ಸೇಂಟ್ ಆಗಸ್ಟೀನ್

ಸೇಂಟ್ ಆಗಸ್ಟೀನ್
Saint Augustine from a 19th-century engraving
Born
Aurelius Augustinus

(೩೫೪-೧೧-೧೩)೧೩ ನವೆಂಬರ್ ೩೫೪
Thagaste, Numidia (modern-day Souk Ahras, Algeria)
Died28 August 430(430-08-28) (aged 75)
Hippo Regius, Numidia (modern-day Annaba, Algeria)
TitleBishop of Hippo Regius

ಸೇಂಟ್ ಆಗಸ್ಟೀನ್ (13 ನವಂಬರ್ 354 – 28 ಆಗಸ್ಟ್ 430), ಆಗಸ್ಟೀನ್ ಆಫ್ ಹಿಪ್ಪೋ ಎಂದೂ ಸೇಂಟ್ ಆಸ್ಟೀನ್[] ಎಂದೂ , ಬ್ಲೆಸ್ಸ್‍ಡ್ ಆಗಸ್ಟೀನ್[] ಎಂದೂ ಕರೆಯಲ್ಪಡುವ ಈತ ಕ್ರೈಸ್ತ ಧರ್ಮದ ಆರಂಭಿಕ ದೇವತಾಶಾಸ್ತ್ರಜ್ಞ ಮತ್ತು ತತ್ವಶಾಸ್ತ್ರರಜ್ಞರಲ್ಲಿ ಒಬ್ಬನು.ಈತನು ಅಲ್ಜೀರಿಯದಲ್ಲಿ ಬಿಷಪ್ ಆಗಿದ್ದನು[].ಉತ್ತರ ಆಫ್ರಿಕದಲ್ಲಿ ಹುಟ್ಟಿ[][], ಬೆಳೆದು, ಮಿಲಾನ್ ಪಟ್ಟಣದಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದು, ಕ್ರೈಸ್ತ ಸಂತರ ವ್ಯಾಸಂಗದಿಂದ ಸ್ಫೂರ್ತಿಗೊಂಡು ಕ್ರೈಸ್ತಮತಾವಲಂಬಿಯಾಗಿ ಆಫ್ರಿಕಕ್ಕೆ ಹಿಂತಿರುಗಿ ಮತಧರ್ಮ ಪ್ರಚಾರದಲ್ಲಿ ನಿರತನಾದ ಒಬ್ಬ ಸಂತ. ತನ್ನ ಸಿಟಿ ಆಫ್ ಗಾಡ್ ಎಂಬ ಗ್ರಂಥದಿಂದ ಜಗತ್ಪ್ರಸಿದ್ಧನಾಗಿದ್ದಾನೆ.

ಮಹತ್ವ

ಈತ ಪ್ರಾಚೀನಯುಗ ಮತ್ತು ಮಧ್ಯಯುಗದ ಸಂಕ್ರಾಂತಿ ಪುರುಷನಾಗಿದ್ದಾನೆ. ರೋಮನ್ ಚಕ್ರಾಧಿಪತ್ಯ ಆಗಲೇ ಕ್ರೈಸ್ತ ಮತವನ್ನು ಅಂಗೀಕರಿಸಿದ್ದರಿಂದ ರಾಜ್ಯಕ್ಕೂ ಚರ್ಚಿಗೂ ಯಾವ ವಿಧವಾದ ದ್ವೇಷ ಮತ್ತು ಪೈಪೂಟಿಗಳೂ ಇರಲಿಲ್ಲ. 410ರಲ್ಲಿ ಗಾತ್ ಜನರು ರೋಂ ನಗರವನ್ನು ಕೊಳ್ಳೆ ಹೊಡೆದಾಗ ರೋಂ ನಗರದ ಪತನ ಪೂರ್ಣವಾಯಿತೆನ್ನಬಹುದು. ಕ್ರೈಸ್ತ ಮತವನ್ನು ಸ್ಥಾಪಿಸಿದ್ದೇ ರೋಂ ಚಕ್ರಾಧಿಪತ್ಯದ ಪತನಕ್ಕೆ ಕಾರಣವಾಯಿತೆಂದು ಮೂಢನಂಬಿಕೆಯುಳ್ಳ ಕೆಲವು ಕ್ರೈಸ್ತಮತ ವಿರೋಧಿಗಳು ಆರೋಪಿಸಿದರು. ಈ ಬಗೆಯ ಆರೋಪಣೆಗಳಿಂದ ಉದ್ರೇಕಗೊಂಡ ಆಗಸ್ಟೀನ್ ಇವುಗಳನ್ನು ತಿರಸ್ಕರಿಸುವ ಸಲುವಾಗಿಯೂ ಕ್ರೈಸ್ತ ಮತವನ್ನು ರಕ್ಷಿಸುವ ಸಲುವಾಗಿಯೂ ತನ್ನ ಡಿ ಸಿವಿಟಾಸ್ ಡೈ (ಸಿಟಿ ಆಫ್ ಗಾಡ್) ಎಂಬ ಗ್ರಂಥವನ್ನು ರಚಿಸಿದ. ಇದು ಸುಮಾರು 13 ವರ್ಷಗಳ ಸತತ ಪ್ರಯತ್ನದ ಫಲ. ಇದರಲ್ಲಿ ಕರ್ತೃ ಕ್ರೈಸ್ತ ಮತವನ್ನು ಸಮರ್ಥಿಸಿರುವುದಲ್ಲದೆ ತನ್ನ ದೇವರಾಜ್ಯ ಸ್ಥಾಪನೆಯನ್ನೂ ಕುರಿತು ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾನೆ.

