ಲಘುನಿದ್ರೆ

ಕೋಸ್ಟಾರೀಕಾದಲ್ಲಿ ತೆರೆದ ಒಳಾಂಗಣದಲ್ಲಿನ ಜೋಲುಮಂಚದ ಮೇಲೆ ಲಘುನಿದ್ರೆ ಮಾಡುತ್ತಿರುವ ವ್ಯಕ್ತಿ

ಲಘುನಿದ್ರೆ ಎಂದರೆ ದೈಹಿಕ ಆಯಾಸದಿಂದಾಗಲಿ, ಮಾನಸಿಕ ಕಳವಳದಿಂದಾಗಲಿ ವ್ಯಕ್ತಿಗೆ ಪೂರ್ಣನಿದ್ರೆ ಇಲ್ಲವೆ ಗಾಢನಿದ್ರೆ ಬಾರದೆ ಆತ ಅಲ್ಪಾವಧಿಯ ನಿದ್ರೆಗೆ ಈಡಾಗುವಂಥ ಸ್ಥಿತಿ (ಸ್ನೂಜ್).

ಕಾರಣಗಳು

ಹೃದಯದ ಸ್ಥಿತಿ, ದೇಹದ ಉಷ್ಣತೆ, ರಾತ್ರಿಯ ವೇಳೆ ನಿದ್ರೆಯಿಂದ ಪದೇ ಪದೇ ಏಳುವುದು, ಭಯಗ್ರಸ್ತ ಕನಸು ಬೀಳುವಿಕೆ ಮುಂತಾದವು ಪೂರ್ಣನಿದ್ರೆಗೆ ಅವಕಾಶ ಮಾಡಿಕೊಡದೆ ಲಘುನಿದ್ರೆಗೆ ಮಾತ್ರ ಕಾರಣವಾಗಬಹುದು. ಜೀವನದ ತೊಂದರೆಗಳು, ಕೆಲಸದ ಒತ್ತಡಗಳು, ಪರಿಸರ ಇಲ್ಲವೆ ಭೌತಿಕಕ್ಲೇಶಗಳು (ನೋವು, ಜ್ವರ, ಉಬ್ಬಸ, ನರಮಂಡಲದ ಮೇಲೆ ಅಧಿಕ ಪರಿಣಾಮ ಉಂಟುಮಾಡುವ ಪದಾರ್ಥಗಳ ಸೇವನೆ; ಎಫಿಡ್ರೀನ್, ಆಂಫಿಟಮಿನ್, ಕೆಫೀನ್ ಇರುವಂಥ ಪಾನೀಯಗಳ ಸೇವನೆ ಮುಂತಾದವು) ಇಂಥ ನಿದ್ರಾಸ್ಥಿತಿಗೆ ಕಾರಣವೆನಿಸುತ್ತವೆ.

ಸಾಮಾನ್ಯವಾಗಿ ಶೇ.30ರಷ್ಟು ಮಂದಿ ಲಘುನಿದ್ರೆಗೆ ಈಡಾಗಿರುವುದು ವರದಿಯಾಗಿದೆ. ನಿದ್ರೆ ಬಾರದಿರುವಂಥ ತೊಡಕುಗಳು, ತಾತ್ಕ್ಷಣಿಕ ಒತ್ತಡಗಳು, ಕೆಲಸದ ಸಲುವಾಗಿ ಉಂಟಾಗುವ ತೊಂದರೆಗಳು, ವೈವಾಹಿಕ ಜೀವನದ ವೈಮನಸ್ಯಗಳು ಮುಂತಾದವೆಲ್ಲ ಲಘುನಿದ್ರೆ ಬರಿಸುವಂಥ ಸನ್ನಿವೇಶಗಳಾಗಿವೆ. ಕೆಲವು ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಲ್ಲಿ, ದಾದಿಯರಲ್ಲಿ ಕೆಲಸದ ಒತ್ತಡದಿಂದಾಗಿ ಲಘುನಿದ್ರೆ ಕಂಡುಬರುವುದುಂಟು.

ತೀವ್ರರೂಪದ ಲಘುನಿದ್ರೆಯ ಸ್ಥಿತಿ ಸಾಮಾನ್ಯವಾಗಿ ಮೂರು ವಾರಗಳ ಅವಧಿಯದ್ದಾಗಿರುತ್ತದೆ. ಮಾನಸಿಕ ತೊಂದರೆಗಳು, ಹಲ್ಲುನೋವು, ಕೀಲುನೋವು, ಚರ್ಮದ ತೊಂದರೆ ಮುಂತಾದ ದೈಹಿಕ ನೋವುಗಳು ಇದಕ್ಕೆ ಕಾರಣ.

ಪರಿಹಾರಗಳು

ಅಫೀಮು, ಆಸ್ಪರಿನ್, ಉರಿತರೋಧಕಗಳು, ನೋವರಿವಳಿಕೆಗಳು ಮುಂತಾದವುಗಳ ಸೇವನೆಯಿಂದ ದೇಹಬಾಧೆಗಳು ಕಡಿಮೆಯಾಗಿ ಲಘುನಿದ್ರೆಯ ಸನ್ನಿವೇಶ ತಪ್ಪುವುದಕ್ಕೆ ಅವಕಾಶವಾಗುತ್ತದೆ.

ಲಘುನಿದ್ರೆಯ ಪರಿಣಾಮದಿಂದಾಗಿ ಎದೆಮಿಡಿತ ಅಧಿಕವಾಗುವುದು, ಅಧಿಕ ಬೆವರು ಬರುವುದು, ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುವುದು, ವ್ಯಕ್ತಿ ತೀವ್ರ ಕಳವಳಗೊಳ್ಳುವುದು, ಉಬ್ಬಸ, ಎದೆಸೆರೆ ಮಿಡಿತಗಳು ಉಂಟಾಗುತ್ತವೆ. ಯೋಗಾಭ್ಯಾಸ ಇಲ್ಲವೆ ಇನ್ನಿತರ ಕಾಲಬದ್ಧ ವ್ಯಾಯಾಮ, ನಿರ್ವಹಿಸುವ ಕೆಲಸದಲ್ಲಿ ನಿಷ್ಠೆ, ಮಲಗುವ ಮುಂಚೆ ಸ್ವಲ್ಪ ಹಾಲಿನ ಸೇವನೆ, ಭಯ ಇಲ್ಲವೆ ಉದ್ರೇಕಗೊಳಿಸುವಂಥ ಸಾಹಿತ್ಯವನ್ನು ಓದದಿರುವುದು, ಕಣ್ಣಿಗೆ ಇಲ್ಲವೆ ಕಿವಿಗೆ ತ್ರಾಸವಾಗುವಷ್ಟರ ಮಟ್ಟಿಗೆ ದೂರದರ್ಶನ ವೀಕ್ಷಣೆ, ರೇಡಿಯೋ, ಧ್ವನಿಸುರುಳಿ ಆಲಿಸುವಿಕೆ ಮುಂತಾದವನ್ನು ನಿಲ್ಲಿಸುವುದು ಇವೇ ಮೊದಲಾದ ಕ್ರಮಗಳಿಂದ ಲಘುನಿದ್ರೆಯ ಸ್ಥಿತಿಯನ್ನು ಹೋಗಲಾಡಿಸಿಕೊಳ್ಳಬಹುದು.

ಹೊರಗಿನ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: