇಲ್ಲಿಂದ ಒದಗುತ್ತವೆ. ಇಲ್ಲಿ ಬೆಳೆಯುವ ಹತ್ತಿ ಷಾಂಗ್‍ಹೈಯ ಹತ್ತಿಜವಳಿ ಗಿರಣಿಗಳಿಗೆ ಸರಬರಾಜಾಗುತ್ತದೆ. ಜೀಯಾಂಗ್ಸೂವಿನ ಉತ್ತರ ತೀರಪ್ರದೇಶದಲ್ಲಿ ಉಪ್ಪು ತಯಾರಿಕೆಯೇ ಮುಖ್ಯ ಕೈಗಾರಿಕೆ ಸರೋವರ, ನದಿ ಮತ್ತು ಕಾಲುವೆಗಳಲ್ಲಿ ಮೀನುಗಾರಿಕೆಯುಂಟು. ಯಾಂಗ್‍ಟ್ಸೀಯ ಉತ್ತರಕ್ಕೆ ಹಂದಿಗಳನ್ನೂ ದನಕರುಗಳನ್ನೂ ಬಾತುಕೋಳಿಗಳನ್ನೂ ಸಾಕುತ್ತಾರೆ.
ನದಿಯ ಪ್ರವಾಹದಲ್ಲಿ ಕೊಚ್ಚಿ ಬಂದ ಮೆಕ್ಕಲು ಮಣ್ಣಿನಿಂದ ಈ ಪ್ರದೇಶ ಕೂಡಿರುವುದರಿಂದ ಇಲ್ಲಿಯ ಖನಿಜ ಸಂಪತ್ತು ಹೆಚ್ಚಿಲ್ಲ. ಆದರೂ ಸನ್ನಿವೇಶ ಮಹತ್ತ್ವದಿಂದಾಗಿ ಚೀನದ ಅರ್ಧಕ್ಕೂ ಹೆಚ್ಚಿನ ವಾಣಿಜ್ಯ ಈ ಪ್ರಾಂತ್ಯದ ಕೈಯಲ್ಲಿದೆ. ಇದು ಕೈಗಾರಿಕಾಕ್ಷೇತ್ರದ ಕೇಂದ್ರವಾಗಿದೆ.
ನಗರಗಳು
ಜೀಯಾಂಹ್ಸೂವಿನಲ್ಲಿ ಅನೇಕ ದೊಡ್ಡ ನಗರಗಳುಂಟು. ಷಾಂಗ್‍ಹೈ ರಾಜಕೀಯವಾಗಿ ಜೀಯಾಂಗ್ಸೂವಿನಿಂದ ಪ್ರತ್ಯೇಕವಾಗಿರುವ ನಗರ. ಜೀಯಾಂಗ್ಸೂವಿನ ರಾಜಧಾನಿ ನ್ಯಾನ್‍ಕಿಂಗ್. ಇತರ ಮುಖ್ಯ ನಗರಗಳು ಸೂಚೌ, ವೂಷೀ ಮತ್ತು ಚಾಂಗ್‍ಚೌ. ಈ ನಗರಗಳು ಯಾಂಗ್‍ಟ್ಸೀ ನದಿಯ ದಕ್ಷಿಣಕ್ಕಿವೆ ಮತ್ತು ನ್ಯಾನ್‍ಕಿಂಗ್-ಷಾಂಗ್‍ಹೈ ರೈಲುಮಾರ್ಗದ ಮೇಲಿವೆ. ಯಾಂಗ್‍ಚೌ, ಚೆನ್‍ಚಿಯಾಂಗ್ ಇವು ಯಾಂಗ್‍ಟ್ಸೀ ನದಿಯ ಉತ್ತರ ದಕ್ಷಿಣಗಳ ಮಹಾದ್ವಾರಗಳಂತಿವೆ.
ಇತಿಹಾಸ
ಐತಿಹಾಸಿಕವಾಗಿ ಈ ಪ್ರಾಂತ್ಯ ಪ್ರಾಮುಖ್ಯ ಪಡೆದಿದೆ. ಪ್ರಾಚೀನ ಕಾಲದಲ್ಲಿ ಇದು ವೂ ಮತ್ತು ಚೌ ಸಾಮ್ರಾಜ್ಯಗಳ ಭಾಗವಾಗಿತ್ತು. ವೂ ಸಾಮ್ರಾಜ್ಯದ ಅನಂತರದ ರಾಜವಂಶಗಳ ಕಾಲದಲ್ಲಿ ಈ ಪ್ರದೇಶ ದೊಡ್ಡ ಪ್ರಾಂತ್ಯಗಳ ಭಾಗವಾಗಿತ್ತು. 1667ರ ವರೆಗೆ ಇದಕ್ಕೆ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನ ಇರಲಿಲ್ಲ. ನ್ಯಾನ್ ಕಿಂಗ್ ಆರು ರಾಜವಂಶಗಳ ಕಾಲದಲ್ಲೇ ರಾಷ್ಟ್ರೀಯ ಸರ್ಕಾರದ ಕೇಂದ್ರವಾಗಿತ್ತು. 1368ರಲ್ಲಿ ಇದು ಮಿಂಗ್ ಚಕ್ರಾಧಿಪತ್ಯದ ರಾಜಧಾನಿಯಾಯಿತು. ತಾತ್ಕಾಲಿಕವಾಗಿ 1911ರಲ್ಲೂ ಮತ್ತೆ 1928-37 ಮತ್ತು 1945-49ರಲ್ಲೂ ಇದು ರಾಷ್ಟ್ರೀಯ ರಾಜಧಾನಿಯಾಗಿತ್ತು. 1949ರಲ್ಲಿ ಕಮ್ಯೂನಿಸ್ಟರರು ಚೀನದ ರಾಜಧಾನಿಯನ್ನು ನ್ಯಾನ್‍ಕಿಂಗ್‍ನಿಂದ ಪೀಕಿಂಗಿಗೆ ಬದಲಾಯಿಸಿದರು. ಪ್ರಾಂತೀಯ ಕೇಂದ್ರ ಚೆನ್‍ಚಿಯಾಂಗ್‍ನಿಂದ ನ್ಯಾನ್‍ಕಿಂಗ್‍ಗೆ ಬದಲಾಯಿತು. ಯಾಂಗ್‍ಟ್ಸೀಯ ಉತ್ತರಕ್ಕೆ ಮ್ಯಾಂಡರಿನ್ ಭಾಷೆಯೂ ಯಾಂಗ್‍ಟ್ಸೀಗೆ ದಕ್ಷಿಣದಲ್ಲಿ ನ್ಯಾನ್‍ಕಿಂಗ್ ಪ್ರದೇಶದಲ್ಲಿ ದಕ್ಷಿಣ ಮ್ಯಾಂಡರಿನ್ ಉಪಭಾಷೆಯೂ ಪೂರ್ವದ ಮಾವೊ ಬೆಟ್ಟಗಳಿಂದ ಕರಾವಳಿಯ ವರೆಗೆ ಸಾಂಗ್-ಚಿಯಾಂಗ್ ಅಥವಾ ವೂ ಉಪಭಾಷೆಯೂ ಬಳಕೆಯಲ್ಲಿದೆ.