ಸಿಟಿ ಆಫ್ ಗಾಡ್

The Consecration of Saint Augustine by Jaume Huguet

ಈ ಗ್ರಂಥ 22 ಭಾಗಗಳಿಂದ ಕೂಡಿದೆ. ಮೊದಲನೆಯ 10 ಭಾಗಗಳು ಪಾಷಂಡಿಗಳ (ಪೇಗನ್ಸ್) ದೋಷಾರೋಷಗಳ ವಿರುದ್ಧ ಕ್ರೈಸ್ತಮತ ರಕ್ಷಣೆಗೂ ಮಿಕ್ಕ 12 ಭಾಗಗಳು ದೇವರಾಜ್ಯ ರಚನೆಗೂ ಸಂಭಂದಿಸಿವೆ. ನಿಜವಾದ ದೇವರಾಜ್ಯ ಸ್ಥಾಪನೆಗೆ ಅವಕಾಶ ಮಾಡಿಕೊಡಬೇಕಾದರೆ ರೋಮನ್ನರ ಚಕ್ರಾಧಿಪತ್ಯದ ಪತನ ದೈವನಿಯಾಮಕವೇ ಆಗಿರಬೇಕು ಎಂದು ಆಗಸ್ಟೀನ್ ಹೇಳಿದ್ದಾನೆ. ರೋಮನ್ನರ ಚಕ್ರಾಧಿಪತ್ಯದ ವಿನಾಶದಿಂದ ತೆರವಾದ ಸ್ಥಳದಲ್ಲಿ ದೇವರಾಜ್ಯ ಸ್ಥಾಪನೆ ಸಾಧ್ಯವಾಯಿತು. ಮನುಷ್ಯನೇ ತನ್ನ ಪಾಪ ಕೃತ್ಯಗಳಿಗೆ ಜವಾಬ್ದಾರನೆಂದು ಈತ ನಂಬಿದ್ದರೂ ಹಣೆಬರಹದಲ್ಲಿ ಈತನಿಗೆ ಸ್ಥಿರವಾದ ನಂಬಿಕೆಯಿತ್ತು. ಇವನ ವಾದ ಸರಣಿ ಹೀಗೆ: ಎಂಥ ಕೆಡುಕಿನಲ್ಲೂ ಒಂದು ಶುಭಕಾರಕ ಶಕ್ತಿಯಿರುತ್ತದೆ. ಆದುದರಿಂದ ರೋಂ ಚಕ್ರಾಧಿಪತ್ಯದ ಪತನದ ಕೆಡುಕಿನಲ್ಲೂ ದೇವರಾಜ್ಯ ಸ್ಥಾಪನೆಯಾಗುವ ಒಂದು ಶುಭ ಚಿಹ್ನೆಯನ್ನು ನೋಡಬಹುದು. ಎಲ್ಲ ರಾಜರೂ ಪ್ರಜೆಗಳೂ ಕ್ರೈಸ್ತ ಮತವನ್ನು ಅನುಸರಿಸಬೇಕು. ಆಗ ನಿಜವಾದ ದೇವರಾಜ್ಯ ಸ್ಥಾಪನೆಯಾಗುವದು. ಗ್ರಂಥದ ಉಳಿದ 12 ಭಾಗಗಳಲ್ಲಿ ದೇವರಾಜ್ಯದ ರಚನೆಯನ್ನೂ ನೋಡಬಹುದು. ಅದರ ಬಗ್ಗೆ ಆಗಸ್ಟೀನ್ ಹೀಗೆ ಹೇಳುತ್ತಾನೆ: ಐಹಿಕ ರಾಜ್ಯಗಳು ವಿನಾಶಕ್ಕೆ ಒಳಪಡಬಹುದಾದರೆ ಎಂಥ ಕಷ್ಟಗಳನ್ನಾದರೂ ಸಹಿಸಿಕೊಳ್ಳುವ ಒಂದು ರಾಜ್ಯವಿದೆ. ಇದು ಶಾಶ್ವತ ರಾಜ್ಯ. ಇಂಥ ಒಂದು ಶಾಶ್ವತ ರಾಜ್ಯವೇ ದೇವರಾಜ್ಯ. ಇದನ್ನು ಭೂಲೋಕದಲ್ಲಿರುವ ಕ್ರೈಸ್ತ ಮತದಲ್ಲಿ ಪ್ರತ್ಯಕ್ಷವಾಗಿ ನೋಡಬಹುದು. ಐಹಿಕ ರಾಜ್ಯದೊಡನೆ ಹೋಲಿಸಿದರೆ ದೇವರಾಜ್ಯದಲ್ಲಿ ಅನೇಕ ಸದ್ಗುಣಗಳಿವೆ. ದೇವರಾಜ್ಯ ದೇಶಕಾಲಾತೀತವಾದುದು. ಐಹಿಕ ರಾಜ್ಯ ದೇವರಾಜ್ಯವೆಂದು ದ್ವಂದ್ವ ಗುಣಗಳುಳ್ಳ ಪ್ರಪಂಚದಲ್ಲಿ ನಾವು ಜೀವಿಸಿದ್ದೇವೆ. ಸ್ವಾಭಿಮಾನದ ಮೇಲೆ ಸ್ಥಾಪಿತವಾಗಿರುವ ಐಹಿಕರಾಜ್ಯ ಏಕಪ್ರಚಾರವಾಗಿ ದುಷ್ಕೃತ್ಯಗಳನ್ನೇ ಮಾಡುತ್ತಿರುತ್ತದೆ. ದೈವವಾತ್ಸಲ್ಯದ ಮೇಲೆ ಸ್ಥಾಪಿತವಾಗಿರುವ ದೇವರಾಜ್ಯ ಯಾವಾಗಲೂ ಒಳ್ಳೆಯದನ್ನೇ ಬಯಸುತ್ತದೆ. ಅದಕ್ಕೆ ಉತ್ತೇಜನ ಕೊಡುತ್ತದೆ. ಒಂದು ಅಧಿಕಾರದ ಕಡೆಗೂ ಮತ್ತೊಂದು ನ್ಯಾಯದ ಕಡೆಗೂ ಗಮನ ಕೊಡುತ್ತವೆ. ಕ್ರೈಸ್ತಮತ ಒಂದು ವಿಧದಲ್ಲಿ ದೇವರಾಜ್ಯದ ವಾಸ್ತವಿಕ ರೂಪ. ಏಕೆಂದರೆ ದೇವರಾಜ್ಯದ ಲಕ್ಷಣಗಳಾದ ಮನುಷ್ಯರ ಸಮಾಜ ಪಾಪಕರ್ಮಗಳಿಂದ ಕೂಡಿರುವುದರಿಂದ ದುಷ್ಟರನ್ನು ಹತೋಟಿಯಲ್ಲಿಡುವುದಕ್ಕಾಗಿ ಸರ್ಕಾರ ಸ್ಥಾಪಿತವಾಗಿದೆ.

ದೇವರಾಜ್ಯ ಸರ್ವರಿಗೂ ಸೇರಿದ್ದು. ಆದರೆ ಸಿಸಿರೋವಿನ ವಿಶ್ವ ಸಮಾಜದ ಹಾಗೆ ಅಧೋಗತಿಯಿಂದಾಗಿ ಎಲ್ಲರಿಗೂ ಇದರಲ್ಲಿ ಪ್ರವೇಶವಿಲ್ಲ. ದೈವಾನುಗ್ರಹವಿರುವವರು ಮಾತ್ರ ದೇವರಾಜ್ಯದ ಸದಸ್ಯರಾಗಬಹುದು. ದೇವರಾಜ್ಯದ ಸದಸತ್ವಕ್ಕೆ ದೈವಾನುಗ್ರಹವೇ ನಿಜವಾದ ಅರ್ಹತೆ, ಬುಡಕಟ್ಟು, ರಾಜ್ಯ ಅಥವಾ ವರ್ಗಗಳಲ್ಲ. ಸದಸ್ಯರೆಲ್ಲರೂ ವಿಶ್ವದ ನಾನಾ ಭಾಗಗಳಿಂದ ಬಂದಿದ್ದರೂ ದೇವರಲ್ಲಿ ಭಕ್ತಿ ಮತ್ತು ಅಕ್ಕರೆ ಇವರಲ್ಲಿ ಸರ್ವಸಾಮಾನ್ಯವಾಗಿರುವುದರಿಂದ, ಇವರೆಲ್ಲರೂ ಒಂದೇ ಸಮಾಜಕ್ಕೆ ಸೇರಿದವರಾಗಿರುತ್ತಾರೆ. ದೇವರಾಜ್ಯ ನ್ಯಾಯ ಮತ್ತು ಶಾಂತಿ ಎಂಬ ಎರಡು ಮುಖ್ಯವಾದ ಸದ್ಗುಣಗಳನ್ನು ಸಾಧಿಸುವುದು. ಶಿಸ್ತು ಮತ್ತು ಶಿಸ್ತಿಗೆ ಸಂಬಂಧಪಟ್ಟ ಕರ್ತವ್ಯಗಳನ್ನು ನೆರವೇರಿಸುವುದರಲ್ಲಿ ನ್ಯಾಯ ಅಡಕವಾಗಿದೆ. ತನ್ನ ಕರ್ತವ್ಯಗಳನ್ನು ನೇರವೇರಿಸುವವನೇ ಯೋಗ್ಯನಾದ ವ್ಯಕ್ತಿ. ಮನುಷ್ಯ ಸಮಾಜದಲ್ಲಿ ಶಾಂತಿಯನ್ನು ಸ್ಥಾಪಿಸುವುದು ಐಚ್ಛಿಕ ಹಾಗೂ ದೇವರಾಜ್ಯದ ಗುರಿಯಾಗಬೇಕು.

ತತ್ವಶಾಸ್ತ್ರ

The earliest known portrait of Saint Augustine in a 6th-century fresco, Lateran, Rome

ಗ್ರೀಕ್ ತತ್ತ್ವಜ್ಞಾನಿಗಳ ಹಾಗೆ ನ್ಯಾಯವೇ ರಾಜ್ಯದ ಆಧಾರ ಸ್ಥಂಭವಾಗಿರಬೇಕೆಂಬುದನ್ನು ಆಗಸ್ಟೀನ್ ಒಪ್ಪುವುದಿಲ್ಲ. ಕೆಲವು ರಾಜ್ಯಗಳು ಕ್ರೈಸ್ತ ಮತವನ್ನು ಅನುಸರಿಸದೆ ಇರಬಹುದು. ಆದರೆ ಕ್ರೈಸ್ತಮತವನ್ನು ಅನುಸರಿಸುವ ರಾಜ್ಯಗಳಲ್ಲಿ ಮಾತ್ರ ನ್ಯಾಯ ದೊರಕುತ್ತದೆ. ಆದುದರಿಂದ ನ್ಯಾಯ ಮತಧರ್ಮದ ಒಂದು ಲಕ್ಷಣವೇ ಹೊರತು ರಾಜ್ಯದ ಲಕ್ಷಣವಲ್ಲ. ರಾಜ್ಯಕ್ಕಿಂತ ಉತ್ಕೃಷ್ಟ ಅಧಿಕಾರ ಚರ್ಚಿನಲ್ಲಿದೆ. ಮನುಷ್ಯರ ಪಾಪದ ಫಲವೇ ರಾಜ್ಯವೆಂದೂ ಮನುಷ್ಯರ ದುರ್ಗುಣಗಳನ್ನು ಕಡಿಮೆ ಮಾಡುವ ಸಲುವಾಗಿ ರಾಜ್ಯ ದೇವರಿಂದ ನೇಮಿಸಲ್ಪಟ್ಟಿದೆಯೆಂದೂ ಈತ ಹೇಳಿದ್ದಾನೆ. ಇದನ್ನು ನೋಡಿದರೆ ಆಗಸ್ಟೀನ್ ದ್ವಿಮುಖಾಧಿಕಾರ ತತ್ತ್ವವನ್ನು ಪ್ರತಿಪಾದಿಸುವನೆಂಬುದು ವ್ಯಕ್ತವಾಗುತ್ತದೆ. ಐಹಿಕ ಮತ್ತು ಧಾರ್ಮಿಕ ವ್ಯಾಪಾರಗಳಿಗೆ ಅನುಕೂಲವಾಗಿರುವ ಎರಡು ಬಗೆಯ ಅಧಿಕಾರಗಳು ರಾಜ್ಯದಲ್ಲಿವೆ. ಇವುಗಳಿಗೆ ಪ್ರತ್ಯೇಕವಾದ ಕ್ಷೇತ್ರಗಳಿವೆ. ಒಂದು ವೇಳೆ ಇವುಗಳಿಗೆ ತಿಕ್ಕಾಟ ಬಂದರೂ ಅದು ತಾತ್ಕಾಲಿಕವೇ ಹೊರತು ಯಾವಾಗಲೂ ನಿಲ್ಲತಕ್ಕದ್ದಲ್ಲ. ಕೊನೆಯಲ್ಲಿ ಧಾರ್ಮಿಕ ರಾಜ್ಯವೇ ಸ್ಥಿರವಾಗಿ ನಿಲ್ಲುವುದು.

