ಅಲ್ಯೂಮಿನಿಯಮ್


13 ಮ್ಯಗ್ನೀಶಿಯಮ್ಅಲ್ಯೂಮಿನಿಯಮ್ಸಿಲಿಕಾನ್
B

Al

Ga
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಅಲ್ಯೂಮಿನಿಯಮ್, Al, 13
ರಾಸಾಯನಿಕ ಸರಣಿpoor metal
ಗುಂಪು, ಆವರ್ತ, ಖಂಡ 13, 3, p
ಸ್ವರೂಪಬೆಳ್ಳಿಯಂತ ಹೊಳಪು
ಅಣುವಿನ ತೂಕ 26.9815386(13) g·mol−1
ಋಣವಿದ್ಯುತ್ಕಣ ಜೋಡಣೆ [Ne] 3s2 3p1
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 3
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)2.70 g·cm−3
ದ್ರವಸಾಂದ್ರತೆ at ಕ.ಬಿ.2.375 g·cm−3
ಕರಗುವ ತಾಪಮಾನ933.47 K
(660.32 °C, 1220.58 °ಎಫ್)
ಕುದಿಯುವ ತಾಪಮಾನ2792 K
(2519 °C, 4566 °F)
ತ್ರಿಗುಣ ಬಿಂದು543253 K,  kPa
ಸಮ್ಮಿಲನದ ಉಷ್ಣಾಂಶ10.71 kJ·mol−1
ಭಾಷ್ಪೀಕರಣ ಉಷ್ಣಾಂಶ294.0 kJ·mol−1
ಉಷ್ಣ ಸಾಮರ್ಥ್ಯ(25 °C) 24.200 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1482 1632 1817 2054 2364 2790
ಅಣುವಿನ ಗುಣಗಳು
ಸ್ಪಟಿಕ ಸ್ವರೂಪface centered cubic
0.40494 nm
ಆಕ್ಸಿಡೀಕರಣ ಸ್ಥಿತಿಗಳು3, 2 [೧], 1 [೨]
(amphoteric oxide)
ವಿದ್ಯುದೃಣತ್ವ1.61 (Pauling scale)
ಅಣುವಿನ ತ್ರಿಜ್ಯ125 pm
ಅಣುವಿನ ತ್ರಿಜ್ಯ (ಲೆಖ್ಕಿತ)118 pm
ತ್ರಿಜ್ಯ ಸಹಾಂಕ118 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆparamagnetic
ವಿದ್ಯುತ್ ರೋಧಶೀಲತೆ(20 °C) 26.50 nΩ·m
ಉಷ್ಣ ವಾಹಕತೆ(300 K) 237 W·m−1·K−1
ಉಷ್ಣ ವ್ಯಾಕೋಚನ(25 °C) 23.1 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) (rolled) 5000 m·s−1
ಯಂಗ್ ಮಾಪಾಂಕ70 GPa
ವಿರೋಧಬಲ ಮಾಪನಾಂಕ26 GPa
ಸಗಟು ಮಾಪನಾಂಕ76 GPa
ವಿಷ ನಿಷ್ಪತ್ತಿ 0.35
ಮೋಸ್ ಗಡಸುತನ2.75
Vickers ಗಡಸುತನ167 MPa
ಬ್ರಿನೆಲ್ ಗಡಸುತನ245 MPa
ಸಿಎಎಸ್ ನೋಂದಾವಣೆ ಸಂಖ್ಯೆ7429-90-5
ಉಲ್ಲೇಖನೆಗಳು

ಅಲ್ಯೂಮಿನಿಯಮ್ ಒಂದು ಮೂಲಧಾತು ಮತ್ತು ಬಹು ಉಪಯೋಗಿ ಲೋಹ. ಇದು ಬಹಳ ಹಗುರವಾದ ಮೂಲವಸ್ತು. ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದನ್ನು ಯಾವುದೇ ಆಕಾರಕ್ಕೆ ಸುಲಭವಾಗಿ ತರಬಹುದು. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉಪಯೋಗವಾಗುವ ಲೋಹಗಳಲ್ಲಿ ಕಬ್ಬಿಣ ಹಾಗೂ ಉಕ್ಕುಗಳ ನಂತರದ ಸ್ಥಾನ ಅಲ್ಯೂಮಿನಿಯಮ್‍ಗೆ ಇದೆ. ಈ ಮೂಲವಸ್ತುವಿನ ಸಂಕೇತ Al.

ಇತಿವೃತ್ತ

  • ಅಮೆರಿಕ ದೇಶದಲ್ಲಿ ಅಲ್ಯೂಮಿನಂ ಎಂದು ಕರೆಯುತ್ತಾರೆ. ಇದರ ಪರಮಾಣು ಸಂಖ್ಯೆ 13. ಪರಮಾಣುತೂಕ 26.9815. ಎಲೆಕ್ಟ್ರಾನ್ ಜೋಡಣೆ 2,8,3 ಅಥವಾ [ಓe] 3S2. 3P1. ಮೂಲವಸ್ತುಗಳ ಆವರ್ತಕೋಷ್ಟಕದಲ್ಲಿ 3ನೆಯ ಗುಂಪಿಗೆ ಸೇರಿರುವ ಮೂಲವಸ್ತು; ಒಂದು ಲೋಹ. ಇದು ಪ್ರಕೃತಿಯಲ್ಲಿ ಹೇರಳವಾಗಿ ದೊರೆಯುವುದು.
  • ಆಧಿಕ್ಯ ಪ್ರಮಾಣದ ಮೂಲವಸ್ತುಗಳ ಪೈಕಿ ಆಕ್ಸಿಜನ್, ಸಿಲಿಕಾನ್ ಆದ ಮೇಲೆ ಮೂರನೆಯದು. ಲೋಹದಲ್ಲಿ ಇದೇ ಮೊದಲನೆಯದು ಅಂದರೆ ಕಬ್ಬಿಣಕ್ಕಿಂತಲೂ ಹೇರಳವಾದುದು. ಭೂಮಿಯ ಮೇಲ್ಮೈನಲ್ಲಿನ ಪದರದಲ್ಲಿ ಸುಮಾರು 8% ಇದೆ. ಭೂಮಿಯ ಮೇಲಿನ ಕಲ್ಲು, ಮಣ್ಣು, ಜೇಡಿಮಣ್ಣುಗಳಲ್ಲೆಲ್ಲಾ ಹೊಕ್ಕಿದೆ. ಆದರೆ ಈ ಲೋಹ ಶುದ್ಧಮೂಲವಸ್ತುವಿನ ರೂಪದಲ್ಲಿ ದೊರೆಯುವುದಿಲ್ಲ.
  • ತನ್ನ ರಾಸಾಯನಿಕ ಚಟುವಟಿಕೆಯಿಂದಾಗಿ, ಅದರಲ್ಲೂ ಆಕ್ಸಿಜನ್ನಿನೊಡನೆ ತೋರುವ ವಿಶೇಷ ಒಲವಿನಿಂದಾಗಿ ಪ್ರಕೃತಿಯಲ್ಲಿ ಅಲ್ಯೂಮಿನಿಯಂ ಆಕ್ಸಿಜನ್ನಿನೊಡನೆ ಸಂಯೋಗ ಹೊಂದಿರುತ್ತದೆ. ಮತ್ತು ಇದೇ ಕಾರಣದಿಂದ ಲೋಹವನ್ನು ಅದುರುಗಳಿಂದ ಬೇರ್ಪಡಿಸುವುದೂ ಕಷ್ಟ. ಅಲ್ಯೂಮಿನಿಯಂ ಅದುರುಗಳಲ್ಲಿ ಮುಖ್ಯವಾದುದು ಬಾಕ್ಸೈಟ್.
  • ರಾಸಾಯನಿಕವಾಗಿ ಬಾಕ್ಸೈಟ್ ಎಂಬುದು ಮುಖ್ಯವಾಗಿ ಅಲ್ಯೂಮಿನಿಯಂ ಆಕ್ಸೈಡ್ (ಂಟ2ಔ3). ಆದರೆ ಅದರಲ್ಲಿ ನೀರಿನ ಅಂಶವೂ ಜೊತೆಗೆ ಕಲ್ಮಷಪ್ರಾಯವಾಗಿ ಕಬ್ಬಿಣ, ಸಿಲಿಕಾನ್ ಮತ್ತು ಟೈಟಾನಿಯಂ ಮತ್ತಿತರ ಲೋಹಗಳ ಆಕ್ಸೈಡ್‍ಗಳೂ ಬೆರೆತಿರುತ್ತವೆ. ಬಾಕ್ಸೈಟ್ ವಿವಿಧ ರಚನಾವಿನ್ಯಾಸ ಮತ್ತು ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುವ ಖನಿಜ.
  • ಕಬ್ಬಿಣದ ಅಂಶ ಕಡಿಮೆ ಇದ್ದರೆ ಬಿಳಿಯ ಅಥವಾ ಮಾಸಿದ ಬಿಳಿಯ ಬಣ್ಣವನ್ನು, ಕಬ್ಬಿಣದ ಅಂಶ ಹೆಚ್ಚಾದರೆ ಬೂದಿ ಅಥವಾ ಕಪ್ಪುಬಣ್ಣವನ್ನು ಹೊಂದಿರುವುದು. ಮೆದುವಾದ ಮುದ್ದೆಯಿಂದ ಹಿಡಿದು ಗಟ್ಟಿಯಾದ ಕಲ್ಲಿನ ಸ್ವರೂಪದವರೆಗೂ ವಿವಿಧ ಗಡಸಿಕೆಯ ಖನಿಜ.
  • ಗ್ರೀನ್‍ಲ್ಯಾಂಡ್‍ದೇಶದಲ್ಲಿ ರಾಸಾಯನಿಕವಾಗಿ ಸೋಡಿಯಂ ಅಲ್ಯೂಮಿನಿಯಂ ಫ್ಲೋರೈಡ್ ಸಂಯುಕ್ತವಾದ (ಓಚಿ3ಂಟಈ6) ಕ್ರಯೊಲೈಟ್ ಎಂಬ ಖನಿಜ ನೋಡುವುದಕ್ಕೆ ಹಿಮಗಡ್ಡೆಯನ್ನು ಹೋಲುವ ಭಾರಿಪ್ರಮಾಣದಲ್ಲಿ ದೊರಕುತ್ತದೆ. ಅಲ್ಯೂಮಿನಿಯಂ ಲೋಹ ಸಸ್ಯ, ಪ್ರಾಣಿವರ್ಗಗಳಲ್ಲೂ ಇರುವುದು ತಿಳಿದಿದೆ.[೧]

ಅಲ್ಯೂಮಿನಿಯಂ ಲೋಹ ತಯಾರಿಕೆ

  • ಅಲ್ಯೂಮಿನಿಯಂ ಲೋಹತಯಾರಿಕೆಯ ಕೈಗಾರಿಕೆಯಲ್ಲಿ ಪ್ರಧಾನವಾಗಿ ಉಪಯೋಗಿಸುವ ಅದುರು ಬಾಕ್ಸೈಟ್. ಸುಮಾರು 4 ಕಿ.ಗ್ರಾಂ ಬಾಕ್ಸೈಟ್ ಅದುರಿನಿಂದ 2 ಕಿ.ಗ್ರಾಂ ಶುದ್ಧ ಅಲ್ಯೂಮಿನಿಯಂ ಆಕ್ಸೈಡ್ ಸಂಯುಕ್ತವೂ ಮುಂದೆ ಅದರಿಂದ 1 ಕಿ.ಗ್ರಾಂ. ಅಲ್ಯೂಮಿನಿಯಂ ಲೋಹವೂ ದೊರೆಯುತ್ತದೆ.
  • ಇದಲ್ಲದೆ ಇತ್ತೀಚೆಗೆ ಜೇಡಿಮಣ್ಣಿನಿಂದ ಅಲ್ಯೂಮಿನಿಯಂ ಲೋಹವನ್ನು ಕೈಗಾರಿಕಾ ಪ್ರಮಾಣದಲ್ಲಿ ಪಡೆಯುವುದಕ್ಕೆ ಯಶಸ್ವಿ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳು ತಾಂತ್ರಿಕವಾಗಿ ಸಾಧ್ಯವಾಗಿ ಕಂಡುಬಂದರೂ ಲೋಹದ ಉತ್ಪಾದನೆವೆಚ್ಚ ಹೆಚ್ಚು.
  • ಉತ್ತಮ ದರ್ಜೆಯ ಬಾಕ್ಸೈಟ್ ನಿಕ್ಷೇಪಗಳು ದೊರಕುವವರೆಗೂ ಜೇಡಿಮಣ್ಣಿನಿಂದ ಕೈಗಾರಿಕಾ ಪ್ರಮಾಣದಲ್ಲಿ ಅಲ್ಯೂಮಿನಿಯಂ ಲೋಹ ತಯಾರಿಸುವುದು ಲಾಭದಾಯಕ ಉದ್ಯಮವಾಗಲಾರದು. ಘನರೂಪದಲ್ಲಿ ವಿಶಿಷ್ಟರಚನೆ ಹೊಂದಿರುವ ಮತ್ತು ಗುಣಸಂಪನ್ನ ಹರಳುಗಳೆಂದು ಪ್ರಸಿದ್ಧಿಯಾಗಿರುವ ಹಸುರು, ಕೆಂಪು, ನೀಲಿ ಹರಳುಗಳೂ ಕೂಡ ರಾಸಾಯನಿಕವಾಗಿ ಅಲ್ಯೂಮಿನಿಯಂ ಆಕ್ಸೈಡ್.
  • ಉತ್ತಮ ಪಾರಕತೆ, ಕಾಂತಿಯುತ ಹೊಳಪು ಮತ್ತು ಗಡುಸಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಲ್ಲದೆ ಬರ್ಮಾ, ಥೈಲ್ಯಾಂಡ್, ಸಿಲೋನ್, ಆಸ್ಟ್ರೇಲಿಯಾ ಮುಂತಾದ ಪೌರಸ್ತ್ಯ ದೇಶಗಳಲ್ಲಿ ಇವು ದೊರೆಯುವುವು. ಅಧಿಕ ಕಬ್ಬಿಣಾಂಶವಿರುವ ಬೂದು ಅಥವಾ ಕಪ್ಪು ಬಣ್ಣದ ಜಾತಿಯ ಅಲ್ಯೂಮಿನಿಯಂ ಆಕ್ಸೈಡ್‍ನ ಹೆಸರು ಕೊರಂಡಂ.
  • ಅದು ವಜ್ರದಷ್ಟೇ ಸುಮಾರು ಗಡಸು. ಅದನ್ನು ಇತರ ಗಡಸುವಸ್ತುಗಳನ್ನು ತೇಯುವ ಅಥವಾ ಸಾಣೆ ಹಿಡಿಯುವ ಕೆಲಸಕ್ಕೆ ಉಪಯೋಗಿಸುತ್ತಾರೆ. ಕಬ್ಬಿಣದ ಆಕ್ಸೈಡ್ ಮಿಶ್ರಿತ ಕೊರಂಡಂ, ಎಮರಿ ಕಲ್ಲು ಎಂಬ ಹೆಸರಿನಿಂದ ಲೋಕಪ್ರಸಿದ್ಧವಾಗಿದೆ. ಇದಲ್ಲದೆ ಪ್ರಕೃತಿಯಲ್ಲಿ ಅಲ್ಯೂಮಿನಿಯಂ, ಸಿಲಿಕೇಟ್ ಮತ್ತು ಸಲ್ಫೇಟ್ ಸಂಯುಕ್ತ ಸ್ವರೂಪದಲ್ಲಿಯೂ ದೊರೆಯುತ್ತದೆ.[೨]

ತಯಾರಿಕೆಯ ವಿಧಾನ

  • ಪ್ರಕೃತಿಮೂಲ ಅಲ್ಯೂಮಿನಿಯಂ ಸಲ್ಫೇಟ್ ಮುಂತಾದ ಸಂಯುಕ್ತಗಳನ್ನು ಕಾಸಿ, ರಾಸಾಯನಿಕ ವಿಭಜನೆ ಹೊಂದುವಂತೆ ಮಾಡಿದರೆ ಅಲ್ಯೂಮಿನಿಯಂ ಆಕ್ಸೈಡ್ ಉತ್ಪತ್ತಿಯಾಗುವುದು. ಉಷ್ಣತೆಯ ಸೂಕ್ತ ನಿಯಂತ್ರಣ ಮತ್ತು ಕಬ್ಬಿಣದ ನಿಯಂತ್ರಿತ ಮಿಶ್ರಣದಿಂದ ಕೃತಕ ಎಮರಿ, ಕೊರಂಡಂ, ಕೆಂಪು ಹರಳುಗಳು ಮುಂತಾದುವನ್ನು ತಯಾರಿಸುವರು.
  • ಅಲ್ಯೂಮಿನಿಯಂ ಲೋಹದ ಪ್ರಥಮ ಬೇರ್ಪಡಿಕೆ ಆದದ್ದು 1825ರಲ್ಲಿ. 1855ರಲ್ಲಿ ಮೊದಲಬಾರಿಗೆ ಮಾರುಕಟ್ಟೆಗೆ (ಪ್ಯಾರಿಸ್) ಬಂದಾಗ ಜನರಿಗೆ ಇದರ ಪರಿಚಯವಾಯಿತು. 1866ರಲ್ಲಿ ಕೈಗಾರಿಕೆಯ ಲೋಹವಾಗಿ ಬಳಸಿದರು.
  • ಪ್ರಕೃತಿಯಲ್ಲಿ ದೊರೆಯುವ ಅಲ್ಯೂಮಿನಿಯಂ ಸಲ್ಫೇಟ್ ಸಂಬಂಧಿತ ವಸ್ತುಗಳನ್ನು ಪುರಾತನ ಕಾಲದಿಂದಲೂ (ಕ್ರಿ. ಪೂ. 5ನೆಯ ಶತಮಾನ) ಗಾಯಗಳಿಂದ ಸೋರುವ ರಕ್ತವನ್ನು ತಡೆಯುವುದಕ್ಕೆ, ಬಟ್ಟೆಗಳಿಗೆ ಬಣ್ಣಕಚ್ಚಿಸುವುದೇ ಮುಂತಾದ ಕೈಗಾರಿಕೆಗಳಲ್ಲಿಯೂ ಉಪಯೋಗಿಸುತ್ತಲಿದ್ದರು. ಆ ಜಾತಿಯ ಕೆಲ ವಸ್ತುಗಳಿಗೆ ಲ್ಯಾಟಿನ್ ಭಾಷೆಯಲ್ಲಿ ಅಲ್ಯೂಮಿನ ಎಂದು ಹೆಸರಿದ್ದು, ಈ ಲೋಹದ ಅಲ್ಯೂಮಿನಿಯಂ ಎಂಬ ಹೆಸರಿಗೆ ಅದೇ ಮೂಲ.

ಲೋಹೋತ್ಪಾದನೆಯಲ್ಲಿ ಅಗ್ರಸ್ಥಾನಗಳಿಸಿರುವ ರಾಷ್ಟ್ರ

  • ಉತ್ತಮ ಬಾಕ್ಸೈಟ್ ನಿಕ್ಷೇಪಗಳನ್ನು ಪಡೆದಿರುವ ಮತ್ತು ಲೋಹೋತ್ಪಾದನೆಯಲ್ಲಿ ಅಗ್ರಸ್ಥಾನಗಳಿಸಿರುವ ರಾಷ್ಟ್ರಗಳೆಂದರೆ ಫ್ರಾನ್ಸ್, ಕೆನಡ, ಅಮೆರಿಕ ಸಂಯುಕ್ತ ಸಂಸ್ಥಾನ, ರಷ್ಯ. ಮೊದ ಮೊದಲು ಬಾಕ್ಸೈಟ್ ನಿಕ್ಷೇಪಗಳೂ ಕೇವಲ ದಕ್ಷಿಣ ಫ್ರಾನ್ಸ್ ಮತ್ತು ಕೆಲ ದಕ್ಷಿಣ ಯೂರೋಪಿನ ರಾಷ್ಟ್ರಗಳಲ್ಲಿ ಮಾತ್ರ ದೊರೆಯಬಲ್ಲವೆಂದು ತಿಳಿಯಲಾಗಿತ್ತು.
  • ಇಂಥ ಸಮಶೀತೋಷ್ಣವಲಯದಲ್ಲಲ್ಲದೆ, ಭೂ ಮಧ್ಯರೇಖೆಯ ಅತ್ತಿತ್ತಿನ ಉಷ್ಣವಲಯದಲ್ಲೂ ಬಾಕ್ಸೈಟ್ ನಿಕ್ಷೇಪಗಳು ಹೇರಳವಾಗಿ ಹುದುಗಿರುವುದು ಈಗ ಖಚಿತವಾಗಿ ತಿಳಿದುಬಂದಿರುವ ವಿಷಯವಾಗಿದೆ. ಈ ಕಾರಣದಿಂದ ಅನೇಕ ಆಫ್ರಿಕನ್ ದೇಶಗಳೂ-ಉದಾಹರಣೆಗೆ, ಕ್ಯಾಮರೂನ್, ಗಿನಿ, ಘಾನ, ಕಾಂಗೋಗಳೂ ಅಲ್ಯೂಮಿನಿಯಂ ಕೈಗಾರಿಕೆಯಲ್ಲಿ ವಿಶಿಷ್ಟ ಸ್ಥಾನಗಳಿಸಿವೆ.
  • ಅಲ್ಲೆಲ್ಲ ಭಾರಿ ಪ್ರಮಾಣದ ಅಲ್ಯೂಮಿನಿಯಂ ಲೋಹೋತ್ಪಾದನೆಯಲ್ಲಿ ಕೈಗಾರಿಕೆಗಳು ನೆಲೆಗೊಂಡಿವೆ. ಆಸ್ಟ್ರೇಲಿಯ ದೇಶದಲ್ಲೂ ಹೇರಳವಾಗಿ ಬಾಕ್ಸೈಟ್ ನಿಕ್ಷೇಪಗಳು ಇವೆ.ಭಾರತದಲ್ಲಿ ಸುಮಾರು 16.5 ಕೋಟಿ ಟನ್‍ಗಳಷ್ಟು ಬಾಕ್ಸೈಟ್ ಅದುರಿನ ನಿಕ್ಷೇಪಗಳಿರುವುದೆಂದು ಅಂದಾಜುಮಾಡಲಾಗಿದೆ.
  • ಅದರಲ್ಲಿ ಉನ್ನತ ದರ್ಜೆಯ ನಿಕ್ಷೇಪಗಳು ಸುಮಾರು 9.4 ಕೋಟಿ ಟನ್‍ಗಳು, ಬಿಹಾರಿನ ರಾಂಚಿ, ಮಧ್ಯಪ್ರದೇಶದ ಜಬ್ಬಲ್ಪುರ-ಕಟ್ನಿ ವಿಭಾಗ, ಮಹಾರಾಷ್ಟ್ರದ ಥಾನ ಜಿಲ್ಲೆ, ಕರ್ನಾಟಕ ರಾಜ್ಯದ ಬೆಳಗಾಂ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ್, ತಮಿಳುನಾಡಿನ (ಮದ್ರಾಸ್) ಸೇಲಂ ವಿಭಾಗ, ಒರಿಸ್ಸಾ, ಗುಜರಾತ್‍ಗಳಲ್ಲಿ ಬಾಕ್ಸೈಟ್ ನಿಕ್ಷೇಪಗಳಿವೆ. ಬಾಕ್ಸೈಟ್ ಅದುರು ಕರ್ನಾಟಕ ರಾಜ್ಯದಲ್ಲಿ ಬಾಬಾಬುಡನ್‍ಗಿರಿ ವಲಯದಲ್ಲಿ ಸ್ವಲ್ಪ ಮಟ್ಟಿಗೂ, ಸಿಲಿಕಾನ್ ಮಿಶ್ರಿತ ರೂಪದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲೂ ಇರುವುದು ತಿಳಿದಿದೆ.

ಬಾಕ್ಸೈಟ್ ನಿಕ್ಷೇಪಗಳ ಪ್ರಯೋಜನ

  • ಭಾರತದಲ್ಲಿ ಪ್ರಥಮವಾಗಿ ಬಾಕ್ಸೈಟ್ ನಿಕ್ಷೇಪಗಳ ಪ್ರಯೋಜನ ಪಡೆಯುವ ಕಾರ್ಯ ಬಿಹಾರದಲ್ಲಿ ಆರಂಭವಾಯಿತು(1948). 1937ಕ್ಕೆ ಮುಂಚೆ ಭಾರತದಲ್ಲಿ ಅಲ್ಯೂಮಿನಿಯಂ ಲೋಹ ತಯಾರಿಕೆ ಇರಲಿಲ್ಲ. ಆ ವರ್ಷದಲ್ಲಿ ಎರಡು ಕಂಪನಿಗಳು ಅಲ್ಯೂಮಿನಿಯಂ ಕೈಗಾರಿಕಾರಂಗಕ್ಕಿಳಿದು ಮೊದಲು ಆಮದು ಮಾಡಿಕೊಂಡು ಅಲ್ಯೂಮಿನಿಯಂ ಮತ್ತು ಬಾಕ್ಸೈಟ್‍ಗಳನ್ನು ಆಧರಿಸಿದ ಕೈಗಾರಿಕೆಗಳನ್ನು ಆರಂಭಿಸಿದುವು. * ಕೇರಳದ ಅಲ್ವೆಯಲ್ಲಿ ಮೊದಲು ಲೋಹ ತಯಾರಿಕಾ ಕುಲುಮೆ ಕಾರ್ಯಾರಂಭಿಸಿತು. ಸ್ವಾತಂತ್ರ್ಯಾನಂತರ ಹಿರಾಕುಡ್ ವಿವಿಧೋದ್ದೇಶ ಜಲಾಶಯದ ವಲಯದಲ್ಲಿ ಪ್ರಥಮ ಭಾರಿ ಪ್ರಮಾಣದ ಅಂದರೆ ಸುಮಾರು 10,000 ಟನ್ ಲೋಹೋತ್ಪಾದನ ಸಾಮರ್ಥ್ಯವುಳ್ಳ ಕೈಗಾರಿಕೆಯೊಂದು ಸ್ಥಾಪಿತವಾಯಿತು.
  • ಅಲ್ಲಿಂದೀಚೆಗೆ ಅಲ್ಯೂಮಿನಿಯಂ ಲೋಹಕ್ಕೆ ಬೇಡಿಕೆ ಹೆಚ್ಚಾಗಿ, ಸರ್ಕಾರ ಮತ್ತು ಸ್ವತಂತ್ರ ಕೈಗಾರಿಕೋದ್ಯಮಿಗಳ ಆಸಕ್ತಿಯ ಫಲವಾಗಿ ಅಲ್ಯೂಮಿನಿಯಂ ಲೋಹೋತ್ಪಾದನೆ ಹೆಚ್ಚುತ್ತಲಿದೆ. ಮೈಸೂರಿನ ಬೆಳಗಾಂ-ಕಾರವಾರ ವಲಯದಲ್ಲೊಂದು ಕಾರ್ಖಾನೆ ಸದ್ಯದಲ್ಲೇ ಅಸ್ತಿತ್ವಕ್ಕೆ ಬರಲಿದೆ.

ಲೋಹ ತಯಾರಿಕೆ

  • ಬಾಕ್ಸೈಟ್ ಅದುರನ್ನು ನೇರವಾಗಿ ಅಪಕರ್ಷಣ ಕ್ರಿಯೆಗೆ (ರಿಡಕ್ಷನ್) ಒಳಪಡಿಸಿದರೆ ಅದುರಿನಲ್ಲಿರುವ ಇತರ ಲೋಹಗಳಾದ ಕಬ್ಬಿಣ, ಟೈಟಾನಿಯಮ್‍ಗಳು ಕೂಡ ಅಲ್ಯೂಮಿನಿಯಮ್‍ಗಿಂತ ಸುಲಭವಾಗಿ ಮೊದಲು ಹೊರಬಿದ್ದು ಅಲ್ಯೂಮಿನಿಯಂ ಲೋಹದೊಡನೆ ಬೆರತು ಅದರ ಗುಣಮಾರಕಗಳಾಗುತ್ತವೆ.
  • ಹಾಗಲ್ಲದೆ ಇಂಗಾಲವನ್ನು ಅಪಕರ್ಷಕಾರಿಯಾಗಿ ಉಪಯೋಗಿಸಿದ್ದೇ ಆದರೆ, ಅದರಿಂದ ಅಲ್ಯೂಮಿನಿಯಂ ಆಕ್ಸೈಡ್ ಅಪಕರ್ಷಣ ಕ್ರಿಯೆಗೊಳಗಾಗಲು ಅವಶ್ಯವಾದ ಉಷ್ಣತೆಯ ಮಟ್ಟ ಜಾಸ್ತಿ (ಸುಮಾರು 20000ಸೆಂ. ಗ್ರೇ.). ಆ ಉಷ್ಣತೆಯ ಮಟ್ಟದಲ್ಲಿ ಬೇರ್ಪಟ್ಟ ಅಲ್ಯೂಮಿನಿಯಂ ಲೋಹ ಕುದಿಯಲು ಆರಂಭಿಸಿ ಆವಿಯಾಗಿ ನಷ್ಟವಾಗುವ ಸಂಭವವಿದೆ.
  • ಜೊತೆಗೆ ಇತರ ಲೋಹಗಳೊಡನೆ ಬೆರೆತು ಮಿಶ್ರ ಲೋಹವೂ ಆಗುವುದು. ಆದಿಯಲ್ಲಿ ಅಲ್ಯೂಮಿನಿಯಂ ಸಂಯುಕ್ತಗಳನ್ನು ಸೋಡಿಯಂ, ಪೊಟ್ಯಾಸಿಯಂಗಳಿಂದ ರಾಸಾಯನಿಕವಾಗಿ ಅಪಕರ್ಷಿಸಿ ಅಲ್ಯೂಮಿನಿಯಂ ಲೋಹವನ್ನು ಬೇರ್ಪಡಿಸುವುದು ಸರ್ವಸಾಮಾನ್ಯವಾಗಿತ್ತು.
  • ಆದರೆ ಈ ವಿಧಾನಗಳಲ್ಲಿ ದೊರಕುವ ಪ್ರಮಾಣ ಅತ್ಯಲ್ಪ ಮತ್ತು ಖರ್ಚು ಜಾಸ್ತಿ. ಆಧುನಿಕ ಕೈಗಾರಿಕಾ ವಿಧಾನ ಅಲ್ಯೂಮಿನಿಯಂ ಆಕ್ಸೈಡ್‍ನ ವಿದ್ಯುದ್ವಿಭಜನೆ. ಈ ವಿಧಾನವನ್ನು ಫ್ರಾನ್ಸ್ ದೇಶದಲ್ಲಿ ಹೀರೋ ಮತ್ತು ಅಮೆರಿಕ ದೇಶದಲ್ಲಿ ಹಾಲ್ ಎಂಬ ವಿಜ್ಞಾನಿಗಳು ಕಂಡುಹಿಡಿದರು (1886).
  • ಇದರಿಂದ ಕೈಗಾರಿಕಾಪ್ರಮಾಣದಲ್ಲಿ ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಬಹು ಆಗಾಧ ಪ್ರಮಾಣದಲ್ಲಿ ಮತ್ತು ಸುಲಭ ವೆಚ್ಚದಲ್ಲಿ ವಿದ್ಯುಚ್ಛಕ್ತಿಯ ಪೂರೈಕೆಯಾಗಬೇಕು. ಈ ಕಾರಣದಿಂದ ಅಲ್ಯೂಮಿನಿಯಂ ಲೋಹದ ಅದುರುಗಳು ಪ್ರಕೃತಿಯಲ್ಲಿ ಹೇರಳವಾಗಿ ದೊರಕುತ್ತಿದ್ದರೂ, ವಿದ್ಯುಚ್ಛಕ್ತಿ ಉತ್ಪಾದನಾರಂಗದಲ್ಲಿ ಪ್ರಗತಿಯಾಗಿ, ಸುಲಭ ವೆಚ್ಚದಲ್ಲಿ ಅಗಾಧಶಕ್ತಿ ಪೂರೈಕೆ ಆಗುವವರೆಗೂ ಅಲ್ಯೂಮಿನಿಯಂ ಲೋಹ ಜನಸಾಮಾನ್ಯರಿಗೆ ಅಗೋಚರವಾಗಿಯೇ ಪ್ರಕೃತಿಯಲ್ಲಿ ಹುದುಗಿಕೊಂಡಿರಬೇಕಾಯಿತು.
  • ಡೈನಮೋ, ಕಲ್ಲಿದ್ದಲು, ಜಲಶಕ್ತಿ ಇತ್ತೀಚೆಗೆ ಪರಮಾಣುಶಕ್ತಿ-ಹೀಗೆ ವಿದ್ಯುಚ್ಛಕ್ತಿ ಮೂಲಗಳು ವೃದ್ಧಿಯಾದಂತೆಲ್ಲ ಅಲ್ಯೂಮಿನಿಯಂ ಲೋಹೋತ್ಪಾದನೆ ಕ್ರಮೇಣ ಏರತೊಡಗಿತು. ಇಂದು ಈ ಲೋಹ ಕಬ್ಬಿಣ ಮತ್ತು ಉಕ್ಕುಗಳೊಡನೆ ಪೈಪೋಟಿ ನಡೆಸುತ್ತ ಜನಸಾಮಾನ್ಯರಿಗೆ ನಿತ್ಯಜೀವನದಲ್ಲಿ ಒಂದು ಅತ್ಯುಪಯುಕ್ತ ಲೋಹವಾಗಿ ಪರಿಣಮಿಸಿದೆ.

ಸಾಧಾರಣ ಲೋಹ

  • ಸಾಮಾನ್ಯವಾಗಿ ಇತರ ಸುಪರಿಚಿತ, ಸಾಧಾರಣ ಲೋಹಗಳೆನ್ನಬಹುದಾದ ಕಬ್ಬಿಣ, ತಾಮ್ರ, ಸೀಸ, ಸತು ಈ ಲೋಹಗಳ ಅದುರನ್ನು ನೇರವಾಗಿ ಅಪಕರ್ಷಣಕ್ರಿಯೆಗೊಳಪಡಿಸಿದರೆ, ಸ್ವಲ್ಪ ಮಟ್ಟಿಗೆ ಅಶುದ್ಧ ಲೋಹಗಳು ಮೊದಲು ಹೊರಬೀಳುವುವು. ಅನಂತರ ಅವುಗಳನ್ನು ಶುದ್ಧೀಕರಣ ಕ್ರಿಯೆಗೊಳಪಡಿಸಿ ಬಲು ಶುದ್ಧ ಲೋಹವನ್ನು ಪಡೆಯುವುದು ವಾಡಿಕೆ.
  • ಆದರೆ ಅಲ್ಯೂಮಿನಿಯಂ ಲೋಹೋತ್ಪಾದನೆಯಲ್ಲಿ ಪ್ರಕೃತಿ ಮೂಲ ಅದುರನ್ನೇ ಆದಷ್ಟು ಶುದ್ಧಿಮಾಡಿ, ಆ ಶುದ್ಧೀಕೃತ ಅದುರಿನಿಂದ ನೇರವಾಗಿ ಶುದ್ಧ ಲೋಹವನ್ನು ಪಡೆಯುವುದೇ ವಿಹಿತ. ಏಕೆಂದರೆ ಅಶುದ್ಧ ಅಲ್ಯೂಮಿನಿಯಂ ಲೋಹದಿಂದ ಅದರಲ್ಲಿ ಬೆರೆತಿರುವ ಗುಣಮಾರಕಗಳಾದ ಇತರ ಲೋಹಗಳನ್ನು ಬೇರ್ಪಡಿಸುವುದು ಅತಿ ಕಷ್ಟಸಾಧ್ಯ ಮತ್ತು ದುಬಾರಿ.
  • ಆದ್ದರಿಂದ ಬಾಕ್ಸೈಟ್ ಅದುರನ್ನು ಮೊದಲು ನೀರಿನಲ್ಲಿ ಜಾಲಾಡಿ ಜೇಡಿಮಣ್ಣು ಮತ್ತು ಇತರ ಹಗುರ ಕಲ್ಮಷಗಳನ್ನು ಆದಷ್ಟು ತೆಗೆಯುವರು. ಅನಂತರ ಅದುರನ್ನು ಬೇಯರನು ಕಂಡುಹಿಡಿದ ವಿಧಾನದಿಂದ ಮೊದಲು ಶುದ್ಧಮಾಡುತ್ತಾರೆ.
  • ಈ ವಿಧಾನದಲ್ಲಿ ಅಶುದ್ಧ ಬಾಕ್ಸೈಟ್ ಅದುರನ್ನು ಮೊದಲು ನಯವಾಗಿ ಪುಡಿಮಾಡಿ, ಅದನ್ನು ಕಾಸ್ಟಿಕ್ಸೋಡಾಕ್ಷಾರ ದ್ರಾವಣದಲ್ಲಿ ಚೆನ್ನಾಗಿ ಬೇಯಿಸಿದರೆ ಅಲ್ಯೂಮಿನಿಯಂ ಲೋಹದ ಆಕ್ಸೈಡ್ ಮಾತ್ರ ಜೀರ್ಣವಾಗಿ ಲೀನವಾಗುತ್ತದೆ. ಕಬ್ಬಿಣ ಟೈಟಾನಿಯಂ ಆಕ್ಸೈಡ್‍ಗಳು ಜೀರ್ಣವಾಗದೆ ಕೆಂಪುಮಣ್ಣಿನಂತೆ ಉಳಿದುಕೊಳ್ಳುತ್ತವೆ.
  • ಆಗ ಶೋಧಿಸಿದರೆ ಶುದ್ಧ ಅಲ್ಯೂಮಿನಿಯಂ ಲೋಹವನ್ನು ಲೀನಮಾಡಿಕೊಂಡಿರುವ ಪರಿಶುದ್ಧ ದ್ರಾವಣವೊಂದು ಪ್ರತ್ಯೇಕವಾಗುತ್ತದೆ. ರಾಸಾಯನಿಕವಾಗಿ ಅದು ಸೋಡಿಯಂ ಅಲ್ಯೂಮಿನೇಟ್. ಅದಕ್ಕೆ ಕೊಂಚ ಘನರೂಪದ ಅಲ್ಯೂಮಿನಿಯಂ ಆಕ್ಸೈಡ್‍ನ್ನು ಬೆರೆಸಿ ದ್ರಾವಣವನ್ನು ಸ್ವಲ್ಪ ಸಮಯ ನಿಲ್ಲಲು ಬಿಟ್ಟರೆ ಅದರಿಂದ ಜಲಮಿಶ್ರಿತ ಅಲ್ಯೂಮಿನಿಯಂ ಆಕ್ಸೈಡ್ ಘನರೂಪದಲ್ಲಿ ಹೊರಬೀಳುವುದು.
  • ಅಥವಾ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಾಯಿಸುವುದರಿಂದಲೂ ಅದೇ ಪರಿಣಾಮ ಸಾಧ್ಯ. ಹೊರಬಿದ್ದ ಘನವಸ್ತುವನ್ನು ಸೋಸಿ ತೆಗೆದು, ಚೆನ್ನಾಗಿ ಕಾಸಿದರೆ ನೀರೆಲ್ಲ ಹೊರಬಿದ್ದು ಶುದ್ಧ ಒಣ ಅಲ್ಯೂಮಿನಿಯಂ ಆಕ್ಸೈಡ್ ಆಗಿ ಮಾರ್ಪಾಟಾಗುತ್ತದೆ.

ತಯಾರಿಕೆ

  • ಇಂಗಾಲದ ಒಳಮೈ ಪದರ ಹೊಂದಿರುವ ಬೀಡುಕಬ್ಬಿಣ ಅಥವಾ ಉಕ್ಕಿನ ಪಾತ್ರೆಯೊಂದರಲ್ಲಿ ಶುದ್ಧೀಕೃತ ಅಲ್ಯೂಮಿನಿಯಂ ಆಕ್ಸೈಡನ್ನು ಕ್ರಯೋಲೈಟ್ ಎಂಬ ಸೋಡಿಯಂ ಅಲ್ಯೂಮಿನಿಯಂ ¥sóÉ್ಲೂೀರೈಡ್ ಸಂಯುಕ್ತದ ದ್ರಾವಣದಲ್ಲಿ ಸುಮಾರು 8000 10000ಸೆಂ. ಗ್ರೇ. ಉಷ್ಣತೆಯ ಮಟ್ಟದಲ್ಲಿ ಲೀನಮಾಡಬೇಕು.
  • ಇಂಗಾಲದ ಪದರವನ್ನು ಋಣವಿದ್ಯುತ್ ಧ್ರುವವನ್ನಾಗಿಯೂ ಇಂಗಾಲದ ಕಂಬಿಗಳನ್ನು ಮೇಲಿಂದ ಇಳಿಬಿಟ್ಟು ಅವುಗಳನ್ನು ಧನವಿದ್ಯುತ್ ಧ್ರುವವನ್ನಾಗಿಯೂ ಮಾಡಿ, ಅವುಗಳನ್ನು ವಿದ್ಯುತ್ ಮೂಲವೊಂದಕ್ಕೆ ಲಗತ್ತಿಸಿ, ವಿದ್ಯುತ್ತನ್ನು ದ್ರಾವಣದ ಮೂಲಕ ಹಾಯಿಸಬೇಕು.
  • ಆಗ ಅಲ್ಯೂಮಿನಿಯಂ ಆಕ್ಸೈಡ್ ವಿಭಜನೆ ಹೊಂದಿ ಶುದ್ಧ ಅಲ್ಯೂಮಿನಿಯಂ ಲೋಹ ಋಣಧ್ರುವವಲಯದಲ್ಲಿಯೂ, ಆಕ್ಸಿಜನ್ ಧನಧ್ರುವವಲಯದಲ್ಲಿಯೂ ಹೊರಬೀಳುವುವು. ಆಕ್ಸಿಜನ್ ಹೊರಬೀಳುವಾಗ ಧನಧ್ರುವಗಳಾದ ಇಂಗಾಲದ ಕಂಬಗಳು ಉರಿದುರಿದು ನಶಿಸುತ್ತಲಿರುತ್ತವೆ. ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು.
  • ಅಲ್ಯೂಮಿನಿಯಂ ಲೋಹ ವಿದ್ಯುತ್ ಕೋಶದ ತಳದಲ್ಲಿ ದ್ರವರೂಪದಲ್ಲಿ ಶೇಖರವಾಗುತ್ತದೆ. ಆಗಾಗ್ಗೆ ಶೇಖರಿತಲೋಹವನ್ನು ಹೊರಗೆಳೆದು ಗಟ್ಟಿಗಳ ರೂಪಕ್ಕೆ ಎರಕ ಹೊಯ್ಯುವರು.ವಿದ್ಯುತ್‍ಕೋಶದ ತಳದಲ್ಲಿ ಶೇಖರಿತವಾಗುವ ಅಲ್ಯೂಮಿನಿಯಂ ಲೋಹದ ದ್ರವವನ್ನು ನಿರ್ವಾತದಲ್ಲಿ ಕೊಳವೆಗಳ ಮೂಲಕ ಹೊರತೆಗೆಯುವ ಆಧುನಿಕ ಕ್ರಮವೊಂದು ಬಳಕೆಗೆ ಬಂದಿದೆ.
  • ಎರಕಗಳನ್ನು ಕಾಸಿ ದ್ರವೀಕರಿಸಿ ಪುನಃ ಘನೀಕರಣ ಮಾಡುವುದರ ಮೂಲಕ ಶುದ್ಧ ಅಲ್ಯೂಮಿನಿಯಂ ಲೋಹವನ್ನು ಪಡೆಯಬಹುದು. ಅಥವಾ ಎರಕಗಳನ್ನು ಪುನಃ ವಿದ್ಯುದ್ವಿಭಜನೆಗೊಳಪಡಿಸಿಯೂ ಶುದ್ಧ ಅಲ್ಯೂಮಿನಿಯಂ ಲೋಹವನ್ನು ಪಡೆಯಬಹುದು.
  • ಅಲ್ಯೂಮಿನಿಯಂ ಲೋಹದ ಉಪಯುಕ್ತ ಗುಣಗಳ ಪೂರ್ಣವಿಕಾಸಕ್ಕೆ ಅದರಲ್ಲೂ ಅದರ ವಿದ್ಯುದ್ವಾಹಕತೆಯ ಪೂರ್ಣಲಾಭ ಪಡೆಯುವುದಕ್ಕೆ ಅದರ ಪರಿಪೂರ್ಣ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯುದ್ವಿಭಜನಾಕ್ರಮದಿಂದ ಹೊರಬರುವ ಅಲ್ಯೂಮಿನಿಯಂ ಲೋಹದ ಶುದ್ಧತೆ 99%-99.6%ರವರೆಗೂ ಇರುವುದು.
  • ಮರು ಶುದ್ಧೀಕರಣಕ್ಕೊಳಪಡಿಸಿ 99.99%ವರೆಗೂ ಶುದ್ಧವಾದ ಲೋಹವನ್ನು ಪಡೆಯುವುದು ಸಾಧ್ಯ. ಹಾಗಾಗಿ ಕಲ್ಮಷಗಳ ಪ್ರಮಾಣ ಬಹಳ ಕನಿಷ್ಠ ಮಿತಿಯಲ್ಲಿರುವುದು. ಆ ಅಲ್ಪಪ್ರಮಾಣದಲ್ಲಿ ಕಲ್ಮಷಗಳ ನಿರ್ದಿಷ್ಟಾಂಶವನ್ನು ನಿಖರವಾಗಿ ತಿಳಿಯುವುದು ಅವಶ್ಯ. ಈ ಕನಿಷ್ಠ ಮಿತಿಯಲ್ಲಿ ಸಾಧಾರಣ ರಾಸಾಯನಿಕ ವಿಶ್ಲೇಷಣಾ ವಿಧಾನಗಳು ನಿಷ್ಕ್ರಿಯವಾಗುವುವು.
  • ಆದ್ದರಿಂದ ಕೆಲ ವಿಶೇಷ ಸೂಕ್ಷ್ಮ ವಿಶ್ಲೇಷಣಾ ವಿಧಾನಗಳನ್ನು ಅನುಸರಿಸಬೇಕಾಗುವುದು. ಇವುಗಳಲ್ಲಿ ಒಂದು ಮುಖ್ಯವಾದುದು, ಲೋಹದ ವಿದ್ಯುನ್ನಿರೋಧಶಕ್ತಿ ಯನ್ನು ಬಹುತಗ್ಗಿದ ಉಷ್ಣತೆಯ ಮಟ್ಟದಲ್ಲಿ ಅಂದರೆ ದ್ರವರೂಪದ ಹೀಲಿಯಂನ ಉಷ್ಣತೆಯ ಮಟ್ಟದಲ್ಲಿ ಅಂದರೆ ಸುಮಾರು 272 ಸೆಂ. ಗ್ರೇ. ಅಳೆಯುವುದು. ಕಲ್ಮಷ ಪ್ರಮಾಣ ಅಂದರೆ ಅಶುದ್ಧತೆ ಹೆಚ್ಚಿದಂತೆಲ್ಲ ವಿದ್ಯುನ್ನಿರೋಧಶಕ್ತಿಯೂ ಹೆಚ್ಚುವುದು. ಎರಡನೆಯದಾಗಿ ವಿಕಿರಣಶೀಲ ಆಧಾರಿತ ರಾಸಾಯನಿಕ ವಿಧಾನಗಳಿಂದಲೂ (ರೇಡಿಯೋ ಕೆಮಿಕಲ್ ಮೆಥಡ್ಸ್) ಕನಿಷ್ಠ ಮಿತಿಯ ಕಲ್ಮಷಗಳ ಪ್ರಮಾಣವನ್ನು ಅಳೆಯುವುದು ಸಾಧ್ಯ.

ಅಲ್ಯೂಮಿನಿಯಂ ಆಕ್ಸೈಡ್

  • ಸಾಧಾರಣ ದರ್ಜೆಯ ಜೇಡಿಮಣ್ಣಿನಲ್ಲಿ 10%-20%ರಷ್ಟು ಮಾತ್ರ ಅಲ್ಯೂಮಿನಿಯಂ ಆಕ್ಸೈಡ್ ಇರುತ್ತದೆ. ಅಲ್ಯೂಮಿನಿಯಂ ಆಕ್ಸೈಡ್ ಅಂಶ 30%-40% ಮಟ್ಟಕ್ಕೇರಿದಾಗ ಜೇಡಿಮಣ್ಣಿನ ಪ್ರಾಧಾನ್ಯ ಹೆಚ್ಚುತ್ತದೆ. ಅದನ್ನು ಪಿಂಗಾಣಿ ಕೈಗಾರಿಕೆ, ಉಷ್ಣ ಸಹಿಷ್ಣು ಇಟ್ಟಿಗೆಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
  • ಕಬ್ಬಿಣದ ಆಕ್ಸೈಡ್ ಮತ್ತು ಸಿಲಿಕಾನ್ ಡೈ ಆಕ್ಸೈಡ್ ಅಂಶ ಬಾಕ್ಸೈಟ್ ಅದುರಿನಲ್ಲಿ ಹೆಚ್ಚಾದರೆ ಬೇಯರ್‍ನ ಶುದ್ಧೀಕರಣ ವಿಧಾನದಲ್ಲಿ ಬಹುಪಾಲು ಸೋಡಾಕ್ಷಾರ ಸಿಲಿಕಾನ್ ಆಕ್ಸೈಡ್‍ನ ಜೊತೆ ಕ್ರಿಯೆಹೊಂದಿ ವೃಥಾ ನಷ್ಟವಾಗುವುದು. ಸಿಲಿಕೇಟ್ ಅಂಶ ಹೆಚ್ಚಾಗಿರುವ ಬಾಕ್ಸೈಟ್ ಅದುರುಗಳನ್ನು ಬೇಯರ್‍ನ ಶುದ್ಧೀಕರಣವಿಧಾನಕ್ಕೊಳಪಡಿಸಿದಾಗ, ಅವಶೇಷವಾಗಿ ಉಳಿಯುವ ಕೆಂಪುಮಣ್ಣಿನಿಂದ ಅದರಲ್ಲಿ ಅಲ್ಯೂಮಿನಿಯಂ ಅಂಶವನ್ನು ಸುಣ್ಣಕಲ್ಲು-ಸೋಡಿಯಂ ಕಾರ್ಬೋನೇಟ್ ಜೊತೆ ಕಾಸುವುದರ ಮೂಲಕ ಸೋಡಿಯಂ ಅಲ್ಯೂಮಿನೇಟ್ ಆಗಿ ಪರಿವರ್ತಿಸಬಹುದು.
  • ಅನಂತರ ಅದನ್ನು ನೀರಿನಲ್ಲಿ ಸುಲಭವಾಗಿ ಕರಗಿಸಿಕೊಳ್ಳಬಹುದು. ಕಬ್ಬಿಣದ ಅಥವಾ ಜೇಡಿಮಣ್ಣಿನ ಅಂಶ ಬಾಕ್ಸೈಟಿನಲ್ಲಿ ಹೆಚ್ಚಾದಷ್ಟೂ ಅಂದರೆ, ಅಲ್ಯೂಮಿನಿಯಂ ಲೋಹಾಂಶ ಕಡಿಮೆಯಾದಷ್ಟೂ, ಅದುರುಗಳ ದರ್ಜೆ ಕಡಿಮೆಯಾಗಿ, ಅವುಗಳನ್ನು ಸಾಗಿಸುವ ಮತ್ತು ಶುದ್ಧೀಕರಿಸುವ ಕಾರ್ಯಕ್ಕೆ ಖರ್ಚು ಹೆಚ್ಚಾಗುವುದು, ಅಂಥ ಕನಿಷ್ಠ ಬಾಕ್ಸೈಟ್ ಅದುರುಗಳ ಉಪಯೋಗವನ್ನು ಸುಣ್ಣ-ಸೋಡಿಯಂ ಕಾರ್ಬೋನೇಟ್ ಜೊತೆ ಕರಗಿಸಿ ಮುದ್ದೆಯಾಗುವಂತೆ ಕಾಸುವುದರ ಮೂಲಕ ನ್ಯಾಯಬೆಲೆಯಲ್ಲಿ ಪಡೆಯಲು ಸಾಧ್ಯ.

ಅಲ್ಯೂಮಿನೇಟ್

  • ಅಲ್ಯೂಮಿನಿಯಂ ಆಕ್ಸೈಡ್ ಸೋಡಿಯಂ ಅಲ್ಯೂಮಿನೇಟ್ ಆಗಿ ಪರಿವರ್ತನೆ ಹೊಂದಿ, ನೀರಿನಲ್ಲಿ ವಿಲೀನವಾಗುವ ಲಕ್ಷಣ ಸಂಪನ್ನವಾಗಿ, ಅದನ್ನು ಹೊರತೆಗೆಯಲು ಸಾಧ್ಯವಾಗುತ್ತದೆ. ಕ್ಯಾಲ್ಸಿಯಂ, ಸಿಲಿಕೇಟ್ ನೀರಿನಲ್ಲಿ ಲೀನವಾಗದೆ ಹಿಂದುಳಿಯುತ್ತದೆ. ಅದನ್ನು ಕಾಸಿ ಸಿಮೆಂಟ್ ತಯಾರಿಕೆಯಲ್ಲಿ ಉಪಯೋಗಿಸುವರು.
  • ಬದಲಾಗಿ ಕಬ್ಬಿಣಾಂಶ ಹೆಚ್ಚಾಗಿರುವ ಬಾಕ್ಸೈಟ್ ಅದುರನ್ನು ರಾಸಾಯನಿಕವಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಆದ ಸುಣ್ಣಕಲ್ಲಿನೊಡನೆ ಮೊದಲು ಕಾಸಿದರೆ ಕ್ಯಾಲ್ಸಿಯಂ ಅಲ್ಯೂಮಿನೇಟ್ ಮತ್ತು ಕಬ್ಬಿಣ ಬೇರೆ ಆಗುತ್ತವೆ. ಈಗ ಬಿಸಿ ಸೋಡಿಯಂ ಕಾರ್ಬೊನೇಟ್ ದ್ರಾವಣದಿಂದ ತೊಳೆದರೆ, ಕ್ಯಾಲ್ಸಿಯಂ ಅಲ್ಯೂಮಿನೇಟ್, ಸೋಡಿಯಂ ಅಲ್ಯೂಮಿನೇಟ್ ಆಗಿ ಪರಿವರ್ತನೆ ಹೊಂದಿ ನೀರಿನ ಜೊತೆ ಲೀನವಾಗಿ ಪ್ರತ್ಯೇಕವಾಗುತ್ತದೆ. ಈ ವಿಧಾನವನ್ನು ರಷ್ಯದೇಶದಲ್ಲಿ ಬಳಸುವುದಾಗಿ ವರದಿಯಾಗಿದೆ.
  • ವಿದ್ಯುತ್ ವಿಭಜನಾಕ್ರಮದಿಂದ ಅಲ್ಯೂಮಿನಿಯಂ ಲೋಹವನ್ನು ಪಡೆಯುವ ಕೈಗಾರಿಕೆಯಲ್ಲಿ ಬೇಯರ್‍ನ ಬಾಕ್ಸೈಟ್ ಶುದ್ಧೀಕರಣ ವಿಧಾನಕ್ಕೂ ಮತ್ತು ವಿದ್ಯುಚ್ಛಕ್ತಿ ಪೂರೈಕೆಗೂ ಬಹಳ ಬಂಡವಾಳಬೇಕು. ಆದ್ದರಿಂದ ಕಡಿಮೆ ಬಂಡವಾಳ ಸಾಕಾಗುವ ರಾಸಾಯನಿಕ ಅಪಕರ್ಷಣ ವಿಧಾನಗಳನ್ನೂ, ಆಗ ಬೇರ್ಪಡುವ ಅಲ್ಯೂಮಿನಿಯಂ ಲೋಹವನ್ನು ಭಟ್ಟಿ ಇಳಿಸುವುದರ ಮೂಲಕ ಹೊರತೆಗೆಯುವ ಕ್ರಮವನ್ನೂ ಕೈಗಾರಿಕಾ ಮಟ್ಟದಲ್ಲಿ ಉಪಯೋಗಿಸುವ ಸಾಧ್ಯತೆಯ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇವೆ.

ಗುಣಗಳು

  • ಬೆಳ್ಳಿಯ ಹೊಳಪಿನ, ಹಗುರತೆಗೆ ಪ್ರಸಿದ್ಧವಾದ ಲೋಹ. ಸಾಂದ್ರತೆ 2.708 ಗ್ರಾಂ. ಮಿ. ಲೀಟರ್. ಬಲು ಶುದ್ಧಲೋಹ. ಮೆದು ಮತ್ತು ದುರ್ಬಲವಾದುದಾದರೆ ಅಲ್ಪ ಪ್ರಮಾಣದಲ್ಲಿ ಇತರ ಲೋಹಗಳು ಮಿಶ್ರವಾದರೆ ಉತ್ತಮಗಡುಸು ಲೋಹವಾಗುತ್ತದೆ. ತೆಳ್ಳಗೆ ತಗಡಾಗಿ ಬಡಿಯಬಹುದು. ಸಣ್ಣ ವ್ಯಾಸದ ತಂತಿಯಾಗಿ ಎಳೆಯಲೂಬಹುದು. ಕಾಸಿದರೆ 6600ಸೆಂ. ಗ್ರೇ. ಉಷ್ಣತೆಯಲ್ಲಿ ದ್ರವವಾಗುವುದು.
  • ಆದರೆ ಕುದಿಯಲು 24500ಸೆಂ. ಗ್ರೇ. ಉಷ್ಣತೆಯ ಮಟ್ಟ ಬೇಕು. ಒಂದು ಅತ್ಯುತ್ತಮ ಉಷ್ಣವಾಹಕ ಮತ್ತು ವಿದ್ಯುದ್ವಾಹಕ ಲೋಹ. ಸಾಮಾನ್ಯ ವಾತಾವರಣದಲ್ಲಿ ಉತ್ತಮ ತುಕ್ಕು ನಿರೋಧಕ ಲಕ್ಷಣಕಾರಿ. ನಯವಾದ ಪುಡಿಯ ರೂಪದಲ್ಲಿ ಅಲ್ಯೂಮಿನಿಯಂ ಲೋಹ ಆಮ್ಲಜನಕ ಅಥವಾ ಗಾಳಿಯಲ್ಲಿ ಗಣನೀಯ ಪ್ರಮಾಣದಲ್ಲಿ ಉಷ್ಣ ಸೂಸುತ್ತ ಜಾಜ್ಜ್ವಲ್ಯಮಾನವಾಗಿ ಉರಿಯಬಲ್ಲದು.
  • ಈ ಗುಣವನ್ನು ಕ್ರೋಮಿಯಂ ಮುಂತಾದ ಲೋಹಗಳನ್ನು ಅವುಗಳ ಆಮ್ಲಜನಕ ಸಂಯುಕ್ತಗಳಾದ ಆಕ್ಸೈಡ್‍ಗಳಿಂದ ಬೇರ್ಪಡಿಸಲು ಬಳಸುವ ಒಂದು ವಿಶಿಷ್ಟ ಪದ್ಧತಿಯಲ್ಲಿ ಥರ್ಮೈಟ್ ವಿಧಾನದಲ್ಲಿ ಉಪಯೋಗಿಸಿಕೊಳ್ಳುವರು. ಶುದ್ಧ ಘನ ಲೋಹ ಗಾಳಿಯಲ್ಲಿನ ಆಕ್ಸಿಜನ್ನಿನೊಡನೆ ಬೇಗ ಸಂಯೋಗ ಹೊಂದುವುದಾದರೂ ಪರಿಣಾಮವಾಗಿ ಲೋಹದ ಮೇಲ್ಮೈ ಮಾತ್ರ ಆಕ್ಸೈಡ್ ಪೊರೆಯ ರಕ್ಷಣಾಕವಚದಿಂದ ಆವೃತವಾಗಿ, ಒಳಮೈ ಯಾವ ರಾಸಾಯನಿಕ ಕ್ರಿಯೆಗೂ ಸಿಕ್ಕದಂತಾಗುತ್ತದೆ.
  • ಆದ್ದರಿಂದಲೇ ಅಲ್ಯೂಮಿನಿಯಂ ಲೋಹ ಉತ್ತಮ ತುಕ್ಕು ಅಥವಾ ಕಿಲುಬು ನಿರೋಧಕ ಲೋಹವಾಗಿ ವರ್ತಿಸುತ್ತದೆ. ಅಲ್ಯೂಮಿನಿಯಂ ಲೋಹಕ್ಕೆ ಬಣ್ಣ ಹಚ್ಚುವುದು ಅಥವಾ ಬೇರೊಂದು ಲೋಹ ಲೇಪನ ಮಾಡುವುದು ಅಥವಾ ಲೋಹವನ್ನು ಉದ್ದೇಶವಾಗಿ ವಿದ್ಯುತ್ ಉತ್ಕರ್ಷಣಕ್ಕೆ (ಆಕ್ಸಿಡೇಷನ್) ಒಳಪಡಿಸುವುದು-
  • ಹೀಗೆ ಅನೇಕ ವಿಧಗಳಿಂದ ಅಲ್ಯೂಮಿನಿಯಂ ಲೋಹವನ್ನು ತುಕ್ಕಿನಿಂದ ಮತ್ತಷ್ಟು ಕಾಪಾಡಬಹುದು. ಅಲ್ಯೂಮಿನಿಯಂ ಮೂಲವಸ್ತುವಿನ ಸಂಯೋಗಶಕ್ತಿ +3. ಅದರಿಂದಲೇ ಅದರ ಲವಣಗಳಿಗೆ ಸಾಮಾನ್ಯ ಸೂತ್ರ ಂಟಘಿ3. ಇದರಲ್ಲಿ ಘಿ ಎಂಬುದು ಅಲ್ಯೂಮಿನಿಯಂನೊಡನೆ ಸಂಯೋಗ ಹೊಂದಿರುವ ಅಲೋಹ.
  • ಅಸಿಟಿಕ್ ಆಮ್ಲ, ನೈಟ್ರಿಕ್ ಆಮ್ಲಗಳು ಅಲ್ಯೂಮಿನಿಯಂ ಲೋಹದ ಮೇಲೆ ನಿಷ್ಕ್ರಿಯ ಆಮ್ಲಗಳು. ಆದರೆ ಹೈಡ್ರೊಫ್ಲೋರಿಕ್ ಆಮ್ಲ, ಹೈಡ್ರೊಕ್ಲೋರಿಕ್ ಆಮ್ಲ, ಸಲ್ಫ್ಯೂರಿಕ್ ಆಮ್ಲಗಳಲ್ಲಿ ಲೋಹ ಕ್ರಿಯೆಗೊಳಗಾಗುವುದು. ಪ್ರಬಲಕ್ಷಾರ ದ್ರಾವಣಗಳು ಅಲ್ಯೂಮಿನಿಯಂ ಆಕ್ಸೈಡ್ ಹೊರಪೊರೆಯನ್ನು ಜೀರ್ಣಮಾಡಿಕೊಂಡು ಲೋಹವನ್ನು ಕ್ರಮೇಣ ತಿಂದುಹಾಕುತ್ತವೆ.
  • ಉಪ್ಪಿನ ನೀರಿನಲ್ಲಿ ಅಲ್ಯೂಮಿನಿಯಂ ಲೋಹ ರಾಸಾಯನಿಕ ಕ್ರಿಯೆಗೊಳಗಾಗುವುದು. ಆದರೆ ಬಲು ಶುದ್ಧ ಅಲ್ಯೂಮಿನಿಯಂ ಲೋಹ ಅಥವಾ ಅಲ್ಯೂಮಿನಿಯಂ ಮೆಗ್ನೀಸಿಯಂ ಮಿಶ್ರಲೋಹ ಸಮುದ್ರದ ನೀರಿನಲ್ಲಿ ಅನೇಕ ವರ್ಷಗಳ ಕಾಲ ತುಕ್ಕು ಹಿಡಿಯುವುದಿಲ್ಲ.
  • ಅಂದರೆ ಅಲ್ಯೂಮಿನಿಯಂ ಲೋಹದ ರಾಸಾಯನಿಕ ಚಟುವಟಿಕೆ ಬಲುಮಟ್ಟಿಗೆ ಅದರ ಶುದ್ಧತೆ, ಅದರೊಡನೆ ಬೆರೆತಿರುವ ಪ್ರಕೃತಿ ಮತ್ತು ಪ್ರಮಾಣವನ್ನವಲಂಬಿಸಿದೆ. ಅಲ್ಯೂಮಿನಿಯಂ ಆಕ್ಸೈಡ್ ಪ್ರಬಲ ಆಮ್ಲ ಮತ್ತು ಕ್ಷಾರಗಳೆರಡರಲ್ಲೂ ಲೀನವಾಗುವ ಲಕ್ಷಣ ಹೊಂದಿದೆ. ಪಾದರಸ ಅಥವಾ ಅದರ ಸಂಯುಕ್ತಗಳ ಸಂಪರ್ಕದಲ್ಲಿಯೂ ಅಲ್ಯೂಮಿನಿಯಂ ರಾಸಾಯನಿಕ ಕ್ರಿಯೆಗೊಳಗಾಗುವುದು.
  • ಅಲ್ಯೂಮಿನಿಯಂ ಲೋಹ ಇಂಗಾಲ, ಸಾರಜನಕ, ಗಂಧಕ, ರಂಜಕಗಳೇ ಮುಂತಾದ ಅನೇಕ ಅಲೋಹಗಳೊಂದಿಗೆ ಸಂಯೋಗ ಹೊಂದಬಲ್ಲುದು. ಅಲ್ಯೂಮಿನಿಯಂ ಲೋಹ ಅಥವಾ ಅದರ ಆಮ್ಲಜನಕ ಸಂಯುಕ್ತಗಳು ಮಾನವ ಶರೀರದೊಳಕ್ಕೆ ಹೊಕ್ಕಲ್ಲಿ ಯಾವ ದುಷ್ಪರಿಣಾಮವೂ ಆಗುವುದಿಲ್ಲ.
  • ಬದಲಾಗಿ ಅತಿಯಾಗಿ ದೂಳನ್ನು ಸೇವನೆ ಮಾಡಬೇಕಾದ ಸಂದರ್ಭಗಳಲ್ಲಿ ಆಗಬಹುದಾದ ಶರೀರದ ಆಂತರಿಕ ದುಷ್ಪರಿಣಾಮಗಳನ್ನು ತಡೆಗಟ್ಟುವ ಶಕ್ತಿ ಹೊಂದಿದೆ. ಜಠರದ ವ್ರಣರೋಗವನ್ನು ಗುಣಪಡಿಸಲು ಪರಿಣಾಮಕಾರಿಯಾದುದು ಅಲ್ಯೂಮಿನಿಯಂ ಹೈಡ್ರಾಕ್ಸೈಡ್. ಆದುದರಿಂದಲೇ ಅಲ್ಯೂಮಿನಿಯಂ ಪಾತ್ರೆಗಳಲ್ಲಿನ ಅಡುಗೆ ಯಾವ ರೀತಿಯಲ್ಲೂ ಅಹಿತವಲ್ಲ.

ಅಲ್ಯೂಮಿನಿಯಂ ಸಂಯುಕ್ತ

  • ಅಲ್ಯೂಮಿನಿಯಂ ಸಂಯುಕ್ತಗಳಲ್ಲಿ ಮುಖ್ಯವಾದುವು ಅಲ್ಯೂಮಿನಿಯಂ ಆಕ್ಸೈಡ್ ಮತ್ತು ಅಲ್ಯೂಮಿನಿಯಂ ಸಲ್ಫೇಟ್ ಸಂಬಂಧಿತ ಪಟಿಕ ಜಾತಿಯ ಲವಣಗಳು. ಇವುಗಳ ಪ್ರಾಮುಖ್ಯ ಮತ್ತು ಗುಣಗಳನ್ನು ಈಗಾಗಲೇ ವಿವರಿಸಲಾಗಿದೆ. ಅಲ್ಯೂಮಿನಿಯಂ ಪಟಿಕಗಳಿಗೆ ಒ' ಒ (Sಔ4)2.12 ಊ2ಔ ಎಂಬ ಸೂತ್ರ ಅನ್ವಯಿಸುತ್ತದೆ. ಇದರಲ್ಲಿ ಒ' ಎಂಬುದು ಸೋಡಿಯಂ, ಪೊಟ್ಯಾಸಿಯಂ, ಅಮೋನಿಯಂ ಆಗಲಿ, ಒ ಎಂಬುದು ಕಬ್ಬಿಣ, ಅಲ್ಯೂಮಿನಿಯಂ, ಕ್ರೋಮಿಯಂ ಆಗಲಿ ಅಲ್ಯೂಮಿನಿಯಂ ಸಂಯುಕ್ತಗಳನ್ನೆಲ್ಲ ಅಲ್ಯೂಮಿನಿಯಂ ಅಥವಾ ಅಲ್ಯೂಮಿನಿಯಂ ಆಕ್ಸೈಡ್ ಮೂಲದಿಂದ ತಯಾರಿಸಬಹುದು.
  • ಅಲ್ಯೂಮಿನಿಯಂ ಮಿಶ್ರಲೋಹಗಳು : ಅಲ್ಯೂಮಿನಿಯಂನೊಡನೆ ಇತರ ಲೋಹಗಳನ್ನು ಮಿಶ್ರಮಾಡುವ ಮುಖ್ಯೋದ್ದೇಶ ಅಲ್ಯೂಮಿನಿಯಂ ಲೋಹದ ಉಪಯುಕ್ತ ಗುಣಗಳನ್ನು ಮತ್ತಷ್ಟು ವೃದ್ಧಿಪಡಿಸುವುದು. ಸಾಮಾನ್ಯವಾಗಿ ಪೇಟೆಯಲ್ಲಿ ದೊರಕುವ ಅಲ್ಯೂಮಿನಿಯಂ ಲೋಹ 99%-99.6% ರಷ್ಟು ಮಾತ್ರ ಶುದ್ಧ. ಅಲ್ಪಪ್ರಮಾಣದಲ್ಲಿ ಕಬ್ಬಿಣ, ಸಿಲಿಕಾನ್‍ಗಳು ಇದ್ದೇ ಇರುತ್ತವೆ.
  • ಅವು ಇರುವುದು ಅಲ್ಯೂಮಿನಿಯಂಗೆ ಶಕ್ತಿದಾಯಕ. ಆದರೆ ತುಕ್ಕು ಹಿಡಿಯುವ ಪ್ರವೃತ್ತಿಗೆ ಉತ್ತೇಜನಕಾರಿ. ಅಲ್ಯೂಮಿನಿಯಂ ಮಿಶ್ರಲೋಹ ಉತ್ಪಾದನೆಯಲ್ಲಿ ಬಳಸುವ ಇತರ ಲೋಹಗಳೆಂದರೆ ಮುಖ್ಯವಾಗಿ ತಾಮ್ರ , ಮೆಗ್ನೀಸಿಯಂ, ಸತು, ನಿಕ್ಕಲ್ ಮತ್ತು ಮ್ಯಾಂಗನೀಸ್. ಇನ್ನೂ ಅನೇಕ ಇತರ ಲೋಹಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಬೆರೆಸುವುದೂ ಉಂಟು. ಡೂರಲ್ಯೂಮಿನ್, ಮೆಗ್ನೀಸಿಲಿಯಂ ಇವು ಕೆಲವು ಜನಪ್ರಿಯ ಮಿಶ್ರಲೋಹಗಳು.

ಉಪಯೋಗಗಳು :

  • ಬಲು ಹಗುರವಾದ ಮತ್ತು ಇತರ ಸೂಕ್ಷ್ಮ ಲೋಹಗಳ ನಿಯಂತ್ರಿತ ಮಿಶ್ರಣದಿಂದ ವೃದ್ಧಿತ ಗಡಸು ಪಡೆಯುವ ಅಲ್ಯೂಮಿನಿಯಂ ಲೋಹದ ಅತಿ ಮುಖ್ಯ ಉಪಯೋಗ ವಿಮಾನ, ರೈಲು, ಲಾರಿ ಮತ್ತಿತರ ಪ್ರಯಾಣಿಕರ ವಾಹನಗಳಲ್ಲಿ; ಹಡಗುಗಳು, ಗೃಹನಿರ್ಮಾಣಕ್ಕೆ ಕಿಟಕಿ, ಬಾಗಿಲು, ಮೇಲ್ಚಾವಣಿಗಳೇ ಮುಂತಾದ ರಚನಾಕಾರ್ಯಗಳಲ್ಲಿ, ಇದರಿಂದ ವಾಹನಗಳ ತೂಕ ಕಡಿಮೆಯಾಗಿ, ವಾಹನಗಳ ಎಂಜಿನ್‍ಗಳು ಇನ್ನೂ ಹೆಚ್ಚಿನ ಭಾರದ ಸಾಮಗ್ರಿಗಳನ್ನು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಎಳೆಯುವ ಸಾಮರ್ಥ್ಯ ಹೊಂದುತ್ತವೆ.
  • ರಚನಾ ಹಂತದಲ್ಲಿಯಾಗಲೀ ಅಥವಾ ರಿಪೇರಿ ಮಾಡಬೇಕಾದ ಸಂದರ್ಭಗಳಲ್ಲಿಯಾಗಲಿ ಅಲ್ಯೂಮಿನಿಯಂ ಲೋಹವನ್ನು ವೆಲ್ಡ್ ಮಾಡಬಹುದು, ರಿವೆಟ್ ಮಾಡಬಹುದು, ಅಂಟಿಸಬಹುದು. ಆದರೆ ಬೆಸುಗೆ ಸರಿಯಾಗಿ ಹಿಡಿಯುವುದಿಲ್ಲ. ಆಕರ್ಷಕ ಬಣ್ಣಗಳನ್ನು ಹಚ್ಚಬಹುದು ಅಥವಾ ಎನಾಮಲ್ ಮಾಡಲೂಬಹುದು.
  • ಪ್ರಾಯೋಗಿಕವಾಗಿ ಸೇತುವೆಗಳೂ ಕೂಡ ನಿರ್ಮಾಣವಾಗಿವೆ. ಎರಡನೆಯ ಮುಖ್ಯ ಬಳಕೆ ಹಗುರತೆ, ಗಡಸು, ಉಷ್ಣವಾಹಕತೆ, ಕಿಲುಬು ಹಿಡಿಯದಿರುವಿಕೆಯ ಗುಣಗಳ ಮೇಲೆ ಆಧಾರಿತವಾಗಿದೆ. ಅದೆಂದರೆ ಆಹಾರ ಸಾಮಗ್ರಿಗಳ ಶೇಖರಣಾ ಡಬ್ಬಿಗಳು, ಔಷಧಿ ಮಾತ್ರೆಗಳ, ಲೇಹ್ಯಗಳ ಡಬ್ಬಿಗಳು, ಅಡಿಗೆ ಪಾತ್ರೆಗಳು, ಕ್ಷೀರಕೇಂದ್ರಗಳ ಸಲಕರಣೆಗಳು, ಮದ್ಯ ಸಾರಾಯಿ ತಯಾರಿಕಾ ಕೇಂದ್ರಗಳಲ್ಲಿನ ಪಾತ್ರೆ, ಸಲಕರಣೆಗಳು ಇತ್ಯಾದಿ. ಅಡುಗೆ ಪಾತ್ರೆಗಳಾಗಿ ಉಪಯೋಗಿಸುವಾಗ ಅನುಭವಕ್ಕೆ ಬಂದಿರುವ ಒಂದೆರಡು ಲೋಪದೋಷಗಳೆಂದರೆ ಪಾತ್ರೆಗಳು ಬಲುಬೇಗ ಕಾದು ಅಡುಗೆ ಸೀದುಹೋಗುವುದು. ಅಥವಾ ತಳಕ್ಕೆ ಅಂಟಿಕೊಳ್ಳುವುದು. ಪಾತ್ರೆಗಳ ಒಳಭಾಗಕ್ಕೆ ಟೆಪ್ಲಾನ್ ಎಂಬ ಉಷ್ಣ ಮತ್ತು ಅಂಟುನಿರೋಧಕವಸ್ತುವಿನ ಪೊರೆಯೊಂದನ್ನು ಬಳಿಯುವುದರ ಮೂಲಕ ಆ ಲೋಪದೋಷಗಳನ್ನು ನಿಯಂತ್ರಿಸುವುದು ಆಚರಣೆಗೆ ಬಂದಿದೆ. ಅಮೋನಿಯ, ನೈಟ್ರಿಕ್ ಆಮ್ಲ, ಹೈಡ್ರೋಜನ್ ಪೆರಾಕ್ಸೈಡ್, ಅಸಿಟಿಕ್ ಆಮ್ಲ ಸಂಬಂಧಿತ ರಾಸಾಯನಿಕ ಕೈಗಾರಿಕೆಗಳಲ್ಲಿನ ಶೇಖರಣಾ ಪಾತ್ರೆಗಳನ್ನು ಅಲ್ಯೂಮಿನಿಯಂನಿಂದಲೇ ಮಾಡಬಹುದು.
  • ಶೇಖರಿತ ರಾಸಾಯನಿಕಗಳಿಂದ ಅಲ್ಯೂಮಿನಿಯಂ ಲೋಹದ ಮೇಲೆ ಆಗಬಹುದಾದ ರಾಸಾಯನಿಕ ಕ್ರಿಯೆಗಳನ್ನು ಸ್ತಬ್ಧಗೊಳಿಸಿ ಲೋಹ ಜೀರ್ಣವಾಗದಂತೆ ಕಾಪಾಡಬಹುದು. ಆ ಕಾರ್ಯ ಕೆಲ ರಾಸಾಯನಿಕ ವಸ್ತುಗಳನ್ನು ಬೆರೆಸುವುದರ ಮೂಲಕ ಸಾಧ್ಯ. ಸಾಮಾನ್ಯವಾಗಿ ಬಳಸುವ ಆ ಜಾತಿಯ ಕೆಲ ಸಂಯುಕ್ತಗಳೆಂದರೆ ಪಿಷ್ಟಗಳು, ಅಂಟುಗಳು, ಪೊಟ್ಯಾಸಿಯಂ ಡೈಕ್ರೋಮೇಟ್, ಹೈಡ್ರೊಜನ್ ಪೆರಾಕ್ಸೈಡ್ ಇತ್ಯಾದಿ.

ವಿದ್ಯುದ್ವಾಹಕತೆಯ ಪರಿಣಾಮ

  • ಉತ್ತಮ ವಿದ್ಯುದ್ವಾಹಕತೆಯ ಪರಿಣಾಮವಾಗಿ, ದುಬಾರಿ ಬೆಲೆಯ ವಿರಳಲೋಹ ತಾಮ್ರದ ಬದಲು, ವಿದ್ಯುಚ್ಛಕ್ತಿಯ ಪ್ರಸರಣಕ್ಕೆ ಇತ್ತೀಚೆಗೆ ವಿಶೇಷವಾಗಿ ಅಲ್ಯೂಮಿನಿಯಂ ಲೋಹ ಉಪಯೋಗವಾಗುತ್ತಿದೆ. ಧಾಷ್ಟ್ರ್ಯ ಉಕ್ಕಿನ ತಂತಿಗಳ ಮೇಲೆ ಅಲ್ಯೂಮಿನಿಯಂ ಲೋಹವನ್ನು ಶೇಖರಿಸಿ ಬಲಾಢ್ಯ ಉತ್ತಮ ವಿದ್ಯುತ್ ಪ್ರಸರಣ ತಂತಿಗಳನ್ನು ತಯಾರಿಸುವರು.
  • ಇತರ ಉಪಯೋಗಗಳಲ್ಲಿ ಉಕ್ಕಿನ ತಯಾರಿಕೆಯಲ್ಲಿ ಆಮ್ಲಜನಕವನ್ನು ಹೊರತೆಗೆಯಲು ಅಲ್ಯೂಮಿನಿಯಂ ಲೋಹದ ಬಳಕೆ ಮುಖ್ಯವಾದುದು. ಅಲ್ಯೂಮಿನಿಯಂ ಬಣ್ಣಗಳು, ಬೆಳಕಿನ ಕಿರಣಗಳನ್ನು ಪ್ರತಿಫಲಿಸುವ ಫಲಕಗಳ ತಯಾರಿಕೆ, ಗೃಹಾಲಂಕರಣ ವಸ್ತುಗಳ ಉತ್ಪಾದನೆ ಇವೇ ಮುಂತಾದ ಇತರ ಉಪಯೋಗಗಳೂ ಇವೆ.
  • ಬಾಕ್ಸೈಟ್‍ಗೆ ಕುಲುಮೆಗಳಿಗಾಗಿ ಉಷ್ಣಸಹಿಷ್ಣು ಇಟ್ಟಿಗೆಗಳ ತಯಾರಿಕೆಯಲ್ಲಿಯೂ ಸಿಮೆಂಟ್ ತಯಾರಿಕೆಯಲ್ಲಿಯೂ ಜಲಾಂಶರಹಿತ ಅಲ್ಯೂಮಿನಿಯಂ ಆಕ್ಸೈಡ್‍ಗೆ ತೇವವನ್ನು ಹೀರುವುದಕ್ಕೂ ಪೆಟ್ರೋಲಿಯಂ ಕೈಗಾರಿಕೆಯಲ್ಲಿ ವೇಗವರ್ಧಕವಾಗಿಯೂ (ಕ್ಯಟಲಿಸ್ಟ್) ಉಪಯೋಗಿಸಲ್ಪಡುತ್ತವೆ.
  • ಅಲ್ಯೂಮಿನಿಯಂ ಪೊಟ್ಯಾಸಿಯಂ ಅಥವಾ ಅಲ್ಯೂಮಿನಿಯಂ ಅಮೋನಿಯಂ ಪಟಿಕ ಲವಣಗಳನ್ನು ನೀರನ್ನು ಶುದ್ಧಿಮಾಡುವ ಕಾರ್ಯದಲ್ಲಿ ಉಪಯೋಗಿಸುವರು. ಈ ಪಟಿಕಗಳಲ್ಲಿನ ಅಲ್ಯೂಮಿನಿಯಂ (ಂಟ3+) ವಿದ್ಯುದ್ವಾಹಿ ಕಣಗಳು, ಬಗ್ಗಡದ ನೀರಿನಲ್ಲಿ ತೇಲುತ್ತಿರುವ ಸೂಕ್ಷ್ಮಕಣಗಳನ್ನು ಒಂದುಗೂಡುವಂತೆ ಮಾಡಿ, ತತ್ಪರಿಣಾಮವಾಗಿ ಅವು ಭಾರವಾಗಿ ಜಲಾಶಯಗಳಲ್ಲಿ ನೀರಿನಲ್ಲಿ ಮುಳುಗುವುವು.
  • ನೀರು ತಿಳಿಯಾಗುವುದು. ಇನ್ನೂ ಕಡಿಮೆ ಬೆಲೆಯ ಅಲ್ಯೂಮಿನಿಯಂ ಸಲ್ಫೇಟ್ ಲವಣವನ್ನು ಈ ಉದ್ದೇಶಕ್ಕಾಗಿ ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಬಳಸುತ್ತಿರುವರು. ಪಟಿಕಗಳನ್ನು ಚರ್ಮಹದಮಾಡುವುದು, ಕಾಗದ ತಯಾರಿಕೆ, ಬಟ್ಟೆಗಳಿಗೆ ಬಣ್ಣ ಕಚ್ಚಿಸುವುದು ಇವೇ ಮುಂತಾದ ಕೈಗಾರಿಕೆಗಳಲ್ಲಿ ಬಳಸುವರು. ಲಿಥಿಯಂ ಅಲ್ಯೂಮಿನಿಯಂ ಹೈಡ್ರೈಡ್ ಒಂದು ಉತ್ತಮ ರಾಸಾಯನಿಕ ಅಪಕರ್ಷಣಕಾರಿ.
  • ಅಲ್ಯೂಮಿನಿಯಂ ಕ್ಲೋರೈಡ್ ಪೆಟ್ರೋಲಿಯಂ ಕೈಗಾರಿಕೆಯಲ್ಲಿ ಉಪಯೋಗಿಸುವ ಒಂದು ವೇಗವರ್ಧಕ. ಅಲ್ಯೂಮಿನಿಯಂ ಅಸಿಟೇಟ್ ಬಟ್ಟೆಗಳಿಗೆ ಬಣ್ಣ ಕಚ್ಚಿಸುವ ಕಾರ್ಯ, ಜ್ವಾಲೆಗಳನ್ನು ನಿರೋಧಿಸುವ ಬಟ್ಟೆಗಳ ತಯಾರಿಕೆ, ನೀರಿನಿಂದ ತೇವವಾಗದ ಕಾಗದಗಳ ತಯಾರಿಕೆಗಳಲ್ಲಿ ಉಪಯೋಗಕಾರಿ. ಬಿಳಿಯ ಜೇಡಿಮಣ್ಣಿನಿಂದ ಬಟ್ಟೆಗಳ ಬಿಳುಪಿಗೆ ಉಪಯೋಗಿಸುವ ನೀಲಿಯನ್ನು (ಅಲ್ಟ್ರಾಮೆರೀನ್ ಬ್ಲೂ) ತಯಾರಿಸುವರು.

ಅಲ್ಯೂಮಿನಿಯಂ ಗುರುತಿಸುವಿಕೆ

ಅಲ್ಯೂಮಿನಾನ್ ಎಂಬ ರಾಸಾಯನಿಕ ದ್ರಾವಣದ ಮಧ್ಯದಲ್ಲಿ ಅಚಲವಾಗಿರುತ್ತದೆ. ಈ ರಾಸಾಯನಿಕ ಕ್ರಿಯೆಯನ್ನು ಅಲ್ಯೂಮಿನಿಯಮನ್ನು ಗುರುತು ಹಚ್ಚಲು ಉಪಯೋಗಿಸುವರು. ಅದೇ ರೀತಿ ಅಲ್‍ಜರಿನ್ ರೆಡ್ ಎಸ್ (ಂಟizಚಿಡಿiಟಿ ಖeಜ. S) ಎಂಬ ಬಣ್ಣದೊಂದಿಗೂ ಕೆಂಪು ಬಣ್ಣ ವೃದ್ಧಿಯಾಗಿ ಅದು ಅಸಿಟಿಕ್ ಆಮ್ಲದಲ್ಲಿ ನಾಶವಾಗದೇ ಇರುವುದು. ಅಲ್ಯೂಮಿನಿಯಮನ್ನು ಗುರುತು ಹಚ್ಚಲು ಉಪಯೋಗಿಸುವ ಮತ್ತೊಂದು ಪ್ರಯೋಗ.

ಅಲ್ಯೂಮಿನಿಯಂ ಪ್ರಮಾಣಮಾಪನೆ

  • ಅಲ್ಯೂಮಿನಿಯಂ ಮಿಶ್ರಲೋಹ ಒಂದರಲ್ಲಿಯಾಗಲಿ ಅಥವಾ ಅಲ್ಯೂಮಿನಿಯಂನ ಸಂಯುಕ್ತವಸ್ತುವೊಂದರಲ್ಲಿಯಾಗಲಿ ಅಲ್ಯೂಮಿನಿಯಂ ಲೋಹಾಂಶ ಪ್ರಮಾಣವನ್ನು ನಿಖರವಾಗಿ ಅಳೆಯಲು ಅನೇಕ ವಿಧಾನಗಳನ್ನು ಅನುಸರಿಸಬಹುದು. ಮೊದಲು ಘನವಸ್ತುವನ್ನು ದ್ರಾವಣ ರೂಪಕ್ಕೆ ಮಾರ್ಪಾಡು ಮಾಡಬೇಕು. ಪ್ರಬಲ ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಮಿಶ್ರ ಲೋಹ ಕರಗಿಸಬಹುದು.
  • ಸಂಯುಕ್ತಗಳು ಪೂರ್ಣವಾಗಿ ನೀರಿನಲ್ಲಿ ವಿಲೀನವಾಗದೆ ಇದ್ದರೆ ಹೈಡ್ರೋಕ್ಲೋರಿಕ್ ಆಮ್ಲವನ್ನು ಉಪಯೋಗಿಸಬಹುದು. ದ್ರಾವಣದೊಳಗಿನ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಆಗಿ ಪಡೆಯಬಹುದು. ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಬೆರೆಸುವುದರಿಂದ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಆಗಿ ಪಡೆಯಬಹುದು. ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ನೀರಿನಲ್ಲಿ ಲೀನವಾಗುವುದಿಲ್ಲ.
  • ಆದುದುರಿಂದ ನೀರಿನಲ್ಲಿ ಚೆನ್ನಾಗಿ ತೊಳೆದರೆ ಅಂತ್ಯದಲ್ಲಿ ಬಿಳಿಯ ಗಷ್ಟು ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಉಳಿಯುತ್ತದೆ. ಅದನ್ನು ಪಿಂಗಾಣಿ ಮೂಸೆಯಲ್ಲಿ ಹಾಕಿ ಕಾಸಿದರೆ ಜಲಾಂಶವೆಲ್ಲವೂ ಹೊರಬಿದ್ದು ಶುದ್ಧ ಒಣ ಅಲ್ಯೂಮಿನಿಯಂ ಆಕ್ಸೈಡ್ ಉಳಿಯುತ್ತದೆ. ಅದರ ತೂಕವನ್ನು ಕಂಡುಹಿಡಿದು ಅಲ್ಯೂಮಿನಿಯಂ ಮೂಲ ದ್ರಾವಣದಲ್ಲಿ ಎಷ್ಟು ಇತ್ತು ಎಂಬುದನ್ನು ಲೆಕ್ಕಾಚಾರ ಮಾಡಿ ತಿಳಿಯಬಹುದು.
  • ವಿಶ್ಲೇಷಣೆಗೆ ಒಳಪಡಿಸಿರುವ ಮೂಲ ವಸ್ತುವಿನಲ್ಲಿ ಕಬ್ಬಿಣದ ಅಂಶವೇನಾದರೂ ಇದ್ದಲ್ಲಿ ಅಮೋನಿಯಂ ಬದಲು ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ಉಪಯೋಗಿಸಿದರೆ, ಕಬ್ಬಿಣದ ಆಕ್ಸೈಡ್ ವಿಲೀನವಾಗದೆ ಉಳಿದು, ಸೋಸಿ ಪ್ರತ್ಯೇಕಿಸಬಹುದು. ಅಲ್ಯೂಮಿನಿಯಂ ಮಾತ್ರ ಲೀನವಾಗುತ್ತದೆ.
  • ತತ್ಪರಿಣಾಮವಾಗಿ ಉಂಟಾದ ಸೋಡಿಯಂ ಅಲ್ಯೂಮಿನೇಟ್ ದ್ರಾವಣದಿಂದ ಅಲ್ಯೂಮಿನಿಯಂ ಹೈಡ್ರಾಕ್ಸೈಡ್ ಹೊರಬರುವಂತೆ ಮಾಡಿ, ಮೇಲೆ ವಿವರಿಸುವಂತೆ ಅಲ್ಯೂಮಿನಿಯಂ ಪ್ರಮಾಣವನ್ನು ಲೆಕ್ಕಾಚಾರ ಮಾಡಬಹುದು. ಅಲ್ಯೂಮಿನಿಯಂ ದ್ರಾವಣದಿಂದ ಅಲ್ಯೂಮಿನಿಯಂ ಅಂಶವನ್ನು ಆಕ್ಸಿನ್ ಎಂಬ ಇಂಗಾಲ ಸಂಯುಕ್ತದೊಡನೆಯೂ ಕ್ರಿಯೆಗೊಳಪಡಿಸಿ, ಅಲ್ಯೂಮಿನಿಯಂ ಆಕ್ಸಿನೇಟ್ ಎಂಬ ನೀರಿನಲ್ಲಿ ಲೀನವಾಗದಿರುವ ಸಂಯುಕ್ತವನ್ನು ಹೊಂದಬಹುದು. ಅದನ್ನು ಸೋಸಿ ಬೇರ್ಪಡಿಸಿ ಒಣಗಿಸಿ ತೂಕ ಮಾಡಿ ಅದರಿಂದಲೂ ಅಲ್ಯೂಮಿನಿಯಂ ಲೋಹಾಂಶವನ್ನು ಲೆಕ್ಕಾಚಾರ ಮಾಡಬಹುದು.

ಉಲ್ಲೇಖಗಳು