ಜುನ್ನರ್

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಜುನ್ನರ್ - ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರ ಇರುವ ಇತಿಹಾಸಪ್ರಸಿದ್ಧ ಸ್ಥಳ.

ಇದು ಹಿಂದೆ ದುರ್ಗಮವಾದ ಅರಣ್ಯಪ್ರದೇಶವಾಗಿತ್ತು. ಇದನ್ನು ಸುತ್ತುವರಿದ ಬೆಟ್ಟಗಳಲ್ಲಿ ಕ್ರಿ.ಪೂ. ಎರಡನೆಯ ಶತಮಾನದಷ್ಟು ಪ್ರಾಚೀನವಾದ ಬೌದ್ಧ ಗುಹೆಗಳಿವೆ. ನಾಸಿಕ, ಕಾರ್ಲೆ, ಭಾಜಾ, ಬೇದ್‍ಸಾ, ಕನ್ಹೇರಿ, ಕುದಾ ಮುಂತಾದ ಪಶ್ಚಿಮ ಭಾರತದ ಪ್ರಸಿದ್ಧ ಗುಹಾಂತರ ದೇವಾಲಯಗಳ ವಿಹಾರಗಳ ಸಮೂಹದಲ್ಲಿ ಜುನ್ನರ್ ಸಹ ಒಂದು. ಇದರ ಸುತ್ತ ಸುಮಾರು ನೂರಮುವತ್ತಕ್ಕೂ ಹೆಚ್ಚಿನ ಗುಹೆಗಳಿವೆ. ಅವನ್ನು 1 ಶಿವನೇರ್ ಬೆಟ್ಟದ ಗುಹೆಗಳು: 2 ತುಳಜಾ ಲೇನಾ ಗುಹೆಗಳು: 3 ಗಣೇಶ ಲೇನಾ ಗುಹೆಗಳು: 4 ಮನ್‍ಮೋಡಿ ಬೆಟ್ಟದ ಗುಹೆಗಳು: 5 ಬೆಟ್ಟದುಬ್ಬಿನ ಗುಹೆಗಳು-ಎಂದು ವಿಂಗಡಿಸಲಾಗಿದೆ. ಪ್ರಾಚೀನ ಭಾರತೀಯರೇ ಅಲ್ಲದೆ ಯವನರು ಸಹ ಈ ಗುಹೆಗಳನ್ನು ನಿರ್ಮಿಸಿದರೆಂದು ಇಲ್ಲಿರುವ ಅರೆಭಗ್ನ ಶಿಲಾಲೇಖಗಳು ಸಾರುತ್ತಿವೆ. ಇವುಗಳಲ್ಲಿ ಲಬ್ಧವಿರುವ ಮೂವತ್ತನಾಲ್ಕು ಲೇಖನಗಳನ್ನು ಜಾರ್ಜ್ ಬೂಲರ್‍ರವರು ತಮ್ಮ ಪಶ್ಚಿಮ ಭಾರತದ ಪುರಾತತ್ವ ಸರ್ವೇಕ್ಷಣ (ಭಾಗ 3) ಎಂಬ ಗ್ರಂಥದಲ್ಲಿ ಸಂಪಾದಿಸಿದ್ದಾರೆ. ಗುಹಾಂತರ್ದೇವಾಲಯಗಳು ಎಂಬ ಗ್ರಂಥ ಇಲ್ಲಿಯ ಜುನ್ನರ್ ಗುಹೆಗಳ ವಿವರವಾದ ವರ್ಣನೆಯನ್ನೀಯುತ್ತದೆ. ಇಲ್ಲಿರುವ ಗುಹೆಗಳೆಲ್ಲ ಬೌದ್ಧಮತಕ್ಕೆ ಸಂಬಂಧಿಸಿದುವು. ಇವುಗಳಲ್ಲಿ ಚೈತ್ಯಗಳು, ವಿಹಾರಗಳು ಮತ್ತು ಭಿಕ್ಷುಗೃಹಗಳು ಸೇರಿವೆ. ಅತಿಚಿಕ್ಕ ಭಿಕ್ಷುಗೃಹ ಸು. 7 ಅಡಿ ಚಚ್ಚೌಕವಾಗಿದೆ. ದೊಡ್ಡವಿಹಾರ ಸು. 20 ಅಡಿ ಚಚ್ಚೌಕವಾಗಿದೆ. ಕಲೆ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಒಂದೆರಡು ಗುಹೆಗಳು ಮಾತ್ರ ಶ್ಲಾಘನೀಯವಾಗಿವೆ. ಕೆಲವಂತೂ ಭಗ್ನವಾದ ಬಂಡೆಗಳಿಂದ ಮುಚ್ಚಿಹೋಗಿವೆ. ಕೆಲವಕ್ಕೆ ಪ್ರವೇಶವೇ ದುಸ್ಸಾಧ್ಯವಾಗಿದೆ.