ಆಸ್ತಿಪಾಸ್ತಿಗಳ ವಿಚಾರದಲ್ಲೂ ಈತ ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾನೆ. ಭೂಮಿಯಿಂದ ಬರುವ ಫಲವನ್ನು ದೇವರು ಮಾನವನಿಗೆ ದಯಪಾಲಿಸಿದ್ದಾನೆ. ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವುದಕ್ಕೋಸ್ಕರ ಮನುಷ್ಯ ಈ ಫಲವನ್ನು ಉಪಯೋಗಿಸಿಕೊಳ್ಳಬಹುದು. ಆದರೆ ತನಗೆ ಎಷ್ಟು ಅವಶ್ಯವೋ ಅಷ್ಟನ್ನು ಮಾತ್ರ ಬಳಸಿಕೊಂಡು ಮಿಕ್ಕಿದ್ದನ್ನು ಸಮಾಜದ ಉಪಯೋಗಕ್ಕಾಗಿ ಬಿಡಬೇಕು. ಗುಲಾಮಗಿರಿ ಪದ್ಧತಿ ಮನುಷ್ಯನ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ. ಮನುಷ್ಯ ಇದನ್ನು ಅನುಭವಿಸಲೇಬೇಕು. ಹೀಗೆಂದು ಗುಲಾಮಗಿರಿ ಪದ್ಧತಿಯನ್ನು ಆಗಸ್ಟೀನ್ ಸಮರ್ಥಿಸಿದ್ದಾನೆ.

ಪ್ರಭಾವ

ಸಿಟಿ ಆಪ್ ಗಾಡ್ ಗ್ರಂಥ ಮಧ್ಯಯುಗದ ಯೂರೋಪಿನ ರಾಜಕೀಯದ ಮೇಲೆ ಅತ್ಯಂತ ಪ್ರಭಾವ ಬೀರಿದ್ದಲ್ಲದೆ ಹೋಲಿ ರೋಮನ್ ಎಂಪೈರ್ ಎಂಬ ದೊಡ್ಡ ಸಂಸ್ಥೆಯೂ ಇದರ ಆಧಾರದ ಮೇಲೆ ಕಟ್ಟಲ್ಪಟ್ಟಿತು. ಮಧ್ಯಯುಗದ ತತ್ತ್ವ ಜ್ಞಾನಿಗಳೂ ಈ ಗ್ರಂಥದಿಂದ ಸ್ಪೂರ್ತಿ ಪಡೆದು ತಮ್ಮ ರಾಜಕೀಯ ಮತ್ತು ಧಾರ್ಮಿಕ ಅಭಿಪ್ರಾಯಗಳನ್ನು ರೂಪಿಸಿಕೊಂಡರು.

ಉಲ್ಲೇಖಗಳು

  1. The American Heritage College Dictionary. Boston, MA: Houghton Mifflin Company. 1997. p. 91. ISBN 0-395-66917-0.
  2. In the Orthodox Church – "Augustine of Hippo". OrthodoxWiki. Retrieved 17 September 2015.
  3. Mendelson, Michael. Saint Augustine. The Stanford Encyclopedia of Philosophy. Retrieved 21 December 2012.
  4. MacKendrick, Paul (1980) The North African Stones Speak, Chapel Hill: University of North Carolina Press, p. 326, ISBN 0709903944.
  5. Ferguson, Everett (1998) Encyclopedia of Early Christianity, Taylor & Francis, p. 776, ISBN 0815333196.


ಬಾಹ್ಯ ಸಂಪರ್ಕಗಳು

ಸಾಮಾನ್ಯ

ಜೀವನ ಚರಿತ್ರೆ
ಕೃತಿಗಳು
ಜೀವನ ಚರಿತ್ರೆ ಮತ್ತು ವಿಮರ್ಶೆಗಳು
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: