ನರ್ಮದಾ ನದಿ

ಜಬಲ್‌ಪುರದ ಬಳಿ ನರ್ಮದಾ ನದಿ

ನರ್ಮದಾ ನದಿ ಮಧ್ಯ ಭಾರತದಲ್ಲಿ ಹರಿಯುವ ಒಂದು ನದಿ. ಇದು ಮದ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಮೂಲಕ ಹರಿದು ಅರಬ್ಬಿ ಸಮುದ್ರ ಸೇರುವುದು. ಇದು ಭಾರತ ಉಪಖಂಡದ ಐದನೆಯ ಅತಿ ದೊಡ್ಡ ನದಿ ಸಹ ಆಗಿದೆ. ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಸಾಂಪ್ರದಾಯಿಕ ಎಲ್ಲೆ ಎಂದು ಪರಿಗಣಿಸಲ್ಪಡುತ್ತದೆ. ಮಧ್ಯ ಪ್ರದೇಶ ರಾಜ್ಯದ ಶಾಹ್‌ದೋಲ್ ಜಿಲ್ಲೆಯ ಅಮರಕಂಟಕ ಬೆಟ್ಟದ ನರ್ಮದಾ ಕುಂಡ ಎಂದು ಹೆಸರಾಗಿರುವ ಒಂದು ಸಣ್ಣ ಕುಂಡದಿಂದ ಉಗಮಿಸುವ ನರ್ಮದಾ ನದಿ ಮುಂದೆ ಸುಮಾರು ೧೩೧೨ ಕಿ. ಮೀ. ಗಳಷ್ಟು ದೂರ ಪಶ್ಚಿಮಾಭಿಮುಖವಾಗಿ ಹರಿದು ಗುಜರಾತ್ ರಾಜ್ಯದ ಭರೂಚ್ ನಗರದ ಬಳಿ ಖಂಬಾತ್ ಕೊಲ್ಲಿ (ಅರಬ್ಬಿ ಸಮುದ್ರ)ಯನ್ನು ಸೇರುತ್ತದೆ. ವಿಂಧ್ಯ ಮತ್ತು ಸಾತ್ಪುರ ಪರ್ವತಶ್ರೇಣಿಗಳ ನಡುವಿನ ಬಿರುಕು ಕಣಿವೆಯಲ್ಲಿ ಹರಿಯುವ ನರ್ಮದಾ ನದಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ವಿಶಾಲ ಪ್ರದೇಶಗಳಿಗೆ ಮುಖ್ಯ ನೀರಿನಾಸರೆಯಾಗಿದೆ. ತನ್ನ ಪಾತ್ರದ ಹಲವು ಕಡೆ ನರ್ಮದಾ ನದಿಯು ಅಂತರ ರಾಜ್ಯ ಗಡಿ ಸಹ ಆಗಿದೆ.

ನದಿಯ ಉಗಮಸ್ಥಾನವಾದ ನರ್ಮದಾ ಕುಂಡ ಮತ್ತು ಅಲ್ಲಿನ ಮಂದಿರ
ಓಂಕಾರೇಶ್ವರದಲ್ಲಿ ನದಿಯ ಒಂದು ನೋಟ

ನರ್ಮದಾ ನದಿಯು ಹಿಂದೂ ಸಂಸ್ಕೃತಿಯಲ್ಲಿ ಅತಿ ಪವಿತ್ರಸ್ಥಾನವನ್ನು ಹೊಂದಿದೆ. ಭಾರತದ ಸಪ್ತ ಪುಣ್ಯನದಿಗಳಲ್ಲಿ ನರ್ಮದಾ ಸಹ ಒಂದು. ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ಸಿಂಧೂ ಮತ್ತು ಕಾವೇರಿ ಉಳಿದ ಪವಿತ್ರ ನದಿಗಳು. ನರ್ಮದಾ ನದಿಯ ಪ್ರದಕ್ಷಿಣೆ ಒಂದು ಅತಿ ಪಾವನಕಾಯಕವೆದು ಪರಿಗಣಿಸಲ್ಪಟ್ಟಿದೆ. ಹಿಂದೂ ಶ್ರದ್ಧಾಳುಗಳು ಹಾಗೂ ಸಾಧು ಸಂತರು ನರ್ಮದೆಯ ಸಾಗರಮುಖದಲ್ಲಿನ ಭರೂಚ್ ನಗರದಿಂದ ಕಾಲ್ನಡಿಗೆಯಲ್ಲಿ ನದಿಯ ದಂಡೆಯಲ್ಲಿ ಚಲಿಸಿ ನರ್ಮದೆಯ ಉಗಮಸ್ಥಾನವಾದ ಅಮರಕಂಟಕವನ್ನು ತಲುಪುವರು. ಅಲ್ಲಿ ನದಿಯನ್ನು ಹಾದು ಮತ್ತೆ ಭರೂಚ್ ವರೆಗೆ ನದಿಯ ಇನ್ನೊಂದು ತೀರದಲ್ಲಿ ನಡೆದು ಬರುವರು. ಸುಮಾರು ೨೬೦೦ ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗುವ ಈ ತೀರ್ಥಯಾತ್ರೆ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ.

ಬಾಹ್ಯ ಸಂಪರ್ಕಕೊಂಡಿಗಳು