ಮೋಕ್ಷ
ಮೋಕ್ಷ - ಪೀಠಿಕೆ
ಮೋಕ್ಷವೆಂದರೆ, ಹಿಂದೂ ಮತ್ತು ಜೈನ ಧರ್ಮದ ಪ್ರಕಾರ, ಜನನ-ಮರಣದ ಚಕ್ರಗಳಿಂದ ಜೀವಚರಗಳಿಗೆ ಸಿಗುವ ಮುಕ್ತಿ. ಪ್ರತಿಯೊಬ್ಬನ ಪರಮೋಚ್ಚ ಗುರಿ ಇದಾಗಿರುತ್ತದೆ. ಇದು ಭಾರತೀಯ ದರ್ಶನಗಳ ಪ್ರಕಾರ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು-ಮೋಕ್ಷ ಕೊನೆಯದು. ಧರ್ಮ, ಅರ್ಥ ಮತ್ತು ಕಾಮ ಉಳಿದ ಮೂರು.ಮನುಷ್ಯನ ಮರಣ ಸಂಭವಿಸಿದಾಗ ದೇಹದೊಳಗಿನ ಆತ್ಮ ಮರುಹುಟ್ಟು ಪಡೆಯದೆ ಪರಮಾತ್ಮನಲ್ಲಿ ಐಕ್ಯ ಹೊಂದುವುದು. ಈ ಸ್ಥಿತಿ ಸ್ವರ್ಗಕ್ಕಿಂತ ಶ್ರೇಷ್ಠ. ಏಕೆಂದರೆ ಸ್ವರ್ಗ ಪ್ರಾಪ್ತಿ ಕೇವಲ ಮನುಷ್ಯನ ಪಾಪ ಪುಣ್ಯಗಳನ್ನು ಆಧರಿಸಿದ್ದು ಅದು ಮುಗಿದ ಮೇಲೆ ಕರ್ಮಾನುಸಾರ ಮರು ಹುಟ್ಟು ಪಡೆಯಬೇಕಾಗುತ್ತದೆ.ಆದರೆ ಮುಕ್ತಿ ಅಥವಾ ಮೋಕ್ಷದ ಸ್ಥಿತಿ ಅನಂತಕಾಲ ಅನಂದಾತಿಶಯದಲ್ಲಿ ಇರುವಂತಹ ಸ್ಥಿತಿ.ಈ ವಿಚಾರದಲ್ಲಿ ಭಾರತೀಯ ದರ್ಶನಗಳಲ್ಲಿ ಒಮ್ಮತವಿಲ್ಲ; ಒಂದೊಂದು ದರ್ಶನದಲ್ಲಿ ಒಂದೊಂದು ರೀತಿ ಹೇಳಿದೆ. (ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ); ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷವು ಒಂದು ಚರ್ಚಾವಿಷಯವಾಗಿದೆ.
ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ
ಮೋಕ್ಷವೆಂದರೆ ಬಿಡುಗಡೆ; ಜನ್ಮಾಂತರ ಚಕ್ರದ ಅಂತ್ಯ.ಅಂತ್ಯವಿಲ್ಲದ ಆನಂದ ಮಯ ಸ್ಥಿತಿ. ಭಾರತೀಯ ತಾತ್ವಿಕ -ಧಾರ್ಮಿಕ ಜೀವನದ ಅಂತಿಮ ಗುರಿ. ಅದು ಪರಮ (ಅಂತಿಮ) ಪುರುಷಾರ್ಥ.
ನಿರೀಶ್ವರವಾದಿಗಳಲ್ಲಿ ಮೋಕ್ಷ
- ಚಾರ್ವಾಕರು
ಚಾರ್ವಾಕರು ಮೋಕ್ಷವೆನ್ನುವುದು ಕೇವಲ ಕಲ್ಪನೆ ಎನ್ನುತ್ತಾರೆ. ಅವರ ದೃಷ್ಟಿಯಲ್ಲಿ ಸಾವೇ ಬಿಡುಗಡೆ. ಏಕೆಂದರೆ ಅವರಿಗೆ ಪುನರ್ಜನ್ಮದಲ್ಲಿ ಮತ್ತು ದೇವರಲ್ಲಿ ನಂಬುಗೆ ಇಲ್ಲ.
- ಜೈನರು
ಜೈನರು ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನ್ನು ಒಪ್ಪುವುದಿಲ್ಲ. ಅವರ ಮೋಕ್ಷದ ವ್ಯಾಖ್ಯೆ ಬೇರೆಯೇ ಇದೆ. ಜೈನರು ಕರ್ಮ ಕ್ಷಯವೇ ಮೋಕ್ಷವೆನ್ನುತ್ತಾರೆ. ಕರ್ಮ ಒಂದು ಭೌತವಸ್ತು -ಪುದ್ಗಲ. ರಾಗ, ದ್ವೇಷ, ಅಜ್ಞಾನ, 'ಆಶ್ರವ' ರೀತಿಯಲ್ಲಿ (ಕೊಳವೆ ನೀರಿನಂತೆ ) ಜೀವನಲ್ಲಿ ತುಂಬುವುದು. 'ಸಮ್ಯಕ್ ಜ್ಞಾನ', 'ಸಮ್ಯಕ್ ದರ್ಶನ', 'ಸಮ್ಯಕ್ ಚಾರಿತ್ರ್ಯ'ದಿಂದ ಈ ಕರ್ಮದ ಆಸ್ರವ ನಿಂತು (ನೀರು ತುಂಬುವುದು ನಿಂತಂತೆ.) 'ಸಂವರ' ಸ್ಥಿತಿ ತಲುಪುವುದು. ನಂತರ 'ನಿರ್ಜರಾ'ದಿಂದ -ಕಾಯ ಕ್ಲೇಶಗಳಿಂದ, ಒಳಗಿರುವ ಕರ್ಮವನ್ನು ಹೊರಹಾಕಿ ಕರ್ಮ ಕ್ಷಯವಾದ ಮೇಲೆ ಮುಕ್ತಿ. ಈ ಮುಕ್ತ ಜೀವವು ಲೋಕಾಕಾಶದಲ್ಲಿ 'ಶಿದ್ಧಶಿಲೆ' ಯೆಂಬ ಅತ್ಯುನ್ನತ ಸ್ಥಾನವನ್ನು ಪಡೆಯುತ್ತದೆ. ಅಲ್ಲಿ 'ಅನಂತ ಜ್ಞಾನ', 'ಅನಂತ ದರ್ಶನ', 'ಅನಂತ ವೀರ್ಯ(ಶಕ್ತಿ)', ಸಂಪನ್ನರಾಗಿ ಜೀವವು, ಅನಂತ ಶಾಂತಿ ಪಡೆಯುತ್ತದೆ. ಸಾಧನೆಯಿಂದ ಇದನ್ನು ಎಲ್ಲರೂ ಪಡೆಯಬಹುದು.
- ಬೌದ್ಧರು
ಬೌದ್ಧರು ಜೈನರಂತೆ ದೇವರು ಅಥವಾ ಮೂಲಚೈತನ್ಯ ಪರಬ್ರಹ್ಮವನ್ನು ಒಪ್ಪುವುದಿಲ್ಲ. ಅವರ ಮೋಕ್ಷದ ವ್ಯಾಖ್ಯೆಯೂ ಬೇರೆಯೇ ಇದೆ. ಬೌದ್ಧರು ಮೋಕ್ಷವನ್ನು 'ನಿರ್ವಾಣ' ಎನ್ನುತ್ತಾರೆ. ನಿರ್ವಾಣ ಎನ್ನುವುದಕ್ಕೆ ಅಕ್ಷರಾರ್ಥ -ಅಳಿಸಿಹೋಗುವುದು / ನಂದಿಹೋಗುವುದು. ಆರ್ಯಸತ್ಯ ಗಳಲ್ಲಿ 'ಅಜ್ಞಾನ'ವೇ ಬಂಧಕ್ಕೆ ಕಾರಣ. ದುಃಖ, ದುಃಖಮೂಲ, ದುಃಖ ನಿವಾರಣಾ ಮಾರ್ಗ, ದುಃಖ ನಿವಾರಣ- 'ಈ ನಾಲ್ಕನ್ನು' ಚೆನ್ನಾಗಿ ತಿಳಿದು -'ಆರ್ಯ ಅಷ್ಟಾಂಗ ಮಾರ್ಗ'ವನ್ನು ಅನುಸರಿಸಿದರೆ ದುಃಖದಿಂದ ಬಿಡುಗಡೆ ದೊರೆಯುತ್ತದೆ. ಸಂಸಾರಕ್ಕೆ ಕಾರಣವಾದ, ವಾಸನೆಗಳೆಲ್ಲಾ ಅಳಿದು ಜ್ಞಾನೋದಯವಾಗುತ್ತದೆ. ಈ ಹಂತ ಪಡೆದವನು ಅರ್ಹತ್ ಆಗುತ್ತಾನೆ. ವೈಬಾಷಿಕರು ಅರ್ಹತನು ಆಸ್ರವ ಕ್ಷಯ ನಂತರ ಜೀವಿಸಿದ್ದರೆ ಅದು 'ಸೋಪಧಿಶೇಷ ಸ್ಥಿತಿ'; ಮರಣಾನಂತರದ್ದು 'ನಿರುಪಧಿಶೇಷ ಸ್ಥಿತಿ'. ಹೀಗೆ ಎರಡು ಬಗೆ 'ಮೋಕ್ಷ' ವಿದೆ ಎನ್ನುತ್ತಾರೆ. ವಿಜ್ಞಾನವಾದಿಗಳು 'ಕ್ಲೇಷಾವರಣ', 'ಜ್ಞೇಯಾವರಣ', ನಾಶವೇ ಮೋಕ್ಷ ವೆನ್ನುತ್ತಾರೆ ; ಮಾದ್ಯಮಿಕರು 'ಶೂನ್ಯತಾ ಪ್ರಾಪ್ತಿ'ಯೇ ಮೋಕ್ಷವೆನ್ನುತ್ತಾರೆ.
ಷಡ್ದರ್ಶನಗಳಲ್ಲಿ ಮೋಕ್ಷ
- ಸಾಂಖ್ಯದರ್ಶನ
ಸಾಂಖ್ಯದರ್ಶನದ ಪ್ರಕಾರ ಪುರುಷನು ಪ್ರಕೃತಿಯ ಸಂಪರ್ಕವನ್ನು ಪೂರ್ತಿಯಾಗಿ ಕಳೆದು ಕೊಳ್ಳುವುದೇ ಮೋಕ್ಷ . ಪ್ರಕೃತಿಸಂಬಂಧದಿಂದ ಬದ್ಧತೆ ಯಾಗುತ್ತದೆ ; ಕರ್ತೃತ್ವ ಭೋರ್ಕ್ತೃತ್ವ ದಿಂದ ದುಃಖ ; ಪ್ರಕೃತಿಯೇ ಬಂಧಕ್ಕೆ ಕಾರಣವೆಂಬ ಅರಿವೇ ಅಪವರ್ಗ ಅಥವಾ ಕೈವಲ್ಯಕ್ಕೆ ದಾರಿ. ಕೈವಲ್ಯ ಪುರುಷನ ನಿಜ ಸ್ವರೂಪ ಸ್ಥಿತಿ . ದುಃಖದ ಲೇಶವೂ ಇಲ್ಲದ ಸ್ಥಿತಿ. ಅಲ್ಲಿ ಆನಂದವೂಇಲ್ಲ ದುಃಖವೂ ಇಲ್ಲ. ಜೀವನ್ಮುಕ್ತಿ ವಿದೇಹ ಮುಕ್ತಿ ಎಂಬ ಎರಡೂ ಬಗೆಯ ಮುಕ್ತಿ ಇದೆ.
- ಯೋಗ ದರ್ಶನ
ಯೋಗ ದರ್ಶನವೂ ಸಾಂಖ್ಯ ಮತವನ್ನು ಒಪ್ಪುತ್ತದೆ. ಆದರೆ ಧ್ಯಾನ ಮಾಡುವ ವಸ್ತುವಿನಲ್ಲಿ ಮನಸ್ಸು ಲೀನವಾದರೆ -ಅದು ಸಂಪ್ರಜ್ಞಾತ ಸಮಾಧಿ -ಅದೇ ಕೈವಲ್ಯ. ವಿಶುದ್ಧ ಚೈತನ್ಯವು ತಾನೇತಾನಾಗಿರುವುದು -ಅಸಂಪ್ರಜ್ಞಾತ ಸಮಾಧಿ . ಇದು ನಿಜವಾದ ಕೈವಲ್ಯ ಸ್ಥಿತಿ. ಇದು ಯೋಗದ ಗುರಿ. ಇದಕ್ಕೆ ಯಮ, ನಿಯಮಾದಿಗಳು ಸಾಧನೆಯ ದಾರಿ.
- ನ್ಯಾಯ ದರ್ಶನ
ನ್ಯಾಯದರ್ಶನವೂ ಯೋಗ ದರ್ಶನದ ಸಾಧನೆಗಳನ್ನು ಒಪ್ಪಿದೆ; ದುಃಖದ ನಿವೃತ್ತಿಯನ್ನು -ಅಪವರ್ಗ ಅಥವಾ ಮೋಕ್ಷವೆನ್ನುತ್ತದೆ. ಇದು-ಮೋಕ್ಷ, ಅಜ್ಞಾನದ ನಿವೃತ್ತಿ ಅಥವಾ ಜ್ಞಾನ ಪ್ರಾಪ್ತಿಯಿಂದ ಸಾಧ್ಯ. ಮುಕ್ತಾವಸ್ಥೆಯಲ್ಲಿ ಆತ್ಮನಲ್ಲಿ ಯಾವ ಗೂಣಗಳೂ ಇರುವುದಿಲ್ಲ. ಎಲ್ಲಾ ಸಂಸ್ಕಾರ, ಭಾವನೆಗಳಿಂದ ಅತೀತವಾಗಿದ್ದು -ಆತ್ಮನ ವಿಶುದ್ಧ ರೂಪ. ಆನಂದವೂ ಇಲ್ಲ -ದುಃಖವೂ ಇಲ್ಲ. ಆತ್ಮನಲ್ಲಿ ಚೈತನ್ಯವುಂಟಾಗುವುದು ಶರೀರ ಸಂಪರ್ಕದಿಂದ ಮಾತ್ರಾ.
- ವೈಶೇಷಿಕ ದರ್ಶನ
ವೈಶೇಷಿಕ ದರ್ಶನವೂ ಮೋಕ್ಷ ವಿಚಾರದಲ್ಲಿ, ನ್ಯಾಯ ದರ್ಶನದ ಮತವನ್ನೇ ಅನುಸರಿಸುತ್ತದೆ. ಆತ್ಮನಲ್ಲಿ ಆನಂದವೂ ಇಲ್ಲ, ದುಃಖವೂ ಇಲ್ಲ. ಆದರೆ ಈ ಅಭಿಪ್ರಾಯವು ಟೀಕೆಗೆ ಒಳಗಾದ್ದರಿಂದ ನಂತರದ ವೈಶೇಷಿಕರು ಮೋಕ್ಷದಲ್ಲಿ ನಿರತಿಶಯ ಸುಖವಿದೆಯೆಂದು ಹೇಳಿದ್ದಾರೆ.
- ಪೂರ್ವ ಮೀಮಾಂಸಕರು (ಕರ್ಮವಾದಿಗಳು)
ಕರ್ಮವಾದಿಗಳಾದ ಪೂರ್ವ ಮೀಮಾಂಸಕರ ಪ್ರಕಾರ ಜಗತ್ತಿನೊಡನೆ, ಆತ್ಮ ಸಂಬಂಧ ನಾಶವೇ ಮೋಕ್ಷ. ಭೋಗಾಯತ ನವಾದ ಶರೀರ, ಭೋಗ ಸಾಧನವಾದ ಇಂದ್ರಿಯಗಳು ಭೋಗ ವಿಷಯಗಳಾದ ಪದಾರ್ಥಗಳು, ಈ ಮೂರೂ ಸಂಸಾರದ ಬಂಧನಕ್ಕೆ ಆತ್ಮವನ್ನು ಸಿಲುಕಿಸಿವೆ, ಇವುಗಳಾತ್ಯಂತಿಕ ನಾಶವೇ ಮೋಕ್ಷ. ಪ್ರಭಾಕರ ಮುಂತಾದವರು ನಿಯೋಗ ಸಿದ್ಧಿಯೇ ಮೋಕ್ಷವೆನ್ನುತ್ತಾರೆ. ಎಂದರೆ ಫಲಾಪೇಕ್ಷೆಯಿಲ್ಲದ ನಿತ್ಯಕರ್ಮ, ಕರ್ತವ್ಯ ದೃಷ್ಟಿಯಿಂದ ಮಾಡುವುದು, -ಕರ್ತವ್ಯ ಕ್ರಿಯೆಯಿಂದ ಮೋಕ್ಷ. ಆನಂದಾನುಭವದ ವಿಚಾರವಿಲ್ಲ. ನ್ಯಾಯ ದರ್ಶನದಂತೆ ಚೈತನ್ಯವು ಆತ್ಮನ ಸ್ವಭಾವ ಗುಣವಲ್ಲ. ಮೋಕ್ಷಕ್ಕೆ ಕರ್ಮ ಮತ್ತು ಜ್ಞಾನ ಎರಡೂ ಅವಶ್ಯ. ಇದು ಜ್ಞಾನ ಕರ್ಮ ಸಮುಚ್ಚಯ ವಾದ. ಪ್ರಾಚೀನ ಮೀಮಾಂಸಕರು ಸ್ವರ್ಗವೇ ಕೊನೆಯ ಹಂತವೆನ್ನುವರು. ನಂತರದವರು ಮೋಕ್ಷ ವಿಚಾರವನ್ನು ಸೇರಿಸಿದರು.
- ಅದ್ವೈತ ದರ್ಶನ
ಅದ್ವೈತದ ಪ್ರಕಾರ ಮೋಕ್ಷವು, ಸತ್-ಚಿತ್-ಆನಂದದ ಸ್ಥಿತಿ/ ಸ್ವರೂಪಿ. ಅವಿದ್ಯೆಯ (ಮಾಯೆಯ) ಕಾರಣ, ಆತ್ಮನಿಗೆ ಬಂಧನವಾಗಿದೆ; ಎಂದರೆ ಅವನು ಸ್ವಸ್ವರೂಪವನ್ನು ತಿಳಿದಿಲ್ಲ. ಮಿಥ್ಯಾಭಾಸದ ನಿವಾರಣೆಯಾಗಿ ನಾನೇ ಬ್ರಹ್ಮವೆಂದು ಜ್ಞಾನ ಉದಯವಾದಾಗ ಮುಕ್ತಿ. ಬ್ರಹ್ಮವನ್ನು ತಿಳಿದವನು ಬ್ರಹ್ಮವೇ ಆಗುತ್ತಾನೆ ಎಂದು ಶ್ರುತಿಯು ಹೇಳುತ್ತದೆ. ಅಜ್ಞಾನದ ನಿವಾರಣೆಯು ದೇಹವಿದ್ದಾಗಲೂ, ಬಿಡುವಾಗಲೂ ಯಾವಾಗ ಬೇಕಾದರೂ ಆಗಬಹುದು. 'ಜೀವನ್ಮುಕ್ತಿ' ಯೂ ಉಂಟು, 'ವಿದೇಹಮುಕ್ತಿ'ಯೂ ಉಂಟು. ಕರ್ಮದಿಂದ ಮುಕ್ತಿಯಿಲ್ಲ -ಚಿತ್ತ ಶುದ್ದಿಯಿಂದ ಮಾತ್ರ ಮುಕ್ತಿಯನ್ನು ಪಡೆಯಬಹುದು. ಜ್ಞಾನದಿಂದ ಮಾತ್ರ ಮುಕ್ತಿ ಪಡೆಯಬಹುದು (ಹೋಮ, ಹವನ, ಯೋಗ, ಪ್ರಾಣಯಾಮ, ಜಪ,ತಪ, ಪಾರಾಯಣ, ಭಕ್ತಿ-ಭಜನೆ, ಪೂಜೆ, ಯಾತ್ರೆ. ಸೇವೆ-ದಾನ-ಧರ್ಮ ಇತ್ಯಾದಿ ಕರ್ಮಗಳು; ಜ್ಞಾನವೆಂದರೆ ತಾನೇ ಆತ್ಮನೆಂಬ -ಬ್ರಹ್ಮವೆಂಬ ಅರಿವು-ಅನುಭವ; ಆತ್ಮವು ಮೂಲ ಚೈತನ್ಯದಲ್ಲಿ ಸೇರಿಹೋಗುವುದು. (ಮೋಕ್ಷದ ವ್ಯಾಖ್ಯೆಯು ಉಳಿದ ದರ್ಶನಕ್ಕಿಂತ ಬೇರೆ ಮತ್ತು ಸ್ಪಷ್ಟ)
ಭಕ್ತಿಪಂಥದಲ್ಲಿ ಮೋಕ್ಷ
- ವಿಶಿಷ್ಟಾದ್ವೈತ ಮತ್ತು ಮೋಕ್ಷ
ವಿಶಿಷಾದ್ವೈತದ ಪ್ರಕಾರ ವೈಕುಂಠವೆಂಬ ಅಪ್ರಾಕೃತ ಲೋಕದಲ್ಲಿ ಪರಮಾತ್ಮನಿಗೆ ಸಮನಾದ ಆನಂದವನ್ನು ಪಡೆಯುವುದೇ ಮುಕ್ತಿ. ಜೀವನು ದೇವಯಾನವೆಂಬ , ಜ್ಯೋತಿರ್ಮಾರ್ಗವನ್ನು ಹಿಡಿದು ಆನಂದಮಯವಾದ ವೈಕುಂಠವನ್ನು ಸೇರುತ್ತಾನೆ . ಸರ್ವಜ್ಞತ್ವಾದಿ ಗುಣಗಳನ್ನು ಪಡೆಯುತ್ತಾನೆ. ಕರ್ಮಸಂಬಂಧದಿಂದ ಪಾರಾಗಿ ಅಪ್ರಾಕೃತ (ದಿವ್ಯ) ದೇಹ ಪಡೆದು 'ಸಾಲೋಕ್ಯ; ಸಾಮೀಪ್ಯ; ಸಾರೂಪ್ಯ; ಸಾಯುಜಯ'ಗಳೆಂಬ ಮುಕ್ತಿಯನ್ನು ಪಡೆಯುತ್ತಾನೆ. ವಿಶ್ವೇಶ್ವರತ್ವ, ಜಗತ್ಕೃತ್ವ ಬಿಟ್ಟು ಉಳಿದ ಎಲ್ಲಾ ಈಶ್ವರನ-ಶಕ್ತಿ ಪಡೆಯುತ್ತಾನೆ. ಆದರೆ ಪರಮಾತ್ಮನಲ್ಲಿ ಸೇರಲಾರ; ಅವನ ಕೈಂಕರ್ಯದಿಂದ ಆನಂದ ಪಡೆಯುತ್ತಾನೆ. ಇದನ್ನು ಪಡೆಯಲು, ಜ್ಞಾನ ಕರ್ಮ ಭಕ್ತಿ, ಮಾರ್ಗಗಳನ್ನು ಅನುಸರಿಸಬೇಕು. ಭಕ್ತಿ ಶ್ರೇಷ್ಠವಾದುದು. ಇದನ್ನು ಪಡೆಯಲು ಈಶ್ವರನ ಅನುಗ್ರಹವೂ ಬೇಕು. ಜೀವನ್ಮುಕ್ತಿ ಎಂಬುದಿಲ್ಲ; ಇದು ರಾಮಾನುಜರ ಸಿದ್ಧಾಂತ.
- ಮಾಧ್ವಮತ-ದ್ವೈತ
ಮಾಧ್ವಮತ-ದ್ವೈತದಲ್ಲಿಯೂ ಅವಿದ್ಯೆಯಿಂದ ಬಂಧನದಿಂದ ಬಿಡುಗಡೆಯಾದಾಗ ಪರಮಾತ್ಮನ ಅನುಗ್ರಹ ಪಡೆಯುವುದನ್ನು ಮೋಕ್ಷವೆಂದು ಹೇಳಿದೆ. ಮೋಕ್ಷವು ನಿರತಿಶಯ ಆನಂದ ಧಾಮ.'ಕರ್ಮದ ಕ್ಷಯ', 'ಉತ್ಕ್ರಾಂತಿ', 'ಮಾರ್ಗ' ಮತ್ತು 'ಭೋಗ' ಇವು ನಾಲ್ಕು ಪರ್ವಗಳು. ಸಂಚಿತ ಕರ್ಮಗಳು ಕ್ಷಯವಾದ ಮೇಲೆ, ಬ್ರಹ್ಮ ನಾಡಿಯ ಮೂಲಕ, ಬಹಿರ್ನಿರ್ಗಮನವಾಗುವುದು -ಉತ್ಕ್ರಾಂತಿ , ಅಲ್ಲಿಂದ ಅರ್ಚಿರಾದಿ ಮಾರ್ಗದಿಂದ ಗಮನ(ಹೋಗುವುದು) -ಬೇರೆ ಬೇರೆ ಲೋಕಗಳಿಗೆ ಪ್ರಯಾಣಿಸಿ, ಅವರಿಂದ ಸತ್ಕರಿಸಲ್ಪಟ್ಟು. ಸತ್ಯಲೋಕಕ್ಕೆ ಬಂದು, ಅನಂತರ ವೈಕುಂಠವನ್ನು ಸೇರುವನು. ಮೋಕ್ಷಭೋಗವೂ ತಾರತಮ್ಯದಿಂದ ಕೂಡಿದ್ದು, ಸಾಲೋಕ್ಯ ಮೊದಲಾಗಿ ನಾಲ್ಕು ವಿಧ. ಇಲ್ಲಿ ಸಾಯುಜ್ಯವೆಂದರೆ ಪರಮಾತ್ಮನ ಶರೀರದಲ್ಲಿ ಪ್ರವೇಶಿಸಿ ಆನಂದನನ್ನು ಪಡೆಯುವುದು.(ಅವನಲ್ಲಿ ಒಂದಾಗುವುದಲ್ಲ) ಆದರೆ ಅದು ಪರಮಾತ್ಮನ ಆನಂದಕ್ಕೆ ಸಮಾನವಲ್ಲ. ನಿತ್ಯ ನಾರಕಿಗಳಿಗೆ (ತಮೋಯೋಗ್ಯರಿಗೆ ) ಭಗವಂತನ ನಿಗ್ರಹದಿಂದ ನಿತ್ಯ ನರಕ ಪ್ರಾಪ್ತಿಯಾಗುವುದು. ಅವರಿಗೆ ಶಾಶ್ವತ ದುಃಖ; ನಿತ್ಯ ಸಂಸಾರಿಗಳಿಗೂ ಸ್ವರ್ಗದಲ್ಲಿ ಮಿಶ್ರಾನುಭವ ಉಂಟು. ಹೀಗೆ ಮುಕ್ತಿಯಲ್ಲೂ 'ತಾರತಮ್ಯ' ಉಂಟು. ಇದು ಮಧ್ವರ ಮತ .
- ನಿಂಬಾರ್ಕರ ಮತ
- ನಿಂಬಾರ್ಕರು ಮತ್ತು ಮೋಕ್ಷ
ನಿಂಬಾರ್ಕರ ಮತದಲ್ಲಿ ಜೀವನು ಭಗವಂತನ ಸಾಕ್ಷಾತ್ಕಾರ ಪಡೆದಾಗ ಅವನ- ಎಂದರೆ ಭಗವಂತನ ಸ್ವಭಾವ, ಗುಣಗಳನ್ನು ಪಡೆದುಕೊಳ್ಳುತ್ತಾನೆ. ಆತ್ಮ ಸ್ವರೂಪ ಲಾಭವಾಗುವುದು. ಆದರೆ ಅವರ ಬೇಧ ನಿತ್ಯ. ಮುಕ್ತಾವಸ್ಥೆಯಲ್ಲಿಯೂ ಆತ್ಮ ಪರಮಾತ್ಮನಿಂದ ಬೇರೆಯಾಗಿರುವುದು. ಗುಣದಿಂದ ಅಬೇಧವಾಗಿರುವುದು. ಬ್ರಹ್ಮ ಸ್ವರೂಪ ಪಡೆಯುವದೆಂದರೆ ಬ್ರಹ್ಮದಂತೆ ಆಗುವುದು (ಸದೃಶ). ಬೇಧವಿರುವಾಗಲೂ ಸಮಾನತೆ ಇದೆ. ಆದರೆ ಆತ್ಮವು ಅಣು ಗಾತ್ರದ್ದಾಗಿರುತ್ತದೆ. ಬ್ರಹ್ಮದಂತೆ ಸರ್ವವ್ಯಾಪಿಯಲ್ಲ. ಜಗತ್ತಿನ ಸೃಷ್ಟಿ ಇತ್ಯಾದಿ ಶಕ್ತಿ ಇಲ್ಲ. ಸ್ವತಂತ್ರನೂ ಅಲ್ಲ. ಬ್ರಹ್ಮದ ಅಧೀನ. ಆದರೂ ಸಚ್ಚಿದಾನಂದ ಸ್ವರೂಪಿ.
- ವಲ್ಲಭಾಚಾರ್ಯರು ಮತ್ತು ಮೋಕ್ಷ
ವಲ್ಲಭಾಚಾರ್ಯರ ಶುದ್ಧಾದ್ವೈತದಲ್ಲಿ ಪರಮಾತ್ಮನು ಜೀವನ ದೇಹ, ಇಂದ್ರಿಯ, ಅಂತಃಕರಣಗಳಲ್ಲಿ ತನ್ನ ಆನಂದವನ್ನು ಸ್ಥಾಪಿಸಿ ತನ್ನ ಸ್ವರೂಪದಲ್ಲಿರುವಂತೆ ಮಾಡುವುದು; ಇದಕ್ಕೆ, 'ಸ್ವರೂಪಾಪತ್ತಿ' ಎಂದು ಹೆಸರು. ಇದು ಆನಂದ ಮಯವಾದ ರೂಪ; ಇದೇ ಮುಕ್ತಿ. 'ಮೋಕ್ಷಕ್ಕೆ ಭಕ್ತಿಯೇ ಸಾಧನ' - ಗೋಪಿಕೆಯರ ಮಾದರಿ; ಸದಾ ಭಜನೆ, ನೃತ್ಯ, ಚಿಂತನೆ.
- ಚೈತನ್ಯರು ಮತ್ತು ಮೋಕ್ಷ
ಚೈತನ್ಯರ ಅಚಿಂತ್ಯ-ಬೇಧಾಬೇಧದಲ್ಲಿಯೂ ಮುಕ್ತಿ ಆನಂದ ಸ್ವರೂಪದ್ದು. ಭಗವಂತನಾದ ಕೃಷ್ಣನನ್ನು ಅತ್ಯಂತ ಪ್ರೇಮದಿಂದ, ಸೇವಿಸುವುದೇ ಮುಕ್ತಿ. ಅವನ ಭಕ್ತಿಗೆ ತಕ್ಕಂತೆ ಬೃಂದಾವನ ಅಥವಾ ನವದ್ವೀಪಗಳಲ್ಲಿ (ಕೃಷ್ಣನ ಧಾಮಗಳು-ವಾಸಸ್ಥಾನಗಳು), ಅವರ ಯೋಗ್ಯತೆಗೆ ತಕ್ಕಂತೆ ಶುದ್ಧಸತ್ವವನ್ನು (ಆನಂದವನ್ನು) ಅನುಗ್ರಹಿಸುತ್ತಾನೆ.
ಶೈವ ದರ್ಶನಗಳಲ್ಲಿ ಮೋಕ್ಷ
- ಶೈವ ದರ್ಶನಗಳಲ್ಲಿ (ಅದ್ವೈತ) ಮಲತ್ರಯಗಳನ್ನು ಕಳೆದುಕೊಂಡು ಜೀವನು ತನ್ನ ಜೀವ ಭಾವವನ್ನು ತೊರೆದು ಶಿವತ್ವವನ್ನು ಪಡೆಯುವುದೇ ಮುಕ್ತಿ ಅಥವಾ ಮೋಕ್ಷ . ಇತರ ಶೈವದರ್ಶನಗಳಲ್ಲಿ ಮುಕ್ತಿಯಲ್ಲೂ ಶಿವನಿಗೂ ಜೀವನಿಗೂ ಬೇಧವಿದೆ. ಶಿವನ ಆನಂದ ಮಾತ್ರವಿದೆ. ಆದರೆ ಪ್ರತ್ಯಭಿಜ್ಞಾನ ದರ್ಶನ , ವೀರಶೈವ ದರ್ಶನ ಗಳಲ್ಲಿ ಮುಕ್ತಾಯದಲ್ಲಿ ಸಂಪೂರ್ಣ ಅಬೇಧವನ್ನು ಅಂಗೀಕರಿಸಲಾಗಿದೆ.
- ಹೀಗೆ ವಿವಿಧ ಭಕ್ತಿಮಾರ್ಗಗಳಲ್ಲಿ ಅವರವರ ದೇವರ ಬಳಿ ಆನಂದದಿಂದಿರುವುದೇ ಮೋಕ್ಷ.
ತಾತ್ಪರ್ಯ
- ಮೋಕ್ಷವೇ ಬೇರೆ ; ಸ್ವರ್ಗವೇ ಬೇರೆ. ವೇದಾಂತ ದಲ್ಲಿ (ಅದ್ವೈತದಲ್ಲಿ ) ಶುದ್ಧ ಜ್ಞಾನ -ಆನಂದ ಸ್ವರೂಪ -ಬ್ರಹ್ಮ ಪ್ರಾಪ್ತಿಯೇ ಮೋಕ್ಷ . ಸ್ವರ್ಗವಲ್ಲ. ಸ್ವರ್ಗದಲ್ಲಿ ಇಲ್ಲಿ ಇರುವ ಸುಖವೆಲ್ಲಾ ಇನ್ನೂ ಹೆಚ್ಚಾಗಿ ಕೊರತೆ ಇಲ್ಲದೆ ಇದೆ . ಆದರೆ ಮೋಕ್ಷ ಅಂತ್ಯವಿಲ್ಲದ ಆನಂದವನ್ನು ಪಡೆಯುವುದು. ಭಕ್ತಿ-ವೇದಾಂತಿಗಳ ಪ್ರಕಾರ ಜೀವನು ಸ್ವರ್ಗಕ್ಕಿಂತಲೂ ಉತ್ತಮ ಸ್ವರ್ಗ ಪ್ರಾಪ್ತಿಯೇ ಮೋಕ್ಷವೆನ್ನುತ್ತಾರೆ (ವೈಕುಂಠ) . ಅದರಲ್ಲೂ ತಾರತಮ್ಯವಿದೆ . (ಕೆಲವು ಆತ್ಮಗಳಿಗೆ ಅದಕ್ಕೆ ಪ್ರವೇಶವೇ ಇಲ್ಲ.)
- ಭಾರತೀಯ ಮೋಕ್ಷ ಕಲ್ಪನೆಯು - ಮರಣ, ಪಿತೃಲೋಕ ಗಮನ (ವೇದ), ದೇವಲೋಕ (ಸ್ವರ್ಗ) ವಾಸ (ಇವು ವೇದ ನಂತರದ ಪೌರಾಣಿಕ ಕಲ್ಪನೆ)ಇದೆಲ್ಲಕ್ಕಿಂತ ಮಿಗಿಲಾಗಿ . ಆನಂದಮಯ ಸ್ಥಿತಿ, ನಿರಾಕಾರ -ನಿರ್ಗುಣ-ಅನಾದಿ-ಅನಂತವಾದ-ಮೂಲ ಚೈತನ್ಯದಲ್ಲಿ ಲೀನ (ಮೋಕ್ಷ)(ಉಪನಿಷತ್ ಆಧಾರ)-(ಇದನ್ನು ಉಳಿದ ಪರಲೋಕ ಗತಿ ಕಲ್ಪನೆಗಿಂತ ಮೊದಲೇ ಹೇಳಿದೆ- ೭-೮ನೆಯ ಶತಮಾನ), ಹೀಗೆ ಬೆಳೆದು ಬಂದಿದೆ. ಆದರೆ ನ್ಯಾಯ ದರ್ಶನದಲ್ಲಿ ದುಃಖ ನಿವಾರಣೆ ಮಾತ್ರಾ ,ಆನಂದವಿಲ್ಲ , ಜೀವನು ಕಲ್ಲುಗುಂಡಿನಂತೆ ಸುಖ-ದುಃಖ ರಹಿತ ಸ್ಥಿತಿಯಲ್ಲಿರುವನು. :ಭಾರತೀಯ ದರ್ಶನಗಳಲ್ಲಿ ಅತೀಂದ್ರಿಯ ಅನುಭವ, ತರ್ಕ, ಗಳಿಗೆ ಪ್ರಾಮುಖ್ಯತೆ ಕೊಟ್ಟಿದೆ . ಪಾಶ್ಚಿಮಾತ್ಯ ಸೆಮೆಟಿಕ್ ಧರ್ಮಗಳಲ್ಲಿ ಧರ್ಮಗಳ ಚಿಂತನೆಯೇ ಬೇರೆ ವಿಧ.[೩]
ಸೆಮೆಟಿಕ್ ಧರ್ಮ
:ಪಾಶ್ಚಿಮಾತ್ಯ ಸೆಮೆಟಿಕ್ ಧರ್ಮಗಳಲ್ಲಿ (ಕ್ರಿಶ್ಚಿಯನ್ ಮತ್ತು ಇಸ್ಲಾಂ) ಧರ್ಮಗ್ರಂಥಗಳದ್ದೇ ಕೊನೆಯ ಮಾತು . ತರ್ಕಕ್ಕೆ ಅವಕಾಶವಿಲ್ಲ ಅದನ್ನೇ ಸಮರ್ಥಿಸಬೇಕು . ಅದರಲ್ಲಿ ದೇವನು ಸ್ವರ್ಗದಲ್ಲಿರುವ ಒಬ್ಬ ಸರ್ವಶಕ್ತ - ಸರ್ವಜ್ಞ ವ್ಯಕ್ತಿ (Zeus;Jove ; Allah;) ; ಮರಣನಂತರ ಆತ್ಮಗಳು ಪ್ರಳಯದ ವರೆಗೂ ಕಾಯಬೇಕು; ಸ್ವರ್ಗವೋ-ನರಕವೋ, ತೀರ್ಮಾನವಾಗಲು ಆತ್ಮಗಳು ತೀರ್ಮಾನದ ದಿನಕ್ಕೆ ಸಮಾಧಿಯಲ್ಲಿ ಮಲಗಿ ಕಾಯಬೇಕು. ಆ ದಿನಕ್ಕೆ ಅಂತಿಮ ನಿರ್ಣಯದ ದಿನ ಎಂದು ಹೆಸರು(Judgement Day;Last Judgement; Last Day). ಪ್ರಳಯದ ನಂತರ ಎಲ್ಲಾ ಆತ್ಮಗಳನ್ನು ದೇವನು -ಸ್ವರ್ಗಪಿತನು ಕರೆಸಿಕೊಂಡು ವಿಚಾರಿಸಿ ಪುಣ್ಯವಂತರನ್ನು (ಅವರವರ ಪುಣ್ಯದಲ್ಲಿ ಪಾಪಗಳನ್ನು ಕಳೆದು ಪುಣ್ಯ ಹೆಚ್ಚಾಗಿ ಉಳಿದವರನ್ನು) ಸ್ವರ್ಗಕ್ಕೂ , ಪಾಪ ಅಧಿಕವಾದವರನ್ನು ಬೆಂಕಿ ಉರಿಯುತ್ತಿರುವ ನರಕಕ್ಕೂ ಕಳಿಸುವನು . ಅವರು ಹಿಂತಿರುಗುವ ಪ್ರಶ್ನೆ ಇಲ್ಲ . ನರಕದ ಯಜಮಾನ ಸ್ಶೆತಾನ . ದೈವ ವಿರೋಧಿ .ಅವನದು-ಅದು ಅಧೋ ಲೋಕ. ದೇವನದು ಸ್ವರ್ಗವು ಮೇಲಿನ-ಎಂದರೆ ಊರ್ಧ್ವಲೋಕ. ಆದ್ದರಿಂದ ಅವರು ಸತ್ತವರಿಗೆ ಸ್ವರ್ಗಕ್ಕೆ ಹೋಗು ಅಥವಾ ಸ್ವರ್ಗಸ್ಥನಾದನು ಎನ್ನವುದಿಲ್ಲ.ಆತ್ಮವು ಆ ನಿರ್ಣಯದ ದಿನದವರೆಗೂ ಕಾಯಬೇಕು; ಅದು ಕಾಯುವ ಹಿಂಸೆ; ಅದಕ್ಕೇ ಶಾಂತಿಯಿಂದ ಮಲಗಿರು ಎನ್ನುತ್ತಾರೆ /ಅಥವಾ ಆತ್ಮಕ್ಕೆ ಶಾಂತಿಯಾಗಲಿ ಎನ್ನುತ್ತಾರೆ. ಎಂದರೆ ಮಲಗಿದ ಗೋರಿಯಲ್ಲಿರುವ ಆತ್ಮವು ಶಾಂತಿಯಿಂದ ಇರಲಿ/ಕಾಯಲಿ ( Rest In Peace =RIP) ಎಂದು |
ಓಂ ತತ್ಸತ್
ನೋಡಿ
ಆಧಾರ
- ಭಾರತೀಯ ತತ್ತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.
ಉಲ್ಲೇಖಗಳು
- ↑ see: Mircea Eliade (1958, Reprinted: 2009), Yoga: Immortality and Freedom, Princeton University Press, ISBN 978-0691142036, pp 33-34;
- ↑ Sarah Strauss (2005), Positioning Yoga, Berg/Oxford International, ISBN 1-85973-739-0, pp 15
- ↑ ಭಾರತೀಯ ತತ್ತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.