ಆಫ್ಸೆಟ್ ಮುದ್ರಣ

ಮುದ್ರಣ ಫಲಕದಲ್ಲಿರುವ ವಸ್ತುವಿಗೆ ಮಸಿಯನ್ನೂ ಮುದ್ರಣವಾಗದ ಭಾಗಕ್ಕೆ ನೀರನ್ನೂ ಲೇಪಿಸಿ ರಬ್ಬರ್ ಹಾಳೆಗೆ ಅದನ್ನು ಮುದ್ರಿಸಿ ಆ ಹಾಳೆಯಿಂದ ಕಾಗದಕ್ಕೆ ವರ್ಗಾಯಿಸುವ (ಆಫ್‍ಸೆಟ್) ವಿಧಾನ ಮಸಿಲೇಪಿತ ಫಲಕದಿಂದ ಕಾಗದದ ಮೇಲೆ ನೇರವಾಗಿ ಮುದ್ರಿಸುವ ಸಾಂಪ್ರದಾಯಿಕ ವಿಧಾನದಿಂದ ಇದು ಭಿನ್ನ. ಹಿಂದಿನಿಂದಲೂ ಬಳಕೆಯಲ್ಲಿರುವ ಲಿಥೋ ಮುದ್ರಣ ಯಂತ್ರಗಳು ಒಂದು ಎರಡು ಅಥವಾ ನಾಲ್ಕು ಬಣ್ಣಗಳಲ್ಲಿ ಮುದ್ರಿಸಬಲ್ಲವು.[]

ವೆಬ್ ಆಫ್‍ಸೆಟ್

ಇವು ಕಾಗದದ ಬಿಡಿ ಹಾಳೆಗಳ ಮೇಲೆ ಮಾತ್ರ ಮುದ್ರಿಸುವ ಅನುಕೂಲತೆಗಳನ್ನು ಪಡಿದಿವೆ. ಆದರೆ ಇತ್ತೀಚೆಗೆ ವೆಬ್ ಆಫ್‍ಸೆಟ್ ಎಂಬ ನವೀನತರ ಯಂತ್ರಗಳು ಬಳಕೆಗೆ ಬಂದಿವೆ. ಬಿಡಿಹಾಳೆಗೆ ಬದಲು ಕಾಗದವನ್ನು ನಿರಂತರವಾಗಿ ಒಂದು ಕಾಗದದ ಸುರುಳಿಯಿಂದಲೇ (ರೀಲ್ ಅಥವಾ ವೆಬ್) ಒದಗಿಸುವ ಕ್ರಮ ಇವುಗಳಲ್ಲಿರುವ ಮುಖ್ಯ ಮಾರ್ಪಾಟು. ನಿರಂತರ ಪ್ರವಹಿಸುವ ಕಾಗದದ ಮೇಲೆ ಯಂತ್ರದ ಸಿಲಿಂಡರಿನ ಪ್ರತಿಯೊಂದು ಸುತ್ತಿಗೂ ಒಂದರ ಮಗ್ಗುಲಲ್ಲಿ ಮತ್ತೊಂದು ಪಡಿಯಚ್ಚು ಮುದ್ರಿತವಾಗಿ ಹೊರಬರುತ್ತದೆ. ಒಂದು ಕಡೆ ಕಾಗದದ ಸುರುಳಿಯನ್ನು (ವೆಬ್) ಯಂತ್ರಕ್ಕೆ ಒದಗಿಸಿದರೆ ಹಲವು ಬಣ್ಣಗಳಲ್ಲಿ ಹಾಳೆಯ ಎರಡೂ ಕಡೆ ಮುದ್ರಿಸಿ ಹೊರತರಲು ಸಾಧ್ಯವಿದೆ. ಎರಡು ಕ್ರಮಾನುಗತ ಮುದ್ರಣಗಳ ನಡುವಿನ ಕಾಲಾವಕಾಶ ಕೇವಲ ಒಂದು ಸೆಕೆಂಡಿನ ಅತ್ಯಲ್ಪಾಂಶವೆಂಬುದನ್ನು