ರೆಪ್ಪೆ
ರೆಪ್ಪೆಯು ಮಾನವನ ಕಣ್ಣನ್ನು ಆವರಿಸುವ ಮತ್ತು ರಕ್ಷಿಸುವ ಚರ್ಮದ ಒಂದು ತೆಳು ಪದರ. ಲೆವೇಟರ್ ಪ್ಯಾಲ್ಪಬ್ರೇ ಸುಪೀರಿಯಾರಿಸ್ ಸ್ನಾಯುವು ಕಣ್ಣನ್ನು "ತೆರೆಯಲು" ರೆಪ್ಪೆಯನ್ನು ಒಳಗೆಳೆದುಕೊಳ್ಳುತ್ತದೆ. ಇದು ಸ್ವಪ್ರೇರಣೆಯಿಂದ ಅಥವಾ ಅನೈಚ್ಛಿಕವಾಗಿ ಇರಬಹುದು. ಮಾನವ ರೆಪ್ಪೆಯು ವಿಶಿಷ್ಟ ಲಕ್ಷಣವಾಗಿ ರೆಪ್ಪೆಯ ಅಂಚಿನ ಉದ್ದಕ್ಕೆ ರೆಪ್ಪೆಗೂದಲುಗಳ ಸಾಲನ್ನು ಹೊಂದಿರುತ್ತದೆ. ಇವು ಕಣ್ಣನ್ನು ದೂಳು ಮತ್ತು ಬಾಹ್ಯ ಕಸಕಡ್ಡಿಗಳಿಂದ, ಜೊತೆಗೆ ಬೆವರಿನಿಂದ ರಕ್ಷಣೆಯನ್ನು ಹೆಚ್ಚಿಸುವ ಕಾರ್ಯನಿರ್ವಹಿಸುತ್ತವೆ. ಇದರ ಪ್ರಧಾನ ಕ್ರಿಯೆಯೆಂದರೆ ಕಣ್ಣಿನ ಮೇಲ್ಮೈಯನ್ನು ತೇವವಾಗಿ ಇಡಲು, ನಿಯಮಿತವಾಗಿ ಕಣ್ಣೀರು ಮತ್ತು ಇತರ ಸ್ರಾವಗಳನ್ನು ಕಣ್ಣಿನ ಮೇಲ್ಮೈ ಮೇಲೆ ಹರಡುವುದು, ಏಕೆಂದರೆ ಕಾರ್ನಿಯಾ ನಿರಂತರವಾಗಿ ತೇವವಾಗಿ ಇರಬೇಕಾಗುತ್ತದೆ. ರೆಪ್ಪೆಗಳು ಮಲಗಿದಾಗ ಕಣ್ಣುಗಳು ಒಣಗಿ ಹೋಗದಂತೆ ತಡೆಯುತ್ತವೆ. ಮೇಲಾಗಿ ಮಿಟುಕಿಸುವಿಕೆ ನಿರಿಚ್ಛಾ ಪ್ರತಿಕ್ರಿಯೆಯು ಕಣ್ಣನ್ನು ಬಾಹ್ಯ ಪದಾರ್ಥಗಳಿಂದ ರಕ್ಷಿಸುತ್ತದೆ.
ರೆಪ್ಪೆಯ ಚರ್ಮವು ಇತರ ಪ್ರದೇಶಗಳ ಚರ್ಮವನ್ನು ಹೋಲುತ್ತದೆ, ಆದರೆ ತುಲನಾತ್ಮಕವಾಗಿ ತೆಳ್ಳಗಿದ್ದು[೧] ಹೆಚ್ಚು ವರ್ಣದ್ರವ್ಯ ಜೀವಕೋಶಗಳನ್ನು ಹೊಂದಿರುತ್ತದೆ. ಕಾಯಿಲೆಯಿರುವ ವ್ಯಕ್ತಿಗಳಲ್ಲಿ ಇವು ಪರಿಭ್ರಮಿಸಬಹುದು ಮತ್ತು ರೆಪ್ಪೆಗಳ ಬಣ್ಣ ಬದಲಾಗುವಿಕೆಗೆ ಕಾರಣವಾಗಬಹುದು. ಇದು ಬೆವರು ಗ್ರಂಥಿಗಳು ಮತ್ತು ಕೂದಲುಗಳನ್ನು ಹೊಂದಿರುತ್ತದೆ, ಈ ಕೂದಲುಗಳು ರೆಪ್ಪೆಯ ಅಂಚನ್ನು ಭೇಟಿಯಾದಾಗ ರೆಪ್ಪೆಗೂದಲುಗಳಾಗುತ್ತವೆ. ರೆಪ್ಪೆಯ ಚರ್ಮವು ದೇಹದಲ್ಲಿ ಎಲ್ಲಿಯಾದರೂ ಕಂಡುಬರುವ ಮೇದೋ ಗ್ರಂಥಿಗಳ ಅತಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುತ್ತದೆ. ಮರಣದ ನಂತರ, ಮೃತರ ಕಣ್ಣುಗಳನ್ನು ಮುಚ್ಚಲು ರೆಪ್ಪೆಗಳನ್ನು ಕೆಳಗೆ ಎಳೆಯುವುದು ಅನೇಕ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿದೆ. ಇದು ಶವಸಂಸ್ಕಾರದ ಸಿದ್ಧತೆಯ ಸಾಮಾನ್ಯ ಭಾಗವಾಗಿದೆ.
ಮಾನವರಲ್ಲಿ, ರೆಪ್ಪೆಗಳಿಗೆ ಮೇಲಿನ ಮತ್ತು ಕೆಳಗಿನ ರೆಪ್ಪೆಯಲ್ಲಿ ಸ್ಥಿತವಾಗಿರುವ ಎರಡು ಕಮಾನುಗಳಿಂದ ರಕ್ತದ ಪೂರೈಕೆಯಾಗುತ್ತದೆ. ಈ ಕಮಾನುಗಳ ರಚನೆಯು ಲ್ಯಾಕ್ರಮಲ್ ಅಪಧಮನಿ ಮತ್ತು ನೇತ್ರ ಅಪಧಮನಿಯಿಂದ ಅನುಗುಣವಾಗಿ ಕವಲೊಡೆದ ಪಾರ್ಶ್ವದ ಅಪಧಮನಿಗಳು ಮತ್ತು ಮಧ್ಯಮ ಅಪಧಮನಿಗಳ ಅಡ್ಡಸೇರುವೆಗಳಿಂದ ಆಗಿರುತ್ತದೆ.
ರೆಪ್ಪೆಯ ಕುಟಿಕೆಯು ಜ಼ೀಸ್ ಮೇದೋ ಗ್ರಂಥಿಗಳ ಸೋಂಕು. ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ರೆಪ್ಪೆಯ ಕೆಳಗೆ ಇರಿಸಲಾದ ಕೆಂಪು ಗಂಟಿನಂತೆ ಕಾಣುತ್ತದೆ. ತೀವ್ರ ಆರಂಭಿಕ ಲಕ್ಷಣಗಳು ಇದರಲ್ಲಿ ಇರುತ್ತದೆ. ಮುಖ್ಯ ಲಕ್ಷಣಗಳಲ್ಲಿ ನೋವು, ರೆಪ್ಪೆಗಳ ಕೆಂಪುತನ, ಮತ್ತು ಕೆಲವೊಮ್ಮೆ ಉಬ್ಬಿದ ರೆಪ್ಪೆಗಳು ಸೇರಿವೆ.
ಉಲ್ಲೇಖಗಳು
- ↑ Goldman, Lee. Goldman's Cecil Medicine (24th ed.). Philadelphia: Elsevier Saunders. p. 2426. ISBN 1437727883.