M67
ಮೇಸಿಯೆ ಪಟ್ಟಿಯ 67ನೇ ಆಕಾಶಕಾಯ
ಕಟಕ ರಾಶಿಯಲ್ಲಿರುವ ಎಂ 67 ಎಂಬ ಹೆಸರಿನ ನಕ್ಷತ್ರಗುಚ್ಛ ದುರ್ಬೀನುಗಳಿಗೆ ನಿಲುಕವಂತಹುದು. ಕಟಕರಾಶಿ ತುಂಬಾ ಕ್ಷೀಣವಾದದ್ದು. ಅದನ್ನು ಪಕ್ಕದ ಮಿಥುನ ಮತ್ತು ಸಿಂಹ ರಾಶಿಯ ಸಹಾಯದಿಂದ ಪತ್ತೆ ಮಾಡಬಹುದು. ಇದರಲ್ಲಿರುವ ಬರಿಗಣ್ಣಿಗೇ ಕಾಣುವ ಗುಚ್ಛ ಎಂ 44 - ಪ್ರೆಸಿಪಿ. ಇದನ್ನು ಗುರುತಿಸಿದ ಮೇಲೆ ಪುಟ್ಟ ತ್ರಿಕೋಣಾಕಾರವನ್ನು ಗುರುತಿಸಿ, ಅದರ ದಕ್ಷಿಣದ ನಕ್ಷತ್ರದ ಆಸುಪಾಸಿನಲ್ಲಿ ಕಣ್ಣಾಡಿಸಿದರೆ ಎಂ 67 ಕಾಣುತ್ತದೆ. ಮುಕ್ತ ಗುಚ್ಛ ಎಂದು ಇದನ್ನು ವರ್ಗೀಕರಿಸಲಾಗಿದೆ. ನಕ್ಷತ್ರಗಳು ಗೋಳವಾಗಿ ಸೇರಿಕೊಂಡಿಲ್ಲ; ವಿರಳವಾಗಿ ಹರಡಿಕೊಂಡಿವೆ. ಛಾಯಾಚಿತ್ರಗಳಿಂದ ಅವುಗಳ ಬಣ್ಣಗಳ ವೈವಿಧ್ಯವನ್ನೂ ಕಾಣಬಹುದು. ನಕ್ಷತ್ರದ ಅಧ್ಯಯನಕ್ಕೆ ಇದೊಂದು ಪ್ರಯೋಗಶಾಲೆ ಎಂದೇ ಪರಿಗಣಿಸಬಹುದು. ಇದು ಅತ್ಯಂತ ಹಳೆಯ ಗುಚ್ಛ - ಸುಮಾರು 4 ಶತಕೋಟಿ ವರ್ಷಗಳಷ್ಟು ಹಿಂದೆ ಸೃಷ್ಟಿಯಾಯಿತು ಎಂಬುದೊಂದು ಅಂದಾಜು. ಇಷ್ಟು (ಹಿರಿಯ) ಹಳೆಯ ಗುಚ್ಛಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಗುಚ್ಛದ ದೊಡ್ಡ ನಕ್ಷತ್ರಗಳು ಅಂದರೆ ಹೆಚ್ಚಿನ ದ್ರವ್ಯರಾಶಿಯವು ಇಷ್ಟೊಂದು ವರ್ಷಗಳು ಅಸ್ತಿತ್ವದಲ್ಲಿ ಇರಲಾರವು. ಆದ್ದರಿಂದ ಗುಚ್ಛ ತನ್ನ ಸ್ವರೂಪವನ್ನೇ ಕಳೆದುಕೊಂಡುಬಿಡುತ್ತದೆ. ಹಾಗಾದರೆ ಎಂ 67 ಹೇಗೆ ಉಳಿದುಕೊಂಡಿದೆ ಎಂಬುದೇ ಮುಖ್ಯವಾದ ಪ್ರಶ್ನೆ. ಇದಕ್ಕಿಂತ ಹೆಚ್ಚಿನ ವಯಸ್ಸಿನ ಇನ್ನೆರಡು ಗುಚ್ಚಗಳು ಮಾತ್ರ - ಎನ್ ಜಿ ಸಿ 188 (ಸುಮಾರು 5 ಶತಕೋಟಿ ವರ್ಷಗಳು) ಮತ್ತು ಎನ್ ಜಿ ಸಿ 6791 (ಸುಮಾರು 7 ಶತಕೋಟಿ ವರ್ಷಗಳು) ಎಂಬ ಸಂಖ್ಯೆಯವು - ಕಂಡುಬಂದಿವೆ. ಅರಳಿದಂತಿರುವ ಈ ಗುಚ್ಛದಲ್ಲಿ ಸುಮಾರು 500 ನಕ್ಷತ್ರಗಳಿವೆ ಎಂದು