ಇಲ್ಲಿ ಗಮನಿಸಬೇಕು. ಆದರೆ ಪ್ರತಿಯೊಂದು ಮುದ್ರಣದಲ್ಲೂ ಬಿಂಬರಹಿತ ಕ್ಷೇತ್ರದಲ್ಲಿ (ನಾನ್‍ಇಮೇಜ್ ಏರಿಯ) ನೀರು ಮತ್ತು ಬಿಂಬ ಕ್ಷೇತ್ರದಲ್ಲಿ ಜಿಡ್ಡಾದ ಮಸಿಯೂ ಲೇಪನಗೊಂಡು ಸುರುಳಿಯ ಕಾಗದ ಒಂದು ಮುದ್ರಣದಲ್ಲಿ ಒದ್ದೆಯಾದದ್ದು ಮತ್ತೊಂದು ಮುದ್ರಣದ ಒಳಗಾಗಿ ಒಣಗಲು ಅವಕಾಶವಿಲ್ಲದೆ ಒದ್ದೆಯಾಗಿರುವ ಮಸಿಯ ಮೇಲೆಯೇ ಮತ್ತೊಂದು ಬಣ್ಣದ ಮಸಿಯನ್ನು ಹಚ್ಚಲಾಗುತ್ತದೆ. (ವೆಟ್-ಆನ್-ಪ್ರಿಟಿಂಗ್). ಅಂತಿಮವಾಗಿ ಅದನ್ನು ಕಾಯಿಸಿದ ಲೋಹದ ಸಿಲಿಂಡರ್ ಮೇಲೆ ಅಥವಾ ತೆರೆದ ಅನಿಲ ಜ್ವಾಲೆಯ ಬುಗ್ಗೆಯ (ಗ್ಯಾಸ್ ಫ್ಲೇಮ್‍ಜೆಟ್) ಮೇಲೆ ಅಥವಾ ವಿದ್ಯುಚ್ಛಕ್ತಿಯಿಂದ ಕಾಯಿಸಿದ ಅತಿರಕ್ತ ಜ್ವಾಲೆಯ ಮೇಲೆ ಹಾಯಿಸಲಾಗುವುದು. ಮುದ್ರಿತವಾದ ಸುರುಳಿಯ ಹಾಳೆಯನ್ನು ಆ ಯಂತ್ರಕ್ಕೆ ಅನುಗೊಳಿಸಿರುವ ಇನ್‍ಲೈನ್ ಸಲಕರಣೆಯ ಮೂಲಕ ಹಾಯಿಸಲಾಗುತ್ತದೆ. ಅಲ್ಲಿ ಅದನ್ನು ಸೀಳಿ, ಮಡಚಿ, ಬೇಕಾದ ಅಳತೆಗೆ ಕತ್ತರಿಸಿ, ತಂತಿಯಿಂದ ಹೊಲೆದು ಪುಸ್ತಕ ಅಥವಾ ಪತ್ರಿಕೆಗಳ ಪ್ರತಿಗಳಾಗಿ ನೇರವಾಗಿ ರವಾನೆಗೆ ಸಿದ್ಧವಾಗಿ ಹೊರ ಹಾಕಲಾಗುವುದು. ಈ ಯಂತ್ರಗಳು ಅತ್ಯಂತ ವೇಗವಾಗಿ ಓಡುತ್ತವೆ. ಗಂಟೆಗೆ ಸುಮಾರು 15,000 - 35,000 ಪ್ರತಿಗಳವರೆಗೆ ಸರಬರಾಜು ಮಾಡಬಲ್ಲುವು. ವಿವಿಧ ವರ್ಣಗಳ ಚಿತ್ರಗಳುಳ್ಳ ಸಮಾಚಾರ ಪತ್ರಿಕೆಗಳನ್ನೂ ಸಹ ಈ ವೆಬ್ ಆಫ್‍ಸೆಟ್ ಯಂತ್ರದಿಂದ ಅತ್ಯಂತ ಯಶಸ್ವಿಯಾಗಿ ಮುದ್ರಿಸಲಾಗುತ್ತಿದೆ.

ಚಿಕ್ಕ ಆಫ್‍ಸೆಟ್ ನಕಲು ಯಂತ್ರಗಳು

ಚಿಕ್ಕ ಆಫ್‍ಸೆಟ್ ನಕಲು ಯಂತ್ರಗಳು (ಸ್ಮಾಲ್ ಆಫ್‍ಸೆಟ್ ಡ್ಯೂಪ್ಲಿಕೇಟರುಗಳು): ಕಾರ್ಯಾಲಯದ ಲೇಖನ ಸಾಮಗ್ರಿಗಳನ್ನು ಮುದ್ರಿಸಲು ಉಪಯೋಗಿಸುವ ಕಿರಿಯ ಪ್ರಮಾಣದ ಆಫ್‍ಸೆಟ್ ಮುದ್ರಣ ಯಂತ್ರಗಳಿಗೆ ಈ ಹೆಸರಿದೆ. ತತ್ವಶಃ ಇವು ದೊಡ್ಡ ಆಫ್‍ಸೆಟ್ ಯಂತ್ರಗಳಿಗಿಂತ ಯಾವ ವಿಧದಲ್ಲೂ ಬೇರೆಯಲ್ಲ. [] ಕಾರ್ಯಾಲಯದ ನಮೂನೆಗಳು ಮತ್ತು ಸ್ಥಾವರ ನಮೂನೆಗಳು ತಪಶೀಲು ಪಟ್ಟಿಗಳು, ಬೆಲೆ ಪಟ್ಟಿಗಳು, ಲಘು ಪ್ರಕಟಣೆಗಳು (ಬುಲ್ಲೆಟಿನ್ಸ್) ಮಾರಾಟ ಪತ್ರಗಳು, ಅನುಸೂಚಿಗಳು, ಮಡಿಸಿದ ಪ್ರಕಟಣ ಪತ್ರಗಳು ಮುಂತಾದುವನ್ನು ಶೀಘ್ರವಾಗಿ ಮುದ್ರಿಸಲು ಇವು ಆದರ್ಶ ಯಂತ್ರಗಳಾಗಿವೆ. ಈ ಯಂತ್ರಗಳಲ್ಲಿ ಅತಿ ಶೀಘ್ರವಾಗಿ ಕೆಲಸದ ಬದಲಾವಣೆಯನ್ನು ಮಾಡಬಹುದಷ್ಟೇ ಅಲ್ಲದೆ ಕೆಲವು ಯಂತ್ರಗಳಲ್ಲಿ ಸಾಲು ರಂಧ್ರಗಳನ್ನು ಮಾಡುವ, ಸ್ಕೋರಿಂಗ್ ಮಾಡುವ, ಕತ್ತರಿಸುವ, ಇಂಪ್ರಿಂಟ್ ಮಾಡುವ, ಕ್ರಮಸಂಖ್ಯೆಗಳನ್ನು ಮುದ್ರಿಸುವ ಮತ್ತು ಎಂಬೋಸಿಂಗ್ ಮಾಡುವ ಸಲಕರಣೆಗಳನ್ನೂ ಹೊಂದಿಸಿರುತ್ತಾರೆ. ಒಂದು ಹಾಳೆಯ ಎರಡೂ ಮಗ್ಗುಲಲ್ಲಿ ಒಂದೇ ಸಮಯದಲ್ಲಿ ಮುದ್ರಿಸುವ ಎರಡು ಯೂನಿಟ್ಟುಗಳಿರುವ ಯಂತ್ರಗಳೂ ಇವೆ. ಈ ಯಂತ್ರಗಳನ್ನು ನಡೆಸುವ ವೆಚ್ಚ ಕಡಿಮೆ. ಚಲನೆ ಸುಲಭ ಮತ್ತು ಸರಳ. ಚಿಕ್ಕ ಪ್ರಮಾಣದಲ್ಲಿ ಮುದ್ರಿತವಾಗಬೇಕಾದ ಕೆಲಸಗಳನ್ನು ಶೀಘ್ರವಾಗಿ ಮಾಡಲು ಇವು ಅತಿದಕ್ಷ. ಆದ್ದರಿಂದ ಸಾವಿರಾರು ವ್ಯಾಪಾರ ಕಾರ್ಯಾಲಯಗಳಲ್ಲೂ ಔದ್ಯಮಿಕ, ವಿಕ್ರೀಯ, ಶೈಕ್ಷಣಿಕ, ಸರ್ಕಾರಿ ಮತ್ತು ವಾಣಿಜ್ಯಸಂಸ್ಥೆಗಳಲ್ಲೂ ಮುದ್ರಣ ಕೆಲಸಗಳಿಗೆ ಚಿಕ್ಕ ಆಫ್‍ಸೆಟ್ ನಕಲು ಯಂತ್ರಗಳು ಬಲು ಜನಪ್ರಿಯವಾಗಿವೆ. ಇವುಗಳನ್ನು ನಕಲು ಯಂತ್ರಗಳಿಗೆ ಸಮಾನವಾಗಿ ಕಾಣುತ್ತಾರೆ. ಕಳೆದ ಸುಮಾರು ಹತ್ತು ವರ್ಷಗಳಲ್ಲಿ ಈ ಚಿಕ್ಕ ಆಫ್‍ಸೆಟ್ ನಕಲು ಯಂತ್ರಗಳ ಉಪಯೋಗ ತುಂಬ ಹೆಚ್ಚಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರತಿಯೊಂದು ಗಣನೀಯ ಕಾರ್ಯಾಲಯದಲ್ಲಿಯೂ ಅವಶ್ಯಕ ಲೇಖನ ಸಾಮಗ್ರಿಗಳನ್ನು ಮುದ್ರಿಸಿಕೊಳ್ಳಲು ಒಂದು ಚಿಕ್ಕ ಆಫ್‍ಸೆಟ್ ಶಾಖೆಯನ್ನು ನಿಯೋಜಿಸುತ್ತಾರೆ. ಹೀಗಾಗಿ ಈ ಪದ್ಧತಿ ಸಾಂಪ್ರದಾಯಿಕ ಮುದ್ರಣಾಲಯಗಳ ಕೈಗಳಿಂದ ಕಳಚಿ ಕ್ರಮೇಣ ದೂರ ಸರಿಯುತ್ತಿದೆ. ಈ ಯಂತ್ರಗಳಲ್ಲಿ ಮೂಲತ: ಕಾಗದದ ಡೈರೆಕ್ಟ್ ಇಮೇಜ್ ಮಾಸ್ಟರ್ ಮತ್ತು ಪ್ರೀಸೆನ್ಸಿಟೈಸ್ಡ್ ಪ್ಲೇಟುಗಳು ಎಂಬುದಾಗಿ ಎರಡು ಬಗೆಯ ಆಫ್‍ಸೆಟ್ ನಕಲು ತೆಗೆಯುವ ಫಲಕಗಳನ್ನು ಬಳಸುವರು. ಮೊದಲನೆಯ ಬಗೆಯ ಪ್ಲೇಟನ್ನು (ಸೆನ್ಸಿಟೈಸ್ಡ್) ಬಿಂಬಗ್ರಹಣ ಶಕ್ತಿ ಇರದಂತೆ ರಚಿಸಿದೆ. ಇದರಲ್ಲಿ ಕೈಬರಹ, ಬೆರಳಚ್ಚಿರುವುದು (ಟೈಪ್ ಮಾಡಿರುವುದು) ಅಥವಾ ರೇಖಾಚಿತ್ರಗಳನ್ನು ಬರೆದು ಮುದ್ರಿಸಲಾಗುವುದು. ರಾಸಾಯನಿಕ ಲೇಪನವನ್ನು ಕೊಟ್ಟು ತಯಾರಿಸಿರುವ ಈ ಪ್ಲೇಟಿನ ಮೇಲೆ ವಿಶೇಷವಾದ ಬೆರಳಚ್ಚಿನ (ಟೈಪ್‍ರೈಟಿಂಗ್) ರಿಬ್ಬನ್‍ಗಳು, ಮಸಿಗಳು ಅಥವಾ ಬಳಪಗಳನ್ನು ಉಪಯೋಗಿಸಿ ಬೇಕಾದ ವಿಷಯವನ್ನು ಬರೆಯಬಹುದು. ಅಲ್ಪ ಪ್ರಮಾಣದ ಲೇಖನ ಸಾಮಾಗ್ರಿಗಳನ್ನು ಮುದ್ರಿಸಲು ಇವು ಬಹು ಸೂಕ್ತ. ಬೆಲೆ ಅಗ್ಗ. ಇವನ್ನು ಮುದ್ರಣಕ್ಕೆ ತಯಾರಿಸುವುದೂ ಬಲು ಸುಲಭ. ಅಧಿಕ ಪ್ರಮಾಣದ ಕೆಲಸಗಳಿಗೆ ಪ್ರೀಸೆನ್ಸಿಟೈಸ್ಡ್ ಪ್ಲೇಟುಗಳನ್ನು ಉಪಯೋಗಿಸುವರು. ಅಲ್ಯೂಮಿನಿಯಮ್, ಕಾಗದ ಅಥವಾ ಪ್ಲಾಸ್ಟಿಕ್‍ಗಳ ಮೇಲೆ ಬೆಳಕಿನ ಕಿರಣಗಳಿಗೆ ಪ್ರತಿಕ್ರಿಯೆ ತೋರಿಸುವ ಒಂದು ರಾಸಾಯನಿಕ ವಸ್ತುವನ್ನು ಹಚ್ಚಿ ಇವನ್ನು ತಯಾರಿಸುತ್ತಾರೆ. ಬೇಕಾದ ಬರೆಹ, ಚಿತ್ರ ಇತ್ಯಾದಿ ಬಿಂಬವನ್ನು ಛಾಯಾಗ್ರಾಹಕ ರೀತಿಯಿಂದ ಈ ಪ್ಲೇಟುಗಳಿಗೆ ವರ್ಗಾಯಿಸುತ್ತಾರೆ. (ಎಂ.ಎ.ಎಸ್.)

ಉಲ್ಲೇಖಗಳು