ವೇಚೂರು (ಗೋವಿನ ತಳಿ)
ವೇಚೂರು | |
---|---|
ತಳಿಯ ಹೆಸರು | ವೇಚೂರು |
ಮೂಲ | ವೆಚ್ಚೂರ್ - ಕೇರಳ |
ವಿಭಾಗ | ಚಿಕ್ಕಗಾತ್ರ |
ಬಣ್ಣ | ತೆಳು ಕೆಂಪು, ಕಪ್ಪು, ಬಿಳಿ, ಬೂದು |
ಮುಖ | ನೀಳ |
ಕೊಂಬು | ಸಣ್ಣದು, ಎದುರಿಗೆ ಬಾಗಿರುತ್ತದೆ |
ವೇಚೂರು ಎಂಬುದು ಜಗತ್ತಿನ ಅತ್ಯಂತ ಗಿಡ್ದ ಹಸುತಳಿ. ವೇಚೂರ್‌ನ ತವರುಮನೆ ಕೇರಳದ ಕೊಟ್ಟಾಯಮ್ ಜಿಲ್ಲೆಯ ವೈಕಂ ಎಂಬ ಪುಟ್ಟಹಳ್ಳಿ. ಭಾರತ ಉಪಖಂಡದ ಈ ಕೊನೆಯ ಊರು ಅತಿಯಾದ ಮಳೆಗೆ, ಅಷ್ಟೇ ಸೆಖೆಗೆ ಪ್ರಸಿದ್ಧ. ಇಲ್ಲಿನ ಮುಖ್ಯ ಸಾರಿಗೆ ದೋಣಿ. ಮೇಯಲು ದನಗಳು ದೋಣಿಯಲ್ಲಿ ಹೊಗಬೇಕಾದ ಪರಿಸ್ಥಿತಿ! ಹೀಗಾಗಿ ಒಂದು ಪುಟ್ಟ ತಳಿಯ ಅನ್ವೇಷಣೆ ಪ್ರಾರಂಭವಾಗಿ ಅಂತಿಮವಾಗಿ ಸಿಕ್ಕಿದ್ದು ವೇಚೂರ್. ಆಕಾರದಲ್ಲಿ ವೆಚೂರ್ ಚಿಕ್ಕದಾದರೂ ಶಕ್ತಿಯಲ್ಲಿ ಮಾತ್ರ ಇದು ಇನ್ನಾವುದೇ ಕೆಲಸಗಾರ ತಳಿಯೊಂದಿಗೂ ಸಮಗೌರವ ಪಡೆಯಬಲ್ಲಂತಹದ್ದು. ಅತ್ಯಂತ ಪುಟ್ಟ ತಳಿ, ಕಡಿಮೆ ಆಹಾರದ ಅವಶ್ಯಕತೆ, ಯಾವುದೇ ಹವಾಗುಣಕ್ಕೊ ಹೊಂದಿಕೊಳ್ಳಬಲ್ಲ ಸಹಿಷ್ಣುತೆ, ಅಪರೂಪದ ರೋಗ ನಿರೋಧಕ ಶಕ್ತಿ, ಚರ್ಮದಲ್ಲಿನ ಕೀಟನಿರೋಧಕತೆ ಇತ್ಯಾದಿಗಳು ವೇಚೂರು ತಳಿಯ ಉತ್ಪ್ರೇಕ್ಷೆಯಲ್ಲದ ಗುಣಾವಳಿಗಳು.
ಉದ್ದ ಬಾಲ, ನಮ್ಮ ಮಲೆನಾಡು ಗಿಡ್ಡ ತಳಿಗಿಂತ ಚಿಕ್ಕದಾದ ಬಲಿಷ್ಟ ಕೋಡು, ಕೆಂಬಣ್ಣ, ೮೦ರಿಂದ ನೂರು ಅಂಗುಲದಷ್ಟುಎತ್ತರ ಇತ್ಯಾದಿ ಇತ್ಯಾದಿ ವೇಚೂರಿನ ದೈಹಿಕ ಲಕ್ಷಣಗಳು. ವೇಚೂರ್ ತಳಿಯ ಹಾಲಿನಲ್ಲಿರುವ ಔಷಧೀಯ ಗುಣಗಳು ವಿಶೇಷವಾಗಿವೆ. ಅನೇಕ ಖಾಯಿಲೆಗಳಿಗೆ ವೇಚೂರಿನ ಹಾಲನ್ನು ಕೇರಳದ ಪರಂಪರಾನುಗತ ಆಯುರ್ವೇದ ವೈದ್ಯರು ಸಲಹೆ ಮಾಡುತ್ತಾರೆ. ಇದರ ಪ್ರಸಿದ್ಧಿ ಎಷ್ಟೆಂದರೆ, ತಿರುವಾಂಕೂರಿನ ಶ್ರೀಮನ್ಮಾಹಾರಾಜ ಬಲರಾಮ ವರ್ಮನಿಗೆ ಆಸ್ಥಾನವೈದ್ಯರು ಕಪ್ಪು ವೇಚೂರಿನ ಹಾಲು ಕುಡಿಯಲು ಸೂಚಿಸಿದರೆಂದೂ, ಅದಕ್ಕಾಗಿ ಭಟರು ವೇಚೂರ್ ತಳಿಗಳನ್ನು ಕೊಂಡೊಯ್ಯಲು ತಿರುವಾಂಕೂರಿನಿಂದ ಹುಡುಕುತ್ತಾ ಬಂದರೆಂದು The state Manual of Travancoreನಲ್ಲಿ ಉಲ್ಲೇಖಿಸಿಲಾಗಿದೆ..
೧೯೫೦ರಲ್ಲಿ ಕೇರಳ ಸರ್ಕಾರ ದೂರದರ್ಶಿತ್ವವಿಲ್ಲದ ತಳಿ ಅಭಿವೃದ್ಧಿ ನೀತಿಯೊಂದನ್ನು ಜಾರಿಗೆ ತಂದಾಗಿನಿಂದ ಈ ತಳಿಗಳಿಗೆ ತೊಂದರೆ ಆರಂಭವಾಯಿತು. ಅನಂತರದ ಕೇರಳ ಹೈನುಗಾರಿಕಾ ಕಾಯಿದೆ ೧೯೬೧ರ ಪ್ರಕಾರ ಯಾರೊಬ್ಬರೂ ಬೀಜದ ಹೋರಿಯನ್ನು ಪರವಾನಿಗೆ ಇಲ್ಲದೇ ಸಾಕುವಂತಿಲ್ಲ. ಈ ಖಾಯಿದೆ ವೇಚೂರ್ ಸೇರಿದಂತೆ ಅಪರೂಪದ ಎಲ್ಲ ದೇಶಿಯ ತಳಿಗಳಿಗೆ ಮಾರಕವಾಯಿತು. ಅದೃಷ್ಟವಶಾತ್ ಆ ಕಾಯಿದೆಯಿಂದ ದೇವಸ್ಥಾನದ ಹೋರಿಗಳನ್ನು ಹೊರಗಿಡಲಾಗಿತ್ತು. ಹಾಗೆ ಉಳಿದುಕೊಂಡ ವೈಕಂನ ಶಿವ ದೇವಾಲಯದ ಹೋರಿಗಳೇ ಇಂದು ವೇಚೂರ್ ತಳಿ ಸಂಪೂರ್ಣ ನಾಶವಾಗದಂತೆ ಉಳಿಸುವಲ್ಲಿ ಮಹತ್ತರ ಪಾತ್ರವಹಿಸುವಂತಾಯಿತು. ಕೇರಳ ಕೃಷಿ ವಿಶ್ವವಿದ್ಯಾನಿಲಯದ ಹೈನುಗಾರಿಗೆ ವಿಭಾಗದ ಡಾ|| ಸೋಸಮ್ಮ ಲೈಪೆ ವೇಚೂರ್ ತಳಿ ಸಂರಕ್ಷಿಸುವಲ್ಲಿ ಒಂದು ಅಭಿಯಾನವನ್ನೇ ಕೈಗೊಂಡಿದ್ದಾರೆ. Vechur conservation trust (www.vechur.org Archived 2013-12-06 ವೇಬ್ಯಾಕ್ ಮೆಷಿನ್ ನಲ್ಲಿ.)ನ ಮೂಲಕ ಜಗತ್ತಿನ ಗಮನವನ್ನು ವೆಚೂರಿನತ್ತ ಸೆಳೆಯಲು ಯಶಸ್ವಿಯಾಗಿದ್ದಾರೆ ಕೂಡ.
ಅಪರೂಪದ ಔಷಧೀಯ ಗುಣಗಳನ್ನು ಹೊಂದಿದ ವೇಚೂರ್, ಇಂದು ತನ್ನ ವಿನಾಶಗೀತೆಯ ಕೊನೆಯ ಚರಣಗಳನ್ನು ಹಾಡುತ್ತಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದ ವೇಚೂರ್ ತಳಿಗಳ ಇಂದಿನ ಸಂಖ್ಯೆ ಕೇವಲ ೯೦-೧೦೦ ಅಷ್ಟೆ! ಇದರೊಂದಿಗೆ ವೇಚೂರ್ ತಳಿಗಳ ಹಾಲಿನ ಅಪೂರ್ವವಾದ ಔಶಧೀಯ ಗುಣಗಳು ಹಾಗು ಅವುಗಳ ಬಳಕೆಯ ಕುರಿತಾದ ಮಾಹಿತಿಗಳೂ ಸಹ ಮರೆವಿನ ಪರದೆಯ ಹಿಂದೆ ಸರಿದಿವೆ.
ಚಿತ್ರಗಳು
-
ಗಂಡು
-
ಹೆಣ್ಣು
ಆಧಾರ/ಆಕರ
'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.
ಹೊರಕೊಂಡಿಗಳು
WORLD’S SMALLEST COW RESCUED FROM EXTINCTION ವೇಚೂರ್ ಹಸು- ಕೇರಳ ಟೂರಿಸಂ ಜಾಲತಾಣ