ಲೆಕ್ಕ ಮಾಡಲಾಗಿದೆ. ಗುಚ್ಛಕ್ಕೂ ನಮಗೂ ನಡುವೆ ವ್ಯಾಪಿಸಿರುವ ಅಂತರ ನಾಕ್ಷತ್ರಿಕ ಅನಿಲ ಮತ್ತು ದೂಳುಗಳು ಎಷ್ಟು ಪ್ರಮಾಣದ ಬೆಳಕನ್ನು ಕಡಿಮೆ ಮಾಡಿವೆ ಎಂಬುದರ ಆಧಾರದಿಂದ ಗುಚ್ಛ ಸುಮಾರು 2700 ಜ್ಯೋತಿರ್ವರ್ಷ ದೂರದಲ್ಲಿದೆ ಎಂದು ತಿಳಿಯುವುದು ಸಾಧ್ಯವಾಗಿದೆ. ಈ ಗುಚ್ಛವನ್ನು ಅಧ್ಯಯನ ಮಾಡಿದ ಖ್ಯಾತ ಖಗೋಳ ವಿಜ್ಞಾನಿ ಸಿಸಿಲಿಯಾ ಪೆಯ್ನಾ ಗೆಪೋಷ್ಕಿನ್ ಅವರು 200 ಶ್ವೇತ ಕುಬ್ಜಗಳನ್ನು ಗುರುತಿಸಿದ್ದು ಹೊಸ ಅಧ್ಯಾಯವನ್ನೇ ಸೃಷ್ಟಿಸಿತು. ನಕ್ಷತ್ರಗಳ ವಿಕಾಸವನ್ನು ಅಧ್ಯಯನ ಮಾಡುವಾಗ ಕೆಂಪು ದೈತ್ಯ, ಚಂಚಲ ನಕ್ಷತ್ರಗಳು ಹೀಗೆ ಅನೇಕ ಹಂತಗಳನ್ನು ಕಾಣುತ್ತೇವೆ. ಈ ಎಲ್ಲ ಹಂತಗಳ ಉದಾಹರಣೆಗಳು ನಮಗೆ ಇಲ್ಲಿ ದೊರಕುತ್ತವೆ. ಹೆಚ್ಚಿನ ದ್ರವ್ಯರಾಶಿಯ ನಕ್ಷತ್ರಗಳು ಈಗಾಗಲೇ ಕೆಂಪು ದೈತ್ಯಗಳಾಗಿರುವುದನ್ನು ಇಲ್ಲಿ ಗುರುತಿಸಬಹುದು. ಅತಿ ಹೆಚ್ಚು ದೀಪ್ತಿಯ ಬ್ಲೂಸ್ಟ್ಯಾಗ್ಲರ್‍ಸ್ ಎಂಬ ವರ್ಗದ ನಕ್ಷತ್ರಗಳನ್ನು ಇಲ್ಲಿ ಕಾಣಬಹುದು. ಈ ಗುಚ್ಛದ ವಯಸ್ಸು ಸುಮಾರು ಸೌರಮಂಡಲದ ವಯಸ್ಸಿನಷ್ಟೇ ಆಗಿರುವುದರಿಂದ ಸೂರ್ಯನಂತಹ ನಕ್ಷತ್ರಗಳನ್ನು ಅಭ್ಯರ್ಸಿಸುವ ಕೆಲಸ ಭರದಿಂದ ಸಾಗಿದೆ. ಸೂರ್ಯನಂತಹ ಸುಮಾರು ಒಂದು ನೂರು ನಕ್ಷತ್ರಗಳಿವೆ. ಅಂದರೆ ಶೇಕಡಾವಾರು 15ರಷ್ಟು ಎಂದಾಯಿತು. ಅವುಗಳನ್ನು ವಿಶೇಷವಾಗಿ ಕಲೆಗಳು, ಸೌರಚಾಚಿಕೆಗಳಂತಹ ಚಟುವಟಿಕೆಗಳಿಗಾಗಿ ಗಮನಿಸಲಾಗುತ್ತಿದೆ. ಸೂರ್ಯನ 11ವರ್ಷದ ನಿಯತಕಾಲಿಕೆಗೆ (ವಾಸ್ತವದಲ್ಲಿ 22 ವರ್ಷ) ಕಾರಣ ಹುಡುಕುವಲ್ಲಿ ಇದು ಬಹಳ ಸಹಾಯವಾಗಬಲ್ಲುದು. ಆಯಸ್ಕಾಂತ ಶಕ್ತಿಯ ಮೂಲ ಕಾರಣ ಪತ್ತೆಯಾಗಬೇಕಿದೆ; ಅಲ್ಲದೆ ವರ್ಣಾವರಣ ಮತ್ತು ಕಿರೀಟಗಳು ಯಾವ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ಈ ಬಗೆಯ ಅಧ್ಯಯನ ಅವಶ್ಯವಾಗಿದೆ.