ಮಣಿಪಾಲ
ಮಣಿಪಾಲ – ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಪಟ್ಟಣವಾಗಿದೆ. ಅರಬ್ಬೀ ಸಮುದ್ರದಿಂದ ೧೫ ಕಿ.ಮೀ.ಗಳ ಅಂತರದಲ್ಲಿರುವ ಮಣಿಪಾಲವು ತನ್ನ ಸ್ಥಾನಿಕ ಮಹತ್ವದಿಂದಾಗಿ ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಮತ್ತು ಪೂರ್ವಕ್ಕೆ ಪಶ್ಚಿಮ ಘಟ್ಟಗಳ ಅದ್ಭುತ ನೋಟವನ್ನು ಹೊಂದಿದೆ. ಪವಿತ್ರ ಕ್ಷೇತ್ರವಾದ ಉಡುಪಿಯಿಂದ ೬ ಕಿ.ಮೀ ಮತ್ತು ಮಂಗಳೂರಿನಿಂದ ೬೦ ಕಿ.ಮೀಗಳ ದೂರದಲ್ಲಿದೆ ಮಣಿಪಾಲ. ಇಂದು ಮಣಿಪಾಲ ಉನ್ನತ ಶಿಕ್ಷಣ, ವಾಣಿಜ್ಯ, ವೈದ್ಯಕೀಯ ಸೇವೆ ಮತ್ತು ವಿವಿಧ ಉದ್ಯಮಗಳ ಪ್ರಮುಖ ಕೇಂದ್ರವಾಗಿ ಬೆಳೆದಿದೆ.
ಶೈಕ್ಷಣಿಕ ಕೇಂದ್ರ
"ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್" ಅಥವಾ ಮಾಹೆ ಮಣಿಪಾಲದಲ್ಲಿರುವ ಒಂದು ಸ್ವತಂತ್ರ ವಿಶ್ವವಿದ್ಯಾಲಯ. ಕಸ್ತೂರಬಾ ವೈದ್ಯಕೀಯ ಕಾಲೇಜು(ಕಸ್ತೂರ್‍ಬಾ ಮೆಡಿಕಲ್ ಕಾಲೇಜ್ ಅಥವಾ ಕೆಎಂಸಿ), ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ(ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಥವಾ ಎಂಐಟಿ), ಟಿ.ಎ.ಪೈ ವಾಣಿಜ್ಯ ವಿದ್ಯಾಲಯ(ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್ಸ್ಟಿಟ್ಯೂಟ್ ಅಥವಾ ಟಿಎಪಿಎಂಐ) ಮುಂತಾದ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಿರುವ ಮಾಹೆ, ದೇಶ ವಿದೇಶಗಳಿಂದ ವಿದ್ಯಾಕಾಂಕ್ಷಿಗಳನ್ನು ಆಕರ್ಷಿಸುತ್ತಿದೆ.
ಪ್ರಾಥಮಿಕ ಶಾಲೆಗಳಿಂದ ಮೊದಲ್ಗೊಂಡು ಔದ್ಯೋಗಿಕ ತರಬೇತಿಗಳವರೆಗೆ ಬಹುತೇಕ ಎಲ್ಲಾ ರೀತಿಯ ಶಿಕ್ಷಣ ಕೇಂದ್ರಗಳು ಇಂದು ಮಣಿಪಾಲದಲ್ಲಿವೆ.
ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆ
ಕರ್ನಾಟಕದ ಮತ್ತು ಭಾರತದ ಪ್ರಮುಖ ಬ್ಯಾಂಕ್ ಆದ "ಸಿಂಡಿಕೇಟ್ ಬ್ಯಾಂಕ್" ಮಣಿಪಾಲದಲ್ಲಿ ತನ್ನ ಮುಖ್ಯ ಶಾಖೆಯನ್ನು ಹೊಂದಿದೆ.
ಪತ್ರಿಕೋದ್ಯಮ
ಮಣಿಪಾಲ್ ಪ್ರಿಂಟರ್ಸ್ ಪ್ರಕಾಶನದಲ್ಲಿ ಕರ್ನಾಟಕದ ಪ್ರಮುಖ ದಿನಪತ್ರಿಕೆಯಾದ ಉದಯವಾಣಿ, ಪ್ರಮುಖ ವಾರಪತ್ರಿಕೆಗಳಲ್ಲಿ ಒಂದಾದ ತರಂಗ ಹಾಗೂ ಪ್ರಮುಖ ಮಾಸಪತ್ರಿಕೆಗಳಲ್ಲಿ ಒಂದಾದ ತುಷಾರ ಸಹ ಪ್ರಸಾರಗೊಳ್ಳುತ್ತಿವೆ. ಇದರ ಮುಖ್ಯ ಕಛೇರಿ ಇರುವುದು ಮಣಿಪಾಲದಲ್ಲಿ.
ಮಣಿಪಾಲದ ಇತರ ಆಕರ್ಷಣೀಯ ಸ್ಥಳಗಳು
- ಸ್ಮೃತಿ ಭವನ
ಮಣಿಪಾಲವನ್ನು ಕಟ್ಟಿ ಬೆಳೆಸಿದ ದಿವಂಗತ ಡಾ. ಟಿ.ಎಮ್.ಎ.ಪೈ ರವರು ವಾಸಿಸುತ್ತಿದ್ದ ಸ್ಥಳ. ಇವರ ಸ್ಮರಣಾರ್ಥ ಇದನ್ನು ವಸ್ತು ಸಂಗ್ರಹಾಲಯವಾಗಿ ಮಾಡಲಾಗಿದೆ. ಟಿ.ಎಮ್.ಎ. ಪೈ ರವರಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೋಡಬಹುದು.
- ಹಸ್ತ ಶಿಲ್ಪ
- ಡಾ|| ಟಿ.ಎಮ್.ಎ.ಪೈ ಆಡಿಟೊರಿಯಮ್
- ಜೈವಿಕ ವಸ್ತುಸಂಗ್ರಹಾಲಯ (ಅನಾಟಮಿ ಮ್ಯೂಸಿಯಂ)
- ಎಂಡ್ ಪಾಯಿಂಟ್
- ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