ಚಂದ್ರ
ಭೂಮಿಯಿಂದ ಕಾಣುವಂತೆ ಚಂದ್ರ | |||||||
ಕಕ್ಷೆಯ ಗುಣಗಳು | |||||||
---|---|---|---|---|---|---|---|
ಪುರಭೂಮಿ | ೩೬೩,೧೦೪ ಕಿ.ಮೀ. (೦.೦೦೨೪ AU) | ||||||
ಅಪಭೂಮಿ | ೪೦೫,೬೯೬ ಕಿ.ಮೀ. (೦.೦೦೨೭ AU) | ||||||
ದೀರ್ಘಾರ್ಧ ಅಕ್ಷ | ೩೮೪,೩೯೯ ಕಿ.ಮೀ. (೦.೦೦೨೫೭ AU) | ||||||
ಕಕ್ಷೆಯ ಪರಿಧಿ | ೨,೪೧೩,೪೦೨ ಕಿ.ಮೀ. (೦.೦೧೬ AU) | ||||||
ಕಕ್ಷೀಯ ಕೇಂದ್ರ ಚ್ಯುತಿ | ೦.೦೫೪೯ | ||||||
ನಾಕ್ಷತ್ರಿಕ ಅವಧಿ | ೨೭.೩೨೧ ೫೮೨ ದಿನ (೨೭ ದಿ ೭ ಘಂ ೪೩.೧ ನಿ) | ||||||
ಯುತಿಮಾಸ | ೨೯.೫೩೦ ೫೮೮ ದಿನ (೨೯ ದಿ ೧೨ ಘಂ ೪೪.೦ ನಿ) | ||||||
ಅಸಂಗತ ಮಾಸ | ೨೭.೫೫೪ ೫೫೦ ದಿನ | ||||||
ಡ್ರಾಕೋನಿಕ್ ಮಾಸ | ೨೭.೨೧೨ ೨೨೧ ದಿನ | ||||||
ಸಾಯನ ಮಾಸ | ೨೭.೩೨೧ ೫೮೨ ದಿನ | ||||||
ಸರಾಸರಿ ಕಕ್ಷಾ ವೇಗ | ೧.೦೨೨ ಕಿ.ಮೀ./ಕ್ಷಣ (೨೨೮೬ ಮೈಲಿ/ಪ್ರತಿ ಘಂ.) | ||||||
ಕನಿಷ್ಠ ಕಕ್ಷಾ ವೇಗ | ೦.೯೬೮ ಕಿ.ಮೀ./ಕ್ಷಣ (೨೧೬೫ ಮೈಲಿ/ಪ್ರತಿ ಘಂ.) | ||||||
ಗರಿಷ್ಠ ಕಕ್ಷಾ ವೇಗ | ೧.೦೮೨ ಕಿ.ಮೀ./ಕ್ಷಣ (೨೪೨೦ ಮೈಲಿ/ಪ್ರತಿ ಘಂ.) | ||||||
ಓರೆ | ಸೌರಮಂಡಲದ ಸಮತಳಕ್ಕೆ ೫.೧೪೫° (ಭೂಮಿಯ ಸಮಭಾಜಕಕ್ಕೆ ೧೮.೨೯° ಮತ್ತು ೨೮.೫೮° ಗಳ ನಡುವೆ) | ||||||
ಭೌತಿಕ ಗುಣಲಕ್ಷಣಗಳು | |||||||
ಸಮಭಾಜಕದ ತ್ರಿಜ್ಯ | ೧,೭೩೮.೧೪ ಕಿ.ಮೀ. (ಭೂಮಿಯ ೨೭.೩%) | ||||||
ಧ್ರುವಗಳ ತ್ರಿಜ್ಯ | ೧,೭೩೫.೯೭ ಕಿ.ಮೀ. (ಭೂಮಿಯ ೨೭.೩%) | ||||||
ಸರಾಸರಿ ತ್ರಿಜ್ಯ | ೧,೭೩೭.೧೦೩ ಕಿ.ಮೀ. (ಭೂಮಿಯ ೨೭.೩%) | ||||||
ಪರಿಧಿ | ೪.೩೭೩×೧೦೬ ಕಿ.ಮೀ. | ||||||
ಹ್ರಸ್ವಾಕ್ಷತೆ | ೦.೦೦೧೨೫ | ||||||
ಮೇಲ್ಮೈ ವಿಸ್ತೀರ್ಣ | ೩.೭೯೩×೧೦೭ ಕಿ.ಮೀ. (ಭೂಮಿಯ ೭.೪%) | ||||||
ಗಾತ್ರ | ೨.೧೯೫೮×೧೦೧೦ ಕಿ.ಮೀ. (ಭೂಮಿಯ ೨%) | ||||||
ದ್ರವ್ಯರಾಶಿ | ೭.೩೪೭೭×೧೦೨೨ ಕಿ.ಗ್ರಾಂ. (ಭೂಮಿಯ ೧.೨೩%) | ||||||
ಸಾಂದ್ರತೆ | ೩,೩೪೬.೪ ಕಿ.ಗ್ರಾಂ./ಮೀ೩ | ||||||
ಮೇಲ್ಮೈ ಗುರುತ್ವ | ೧.೬೨೨ ಮೀ/ಕ್ಷಣ೨ (೦.೧೬೫೪ g) | ||||||
ಮೇಲ್ಮೈನಿಂದ ಮುಕ್ತಿ ವೇಗ | ೨.೩೮ ಕಿ.ಮೀ./ಕ್ಷಣ (೫೩೨೪ ಮೈಲಿ/ಪ್ರತಿ ಘಂ.) | ||||||
ಅಕ್ಷೀಯ ಪರಿಭ್ರಮಣ ವೇಗ | ೪.೬೨೭ ಮೀ/ಕ್ಷಣ (೧೦.೩೪೯ ಮೈಲಿ/ಪ್ರತಿ ಘಂ.) | ||||||
ಅಕ್ಷೀಯ ಓರೆ | ೧.೫೪೨೪° (ಕ್ರಾಂತಿವೃತ್ತದ ಸಮತಳಕ್ಕೆ) | ||||||
ಪ್ರತಿಫಲನಾಂಶ | ೦.೧೨ | ||||||
ಗೋಚರ ಪ್ರಮಾಣ | -೧೨.೭೪ ರವರೆಗೆ | ||||||
ಮೇಲ್ಮೈ ತಾಪಮಾನ (ಸಮಭಾಜಕದಲ್ಲಿ) |
| ||||||
ವಾಯುಮಂಡಲ | |||||||
ಸಾಂದ್ರತೆ | ಪ್ರತಿ ಸೆಂ.ಮೀ.೩ಗೆ ೧೦೭ ಕಣಗಳು (ದಿನ) ಪ್ರತಿ ಸೆಂ.ಮೀ.೩ಗೆ ೧೦೫ ಕಣಗಳು (ರಾತ್ರಿ) | ||||||
ಚಂದ್ರ - ಇದು ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ.
ಪರಿಚಯ
ಭೂಮಿ ಮತ್ತು ಚಂದ್ರನ ನಡುವಿನ ಸರಾಸರಿ ದೂರ 384,399 ಕಿ.ಮೀ.ಗಳು. ಇಷ್ಟು ದೂರದಲ್ಲಿ, ಚಂದ್ರನಿಂದ ಪ್ರತಿಫಲಿತವಾದ ಬೆಳಕು ಭೂಮಿಯನ್ನು ತಲುಪಲು ಸುಮಾರು 1.3 ಕ್ಷಣಗಳು ಹಿಡಿಯುತ್ತದೆ.
ಚಂದ್ರನ ವ್ಯಾಸವು 3,474 ಕಿ.ಮೀ.ಗಳಿದ್ದು (2,159 ಮೈಲಿಗಳು),[೧] (ಭೂಮಿಗಿಂತ ೩.೭ ಪಟ್ಟು ಕಡಿಮೆ), ಇದು ಸೌರಮಂಡಲದ ೫ನೇ ಅತಿ ದೊಡ್ಡ ಮತ್ತು ೫ನೇ ಅತಿ ಭಾರವಾದ ಉಪಗ್ರಹವಾಗಿದೆ. ಗ್ಯಾನಿಮಿಡ್, ಟೈಟನ್, ಕ್ಯಾಲಿಸ್ಟೊ, ಮತ್ತು ಐಓಗಳು ಚಂದ್ರನಿಗಿಂತ ದೊಡ್ಡದಾಗಿವೆ. ಭೂಮಿಯ ಮೇಲಿನ ಉಬ್ಬರವಿಳಿತಗಳಿಗೆ ಚಂದ್ರನ ಗುರುತ್ವಾಕರ್ಷಣೆಯೇ ಕಾರಣ. ಚಂದ್ರವು ಭೂಮಿಯ ಸುತ್ತ ೨೭.೩ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಭೂಮಿ-ಚಂದ್ರ-ಸೂರ್ಯ ವ್ಯವಸ್ಥೆಯಲ್ಲಿ ಆವರ್ತಿಸುವ ಬದಲಾವಣೆಗಳ ಕಾರಣದಿಂದ ಚಂದ್ರನ ಕಲೆಗಳು ಉಂಟಾಗುತ್ತವೆ. ಈ ಪಕ್ಷಗಳು ೨೯.೫ ದಿನಗಳಿಗೊಮ್ಮೆ ಆವರ್ತಿಸುತ್ತವೆ.
ಭೂಮಿಯನ್ನುಳಿದು ಮಾನವರು ನಡೆದಾಡಿರುವ ಏಕೈಕ ಆಕಾಶಕಾಯವೆಂದರೆ ಚಂದ್ರ. ಚಂದ್ರನನ್ನು ತಲುಪಿದ ಮೊದಲ ಮಾನವರಹಿತ ಗಗನನೌಕೆಯೆಂದರೆ ರಷ್ಯಾದ ಲೂನ ಕಾರ್ಯಕ್ರಮದ ನೌಕೆ. ಲೂನಾ ೧ ಭೂಮಿಯ ಗುರುತ್ವದಿಂದ ಮುಕ್ತಿ ಪಡೆದು ಚಂದ್ರನ ಬಳಿ ಹಾರಿಹೋದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಲೂನಾ ೨ ಚಂದ್ರನ ಮೇಲ್ಮೈ ತಲುಪಿದ ಮೊಟ್ಟಮೊದಲ ಮಾನವ ನಿರ್ಮಿತ ವಸ್ತು. ಸಾಮಾನ್ಯವಾಗಿ ಮರೆಯಾಗಿರುವ ಚಂದ್ರನ ಹಿಮ್ಮುಖವನ್ನು ಲೂನಾ ೩ ಚಿತ್ರೀಕರಿಸಿತು. ಈ ೩ ಘಟನೆಗಳೂ ೧೯೫೯ರಲ್ಲಿ ಆದವು. ಚಂದ್ರನ ಮೇಲೆ ನಿಧಾನವಾಗಿ ಇಳಿದ ಪ್ರಪ್ರಥಮ ನೌಕೆ ಲೂನಾ ೯ ಮತ್ತು ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ನೌಕೆ ಲೂನಾ ೧೦. ಇವೆರಡೂ ೧೯೬೬ರಲ್ಲಿ ನಡೆದವು.[೧] ಅಮೇರಿಕಾ ಸಂಯುಕ್ತ ಸಂಸ್ಥಾನದ ಅಪೋಲೋ ಕಾರ್ಯಕ್ರಮದ ಭಾಗವಾಗಿ, ಚಂದ್ರನತ್ತ ಮೊದಲಬಾರಿಗೆ ಮತ್ತು ಏಕಮಾತ್ರ ಮಾನವ ಸಹಿತ ಯಾನವು ಯಶಸ್ವಿಯಾಗಿ ಪೂರ್ಣಗೊಂಡಿತು. ಚಂದ್ರವನ್ನು ಪರಿಭ್ರಮಿಸಿದ ಮೊದಲ ಮಾನವ ಸಹಿತ ಯಾನವಾದ ಅಪೋಲೋ ೧೯೬೮ರಲ್ಲಿ ಮತ್ತು ಚಂದ್ರನ ಮೇಲೆ ಮಾನವರನ್ನು ತಲುಪಿಸಿದ ಅಪೋಲೋ ೧೧ ೧೯೬೯ರಲ್ಲಿ ಪೂರ್ಣಗೊಂಡವು.[೧]
ಅಪೋಲೋ ಕಾರ್ಯದ ಸಮಾಪ್ತಿಯೊಂದಿಗೆ ಮಾನವಸಹಿತ ಚಂದ್ರಾನ್ವೇಷಣೆಯು ಕೊನೆಗೊಂಡರೂ,ಇನ್ನೂ ಭವಿಷ್ಯದಲ್ಲಿ ಚಂದ್ರನತ್ತ ಮಾನವ ರಹಿತ ಅಥವಾ ಮಾನವ ಸಹಿತ ಗಗನನೌಕೆಗಳನ್ನು ಕಳುಹಿಸುವ ಯೋಜನೆಗಳನ್ನು ಹಲವು ದೇಶಗಳು ಹೊಂದಿವೆ. ಮಂಗಳ ಗ್ರಹದ ಯಾತ್ರೆಯ ತಯಾರಿಕೆಗಾಗಿ ಚಂದ್ರನ ಮೇಲೆ ಒಂದು ಶಾಶ್ವತ ನೆಲೆಯನ್ನು ಸ್ಥಾಪಿಸುವ ಉದ್ದೇಶ ಡಿಸೆಂಬರ್ ೪, ೨೦೦೬ರಂದು ನಾಸಾ ಸೂಚಿಸಿತು. ಈ ನೆಲೆಯ ನಿರ್ಮಾಣ ಕಾರ್ಯಕ್ಕೆ ಸುಮಾರು ೫ ವರ್ಷಗಳು ತಗಲುವ ನಿರೀಕ್ಷೆಯಿದೆ. ಇದರ ನಂತರ ೨೦೨೦ ರಲ್ಲಿ ಮೊದಲ ಯಾನಗಳು ಆರಂಭವಾಗುವ ನಿರೀಕ್ಷೆಯಲ್ಲಿದೆ.[೨]
ಚಂದ್ರನ ಮೇಲ್ಮೈ
ಚಂದ್ರನ ಎರಡು ಮುಖಗಳು
ಚಂದ್ರನು ಸಮಕಾಲಿಕ ಪರಿಭ್ರಮಣದಲ್ಲಿರುವುದರಿಂದ, ಅದರ ಒಂದೇ ಮುಖವು ಯಾವಾಗಲೂ ಭೂಮಿಯ ಕಡೆ ತಿರುಗಿರುತ್ತದೆ. ಬಹಳ ಹಿಂದೆ, ಭೂಮಿಯು ಉಂಟುಮಾಡಿದ ಉಬ್ಬರವಿಳಿತಗಳ ಘರ್ಷಣಾ ಪರಿಣಾಮಗಳಿಂದಾಗಿ, ಚಂದ್ರನ ಅಕ್ಷೀಯ ಪರಿಭ್ರಮಣವು ನಿಧಾನವಾಗಿ ಅದು ಭೂಮಿಯ ಜೊತೆ ಹೀಗೆ ಉಬ್ಬರವಿಳಿತಗಳ ಹಿಡಿತದಲ್ಲಿ ಸಿಲುಕಿಕೊಂಡಿತು.[೩] ಆದರೂ, ಚಂದ್ರನ ಕಕ್ಷೆಯ ಕೇಂದ್ರ ಚ್ಯುತಿಯ ಕಾರಣದಿಂದ ಉಂಟಾಗುವ ಸಣ್ಣ ಬದಲಾವಣೆಗಳ ಪರಿಣಾಮದಿಂದ, ಅದರ ಸುಮಾರು ೫೯% ಮೇಲ್ಮೈಯನ್ನು ಭೂಮಿಯಿಂದ ನೋಡಬಹುದು.[೧]
ಭೂಮಿಯಿಂದ ಕಾಣುವ ಚಂದ್ರನ ಮುಖವನ್ನು ಮುಮ್ಮುಖವೆಂದು ಮತ್ತು ಅದರ ವಿರುದ್ಧ ದಿಕ್ಕಿನಲ್ಲಿರುವ ಮುಖವನ್ನು ಹಿಮ್ಮುಖವೆಂದು ಕರೆಯಲಾಗುತ್ತದೆ. ಗಗನನೌಕೆಗಳು ಚಂದ್ರನ ಹಿಂದೆ ಇರುವಾಗ ಅವುಗಳು ಭೂಮಿಯ ನಡುವೆ ನೇರ ರೇಡಿಯೊ ಸಂಪರ್ಕವನ್ನು ಹೊಂದಿರುವುದಿಲ್ಲ. ಚಂದ್ರನ ಹಿಮ್ಮುಖವನ್ನು ಮೊದಲ ಬಾರಿಗೆ ೧೯೫೯ರಲ್ಲಿ ರಷ್ಯಾದ ಲೂನಾ ೩ ಶೋಧಕವು ಚಿತ್ರೀಕರಿಸಿತು. ಹಿಮ್ಮುಖವನ್ನು ಪ್ರತ್ಯೇಕಿಸುವ ಒಂದು ವೈಶಿಷ್ಟ್ಯವೆಂದರೆ, ಅದರಲ್ಲಿ ಬಹಳ ಕಡಿಮೆ ಮಟ್ಟಸ ವಲಯಗಳು ಇರುವುದು.
ಹುಣ್ಣಿಮೆಯ ದಿನ ಚಂದ್ರನ ಕಾಣದ ಮುಖದಲ್ಲಿ ಅಮಾವಾಸ್ಯೆಯಾಗಿರುತ್ತದೆ. ಹಾಗೆಯೇ ಅಮಾವಾಸ್ಯೆಯ ದಿನ ಕಾಣದ ಮುಖದಲ್ಲಿ ಹುಣ್ಣಿಮೆ.
ಮಟ್ಟಸಗಳು
ಚಂದ್ರನ ಮೇಲಿನ ಗಾಢವಾದ ಮತ್ತು ವೈಶಿಷ್ಟ್ಯಗಳಿಲ್ಲದ ಮಟ್ಟಸಗಳನ್ನು ಮೇರ್ಗಳೆಂದು ಕರೆಯಲಾಗುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಮೇರ್ ಎಂದರೆ ಸಮುದ್ರವೆಂದು ಅರ್ಥ. ಹಿಂದಿನ ಖಗೋಳಶಾಸ್ತ್ರಜ್ಞರು ಈ ವಲಯಗಳು ನೀರಿನಿಂದ ತುಂಬಿವೆಯೆಂದು ನಂಬಿದ್ದರಿಂದ, ಈ ಮಟ್ಟಸಗಳಿಗೆ ಮೇರ್ ಎಂದು ಹೆಸರಿಡಲಾಯಿತು. ಇವುಗಳು ವಾಸ್ತವದಲ್ಲಿ ವಿಸ್ತಾರವಾದ ಪ್ರಾಚೀನ ಕಪ್ಪುಶಿಲೆಯ ಲಾವಾ ಪ್ರವಾಹಗಳು. ಬಹುತೇಕ ಎಲ್ಲಾ ಮಟ್ಟಸಗಳೂ ಚಂದ್ರನ ಮುಮ್ಮುಖದ ಮೇಲೆಯೇ ಕಾಣುತ್ತವೆ ಹಾಗೂ ಹಿಮ್ಮುಖದ ಮೇಲೆ ಕೆಲವೇ ಕೆಲವು ಮಟ್ಟಸಗಳು ಕಂಡುಬರುತ್ತವೆ. ಹಿಮ್ಮುಖದ ಸುಮಾರು ೨% ವಿಸ್ತೀರ್ಣವು ಮಾತ್ರ ಈ ಮಟ್ಟಸಗಳಿಂದ ಆವೃತವಾಗಿದ್ದರೆ,[೪] ಮುಮ್ಮುಖದ ಸುಮಾರು ೩೧% ವಿಸ್ತೀರ್ಣವು ಮಟ್ಟಸಗಳಿಂದ ಆವೃತವಾಗಿದೆ.[೧] ಈ ವ್ಯತ್ಯಾಸಕ್ಕೆ ದೊರಕಿರುವ ಅತಿ ಸಂಭವನೀಯ ವಿವರಣೆಯೆಂದರೆ, ಮುಮ್ಮುಖದ ಗೋಳಾರ್ಧದಲ್ಲಿ ಶಾಖೋತ್ಪನ್ನ ಮಾಡುವ ವೈಶಿಷ್ಟ್ಯತೆಗಳು ಸಾಂದ್ರವಾಗಿರುವುದು. ಈ ರೀತಿಯ ಸಾಂದ್ರತೆಯು ಲೂನಾರ್ ಪ್ರಾಸ್ಪೆಕ್ಟರ್ನ ಗಾಮಾ-ಕಿರಣ ವರ್ಣಪಟಲಮಾಪಕದಿಂದ ದೊರಕಿದ ಭೂ-ರಾಸಾಯನಿಕ ನಕ್ಷೆಗಳಲ್ಲೂ ಕಂಡುಬರುತ್ತದೆ.[೫][೬] ಮುಮ್ಮುಖದ ಹಲವೆಡೆಗಳಲ್ಲಿ ಜ್ವಾಲಾಮುಖಿಗಳು ಮತ್ತು ಜ್ವಾಲಾಮುಖಿ ಗುಮ್ಮಟಗಳು ಇವೆ.[೭]
ಎತ್ತರ ಭೂಮಿಗಳು
ಮಟ್ಟಸಗಳಿಗಿಂತ ತಿಳಿ ಬಣ್ಣದಲ್ಲಿರುವ ವಲಯಗಳಿಗೆ ಟೆರೇ ಅಥವಾ ಇವು ಬಹುತೇಕ ಮಟ್ಟಸಗಳಿಗಿಂತ ಹೆಚ್ಚು ಎತ್ತರದಲ್ಲಿರುವುದರಿಂದ, ಎತ್ತರಭೂಮಿಗಳು ಎಂದು ಹೆಸರು. ಮುಮ್ಮುಖದ ಮೇಲೆ ಹಲವು ಎದ್ದು ಕಾಣುವ ಪರ್ವತ ಶ್ರೇಣಿಗಳು ದೊಡ್ಡ ಅಪ್ಪಳಿಕೆ ಬೋಗುಣಿಗಳ ಹೊರ ಪರಿಧಿಯಲ್ಲಿ ಕಂಡುಬರುತ್ತವೆ. ಈ ಬೋಗುಣಿಗಳಲ್ಲಿ ಹಲವು ಮಟ್ಟಸ ಕಪ್ಪುಶಿಲೆಗಳಿಂದ ತುಂಬಲ್ಪಟ್ಟಿವೆ. ಈ ಪರ್ವತ ಶ್ರೇಣಿಗಳು ಬೋಗುಣಿಗಳ ಹೊರ ಪರಿಧಿಗಳ ಅವಶೇಷಗಳೆಂದು ನಂಬಲಾಗಿದೆ.[೮] ಭೂಮಿಗಿಂತ ಭಿನ್ನವಾಗಿ, ಚಂದ್ರನ ಪರ್ವತಗಳು ಭೂಫಲಕಗಳ ಚಟುವಟಿಕೆಗಳಿಂದ ನಿರ್ಮಿತವಾಗಿಲ್ಲ.
ಚಂದ್ರನ ಉತ್ತರ ಧ್ರುವದ ಬಳಿ ಇರುವ ೭೩ ಕಿ.ಮೀ.- ಅಗಲದ ಪೇರಿ ಕುಳಿಯ ಪರಿಧಿಯಲ್ಲಿರುವ ನಾಲ್ಕು ಪರ್ವತ ವಲಯಗಳು ಇವೆ, ಗೋಳಾರ್ಧದ ಬೇಸಿಗೆಯಲ್ಲಿ ದಿನಪೂರ್ತಿ ಸೂರ್ಯನ ಬೆಳಕಿನಲ್ಲಿ ಮಿಂದಿರುತ್ತವೆ ಎಂದು ಕ್ಲೆಮೆಂಟೀನ್ ಯಾತ್ರೆಯು ತೆಗೆದ ಚಿತ್ರಗಳಿಂದ ತುಂಬಾ ಚೆನ್ನಾಗಿ ತಿಳಿದುಬರುತ್ತದೆ. ಹೆಸರಿಲ್ಲದ ಈ ಶಾಶ್ವತ ಬೆಳಕಿನ ಪರ್ವತಗಳು ಬೆಳಕಿನಲ್ಲಿ ಮಿಂದಿರುವುದಕ್ಕೆ ಕಾರಣ, ಚಂದ್ರನ ಅಕ್ಷೆಯ ಸಣ್ಣ ಓರೆ. ದಕ್ಷಿಣ ಧ್ರುವದಲ್ಲಿ ಈ ರೀತಿ ಯಾವುದೇ ಶಾಶ್ವತ ಬೆಳಕಿನ ವಲಯಗಳು ಕಂಡುಬಂದಿಲ್ಲ ಆದರೂ, ಶ್ಯಾಕ್ಲ್‌ಟನ್ ಕುಳಿಯ ಪರಿಧಿಯು ಚಂದ್ರ ದಿನದ ೮೦%ರಷ್ಟು ಕಾಲ ಬೆಳಕಿನಲ್ಲಿರುತ್ತದೆ.ಚಂದ್ರನ ಸಣ್ಣ ಅಕ್ಷೀಯ ಓರೆಯ ಇನ್ನೊಂದು ಪರಿಣಾಮವೆನೆಂದರೆ, ಧ್ರುವಗಳ ಬಳಿಯ ಕುಳಿಗಳಲ್ಲಿ ಶಾಶ್ವತವಾಗಿ ನೆರಳಿನಲ್ಲಿರುವ ಕೆಲವು ವಲಯಗಳಿವೆ.[೯]
ಅಪ್ಪಳಿಕೆ ಕುಳಿಗಳು
ಚಂದ್ರನ ಮೇಲ್ಮೈನ ಎಲ್ಲಾ ಭಾಗಗಳೂ ಅಪ್ಪಳಿಕೆ ಕುಳಿಗಳ ಪರಿಣಾಮವನ್ನು ತೋರಿಸುತ್ತವೆ.[೧೦] ಬಹುತೇಕ ಕುಳಿಗಳು ಚಂದ್ರನ ಉದ್ಭವದ ಮೊದಲ ೧೦೦ ಕೋಟಿ ವರ್ಷಗಳಲ್ಲಿ ಆಕಾಶಕಾಯಗಳು ಮತ್ತು ಧೂಮಕೇತುಗಳ ಅಪ್ಪಳಿಕೆಗಳಿಂದ ಉಂಟಾದವು. ೧ ಕಿ.ಮೀ. ಗಿಂತ ಹೆಚ್ಚು ವ್ಯಾಸವನ್ನು ಹೊಂದಿರುವ ಸುಮಾರು ೫ ಲಕ್ಷ ಕುಳಿಗಳನ್ನು ಚಂದ್ರನ ಮೇಲ್ಮೈ ಮೇಲೆ ಕಾಣಬಹುದು. ನಿಗದಿತ ಕಾಲಾವಧಿಯಲ್ಲಿ ಸುಮಾರು ಒಂದೇ ಪ್ರಮಾಣದಲ್ಲಿ ಕುಳಿಗಳು ರೂಪುಗೊಳ್ಳುವುದರಿಂದ, ಒಂದು ನಿಗದಿತ ವಿಸ್ತೀರ್ಣದಲ್ಲಿರುವ ಕುಳಿಗಳ ಸಂಖ್ಯೆಯಿಂದ ಮೇಲ್ಮೈನ ವಯಸ್ಸನ್ನು ಅಂದಾಜು ಮಾಡಬಹುದು (ಕುಳಿ ಎಣಿಕೆ ಲೇಖನವನ್ನು ನೋಡಿ). ವಾಯುಮಂಡಲ ಮತ್ತು ಹವಾಮಾನಗಳ ಅನುಪಸ್ಥಿತಿಯ ಕಾರಣ, ಚಂದ್ರನ ಮೇಲೆ ಕುಳಿಗಳು ಭೂಮಿಯ ಕುಳಿಗಳಿಗೆ ಹೋಲಿಸಿದರೆ ಇನ್ನೂ ಹೊಚ್ಚ ಹೊಸದರಂತೆ ಇವೆ.
ಚಂದ್ರನ ಮೇಲೆ ಅತಿ ದೊಡ್ಡ ಕುಳಿಯಾದ ದಕ್ಷಿಣ ಧ್ರುವ-ಐಟ್ಕಿನ್ ಬೋಗುಣಿಯು ಸೌರಮಂಡಲದಲ್ಲೇ ತಿಳಿದಿರುವಂತೆ ಅತಿ ದೊಡ್ಡ ಕುಳಿಯೂ ಆಗಿದೆ. ಈ ಅಪ್ಪಳಿಕೆ ಬೋಗುಣಿಯು ಚಂದ್ರನ ಹಿಮ್ಮುಖದಲ್ಲಿ ದಕ್ಷಿಣ ಧ್ರುವ ಮತ್ತು ಸಮಭಾಜಕಗಳ ನಡುವೆ ಸ್ಥಿತವಾಗಿದ್ದು, ಸುಮಾರು ೨,೨೪೦ ಕಿ.ಮೀ.ಗಳ ವ್ಯಾಸವನ್ನು ಮತ್ತು ೧೩ ಕಿ.ಮೀ.ಗಳ ಆಳವನ್ನು ಹೊಂದಿದೆ.[೧೧] ಚಂದ್ರನ ಮುಮ್ಮುಖದ ಮೇಲಿರುವ ಮುಖ್ಯ ಕುಳಿಗಳಲ್ಲಿ ಇಂಬ್ರಿಯಂ, ಸೆರೆನಿಟಾಟಿಸ್, ಕ್ರಿಸಿಯಂ, ಮತ್ತು ನೆಕ್ಟಾರಿಸ್ಗಳು ಸೇರಿವೆ.
ಆವರಣ ಪ್ರಸ್ತರ
ಚಂದ್ರನ ಚಿಪ್ಪಿನ ಮೇಲೆ, ಅಪ್ಪಳಿಕೆಗಳಿಂದ ಬಹಳ ನುಣುಪುಗೊಂಡು, ಆವರಣ ಪ್ರಸ್ತರವೆಂದು ಕರೆಯಲಾಗುವ ಒಂದು ಹೊರಪದರವಿದೆ. ಈ ಪದರವು ಅಪ್ಪಳಿಕೆ ಪ್ರಕ್ರಿಯೆಗಳಿಂದ ರೂಪುಗೊಳ್ಳುವುದರಿಂದ, ಹಳೆಯ ಪದರಗಳು ಹೊಸದಾಗಿ ರೂಪುಗೊಂಡ ಪದರಗಳಿಗಿಂತ ಹೆಚ್ಚು ದಪ್ಪವಾಗಿರುತ್ತವೆ. ಆವರಣ ಪ್ರಸ್ತರವು ಮಟ್ಟಸಗಳಲ್ಲಿ ೩ ರಿಂದ ೫ ಮೀ.ಗಳವರೆಗೂ ಮತ್ತು ಎತ್ತರ ಭೂಮಿಗಳಲ್ಲಿ ೧೦ ರಿಂದ ೨೦ ಮೀ. ಗಳವರೆಗೂ ದಪ್ಪವಾಗಿರುತ್ತದೆ.[೧೨] ನುಣುಪಾದ ಆವರಣ ಪ್ರಸ್ತರದ ಕೆಳಗೆ "ಬೃಹದಾವರಣ ಪ್ರಸ್ತರ"ವೆಂದು ಕರೆಯಲಾಗುವ ಒಂದು ಪದರವಿದೆ. ಇದು ಆವರಣ ಪ್ರಸ್ತರಕ್ಕಿಂತ ಬಹಳ ಹೆಚ್ಚು ದಪ್ಪವಿದ್ದು (ಸುಮಾರು ಹತ್ತಾರು ಕಿ.ಮೀ.ಗಳು) ಬಿರುಕುಗಳುಳ್ಳ ಆಧಾರಶಿಲೆಯಿಂದ ಕೂಡಿದೆ.[೧೩]
ನೀರಿನ ಅಸ್ತಿತ್ವ
ಚಂದ್ರನ ಮೇಲ್ಮೈಯನ್ನು ಧೂಮಕೇತುಗಳು ಮತ್ತು ಉಲ್ಕಾಪಿಂಡಗಳು ನಿರಂತರವಾಗಿ ಅಪ್ಪಳಿಸಿ ಅಲ್ಪ-ಸ್ವಲ್ಪ ನೀರನ್ನು ಚಂದ್ರನ ಮೇಲ್ಮೈ ಮೇಲೆ ಸೇರಿಸಿವೆ. ಈ ನೀರಿನ ಕಣಗಳು ಸಾಮಾನ್ಯವಾಗಿ ಸೂರ್ಯನ ಬೆಳಕಿನಿಂದ ವಿಭಜಿಸಲ್ಪಟ್ಟು, ಹೊರಬರುವ ಆಮ್ಲಜನಕ ಮತ್ತು ಜಲಜನಕದ ಕಣಗಳು ಬಾಹ್ಯಾಕಾಶಕ್ಕೆ ಹಾರಿ ಹೋಗುತ್ತವೆ. ಅಪೋಲೋ ಗಗನಯಾತ್ರಿಗಳು ಸಮಭಾಜಕದ ಬಳಿ ಸಂಗ್ರಹಿಸಿದ ಶಿಲಾ ಮಾದರಿಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ನೀರಿನ ಅಂಶ ಪತ್ತೆಯಾಗಿರುವುದು, ಚಂದ್ರನ ಮೇಲ್ಮೈ ಮೇಲೆ ತೇವಾಂಶವಿಲ್ಲದಿರುವುದಕ್ಕೆ ಸಾಕ್ಷಿಯಂತಿದೆ. ಆದರೆ, ಚಂದ್ರನ ಅಕ್ಷೆಯು ಕ್ರಾಂತಿವೃತ್ತದ ಸಮತಳಕ್ಕೆ ಸ್ವಲ್ಪ ಓರೆಯಲ್ಲಿ ಇರುವುದರಿಂದ (ಕೇವಲ ೧.೫°), ಧ್ರುವಗಳ ಬಳಿಯಿರುವ ಕೆಲವು ಆಳವಾದ ಕುಳಿಗಳು ಎಂದೂ ಸೂರ್ಯನ ಬೆಳಕನ್ನು ಪಡೆಯುವುದೇ ಇಲ್ಲ ಹಾಗೂ ಶಾಶ್ವತವಾಗಿ ನೆರಳಿನಲ್ಲಿರುತ್ತವೆ (ಶ್ಯಾಕ್ಲ್‌ಟನ್ ಕುಳಿಯನ್ನು ನೋಡಿ). ಹೀಗಾಗಿ, ಈ ಕುಳಿಗಳನ್ನು ಪ್ರವೇಶಿಸಿದ ಯಾವುದೇ ನೀರಿನ ಕಣಗಳು ದೀರ್ಘಕಾಲಗಳವರೆಗೆ ಸ್ಥಿರವಾಗಿರಬಹುದು.
