ವಾತಾವರಣದಲ್ಲಿ ಮರುಪ್ರವೇಶಿಸುವಿಕೆ
ಮಾನವ ನಿರ್ಮಿತ ಅಥವಾ ಪ್ರಾಕೃತಿಕ ವಸ್ತುಗಳು ಬಾಹ್ಯಾಕಾಶದಿಂದ ಭೂಮಿಯಂತಹ ಯಾವುದಾದರೂ ಒಂದು ಗ್ರಹದ ವಾತಾವರಣವನ್ನು ಪ್ರವೇಶಿಸುವದನ್ನು ವಾತಾವರಣದಲ್ಲಿ ಮರುಪ್ರವೇಶಿಸುವಿಕೆ ಅಥವಾ ವಾಯುಮಂಡಲದಲ್ಲಿ ಪ್ರವೇಶಿಸುವಿಕೆ ಎಂದು ಹೇಳಬಹುದು. ಸಾಮಾನ್ಯವಾಗಿ ಉಪಕಕ್ಷೀಯ ಅಂತರಿಕ್ಷನೌಕೆಗಳು ಮತ್ತು ಸ್ಥಿರ ಕಕ್ಷೆಯಲ್ಲಿದ್ದು ಮರಳಿ ಬರುತ್ತಿರುವ ಗಗನನೌಕೆಗಳು ಈ ಕ್ರಿಯೆಯ ಮೂಲಕ ವಾತಾವರಣವನ್ನು ಹಾದು, ಭೂಮಿಯನ್ನು ತಲುಪುತ್ತವೆ. ಈ ಕ್ರಿಯೆಯು ಸಾಮಾನ್ಯವಾಗಿ ವಾಯುಮಂಡಲವನ್ನು ಪ್ರವೇಶಿಸುವಾಗ ಘರ್ಷಣೆಯಿಂದ ಉಂಟಾಗುವ ಉಷ್ಣತೆಯಿಂದ (ಏರೋಡೈನಾಮಿಕ್ ಹೀಟಿಂಗ್) ಗಗನನೌಕೆಯನ್ನು ರಕ್ಷಿಸುವುದಕ್ಕಾಗಿ ವಿಶೇಷ ಕ್ರಮಗಳನ್ನೊಳಗೊಂಡಿರುತ್ತದೆ.ಅಂತರಿಕ್ಷನೌಕೆಗಳ ಅತಿವೇಗದ ವಾತಾವರಣದ ಮರುಪ್ರವೇಶಿಸುವಿಕೆಗಾಗಿ ಹಲವಾರು ಅತ್ಯುನ್ನತ ತಂತ್ರಙ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಇತಿಹಾಸ
ವಾಯುಮಂಡಲದಲ್ಲಿ ಪ್ರವೇಶಿಸುವಿಕೆಯ ತಂತ್ರಙ್ಞಾನವು ಶೀತಲಯುದ್ಧದ ಪರಿಣಾಮವಾಗಿ ಅಭಿವೃದ್ಧಿಹೊಂದಿತು. ಅಮೆರಿಕಾ ಮತ್ತು ಸೋವಿಯೆಟ್ ರಶಿಯಾ ದೇಶಗಳು ಎರಡನೇ ವಿಶ್ವಯುಧ್ಧದ ಸಮಯದಲ್ಲಿ ಕ್ಷಿಪಣಿ ಮತ್ತು ಅಣ್ವಸ್ತ್ರಗಳ ತಂತ್ರಙ್ಞಾನವನ್ನು ಅಭಿವೃದ್ಧಿಪಡಿಸಿದವು.ನಂತರ ಎರಡೂ ದೇಶಗಳು ಈ ತಂತ್ರಙ್ಞಾನಗಳ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಬೃಹತ್ ಸಂಶೋಧನೆ ಮತ್ತು ವಿಕಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಇದರಿಂದ ವಾತಾವರಣದ ಮರುಪ್ರವೇಶಿಸುವಿಕೆ ತಂತ್ರಙ್ಞಾನವು ವಿಕಾಸಹೊಂದಲು ನೆರವಾಯಿತು.