ಗರಿಕೆಹುಲ್ಲು

ಗರಿಕೆಹುಲ್ಲು
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Commelinids
ಗಣ:
Poales
ಕುಟುಂಬ:
Poaceae
ಕುಲ:
Cynodon
ಪ್ರಜಾತಿ:
C. dactylon
Binomial name
Cynodon dactylon
(L.) Pers.

ಗರಿಕೆಹುಲ್ಲು/ ದೂರ್ವ ಪೋಯೇಸೀ (ಗ್ರಾಮಿನೇ) ಕುಟುಂಬಕ್ಕೆ ಸೇರಿದ ಸೈನೊಡಾನ್ ಡ್ಯಾಕ್ಟಿಲಾನ್ ಎಂಬ ವೈಜ್ಞಾನಿಕ ಹೆಸರಿನ ಒಂದು ಬಹುವಾರ್ಷಿಕ ಹುಲ್ಲು ಗಿಡ. ಕುಡಿಗರಿಕೆ ಇದರ ಪರ್ಯಾಯ ನಾಮ. ಬರ್ಮ್ಯುಡ ಹುಲ್ಲು, ಬಹಾಮ ಹುಲ್ಲು ಎಂಬ ಹೆಸರುಗಳೂ ಇವೆ. ಇದನ್ನೆ ಬಹುವಾಗಿ ಹೋಲುವ ಇನ್ನಿತರ ಸುಮಾರು 10 ಬಗೆಯ ಹುಲ್ಲುಗಳಿವೆ. ಇವಕ್ಕೂ ರೂಢಿಯಲ್ಲಿ ಗರಿಕೆ ಹುಲ್ಲು ಎಂದೇ ಹೆಸರು. ಇವೆಲ್ಲ ಹಬ್ಬಿ ಹರಡಿಕೊಳ್ಳುವ ಬಹುವಾರ್ಷಿಕ ಸಸ್ಯಗಳು. ಇವುಗಳಲ್ಲೆಲ್ಲ ಗರಿಕೆಹುಲ್ಲು ದನಕರುಗಳಿಗೆ ಬಹು ಮುಖ್ಯವಾದ ಆಹಾರವೆನಿಸಿದೆ.

ಇತರೆ ಹೆಸರುಗಳು

ಬರ್ಮುಡಾ ಹುಲ್ಲು, ಧೂಬ್, ದೂರ್ವಾ ಹುಲ್ಲು, ಡಬೊ, ನಾಯಿಗಳ ಹುಲ್ಲು, ಬಹಾಮಾ ಹುಲ್ಲು, ದೆವ್ವದ ಹುಲ್ಲು, ಹಾಸಿಗೆಯ ಹುಲ್ಲು, ಭಾರತೀಯ ದೋಬ್, ಅರುಗಾಂಪುಲ್, ಗ್ರಾಮ, ವೈಗ್ರಾಸ್, ಸ್ಕಚ್ ಹುಲ್ಲು.

ವ್ಯವಸಾಯ

ಯೂರೇಷ್ಯದ ಮೂಲ ನಿವಾಸಿಯಾದ ಇದು ಪ್ರಪಂಚದ ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲೆಲ್ಲ ಬೆಳೆಯುತ್ತಿದೆ. ಭಾರತದಲ್ಲಿ ಸಮುದ್ರಮಟ್ಟದಿಂದ ಹಿಡಿದು 2500 ಮೀ ಎತ್ತರದ ವರೆಗಿನ ಪ್ರದೇಶಗಳಲ್ಲಿ ಇದನ್ನು ಕಾಣಬಹುದು. ರಸ್ತೆ ಮತ್ತು ಕಾಲುದಾರಿಗಳ ಅಂಚಿನಲ್ಲಿ ಸಮೃದ್ಧಿಯಾಗಿ ಬೆಳೆದಿರುತ್ತದೆ. ಬಂಜರು ಬಿಟ್ಟಿರುವ ಭೂಮಿಯನ್ನು ಈ ಹುಲ್ಲು ಬಹುಬೇಗ ಆವರಿಸಿಕೊಳ್ಳುವುದು. ಇದು ಎಲ್ಲ ಬಗೆಯ ಮಣ್ಣುಗಳಲ್ಲಿ ಬೆಳೆಯಬಲ್ಲದಾದರೂ ಗಟ್ಟಿ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ವರ್ಷದ ಎಲ್ಲ ಕಾಲಗಳಲ್ಲೂ ಹೂ ಬಿಡುವುದು ಇದರ ಪ್ರಮುಖ ಲಕ್ಷಣಗಳಲ್ಲೊಂದು. ಗರಿಕೆ ಹುಲ್ಲನ್ನು ಕಾಂಡ ಅಥವಾ ಬೇರು ಭಾಗಗಳನ್ನು ಕತ್ತರಿಸಿ ನೆಟ್ಟು ಬೆಳೆಸಬಹುದು. ಬೀಜಗಳಿಂದಲೂ ಬೆಳೆಸಬಹುದು.

ಪೌಷ್ಟಿಕಾಂಶಗಳು

ಬಲು ಪುಷ್ಟಿದಾಯಕವೆಂದು ಹೆಸರಾಗಿರುವ ಇದರಲ್ಲಿ ಕಚ್ಚಾಪ್ರೋಟೀನ್ ಶೇ.10.47, ನಾರು ಶೇ.28.17, ಸಾರಜನಕಮುಕ್ತವಸ್ತುಗಳು ಶೇ.47.8, ಈಥರ್ ಅಂಶ ಶೇ. 1.80 ಮತ್ತು ವಿವಿಧ ಖನಿಜಾಂಶಗಳು ಶೇ. 11.75, ಇರುವುದು ಕಂಡುಬಂದಿದೆ.

ಉಪಯೋಗಗಳು

ಬೇರಾವ ಹುಲ್ಲಿಗಿಂತಲೂ ದನಕರುಗಳಿಗೆ, ಅದರಲ್ಲೂ ಕುದುರೆಗಳಿಗೆ, ಹೆಚ್ಚು ಉಪಯುಕ್ತವಾದ ಮೇವೆಂದರೆ ಗರಿಕೆಹುಲ್ಲು. ಇದನ್ನು ಹಸಿಯಾಗಿ ಇಲ್ಲವೆ ಒಣಗಿಸಿ ತಿನ್ನಿಸಬಹುದು. ಕಾಕಂಬಿ ಜೊತೆಯಲ್ಲಿ ಬೆರೆಸಿ ಕೆಡದಂತೆ ಅನೇಕ ವರ್ಷಗಳವರೆಗೆ ಇದನ್ನು ಕಾದಿಟ್ಟ ಹುಲ್ಲಾಗಿ ಅಥವಾ ಹಗೇವು ಮೇವಾಗಿ ಇಡಬಹುದು. ತೆನೆ ಬಿಟ್ಟಾಗ ಇದನ್ನು ಕತ್ತರಿಸಿ ಒಣಗಿಸುವುದು ರೂಢಿಯಲ್ಲಿರುವ ಕ್ರಮ. ಒಂದು ಎಕರೆಗೆ 15-20 ಮಣದಷ್ಟು ಹುಲ್ಲು ದೊರೆಯುತ್ತದೆ. ಸರಿಯಾಗಿ ಗೊಬ್ಬರ ಮತ್ತು ನೀರನ್ನು ಒದಗಿಸಿ ಇಳುವರಿಯನ್ನು ಹೆಚ್ಚಿಸಬಹುದು. ವರ್ಷಕ್ಕೆ ಕೊನೆಯ ಪಕ್ಷ 4 ಬಾರಿ ಕಟಾಯಿಸಬಹುದು. ಇದರ ಗುಪ್ತಕಾಂಡಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಸಗಣಿಯೊಂದಿಗೆ ಬೆರೆಸಿ ಕೆತ್ತಿದ ಭೂಮಿಯ ಮೇಲೆ, ಮಳೆ ಪ್ರಾರಂಭವಾಗುವ ಮುನ್ನ ಹಾಕಿದರೆ, ಮಳೆಗಾಲದ ಕೊನೆಗೆ ಚೆನ್ನಾಗಿ ಬೆಳೆದು ಹರಡಿಕೊಳ್ಳುತ್ತದೆ.


ಗರಿಕೆಹುಲ್ಲು ಇಷ್ಟು ಉಪಯುಕ್ತವಾದರೂ ಇದು ಒಂದು ಕಡೆ ಬೇರೂರಿದ ಮೇಲೆ ಇದನ್ನು ನಿರ್ಮೂಲ ಮಾಡುವುದು ಕಷ್ಟ. ವ್ಯವಸಾಯದ ಭೂಮಿಗಳನ್ನು ಇದು ಒಂದು ಅಪಾಯಕಾರಿ ಕಳೆಯಾಗಿ ಬಹುಬೇಗ ಆವರಿಸಿಕೊಳ್ಳುವುದು. ಅಲ್ಲಿ ಬೆಳೆದಿರುವ ಪೈರುಗಳನ್ನು ಹಾಳು ಮಾಡುವುದಲ್ಲದೆ ಕೆಲವೇ ವರ್ಷಗಳಲ್ಲಿ ಅಲ್ಲಿರುವ ಮಣ್ಣಿನ ಸಾರವನ್ನೆಲ್ಲ ಹೀರಿ ನೆಲವನ್ನು ವ್ಯವಸಾಯಕ್ಕೆ ಅನುಪಯುಕ್ತವಾಗಿ ಮಾಡುತ್ತದೆ. ಬೇಸಗೆಯಲ್ಲಿ ಭೂಮಿಯನ್ನು ಆಳವಾಗಿ ಉತ್ತು ಗರಿಕೆಹುಲ್ಲಿನ ಬೇರುಗಳನ್ನು ಬಿಸಿಲಿಗೆ ಬಿಡುವುದರ ಮೂಲಕ ಇದನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಇಂಥ ಭೂಮಿಯಲ್ಲಿ ಗೋಧಿಯ ಬೆಳೆಯನ್ನು ಬೆಳೆಸುವುದರಿಂದ ಹುಲ್ಲಿನ ಕಳೆ ಬಹುಮಟ್ಟಿಗೆ ನಿರ್ಮೂಲವಾಗುವುದೆಂಬ ಅಂಶ ಈಚೆಗೆ ಗೊತ್ತಾಗಿದೆ. ಬಹುಶಃ ಗೋಧಿ ಬೆಳೆಗೆ ಮಾಡುವ ವ್ಯವಸಾಯ ಕ್ರಮ ಗರಿಕೆಹುಲ್ಲಿಗೆ ಮಾರಕವೆನಿಸಬಹುದು.

ಔಷಧವಾಗಿ

ಗರಿಕೆಹುಲ್ಲಿನ ಕಷಾಯ ಮೂತ್ರಸ್ರಾವವನ್ನು ಹೆಚ್ಚಿಸುತ್ತದೆ. ಜಲೋದರ ರೋಗಕ್ಕೆ ಔಷಧವಾಗಿಯೂ ಇದರ ಬಳಕೆ ಉಂಟು. ಬೇರು ಮತ್ತು ಗುಪ್ತಕಾಂಡಗಳಿಂದ ಮೂತ್ರಜನಕಾಂಗ ಮತ್ತು ಜನನಾಂಗಗಳ ಕೆಲವು ರೋಗಗಳ ನಿವಾರಣೆಗೆ ಔಷಧಿಯನ್ನು ತಯಾರಿಸುತ್ತಾರೆ. ರಕ್ತಸ್ರಾವವನ್ನು ತಡೆಯಲು ಕೂಡ ಇದನ್ನು ಬಳಸುವುದುಂಟು.

ಬಾಹ್ಯ ಸಂಪರ್ಕಗಳು