ಬೆನ್ ಜಾನ್ಸನ್ (ಸಾಹಿತಿ)

Ben Jonson
Ben Jonson (c. 1617), by Abraham Blyenberch; oil on canvas painting at the National Portrait Gallery, London
ಜನನc. 11 June 1572
Westminster, London, England
ಮರಣ6 ಆಗಸ್ಟ್ 1637(1637-08-06) (aged 65)
England
ವೃತ್ತಿDramatist, poet and actor
ರಾಷ್ಟ್ರೀಯತೆEnglish

ಪ್ರಭಾವಗಳು
  • William Camden

ಪ್ರಭಾವಿತರು
  • Henry Vaughan
Title page of The Workes of Beniamin Ionson (1616), the first folio publication that included stage plays
"Epitaph for Cecilia Bulstrode" manuscript, 1609
A 19th century engraving illustrating Thomas Fuller's story of Shakespeare and Jonson debating at the "Mermaid Tavern".

ಬೆನ್ ಜಾನ್ಸನ್ (ಕ್ರಿ. ಶ. 11 ಜೂನ್ 1572 – 6 ಆಗಸ್ಟ್ 1637) ಹದಿನೇಳನೇ ಶತಮಾನದ ಇಂಗ್ಲಿಷ್ ನಾಟಕಕಾರ, ಕವಿ ಹಾಗೂ ವಿಮರ್ಶಕ.

ಆರಂಭಿಕ ಜೀವನ

ಹುಟ್ಟಿದ್ದು ವೆಸ್ಟ್‍ಮಿನ್‍ಸ್ಟರ್‍ನಲ್ಲಿ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಈತ ವೆಸ್ಟ್‍ಮಿನಿಸ್ಟರ್ ಶಾಲೆಗೆ ಸೇರಿ ಅಲ್ಲಿ ಉಪಾಧ್ಯಾಯನಾಗಿದ್ದ ಪ್ರಸಿದ್ಧ ಇತಿಹಾಸಕಾರ ವಿಲಿಯಂ ಕ್ಯಾಮ್‍ಡನ್ನನ ಪ್ರೀತಿಯ ಶಿಷ್ಯನಾಗಿ ವ್ಯಾಸಂಗ ಮಾಡಿದ. ಏತನ್ಮಧ್ಯೆ, ತಾಯಿ ಒಬ್ಬ ಗಾರೆಯವನನ್ನು ಮರುಮದುವೆಯಾದುದರಿಂದ ಕೆಲಕಾಲ ಈತ ಗಾರೆ ಉದ್ಯೋಗವನ್ನೂ ಮಾಡಿದ. ಆದರೆ, ಆ ಕೆಲಸದಲ್ಲಿ ಮನಸ್ಸಾಗದೆ ಅಲ್ಲಿಂದ ಓಟಕಿತ್ತು ಸೈನಿಕ ಹುದ್ದೆಗೆ ಸೇರಿದ. ಕೆಲಕಾಲದ ಮೇಲೆ ಅದನ್ನು ಬಿಟ್ಟು ಇಂಗ್ಲೆಂಡಿಗೆ ಹಿಂತಿರುಗಿ ನಟ ಮತ್ತು ನಾಟಕಕಾರನಾಗಿ ರಂಗಭೂಮಿಯನ್ನು ಪ್ರವೇಶಿಸಿದ. ನಟನಾಗಿ ಅಷ್ಟಾಗಿ ಯಶಸ್ಸು ಪಡೆಯಲಿಲ್ಲ. 1594ರಲ್ಲಿ ಆನಲೂಯಿಸಳನ್ನು ಮದುವೆಯಾದ. 1598ರಲ್ಲಿ ತನ್ನ ಜೊತೆ ನಟನೊಬ್ಬನನ್ನು ಕೊಲೆ ಮಾಡಿದುದರಿಂದ ಜೈಲು ಸೇರಿ ಅಲ್ಲಿಂದ ಹೇಗೋ ಪಾರಾದ. ಇದೇ ಸಮಯದಲ್ಲಿ ಕ್ಯಾತೊಲಿಕ್ ಪಂಗಡಕ್ಕೆ ಸೇರಿ 12 ವರ್ಷ ಅದರೊಳಗಿದ್ದ.

ಸಾಹಿತ್ಯಿಕ ಜೀವನ

1598ರಲ್ಲಿ ಈತನ ಮೊದಲ ನಾಟಕ ಎವ್ರಿಮ್ಯಾನ್ ಇನ್ ಹಿಸ್ ಹ್ಯೂಮರ್ ಪ್ರಕಟವಾಯಿತು. ಮುಂದೆ ಎವ್ರಿ ಮ್ಯಾನ್ ಔಟ್ ಆಫ್ ಹಿಸ್ ಹ್ಯೂಮರ್ (1599); ಸಿಂತಿಯಾಸ್ ರೆವೆಲ್ಸ್ (1600); ದಿ ಪೊಯೆಟಾಸ್ಟರ್ (1601) ನಾಟಕಗಳು ಪ್ರಕಟಗೊಂಡವು. ಇವು ಮೂರೂ ನಾಗರಿಕರು, ಆಸ್ಥಾನ ಪಂಡಿತರು ಹಾಗೂ ಕವಿಗಳನ್ನು ಕುರಿತ ವಿಡಂಬನಾತ್ಮಕ ನಾಟಕಗಳು. ಕೊನೆಯನಾಟಕ ತುಂಬ ವಿವಾದಕ್ಕೊಳಪಟ್ಟಿತು. ಈತ ಮತ್ತು ಈತನ ನಾಟಕಗಳ ವಿರುದ್ಧವಾಗಿ ಸ್ಯಾಟೈರೊಮ್ಯಾಸ್ಟಿಕ್ ಎಂಬ ವಿಡಂಬನ ನಾಟಕವೊಂದನ್ನು ತಾಮಸ್ ಡೆಕರ್ ಪ್ರಕಟಿಸಿದ. ಈ ಪ್ರಕರಣವಾದ ಮೇಲೆ ಜಾನ್ಸನ್ ವ್ಯಂಗ್ಯ ನಾಟಕ ಬರೆಯುವುದನ್ನು ನಿಲ್ಲಿಸಿ ದುರಂತ ನಾಟಕಗಳತ್ತ ತಿರುಗಿದ. ಅದರಂತೆ 1603ರಲ್ಲಿ ಸೆಜಾನಸ್ ಎಂಬ ನಾಟಕವನ್ನು ಪ್ರಕಟಿಸಿದ. ಅದು ಜನರಿಗೆ ಅಷ್ಟಾಗಿ ಹಿಡಿಸಲಿಲ್ಲ. ಅನಂತರ ಮಾರ್ಸಟನ್ ಮತ್ತು ಚಾಪ್‍ಮನ್‍ರ ಜೊತೆಗೂಡಿ ಈಸ್ಟ್ ವರ್ಡ್ ಹೊ ಪ್ರಕಟಿಸಿದ. ಸ್ಕಾಂಟ್ಲೆಂಡಿನ ಬಗ್ಗೆ ಇದರಲ್ಲಿದ್ದ ಕೆಲವು ವಿರೋಧಾಭಾಸಗಳಿಗಾಗಿ ಒಂದನೆಯ ಜೇಮ್ಸ್ ಈ ಲೇಖಕರನ್ನು ತೀವ್ರ ಆಪಾದನೆಗೊಳಪಡಿಸಿದ. ಪರಿಣಾಮವಾಗಿ ಎಲ್ಲರಿಗೂ ಸ್ವಲ್ಪ ಕಾಲ ಕಾರಾಗೃಹವಾಯಿತು. ಅನಂತರ ಜಾನ್ಸನ್ ಹಳೆಯದನ್ನು ಮರೆತು ಹೊಸ ಬಾಳ್ವೆಯನ್ನು ನಡೆಸತೊಡಗಿದ. ತನ್ನ ಗಮನವನ್ನು ಹೆಚ್ಚಾಗಿ ರಾಜಾಸ್ಥಾನದ ವಿನೋದ ನಾಟಕಗಳ (ಕೋರ್ಟ್ ಮಾಸ್ಕಸ್) ರಚನೆಯ ಕಡೆ ಹರಿಸಿದ. ಇದರಲ್ಲಿ ಪೂರ್ಣ ಯಶಸ್ವಿಯಾಗಿ ತನ್ನ ಸಮಕಾಲೀನರನ್ನೆಲ್ಲ ಹಿಂದೆ ಹಾಕಿದ. ವಾಲ್ ಪೂನ್ ಅಥವಾ ಫಾಕ್ಸ್ (1605); ಎಪಿಕೋನ್ ಅಥವಾ ದಿ ಸೈಲೆಂಟ್ ವುಮನ್ (1609) ಮತ್ತು ದಿ ಆಲ್ ಕೆಮಿಸ್ಟ್ (1610)- ಇವು ಈತನಿಗೆ ಹೆಸರು ತಂದ ಕೃತಿಗಳು. ಈತನ ಎರಡನೆಯ ಹಾಗೂ ಕೊನೆಯ ದುರಂತ ನಾಟಕ ಕ್ಯಾಟಿಲಿನ್ (1611). ಎರಡು ವರ್ಷಗಳ ಅನಂತರ ಈತ ಸರ್ ವಾಲ್ಟರ್ ರ್ಯಾಲೀಯ ಮಗನ ಜೊತೆಗಾರನಾಗಿ ಫ್ರಾನ್ಸಿಗೆ ತೆರಳಿದ. ಅಲ್ಲಿಂದ ಹಿಂತಿರುಗಿದ ಮೇಲೆ ಬಾರ್ತಲೋಮ್ಯು ಫೇರ್ ಮತ್ತು ದಿ ಡೆವಿಲ್ ಈಸ್ ಎನ್ ಆ್ಯಸ್ (1616) ಎಂಬ ಎರಡು ನಾಟಕಗಳನ್ನು ಪ್ರಕಟಿಸಿದ. ಅದೇ ವರ್ಷ ತನ್ನೆಲ್ಲ ನಾಟಕಗಳು, ಕವನಗಳು ಹಾಗೂ ಚಾಟುಪದ್ಯಗಳನ್ನು ಸಂಕಲಿಸಿ ತನ್ನೆಲ್ಲ ಕೃತಿಗಳನ್ನು ಪ್ರಕಟಿಸಿದ. ಆ ವೇಳೆಗೆ ಈತನ ಕೀರ್ತಿ ಸಾಕಷ್ಟು ಹಬ್ಬಿತ್ತು. ನಿಜಕ್ಕೂ ವಿಲಿಯಂ ಡ್ಯಾವೆನೆಂಟ್ ಮೊದಲ ರಾಷ್ಟ್ರಕವಿ ಪ್ರಶಸ್ತಿ ಪಡೆದಿದ್ದರೂ ಜನ ಈತನನ್ನೇ ರಾಷ್ಟ್ರಕವಿ ಎಂದು ಪುರಸ್ಕರಿಸಿದರು. 1619ರಲ್ಲಿ ಸ್ಕಾಟ್ಲೆಂಡಿಗೆ ತೆರಳಿ ಅಲ್ಲಿ ಹಾತಾರನ್ ಡನ್ನಿನ ಸಾಹಿತಿ ಡ್ರಮಂಡನನ್ನು ಕಂಡು ಆತನೊಂದಿಗೆ ಚರ್ಚಿಸಿದ ವಿಷಯಗಳನ್ನು ಮುಂದೆ ಕಾನ್ ವರ್ ಸೇಷನ್ ವಿತ ಟ್ರಮಂಟ್ ಎಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದ. ಅಲ್ಲಿಂದ ಆಕ್ಷಫರ್ಟ್‍ಗೆ ತೆರಳಿದ. ಅಲ್ಲಿ ಗೌರವ ಎಂ.ಎ.ಪದವಿ ಪಡೆದ. ಈತನ ದುರದೃಷ್ಟಕ್ಕೆ 1623ರಲ್ಲಿ ಬೆಂಕಿಬಿದ್ದು ಈತನ ಎಲ್ಲ ಗ್ರಂಥಗಳು ಹಾಗೂ ಹಸ್ತ ಪ್ರತಿಗಳು ನಾಶವಾದವು. ಆನಂತರ ಈತನ ಮಹತ್ತ್ವ ಕೃತಿ ಎನಿಸಿದ ದಿ ಸ್ಟೇಪಲ್ ಆಫ್ ನ್ಯೂಸ್ ಪ್ರಕಟವಾಯಿತು. ಆ ವೇಳೆಗೆ ಪಾಶ್ರ್ವವಾಯು ತಗುಲಿ ಹಾಸಿಗೆ ಹಿಡಿದ. ಅನಂತರ ದಿ ನ್ಯೂ ಇನ್ ಎಂಬ ನಾಟಕ ಕೃತಿಯನ್ನು ಪ್ರಕಟಿಸಿದ. ದಿ ಮ್ಯಾಗ್ನೆಟಿಕ್ ಲೇಡಿ (1632); ದಿ ಟೇಲ್ ಆಫ್ ಎ ಟಬ್ (1633)-ಇವು ಈತನ ಕೊನೆಯ ನಾಟಕಗಳು. ಪಾಶ್ರ್ವವಾಯುವಿನಿಂದ ಗುಣಮುಖವಾಗದೆ 1637ರಲ್ಲಿ ವಿಧಿವಶನಾದ ಈತನನ್ನು ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ಸಮಾಧಿ ಮಾಡಲಾಯಿತು. ಈತನ ಸಮಾಧಿಯ ಮೇಲೆ ಅಪೂರ್ವ ವ್ಯಕ್ತಿ ಬೆನ್‍ಜಾನ್ಸನ್ ಎಂಬ ಫಲಕವನ್ನು ಹಾಕಿದರು. ಈತನ ಗದ್ಯಕೃತಿ ಟಿಂಬರ್; ಆರ್ ಡಿಸ್ ಕವರೀಸ್ ಮೇಡ್ ಅಪಾನ್ ಮೆನ್ ಅಂಡ್ ಮ್ಯಾಟರ್ (1640) ಎಂಬುದು ಬಹು ಸಾಮಾನ್ಯ ಪುಸ್ತಕ. ಈತನ ಕೃತಿಗಳನ್ನು ಹನ್ನೊಂದು ಸಂಪುಟಗಳಲ್ಲಿ ಸಿ.ಎಚ್.ಹರ್‍ಫರ್ಡ್ ಮತ್ತು ಪಿ.ಅಡ್.ಇ.ಸಿಂಪ್ ಸನ್‍ರು ಸಂಪಾದಿಸಿ ಪ್ರಕಟಿಸಿದ್ದಾರೆ. (1925-52).

ಕೃತಿಗಳು

ದಿ ಆಲ್ ಕೆಮಿಸ್ಟ್

ಇದು ಜಾನ್ಸನನ ಪ್ರಸಿದ್ಧ ನಾಟಕ. ಪ್ಲೇಗಿನ ದೆಸೆಯಿಂದ ಲವ್ ವಿಟ್ ಎಂಬಾತ ಲಂಡನ್ನಿನ ತನ್ನ ಮನೆಯನ್ನು ಫೇಸ್ ಎನ್ನುವ ಸೇವಕನ ವಶಕ್ಕೊಪ್ಪಿಸಿ ಹೋಗುತ್ತಾನೆ. ಈ ಸೇವಕನೂ ರಸವೈದ್ಯವನ್ನು ತಿಳಿದ ಸಟ್ಲ್ ಎಂಬಾತನೂ ಅವನ ಸ್ನೇಹಿತ ಡಾಲ್ ಕಾಮನ್ ಎಂಬಾತನೂ ಒಂದಾಗಿ ಎಲ್ಲ ಲೋಹಗಳನ್ನೂ ಸ್ಪರ್ಶಮಾತ್ರದಿಂದ ಚಿನ್ನವನ್ನಾಗಿ ಮಾಡುವ ಫಿಲಾಸಫರ್ಸ್ ಸ್ಟೋನ್ ಒಂದನ್ನು ದೊರಕಿಸಿ ಕೊಡುವ ಆಸೆ ತೋರಿಸಿ ಮಂಕರನ್ನು ಮರುಳುಗೊಳಿಸುತ್ತಿರುತ್ತಾನೆ. ಮೋಸ ಹೋದವರಲ್ಲಿ ದುರಾಸೆಯವನೂ ಭೋಗಾಲಾಭಿಲಾಷಿಯೂ ಆದ ಸರ್ ಎಪಿಕ್ಯೂರ್ ಮ್ಯಾಮನ್ (ಎಪಿಕ್ಯೂರ್ ಎಂದರೆ ಭೋಗಾಭಿಲಾಷಿ, ಮ್ಯಾಮನ್ ಎಂದರೆ ಹಣದ ದೇವತೆ), ಪ್ಯೂರಿಟನರು (ಎಂದರೆ ಅತಿಕಟ್ಟುನಿಟ್ಟಿನವರು), ಟ್ರಿಬ್ಯುಲೇಷನ್ ಹೋಲ್ ಸಮ್ ಮತ್ತು ಅನಾನಿಯಾಸ್ ಮುಖ್ಯರು. ಲವ್ ವಿಟ್‍ನ ಅನಿರೀಕ್ಷಿತ ಆಗಮನ ಮೋಸಗಾರರ ತಂತ್ರಗಳಿಗೆ ಮುಕ್ತಾಯ ತರುತ್ತದೆ.

ಜಾನ್ಸನ್ ನಾಟಕಗಳಲ್ಲಿ ಇದೇ ಅತಿ ಶ್ರೇಷ್ಠ ಎಂದು ವಿಮರ್ಶಕರ ಅಭಿಪ್ರಾಯ. ಸ್ವಲ್ಪ ಹಗುರವಾದ ರೀತಿಯ ವಿಡಂಬನ ಕೃತಿಯಿದು. ರಚನೆ ಆಶ್ಚರ್ಯವನ್ನುಂಟು ಮಾಡುವಷ್ಟು ಸರಳವಾಗಿದೆ. ವಸ್ತುವಿನ ರೂಪರೇಖೆಯಲ್ಲಿ ಸರ್ ಎಪಿಕ್ಯೂರ್ ಮ್ಯಾಮನ್ ತೀರ ಅಸಹಜ ಎನ್ನಿಸಿದರೂ ನಮಗೆ ಅವನ ವ್ಯಕ್ತಿತ್ವದಲ್ಲಿ ನಂಬಿಕೆ ಬರುವಂತೆ ಚಿತ್ರಿತನಾಗಿದ್ದಾನೆ. ಇಲ್ಲಿ ಮೋಸಗಾರರಿಗಿಂತ ಮೋಸ ಹೋಗುವ ಮೂರ್ಖರೇ ಹೆಚ್ಚು ವಿಡಂಬನೆಗೆ ಗುರಿಯಾಗುತ್ತಾರೆ. ಈ ಮೋಸಗಾರರ ಬಗೆಗೆ ನಾಟಕಕಾರನಿಗೇ ಒಂದು ಬಗೆಯ ತಾಳ್ಮೆ ಇದ್ದಂತೆ ತೋರುತ್ತದೆ. ಅನಾನಿಯಾಸ್ ಮತ್ತು ಟ್ರಿಬ್ಯುಲೇಷನರ ನಡುವಿನ ವೈಲಕ್ಷಣ್ಯ ಸ್ಫುಟವಾಗಿ ಮೂಡಿದೆ. ಕಳ್ಳರ ನಿವಾಸದ ನಿರೂಪಣೆಯ ಲವಲವಿಕೆ ಮತ್ತು ವರ್ಣವಿನ್ಯಾಸ, ಕ್ರಿಯೆಯ ಸರಳತೆ, ನಿಯೋಜಿತ ನ್ಯಾಯ-ಇವು ಕೃತಿಯನ್ನು ಹಿರಿದನ್ನಾಗಿ ಮಾಡಿವೆ. ಸರ್ ಎಪಿಕ್ಯೂರನ ಚಿತ್ರಣ ಮತ್ತು ಅವನ ತೇಜೋಭಂಗದ ದೃಶ್ಯದ ನಿರ್ವಹಣೆಗಳು ವಿಶಿಷ್ಟ ಸಾಧನೆಗಳಾಗಿವೆ. ಕೃತಿಯನ್ನೆಲ್ಲ ತುಂಬಿರುವ ಉತ್ಪ್ರೇಕ್ಷೆಯ ಮೇಲೆ ಜಾನ್ಸನ್ನನಿಗಿರುವ ಪ್ರಭುತ್ವ ಅಸಾಧಾರಣವಾದುದು. ಕೃತಿ ಸರಳ ರಗಳೆಯಲ್ಲಿದೆ. ವೇಗವಾಗಿ ಸಾಗುವ ಸಂಭಾಷಣೆ, ಭಾವಪೂರಿತ ಭಾಷಣ-ಎಲ್ಲಕ್ಕೂ ಹೊಂದಿಕೊಳ್ಳುತ್ತದೆ. ಜಾನ್ಸನ್ನನ ಪದ್ಯರಚನೆ, ಭಾಷೆಯಲ್ಲಿ ವೈವಿಧ್ಯವಿದೆ, ಶೈಲಿಯಲ್ಲಿ ಲವಲವಿಕೆಯಿದೆ.

ಕಾಮಿಡಿ ಆಫ್ ಹ್ಯೂಮರ್ಸ್ ಎಂಬ ವಿನೋದನಾಟಕ ಪ್ರಕಾರದ ಜನಕನೆಂದು ಜಾನ್ಸನ್ ಪ್ರಸಿದ್ಧನಾಗಿದ್ದಾನೆ. ಇಂಥ ನಾಟಕದಲ್ಲಿನ ಪ್ರತಿ ಪಾತ್ರವೂ ಒಂದೊಂದು ಗುಣದ ಉತ್ಪ್ರೇಕ್ಷಿತ ಸ್ವರೂಪದ್ದಾಗಿರುತ್ತದೆ. ಅಭಿಜಾತ ಮಾದರಿಯವಾದರೂ ಈತನ ವಿನೋದ ನಾಟಕಗಳು ಎಲಿಜûಬೆತ್ ಕಾಲದ ಅನೇಕ ವ್ಯಕ್ತಿಮಾದರಿಗಳನ್ನು ಅದ್ಭುತವಾಗಿ ಚಿತ್ರಿಸುತ್ತವೆ.

ವಿಮರ್ಶೆ

ಬೆನ್ ಆ ಕಾಲದ ಉತ್ತಮ ವಿಮರ್ಶಕಲ್ಲೊಬ್ಬನೆಂಬ ಗೌರವಕ್ಕೆ ಪಾತ್ರನಾಗಿದ್ದ. ಸಾಹಿತ್ಯವನ್ನು ಕುರಿತ ಈತನ ಅಭಿಪ್ರಾಯಗಳನ್ನೂ ವಿಮರ್ಶಾಸೂತ್ರಗಳನ್ನೂ ಈತ ಸಾಹಿತ್ಯ ರಚನೆಯಲ್ಲಿ ಅನುಸರಿಸಿದ ರೀತಿಯನ್ನೂ ಈತನ ಎರಡು ಮುಖ್ಯ ಗ್ರಂಥಗಳಿಂದ ತಿಳಿಯಬಹುದು. ಮೊದಲನೆಯದು ಕಾನ್‍ವರ್‍ಸೇಷನ್ ವಿತ್ ಡ್ರಮಂಡ್, ಮತ್ತೊಂದು ಟಿಂಬರ್. ಮೊದಲ ಗ್ರಂಥದಲ್ಲಿ ತನ್ನ ಕಾಲದ ಲೇಖಕರನ್ನು ಕುರಿತು ಆಡಿದ ಮೆಚ್ಚು ನುಡಿಗಳೂ ಚುಚ್ಚು ನುಡಿಗಳೂ ಇವೆ. ತಾನು ಮೆಚ್ಚಿಕೊಂಡ ಕವಿಗಳ ವಿಷಯದಲ್ಲೂ ನುಡಿದ ನಿಷ್ಠುರದ ಮಾತುಗಳಿವೆ. ತನ್ನನ್ನು ಗ್ರೀಕ್ ಮತ್ತು ಲ್ಯಾಟಿನ್ ಪಾಂಡಿತ್ಯದಲ್ಲಿ ಮೀರಿಸಿದ ಇಂಗ್ಲೀಷ್ ಕವಿಗಳು ಯಾರೂ ಇಲ್ಲವೆಂದು ಈತನ ದೃಢನಿಶ್ಚಯ. ಡ್ರೇಟನ್, ಡುಬಾರ್ಟ್, ಲೂಕನ್, ಬೋಮಾಂಟ್-ಮುಂತಾದವರನ್ನು ಕುರಿತ ಮಾತುಗಳಲ್ಲಿ ಈತನ ಅಪೂರ್ವ ಪಾಂಡಿತ್ಯ ಹೊರಸೂಸುತ್ತದೆ. ಪುರಾತನ ಉದ್ಗ್ರಂಥಗಳ ಸಾರವನ್ನೆಲ್ಲ ತನ್ನ ನೆನಪಿನ ಭಂಡಾರದಲ್ಲಿ ಅಡಕವಾಗಿ ಈತ ತುಂಬಿಕೊಂಡಿದ್ದ.

ಎರಡನೆಯ ಗ್ರಂಥವಾದ ಟಿಂಬರಿನಲ್ಲಿ ತನ್ನ ಕಾಲದ ಸಾಹಿತಿಗಳನ್ನೂ ಸಾಹಿತ್ಯದ ಸ್ವರೂಪ ಆದರ್ಶಗಳನ್ನೂ ಕುರಿತು ಈತ ಆಗಾಗ್ಗೆ ಗುರುತು ಹಾಕಿಕೊಂಡ ಮಾತುಗಳಿವೆ. ಸಿಸನ್ ಎಂಬ ಪಂಡಿತ ಹೇಳುವಂತೆ ಇವು ಗ್ರೇಷಮ್ ಕಾಲೇಜಿನಲ್ಲಿ ಕೆಲವು ಕಾಲ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾಗ ಜಾನ್ಸನ್ ಪಾಠ ಹೇಳಲು ಬರೆದಿಟ್ಟುಕೊಂಡಿದ್ದ ಟಿಪ್ಪಣಿಗಳಾಗಿರಬಹುದು. ಸಾಹಿತ್ಯ ರಚನೆಯಲ್ಲಿ ಪುರಾತನ ಸಂಪ್ರದಾಯವನ್ನೇ ಈತ ಅನುಸರಿಸಿದಂತೆ ಎದ್ದು ಕಾಣುತ್ತದೆ. ಪುರಾತನ ಗ್ರಂಥಗಳನ್ನು ಓದುವುದೇ ಸಾಹಿತ್ಯ ರಚನೆಗೆ, ವಿಮರ್ಶೆಗೆ ಉತ್ತಮ ಮಾರ್ಗವೆಂದು ಹೇಳುತ್ತಾನಾದರೂ ಈತ ಯಾವಾಗಲೂ ಸ್ವಾತಂತ್ರ್ಯಪ್ರಿಯತೆಯನ್ನು ಕಳೆದುಕೊಂಡವನಲ್ಲ. ಹಿಂದಿನವರು ಹಾಕಿಕೊಟ್ಟಿರುವ ವಿಮರ್ಶೆಯ ಸೂತ್ರಗಳನ್ನು ನಮ್ಮ ಹೊಸ ಕಾಲ, ಹೊಸ ಅನುಭವ, ಅಭಿರುಚಿಗಳಿಗೆ ಸರಿಯಾಗಿ ಹೊಂದಿಸಿಕೊಂಡರೆ ಅಭಿಪ್ರಾಯಗಳಿಗೂ ಮನ್ನಣೆ ಸಿಕ್ಕುತ್ತದೆ. ಚೆನ್ನಾಗಿ ಬರೆಯಬೇಕಾದರೆ ಸಾಹಿತಿ ಉತ್ತಮ ಲೇಖಕರ ಕೃತಿಗಳನ್ನು ಓದಿ, ಉತ್ತಮ ವಾಗ್ಮಿಗಳ ಮಾತುಗಳನ್ನು ಕೇಳಿ ತನ್ನದೇ ಆದ ಶೈಲಿಯನ್ನು ಬೆಳೆಸಿಕೊಳ್ಳಬೇಕು-ಎಂಬುದು ಈತನ ಮತ.

ಶೈಲಿ

ಬೆನ್ ಜಾನ್ಸನ್ ತನ್ನ ಕಾವ್ಯಶೈಲಿಯನ್ನು ಬಹಳ ಎಚ್ಚರಿಕೆಯಿಂದ ಸಾಧಿಸಿಕೊಂಡ. ಬರೆಯುವ ಶೈಲಿಯನ್ನು ಸಾಧಿಸಿಕೊಳ್ಳುವುದು ಎಷ್ಟು ತಡವಾದರೂ ಚಿಂತೆಯಿಲ್ಲ. ಪ್ರತಿಯೊಬ್ಬ ಲೇಖಕನೂ ತನ್ನ ವಿಶಿಷ್ಟ ಶೈಲಿಯನ್ನು ಶ್ರಮದಿಂದ ನಿಶ್ಚಯವಾಗಿ ಸಾಧಿಸಿಕೊಳ್ಳಬೇಕು ಎನ್ನುತ್ತಾನೆ, ಈತ. ಡನ್‍ನಂಥ ತನ್ನ ಮೆಚ್ಚುಗೆಗೆ ಪಾತ್ರರಾದ ಕವಿಗಳನ್ನೂ ಈತ ಟೀಕಿಸದೆ ಬಿಟ್ಟಿಲ್ಲ. ಒತ್ತುಸ್ವರಗಳನ್ನು ಸರಿಯಾಗಿ ಉಪಯೋಗಿಸದ ಡನ್‍ನನ್ನು ನೇಣು ಹಾಕಬೇಕು ಎನ್ನುತ್ತಾನೆ. ತನ್ನ ವಿಚಾರಗಳಿಗೆ ಒಪ್ಪುವ ಲೇಖಕನನ್ನು ಕಂಡರೆ ಈತನಲ್ಲಿ ಎಲ್ಲೂ ಇಲ್ಲದ ಗೌರವ, ಶ್ಲಾಘನೆ. ಅಂದರೆ ಯಾರೂ ನಿಜವಾದ ಸ್ಪೂರ್ತಿಯಿಂದ, ನಿರರ್ಗಳವಾಗಿ ಬರೆಯಬಾರದು ಎಂದು ಈತನ ಮತವಲ್ಲ. ಈತನಿಗೆ ಲೀಲಾಜಾಲವಾಗಿ ಅನಾಯಾಸವಾಗಿ ಅಥವಾ ಸಂತೆ ಹೊತ್ತ್ತಿಗೆ ಮೂರು ಮೊಳ ನೇಯುವ ಮನೋವೃತ್ತಿಯನ್ನು ಕಂಡರೆ ಮೈಯುರಿ. ಆದ್ದರಿಂದ ಷೇಕ್ಸ್‍ಪಿಯರನ ಅನಾಯಾಸ ಬರವಣಿಗೆಯೂ ಈತನಿಗೆ ಹಿಡಿಸದು. ಎಲ್ಲ ಕುಶಲಕಲೆಗಾರರಿಗೂ ಅತ್ಯಾವಶ್ಯಕವಾದ ಜಾಗರೂಕತೆ, ಶ್ರಮ, ಸಾಧನೆ, ಲೇಖಕನಿಗೂ ಬೇಕು. ತನ್ನ ಕೃತಿಯನ್ನು ನಾಲ್ಕಾರು ಸಲ ತಿದ್ದಿ, ಉಜ್ಜಿ, ಹೊಳಪು ಮಾಡುವುದು ಲೇಖಕನ ಕರ್ತವ್ಯ ಎನ್ನುತ್ತಾನೆ. ಶೈಲಿ ಪರಿಶುದ್ಧವಾಗಿ ಚೊಕ್ಕವಾಗಿ ಸರಳವಾಗಿರಬೇಕು, ಸಂಪ್ರದಾಯಬದ್ಧವಾಗಿರಬೇಕು ಎಂಬುದೇ ಈತನ ಆಸೆ. ಅರಿಸ್ಟಾಟಲ್‍ನಲ್ಲಿ ಈತನಿಗೆ ತುಂಬ ಗೌರವವಿದ್ದರೂ ವ್ಯಾಕರಣ ಪಂಡಿತ ಅಥವಾ ದಾರ್ಶನಿಕ ಹಾಕುವ ಕಟ್ಟುಪಾಡುಗಳಿಗೆ ಒಳಗಾಗಿ ಕವಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಾರದು ಎನ್ನುತ್ತಾನೆ. ಈತ ಅರಿಸ್ಟಾಟಲ್‍ನನ್ನು ಕುರಿತು ಹೇಳಿದ ಮಾತು ಮನೋಜ್ಞವಾಗಿದೆ; ಅರಿಸ್ಟಾಟಲನಿಗೆ ಎಲ್ಲದರ ಕಾರಣ ಗೊತ್ತಿತ್ತು. ಇತರರು ಆಕಸ್ಮಿಕವಾಗಿ, ಅಭ್ಯಾಸಬಲದಿಂದ ಸಾಧಿಸಬಹುದಾದ್ದನ್ನು ಆತ ತನ್ನ ತಾರತಮ್ಯಜ್ಞಾನದಿಂದ ಸಾಧಿಸುತ್ತಾನೆ. ತಪ್ಪು ಮಾಡದಿರುವುದೂ ಸರಿಯಾದ ದಿಕ್ಕಿನಲ್ಲಿ ಹೋಗುವುದೂ ಅರಿಸ್ಟಾಟಲನಿಗೆ ಗೊತ್ತು.

ಮೌಲ್ಯಗಳು

ಬೆನ್ ಪ್ರತಿಪಾದಿಸಿದ ಕಟ್ಟುನಿಟ್ಟಾದ ಸ್ವಾತಂತ್ರ್ಯಪ್ರಿಯತೆ ಮತ್ತು ಸಂಪ್ರದಾಯಶೀಲತೆಗಳ ಸಮನ್ವಯ-ಡನ್ನನಿಂದ ವರ್ಡ್ರ್ಸ್‍ವರ್ತ್‍ನವರೆಗಿನ 150 ವರ್ಷಗಳ ಇಂಗ್ಲಿಷ್ ಸಾಹಿತ್ಯಕ್ಕೆ ಮೂಲ ಆದರ್ಶವಾಯಿತು. ಇಂಗ್ಲಿಷ್ ಸಾಹಿತ್ಯದ ಬೆಳವಣಿಗೆಗೆ ಬೇಕಾಗಿದ್ದ ಶಿಸ್ತು, ಸಂಯಮ, ಸಂಪ್ರದಾಯ ಮತ್ತು ತನ್ನತನಗಳನ್ನು ಕಲಿಸಿದವನೇ ಬೆನ್. ಹಾಗೆಂದ ಮಾತ್ರಕ್ಕೆ ಈತನ ವಿಚಾರ ಲಹರಿಯಲ್ಲಿ ತಪ್ಪುಗಳಿಲ್ಲವೆಂದಲ್ಲ. ಷೇಕ್ಸ್‍ಪಿಯರ್‍ನಂಥವರನ್ನು ಕುರಿತು ಈತ ಆಡಿದ ಟೀಕೆಯ ಮಾತುಗಳೆಲ್ಲ ಸತ್ಯವಲ್ಲ. ತನ್ನ ಕೃತಿ ರಚನೆಯಲ್ಲೇ ಈತ ಅಲ್ಲಲ್ಲಿ ಮುಗ್ಗರಿಸುತ್ತಾನೆ. ಆದರೆ ಈತ ಷೇಕ್ಸ್‍ಪಿಯರನ ಅನನ್ಯ ಪ್ರತಿಭೆಯನ್ನು ಅರಿಯದಂಥ ಮೂಢನೇನಲ್ಲ. ಅವನನ್ನು ಕುರಿತು ಈತ ಆಡಿದ ಈ ಮಾತು ಇವನ ಅಭಿರುಚಿಯ ಒರೆಗಲ್ಲು. ಷೇಕ್ಸ್‍ಪಿಯರನ ಕೀರ್ತಿ ಕೇವಲ ಅವನ ಕಾಲಕ್ಕೆ ಸೇರಿದ್ದಲ್ಲ. ಎಲ್ಲ ಕಾಲದಲ್ಲೂ ಶಾಶ್ವತವಾಗಿ ನಿಲ್ಲಬಲ್ಲಂಥದ್ದು.

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: