ರೋಮನ್ ಸಾಮ್ರಾಜ್ಯ

ರೋಮನ್ ಸಾಮ್ರಾಜ್ಯ- ಕ್ರಿ.ಪೂ ೨೭ ರಿಂದ ಕ್ರಿ. ಶ. ೪೭೬. ಪ್ರಪಂಚದ ಸಾಂಸ್ಕøತಿಕ, ಚಾರಿತ್ರಿಕ ಇತಿಹಾಸದ ಮೇಲೆ ಅದರಲ್ಲೂ ಪಾಶ್ಚಾತ್ಯರ ಮೇಲೆ ಅಗಾಧ ಪರಿಣಾಮ ಬೀರಿದ ಒಂದು ರಾಜಸತ್ತೆ.

ಕ್ರಿ.ಶ ೧೧೭ರಲ್ಲಿ ರೋಮನ್ ಸಾಮ್ರಾಜ್ಯ

ರೋಮನ್ ಸಾಮ್ರಾಜ್ಯವು ಪ್ರಾಚೀನ ರೋಮನ್ ನಾಗರಿಕತೆಯ ರೋಮನ್ ಗಣರಾಜ್ಯದ ನಂತರದ ಹಂತ. ಇದು ಸರ್ವಾಧಿಕಾರದ ಸರ್ಕಾರವನ್ನು ಹೊಂದಿದ್ದು, ಯುರೋಪ್ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಅತಿ ದೊಡ್ಡ ಸಾಮ್ರಾಜ್ಯವನ್ನು ಹೊಂದಿತ್ತು. ಇದರ ಹಿಂದೆ ಇದ್ದ ೨೦೦ ವರ್ಷಗಳ ರೋಮನ್ ಗಣರಾಜ್ಯ ಅಂತರ್ಯುದ್ಧದಿಂದ ದುರ್ಬಲ ಗೊಂಡಿತ್ತು.

ಇತಿಹಾಸ

ಆರಂಭದ ಇತಿಹಾಸ

ರೋಮನ್ನರ ಪೂರ್ವಜರು ಮೆಡಿಟರೇನಿಯನ್ ಜನಸಮೂಹಕ್ಕೆ ಸೇರಿದವರು. ಇವರ ಭಾಷೆ ಲ್ಯಾಟಿನ್ ಎಂದು ತಿಳಿದು ಬರುತ್ತದೆ. ಕ್ರಿ.ಪೂ.ಸು.೨,೦೦೦ ವೇಳೆಗೆ ಇವರು ಇಟಲಿಗೆ ಆಗಮಿಸಿದರು. ರೋಮಿನ ಪ್ರಾರಂಭದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ರೋಮನ್ ದಂತಕಥೆಗಳ ಪ್ರಕಾರ ಕ್ರಿ.ಪೂ. ಸು.೭೫೩ರಲ್ಲಿ ರೋಮುಲಸ್ ಮತ್ತು ರೀಮಸ್ ಎಂಬ ಸಹೋದರರು ಇಟಲಿಯ ಟೈಬರ್ ನದಿ ದಡದಲ್ಲಿ ಪಾಲಟೈನ್ ಬೆಟ್ಟದ ಮೇಲೆ ರೋಮ್ ನಗರವನ್ನು ಸ್ಥಾಪಿಸಿದ ರೆಂದು ಹೇಳಲಾಗುತ್ತದೆ. ಇದರ ಪ್ರಥಮ ದೊರೆ ರೋಮುಲಸ್ ತನ್ನ ಪ್ರಜೆಗಳನ್ನು ಪೆಟ್ರೀಷಿಯನ್ (ಶ್ರೀಮಂತರು) ಹಾಗೂ ಪ್ಲೇಬಿಯನ್ನ್ (ಜನಸಾಮಾನ್ಯರು) ರೆಂದು ವಿಭಾಗಿಸಿದ್ದ. ರೋಮುಲಸ್ ಕ್ರಿ.ಪೂ. ೭೧೭ರಲ್ಲಿ ಕಾಲವಾದ. ಇವನ ತರುವಾಯ ಆರು ದೊರೆಗಳು ರಾಜ್ಯವಾಳಿದರು. ಅವರು ನಿರಂಕುಶರೂ ಕ್ರೂರಿಗಳೂ ಆಗಿದ್ದು ಅವರ ಆಳಿಕೆ ಜನಪ್ರಿಯವಾಗಲಿಲ್ಲ. ಅವರ ಆಳಿಕೆಯಿಂದ ಬೇಸತ್ತ ರೋಮ್‍ನ ಜನತೆ ಕ್ರಿ.ಪೂ.೫೦೯ರಲ್ಲಿ ಎಟ್ರೊಸ್ಕನ್ನರ ಕೊನೆಯದೊರೆ ಟಾರ್‍ಕ್ವಿನಸ್ ಸೂಪರ್‍ಬಸ್ ಎಂಬವವನ ವಿರುದ್ಧ ದಂಗೆ ಎದ್ದು ರಾಜತ್ವವನ್ನು ಕೊನೆಗಾಣಿಸಿ ರಿಪಬ್ಲಿಕ್ (ಗಣರಾಜ್ಯ) ಸರ್ಕಾರವನ್ನು ಸ್ಥಾಪಿಸಿದರು. ಕ್ರಿ.ಪೂ ೫೦೯ : ರಾಜಪ್ರಭುತ್ವ ರದ್ದಾದ ಅನಂತರ ರಿಪಬ್ಲಿಕ್ ಸರ್ಕಾರ ವ್ಯವಸ್ಥೆ ಜಾರಿಗೆ ಬಂದಿತು. ಇದರಲ್ಲಿ ರಾಜನಿಗೆ ಬದಲಾಗಿ ಇಬ್ಬರು ಚುನಾಯಿತ ಪೆಟ್ರೀಷಿಯನ್ ವರ್ಗಕ್ಕೆ ಸೇರಿದ್ದ ಕಾನ್ಸುಲ್‍ರ್ ಗಳು ಆಡಳಿತ ನಡೆಸುತ್ತಿದ್ದರು. ಇವರಿಗೆ ಸಲಹೆ ನೀಡಲು ೩೦೦ ಸೆನೆಟ್ ಸದಸ್ಯರ ಜೊತೆಗೆ ಕೊಮಿಟಿಯ್ಯಾಕ್ಯೂರಿಯಾಟ ಮತ್ತು ಕೊಮಿಟಿಯಾ ಸೆಂಚುರಿಯಾಟ ಎಂಬ ಸಾಮಾನ್ಯ ಪ್ರತಿನಿಧಿ ಸಭೆಗಳೂ ಇದ್ದವು. ಇದರಲ್ಲಿ ಪೆಟ್ರೀಷಿಯನ್ನರ ಪ್ರಭಾವ ಹೆಚ್ಚಾಗಿದ್ದು ಸಾಮಾನ್ಯ ವರ್ಗದ ಪ್ಲೇಬಿಯನ್ನರಿಗೆ ಯಾವ ಪ್ರಾತಿನಿಧ್ಯವಿರಲಿಲ್ಲ. ಇದರಿಂದ ಪೆಟ್ರೀಷಿಯನ್ ಮತ್ತು ಪ್ಲೇಬಿಯನ್ ವರ್ಗಗಳ ನಡುವೆ ಹೋರಾಟ ಆರಂಭವಾಗಿ ಇದು ೨ ಶತಮಾನಗಳ ಕಾಲ ನಡೆದು ಕ್ರಿ.ಪೂ.೨೮೭ರ ವೇಳೆಗೆ ಪ್ಲೇಬಿಯನ್ನರು ರಾಜಕೀಯ ಹಕ್ಕು ಗಳಿಸಿದರು.

ಈ ಅವಧಿಯಲ್ಲಿ ಕ್ರಿ.ಪೂ. ೪೮೯-೨೬೬ ರೋಮ್ ಇಟಲಿಯ ಪರ್ಯಾಯ ದ್ವೀಪವನ್ನು ಗೆದ್ದು ತನ್ನ ಪ್ರಭುತ್ವ ಸ್ಥಾಪಿಸಿತು. ರೋಮ್‍ನ ಸಮರ್ಪಕ ಸೈನಿಕ ವ್ಯವಸ್ಥೆ ಹಾಗೂ ದಕ್ಷ ಆಡಳಿತ ವ್ಯವಸ್ಥೆಯಿಂದ ಹೊಸ ಹೊಸ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ರೋಮ್‍ನ ಪ್ರತಿಯೊಬ್ಬ ಪ್ರಜೆ ಕನಿಷ್ಠ ೧೬ ದಂಡಯಾತ್ರೆಗಳಲ್ಲಿ ಭಾಗವಹಿಸಬೇಕೆಂಬ ನಿಯಮವಿತು. ಇವರ ಧೈರ್ಯೋತ್ಸಾಹ ಹಾಗೂ ರಾಷ್ಟ್ರಾಭಿಮಾನ ದೇಶದ ಕೀರ್ತಿ ಮತ್ತು ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾಯಿತು. ಇಟಲಿಯ ಅಧೀನತೆಯ ಅನಂತರ ಹೊರ ರಾಜ್ಯವಾದ ಕಾರ್ಥೇಜ್ (ಆಫ್ರಿಕದ ಅಟ್ಲಾಂಟಿಕ್ ತೀರ ಪ್ರದೇಶದಿಂದ ಈಜಿಪ್ಟಿನ ಗಡಿಗಳವರೆಗೆ ತನ್ನ ಅಧಿಕಾರ ಸ್ಥಾಪಿಸಿದ್ದ ರಾಜ್ಯ) ಮೇಲೆ ದಾಳಿಮಾಡಿತು. ಕಾರ್ಥೇಜ್ ಯುದ್ಧ ಸಿಸಿಲಿಯಿಂದ ಪ್ರಾರಂಭವಾಯಿತು. ಸಿಸಿಲಿ ಮತ್ತು ಕಾರ್ಥೇಜ್ ವಶಪಡಿಸಿಕೊಳ್ಳಲು ೩ ಪ್ಯೂನಿಕ್ ಯುದ್ಧಗಳನ್ನು ರೋಮನ್ನರು ಮಾಡಬೇಕಾಯಿತು. ಕ್ರಿ. ಪೂ. ೨೬೪-೨೪೧ರವರೆಗೆ ಮೊದಲನೆಯ ಪ್ಯೂನಿಕ್ ಯುದ್ಧ ನಡೆದು ಸಿಸಿಲಿ, ಸಾರ್ಡಿನಿಯ, ಕಾರ್ಶಿಕವನ್ನು ರೋಮ್ ಗೆದ್ದುಕೊಂಡಿತು. ೨ನೆಯ ಪ್ಯೂನಿಕ್ ಯುದ್ಧ ಕ್ರಿ.ಪೂ.೨೦೨ರ ವರೆಗೆ ಮುಂದುವರಿದು ರೋಮನ್ನರ ಸೈನಿಕ ಶಕ್ತಿಯಿಂದ ಕಾರ್ಥೇಜ್ ಸೋಲನ್ನನುಭವಿಸಿತು. ಅಂತಿಮವಾಗಿ ಕ್ರಿ.ಪೂ. ೧೪೯-೧೪೬ರ ವರೆಗೆ 3ನೆಯ ಪ್ಯೂನಿಕ್ ಯುದ್ಧದಲ್ಲಿ ಕಾರ್ಥೇಜ್‍ನ್ನು ರೋಮನ್ನರು ಧ್ವಂಸ ಮಾಡಿದರು. ಇದರಿಂದ ಮೆಡಿಟರೇನಿಯನ್ ಸಮುದ್ರದವರೆಗೆ ರೋಮನ್ ಸಾಮ್ರಾಜ್ಯ ಸ್ಥಾಪನೆಯಾಯಿತು. ಪ್ಯೂನಿಕ್ ಯುದ್ಧದ ಅವಧಿಯಲ್ಲೆ ರೋಮನ್ನರು ಪೌರ್ವಾತ್ಯ ರಾಜ್ಯಗಳಾದ ಮ್ಯಾಸಿಡೋನಿಯ (ಕ್ರಿ.ಪೂ.೧೪೮), ವಕಿಯನ್ (ಕ್ರಿ.ಪೂ.೧೪೬)ನ್ನು ಗೆದ್ದರು. ಕ್ರಿ.ಪೂ. ೫೦ರ ವೇಳೆಗೆ ರೋಮನ್ನರ ಸಾಮ್ರಾಜ್ಯ ಟರ್ಕಿಯವರೆಗೆ ಹಬ್ಬಿತಲ್ಲದೆ, ಈ ವಿಶಾಲ ಸಾಮ್ರಾಜ್ಯದ ವಿಸ್ತರಣೆಯೊಂದಿಗೆ ಅವರ ಸಂಸ್ಕøತಿಯೂ ಈ ದೇಶಗಳಲ್ಲಿ ಹರಡಿತು.

ಶ್ರೀಮಂತರು ಮತ್ತು ಬಡವರ ನಡುವೆ ಆರ್ಥಿಕ ಅಸಮಾನತೆಯ ಪರಿಣಾಮವಾಗಿ ರೋಮಿನಲ್ಲಿ ಅಂತಃಕಲಹವುಂಟಾಯಿತು. ಈ ಪರಿಸ್ಥಿತಿಯನ್ನು ನಿವಾರಿಸಲು ಕ್ರಿ.ಪೂ. ೧೩೩ ರಿಂದ ಟೈಬೀರಿಯಸ್ ಗ್ರಾಕಸ್ ಮತ್ತು ಕೇಯಸ್ ಗ್ರಾಕಸ್ಸರು ಪ್ರಯತ್ನಿಸಿದರು. ಇವರ ಮರಣದ ಅನಂತರ ರೋಮ್‍ನಲ್ಲಿ ಪ್ರಬಲ ಸೇನಾ ನಾಯಕರು ಅಧಿಕಾರ ರೂಢರಾದರು. ಇವರಲ್ಲಿ ಮೇರಿಯಸ್ ಮತ್ತು ಸುಲ್ಲಾ ಪ್ರಮುಖರು. ಇವರಿಬ್ಬರಿಗೂ ನಡೆದ ಅಧಿಕಾರದ ಹೋರಾಟದಲ್ಲಿ ಅನೇಕ ರೋಮನ್ನರು ಅಸುನೀಗಿದರು. ಮೇರಿಯಸ್ ಕಾಲವಾದ ಮೇಲೆ ಸುಲ್ಲಾ ಸರ್ವಾಧಿಕಾರಿಯಾಗಿ ರೋಮಿನಲ್ಲಿ ಶಾಂತಿ ಸ್ಥಾಪಿಸಿ, ಪೂರ್ವದಲ್ಲಿ ರೋಮನ್ ಸಾಮ್ರಾಜ್ಯ ಸ್ಥಾಪಿಸಿದ. ಇವನ ಅನಂತರ ಸಿಸಿರೋ, ಕ್ರಾಸಸ್, ಪಾಂಪೆ, ಜೂಲಿಯಸ್ ಸೀಸರ್ ಅಧಿಕಾರಕ್ಕೆ ಬಂದರು. ಈ ನಾಯಕರಲ್ಲೆಲ್ಲ ಜ್ಯೂಲಿಯಸ್ ಸೀಸರ್ ಅತ್ಯಂತ ಪ್ರಸಿದ್ಧನಾದವ.

ಜ್ಯೂಲಿಯಸ್ ಸೀಸರ್ ( ಕ್ರಿ.ಪೂ. ೧೦೨-೪೪)

ಜ್ಯೂಲಿಯಸ್ ಸೀಸರ್ ರೋಮ್‍ನ ಸರ್ವಾಧಿ ಕಾರಿಗಳಲ್ಲೆ ಪ್ರಸಿದ್ಧನಾದವನು. ಮಹಾನ್ ಸೇನಾನಿ, ಚತುರ ರಾಜಕೀಯ ನಾಯಕನೂ ಆಗಿದ್ದ ಇವನು ಪ್ರಾರಂಭದಲ್ಲಿ ಸೀಸರ್ ಗಾಲ್ ಪ್ರಾಂತದ ಗೌವರ್ನರ್ ಆಗಿದ್ದ. ಅನಂತರ ಇವನು ಮೆಡಿಟರೇನಿಯನ್‍ನಿಂದ ಉತ್ತರ ಸಮುದ್ರದವರೆಗಿನ ಹಾಗೂ ರೈನ್ ನದಿಯಿಂದ ಅಟ್ಲಾಂಟಿಕ್ ಸಾಗರದ ವರೆಗಿನ ಎಲ್ಲ ಪ್ರದೇಶಗಳನ್ನು ಗೆದ್ದು ಬ್ರಿಟನ್ನಿನ ಮೇಲೂ ಆಕ್ರಮಣ ಮಾಡಿದ. ಇಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡು ಇಟಲಿಯ ಸರ್ವಾಧಿಕಾರಿಯಾಗುವ ಮಹತ್ತ್ವಾಕಾಂಕ್ಷೆಯನ್ನು ಹೊಂದಿದ್ದ. ಇವನ ಏಳಿಗೆಯನ್ನು ಸಹಿಸದ ಸೆನೆಟ್ ಪಕ್ಷದ ನಾಯಕ ಪಾಂಪೇ ಸೇನೆಯನ್ನು ವಿಸರ್ಜಿಸಿ ತತ್‍ಕ್ಷಣವೇ ರೋಮಿಗೆ ಬರಲು ಇವನಿಗೆ ಆಜ್ಞೆಮಾಡಿದ. ಈತನ ಯಶಸ್ಸು ಇವನ ಸೈನ್ಯದಲ್ಲಿತ್ತು. ಈತ ತನ್ನ ಸೈನ್ಯವನ್ನು ವಿಸರ್ಜಿಸಲು ನಿರಾಕರಿಸಿ ರುಬಿಕಾನ್ ನದಿಯನ್ನು ದಾಟಿ ಇಟಲಿಗೆ ಬಂದು ಪಾಂಪೆಯ ನೇತೃತ್ವದಲ್ಲಿದ್ದ ಸೆನೆಟ್ ಸೈನ್ಯದ ವಿರುದ್ಧ ಹೋರಾಡಿ ಥಿಸಲಿಯ ಪಾರ್ಸಲಸ್ ಎಂಬಲ್ಲಿ ಕ್ರಿ.ಪೂ. ೪೮ರಲ್ಲಿ ನಡೆದ ಯುದ್ಧದಲ್ಲಿ ಪಾಂಪೆಯನ್ನು ಸೋಲಿಸಿದ. ಪಾಂಪೆ ಈಜಿಪ್ಟಿಗೆ ಪಲಾಯನ ಮಾಡಿದ. ಸೀಸರ್ ಈಜಿಪ್ಟ್‍ಗೆ ಧಾವಿಸಿ ಪಾಂಪೆಯನ್ನು ಕೊಂದ. ಅಲ್ಲಿ ಈಜಿಪ್ಟ್‍ನ ರಾಣಿಯಾಗಿದ್ದ ಕ್ಲಿಯೋಪಾತ್ರಳಲ್ಲಿ ಮೋಹಗೊಂಡು ಕೆಲವು ದಿವಸ ಅಲ್ಲಿಯೇ ಕಳೆದು ಕ್ರಿ.ಪೂ. ೪೫ರಲ್ಲಿ ರೋಮ್‍ಗೆ ಬಂದ. ಅನಂತರ ಸ್ಪೇಯಿನ್, ಸಾರ್ಡಿನಿಯ, ಕೊರ್ಸಿಕ, ಗ್ರೀಸ್ ಇವನ ಅಧೀನಕ್ಕೆ ಬಂದವು. ಪಾರ್ಸಲಸ್ ಕದನ ರೋಮಿನ ರಿಪಬ್ಲಿಕ್ ಸರ್ಕಾರದ ಅಂತ್ಯದ ಸೂಚಕವಾಯಿತು. ಸೀಸರ್ ಸರ್ವಾಧಿಕಾರಿಯಾಗಿ ಚಕ್ರವರ್ತಿಯಂತೆ ರೋಮ್ ಸಾಮ್ರಾಜ್ಯವನ್ನು ಆಳಿದ. ರೋಮ್ ಏಕವ್ಯಕ್ತಿಯ ಆಡಳಿತ ಕ್ಕೊಳಗಾಗಿ ಮಿಲಿಟರಿ ಸರ್ವಾಧಿಕಾರ ಜಾರಿಗೆ ಬಂದಿತು. ಸೀಸರ್ ಮರಣಹೊಂದುವ ವೇಳೆಗೆ ರೋಮನ್ ಸಾಮ್ರಾಜ್ಯ ಪಶ್ಚಿಮದಲ್ಲಿ ಸ್ಪೇಯಿನ್‍ನಿಂದ ಪೂರ್ವದಲ್ಲಿ ಸಿರಿಯದವರೆಗೂ, ದಕ್ಷಿಣದಲ್ಲಿ ಕಾರ್ಥೇಜಿ ನಿಂದ ಉತ್ತರದಲ್ಲಿ ಗಾಲ್ ಪ್ರದೇಶದವರೆಗೂ ವ್ಯಾಪಿಸಿತ್ತು.

ಜ್ಯೂಲಿಯಸ್ ಸೀಸರ್ ಮಹಾನ್‍ದಿಗ್ವಿಜಯಿಯೂ ಶ್ರೇಷ್ಠ ದೊರೆಯೂ ಆಗಿದ್ದಾನೆ. ಜುಲೈ ತಿಂಗಳಿಗೆ ಅವನ ಹೆಸರನ್ನೇ (ಜೂಲಿಯಸ್) ಇಡಲಾಯಿತು. ಇವನು ಅನೇಕ ಸುಧಾರಣೆಗಳನ್ನು ಮಾಡಿದ. ಹಳೆಯ ರೋಮನ್ ನಗರದ ನವೀಕರಣ, ವ್ಯವಸಾಯ, ವ್ಯಾಪಾರ ವಾಣಿಜ್ಯಕ್ಕೆ ಪ್ರೋತ್ಸಾಹ, ಜನಗಣತಿ ವ್ಯವಸ್ಥೆ, ಜನರ ನೈತಿಕ ಮಟ್ಟಸುಧಾರಣೆ, ನಾಣ್ಯ ಮತ್ತು ತೆರಿಗೆ ಪದ್ಧತಿಯಲ್ಲಿನ ಸುಧಾರಣೆಗಳು ಇವನ ಪ್ರಮುಖ ಸಾಧನೆಗಳಾಗಿವೆ. ರೋಮನ್ ಕ್ಯಾಲೆಂಡರಿನ ಬದಲು ಈಜಿಪ್ಶಿಯನ್ ಕ್ಯಾಲೆಂಡರನ್ನು ಪರಿಷ್ಕರಿಸಿ ಜೂಲಿಯಸ್ ಕ್ಯಾಲೆಂಡರ ನ್ನು ಜಾರಿಗೆ ತಂದ. ಆಡಳಿತದಲ್ಲಿ ದಕ್ಷತೆಯನ್ನುಂಟು ಮಾಡಿದ. ಗಣರಾಜ್ಯವಾದಿಗಳ ಗುಂಪೊಂದು ಕ್ರಿ.ಪೂ.೪೪ ಮಾರ್ಚ್ ೧೫ರಂದು ಇವನನ್ನು ಕೊಲೆ ಮಾಡಿತು. ಅನಂತರ ರೋಮನ್ ಗಣರಾಜ್ಯ ಕೊನೆಗೊಂಡು ರೋಮನ್ ಸಾಮ್ರಾಜ್ಯ ಸ್ಥಾಪನೆಯಾಯಿತು.

ಆಗಸ್ಟ್‍ಸ್ (ಕ್ರಿ.ಪೂ. ೩೧ - ಕ್ರಿ. ಶ. ೧೪)

ಜೂಲಿಯಸ್ ಸೀಸರನ ಅನಂತರ ಅವನ ಸೋದರ ಮಗ ಆಕ್ಟೇವಿಯಸ್ ಸೀಸರ್ (ಆಗಸ್ಟಸ್), ಸೀಸರನ ಅಧಿಕಾರಿಯಾಗಿದ್ದ ಮಾರ್ಕ್ ಆ್ಯಂಟನಿ ಮತ್ತು ರಾಜಕಾರಣಿ ಲೆಪಿಡಸ್‍ರು ರೋಮ್ ಸಾಮ್ರಾಜ್ಯದ ಮೇಲೆ ನಿಯಂತ್ರಣ ಸಾಧಿಸಿದರು. ಇವರ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆದು ಸಮರ್ಥನಾದ ಆಕ್ಟೇವಿಯಸ್ ಆಫ್ರಿಕ ಪ್ರಾಂತದ ಲೆಪಿಡಸ್‍ನನ್ನು ನಿರ್ನಾಮಮಾಡಿ, ಈಜಿಪ್ಟ್ ಪ್ರಾಂತದ ಮಾರ್ಕ್ ಆ್ಯಂಟನಿಯನ್ನು ಕ್ರಿ. ಪೂ. ೩೧ರಲ್ಲಿ ನಡೆದ ಆಕ್ಟಿಯ ಕದನದಲ್ಲಿ ಸೋಲಿಸಿದ. ಆ್ಯಂಟನಿ ಮತ್ತು ಈಜಿಪ್ಟಿನ ರಾಣಿ ಕ್ಲಿಯೋಪಾತ್ರ ಆತ್ಮಹತ್ಯೆ ಮಾಡಿಕೊಂಡರು. ಇದರಿಂದ ಈಜಿಪ್ಟ್ ರೋಮನ್ ಸಾಮ್ರಾಜ್ಯದ ಭಾಗವಾಯಿತು.

ಆಕ್ಟಿಯ ಕದನದ ಅನಂತರ ಆಕ್ಟೇವಿಯಸ್ ಸೀಸರ್ ಕ್ರಿ.ಪೂ. ೨೭ರಲ್ಲಿ ರೋಮನ್ ಸಾಮ್ರಾಜ್ಯಕ್ಕೆ ಪೂರ್ಣ ಒಡೆಯನಾದನು. ಅವನಿಗೆ ಆಗಸ್ಟಸ್ (ಜ್ಞಾನಿ), ಪ್ರಿನ್ಸೆಪ್ (ಪ್ರಥಮ ಪ್ರಜೆ) ಮತ್ತು ಇಂಪರೇಟರ್ (ಸೇನೆಯ ಮಹಾದಂಡನಾಯಕ) ಎಂಬ ಬಿರುದುಗಳನ್ನು ನೀಡಲಾಯಿತು. ಆಗಸ್ಟಸ್ ಎಂದು ಪ್ರಸಿದ್ಧನಾದ ಇವನ ಕಾಲದಲ್ಲಿ ಯಾದವೀ ಕಲಹ ಅಂತ್ಯವಾಗಿ ಶಾಂತಿ ಮತ್ತು ಸಮೃದ್ಧಿ ನೆಲಸಿ ಸಾಂಸ್ಕøತಿಕ ಪುನರುತ್ಥಾನ ವಾಯಿತು. ಇವನ ಕಾಲವನ್ನು ಸುವರ್ಣಯುಗ ವೆಂದು ಕರೆಯ ಲಾಗುತ್ತದೆ.

ಜೂಲಿಯಸ್ ಸೀಸರ್‍ನಂತೆ ಆಗಸ್ಟಸ್‍ನು ದಕ್ಷ ಸರ್ಕಾರವನ್ನು ಸ್ಥಾಪಿಸಿದ. ಪ್ರಾಂತೀಯ ಆಡಳಿತದಲ್ಲಿ ಸುಧಾರಣೆ ತಂದ. ಇವನ ಮಾರ್ಗದರ್ಶನದಲ್ಲಿ ನಿಷ್ಠಾವಂತ ಅಧಿಕಾರಿಗಳು ಸಾಮ್ರಾಜ್ಯದ ಆಡಳಿತ ಕಾರ್ಯ ನಿರ್ವಹಿಸುತ್ತಿದ್ದರು. ಗಡಿರಕ್ಷಣೆ, ಏಕರೀತಿಯ ತೆರಿಗೆ, ವ್ಯಾಪಾರ ವಾಣಿಜ್ಯಕ್ಕೆ ಪ್ರೋತ್ಸಾಹ, ಭಾರತದೊಂದಿಗೆ ವ್ಯಾಪಾರ ಸಂಪರ್ಕ, ಸ್ಥಳೀಯ ಸರ್ಕಾರ ಸ್ಥಾಪನೆ, ರಸ್ತೆಗಳ ನಿರ್ಮಾಣ, ಪಾಕ್ಸ್‍ರೋಮನಾ ಅಥವಾ ರೋಮನ್ ಶಾಂತಿ ಇವನ ಸಾಧನೆಗಳಾಗಿವೆ.

ಈತ ಕಲೆ, ಸಾಹಿತ್ಯ, ವಾಸುಶಿಲ್ಪ, ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ. ಇಟ್ಟಿಗೆಗಳ ನಗರವಾಗಿದ್ದ ರೋಮ್‍ನ್ನು ಅಮೃತಶಿಲೆಗಳ ನಗರವನ್ನಾಗಿ ಮಾಡಿದ ಕೀರ್ತಿ ಇವನದು. ಇವನ ಕಾಲದಲ್ಲಿ ರೋಮನ್ ಸಾಹಿತ್ಯ ಪರಾಕಾಷ್ಠೆಯನ್ನು ಮುಟ್ಟಿತು. (ನೋಡಿ : ರೋಮನ್ ಸಾಹಿತ್ಯ). ಸಾಮಾಜಿಕ ಜೀವನ ಮಟ್ಟ ಸುಧಾರಿಸಿತು. ಹೀಗೆ ಆಗಸ್ಟಸ್ ಕಾಲದಲ್ಲಿ ಜೀವನ ವೈಭವಪೂರ್ಣವೂ ಉತ್ಸಾಹದಾಯಕವೂ ಆಗಿತ್ತು. ಈತನಿಂದಾಗಿ ರೋಮನ್ ಸಾಮ್ರಾಜ್ಯ ಸುಮಾರು ಐದುನೂರು ವರ್ಷಗಳ ಕಾಲ ಮುಂದುವರಿಯಿತು.

ಆಗಸ್ಟ್‍ಸ್ ನ ನಂತರ

ಆಗಸ್ಟ್‍ಸ್ ನ ಅನಂತರ ಟೈಬೀರಿಯಸ್ (೧೪-೩೭) ಚಕ್ರವರ್ತಿಯಾದ. ರೋಮನ್ ಸಾಮ್ರಾಜ್ಯದ ಒಂದು ಪ್ರಾಂತವಾಗಿದ್ದ ಪಾಲಸ್ಪೈನಿನಲ್ಲಿ ಜೀಸಸ್ ಕ್ರೈಸ್ತನನ್ನು ಶಿಲುಬೆಗೆ ಏರಿಸಿದ್ದು ಇವನ ಕಾಲದ ಬಹುಮುಖ್ಯ ಘಟನೆ. ಇವನ ಅನಂತರ ಕ್ಯಾಲಿಗುಲಾ ಹಾಗೂ ಕ್ಲಾಡಿಯಸ್‍ರು ಅಧಿಕಾರಕ್ಕೆ ಬಂದರು. ಇವನ ಆಳಿಕೆಯಲ್ಲಿ ಬ್ರಿಟನ್ನಿನ ದಕ್ಷಿಣಭಾಗ ರೋಮನ್ ಸಾಮ್ರಾಜ್ಯಕ್ಕೆ ಸೇರಿತ್ತು. ಅನಂತರ ನಿರೋ (ಕ್ರಿ.ಶ. ೫೪-೬೮) ಚಕ್ರವರ್ತಿಯಾದ. ಇವನು ಕ್ರೂರಿಯೂ ವಿಷಯಲಂಪಟನೂ ಆಗಿದ್ದು ಕ್ರಿಶ್ಚಿಯನ್ನರಿಗೆ ಚಿತ್ರಹಿಂಸೆಕೊಟ್ಟ. ಇವನ ಕಾಲದಲ್ಲಿ ರೋಮ್ ಪಟ್ಟಣದ ಅರ್ಧ ಭಾಗ ಬೆಂಕಿಗೆ ಆಹುತಿಯಾಯಿತು. 68-180ರ ವರೆಗೆ ಆಳಿದ ಚಕ್ರವರ್ತಿಗಳಲ್ಲಿ ಪಿಸ್‍ಪಾಸಿಯಸ್ (೭೦-೭೯), ಟೆಟಸ್ (79-81), ಟ್ರೌಜನ್ (98-117), ಹಾಡ್ರೈನ್ (117-38) ಮತ್ತು ಮಾರ್ಕಸ್ ಅರುಲಿಯಸ್ (೧೬೧-೮೦) ಮುಖ್ಯರಾದವರು. ಮಾರ್ಕಸ್ ಶ್ರೇಷ್ಠ ಚಕ್ರವರ್ತಿ ಯಾಗಿದ್ದು ದಕ್ಷ ಆಡಳಿತ ನೀಡಿ, ರಾಷ್ಟ್ರೀಯ ವೆಚ್ಚ ಕಡಿಮೆ ಮಾಡಿದ. ಗ್ಲಾಡಿಟೋರಿಯಲ್ ಪ್ರದರ್ಶನಗಳ ಮೇಲೆ ನಿರ್ಬಂಧ ಹಾಕಿದ. ಸ್ಟೋಯಿ ಸಿಸಮ್ ತತ್ತ್ವದಲ್ಲಿ ಆಸಕ್ತಿ ಹೊಂದಿದ್ದ ಇವನು ತನ್ನ ಆರೋಗ್ಯವನ್ನು ಲೆಕ್ಕಿಸದೆ ಪ್ರಜೆಗಳಿಗಾಗಿ ದುಡಿಯುತ್ತಿದ್ದ. ಇವನ ಕಾಲದಲ್ಲೂ ಕ್ರಿಶ್ಚಿಯನ್ನರಿಗೆ ಕಿರುಕುಳ ತಪ್ಪಲಿಲ್ಲ. 180 - 476ರ ವರೆಗೆ ಸುಮಾರು 60ಕ್ಕೂ ಹೆಚ್ಚು ಚಕ್ರವರ್ತಿಗಳು ರೋಮನ್ ಸಾಮ್ರಾಜ್ಯವನ್ನು ಆಳಿದರು. ಇವರಲ್ಲಿ ಸೆಪ್ಟಿಮಸ್ ಸಿವಿರಸ್ (193-211), ಕರಕಲಾ (211-17), ಡೆಸಿಯಸ್ (249-351), ಅರುಲಿಯಸ್ (270-75) ಡಯೋಕ್ಲಿಷಿಯಸ್ (284-305), ಕಾನ್‍ಸ್ಟಾಂಟೈನ್ (306-37) ಮತ್ತು ಥಿಯೋಡೋಸಿಯಸ್ (379-95) ಹೆಚ್ಚು ಪ್ರಸಿದ್ಧರಾದವರು. ಕಾನ್‍ಸ್ಟಾಂಟೈನ್ ಚಕ್ರವರ್ತಿ ರಾಜಧಾನಿಯನ್ನು ರೋಮ್‍ನಿಂದ ಬಿಜಾಂಟಿಯನ್‍ಗೆ ವರ್ಗಾಯಿಸಿ ಅದಕ್ಕೆ ಕಾನ್‍ಸ್ಟಾಂಟಿನೋಪಲ್ ಎಂದು ಹೆಸರಿಟ್ಟ. ಈತ ಕ್ರೈಸ್ತಮತ ವನ್ನು ತನ್ನ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಿದ.

ರೋಮನ್ ಸಾಮ್ರಾಜ್ಯದ ಪತನ

ರೋಮನ್ ಸಾಮ್ರಾಜ್ಯ ಹೊಂದಿದ್ದ ಅಗಾಧ ವಿಸ್ತಾರವೇ ಅದರ ವಿಫಲತೆಗೆ ಒಂದು ಕಾರಣ. ಚಕ್ರವರ್ತಿಯಾದ ಥಿಯೋಡೋಸಿಯಸ್ ಸಾಮ್ರಾಜ್ಯವನ್ನು ಆಡಳಿತದ ಹಿತದೃಷ್ಟಿಯಿಂದ ಪಶ್ಚಿಮ ರೋಮನ್ ಸಾಮ್ರಾಜ್ಯ (ರೋಮ್‍ರಾಜಧಾನಿ) ಮತ್ತು ಪೂರ್ವ ರೋಮನ್ ಸಾಮ್ರಾಜ್ಯ (ಕಾನ್‍ಸ್ಟಾಂಟಿನೋಪಲ್ ರಾಜಧಾನಿ) ವೆಂದು ಎರಡು ಭಾಗ ಮಾಡಿ ತನ್ನ ಇಬ್ಬರು ಮಕ್ಕಳಿಗೆ ಹಂಚಿಕೊಟ್ಟ. ವ್ಯಾಪಾರ ವಾಣಿಜ್ಯದ ಕುಸಿತ, ಅಸಮರ್ಥ ಸೈನ್ಯ, ದುರ್ಬಲ ಚಕ್ರವರ್ತಿಗಳು - ಇವೆಲ್ಲ ರೋಮನ್ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು. ಅಟಿಲ್ಲನ ನೇತೃತ್ವದಲ್ಲಿ ರೋಮ್‍ನ ಮೇಲೆ ಹೂಣರು ಮಾಡಿದ ದಾಳಿಗಳಿಂದಲೂ ಓಸ್ಟ್ರಗೋತ್ಯರ ದಾಳಿಗಳು ರೋಮನ್ ಸಾಮ್ರಾಜ್ಯವನ್ನು ಕೊನೆಗೊಳಿಸಿದವು. ಅನಂತರ ಓಸ್ಟ್ರಗೋತ್ಯರ ದೊರೆ ಥಿಯೋಡೋರಿಕ್ ಮಹಾಶಯ ಎಂಬವನು 493ರಲ್ಲಿ ಇಟಲಿಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡ. ಇಲ್ಲಿಗೆ ವೈಭವದಿಂದ ಮೆರೆದ ರೋಮನ್ ಸಾಮ್ರಾಜ್ಯ ಕೊನೆಗೊಂಡಿತು.

ರೋಮನ್ನರ ಕೊಡುಗೆಗಳು

ಪ್ರಪಂಚದ ನಾಗರಿಕತೆಗೆ ರೋಮನ್ನರು ಹಲವಾರು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ. ಪ್ರಪಂಚರಾಷ್ಟ್ರದ ಕಲ್ಪನೆ, ಆಡಳಿತ, ಏಕಚಕ್ರಾಧಿಪತ್ಯ ಸ್ಥಾಪನೆ, ಶಾಂತಿ ವ್ಯವಸ್ಥೆ, ಕಾನೂನು, ಧರ್ಮ, ವಿಜ್ಞಾನ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಇವರು ವೈಭವವನ್ನು ಸಾಧಿಸಿದ್ದಾರೆ.

ಕಾನೂನು

ಈ ಕ್ಷೇತ್ರದಲ್ಲಿ ರೋಮನ್ನರ ಕೊಡುಗೆ ವಿಶಿಷ್ಟವಾದುದು. ದ್ವಾದಶ ಫಲಕಗಳು ಎಂಬ 12 ಕಂಚಿನ ಫಲಕಗಳ ಮೇಲೆ ಬರೆದ ಕಾನೂನುಗಳೇ ರೋಮನ್ನರ ಅತ್ಯಂತ ಪ್ರಾಚೀನ ಕಾನೂನು ಸಂಹಿತೆಗಳಾಗಿವೆ. ಇವರು ಸಿವಿಲ್ ಮತ್ತು ಅಪರಾಧ ಕಾಯಿದೆಗಳನ್ನು ಮೊದಲು ನೀಡಿದರು. ಕ್ರಿ.ಪೂ. 367ರಲ್ಲಿ ಭೂ ಒಡೆಯರಿಂದ ಬಡ ರೈತರನ್ನು ರಕ್ಷಿಸಲು ಟ್ರಿಬುನ್ ಲಿಸಿನಸ್ ಸ್ಟೊಲೋ ಲಿಸಿನಿಯನ್ ಕಾನೂನು ಜಾರಿಗೆ ತಂದ. ಕ್ರಿ.ಪೂ. 2ನೆಯ ಶತಮಾನದಲ್ಲಿ ಜ್ಯೂರಿ ವ್ಯವಸ್ಥೆ ಜಾರಿಗೆ ಬಂದಿತು. ೫೨೭ - ೫೬೫ ರವರೆಗೆ ಆಳಿದ ಜಸ್ಟೀನಿಯನ್ ಚಕ್ರವರ್ತಿ ಕಾನೂನು ಸುಧಾರಣೆಗಾಗಿ ಪರಿಣಿತ ವಕೀಲರ ತಂಡದ ಸಹಾಯದಿಂದ ರೋಮಿನ ಕಾನೂನುಗಳನ್ನು ಕ್ರೋಡೀಕರಿಸಿದ (534). ಇದನ್ನು ಜಸ್ಟೀನಿಯನ್ ಸಂಹಿತೆ ಎಂದು ಕರೆಯಲಾಯಿತು. ಇದು ಇಂಗ್ಲೆಂಡನ್ನು ಬಿಟ್ಟರೆ ಇನ್ನುಳಿದ ಯುರೋಪಿನ ಎಲ್ಲ ಮುಖ್ಯ ರಾಷ್ಟ್ರಗಳಲ್ಲೂ ಕಾಯಿದೆ ರಚನೆಯ ತಳಹದಿಯಾಗಿದೆ. ಲ್ಯಾಟಿನ್ ಅಮೆರಿಕ, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಇಸ್ಲಾಮ್ ಕಾನೂನಿನ ಬೆಳೆವಣಿಗೆಯ ಮೇಲೂ ಇದು ಪ್ರಭಾವ ಬೀರಿದೆ.

ಧರ್ಮ ಮತ್ತು ತತ್ತ್ವಶಾಸ್ತ್ರ

ಪ್ರಾರಂಭದಲ್ಲಿ ರೋಮನ್ನರು ನಿಸರ್ಗ ಶಕ್ತಿ ಮತ್ತು ಪೂರ್ವಿಕರ ಆತ್ಮಗಳನ್ನು ಆರಾಧಿಸುತ್ತಿದ್ದರು. ಕಾಲಕ್ರಮೇಣ ಗ್ರೀಕ್ ಪ್ರಭಾವದಿಂದ ಅನೇಕ ದೇವ ದೇವತೆಯರನ್ನು ಪೂಜಿಸುತ್ತಿದ್ದರು. ಜ್ಯೂಪಿಟರ್ (ಆಕಾಶದೇವತೆ), ಸಿರಿಸ್ (ಭೂಮಿದೇವತೆ), ಸೂರ್ಯ, ಮಿತ್ರ, ನೆಪ್ಚೂನ್ (ಸಮುದ್ರದೇವತೆ) ಮಾರ್ಸ್ (ಯುದ್ಧ ದೇವತೆ) ಜೂನೋ (ಸ್ತ್ರೀದೇವತೆ) ಮೊದಲಾದ ದೇವತೆಗಳನ್ನು ಆರಾಧಿಸುತ್ತಿದ್ದರು. ಲಪರ್ ಕಾಲಿಯಾ, ಸಟರ್‍ನಾಲಿಯಾ ಹಬ್ಬಗಳನ್ನು ಆಚರಿಸುತ್ತಿದ್ದರು. ಗಣರಾಜ್ಯದ ಅಂತ್ಯದ ವೇಳೆಗೆ ಚಕ್ರವರ್ತಿಯನ್ನು ದೇವತೆಯೆಂದು ಪರಿಗಣಿಸಿ, ಅವನಿಗೆ ದೇವಾಲಯ ನಿರ್ಮಿಸಿ ಪೂಜಿಸುತ್ತಿದ್ದರು. ಕೆಲವರು ರಾಜ್ಯಪ್ರಭುತ್ವವನ್ನು, ಅಂದರೆ ರಾಷ್ಟ್ರವನ್ನು ಪ್ರತಿನಿಧಿಸುವ ರೋಮಾ ದೇವತೆಯನ್ನು ಪೂಜಿಸುತ್ತಿದ್ದರು. 1ನೆಯ ಶತಮಾನದಲ್ಲಿ ಯೇಸುಕ್ರಿಸ್ತನ 12 ಮಂದಿ ಶಿಷ್ಯರಲ್ಲೊಬ್ಬನಾದ ಪಾಲ್ ಮತ್ತು ಅವನ ಶಿಷ್ಯರು ರೋಮ್‍ನಲ್ಲಿ ಕ್ರೈಸ್ತಧರ್ಮವನ್ನು ಹರಡಿದರು. ರೋಮನ್ ಅಧಿಕಾರಿಗಳಿಗೆ ಕ್ರೈಸ್ತ ಬೋಧನೆಗಳು ಸರಿಹೊಂದಲಿಲ್ಲ. ಹೀಗಾಗಿ ಕ್ರೈಸ್ತರನ್ನು ಪೀಡಿಸತೊಡಗಿದರು. ಚಕ್ರವರ್ತಿ ನಿರೋ (54-68)ನ ಕಾಲದಲ್ಲಿ ದೊಡ್ಡಪ್ರಮಾಣದಲ್ಲಿ ಕ್ರೈಸ್ತರ ಚಿತ್ರಹಿಂಸೆಯಾಯಿತು. ಇದು 313ರ ತನಕ ಮುಂದುವರಿಯಿತು. 311ರಲ್ಲಿ ಕಾನ್‍ಸ್ಟಾಂಟೈನ್ ಸಾರ್ವತ್ರಿಕ ಧಾರ್ಮಿಕ ಸಹಿಷ್ಣುತೆಯ ಪ್ರಥಮ ಕಟ್ಟಳೆಯನ್ನು ಹೊರಡಿಸಿದ. ಕೊನೆಗೆ ಥಿಯೋಡೋಸಿಯಸ್‍ನ ಆಳಿಕೆಯಲ್ಲಿ (319-395) ಕ್ರೈಸ್ತಮತವನ್ನು ರಾಷ್ಟ್ರ ಧರ್ಮವೆಂದು ಘೋಷಿಸಲಾಯಿತು.

ರೋಮನ್ನರು ತತ್ತ್ವಜ್ಞಾನದಲ್ಲಿ ಹೆಚ್ಚಾಗಿ ವೈಚಾರಿಕತೆಗೆ ಗಮನಹರಿ ಸಲಿಲ್ಲ. ಇವರು ಮುಖ್ಯವಾಗಿ ಗ್ರೀಕ್ ತತ್ತ್ವಶಾಸ್ತ್ರವನ್ನು ಅನುಸರಿಸಿದರು. ಸಿಸಿರೋ ಒಬ್ಬ ರಾಜಕಾರಣಿಯಾಗಿದ್ದರೂ ತತ್ತ್ವಜ್ಞಾನಿಯಾಗಿದ್ದ ಮತ್ತು ಲ್ಯಾಟಿನ್ ಭಾಷೆಯಲ್ಲಿ ತತ್ತ್ವಶಾಸ್ತ್ರದ ವಿಶ್ವಕೋಶವನ್ನು ರಚಿಸಿದ. ಸೆನೆಕ (ಕ್ರಿ.ಪೂ 4-ಕ್ರಿ.ಶ. 65) ರೋಮಿನ ಶ್ರೇಷ್ಠ ತತ್ತ್ವಜ್ಞಾನಿ. ಮಾರ್ಕಸ್ ಅರೀಲಿಯಸ್ (121-180) ತತ್ತ್ವಶಾಸ್ತ್ರದ ಬಗ್ಗೆ ಮೆಡಿಟೇಶನ್ಸ್ ಎಂಬ ಪುಸ್ತಕವನ್ನು ಬರೆದಿದ್ದಾನೆ.

ಸಮಾಜ ಮತ್ತು ಸಂಸ್ಕೃತಿ

ರೋಮನ್ನರಲ್ಲಿ ಕುಟುಂಬದ ಪಾತ್ರ ಮಹತ್ತ್ವದಾಗಿದ್ದು ಅದರ ಅಧಿಕಾರವೆಲ್ಲವೂ ಯಜಮಾನನದಾಗಿತ್ತು. ತಂದೆತಾಯಂದಿರು ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಿದ್ದರು. ಸ್ತ್ರೀಯರಿಗೆ ರಾಜಕೀಯದ ಹೊರತಾಗಿ ಉಳಿದ ಕ್ಷೇತ್ರಗಳಲ್ಲಿ ಉನ್ನತ ಸ್ಥಾನವಿತ್ತು. ಇವರು ರಜಾದಿನಗಳನ್ನು ಕ್ರೀಡೆ ಮತ್ತು ಮನರಂಜನೆಯಲ್ಲಿ ಕಳೆಯು ತ್ತಿದ್ದರು. ಇವರು ಭೋಜನ ಪ್ರಿಯರಾಗಿದ್ದು ಭರ್ಜರಿ ಔತಣಕೂಟಗಳನ್ನು ಏರ್ಪಡಿಸುತ್ತಿದ್ದರು. ಸ್ನಾನಗೃಹಗಳು ದಿನನಿತ್ಯ ಜೀವನದ ವಿಹಾರ ಸ್ಥಾನಗಳಾಗಿದ್ದವು.

ಸಾಹಿತ್ಯ

ಲ್ಯಾಟಿನ್ ಭಾಷೆ ಮತ್ತು ಸಾಹಿತ್ಯದಲ್ಲಿ ರೋಮನ್ನರ ಕೊಡುಗೆ ಶ್ರೇಷ್ಠವಾದುದು. ಲ್ಯಾಟಿನ್ ಭಾಷೆ ರೋಮನ್ನರ ಆದರ್ಶಗಳ ಸಂಪತ್ತಾಗಿ ಇಂದಿಗೂ ಉಳಿದಿದೆ. ಸಿಸಿರೋ, ಹೊರೇಸ್, ವರ್ಜಿಲ್ ಮೊದಲಾದವರು ಶ್ರೇಷ್ಠ ಕೃತಿಗಳನ್ನು ರಚಿಸಿ ಲ್ಯಾಟಿನ್ ಸಾಹಿತ್ಯವನ್ನು ಪುಷ್ಟಿಗೊಳಿಸಿದರು. ಕ್ರಿ.ಪೂ. 500 ರಿಂದ ಕ್ರಿ.ಶ.50ರ ನಡುವಿನ ಅವಧಿ ಈ ಸಾಹಿತ್ಯದ ಸುವರ್ಣಯುಗವಾಗಿತ್ತು. ಜೂಲಿಯಸ್ ಸೀಸರ್ ತಾನು ಗಾಲ್‍ನಲ್ಲಿ ಮಾಡಿದ ಯುದ್ಧಗಳನ್ನು ಚಿತ್ರಿಸಿ ಕಮೆಂಟರೀಸ್ ಎಂಬ ಗದ್ಯ ರಚಿಸಿದ. ಸಿಸಿರೋ ಲ್ಯಾಟಿನ್ ಭಾಷೆಯಲ್ಲಿ ಗದ್ಯಗಳನ್ನು ರಚಿಸಿ ಗದ್ಯ ಸಾಹಿತ್ಯವನ್ನು ಅಭಿವೃದ್ಧಿಗೊಳಿಸಿದ. ಇವನು ಆಧುನಿಕ ಗದ್ಯದ ಜನಕನೆಂದು ಹೆಸರುವಾಸಿಯಾಗಿದ್ದಾನೆ. ಹೊರೇಸ್ ಓರ್ವ ಶ್ರೇಷ್ಠ ಲ್ಯಾಟಿನ್ ಕವಿ. ಏನಿಡ್ ಮತ್ತು ಆರ್ಟ್ ಆಫ್ ಲವ್ ಎಂಬ ಕಾವ್ಯಗಳನ್ನು ಈತ ರಚಿಸಿದ. ಸುವರ್ಣಯುಗದ ಲೇಖಕರಲ್ಲಿ ಪ್ರಸಿದ್ಧನಾದ ವರ್ಜಿಲ್ ಈನ್ಯಡ್ ಮಹಾಕಾವ್ಯವನ್ನು ಬರೆದ. ಓನಿಡ್ ಮತ್ತೊಬ್ಬ ಶ್ರೇಷ್ಠ ಕವಿ. ಲುಕ್ರ್ರೇಷಿಯಸ್, ಕ್ಯಾಟುಲಸ್ ಪ್ರಖ್ಯಾತ ಲ್ಯಾಟಿನ್ ಸಾಹಿತಿ ಗಳಾಗಿದ್ದರು. ನಾಟಕ ಕಲೆ ರೋಮಿನಲ್ಲಿ ವಿಶೇಷವಾಗಿ ಬೆಳೆಯಿತು. ರೋಮನ್ನರು ಗ್ರೀಕ್ ನಾಟಕಗಳನ್ನು ಎರವಲು ಪಡೆದರು. ನಿರೋ ಚಕ್ರವರ್ತಿಯ ಗುರುವಾಗಿದ್ದ ಸೆನಕ ದುರಂತ ನಾಟಕಗಳನ್ನು, ಟೆರೆನ್ಸ್ ಮತ್ತು ಪ್ಲಾಯಟಸ್ ಎಂಬ ಸುಖಾಂತ ನಾಟಕಗಳನ್ನು ರಚಿಸಿದ್ದಾನೆ. ಲಿವಿ, ಟ್ಯಾಸಿಟಸ್, ಪ್ಲೀನಿ, ಪ್ಲೂಟಾರ್ಕ್ ಸುಪ್ರಸಿದ್ಧ ಇತಿಹಾಸ ಕೃತಿಗಳನ್ನು ರಚಿಸಿದರು. ಸ್ಟ್ರಾಬೋ ಮತ್ತು ಅಲೆಕ್ಸಾಂಡ್ರಿಯಕ್ಕೆ ಸೇರಿದ ಟಾಲಮಿ ಭೂಗೋಳಶಾಸ್ತ್ರವನ್ನು ಕುರಿತು ಶ್ರೇಷ್ಠ ಕೃತಿಗಳನ್ನು ರಚಿಸಿದ.

ಕಲೆ ಮತ್ತು ವಾಸ್ತುಶಿಲ್ಪ

ಪ್ರಾಚೀನ ರೋಮನ್ ಕಲೆಯ ಮೇಲೆ ಗ್ರೀಕ್ ಪ್ರಭಾವ ಬಹಳಷ್ಟಿದೆ. ರೋಮನ್ನರು ಸಾಮ್ರಾಜ್ಯದಾದ್ಯಂತ ದೇವಾಲಯ, ರಂಗಮಂದಿರ, ರಸ್ತೆ, ನಾಲೆ, ಸೇತುವೆ, ಸ್ನಾನಗೃಹ ಮತ್ತು ಅರಮನೆಗಳನ್ನು ನಿರ್ಮಿಸಿದರು. ಕಮಾನು ಮತ್ತು ಗುಮ್ಮಟ ನಿರ್ಮಾಣ ವಾಸ್ತುಶಿಲ್ಪಕ್ಕೆ ಇವರ ಕೊಡುಗೆ. ಮೂರ್ತಿಶಿಲ್ಪದಲ್ಲಿ ಇವರು ಸೌಂದರ್ಯಕ್ಕಿಂತ ಉಪಯುಕ್ತತೆಗೆ ಹೆಚ್ಚು ಪ್ರಾಧಾನ್ಯವಿತ್ತರು. ಜೂಲಿಯಸ್ ಸೀಸರ್ ಅಮೃತಶಿಲೆಯಲ್ಲಿ ಭವ್ಯವಾದ ಕಟ್ಟಡಗಳನ್ನು ನಿರ್ಮಿಸಿ ರೋಮಿನ ಸೌಂದರ್ಯವನ್ನು ವೃದ್ಧಿಸಿದ. ಈತ ಪ್ರಥಮ ಇಂಪೀರಿಯಲ್ ಪೋರಂ (ಮಾರುಕಟ್ಟೆ ಸ್ಥಳ) ನಿರ್ಮಿಸಿ ಅದರ ಕೇಂದ್ರದಲ್ಲಿ ವೀನಸ್ ದೇವತೆಯ ಮಂದಿರವನ್ನು ನಿರ್ಮಿಸಿದ. ಶಿಲ್ಪಕಲೆಗೆ ಆಗಸ್ಟಸ್ ಅಮೃತ ಶಿಲೆಯನ್ನು ಧಾರಳವಾಗಿ ಬಳಸಿದ. ಇವನ ಅನಂತರದ ರೋಮನ್ ಚಕ್ರವರ್ತಿಗಳು, ವೇದಿಕೆ, ಅರಮನೆ, ವೃತ್ತಕ್ರೀಡಾಂಗಣ, ಸ್ನಾನಗೃಹ, ಆ್ಯಂಪಿಥಿಯೇಟರ್ ಗಳನ್ನು (ವರ್ತುಲ ರಂಗಮಂದಿರ) ನಿರ್ಮಿಸಿದರು. ಇಂದಿಗೂ ಸುಸ್ಥಿತಿ ಯಲ್ಲಿರುವ ಗೋಳಾಕಾರದ ದೊಡ್ಡಕಟ್ಟಡಗಳಲ್ಲಿ ಪಾಂಟಿಯನ್ (ಸ್ವರ್ಣ ದೇವತೆಗಳು) ಕಟ್ಟಡ, ವೃತ್ತಾಕಾರವಾಗಿದ್ದ ಕೊರಿಂಥಿಯನ್ ಸ್ತಂಭ, 20 ಅಡಿಗೂ ಹೆಚ್ಚು ದಪ್ಪವಾದ ಗೋಡೆ, 140 ಅಡಿ ಎತ್ತರದ ಬೃಹತ್ ಗುಮ್ಮಟಗಳನ್ನು ಹೊಂದಿದೆ. ಪ್ರಸ್ತುತ ಇದು ಚರ್ಚ್ ಆಗಿದೆ. ಇದಲ್ಲದೆ. ಕೊಲೋಸಿಯಂ ಕಟ್ಟಡ ದೊಡ್ಡದಾಗಿತ್ತು. ಇಲ್ಲಿ 45,000 ಜನರು ಕುಳಿತುಕೊಳ್ಳಬಹುದಾಗಿತ್ತು.

ರೋಮನ್ನರು ಮೂರ್ತಿಶಿಲ್ಪ ಕರ್ತೃತ್ವದಲ್ಲಿ ಅಸಾಧಾರಣ ಪ್ರತಿಭೆ ತೋರಿದ್ದಾರೆ. ಮೂರ್ತಿಶಿಲ್ಪಕ್ಕೆ ಅಜ್ಞಾತ ರೋಮನ್ ಶ್ರೇಷ್ಠ ಉದಾಹರಣೆ. ರೋಮನ್ನರ ಹೆಚ್ಚಿನ ಭಿತ್ತಿ ಚಿತ್ರಗಳು ಕಾಲಾನುಕ್ರಮದಲ್ಲಿ ನಾಶವಾಗಿವೆ. ಇಟಲಿಯ ಪ್ರಾಚೀನ ನಗರ ಪಾಂಪೆಯಲ್ಲಿ ಇವರ ಶ್ರೇಷ್ಠ ಭಿತ್ತಿಚಿತ್ರಗಳನ್ನು ಕಾಣಬಹುದು. ಇವರ ಕಲೆಯ ಅವಶೇಷಗಳು ಬ್ರಿಟಿನ್, ಗಾಲ್, ಸ್ಪೇಯಿನ್, ಉತ್ತರ ಆಫ್ರಿಕ ಮತ್ತು ಏಷ್ಯ ಮೈನರ್‍ಗಳಲ್ಲೂ ಕಂಡು ಬರುತ್ತವೆ. (ಆರ್.ಕೆ.)

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: