ದುಗ್ಧರಸ ಗ್ರಂಥಿಗಳ ಊತ
ದುಗ್ಧರಸ ಗ್ರಂಥಿಗಳ ಊತವು ದೇಹದ ಯಾವುದೇ ಭಾಗದಲ್ಲಿ ವಿಷಾಣು ಸೋಂಕು ಉಂಟಾದಾಗ ಅಲ್ಲಿಗೆ ಸಂಬಂಧಿಸಿದ ದುಗ್ಧರಸಗ್ರಂಥಿಗಳಿಗೆ ಸೋಂಕು ಹರಡಿ ಅವು ಊದಿಕೊಂಡು ನೋವಾಗುವ ಸ್ಥಿತಿ ; ಪರ್ಯಾಯನಾಮ ಗಳಲೆ ಅಥವಾ ಹದಗಡಲೆ (ಲಿಂಫ್‍ಆಡಿನೈಟಿಸ್ ; ಎನ್‍ಲಾಜ್ರ್ಡ್ ಲಿಂಫ್ ನೋಡ್ಸ್). ಸೋಂಕು ಪ್ರಾಥಮಿಕವಾಗಿ ಗ್ರಂಥಿಯಲ್ಲೆ ಉಂಟಾಗಿ ಗಳಲೆ ಕಟ್ಟಿಕೊಳ್ಳಬಹುದು. ಗ್ರಂಥಿಯ ಗಾತ್ರ ವೃದ್ದಿಯಾಗುವುದಲ್ಲದೆ ಅದರ ಘನತ್ವದಲ್ಲಿ ಸ್ವಲ್ಪ ಮಾರ್ಪಾಡಾಗಿ ಅದು ಗಡಸು ಕೂಡ ಆಗುವುದು. ಇದರ ವಿಷಾಣುಗಳ ಉತ್ಪನ್ನಗಳ ಮತ್ತು ಸ್ವಂತಃ ವಿಷಾಣುಗಳು ಗ್ರಂಥಿಯಲ್ಲಿ ಸಿಕ್ಕಿಹಾಕಿಕೊಳ್ಳುವುದರ ಪರಿಣಾಮ. ಆರೋಗ್ಯವಾಗಿರುವ ಗ್ರಂಥಿ ಸಾಮಾನ್ಯವಾಗಿ ಅವ್ಯಕ್ತವಾಗಿರುವುದಕ್ಕೂ ಗಳಲೆ ಸ್ಪರ್ಶವೇದ್ಯವಾಗಿರುವದಕ್ಕೂ ಇದೇ ಕಾರಣ. ಚಿಕ್ಕವರು, ದೊಡ್ಡವರು ಗಂಡಸರು, ಹೆಂಗಸರು ಎನ್ನದೆ ಎಲ್ಲರಲ್ಲೂ ಗಳಲೆ ಕಂಡು ಬರಬಹುದು. ಪ್ರತಿ ದುಗ್ಧರಸಗ್ರಂಥಿ ಅಥವಾ ಗ್ರಂಥಿ ಸಮೂಹಕ್ಕೂ ನಿರ್ದಿಷ್ಟ ದುಗ್ಧರಸಾನಯನ ಕ್ಷೇತ್ರ (ಲಿಂಫ್ ಡ್ರೇಯ್ನೇಜ್ ಏರಿಯ) ಉಂಟು. ಆ ಕ್ಷೇತ್ರದಲ್ಲಿ ವಿಷಾಣುಗಳ, ತತ್ರಾಪಿ ಸರಪಣಿ ಹಾಗೂ ಗುತ್ತಿ ಗುಂಪಿನ ಏಕಾಣುಗಳ (ಸ್ಟ್ರೆಪ್ಟೊಕಾಕೈ ಮತ್ತು ಸ್ಟಫಿಲೋಕಾಕೈ) ಸೋಂಕು ಉಂಟಾದಾಗ ಆ ಗ್ರಂಥಿ ಅಥವಾ ಗ್ರಂಥಿಗಳು ಮಾತ್ರ ಊತಗೊಂಡು ನೋಯುತ್ತವೆ. ಇದು ಕೂರಾದ (ಅಕ್ಯೂಟ್) ಸ್ಥಿತಿ. ಈ ಸ್ಥಿತಿಯ ವ್ಯಕ್ತಿಗೆ ಜ್ವರ ದೇಹಾಲಸ್ಯಗಳೂ ಉಂಟಾಗಬಹುದು. ಜರ್ಮನ್ ದಡಾರ ಕೆಂಡಾಮಂಡಲ ಜ್ವರ, ಡಿಫ್ತಿರಿಯ ಮುಂತಾದವುಗಳ ಕಾರಕಗಳು ಸಾಮಾನ್ಯವಾಗಿ ಹೀಗೆ ಮಾಡುತ್ತವೆ. ಸೂಕ್ತ ಚಿಕಿತ್ಸೆಯಿಂದ ಮೂಲಸೋಂಕನ್ನು ವಾಸಿ ಮಾಡಿದರೆ ಗಳಲೆಯೂ ಇಂಗಿಹೋಗುವುದು ನಿಯಮ. ಮಕ್ಕಳ ಗಂಟಲು ನೋವಿನಲ್ಲಿ, ಗಂಟಲಿನಲ್ಲಿ ನೋಯುತ್ತಿರುವ ಗಳಲೆ ಗಂಟಲು ನೋವು ವಾಸಿಯಾದೊಡನೆಯೇ ಮಾಯವಾಗುವುದು ಎಲ್ಲರಿಗೂ ಗೊತ್ತು. ತೀವ್ರ ಸೋಂಕುಗಳಲ್ಲಿ ಗಳಲೆ ಕೀವು ತುಂಬಿ ಒಡೆದು ಆ ಸ್ಥಳದಲ್ಲಿ ವ್ರಣವಾಗಬಹುದು. ಪ್ಲೇಗಿನ ಗೆಡ್ಡೆ ಈ ಮಾದರಿಯದು. ಇಂಥ ಸ್ಥಿತಿಗಳಿಗೆ ಸೂಕ್ತ ಪ್ರತಿಜೈವಿಕ (ಆ್ಯಂಟಿಬಯೊಟಿಕ್ಸ್) ಬಳಕೆ ಮೊದಲಾದ ಕಟ್ಟು ನಿಟ್ಟು ಚಿಕಿತ್ಸೆ ಅಗತ್ಯ. ಚಿಕಿತ್ಸೆ ಸಾಲದಿದ್ದರೆ ಇಲ್ಲವೇ ಸೋಂಕು ಮರುಕಳಿಸುತ್ತಿದ್ದರೆ ಗಳಲೆ ಧೀರ್ಘಕಾಲಿಕವಾಗಿಯೇ ಇರಬಹುದು. ಉದಾಹರಣೆಗೆ ಗಂಟಲುನೋವು, ತಲೆಯಲ್ಲಿ ಹೇನಿನ ವ್ರಣ, ಕೀವುಯುಕ್ತ ಒಸಡು, ಸೋರಿ ಕಿವಿ ಇತ್ಯಾದಿ. ಇವು ಆರ್ಥಿಕ ಹಾಗೂ ಸಾಮಾಜಿಕ ಕೆಳದರ್ಜೆ ಜನರಲ್ಲಿ ಹೆಚ್ಚು ಸಾಮಾನ್ಯವಾದುದರಿಂದ ಧೀರ್ಘಕಾಲಿಕ ಗಳಲೆ (ಕ್ರಾನಿಕ್ ಲಿಂಫಡಿನೈಟಿಸ್) ಇಂಥ ಜನರಲ್ಲಿ ಕಂಡುಬರುವುದು ಮಾಮೂಲು.
ದೀರ್ಘಕಾಲಿಕ ಗಳಲೆಗಳಲ್ಲಿ ಅತ್ಯಂತ ಸಾಮಾನ್ಯ ಹಾಗೂ ಪ್ರಮುಖವಾದದ್ದು ಕ್ಷಯಾಣುಗಳ ಸೋಂಕಿನಿಂದ ಉಂಟಾದದ್ದು. ತೆರೆದ ಕ್ಷಯರೋಗ (ಓಪನ್ ಟ್ಯೂಬರ್‍ಕ್ಯುಲೋಸಿಸ್) ಇರುವ ರೋಗಿಗಳ ಒಡನಾಟದಿಂದ ಸೋಂಕನ್ನು ಅಂಟಿಸಿಕೊಂಡ ಮಕ್ಕಳು ಹಾಗೂ ಯೌವನಸ್ಥರಲ್ಲಿ ಇಂಥ ಗಳಲೆಗಳು ಸಾಧಾರಣವಾಗಿ ಕಂಡುಬರುವವು. ಅನಾರೋಗ್ಯ ಸನ್ನಿವೇಶಗಳಲ್ಲಿಯೇ ವಾಸಿಸುವ ಜನ ಹೆಚ್ಚಾಗಿರುವ ಭಾರತದಲ್ಲಿ ಈ ರೋಗಸ್ಥಿತಿ ಬಹು ಸಾಮಾನ್ಯ. ಗಳಲೆ ಕಟ್ಟಿಕೊಳ್ಳುವ ಸ್ಥಳ ಸಾಧಾರಣವಾಗಿ ಹೆಕ್ಕತ್ತು. ಹಲವಾರು ಗಳಲೆಗಳು ಜಡೆಕಟ್ಟಿಕೊಂಡಿರುವುದು ಈ ರೋಗಸ್ಥಿತಿಯ ವೈಶಿಷ್ಟ್ಯ. ಆದ್ಯ ಸೋಂಕು ಅವ್ಯಕ್ತವಾಗಿ ಗಂಟಲಿನಲ್ಲಿ ಇರುತ್ತದೆ. ಸೋಂಕು ತಗುಲಿದ ವ್ಯಕ್ತಿಯ ರೋಗನಿರೋಧಕ ಸಾಮಥ್ರ್ಯಕಡಿಮೆಯಾಗಿದ್ದರೆ ಗಳಲೆಗಳಲ್ಲಿರುವ ರವೆಯಂಥ ಕಣಗಳು ಹಾಲುಖೋವದಂತಾಗಿ ದ್ರವೀಕರಿಸಿ ಒಂದು ತರ ಕೀವು ತುಂಬಿಕೊಳ್ಳುತ್ತದೆ. ಆದರೆ ಪ್ಲೇಗಿನ ಗಡ್ಡೆಯಂತೆ ಈ ಗಂಟುಗಳು ಬೆಚ್ಚಗಿರುವುದಿಲ್ಲ. ನೋಯುವುದೂ ಅಷ್ಟಷ್ಟೆ. ಗಳಲೆ ನೆರೆ ಊತಕಗಳಲ್ಲಿ 2-3 ಕಡೆ ದಾರಿ ಮಾಡಿಕೊಂಡು ಹರಡುತ್ತ ಹೊರಕ್ಕೆ ಒಡೆಯುತ್ತದೆ. ಒಡೆದ ಮೇಲೆ ವ್ರಣವಾಗುವುದಿಲ್ಲ ಬದಲು ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಆಳವಾದ ಕುಳಿಗಳಂತಾಗಿ ಅವುಗಳಿಂದ ಕೀವು ಬಹುಕಾಲ ಒಸರುತ್ತಿರುತ್ತದೆ. ಆದ್ಯ ಸೋಂಕು ಪುಪ್ಪಸಗಳಲ್ಲಿದ್ದರೆ ಸೋಂಕು ವ್ಯಕ್ತವಾಗಿಯೇ ಇರುವುದಲ್ಲದೆ ಎದೆ ಮಧ್ಯದಲ್ಲಿರುವ ದುಗ್ಧರಸಗ್ರಂಥಿಗಳು ಊತಗೊಳ್ಳುತ್ತವೆ. ಮಕ್ಕಳಲ್ಲಿ ಮೂಲ ಪುಪ್ಪಸಕ್ಷಯಕ್ಕಿಂತ ಈ ಗ್ರಂಥಿಗಳ ರೋಗದ ಪರಿಣಾಮಗಳೇ ಹೆಚ್ಚು ತೀವ್ರವಾಗಿರಬಹುದು. ಗ್ರಂಥಿಗಳಲ್ಲಿ ಹಾಲುಖೋವದಂಥ ಮಂದ ಕೀವು ತುಂಬಿದ ಮೇಲೆ ಅನೇಕ ವೇಳೆ ಅದರೊಡನೆ ಕ್ಯಾಲ್ಸಿಯಮ್ ಲವಣಗಳ ಸಂಯೋಗದಿಂದ ಗ್ರಂಥಿಗಳು ಕಲ್ಲಿನಂತಾಗಬಹುದು. ಕೆಲವು ವೇಳೆ ಮೇಲೆ ವಿವರಿಸಿರುವಂತೆ ಕೀವು ದಾರಿಮಾಡಿಕೊಂಡು ಎದೆ ಅಥವಾ ಬೆನ್ನಿನಲ್ಲಿ 2-3 ರಂಧ್ರಗಳಿಂದ ಊರುತ್ತಿರಬಹುದು. ಜೀವಂತ ಕ್ಷಯಾಣುಗಳಿರುವ ಆಹಾರಸೇವನೆಯಿಂದ ಕ್ಷಯದ ಆದ್ಯ ಸೋಂಕು ಕರುಳಿನಲ್ಲಿ ಕಂಡು ಬರುತ್ತದೆ. ಮೂಲಕ್ಷಯರೋಗ ಪುಪ್ಪಸದಲ್ಲಿದ್ದರೂ ಕಫವನ್ನು ನುಂಗುವುದರಿಂದ ಸೂಕ್ಷ್ಮಜೀವಿಗಳು ಕರುಳನ್ನು ಸೇರಿ ಕರುಳಿನ ಕ್ಷಯವನ್ನೂ ಉಂಟುಮಾಡಬಹುದು. ಯಾವುದೇ ಕಾರಣದಿಂದ ಕರುಳಿನ ಕ್ಷಯ ಬಂದರೂ ಕರುಳಿನ ಪೊರೆಯಲ್ಲಿರುವ ದುಗ್ಧರಸ ಗ್ರಂಥಿಗಳು (ಮಿಸೆಂಟೀರಿಯಲ್ ಲಿಂಫ ನೋಡ್ಸ್) ಊತಗೊಳ್ಳುವುದು ಸಹಜ. ಅಪರೂಪವಲ್ಲದ ಈ ಸ್ಥಿತಿ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಾರಣ, ಕ್ಷಯರೋಗ ಪೀಡಿತರಾದ ಹಸುಗಳ ಹಾಲನ್ನು ಮಕ್ಕಳು ಹೆಚ್ಚಾಗಿ ಸೇವಿಸುವುದು. [೨]
ನೋಡಿ
ಬಾಹ್ಯ ಸಂಪರ್ಕಗಳು
ಉಲ್ಲೇಖ
- ↑ Henrikson, Ray C.; Mazurkiewicz, Joseph E. (1 January 1997). Histology. Lippincott Williams & Wilkins
- ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದುಗ್ಧರಸ ಗ್ರಂಥಿಗಳ ಊತ