ಗೋರಖಪುರ
ಗೋರಖಪುರ | |
ರಾಜ್ಯ - ಜಿಲ್ಲೆ |
ಉತ್ತರ ಪ್ರದೇಶ - ಗೋರಖಪುರ |
ನಿರ್ದೇಶಾಂಕಗಳು | |
ವಿಸ್ತಾರ | 3483.8 km² |
ಸಮಯ ವಲಯ | IST (UTC+5:30) |
ಜನಸಂಖ್ಯೆ (39, 69, 583) - ಸಾಂದ್ರತೆ |
37, 69, 456 - /ಚದರ ಕಿ.ಮಿ. |
ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 273001 - +22800.0 - UP 53 |
ಅಂತರ್ಜಾಲ ತಾಣ: http://gorakhpur.nic.in |
ಗೋರಖಪುರವು ಪೂರ್ವ ಅಕ್ಷಾಂಶ ೮೩.೪ ಡಿಗ್ರಿ ಹಾಗೂ ಉತ್ತರ ರೇಖಾಂಶ ೨೬.೮ ಡಿಗ್ರಿಯಲ್ಲಿ ನೆಲೆಗೊಂಡಿದ್ದು ಉತ್ತರಪ್ರದೇಶದ ಒಂದು ಜಿಲ್ಲಾ ಕೇಂದ್ರವಾಗಿದೆ. ರಪ್ತಿ ಹಾಗೂ ರೇತಿ ನದಿಗಳ ನಡುವೆ ಇದ್ದು ಫಲವತ್ತಾದ ಗೋಧಿ ಹೊಲಗಳಿಂದಲೂ ದಟ್ಟವಾದ ಸಾಲವೃಕ್ಷ ಕಾಡಿನಿಂದಲೂ ಆವೃತವಾಗಿದೆಯೆಂದೂ ಉಷ್ಣತೆ ೨ ಡಿಗ್ರಿ ಸೆಲ್ಸಿಯಸ್‌ನಿಂದ ಹಿಡಿದು ೪೯ ಡಿಗ್ರಿ ಸೆಲ್ಸಿಯಸ್‌ವರೆಗೆ ಇರುವುದು.
ಗೋರಖ್‍ನಾಥ ಮಂದಿರ
ಗೋರಖ್‍ನಾಥನೆಂಬ ಶೈವ ಮುನಿಯ ದೆಸೆಯಿಂದ ಗೋರಖಪುರಕ್ಕೆ ಆ ಹೆಸರು ಬಂದಿದೆ. ನಾಥಪಂಥದ ಈ ಶಿವಾನುಯಾಯಿಗಳಲ್ಲಿ ಗುರುಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮತ್ಸ್ಯೇಂದ್ರನಾಥನ ಶಿಷ್ಯನಾದ ಈ ಗೋರಖನಾಥ ಬೇರಾರೂ ಆಗಿರದೆ ಸ್ವತಃ ಶಿವನೇ ಎಂಬ ವಾದವಿದೆ. ಇಲ್ಲಿನ ಗೋರಖನಾಥ ಗುಡಿಯಲ್ಲಿ ಸಾಮಾನ್ಯವಾಗಿ ಶಿವನ ಗುಡಿಯಲ್ಲಿರಬಹುದಾದ ಲಿಂಗ ಇಲ್ಲವೇ ಇಲ್ಲ. ಇಲ್ಲಿರುವುದು ಗೋರಖನಾಥನ ಮೂರ್ತಿ. ಒಳಗಿನ ಮಂಟಪದಲ್ಲಿ ನಾಥಪಂಥದ ಯೋಗಿಗಳ ಹಾಗೂ ನವನಾಥರ ಪ್ರತಿಮೆಗಳನ್ನು ಕೂಡಿಸಲಾಗಿದೆ. ಸುಮಾರು ಐವತ್ತು ಎಕರೆ ಪ್ರದೇಶದಲ್ಲಿರುವ ಈ ಮಂದಿರ ಪ್ರದೇಶದಲ್ಲಿ ಗೋರಖನ ಸನ್ನಿಧಿ, ಸಾಧುಗಳ ತಂಗುದಾಣ, ಧಾರ್ಮಿಕ ಗ್ರಂಥಾಲಯ, ಗೋಶಾಲೆ, ಪುಷ್ಕರಣಿ, ನವನಾಥ ಮಂದಿರ, ಕಾಳಿಮಂದಿರ, ಗಣೇಶಮಂದಿರ, ಸಭಾಂಗಣ ಹಾಗೂ ವಾಣಿಜ್ಯಕೇಂದ್ರಗಳಿವೆ.
ಪಟ್ಟಣದ ಹೊರವಲಯದಲ್ಲಿರುವ ಬಶಾರತ್‌ಪುರವು ಹಿಂದೂ ಕ್ರೈಸ್ತರ ಭಾವೈಕ್ಯದ ಊರು ಎನಿಸಿದೆ. ಇಂಗ್ಲೀಷರ ಆಳ್ವಿಕೆಯ ಕಾಲದಲ್ಲಿ ಇದು ಸ್ವಾತಂತ್ರ್ಯ ಚಳುವಳಿಯ ಕೇಂದ್ರಬಿಂದುವಾಗಿತ್ತು. ಈ ಊರಿನ ಸ್ವಾತಂತ್ರ್ಯವೀರರ ಸ್ಮರಣೆಗಾಗಿ ಗೋರಖಪುರ ನಗರಸಭೆಯ ಆವರಣದಲ್ಲಿ ಸ್ಮಾರಕವೊಂದನ್ನು ನಿಲ್ಲಿಸಲಾಗಿದೆ.
ಚೋರಿಚೌರಾಹ
ಗೋರಖಪುರದ ಪೂರ್ವದಿಕ್ಕಿನಲ್ಲಿ ೧೮ ಕಿಲೋಮೀಟರು ದೂರಲ್ಲಿರುವ ಚೋರಿಚೌರಾಹಕ್ಕೆ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಒಂದು ಪ್ರಮುಖ ಸ್ಥಾನವಿದೆ. ಇಲ್ಲಿದ್ದ ಇಂಗ್ಲೀಷರ ಪೊಲೀಸ್ ಠಾಣೆಗೆ ಜನ ಕೊಳ್ಳಿ ಇಟ್ಟದ್ದು ಇಂದಿಗೂ ಸ್ಮಾರಕವಾಗಿ ಉಳಿದಿದೆ. ೧೯೨೦ರಲ್ಲಿ ಗೋರಖಪುರದಲ್ಲಿ ನಡೆದ ಸಮಾವೇಶದಲ್ಲಿ ಮಹಾತ್ಮ ಗಾಂಧಿಯವರು ಸ್ವದೇಶೀ ಆಂದೋಲನಕ್ಕೆ ಕರೆ ನೀಡಿದರು.
ದೇಶಪ್ರೇಮಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಮನೆಮನೆಗೆ ತೆರಳಿ ಗಾಂಧಿಯವರ ಸಂದೇಶವನ್ನು ಸಾರಿ ವಿದೇಶೀವಸ್ತುಗಳನ್ನು ಬಹಿಷ್ಕರಿಸಿದರು. ಆಗ ಚೋರಿಚೌರಾಹದಲ್ಲಿ ಪ್ರತಿ ಶನಿವಾರ ವಾರದ ಸಂತೆ ನೆರೆಯುತ್ತಿತ್ತು. ಅಲ್ಲೂ ಸಹ ಕಾರ್ಯಕರ್ತರು ಬಂದು ವಿದೇಶೀ ಬಟ್ಟೆಗಳನ್ನು ಖರೀದಿಸದಂತೆ ಜನತೆಗೆ ತಿಳಿಹೇಳಿದರು. ಎರಡು ಶನಿವಾರಗಳೂ ಹೀಗೆ ನಡೆದಾಗ ಕುಪಿತರಾದ ಧನಿಕರು ಅನಂತರದ ಶನಿವಾರ ಹೀಗಾಗಲು ಬಿಡಬಾರದೆಂದು ನಿಶ್ಚಯಿಸಿದರು. ಮುಂದಿನ ಶನಿವಾರ ಇದರ ಸುಳಿವರಿತ ಕಾರ್ಯಕರ್ತರು ಎರಡು ಮೂರು ತಂಡಗಳಾಗಿ ಹೊರಟರು. ಮೊದಲ ತಂಡ ಬರುತ್ತಿದ್ದಂತೆ ಧನಿಕರೊಂದಿಗೆ ಶಾಮೀಲಾದ ಪೊಲೀಸರು ಲಾಠಿಚಾರ್ಜ್ ಮಾಡಿ ಅವರನ್ನು ಸದೆ ಬಡಿದರು. ಎರಡನೇ ತಂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಲಾಠಿ ಚಾರ್ಜ್‌ನೊಂದಿಗೆ ಗುಂಡಿನ ಮಳೆಯನ್ನೂ ಕರೆದರು. ಇದರಿಂದಾಗಿ ಅಸಂಖ್ಯರು ಜೀವತೆತ್ತರು.
ಈ ಘಟನೆಯಿಂದ ರೊಚ್ಚಿಗೆದ್ದ ಚಳವಳಿಗಾರರು ಪೊಲೀಸರನ್ನು ಅಟ್ಟಿಸಿಕೊಂಡು ಹೋದರು. ತಮ್ಮ ಗುಂಡಿನ ದಾಸ್ತಾನು ಮುಗಿದಿದ್ದರಿಂದ ಅಲ್ಪಸಂಖ್ಯೆಯಲ್ಲಿದ್ದ ಪೊಲೀಸರು ಓಡಿ ಹೋಗಿ ಸ್ಟೇಷನ್ನಿನಲ್ಲಿ ಅಗುಳಿ ಹಾಕಿಕೊಂಡರು. ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರ ಹಾಗೂ ಗತಿಸಿದವರ ಸಂಬಂಧಿಕರ ರೋದನವೂ ಆ ಘಟನಾಸ್ಥಳದ ಗಂಭೀರತೆಯನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸಿತ್ತು. ಯಾರೋ ಒಂದಷ್ಟು ಸೀಮೆಎಣ್ಣೆ ಸುರಿದರು. ಆಗ ಹೊತ್ತಿಸಿದ ಕಿಡಿ ಇಡೀ ಪೊಲೀಸ್ ಠಾಣೆಯನ್ನು ಭಸ್ಮಗೊಳಿಸಿತು. ೨೩ ಮಂದಿ ಪೊಲೀಸರು ಸುಟ್ಟು ಕರಕಲಾದರು. ವಿಪರ್ಯಾಸವೆಂದರೆ ಆ ಸುಟ್ಟುಹೋದ ಠಾಣಾಧಿಕಾರಿ, ದಫೇದಾರ್, ಪೇದೆ, ಚೌಕಿದಾರ ಮುಂತಾದ ಎಲ್ಲ ೨೩ ಮಂದಿಯೂ ಭಾರತೀಯರೇ ಆಗಿದ್ದರು. ಆ ಪೊಲೀಸ್ ಠಾಣೆಯನ್ನು ಇಂದೂ ನೋಡಬಹುದಾಗಿದೆಯಲ್ಲದೆ ಅದರ ಹಿಂದುಗಡೆ ಸತ್ತ ಪೊಲೀಸರಿಗಾಗಿ ಸ್ಮಾರಕ ನಿಲ್ಲಿಸಲಾಗಿದೆ.
ರಾಮಗರ್ ತಾಲ್
ಈ ಚೋರಿಚೌರಾಹಕ್ಕೆ ಹೋಗುವ ದಾರಿಯಲ್ಲಿ ಗೋರಖಪುರ ನಗರಕ್ಕೆ ಹೊಂದಿಕೊಂಡಂತೆಯೇ ಭಾರೀ ದೊಡ್ಡ ಸರೋವರವಿದೆ. ಎತ್ತ ನೋಡಿದರೂ ಎಲ್ಲೆಯೇ ಕಾಣದ ಈ ಸರೋವರದ ಹೆಸರು ರಾಮಗರ್ ತಾಲ್. ರಪ್ತಿ ನದಿಯು ಹರಿದು ಬಂದು ಈ ರಾಮಗರ್‌ತಾಲ್‌ಅನ್ನು ಸೇರುತ್ತದೆ. ಸುಮಾರು ೧೫೦೦ ಎಕರೆ ವಿಸ್ತೀರ್ಣದ ಈ ಕೆರೆಯೇ ಸುತ್ತಮುತ್ತಲಿನ ಹಲವಾರು ಊರುಗಳ ಅಂತರ್ಜಲದ ಸೆಲೆಯಾಗಿದೆ. ಹೀಗಾಗಿ ಗೋರಖಪುರ ನಗರಸಭೆಗೆ ನೀರು ಪೂರೈಕೆ ಒಂದು ಸಮಸ್ಯೆಯೇ ಅಲ್ಲ. ಆದರೆ ಮಳೆಗಾಲ ಬಂತೆಂದರೆ ಗೋರಖಪುರ ಊರು ಊರೇ ಅಲ್ಲ. ಎಲ್ಲಿ ನೋಡಿದರೂ ನೀರೇ ನೀರು. ಅಲ್ಲೊಂದು ಇಲ್ಲೊಂದು ನಡುಗಡ್ಡೆಗಳು. ಆಗ ರೈಲು ಬಸ್ಸು ಎಲ್ಲವೂ ಸ್ಥಗಿತ.
ಬುದ್ಧನ ನೆಲೆವೀಡು
ಗೌತಮಬುದ್ಧನು ಜಸಿದನೆನ್ನಲಾಗುವ ಲುಂಬಿನಿಯು ಗೋರಖಪುರಕ್ಕೆ ಹತ್ತಿರದ ನೇಪಾಳದ ಗಡಿಯಲ್ಲಿದೆ. ಸಿದ್ಧಾರ್ಥನು ಬುದ್ಧನಾಗುವ ಸಮಯದ ಸಂಕ್ರಮಣಕ್ಕೆ ವೇದಿಕೆಯಾದ ಅರಳಿಮರ ಇರುವುದು ಗೋರಖಪುರದಿಂದ ಆಗ್ನೇಯಕ್ಕಿರುವ ಗಯಾ ಎಂಬಲ್ಲಿ. ಅಲ್ಲಿಂದ ಬೋಧನೆಗೆ ತೆರಳಿದ ಬುದ್ಧ ತನ್ನ ಪ್ರಥಮ ಶಿಷ್ಯರಿಗೆ ಧರ್ಮಚಕ್ರ ಪ್ರವರ್ತನ ಸೂತ್ರ ಹಾಗೂ ತ್ರಿಪಿಟಕವನ್ನು ಬೋಧಿಸಿ ದೀಕ್ಷೆ ನೀಡಿದ್ದು ಗೋರಖಪುರದಿಂದ ದಕ್ಷಿಣಕ್ಕಿರುವ ಸಾರನಾಥದಲ್ಲಿ. ಗೋರಖಪುರದ ದಕ್ಷಿಣಕ್ಕೆ ಸುಮಾರು ೨೨೫ ಕಿಲೋಮೀಟರುಗಳ ಅಂತರದಲ್ಲಿ ಪ್ರಖ್ಯಾತ ವಾರಣಾಸಿ ಬಳಿಯಿರುವ ಸಾರನಾಥದ ದೀಕ್ಷಾ ಸ್ಥಳದಲ್ಲಿ ಮೂಲ ಬೋಧಿವೃಕ್ಷದ ಕೊಂಬೆಯನ್ನು ತಂದು ನೆಟ್ಟಿರುವರಲ್ಲದೆ ಅದೇ ಈಗ ದೊಡ್ಡ ವೃಕ್ಷವಾಗಿದೆ. ಆ ವೃಕ್ಷದ ನೆರಳಲ್ಲಿ ಬುದ್ಧನು ತನ್ನ ಪ್ರಥಮ ಶಿಷ್ಯರಿಗೆ ತ್ರಿಪಿಟಕ (ಬೌದ್ಧಸಂಹಿತೆ) ವನ್ನು ಆಗಿನ ಕಾಲದ ಜನ ಸಾಮಾನ್ಯರ ಲಿಪಿಭಾಷೆ ಪಾಳಿಯಲ್ಲಿ ಬೋಧಿಸಿದ್ದನ್ನು ಮೂರ್ತಿ ರೂಪದಲ್ಲಿ ಸ್ಥಾಪಿಸಲಾಗಿದೆ. ಪಕ್ಕದಲ್ಲೇ ಜಪಾನಿಯರು ಕಟ್ಟಿದ ದೀಕ್ಷಾಮಂದಿರವೂ (ಸ್ಥಳೀಯರ ಭಾಷೆಯಲ್ಲಿ ಜಪಾನ್ ಮಂದಿರ) ಶೋಭಾಯಮಾನವಾಗಿ ನಿಂತಿವೆ. ಬುದ್ಧನು ತನ್ನ ಜೀವನದ ೨೪ ಅಮೂಲ್ಯ ಚೈತ್ರ ಪೂರ್ಣಿಮೆಗಳನ್ನು ಕಂಡ ಮಥುರಾ, ಬುದ್ಧನ ಜೀವನದಲ್ಲಿ ಹಾದುಹೋಗುವ ಕಪಿಲವಸ್ತು, ಕೌಶಾಂಬಿ, ಕೊಪಿಯಾ, ಪಾವಾ, ಶ್ರಾವಸ್ತಿ, ವೈಶಾಲಿ ಇವೆಲ್ಲ ಗೋರಖಪುರದ ಪರಿಧಿಯಲ್ಲೇ ಇವೆ.
ಸಾಹಿತ್ಯ ಕೇಂದ್ರ
ಧಾರ್ಮಿಕ ಗ್ರಂಥಗಳ ಪ್ರಕಟಣಾ ಕೇಂದ್ರವಾಗಿಯೂ ಗೋರಖಪುರ ವಿಜೃಂಭಿಸಿದೆ. ಇಲ್ಲಿರುವ ಗೀತಾಪ್ರೆಸ್ ಬಹಳಷ್ಟು ವರ್ಷಗಳಿಂದ ಗೀತೆಯ ವ್ಯಾಖ್ಯಾನ ಸಹಿತದ ಗ್ರಂಥಗಳನ್ನು ವಿವಿಧ ಗಾತ್ರಗಳಲ್ಲಿ ವಿವಿಧ ಭಾಷೆಗಳಲ್ಲಿ ಮುದ್ರಿಸಿ ಪ್ರಚುರಗೊಳಿಸುತ್ತಿತ್ತಲ್ಲದೆ, ನಳ ದಮಯಂತಿ, ಸತ್ಯವಾನ ಸಾವಿತ್ರಿ ಮುಂತಾದ ಪುರಾಣ ಕಥೆಗಳನ್ನು ಮುದ್ರಿಸಿ ದೇಶದೆಲ್ಲೆಡೆಗೆ ಪೂರೈಸುತ್ತಿತ್ತು. ಸಂತ ಕಬೀರನ ಊರಾದ ಮಗಾರ್ ಇಲ್ಲೇ ಹತ್ತಿರದಲ್ಲಿದೆ. ಹಿಂದಿ ಭಾಷೆಯ ಪ್ರಸಿದ್ಧ ಕವಿ ಮುನ್ಶಿ ಪ್ರೇಮಚಂದರ ಕರ್ಮಭೂಮಿಯೂ ಆದ ಗೋರಖಪುರದಲ್ಲಿ ಹಿಂದಿ ಭಾಷೆ ಪ್ರಚಲಿತವಿದೆ. ಆದರೆ ಊರಾಚೆಯ ಹಳ್ಳಿಗಳಲ್ಲಿ ಚಲಾವಣೆಯಲ್ಲಿರುವುದು ಭೋಜ್‌ಪುರಿ ಎಂಬ ಲಿಪಿಯಿಲ್ಲದ ಭಾಷೆ. (ಕಾ ಹಾಲ್ ಬಾ ಎಂದರೆ ಏನ್ಸಮಾಚಾರ ಎಂದರ್ಥ). ಇಲ್ಲೆಲ್ಲ ಭೋಜ್‌ಪುರಿ ಭಾಷೆಯ ಸಿನೆಮಾಗಳು, ಧ್ವನಿಮುದ್ರಿಕೆಗಳೂ ಬಹು ಸಂಖ್ಯೆಯಲ್ಲಿ ಓಡುತ್ತವೆ.
ಸಂಪರ್ಕ
ಗೋರಖಪುರಕ್ಕೆ ದೆಹಲಿ, ಲಕ್ನೊ, ವಾರಣಾಸಿ ಹಾಗೂ ಪಾಟ್ನಾಗಳಿಂದ ಉತ್ತಮ ರೈಲು ಸಂಪರ್ಕವಿದೆ. ಇಲ್ಲಿನ ವಾಯುನೆಲೆಯ ವಿಮಾನ ನಿಲ್ದಾಣವು ಸಾರ್ವಜನಿಕರಿಗೂ ತೆರೆದಿದ್ದು ದೆಹಲಿ ಕೊಲ್ಕತ್ತಾಗಳಿಂದ ವಿಮಾನ ಸೇವೆ ಇದೆ. ಇತ್ತೀಚಿನ ದಿನಗಳಲ್ಲಿ ವಿವಾದಕ್ಕೆ ಸಿಲುಕಿರುವ ಅಯೋಧ್ಯೆ ಇಲ್ಲಿಂದ ಪಶ್ಚಿಮಕ್ಕೆ ೯೦ ಕಿಲೋಮೀಟರು ದೂರದಲ್ಲಿದೆ. ಆದರೆ ಗೋರಖಪುರದಲ್ಲಿ ಕೋಮುಸೌಹಾರ್ದತೆ ತುಂಬಿ ತುಳುಕುತ್ತಿದೆ. ಅತ್ತ ದೊಡ್ಡ ನಗರವೂ ಅಲ್ಲದ, ಇತ್ತ ಸೇನಾ ನೆಲೆಯೂ ಅಲ್ಲದ ಸ್ಥಿತಿಯಲ್ಲಿ ರೈತರ ಕೂಲಿಕಾರರ ಹಾಗೂ ಧರ್ಮಭೀರುಗಳ ಸ್ನೇಹಮಯಿ ಹಿಡಿತದೊಳಗಿನ ಬೆಚ್ಚಗಿನ ವಾತಾವರಣ ಗೊರಖಪುರದಲ್ಲಿದೆ. ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಎಂಬ ಪ್ರತ್ಯೇಕತೆ ಇಲ್ಲದೆ ಎಲ್ಲ ಹಬ್ಬಗಳೂ ಎಲ್ಲ ಜಾತ್ರೆಗಳೂ ಒಂದೇ ಎನ್ನುವ ಗೋರಖಪುರದ ಜನರಲ್ಲಿ ಬಡತನವಿದ್ದರೂ ಶಾಂತಿ ನೆಮ್ಮದಿಗಳು ನೆಲೆಸಿವೆ.