ದಕ್ಷಿಣ ಧ್ರುವದಲ್ಲಿ ಈ ರೀತಿ ನೆರಳಿನಲ್ಲಿರುವ ಕುಳಿಗಳ ನಕ್ಷೆಯನ್ನು ಕ್ಲೆಮೆಂಟೀನ್ ತಯಾರಿಸಿದೆ.[೧೪] ೧೪,೦೦೦ ಚ.ಕಿ.ಮೀ.ನಷ್ಟು ವಿಸ್ತೀರ್ಣವು ಶಾಶ್ವತ ನೆರಳಿನಲ್ಲಿ ಇರಬಹುದೆಂದು ಗಣಕೀಕೃತ ಛದ್ಮನಗಳು ಸೂಚಿಸುತ್ತವೆ.[೯] ಕ್ಲೆಮೆಂಟೀನ್ ರೆಡಾರ್ ಪ್ರಯೋಗಗಳ ಫಲಿತಾಂಶಗಳು ಮೇಲ್ಮೈನ ಬಳಿ ಸಣ್ಣ, ಹೆಪ್ಪುಗಟ್ಟಿದ ನೀರಿನ ಮಡುಗಳ ಅಸ್ತಿತ್ವದೊಂದಿಗೆ ಸಮಂಜಸವಾಗಿವೆ. ಇದಲ್ಲದೆ, ಲೂನಾರ್ ಪ್ರಾಸ್ಪೆಕ್ಟರ್ನ ನ್ಯೂಟ್ರಾನ್ ವರ್ಣಪಟಲಮಾಪಕದ ಮಾಹಿತಿಯ ಪ್ರಕಾರ, ಧ್ರುವ ವಲಯದ ಬಳಿಯ ಆವರಣ ಪ್ರಸ್ತರದ ಮೇಲಿನ ಒಂದು ಮೀಟರ್ ಆಳದವರೆಗೂ ಅಸಮಂಜಸವಾಗಿ ಹೆಚ್ಚಿನ ಜಲಜನಕದ ಸಾಂದ್ರತೆಯು ಕಂಡುಬರುತ್ತದೆ.[೧೫] ಒಟ್ಟು ನೀರಿನ ಹಿಮದ ಪ್ರಮಾಣದ ಅಂದಾಜು ಸುಮಾರು ೧ ಘ.ಕಿ.ಮೀ.
ಗಣಿಗಳನ್ನು ತೋಡಿ ಹಿಮವನ್ನು ತೆಗೆದು, ಸೌರ ಫಲಕಗಳನ್ನೊಳಗೊಂಡ ವಿದ್ಯುತ್ ಉತ್ಪನ್ನ ಘಟಕಗಳಿಂದ ಅಥವಾ ಪರಮಾಣು ಉತ್ಪಾದಕಗಳಿಂದ ಹಿಮವನ್ನು ಆಮ್ಲಜನಕ ಮತ್ತು ಜಲಜನಕದ ಅಣುಗಳಾಗಿ ವಿಭಜಿಸಬಹುದು. ಭೂಮಿಯಿಂದ ಚಂದ್ರನತ್ತ ನೀರಿನ (ಅಥವಾ ಜಲಜನಕದ/ಆಮ್ಲಜನಕದ) ಸಾಗಾಣಿಕೆಯು ಅಸಂಭವನೀಯವಾಗಿ ದುಬಾರಿಯಾಗಿರುವುದರಿಂದ, ಬಳಕೆಯೋಗ್ಯ ಪ್ರಮಾಣದಲ್ಲಿ ನೀರಿನ ಅಸ್ತಿತ್ವವು ಚಾಂದ್ರ ವಸತಿಗೆ ಒಂದು ಮುಖ್ಯವಾದ ವಿಷಯ.
ಭೌತಿಕ ಗುಣಲಕ್ಷಣಗಳು
ಆಂತರಿಕ ರಚನೆ
ಚಂದ್ರವು ಒಂದು ವಿಭೇದಿತ ಕಾಯವಾಗಿದ್ದು, ಭೂರಸಾಯನಿಕವಾಗಿ ವಿಭಿನ್ನವಾದ ಚಿಪ್ಪು, ಕವಚ, ಮತ್ತು ಗರ್ಭವನ್ನು ಹೊಂದಿದೆ. ಸುಮಾರು ೪೫೦ಕೋಟಿ ವರ್ಷಗಳ ಹಿಂದೆ ಚಂದ್ರನ ಜನ್ಮವಾದ ಸ್ವಲ್ಪ ಕಾಲದ ನಂತರ ಚಂದ್ರನ ಶಿಲಾಪಾಕ ಸಾಗರದ ಭಿನ್ನ ಸ್ಫಟಿಕೀಕರಣದಿಂದ ಈ ರಚನೆಯು ಉಂಟಾಯಿತೆಂದು ನಂಬಲಾಗಿದೆ. ಚಂದ್ರನ ಹೊರಭಾಗವನ್ನು ಕರಗಿಸಲು ಬೇಕಾದ ಶಕ್ತಿಯು ಬೃಹತ್ ಅಪ್ಪಳಿಕೆ ಮತ್ತು ನಂತರ ಭೂಮಿಯ ಕಕ್ಷೆಯಲ್ಲಿ ಪದಾರ್ಥಗಳ ಮರುಸಂಚಯನಗಳಿಂದ ಒದಗಿಬಂದಿತೆಂದು ಹೇಳಲಾಗಿದೆ. ಶಿಲಾಪಾಕ ಸಾಗರದ ಈ ಸ್ಫಟಿಕೀಕರಣವು ಕಬ್ಬಿಣ-ಮೆಗ್ನೀಷಿಯಂಗಳು ಹೇರಳವಾಗಿರುವ ಕವಚವನ್ನು ಮತ್ತು ಸೋಡಿಯಂ-ಕ್ಯಾಲ್ಷಿಯಂಗಳು ಹೇರಳವಾಗಿರುವ ಚಿಪ್ಪನ್ನೂ ಸೃಷ್ಟಿಸಿರುತ್ತದೆ (ಕೆಳಗಿನ ಉದ್ಭವ ಮತ್ತು ಭೂವೈಜ್ಞಾನಿಕ ವಿಕಸನವನ್ನು ನೋಡಿ).
ಕಕ್ಷೆಯಿಂದ ತಯಾರಿಸಲಾದ ಭೂರಸಾಯನಿಕ ನಕ್ಷೆಗಳ ಪ್ರಕಾರ, ಚಂದ್ರನ ಚಿಪ್ಪು ಅಲ್ಯುಮಿನಂ ಸಿಲಿಕೇಟ್, ಪೊಟಾಷಿಯಂ, ಸೋಡಿಯಂ, ಕ್ಯಾಲ್ಷಿಯಂ, ಇತ್ಯಾದಿಗಳ ಲವಣಗಳಿಂದ ಕೂಡಿದೆ.[೧೬] ಈ ಮಾಹಿತಿಯು ಶಿಲಾಪಾಕ ಸಾಗರ ವಾದದ ಜೊತೆ ಸಮಂಜಸವಾಗಿದೆ. ಮೂಲಧಾತುಗಳ ನೋಟದಲ್ಲಿ, ಚಂದ್ರನ ಚಿಪ್ಪು ಮುಖ್ಯವಾಗಿ ಆಮ್ಲಜನಕ, ಸಿಲಿಕಾನ್, ಮೆಗ್ನೀಷಿಯಂ, ಕಬ್ಬಿಣ, ಕ್ಯಾಲ್ಷಿಯಂ, ಮತ್ತು ಅಲ್ಯುಮಿನಂಗಳಿಂದ ಕೂಡಿದ್ದು, ಸ್ವಲ್ಪ ಪ್ರಮಾಣದಲ್ಲಿ ಟೈಟೇನಿಯಂ, ಯುರೇನಿಯಂ, ಥೋರಿಯಂ, ಪೊಟಾಷಿಯಂ, ಮತ್ತು ಜಲಜನಕಗಳು ಸಹ ಕಂಡುಬರುತ್ತವೆ. ಭೂಭೌತಶಾಸ್ತ್ರೀಯ ತಂತ್ರಜ್ಞಾನವನ್ನು ಬಳಸಿ ಮಾಡಿದ ಅಂದಾಜುಗಳ ಪ್ರಕಾರ, ಚಿಪ್ಪಿನ ಸರಾಸರಿ ದಪ್ಪ ಸುಮಾರು ೫೦ ಕಿ.ಮೀ.ಗಳು.[೧೭]
ಹಿಂದೊಮ್ಮೆ ಕವಚವು ಭಾಗಶಃ ಕರಗಿ ಚಂದ್ರನ ಮೇಲ್ಮೈ ಮೇಲೆ ಮಟ್ಟಸದ ಕಪ್ಪುಶಿಲೆಯಾಗಿ ಹೊರಚಿಮ್ಮಿತು. ಕವಚವು ಮುಖ್ಯವಾಗಿ ಆಲಿವೀನ್, ಆರ್ಥೋಪೈರಾಕ್ಸೀನ್ ಮತ್ತು ಕ್ಲಿನೋಪೈರಾಕ್ಸೀನ್ಗಳಿಂದ ಕೂಡಿದೆಯೆಂದೂ, ಮತ್ತು ಚಂದ್ರನ ಕವಚವು ಭೂಮಿಯ ಕವಚಕ್ಕಿಂತ ಹೆಚ್ಚು ಕಬ್ಬಿಣವನ್ನು ಹೊಂದಿದೆಯೆಂದೂ, ಈ ಕಪ್ಪುಶಿಲೆಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಕೆಲವು ಚಾಂದ್ರ ಕಪ್ಪುಶಿಲೆಗಳಲ್ಲಿ ಹೇರಳವಾಗಿ ಟೈಟೇನಿಯಂ ಧಾತುವು (ಇದು ಇಲ್ಮೆನೈಟ್ ಖನಿಜದಲ್ಲಿ ಸಿಗುತ್ತದೆ) ಇರುವುದರಿಂದ, ಕವಚವು ತನ್ನ ರಚನೆಯಲ್ಲಿ ಹಲವು ವಿಭಿನ್ನ ಅಂಶಗಳನ್ನು ಹೊಂದಿದೆಯೆಂದು ನಾವು ತರ್ಕಿಸಬಹುದು. ಕವಚದ ಆಳದಲ್ಲಿ, ಮೇಲ್ಮೈಯ ಸುಮಾರು ೧೦೦೦ ಕಿ.ಮೀ. ಕೆಳಗೆ ಚಂದ್ರಕಂಪನಗಳು ಆಗುತ್ತವೆ. ಮಾಸಿಕ ಕಾಲಾವಧಿಗಳಲ್ಲಿ ಆಗುವ ಈ ಕಂಪನಗಳಿಗೆ ಕಾರಣ, ಭೂಮಿಯ ಸುತ್ತ ಚಂದ್ರನ ಉತ್ಕೇಂದ್ರೀಯ ಕಕ್ಷೆಯಿಂದ ಉಂಟಾಗುವ ಉಬ್ಬರವಿಳಿತಗಳ ಬಲಗಳು. ಮೇಲ್ಮೈಯ ಹತ್ತಿರವೇ ಉದ್ಭವವಾದ ಕೆಲವು ಚಂದ್ರಕಂಪನಗಳನ್ನೂ ಪತ್ತೆಹಚ್ಚಲಾಗಿದೆ. ವಿರಳವಾದ ಈ ಚಂದ್ರಕಂಪನಗಳು ಉಬ್ಬರವಿಳಿತಗಳಿಗೆ ಸಂಬಂಧಿಸಿದಂತೆ ಕಂಡುಬರುವುದಿಲ್ಲ.[೧೭]
ಚಂದ್ರನ ಸರಾಸರಿ ಸಾಂದ್ರತೆಯು ೩,೩೪೬.೪ ಕಿ.ಗ್ರಾಂ/ಮೀ೩ ಇದ್ದು, ಐಓದ ನಂತರ ಸೌರಮಂಡಲದಲ್ಲಿ ಎರಡನೇ ಅತಿ ಹೆಚ್ಚು ಸಾಂದ್ರತೆಯುಳ್ಳ ನೈಸರ್ಗಿಕ ಉಪಗ್ರಹವಾಗಿದೆ. ಹೀಗಿದ್ದರೂ, ಚಂದ್ರನ ಒಳಭಾಗವು ಸಣ್ಣದೆಂದು (ಸುಮಾರು ೩೫೦ ಕಿ.ಮೀ. ಅಥವಾ ಕಡಿಮೆ ತ್ರಿಜ್ಯ) ಹಲವು ಸಾಕ್ಷ್ಯಾಧಾರಗಳು ತೋರಿಸಿಕೊಡುತ್ತವೆ.[೧೭] ಬಹುತೇಕ ಬೇರೆಲ್ಲಾ ಶಿಲಾಕಾಯಗಳ ಒಳಭಾಗಗಳು ಆಯಾ ಕಾಯದ ಸುಮಾರು ಅರ್ಧ ಗಾತ್ರವನ್ನು ಹೊಂದಿದ್ದರೆ, ಚಂದ್ರನ ಒಳಭಾಗವು ಅದರ ಒಟ್ಟು ಗಾತ್ರದ ೨೦% ಮಾತ್ರ ಇದೆ. ಚಂದ್ರ-ಗರ್ಭದ ರಚನಾಂಶಗಳು ನಿಖರವಾಗಿ ತಿಳಿದಿಲ್ಲದಿದ್ದರೂ, ಅದು ಮುಖ್ಯವಾಗಿ ಕಬ್ಬಿಣದಿಂದ ಕೂಡಿದ್ದು, ಸ್ವಲ್ಪ ಪ್ರಮಾಣದ ಗಂಧಕ ಮತ್ತು ನಿಕಲ್‌ಗಳೊಂದಿಗೆ ಮಿಶ್ರವಾಗಿದೆ ಎಂದು ಸಾಮಾನ್ಯ ನಂಬಿಕೆ. ಚಂದ್ರನ ಸಮಯ-ವ್ಯತ್ಯಯಿತ ಪರಿಭ್ರಮಣೆಯ ವಿಶ್ಲೇಷಣೆಯಿಂದ, ಅದರ ಒಳಭಾಗವು ಕಡೇಪಕ್ಷ ಸ್ವಲ್ಪವಾದರೂ ಕರಗಿದೆ ಎಂದು ತಿಳಿದುಬರುತ್ತದೆ.[೧೮]
ಸ್ಥಳವರ್ಣನೆ
ಚಂದ್ರನ ಮೇಲ್ಮೈ ಎತ್ತರಗಳನ್ನು ಲೇಸರ್ ಉನ್ನತಿಮಾಪನ ಮತ್ತು ಚಿತ್ರಗಳ ವಿಶ್ಲೇಷಣೆಗಳ ಸಹಾಯದಿಂದ ಅಳೆಯಲಾಗಿದೆ. ಇತ್ತೀಚೆಗೆ, ಕ್ಲೆಮೆಂಟೀನ್ ಯಾತ್ರೆಯಿಂದಲೂ ಇದರ ಬಗ್ಗೆ ಮಾಹಿತಿಗಳು ದೊರಕಿವೆ. ಚಂದ್ರನ ಮೇಲೆ ಅತಿ ಹೆಚ್ಚು ಗಮನಾರ್ಹವಾಗಿ ಕಾಣುವ ವೈಶಿಷ್ಟ್ಯವೆಂದರೆ ಹಿಮ್ಮುಖದ ಬೃಹತ್ ದಕ್ಷಿಣ ಧ್ರುವ-ಐಟ್ಕಿನ್ ಬೋಗುಣಿ. ಇದು ಚಂದ್ರನ ಮೇಲಿನ ಕನಿಷ್ಠ ಉನ್ನತಿಯನ್ನು ಹೊಂದಿದೆ. ಗರಿಷ್ಠ ಉನ್ನತಿಗಳು ಈ ವಲಯದ ಈಶಾನ್ಯ ದಿಕ್ಕಿನಲ್ಲಿ ಸ್ವಲ್ಪವೇ ದೂರದಲ್ಲಿವೆ. ಇಂಬ್ರಿಯಂ, ಸೆರೆನಿಟಾಟಿಸ್, ಕ್ರಿಸಿಯಂ, ಸ್ಮಿಥಿ, ಮತ್ತು ಓರಿಯಂಟೇಲ್ಗಳಂಥ ಹಲವು ದೊಡ್ಡ ಅಪ್ಪಳಿಕೆ ಬೋಗುಣಿಗಳೂ ಇಂತಹ ಕಡಿಮೆ ಉನ್ನತಿ ಮತ್ತು ಎತ್ತರವಾದ ಪರಿಧಿಗಳನ್ನು ಹೊಂದಿವೆ. ಚಂದ್ರನ ಆಕಾರದ ಇನ್ನೊಂದು ಸೋಜಿಗದ ಸಂಗತಿಯೆಂದರೆ, ಹಿಮ್ಮುಖದ ಸರಾಸರಿ ಉನ್ನತಿಗಳು ಮುಮ್ಮುಖದ ಉನ್ನತಿಗಳಿಗಿಂತ ಸುಮಾರು ೧.೯ ಕಿ.ಮೀ. ಅಧಿಕವಾಗಿವೆ.
ಗುರುತ್ವ ಕ್ಷೇತ್ರ
ಚಂದ್ರನನ್ನು ಪರಿಭ್ರಮಿಸುವ ಗಗನನೌಕೆಯಿಂದ ರೇಡಿಯೋ ತರಂಗಗಳನ್ನು ಹೊರಸೂಸಿ, ಆ ತರಂಗಗಳ ಪ್ರತಿಫಲನಗಳಿಂದ ಚಂದ್ರನ ಗುರುತ್ವ ಕ್ಷೇತ್ರವನ್ನು ಮಾಪಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಡಾಪ್ಲರ್ ಪರಿಣಾಮವನ್ನು ಬಳಸಲಾಗುತ್ತದೆ. ಗಗನನೌಕೆಯಿಂದ ಭೂಮಿಗಿರುವ ದೂರ, ಮತ್ತು ಪ್ರತಿಫಲಿತ ರೇಡಿಯೊ ತರಂಗಗಳ ಆವೃತ್ತಿಯಲ್ಲಿನ ಸೂಕ್ಷ್ಮ ಬದಲಾವಣೆಗಳಿಂದ ಗಗನನೌಕೆಯ ವೇಗೋತ್ಕರ್ಷವನ್ನು ತರ್ಕಿಸಬಹುದು. ಚಂದ್ರನ ಗುರುತ್ವ ಕ್ಷೇತ್ರವು ಗಗನನೌಕೆಯ ಕಕ್ಷೆಯನ್ನು ನಿರ್ಧರಿಸುವುದರಿಂದ, ಒಂದು ಸಾರಿ ಕಕ್ಷೆಯು ನಿಖರವಾಗಿ ತಿಳಿದುಬಂದ ಮೇಲೆ ಅದರಿಂದ ಗುರುತ್ವ ಅಸಮಂಜಸತೆಗಳನ್ನು ಕಂಡುಹಿಡಿಯಬಹುದು. ಆದರೆ, ಚಂದ್ರನ ಸಮಕಾಲಿಕ ಪರಿಭ್ರಮಣೆಯ ಕಾರಣದಿಂದಾಗಿ, ಚಂದ್ರನ ಹಿಮ್ಮುಖದ ಮೇಲೆ ಗಗನನೌಕೆಯ ಸ್ಥಿತಿಗತಿಗಳನ್ನು ಕಂಡುಹಿಡಿಯಲು ಅಸಾಧ್ಯ. ಹೀಗಾಗಿ, ಹಿಮ್ಮುಖದ ಗುರುತ್ವ ಕ್ಷೇತ್ರವನ್ನು ಇನ್ನೂ ನಿಖರವಾಗಿ ನಕ್ಷಿಸಲಾಗಿಲ್ಲ.
ಚಂದ್ರನ ಗುರುತ್ವ ಕ್ಷೇತ್ರದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ, ಕೆಲವು ದೊಡ್ಡ ಅಪ್ಪಳಿಕೆ ಕುಳಿಗಳಿಗೆ ಸಂಬಂಧಿಸಿದ ಗಮನಾರ್ಹವಾದ ಗುರುತ್ವ ಅಸಮಂಜಸತೆಗಳು. ಇವುಗಳನ್ನು ಮ್ಯಾಸ್ಕಾನ್ಗಳೆಂದು ಕರೆಯಲಾಗುತ್ತದೆ. ಈ ಅಸಮಂಜಸತೆಗಳು ಗಗನನೌಕೆಗಳ ಕಕ್ಷೆಯ ಮೇಲೆ ಬಹಳಷ್ಟು ಪ್ರಭಾವ ಬೀರುವುದರಿಂದ, ಮಾನವ ರಹಿತ/ಸಹಿತ ಚಂದ್ರಯಾನದ ಸಿದ್ಧತೆಗೆ ನಿಖರವಾದ ಗುರುತ್ವ ಮಾದರಿಗಳು ಅತ್ಯವಶ್ಯಕ. ಅಪೋಲೋ-ಪೂರ್ವ ನೌಕಾಚಾಲನಾ ಪರೀಕ್ಷೆಗಳಲ್ಲಿ, ನೌಕೆಗಳು ಇಳಿಯುವ ತಾಣಗಳು ನಿರೀಕ್ಷೆಗಿಂತ ತುಂಬಾ ಬೇರೆಯಾಗಿರುತ್ತಿದ್ದವು. ಈ ಸಮಸ್ಯೆಯ ಕಾರಣದಿಂದ ಚಂದ್ರ ಪರಿಭ್ರಮಕದ ಮಾಹಿತಿಯನ್ನು ವಿಶ್ಲೇಷಿಸಿದಾಗ, ಗುರುತ್ವ ಅಸಮಂಜಸತೆಗಳು ತಿಳಿದುಬಂದವು.[೧೯]
ಕಾಂತಕ್ಷೇತ್ರ
ಭೂಮಿಗೆ ಹೊಲಿಸಿದರೆ, ಚಂದ್ರನ ಬಾಹ್ಯ ಕಾಂತಕ್ಷೇತ್ರವು ಬಹಳ ದುರ್ಬಲವಾಗಿದೆ. ಇದಲ್ಲದೆ ಈ ಎರಡು ಕಾಂತಕ್ಷೇತ್ರಗಳ ನಡುವೆಯಿರುವ ಬೇರೆ ದೊಡ್ಡ ವ್ಯತ್ಯಾಸಗಳೆಂದರೆ, ಚಂದ್ರನು ಪ್ರಸ್ತುತದಲ್ಲಿ ದ್ವಿಧ್ರುವ ಕಾಂತಕ್ಷೇತ್ರವನ್ನು ಹೊಂದಿಲ್ಲ (ಅದರ ಒಳಭಾಗದಲ್ಲಿ ಉತ್ಪಾದಕವಿದ್ದಿದ್ದರೆ ದ್ವಿಧ್ರುವವು ಉಂಟಾಗುತ್ತಿತ್ತು), ಮತ್ತು ಚಂದ್ರನ ಪ್ರಸ್ತುತದ ಕಾಂತಕ್ಷೇತ್ರವು ಸಂಪೂರ್ಣವಾಗಿ ಚಿಪ್ಪಿನಿಂದಲೇ ಉದ್ಭವವಾಗಿದೆ. ಚಂದ್ರನ ಇತಿಹಾಸದ ಮೊದಲ ಕಾಲಗಳಲ್ಲಿ ಅದರೊಳಗೆ ಒಂದು ಉತ್ಪಾದಕವು ಇನ್ನೂ ಜೀವಂತವಾಗಿದ್ದಾಗ ಚಿಪ್ಪಿನ ಭಾಗಗಳು ಸಹ ಕಾಂತಕ್ಷೇತ್ರವನ್ನು ಪಡೆದವು ಎಂದು ಒಂದು ವಾದವು ಹೇಳುತ್ತದೆ. ಆದರೆ, ಚಂದ್ರನ ಒಳಭಾಗದ ಸಣ್ಣ ಗಾತ್ರವು ಈ ವಾದಕ್ಕೆ ವಿರೋಧವಾಗಿದೆ. ಪರ್ಯಾಯವಾಗಿ, ಚಂದ್ರನಂತಹ ವಾಯುಮಂಡಲರಹಿತ ಆಕಾಶಕಾಯಗಳ ಮೇಲೆ ಅಪ್ಪಳಿಕೆಗಳಿಂದಲೂ ಅಸ್ಥಿರವಾದ ಕಾಂತಕ್ಷೇತ್ರಗಳು ಉದ್ಭವವಾಗಬಹುದು. ಈ ವಾದಕ್ಕೆ ಬೆಂಬಲವಾಗುವಂತೆ, ಚಿಪ್ಪಿನ ಅತಿ ಶಕ್ತಿಯುತ ಮತ್ತು ದೊಡ್ಡ ಕಾಂತಕ್ಷೇತ್ರಗಳು ದೊಡ್ಡ ಅಪ್ಪಳಿಕೆ ಕುಳಿಗಳ ಬಳಿಯೇ ಇವೆ. ಅಪ್ಪಳಿಕೆಯಿಂದುಂಟಾದ ಪ್ಲಾಸ್ಮಾ ಮೋಡವು ಪರಿಸರದ ಕಾಂತಕ್ಷೇತ್ರದ ಅಸ್ತಿತ್ವದಲ್ಲಿ ಹಿಗ್ಗುವುದರಿಂದ ಅಸ್ಥಿರ ಕಾಂತಕ್ಷೇತ್ರಗಳು ಉದ್ಭವವಾಗಬಹುದೆಂದು ಸೂಚಿಸಲಾಗಿದೆ.[೨೦]
ವಾಯುಮಂಡಲ
ಚಂದ್ರವು ಬಹಳ ವಿರಳವಾದ, ಸುಮಾರು ನಿರ್ವಾತದಂತಹ ವಾಯುಮಂಡಲವನ್ನು ಹೊಂದಿದೆ. ಈ ವಾಯುಮಂಡಲದ ಒಂದು ಮೂಲವೆಂದರೆ ಅನಿಲಗಳ ಬಿಡುಗಡೆ; ಚಂದ್ರನ ಒಳಭಾಗಗಳಲ್ಲಿ ಉಂಟಾಗುವ ವಿಕಿರಣ ಕ್ಷಯದಿಂದ ರೆಡಾನ್ ಮತ್ತಿತರ ಅನಿಲಗಳು ಉದ್ಭವವಾಗಿ ಹೊರಬರುತ್ತವೆ. ಸೂಕ್ಷ್ಮ ಉಲ್ಕೆ, ಸೌರ ಮಾರುತದ ಅಯಾನುಗಳು, ಎಲೆಕ್ಟ್ರಾನುಗಳು ಮತ್ತು ಸೂರ್ಯನ ಬೆಳಕಿನ ಸುರಿಮಳೆಗಳಿಂದಲೂ ಸ್ವಲ್ಪ ಪ್ರಮಾಣದಲ್ಲಿ ಅನಿಲಗಳು ಸೃಷ್ಟಿಯಾಗುತ್ತವೆ.[೧೬] ಈ ರೀತಿ ಸೃಷ್ಟಿಯಾದ ಅನಿಲಗಳು ಚಂದ್ರನ ಗುರುತ್ವಾಕರ್ಷಣೆಯಿಂದ ಅದರ ಮೇಲ್ಮೈಯಲ್ಲಿ ಹೂತುಹೋಗಬಹುದು, ಅಥವಾ, ಸೌರಮಾರುತದ ಒತ್ತಡದಿಂದಾಗಲಿ, ಮಾರುತಗಳ ಕಾಂತಕ್ಷೇತ್ರದಿಂದಾಗಲಿ, ಹೊಡೆತಕ್ಕೆ ಸಿಕ್ಕಿ ಬಾಹ್ಯಾಕಾಶದಲ್ಲಿ ಕಳೆದುಹೋಗಬಹುದು. ಭೂಮಿಯ ಮೇಲಿನ ವರ್ಣಪಟಲಮಾಪಕಗಳನ್ನು ಬಳಸಿ ಸೋಡಿಯಂ (Na) ಮತ್ತು ಪೊಟಾಷಿಯಂ (K) ಮೂಲವಸ್ತುಗಳನ್ನು ಚಂದ್ರನ ಮೇಲೆ ಪತ್ತೆಹಚ್ಚಲಾಗಿದೆ. ಲೂನಾರ್ ಪ್ರಾಸ್ಪೆಕ್ಟರ್ನ ಆಲ್ಫಾ ಕಣ ವರ್ಣಪಟಲಮಾಪಕವು ಒದಗಿಸಿದ ಮಾಹಿತಿಯ ಆಧಾರದ ಮೇಲೆ ರೆಡಾನ್-೨೨೨ ಮತ್ತು ಪೊಲೋನಿಯಂ-೨೧೦ ಮೂಲವಸ್ತುಗಳನ್ನು ಪರೋಕ್ಷವಾಗಿ ಕಂಡುಹಿಡಿಯಲಾಗಿದೆ.[೨೧] ಚಂದ್ರನ ಮೇಲೆ ಅಪೋಲೋ ಗಗನಯಾತ್ರಿಗಳು ಇರಿಸಿದ ಪತ್ತೇದಾರಕಗಳು ಆರ್ಗಾನ್-೪೦, He-೪, O ಮತ್ತು/ಅಥವಾ CH೪, N೨ ಮತ್ತು/ಅಥವಾ CO, ಮತ್ತು CO೨ ಗಳನ್ನು ಪತ್ತೆ ಹಚ್ಚಿವೆ.[೨೨]
ಉದ್ಭವ ಮತ್ತು ಭೂವೈಜ್ಞಾನಿಕ ವಿಕಸನ
ರೂಪುಗೊಳ್ಳುವಿಕೆ
ಚಂದ್ರನ ರೂಪುಗೊಳ್ಳುವಿಕೆಯ ಬಗ್ಗೆ ಹಲವು ವಾದಗಳನ್ನು ಮಂಡಿಸಲಾಗಿದೆ. ಕೇಂದ್ರಾಪಗಾಮಿ ಬಲದ ಕಾರಣ, ಭೂಮಿಯ ಮೇಲ್ಮೈನಿಂದ ಚಂದ್ರನು ಬೇರ್ಪಟ್ಟು, ಅದರ ಬೇರ್ಪಡಿಕೆಯ ಸಾಕ್ಷಿಯಾಗಿ ಭೂಮಿಯ ಮೇಲೆ ಒಂದು ದೊಡ್ಡ ಬೋಗುಣಿಯಾಕಾರವನ್ನು (ಇದು ಪೆಸಿಫಿಕ್ ಸಾಗರವೆಂದು ಊಹೆ) ಬಿಟ್ಟು ಹೋಯಿತೆಂದು ಮುಂಚಿನ ವಾದಗಳು ಪ್ರತಿಪಾದಿಸಿದವು.[೨೩] ಆದರೆ ಈ ಬೇರ್ಪಡಿಕೆ ಉಂಟಾಗಲು ಭೂಮಿಯ ಅಕ್ಷೀಯ ಪರಿಭ್ರಮಣವು ಈಗಿಗಿಂತ ಬಹಳ ಹೆಚ್ಚಾಗಿದ್ದಿರಬೇಕಿತ್ತು. ಬೇರೆ ಕೆಲವು ವಾದಗಳ ಪ್ರಕಾರ ಚಂದ್ರನ ಉದ್ಭವ ಬೇರೆಲ್ಲೋ ಆಗಿ ನಂತರ ಭೂಮಿಯು ಚಂದ್ರನನ್ನು ತನ್ನ ಗುರುತ್ವ ವಲಯದಲ್ಲಿ ಸೆರೆಹಿಡಿಯಿತು.[೨೪] ಆದರೆ, ಈ ರೀತಿಯ ಸೆರೆ ಹಿಡಿಕೆಗೆ ಬೇಕಾದ ಸನ್ನಿವೇಶಗಳು (ಉದಾ: ಶಕ್ತಿಯನ್ನು ಹೊರಹಾಕಲು ಭೂಮಿಯು ಇನ್ನೂ ಬಹಳ ದೊಡ್ಡ ವಾಯುಮಂಡಲವನ್ನು ಹೊಂದಿರಬೇಕಿತ್ತು) ಬಹಳ ಅಸಂಭವನೀಯ. ಸಮಕಾಲಿಕ ಉದ್ಭವ ವಾದದ ಪ್ರಕಾರ, ಭೂಮಿ ಮತ್ತು ಚಂದ್ರ ಒಂದೇ ಸಮಯದಲ್ಲಿ ಒಂದು ಶೇಖರಣಾ ತಟ್ಟೆಯಿಂದ ರೂಪುಗೊಂಡವು. ಈ ವಾದದ ಪ್ರಕಾರ, ಸೂರ್ಯನ ಸುತ್ತ ಗ್ರಹಗಳು ರೂಪುಗೊಂಡಂತೆ, ಚಂದ್ರವು ಭೂಮಿಯ ಸುತ್ತವಿದ್ದ ಪದಾರ್ಥಗಳ ಶೇಖರಣೆಯಿಂದ ರೂಪುಗೊಂಡಿತು. ಚಂದ್ರನ ಮೇಲೆ ಕಬ್ಬಿಣದ ವಿರಳತೆಗೆ ಈ ವಾದವು ಒಳ್ಳೆಯ ಕಾರಣಗಳನ್ನು ಕೊಡುತ್ತಿಲ್ಲವೆಂದು ಕೆಲವರು ಹೇಳುತ್ತಾರೆ. ಮೇಲಿನ ಎಲ್ಲಾ ವಾದಗಳ ಒಂದು ದೊಡ್ಡ ನ್ಯೂನತೆಯೆಂದರೆ, ಭೂಮಿ-ಚಂದ್ರ ಒಟ್ಟಿಗೆ ಹೊಂದಿರುವ ಕೋನೀಯ ಸಂವೇಗವನ್ನು (angular momentum) ಇವಾವುವೂ ಸರಿಯಾಗಿ ವಿವರಿಸಲಾರವು.[೨೫]
ಪ್ರಸ್ತುತದಲ್ಲಿ, ಭೂಮಿ-ಚಂದ್ರ ವ್ಯವಸ್ಥೆಯು ರೂಪುಗೊಳ್ಳಲು ಮಂಡಿಸಲಾಗಿರುವ ಬೃಹತ್ ಅಪ್ಪಳಿಕೆ ಸಿದ್ಧಾಂತವನ್ನು ವೈಜ್ಞಾನಿಕ ಸಮುದಾಯದಲ್ಲಿ ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. ಈ ಸಿದ್ಧಾಂತದ ಪ್ರಕಾರ, ಮಂಗಳ ಗ್ರಹದಷ್ಟು ದೊಡ್ಡ ಒಂದು ಆಕಾಶಕಾಯವು (ಇದನ್ನು ಥೀಯ ಅಥವಾ ಆರ್ಫಿಯಸ್ ಎಂದು ಕರೆಯಲಾಗುತ್ತದೆ) ಭೂಮಿಯನ್ನಪ್ಪಳಿಸಿ, ಅದರಿಂದ ಸಿಡಿದ ಪದಾರ್ಥಗಳು ಒಂದುಗೂಡಿ, ಚಂದ್ರನನ್ನು ನಿರ್ಮಿಸಿದವು.[೧] ಗ್ರಹಗಳು ಚಿಕ್ಕ ಮತ್ತು ದೊಡ್ಡ ಬಾಹ್ಯಾಕಾಶ ಕಾಯಗಳ ಕ್ರಮೇಣ ಸಮ್ಮಿಲನದಿಂದ ಸೃಷ್ಟಿಯಾಗುವವೆಂದು ನಂಬಿಕೆಯಿರುವುದರಿಂದ ಈ ರೀತಿಯ ಅಪ್ಪಳಿಕೆಗಳು ಬಹಳ ಗ್ರಹಗಳಿಗೆ ಆಗಿರಬಹುದೆಂದು ನಿರೀಕ್ಷಿಸಲಾಗಿದೆ. ಗಣಕಯಂತ್ರ ಛದ್ಮನಗಳ ಪ್ರಕಾರ ಈ ಅಪ್ಪಳಿಕೆಯು ಭೂ-ಚಂದ್ರರ ಕೋನೀಯ ಸಂವೇಗಕ್ಕೆ ಹಾಗು ಚಂದ್ರನ ಚಿಕ್ಕ ಒಳಭಾಗಕ್ಕೆ (core) ಕಾರಣವಿರಬಹುದೆಂದು ತಿಳಿಯುತ್ತದೆ.[೨೬] ಈ ಸಿದ್ಧಾಂತದಿಂದ ಇನ್ನೂ ಬಗೆಹರಿಯದಿರುವ ಪ್ರಶ್ನೆಗಳೆಂದರೆ, ಅಪ್ಪಳಿಸಿದ ಆಕಾಶಕಾಯ ಮತ್ತು ಭೂಮಿಗಳ ತುಲನಾತ್ಮಕ ದ್ರವ್ಯರಾಶಿಗಳು, ಮತ್ತು ಚಂದ್ರನ ನಿರ್ಮಾಣಕ್ಕೆ ಬೇಕಾದ ಪದಾರ್ಥಗಳು ಯಾವ ಅನುಪಾತದಲ್ಲಿ ಭೂಮಿಯಿಂದ ಮತ್ತು ಹೊರ ಆಕಾಶಕಾಯದಿಂದ ಬಂದವು, ಮುಂತಾದವು. ಚಂದ್ರನ ನಿರ್ಮಾಣವು ೪೫೨.೭ ± ೧ ಕೋಟಿ ವರ್ಷಗಳ ಹಿಂದೆ, ಸೌರಮಂಡಲದ ಉದ್ಭವದ ಸುಮಾರು ೩-೫ ಕೋಟಿ ವರ್ಷಗಳ ನಂತರ ಆಯಿತೆಂದು ಅಂದಾಜು ಮಾಡಲಾಗಿದೆ.[೨೭]
ಚಂದ್ರನ ಶಿಲಾಪಾಕ ಸಾಗರ
ಬೃಹತ್ ಅಪ್ಪಳಿಕೆ ಘಟನೆ ಮತ್ತು ತದನಂತರ ಭೂ-ಕಕ್ಷೆಯಲ್ಲಿ ನಡೆದ ಮರುಸಂಚಯನದಿಂದ ಅಪಾರವಾದ ಶಕ್ತಿಯು ಹೊರಬಂದು, ಈ ಶಾಖ ಶಕ್ತಿಯು ಬಹಳ ಹಿಂದೊಮ್ಮೆ ಚಂದ್ರನ ಬಹಳಷ್ಟು ಭಾಗಗಳನ್ನು ದ್ರವರೂಪದಲ್ಲಿ ಇಟ್ಟಿತ್ತೆಂದು ಸಾಮಾನ್ಯವಾಗಿ ನಂಬಲಾಗಿದೆ. ಈ ದ್ರವದ ಹೊರಭಾಗವನ್ನು ಚಂದ್ರನ ಶಿಲಾಪಾಕ ಸಾಗರವೆಂದು ಕರೆಯಲಾಗುತ್ತದೆ ಮತ್ತು ಇದರ ಆಳ ಸುಮಾರು ೫೦೦ ಕಿ.ಮೀ.ಗಳಿಂದ ಚಂದ್ರನ ಕೇಂದ್ರದವರೆಗೂ ಇತ್ತೆಂದು ಅಂದಾಜು ಮಾಡಲಾಗಿದೆ.[೫]
ಶಿಲಾಪಾಕ ಸಾಗರವು ತಣ್ಣಗಾಗುವಾಗ, ಭಿನ್ನ ಸ್ಫಟಿಕೀಕರಣ ಮತ್ತು ವಿಭೇದನಕ್ಕೆ ಒಳಗಾಗಿ, ಭೂರಸಾಯನಿಕ ದೃಷ್ಟಿಯಿಂದ ವಿಭಿನ್ನವಾದ ಕವಚ ಮತ್ತು ಚಿಪ್ಪುಗಳನ್ನು ಸೃಷ್ಟಿಸಿತು. ಮುಳುಗುತ್ತಿದ್ದ ಆಲಿವೀನ್, ಕ್ಲಿನೋಪೈರಾಕ್ಸೀನ್ ಮತ್ತು ಆರ್ಥೋಪೈರಾಕ್ಸೀನ್ಗಳಂಥ ಖನಿಜಗಳಿಂದ ಕವಚವು ರೂಪುಗೊಂಡಿತೆಂದು ಹೇಳಲಾಗಿದೆ. ಶಿಲಾಪಾಕ ಸಾಗರವು ಮುಕ್ಕಾಲು ಭಾಗ ಸ್ಫಟಿಕೀಕರಣಗೊಂಡ ಮೇಲೆ ಅನಾರ್ಥೊಸೈಟ್ ಎಂಬ ಖನಿಜವು ತನ್ನ ಹಗುರತೆಯ ಕಾರಣದಿಂದ ಮೇಲೆ ತೇಲಿಬಂದು ಚಿಪ್ಪನ್ನು ನಿರ್ಮಿಸಿತೆಂದು ಸಹ ಹೇಳಲಾಗಿದೆ.[೫]
ಕೊನೆಯದಾಗಿ ಸ್ಫಟಿಕೀಕರಣಗೊಂಡ ದ್ರವಗಳು ಚಿಪ್ಪು ಮತ್ತು ಕವಚದ ನಡುವೆ ಸಿಲುಕಿಕೊಂಡಿರುತ್ತಿದ್ದವಲ್ಲದೆ, ಇವು ಪರಸ್ಪರ ಹೊಂದಾಣಿಕೆಯಾಗದ ಹಾಗೂ ಶಾಖೋತ್ಪನ್ನ ಮಾಡುವ ಧಾತುಗಳಾಗಿದ್ದವು. ಈ ಭಾಗದಲ್ಲಿ ಪೊಟಾಷಿಯಂ (K), ವಿರಳ ಧಾತುಗಳು (REE) ಮತ್ತು ರಂಜಕಗಳು (P) ಇರುವುದರಿಂದ ಇದನ್ನು ಸಂಕ್ಷಿಪ್ತವಾಗಿ KREEP ಎಂದು ಕರೆಯಲಾಗುತ್ತದೆ.[೧೭]
ಭೂವೈಜ್ಞಾನಿಕ ವಿಕಸನ
ಚಂದ್ರನ ಶಿಲಾಪಾಕ-ಸಾಗರೋತ್ತರ ವಿಕಸನದ ದೊಡ್ಡ ಭಾಗವು ಅಪ್ಪಳಿಕೆ ಕುಳಿಗಳ ನಿರ್ಮಾಣದಿಂದ ಕೂಡಿತ್ತು. ಚಂದ್ರನ ಭೂವೈಜ್ಞಾನಿಕ ಕಾಲವನ್ನು ನೆಕ್ಟಾರಿಸ್, ಇಂಬ್ರಿಯಂ, ಎರಾಟೊಸ್ಥೆನೆಸ್, ಮತ್ತು ಕೋಪರ್ನಿಕಸ್ಗಳಂತಹ ಕೆಲವು ಗಮನಾರ್ಹವಾದ ಅಪ್ಪಳಿಕೆ ಘಟನೆಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಈ ಎಲ್ಲಾ ಅಪ್ಪಳಿಕೆ ಘಟನೆಗಳ ಕಾಲಗಳನ್ನು ಖಚಿತವಾಗಿ ಇನ್ನೂ ನಿರ್ಧರಿಸದಿದ್ದರೂ (ಹಲವು ಘಟನೆಗಳ ಕಾಲಗಳನ್ನು ಇನ್ನೂ ಚರ್ಚಿಸಲಾಗುತ್ತಿದೆ), ಸ್ಥೂಲವಾದ ಅಧ್ಯಯನಗಳಿಗೆ ಇವು ಉಪಯುಕ್ತವಾಗಿವೆ. ಆವರಣ ಪ್ರಸ್ತರದ ಸೃಷ್ಟಿಗೆ ಅಪ್ಪಳಿಕೆಗಳ ನಿರಂತರ ಪರಿಣಾಮಗಳೇ ಕಾರಣ.
ಚಂದ್ರನ ಮೇಲ್ಮೈ ಮೇಲೆ ಪರಿಣಾಮ ಬೀರಿದ ಇನ್ನೊಂದು ಭೂವೈಜ್ಞಾನಿಕ ಪ್ರಕ್ರಿಯೆಯೆಂದರೆ, ಮಟ್ಟಸಗಳಲ್ಲಿ ನಡೆದ ಅಗ್ನಿಪರ್ವತಗಳ ಚಟುವಟಿಕೆ. ಚಂದ್ರನ ಈ ಭಾಗಗಳಲ್ಲಿ ಶಾಖೋತ್ಪನ್ನ ಮಾಡುವ ಇಂಥ ಚಟುವಟಿಕೆಗಳಿಂದ ಕೆಳಗಿರುವ ಕವಚವು ಬಿಸಿಯಾಗಿ ಭಾಗಶಃ ಕರಗಿರುತ್ತಿತ್ತು. ಕರಗಿದ ಈ ಶಿಲಾಪಾಕಗಳ ಕೆಲವು ಭಾಗಗಳು ಮೇಲ್ಮೈಗೆ ಏರಿ ಹೊರಚಿಮ್ಮಿದವು. ಈ ಕಾರಣದಿಂದ ಇಂದಿಗೂ ಚಂದ್ರನ ಮುಮ್ಮುಖದ ಮಟ್ಟಸಗಳಲ್ಲಿ ಕಪ್ಪುಶಿಲೆಯ ಹೆಚ್ಚಿನ ಸಾಂದ್ರತೆಯನ್ನು ಕಾಣಬಹುದು.[೫] ಈ ಭೂವೈಜ್ಞಾನಿಕ ವಲಯದ ಬಹುತೇಕ ಮಟ್ಟಸದ ಕಪ್ಪುಶಿಲೆಯು ಇಂಬ್ರಿಯನ್ ಕಾಲದಲ್ಲಿ ಸುಮಾರು ೩೦೦-೩೫೦ ಕೋಟಿವರ್ಷಗಳ ಹಿಂದೆ ಹೊರಚಿಮ್ಮಿತು. ಆದರೆ, ಕೆಲವು ಕಾಲನಿರ್ಧರಿತ ಮಾದರಿಗಳು ೪೨೦ ಕೋಟಿ ವರ್ಷಗಳಷ್ಟು ಹಳೆಯವು,[೨೮] ಮತ್ತು ಕುಳಿ ಎಣಿಕೆಯ ಆಧಾರದ ಮೇಲೆ ತಿಳಿದುಬಂದ ಹೊಸ ಹೊರಚಿಮ್ಮಿಕೆಗಳು ಕೇವಲ ೧೨೦ ಕೋಟಿ ವರ್ಷದ ಹಿಂದೆ ಆದವು.[೨೯]
ಚಂದ್ರನ ಮೇಲ್ಮೈ ವೈಶಿಷ್ಟ್ಯಗಳು ಕಾಲಾಂತರದಲ್ಲಿ ಬದಲಾವಣೆಗಳಿಗೆ ಒಳಪಡುತ್ತವೆಯೇ ಇಲ್ಲವೇ ಎಂಬುದರ ಬಗ್ಗೆ ವಿವಾದ-ವಿರೋಧಗಳಿವೆ. ಕುಳಿಗಳು ಮಾಯವಾಗಿ ಮತ್ತೆ ಪ್ರತ್ಯಕ್ಷವಾಗುತ್ತವೆಯೆಂದೂ, ಹಾಗೂ ಕೆಲವು ಇತರ ಅಸ್ಥಿರ ಪ್ರಕ್ರಿಯೆಗಳ ಬಗ್ಗೆ ಕೆಲವು ವೀಕ್ಷಕರು ಮಾತನಾಡಿದ್ದಾರೆ. ಪ್ರಸ್ತುತದಲ್ಲಿ ಈ ರೀತಿಯ ಹಲವು ವೀಕ್ಷಣೆಗಳು ಭ್ರಾಂತಿಯೆಂದು ನಂಬಲಾಗಿದೆ. ವಿವಿಧ ಬೆಳಕಿನ ಸನ್ನಿವೇಶಗಳಲ್ಲಿ ಚಂದ್ರನ ವೀಕ್ಷಣೆ, ತಪ್ಪಾದ ವೀಕ್ಷಣೆ, ಅಥವಾ ಮುಂಚಿನ ಚಿತ್ರಗಳು ನಿಖರವಾಗಿಲ್ಲದಿರುವುದು, ಹೀಗೆ ಹಲವು ಕಾರಣಗಳಿಂದ ವೀಕ್ಷಕರು ತಪ್ಪು ತೀರ್ಮಾನಕ್ಕೆ ಬಂದಿದ್ದಿರಬಹುದು. ಆದರೆ, ಅನಿಲದ ಹೊರಸೂಸುವಿಕೆಯು ಒಮ್ಮೊಮ್ಮೆ ನಡೆಯುತ್ತದೆಯೆಂದು ನಿಖರವಾಗಿ ತಿಳಿದುಬಂದಿದೆ. ಈ ಹೊರಸೂಸುವ ಘಟನೆಗಳಿಂದ ಕೆಲವು ಅಸ್ಥಿರ ಪ್ರಕ್ರಿಯೆಗಳು ನಡೆದಿದ್ದರೂ ಇರಬಹುದು. ಚಂದ್ರನ ಮೇಲ್ಮೈಯ ಸುಮಾರು ೩ ಕಿ.ಮೀ. ವ್ಯಾಸದ ವಲಯವು ಸುಮಾರು ೧೦ ಲಕ್ಷ ವರ್ಷಗಳ ಹಿಂದಿನ ಅನಿಲ ಹೊರಸೂಸುವಿಕೆಯಿಂದ ಮಾರ್ಪಟ್ಟಿತೆಂದು ಇತ್ತೀಚೆಗೆ ಹೇಳಲಾಗಿದೆ.[೩೦][೩೧]
ಕಕ್ಷೆ ಮತ್ತು ಭೂಮಿಯ ಜೊತೆ ಸಂಬಂಧ
ಸ್ಥಿರ ನಕ್ಷತ್ರಗಳಿಗೆ ಸಾಪೇಕ್ಷವಾಗಿ ಚಂದ್ರವು ಸುಮಾರು ೨೭.೩ ದಿನಗಳಿಗೊಮ್ಮೆ ಭೂಮಿಯ ಸುತ್ತ ಒಂದು ಪರಿಭ್ರಮಣೆಯನ್ನು ಮಾಡುತ್ತದೆ (ಚಂದ್ರನ ನಾಕ್ಷತ್ರಿಕ ಅವಧಿ). ಆದರೆ, ಭೂಮಿಯೂ ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಚಲಿಸುವುದರಿಂದ, ಚಂದ್ರನ ಅದೇ ಕಲೆಯು ಪುನಃ ಕಾಣಲು ಸ್ವಲ್ಪ ಹೆಚ್ಚು ಸಮಯ, ಅಂದರೆ, ಸುಮಾರು ೨೯.೫ ದಿನಗಳು (ಚಂದ್ರನ ಯುತಿ ಅವಧಿ) ಬೇಕಾಗುತ್ತವೆ.[೧] ಸೌರಮಂಡಲದ ಬಹುತೇಕ ಉಪಗ್ರಹಗಳಂತಲ್ಲದೆ, ಚಂದ್ರವು ಭೂಮಿಯ ಸಮಭಾಜಕದ ಸಮತಳದ ಬಳಿ ಪರಿಭ್ರಮಿಸದೆ, ಕ್ರಾಂತಿವೃತ್ತದ ಸಮತಳದ ಬಳಿ ಪರಿಭ್ರಮಿಸುತ್ತದೆ.
ಉಬ್ಬರವಿಳಿತಗಳೂ ಸೇರಿದಂತೆ, ಭೂಮಿ ಮತ್ತು ಚಂದ್ರರು ಪರಸ್ಪರ ಒಂದರ ಮೇಲೊಂದು ಹಲವು ಪರಿಣಾಮಗಳನ್ನು ಉಂಟುಮಾಡುತ್ತವೆ. ಭೂಮಿಯ ಮೇಲಿನ ಬಹುತೇಕ ಉಬ್ಬರವಿಳಿತ ಪರಿಣಾಮಗಳು ಚಂದ್ರನಿಂದಲೇ ಉಂಟಾಗಿ, ಸೂರ್ಯನಿಂದ ಗಮನಾರ್ಹವಾದ ಉಬ್ಬರವಿಳಿತಗಳು ಆಗುವುದಿಲ್ಲ. ಈ ಉಬ್ಬರವಿಳಿತಗಳಿಂದ ಭೂಮಿ-ಚಂದ್ರರ ಸರಾಸರಿ ದೂರವು ಶತಮಾನಕ್ಕೆ ಸುಮಾರು ೪ ಮೀ.ಗಳಷ್ಟು, ಅಥವಾ ವರ್ಷಕ್ಕೆ ೪ ಸೆಂ.ಮೀ. ಗಳಷ್ಟು ಹೆಚ್ಚಾಗುತ್ತದೆ.[೩೨] ಕೋನೀಯ ಸಂವೇಗ ಸಂರಕ್ಷಣೆಯ ಕಾರಣದಿಂದ, ಚಂದ್ರನ ದೀರ್ಘಾರ್ಧ ಅಕ್ಷವು ದೊಡ್ಡದಾಗುತ್ತಿದ್ದಂತೆಯೇ ಭೂಮಿಯ ಅಕ್ಷೀಯ ಪರಿಭ್ರಮಣ ಕಾಲವು ಒಂದು ಶತಮಾನದಲ್ಲಿ ಪ್ರತಿದಿನವೂ ೦.೦೦೨ ಕ್ಷಣಗಳಷ್ಟು ದೊಡ್ಡದಾಗುವಂತೆ ನಿಧಾನವಾಗುತ್ತಿದೆ.[೩೩]
ಭೂಮಿ-ಚಂದ್ರ ವ್ಯವಸ್ಥೆಯನ್ನು ಒಮ್ಮೊಮ್ಮೆ ಗ್ರಹ-ಉಪಗ್ರಹ ವ್ಯವಸ್ಥೆಯೆಂದು ಪರಿಗಣಿಸದೆ, ಜೋಡಿಗ್ರಹಗಳೆಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ, ಭೂಮಿಗೆ ಸಾಪೇಕ್ಷವಾಗಿ ಚಂದ್ರನ ಗಾತ್ರ ಸಾಕಷ್ಟು ದೊಡ್ಡದಾಗಿರುವುದು; ಚಂದ್ರವು ಭೂಮಿಯ ೧/೪ರಷ್ಟು ವ್ಯಾಸವನ್ನು ಮತ್ತು ೧/೮೧ರಷ್ಟು ದ್ರವ್ಯರಾಶಿಯನ್ನು ಹೊಂದಿದೆ. ಆದರೆ, ಭೂಮಿ-ಚಂದ್ರ ವ್ಯವಸ್ಥೆಯ ಭಾರಕೇಂದ್ರವು ಭೂಮಿಯ ಮೇಲ್ಮೈನ ಸುಮಾರು ೧೭೦೦ಕಿ.ಮೀ. ಕೆಳಗೆ (ಸರಾಸರಿ) ಇರುವುದರಿಂದ, ಈ ಜೋಡಿಗ್ರಹದ ವ್ಯಾಖ್ಯಾನವನ್ನು ಹಲವರು ಒಪ್ಪುವುದಿಲ್ಲ. ಚಂದ್ರನ ಮೇಲ್ಮೈಯು ಭೂಮಿಯ ಮೇಲ್ಮೈನ ೧/೧೦ ಭಾಗಕ್ಕಿಂತ ಕಡಿಮೆಯಿದ್ದು, ಭೂಮಿಯ ಒಣನೆಲದ ಕಾಲುಭಾಗ ವಿಸ್ತೀರ್ಣವನ್ನು ಮಾತ್ರ ಹೊಂದಿದೆ (ರಷ್ಯಾ, ಕೆನಡಾ, ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳ ಒಟ್ಟು ವಿಸ್ತೀರ್ಣದಷ್ಟು).
3753 Cruithne ಎಂಬ ಕ್ಷುದ್ರಗ್ರಹವು ಭೂಮಿಯ ಜೊತೆ ಒಂದು ಅಪರೂಪದ ಕುದುರೆ ಲಾಳಾಕಾರದ ಕಕ್ಷೆಯಲ್ಲಿ ಇರುವುದನ್ನು ೧೯೯೭ರಲ್ಲಿ ಪತ್ತೆ ಹಚ್ಚಲಾಯಿತು. ಆದರೆ, ಈ ಕಕ್ಷೆಯು ದೀರ್ಘ ಕಾಲದವರೆಗೆ ಸ್ಥಿರವಾಗಿರುವುದಿಲ್ಲವಾದ್ದರಿಂದ, ಖಗೋಳಶಾಸ್ತ್ರಜ್ಞರು ಈ ಕ್ಷುದ್ರಗ್ರಹವನ್ನು ಭೂಮಿಯ ಇನ್ನೊಂದು ಉಪಗ್ರಹವೆಂದು ಪರಿಗಣಿಸುವುದಿಲ್ಲ.[೩೪] ಇದರ ನಂತರ, (೫೪೫೦೯) ೨೦೦೦ PH೫, (೮೫೭೭೦) ೧೯೯೮ UP೧ ಮತ್ತು 2002 AA29ಗಳೆಂಬ ಮೂರು ಭೂಮಿಗೆ ಹತ್ತಿರವಿರುವ ಕ್ಷುದ್ರಗ್ರಹಗಳನ್ನು ಕಂಡುಹಿಡಿಯಲಾಗಿದೆ.[೩೫]
ಗ್ರಹಣಗಳು
ಸೂರ್ಯ, ಭೂಮಿ ಮತ್ತು ಚಂದ್ರರೆಲ್ಲರೂ ಒಂದೇ ಸರಳ ರೇಖೆಯಲ್ಲಿ ಇದ್ದಾಗ ಮಾತ್ರ ಗ್ರಹಣಗಳು ಉಂಟಾಗುತ್ತವೆ. ಅಮಾವಾಸ್ಯೆಯ ಬಳಿ, ಚಂದ್ರನು ಸೂರ್ಯ ಮತ್ತು ಭೂಮಿಗಳ ನಡುವೆ ಇದ್ದಾಗ, ಸೂರ್ಯ ಗ್ರಹಣಗಳು ಉಂಟಾಗಬಹುದು. ಹೋಲಿಕೆಯಲ್ಲಿ, ಚಂದ್ರ ಗ್ರಹಣಗಳು ಹುಣ್ಣಿಮೆಯ ಬಳಿ, ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಇರುವಾಗ ಚಂದ್ರ ಗ್ರಹಣಗಳು ಉಂಟಾಗುತ್ತವೆ. ಚಂದ್ರನ ಕಕ್ಷೆಯು ಭೂಮಿಯ ಕಕ್ಷೆಯ ಸಮತಳಕ್ಕೆ ಸುಮಾರು ೫° ಓರೆಯಲ್ಲಿ ಇರುವುದರಿಂದ, ಪ್ರತಿ ಹುಣ್ಣಿಮೆ/ಅಮಾವಾಸ್ಯೆಯಂದು ಗ್ರಹಣಗಳು ಉಂಟಾಗುವುದಿಲ್ಲ. ಗ್ರಹಣವಾಗಲು ಚಂದ್ರನು ಈ ಎರಡು ಕಕ್ಷಾ ಸಮತಳಗಳನ್ನು ಛೇದಿಸುವ ಬಿಂದುಗಳ ಬಳಿ ಇರಬೇಕು.[೩೬]
ಭೂಮಿಯಿಂದ ನೋಡಿದಂತೆ ಚಂದ್ರ ಮತ್ತು ಸೂರ್ಯರ ಕೋನ ವ್ಯಾಸಗಳು ಸುಮಾರು ಒಂದೇ ಆಗಿರುವುದರಿಂದ, ಪೂರ್ಣ ಗ್ರಹಣ ಮತ್ತು ಕಂಕಣ ಗ್ರಹಣಗಳೆಂಬ ಎರಡು ರೀತಿಯ ಗ್ರಹಣಗಳು ಉಂಟಾಗಬಹುದು.[೩೭] ಪೂರ್ಣ ಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡಿ, ಸೂರ್ಯನ ಪ್ರಭಾವಲಯವು ಬರಿಗಣ್ಣಿಗೆ ಕಾಣಿಸುತ್ತದೆ. ಭೂಮಿ ಮತ್ತು ಚಂದ್ರರ ನಡುವೆಯಿರುವ ಅಂತರವು ನಿಧಾನವಾಗಿ ಹೆಚ್ಚುತ್ತಿರುವುದರಿಂದ, ಭೂಮಿಯಿಂದ ನೋಡಿದಂತೆ ಚಂದ್ರನ ಕೋನವ್ಯಾಸವು ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರರ್ಥ, ಕೋಟ್ಯಾಂತರ ವರ್ಷಗಳ ಹಿಂದೆ ಚಂದ್ರನು ಪ್ರತಿಬಾರಿಯೂ ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡುತ್ತಿದ್ದುದರಿಂದ ಕಂಕಣ ಗ್ರಹಣಗಳು ಆಗುತ್ತಿರಲಿಲ್ಲ. ಇದೇ ರೀತಿ, ಇನ್ನು ಸುಮಾರು ೬೦ ಕೋಟಿ ವರ್ಷಗಳಲ್ಲಿ (ಸೂರ್ಯನ ಕೋನ ವ್ಯಾಸವು ಬದಲಾಗದಿದ್ದಲ್ಲಿ) ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡಲು ಆಗದೆ, ಕೇವಲ ಕಂಕಣ ಗ್ರಹಣಗಳು ಉಂಟಾಗುತ್ತವೆ.[೩೬]
ಗ್ರಹಣಗಳಿಗೆ ಸಂಬಂಧಿಸಿದ ಇನ್ನೊಂದು ವಿಷಯವೆಂದರೆ ಮರೆಮಾಡುವಿಕೆ. ಚಂದ್ರವು ನಮ್ಮ ಬಾನಿನಲ್ಲಿ ನಿರಂತರವಾಗಿ ಸುಮಾರು ೦.೫° ಅಗಲದ ವೃತ್ತಾಕಾರದ ವಲಯವನ್ನು ಆಕ್ರಮಿಸಿಕೊಳ್ಳುತ್ತದೆ. ಒಂದು ಗ್ರಹ ಅಥವಾ ನಕ್ಷತ್ರವು ಚಂದ್ರನ ಹಿಂದೆ ಹಾದುಹೋದಾಗ, ಅದು ನಮ್ಮ ನೋಟದಿಂದ ಮರೆಯಾಗುತ್ತದೆ. ಸೂರ್ಯ ಗ್ರಹಣವು ವಾಸ್ತವದಲ್ಲಿ ಸೂರ್ಯನ ಮರೆಮಾಡುವಿಕೆ. ಚಂದ್ರನು ಭೂಮಿಗೆ ಹತ್ತಿರದಲ್ಲಿ ಇರುವುದರಿಂದ ಪ್ರತ್ಯೇಕ ನಕ್ಷತ್ರಗಳ ಮರೆಮಾಡುವಿಕೆಗಳು ಎಲ್ಲೆಡೆಗಳಲ್ಲೂ ಅಥವಾ ಎಲ್ಲಾ ಸಮಯಗಳಲ್ಲೂ ಕಾಣಿಸುವುದಿಲ್ಲ. ಚಂದ್ರನ ಕಕ್ಷೆಯ ಅಯನದ ಕಾರಣದಿಂದಾಗಿ, ಪ್ರತಿ ವರ್ಷವೂ ಬೇರೆಯೇ ನಕ್ಷತ್ರಗಳು ಮರೆಯಾಗುತ್ತವೆ.[೩೮]
ವೀಕ್ಷಣೆ
ಅತಿ ಕಾಂತಿಯುತವಾದ ಹುಣ್ಣಿಮೆಗಳಂದು ಚಂದ್ರನ ಗೋಚರ ಪ್ರಮಾಣವು −೧೨.೬ ರವರೆಗೂ ಇರುತ್ತದೆ. ಹೋಲಿಕೆಯಲ್ಲಿ, ಸೂರ್ಯನ ಗೋಚರ ಪ್ರಮಾಣವು −೨೬.೮ರಷ್ಟು ಇರುತ್ತದೆ. ಚಂದ್ರವು ಚತುರ್ಥಾಂಶದಲ್ಲಿದ್ದಾಗ ಅದರ ಹೊಳಪು ಪೂರ್ಣ ಚಂದ್ರನ ಅರ್ಧ ಭಾಗವಿರದೆ, ಕೇವಲ ೧/೧೦ ಭಾಗ ಇರುತ್ತದೆ. ಇದಕ್ಕೆ ಕಾರಣ, ಚಂದ್ರನ ಮೇಲ್ಮೈಯು ಒಳ್ಳೆಯ ಪ್ರತಿಫಲಕವಲ್ಲದಿರುವುದು ಮತ್ತು ಮೇಲ್ಮೈನ ಮೇಲೆ ಬೀಳುವ ನೆರಳುಗಳೂ ಪ್ರತಿಫಲಿತ ಬೆಳಕನ್ನು ಕಡಿಮೆ ಮಾಡುತ್ತವೆ.
ದಿಗಂತದ ಹತ್ತಿರವಿದ್ದಾಗ ಚಂದ್ರವು ದೊಡ್ಡದಾಗಿ ಕಾಣುತ್ತದೆ. ಇದು ಕೇವಲ ಮಾನಸಿಕ ಭ್ರಾಂತಿ (ಚಂದ್ರ ಭ್ರಾಂತಿ ಲೇಖನವನ್ನು ನೋಡಿ). ಭೂಮಿಯಿಂದ ನೋಡಿದಾಗ ಚಂದ್ರನ ಕೋನವ್ಯಾಸವು ಸುಮಾರು ಅರ್ಧ ಡಿಗ್ರಿಯಷ್ಟಿರುತ್ತದೆ. ವಾಸ್ತವದಲ್ಲಿ, ಚಂದ್ರವು ದಿಗಂತದ ಹತ್ತಿರ ಇರುವಾಗ ಅದರ ಕೋನವ್ಯಾಸವು ಬಾನ ನೆತ್ತಿಯಲ್ಲಿರುವ ವ್ಯಾಸಕ್ಕಿಂತ ೧.೫% ಕಡಿಮೆ ಇರುತ್ತದೆ. ನೆತ್ತಿಯ ಮೇಲಿರುವಾಗ ಚಂದ್ರವು ಭೂಮಿಯಿಂದ ಸುಮಾರು ೧ ಭೂಮಿ ತ್ರಿಜ್ಯಗಳಷ್ಟು ಹೆಚ್ಚು ದೂರವಿರುವುದರಿಂದ ಹೀಗಾಗುತ್ತದೆ.
ಚಂದ್ರವು ಬಹಳ ಕಡಿಮೆ ಪ್ರತಿಫಲನಾಂಶವನ್ನು ಹೊಂದಿದ್ದು, ತನ್ನ ಮೇಲೆ ಬೀಳುವ ಬೆಳಕಿನ ೭% ನ್ನು ಮಾತ್ರ ಪ್ರತಿಫಲಿಸುತ್ತದೆ. ಇದು ಸುಮಾರು ಕಲ್ಲಿದ್ದಲಿನ ಪ್ರತಿಫಲನಾಂಶದಷ್ಟೇ ಇದೆ. ಆದರೂ, ದೃಷ್ಟಿ ಭ್ರಾಂತಿಯ ಕಾರಣದಿಂದ ಚಂದ್ರವು ಶುದ್ಧ ಬಿಳಿಬಣ್ಣವಾಗಿ ಕಾಣುತ್ತದೆ. ಚಂದ್ರನ ಸುತ್ತುಮುತ್ತಲಿನಲ್ಲಿ ಬೆಳಕನ್ನು ಪ್ರತಿಫಲಿಸುವ ಬೇರಾವುದೂ ವಸ್ತು ಇಲ್ಲದಿರುವುದರಿಂದ, ನಮ್ಮ ದೃಷ್ಟಿ ವಲಯದಲ್ಲಿ ಇದು ಅತಿ ಪ್ರಕಾಶಮಾನವಾದ ವಸ್ತುವಿನಂತೆ ಕಾಣುತ್ತದೆ. ಅಂದರೆ, ಚಂದ್ರನ ಜೊತೆ ಹೋಲಿಸುವುದಕ್ಕೆ ನಿಕಟದಲ್ಲಿ ಬೇರೇನೂ ವಸ್ತುಗಳಿಲ್ಲ. ಇದಕ್ಕೆ ಉದಾಹರಣೆಯಾಗಿ, ಒಂದು ಕತ್ತಲೆ ಕೋಣೆಯಲ್ಲಿ ಇದ್ದಿಲ ಒಂದು ತುಣುಕಿನ ಮೇಲೆ ಸಣ್ಣದೊಂದು ಬೆಳಕಿನ ಕಿರಣವನ್ನು ಹಾಯಿಸಿದರೆ, ಆ ತುಣುಕು ಬೆಳ್ಳಗೆ ಕಾಣುತ್ತದೆ. ಆದರೆ, ಅದೇ ಬೆಳಕನ್ನು ಇಡೀ ಕೋಣೆಯತ್ತ ಹಾಯಿಸಿದರೆ, ಇದ್ದಿಲು ಪುನಃ ಕಪ್ಪಾಗಿ ಕಾಣುತ್ತದೆ.
ಚಂದ್ರನ ಗರಿಷ್ಠ ಉನ್ನತಿಯು ದಿನದಿಂದ ದಿನಕ್ಕೆ ಬದಲಾಗಿ, ಸುಮಾರು ಸೂರ್ಯನ ಉನ್ನತಿಯ ಮಿತಿಗಳೊಳಗೇ ಇರುತ್ತದೆ. ಇದು ಋತು ಮತ್ತು ಚಂದ್ರನ ಕಲೆಯ ಮೇಲೂ ಅವಲಂಬಿತವಾಗಿ, ಚಳಿಗಾಲದ ಪೂರ್ಣ ಚಂದ್ರವು ಅತಿ ಹೆಚ್ಚಿನ ಉನ್ನತಿಯನ್ನು ಹೊಂದಿರುತ್ತದೆ. ಅರ್ಧ ಚಂದ್ರನು ಕಾಣುವ ದಿಕ್ಕು ಸಹ ವೀಕ್ಷಿಸುವ ಎಡೆಯ ಅಕ್ಷಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಸಮಭಾಜಕದ ಬಳಿಯಿಂದ "ದೋಣಿಯಾಕಾರದ" ಚಂದ್ರನನ್ನು ನೋಡಬಹುದು[೩೯]
ಸೂರ್ಯನಂತೆ ಚಂದ್ರವೂ ಸಹ ವಾಯುಮಂಡಲದಿಂದ ಉಂಟಾಗುವ ದೃಕ್-ಪರಿಣಾಮಗಳನ್ನು ಉಂಟುಮಾಡುತ್ತದೆ. ೨೨° ಪ್ರಭಾವಳಿಯ ಉಂಗುರ, ಮತ್ತು ಸಾಮಾನ್ಯವಾಗಿ ತೆಳುವಾದ ಮೋಡಗಳ ಮೂಲಕ ಕಾಣುವ ಸಣ್ಣ ಪ್ರಭಾವಲಯದ ಉಂಗುರಗಳು ಈ ಪರಿಣಾಮಗಳಲ್ಲಿ ಸೇರಿವೆ. ಭೂಮಿಯ ಆಗಸದಿಂದ ಚಂದ್ರವು ಹೇಗೆ ಕಾಣುತ್ತದೆಂಬುದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಚಂದ್ರ ಕಲೆ ಲೇಖನವನ್ನು ನೋಡಿ.
ಅನ್ವೇಷಣೆ
ದೂರದರ್ಶಕದ ಆವಿಷ್ಕಾರದ ನಂತರ ಚಂದ್ರನ ವೀಕ್ಷಣೆಯಲ್ಲಿ ಸಾಕಷ್ಟು ಪ್ರಗತಿಯಾಯಿತು. ಗೆಲಿಲಿಯೊ ಗೆಲಿಲೈ ಈ ಹೊಸ ಉಪಕರಣವನ್ನು ಚೆನ್ನಾಗಿ ಉಪಯೋಗಿಸಿಕೊಂಡು, ಚಂದ್ರನ ಮೇಲ್ಮೈ ಮೇಲಿನ ಪರ್ವತಗಳು ಮತ್ತು ಕುಳಿಗಳನ್ನು ಅವಲೋಕಿಸಿದನು.
ಶೀತಲ ಸಮರದ ಪ್ರಚೋದನೆಯಿಂದ ರಷ್ಯಾ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳ ನಡುವೆ ಬಾಹ್ಯಕಾಶದ ಬಗ್ಗೆ ಆಸಕ್ತಿಯು ಹೆಚ್ಚಾದಂತೆ, ಚಂದ್ರನ ಬಗ್ಗೆಯೂ ಹೆಚ್ಚಿನ ಆಸಕ್ತಿ ಬೆಳೆಯಿತು. ಹತ್ತಿರದಲ್ಲಿ ಹಾದುಹೋಗುವ ಮತ್ತು ಇಳಿಯುವ ಎರಡೂ ಥರದ ಮಾನವರಹಿತ ಶೋಧಕಗಳನ್ನು, ಉಡಾವಣಾ ಸಾಮರ್ಥ್ಯವು ಅಭಿವೃದ್ಧಿಯಾಗುತ್ತಿದ್ದಂತೆಯೇ ಉಡಾಯಿಸಲಾಗುತ್ತಿತ್ತು. ಚಂದ್ರನನ್ನು ತಲುಪಿದ ಯಾತ್ರೆಗಳಲ್ಲಿ ರಷ್ಯಾದ ಚಂದ್ರ ಕಾರ್ಯಕ್ರಮವು ಮೊದಲನೆಯದು. ಲೂನಾ ೧೬, ೨೦, ೨೪ ಹಾಗೂ ಅಪೋಲೋ ೧೧, ೧೨, ೧೪, ೧೫, ೧೬ ಮತ್ತು ೧೭ ಯಾತ್ರೆಗಳು ಚಂದ್ರನ ಮೇಲಿನಿಂದ ಕಲ್ಲು-ಮಣ್ಣುಗಳ ಮಾದರಿಗಳನ್ನು ಭೂಮಿಗೆ ತಂದಿವೆ.
ಅಮೇರಿಕ ಸಂಯುಕ್ತ ಸಂಸ್ಥಾನದ ಅಪೋಲೊ ೧೧ ಯಾತ್ರೆಯ ನಾಯಕನಾಗಿ ನೀಲ್ ಆರ್ಮ್‌ಸ್ಟ್ರಾಂಗ್ನು ಜುಲೈ ೨೧, ೧೯೬೯ರಂದು ೦೨:೫೬ UTC ಸಮಯದಲ್ಲಿ ಚಂದ್ರನ ಮೇಲೆ ಕಾಲಿರಿಸಿ, ಚಂದ್ರನ ಮೇಲೆ ನಡೆದ ಮೊಟ್ಟ ಮೊದಲ ಮಾನವನಾದನು. ಚಂದ್ರನ ಮೇಲೆ ನಿಂತ ಕಟ್ಟ ಕೊನೆಯ (೨೦೦೭ರಷ್ಟು ಹೊತ್ತಿಗೆ) ಮಾನವನೆಂದರೆ, ಡಿಸೆಂಬರ್ ೧೯೭೨ರಲ್ಲಿ ಅಪೋಲೋ ೧೭ರ ತಂಡದಲ್ಲಿದ್ದ ಯುಜೀನ್ ಸೆರ್‌ನಾನ್.
ಪ್ರತಿ ಅಪೋಲೋ ಯಾತ್ರೆಯಲ್ಲೂ ಚಂದ್ರನ ಮೇಲ್ಮೈ ಮೇಲೆ ವೈಜ್ಞಾನಿಕ ಉಪಕರಣಗಳನ್ನು ಸ್ಥಾಪಿಸಲಾಯಿತು. ಅಪೋಲೊ ಇಳಿದಾಣ ೧೨, ೧೪, ೧೫, ೧೬ ಮತ್ತು ೧೭ ರಲ್ಲಿ ದೀರ್ಘಾಯುಷಿ ALSEP (ಅಪೋಲೋ ಚಾಂದ್ರ ಮೇಲ್ಮೈ ಪ್ರಯೋಗ ವ್ಯವಸ್ಥೆ) ಉಪಕರಣಗಳನ್ನು, ಮತ್ತು ಅಪೋಲೊ ೧೧ರ ತಾಣದಲ್ಲಿ ಅಲ್ಪಾಯುಷಿಯಾದ EASEP (ಮುಂಚಿನ ಅಪೋಲೋ ವೈಜ್ಞಾನಿಕ ಪ್ರಯೋಗ ವ್ಯವಸ್ಥೆ) ಉಪಕರಣವನ್ನು ಸ್ಥಾಪಿಸಲಾಯಿತು. ಉಷ್ಣ ಪ್ರವಾಹ ಶೋಧಕಗಳು, ಚಂದ್ರಕಂಪನ ಮಾಪಕಗಳು, ಕಾಂತತ್ವ ಮಾಪಕಗಳು ಮತ್ತು ಹಿಮ್ಮುಖ-ಪ್ರತಿಫಲಕಗಳನ್ನು ಸೇರಿದಂತೆ ಹಲವು ಉಪಕರಣಗಳನ್ನು ALSEP ತಾಣಗಳು ಹೊಂದಿದ್ದವು. ಹಣದ ಕೊರತೆಯ ಕಾರಣದಿಂದಾಗಿ ಸೆಪ್ಟೆಂಬರ್ ೩೦, ೧೯೭೭ರಂದು ಭೂಮಿಗೆ ಪ್ರೇಷಣೆಯನ್ನು ನಿಲ್ಲಿಸಲಾಯಿತು. ಚಂದ್ರ ಲೇಸರ್ ರೇಂಜಿಂಗ್ (LLR) ಉಪಕರಣಗಳು ಕೆಲಸ ಮಾಡಲು ಯಾವುದೇ ವಿದ್ಯುತ್-ಕೋಶದ ಅವಶ್ಯಕತೆ ಇಲ್ಲದಿರುವುದರಿಂದ, ಇವನ್ನು ಇಂದಿಗೂ ಬಳಸಲಾಗುತ್ತಿದೆ. ಈ ತಾಣಗಳಿಗೆ ಕೆಲವೇ ಸೆಂಟಿಮೀಟರುಗಳಷ್ಟು ನಿಖರತೆಯಲ್ಲಿ ತರಂಗಗಳನ್ನು ಕಳುಹಿಸಿ ಅವುಗಳ ಪ್ರತಿಫಲನವನ್ನು ಕಂಡುಹಿಡಿಯಬಹುದು. ಈ ಪ್ರಯೋಗಗಳಿಂದ ಹೊರಬರುವ ಮಾಹಿತಿಯನ್ನು ಬಳಸಿ, ಚಂದ್ರನ ಒಳಭಾಗದ ಗಾತ್ರವನ್ನು ನಿಖರವಾಗಿ ಕಂಡುಹಿಡಿಯಲಾಗುತ್ತಿದೆ.[೪೦]
೬೦ರ ದಶಕದ ಮಧ್ಯದಿಂದ ೭೦ರ ದಶಕದ ಮಧ್ಯದವರೆಗೆ ಒಟ್ಟು ೬೫ ಚಂದ್ರ ಇಳಿತಗಳು (ಇವುಗಳಲ್ಲಿ ಮಾನವ ಸಹಿತ/ರಹಿತಗಳೆರಡೂ ಸೇರಿದ್ದವು ಹಾಗೂ ೧೯೭೧ರಲ್ಲೇ ೧೦ ಇಳಿತಗಳಾದವು) ಆದವು. ಆದರೆ, ೧೯೭೬ರ ಲೂನ ೨೪ರ ನಂತರ ಇಳಿತಗಳು ನಿಂತುಹೋದವು. ರಷ್ಯಾವು ತನ್ನ ದೃಷ್ಟಿಯನ್ನು ಶುಕ್ರ ಮತ್ತು ಅಂತರಿಕ್ಷ ನಿಲ್ದಾಣಗಳತ್ತ ಹರಿಸಿದರೆ, ಅಮೇರಿಕ ಸಂಯುಕ್ತ ಸಂಸ್ಥಾನವು ಮಂಗಳ ಮತ್ತು ಹೊರಗ್ರಹಗಳ ಕಡೆಗೆ ಗಮನ ಹಾಯಿಸಿತು. ೧೯೯೦ರಲ್ಲಿ ಜಪಾನ್‌ನ ಹೈಟನ್ ನೌಕೆಯು ಚಂದ್ರನ ಸುತ್ತ ಪರಿಭ್ರಮಿಸಿ, ಜಪಾನ್‌ನನ್ನು ಚಂದ್ರ ಕಕ್ಷೆಗೆ ಕೃತಕ ನೌಕೆಯನ್ನು ಸೇರಿಸಿದ ಮೂರನೇ ರಾಷ್ಟ್ರವನ್ನಾಗಿ ಮಾಡಿತು. ಈ ನೌಕೆಯು ಹಗೊರ್ಮೊ ಎಂಬ ಒಂದು ಸಣ್ಣ ಶೋಧಕವನ್ನು ಚಂದ್ರ ಕಕ್ಷೆಯಲ್ಲಿ ಬಿಟ್ಟಿತು. ಆದರೆ, ಈ ಶೋಧಕದ ಪ್ರೇಷಕವು ವಿಫಲವಾಗಿ, ಈ ಇಡೀ ಯಾತ್ರೆಯು ವೈಜ್ಞಾನಿಕ ದೃಷ್ಟಿಯಿಂದ ಅನುಪಯುಕ್ತವಾಯಿತು.
೧೯೯೪ರಲ್ಲಿ ಕಡೆಗೂ ಅಮೇರಿಕ ಸಂಯುಕ್ತ ಸಂಸ್ಥಾನವು ಚಂದ್ರನತ್ತ ಹಿಂದಿರುಗಿತು (ಆದರೆ, ಮಾನವರಹಿತ ನೌಕೆಗಳಲ್ಲಿ). ಸಂಯುಕ್ತ ಸಂಸ್ಥಾನದ ರಕ್ಷಣಾ ಇಲಾಖೆ ಮತ್ತು ನಾಸಾದ ನಡುವೆ ಸಹಯೋಗದಿಂದ ನಡೆದ ಈ ಯಾತ್ರೆಗೆ ಕ್ಲೆಮೆಂಟೀನ್ ಎಂದು ಹೆಸರಿಡಲಾಯಿತು. ಈ ಯಾತ್ರೆಯು ಚಂದ್ರನ ಮೊದಲ ನಿಕಟ ಸ್ಥಳವರ್ಣೀಯ ನಕ್ಷೆಗಳನ್ನು, ಮತ್ತು ಚಂದ್ರನ ಮೇಲ್ಮೈಯ ಮೊದಲ ಬಹುವರ್ಣಪಟಲ ಚಿತ್ರಗಳನ್ನು ಒದಗಿಸಿತು. ಇದರ ನಂತರ ೧೯೯೮ರಲ್ಲಿ ಲೂನಾರ್ ಪ್ರಾಸ್ಪೆಕ್ಟರ್ ಯಾತ್ರೆಯು ನಡೆಯಿತು. ಪ್ರಾಸ್ಪೆಕ್ಟರ್‌ನ ನ್ಯೂಟ್ರಾನ್ ವರ್ಣಪಟಲಮಾಪಕವು ಚಂದ್ರನ ಧ್ರುವಗಳ ಬಳಿ ಹೆಚ್ಚಿನ ಜಲಜನಕದ ಸಾಂದ್ರತೆಯನ್ನು ಸೂಚಿಸಿತು. ಇದು ಬಹುಶಃ ಶಾಶ್ವತವಾಗಿ ನೆರಳಿನಲ್ಲಿರುವ ಕುಳಿಗಳಲ್ಲಿ ಹೆಪ್ಪುಗಟ್ಟಿದ ನೀರನ್ನು ಸೂಚಿಸುತ್ತದೆ. ಸೆಪ್ಟೆಂಬರ್ ೨೭, ೨೦೦೩ರಂದು ಉಡಾಯಿಸಲಾದ ಸ್ಮಾರ್ಟ್ ೧ ಯೂರೋಪಿಯನ್ ಗಗನನೌಕೆಯು ನವೆಂಬರ್ ೧೫, ೨೦೦೪ರಿಂದ ಸೆಪ್ಟೆಂಬರ್ ೩, ೨೦೦೬ರವರೆಗೂ ಚಂದ್ರನನ್ನು ಪರಿಭ್ರಮಿಸುತ್ತಿತ್ತು.
ಜನವರಿ ೧೪, ೨೦೦೪ರಂದು ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಜಾರ್ಜ್ ಬುಷ್ ಅವರು ೨೦೨೦ರಷ್ಟು ಹೊತ್ತಿಗೆ ಮಾನವರನ್ನು ಪುನಃ ಚಂದ್ರನತ್ತ ಕೊಂಡೊಯ್ಯುವ ಯೋಜನೆಗಳನ್ನು ವ್ಯಕ್ತಪಡಿಸಿದರು (ಬಾಹ್ಯಾಕಾಶ ಅನ್ವೇಷಣಾ ಧ್ಯೇಯ ಲೇಖನವನ್ನು ನೋಡಿ).[೪೧] ನಾಸಾ ಈಗ ಚಂದ್ರನ ಒಂದು ಧ್ರುವದ ಬಳಿ ಶಾಶ್ವತ ನೆಲೆಯನ್ನು ಕಟ್ಟುವ ಯೋಜನೆಯನ್ನು ತಯಾರಿಸುತ್ತಿದೆ.[೪೨] ಜಪಾನ್ ದೇಶವು LUNAR-A ಮತ್ತು ಸೆಲೀನ್ ಎಂಬ ಎರಡು ಚಂದ್ರ ಯಾತ್ರೆಗಳ ಯೋಜನೆಯನ್ನು ಹೊಂದಿದೆ. ಭಾರತವು ಫೆಬ್ರವರಿ ೨೦೦೮ರಲ್ಲಿ ಚಂದ್ರಯಾನ್ ೧ ಯಾತ್ರೆಯಿಂದ ಶುರುಮಾಡಿ ಹಲವು ಮಾನವರಹಿತ ಚಂದ್ರಯಾನಗಳ ಉದ್ದೇಶವನ್ನು ಹೊಂದಿದೆ. ೨೦೧೦ ಅಥವಾ ೨೦೧೧ರಲ್ಲಿ ನಡೆಯಲಿರುವ ಚಂದ್ರಯಾನ್ ೨ ಯಾತ್ರೆಯು ಒಂದು ಯಾಂತ್ರಿಕ ಚಂದ್ರ ಪರ್ಯಟಕವನ್ನು ಹೊಂದಿರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನವು ೨೦೦೮ರಲ್ಲಿ ಚಂದ್ರ ಬೇಹುಗಾರಿಕಾ ಪರಿಭ್ರಮಕವನ್ನು ಉಡಾಯಿಸಲಿದೆ. ರಷ್ಯಾವು ಮುಂಚೆ ತಡೆಹಿಡಿಯಲಾಗಿದ್ದ ಲೂನಾ-ಗ್ಲೊಬ್ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ಘೋಷಿಸಿದೆ. ಇದು ೨೦೧೨ರಲ್ಲಿ ಚಂದ್ರನ ಮೇಲೆ ಇಳಿಯುವ ಉದ್ದೇಶವುಳ್ಳ ಮಾನವರಹಿತ ಇಳಿಭಾಗ ಮತ್ತು ಪರಿಭ್ರಮಕವನ್ನು ಹೊಂದಿದೆ.[೪೩]
ಮಾನವ ತಿಳುವಳಿಕೆ
ಹಿಂದಿನಿಂದಲೂ ಕಲೆ ಮತ್ತು ಸಾಹಿತ್ಯದ ಹಲವಾರು ಕೃತಿಗಳಿಗೆ ಕಥಾವಸ್ತುವಾಗಿರುವ ಚಂದ್ರವು ಅಸಂಖ್ಯಾತ ಇತರ ಕೆಲಸ-ಕಾರ್ಯಗಳಿಗೂ ಸ್ಫೂರ್ತಿಯಾಗಿದೆ. ದೃಶ್ಯ ಕಲೆ, ಪ್ರದರ್ಶನ ಕಲೆ, ಕಾವ್ಯ, ಗದ್ಯ, ಸಂಗೀತ, ಇತ್ಯಾದಿಗಳಲ್ಲಿ ಬಳಕೆಯಾಗುವ ಅಲಂಕಾರಿಕ ಸಂಕೇತಗಳಲ್ಲಿ ಚಂದ್ರವೂ ಒಂದು. ನೋಥ್, ಹಿಂದಿನಿಂದಲೂ ಕಲೆ ಮತ್ತು ಸಾಹಿತ್ಯದ ಹಲವಾರು ಕೃತಿಗಳಿಗೆ ಕಥಾವಸ್ತುವಾಗಿರುವ ಚಂದ್ರವು ಅಸಂಖ್ಯಾತ ಇತರ ಕೆಲಸ-ಕಾರ್ಯಗಳಿಗೂ ಸ್ಫೂರ್ತಿಯಾಗಿದೆ. ದೃಶ್ಯ ಕಲೆ, ಪ್ರದರ್ಶನ ಕಲೆ, ಕಾವ್ಯ, ಗದ್ಯ, ಸಂಗೀತ, ಇತ್ಯಾದಿಗಳಲ್ಲಿ ಬಳಕೆಯಾಗುವ ಅಲಂಕಾರಿಕ ಸಂಕೇತಗಳಲ್ಲಿ ಚಂದ್ರವೂ ಒಂದು. ನೋಥ್, ಐರ್‌ಲ್ಯಾಂಡ್‍ನಲ್ಲಿ ದೊರಕಿದ ೫,೦೦೦ ವರ್ಷ ಹಳೆಯ ಕಲ್ಲು ಕೆತ್ತನೆಯೊಂದು ಚಂದ್ರನನ್ನು ನಿರೂಪಿಸಿದ್ದಿರಬಹುದು. ಇದು ಚಂದ್ರನ ಈವರೆಗೆ ಕಂಡುಹಿಡಿಯಲಾದ ಅತ್ಯಂತ ಹಳೆಯ ನಿರೂಪಣೆ.[೪೪] ಹಲವು ಇತಿಹಾಸಪೂರ್ವ ಮತ್ತು ಪ್ರಾಚೀನ ಸಂಸ್ಕೃತಿಗಳಲ್ಲಿ ಚಂದ್ರನನ್ನು ದೇವತೆ ಅಥವಾ ಬೇರೆ ಅಲೌಕಿಕ ಸಂಗತಿಯೆಂದು ನಂಬಲಾಗಿತ್ತು. ಜ್ಯೋತಿಷ್ಯದಲ್ಲಿ ಚಂದ್ರವು ಇಂದಿಗೂ ಒಂದು ಪ್ರಮುಖ ಸ್ಥಾನವನ್ನು ಹೊಂದಿದೆ.
ಪಾಶ್ಚಿಮಾತ್ಯ ವಲಯಗಳಲ್ಲಿ ಚಂದ್ರನ ಬಗ್ಗೆ ವೈಜ್ಞಾನಿಕ ವಿವರಣೆಯನ್ನು ಒದಗಿಸಿದ ಮೊದಲಿಗರಲ್ಲಿ ಗ್ರೀಕ್ ತತ್ವಜ್ಞಾನಿ ಅನಕ್ಸಾಗೊರಸ್ನೂ ಸೇರಿದ್ದನು. ಸೂರ್ಯ ಮತ್ತು ಚಂದ್ರ ಗಳೆರಡೂ ಬೃಹತ್ ಕಲ್ಲುಗಳೆಂದೂ, ಮತ್ತು ಚಂದ್ರನು ಸೂರ್ಯನ ಬೆಳಕನ್ನು ಪ್ರತಿಫಲಿಸುವನೆಂದೂ ಅವನು ತರ್ಕಿಸಿದನು. ದಿವ್ಯ ಆಕಾಶಕಾಯಗಳ ಬಗ್ಗೆ ಅವನಿಗಿದ್ದ ಈ ನಾಸ್ತಿಕ ದೃಷ್ಟಿಕೋನದ ಕಾರಣದಿಂದ, ಅವನನ್ನು ಸೆರೆಹಿಡಿದು ನಂತರ ಗಡೀಪಾರು ಮಾಡಲಾಯಿತು.[೪೫]
ಅರಿಸ್ಟಾಟಲ್‌ನ ಬ್ರಹ್ಮಾಂಡದ ವಿವರಣೆಯ ಪ್ರಕಾರ, ಚಂದ್ರನ ಸ್ಥಾನವು, ಮಾರ್ಪಡಬಲ್ಲ ಭೂತಗಳು (ಭೂಮಿ, ನೀರು, ಗಾಳಿ ಮತ್ತು ಬೆಂಕಿ) ಮತ್ತು ಶಾಶ್ವತ ಭೂತಗಳ (ನಕ್ಷತ್ರಗಳು, ಇತ್ಯಾದಿ) ನಡುವಿನ ಗಡಿರೇಖೆಯ ಮೇಲೆ, ಈ ಬೇರ್ಪಡಿಕೆಯನ್ನು ಭೌತಶಾಸ್ತ್ರದ ಒಂದು ಭಾಗವಾಗಿ ನಂತರದ ಹಲವು ಶತಮಾನಗಳವರೆಗೆ ಬೋಧಿಸಲಾಗುತ್ತಿತ್ತು.[೪೬]
ಮಧ್ಯ ಯುಗದ ಹೊತ್ತಿಗೆ ಹಾಗೂ ದೂರದರ್ಶಕದ ಆವಿಷ್ಕಾರಕ್ಕೆ ಮುಂಚೆ, ಹೆಚ್ಚು ಹೆಚ್ಚು ಜನರು ಚಂದ್ರನನ್ನು ಒಂದು ಗೋಳ ಎಂದು ಪರಿಗಣಿಸಲು ಶುರುಮಾಡಿದರು. ಆದರೂ, ಅವರು ಚಂದ್ರನನ್ನು ಒಂದು ನುಣುಪಾದ ಕಾಯವೆಂದು ನಂಬಿದ್ದರು.[೪೭] ೧೬೦೯ರಲ್ಲಿ ಗೆಲಿಲಿಯೋ ಗೆಲಿಲೈ ತನ್ನ ಪುಸ್ತಕವಾದ Sidereus Nunciusನಲ್ಲಿ ಚಂದ್ರನ ಮೊದಲ ದೂರದರ್ಶಿ ಚಿತ್ರಗಳನ್ನು ಬರೆದು, ಅದರ ಮೇಲ್ಮೈ ನುಣುಪಾಗಿಲ್ಲದೆ ಪರ್ವತಗಳು ಮತ್ತು ಕುಳಿಗಳಿಂದ ಕೂಡಿದೆ ಎಂದು ಟಿಪ್ಪಣಿ ಮಾಡಿದನು. ನಂತರ ೧೭ನೇ ಶತಮಾನದಲ್ಲಿ ಜಿಯೋವಾನಿ ಬಾಟಿಸ್ಟ ರಿಕೋಲಿ ಮತ್ತು ಫ್ರಾನ್ಸೆಸ್ಕೊ ಮರಿಯ ಗ್ರಿಮಾಲ್ಡಿ ಅವರುಗಳು ಚಂದ್ರನ ನಕ್ಷೆಯೊಂದನ್ನು ತಯಾರಿಸಿ ಹಲವು ಕುಳಿಗಳಿಗೆ ಹೆಸರುಗಳನ್ನೂ ಇಟ್ಟರು. ಈ ಹೆಸರುಗಳು ಇಂದಿಗೂ ಬಳಕೆಯಲ್ಲಿವೆ.
ನಕ್ಷಾಪಟಗಳಲ್ಲಿ ಚಂದ್ರನ ಮೇಲ್ಮೈಯ ಗಾಢ ಭಾಗಗಳನ್ನು ಮೇರ್ಗಳೆಂದೂ ಮತ್ತು ತಿಳಿಯಾದ ಭಾಗಗಳನ್ನು ಟೆರೇ ಎಂದೂ ಕರೆಯಲಾಗುತ್ತಿತ್ತು.ಚಂದ್ರನ ಮೇಲೆ ಸಸ್ಯವರ್ಗಗಳು ಇರಬಹುದೆಂಬ ಸಾಧ್ಯತೆಯನ್ನು ೧೯ನೇ ಶತಮಾನದ ಮೊದಲ ದಶಕಗಳಲ್ಲೂ ಖಗೋಳಶಾಸ್ತ್ರಜ್ಞರು ಗಂಭೀರವಾಗಿ ಪರಿಗಣಿಸಿದ್ದರು. ಮಂದವಾದ ಪ್ರಸ್ಥಭೂಮಿಗಳು ಮತ್ತು ಗಾಢವಾದ ಮಟ್ಟಸಗಳ ನಡುವಿನ ವೈದೃಷ್ಯಗಳು ಹಲವು ವಿನ್ಯಾಸಗಳನ್ನು ರೂಪಿಸುತ್ತವೆ. ವಿವಿಧ ಸಂಸೃತಿಗಳು ಈ ವಿನ್ಯಾಸಗಳನ್ನು, ನಕ್ಷಾಪಟಗಳಲ್ಲಿ ಚಂದ್ರನ ಮೇಲ್ಮೈಯ ಗಾಢ ಭಾಗಗಳನ್ನು ಮೇರ್ ಗಳೆಂದೂ ಮತ್ತು ತಿಳಿಯಾದ ಭಾಗಗಳನ್ನು ಟೆರೇ ಎಂದೂ ಕರೆಯಲಾಗುತ್ತಿತ್ತು.ಚಂದ್ರನ ಮೇಲೆ ಸಸ್ಯವರ್ಗಗಳು ಇರಬಹುದೆಂಬ ಸಾಧ್ಯತೆಯನ್ನು ೧೯ನೇ ಶತಮಾನದ ಮೊದಲ ದಶಕಗಳಲ್ಲೂ ಖಗೋಳಶಾಸ್ತ್ರಜ್ಞರು ಗಂಭೀರವಾಗಿ ಪರಿಗಣಿಸಿದ್ದರು. ಮಂದವಾದ ಪ್ರಸ್ಥಭೂಮಿಗಳು ಮತ್ತು ಗಾಢವಾದ ಮಟ್ಟಸಗಳ ನಡುವಿನ ವೈದೃಷ್ಯಗಳು ಹಲವು ವಿನ್ಯಾಸಗಳನ್ನು ರೂಪಿಸುತ್ತವೆ. ವಿವಿಧ ಸಂಸೃತಿಗಳು ಈ ವಿನ್ಯಾಸಗಳನ್ನು ಚಂದ್ರಮಾನವ, ಮೊಲ, ಎಮ್ಮೆ, ಇತ್ಯಾದಿಗಳ ಆಕಾರಗಳೆಂದು ಪರಿಗಣಿಸುತ್ತವೆ.
೧೮೩೫ರ ದೊಡ್ಡ ಚಂದ್ರ ವಂಚನೆಯ ಕಾರಣದಿಂದ, ಹಲವರು ಚಂದ್ರನ ಮೇಲೆ ವಿನೂತನ ಪ್ರಾಣಿಗಳಿವೆ ಎಂದು ನಂಬಲು ಶುರು ಮಾಡಿದ್ದರು.[೪೮] ಆದರೆ, ಸುಮಾರು ಅದೇ ಸಮಯದಲ್ಲಿ (೧೮೩೪–೧೮೩೬), ವಿಲ್ಹೆಮ್ ಬೀರ್ ಮತ್ತು ಯೋಹಾನ್ ಹೈನ್ರಿಖ್ ಮೆಡ್ಲರ್ರು ನಾಲು ಸಂಪುಟಗಳ ತಮ್ಮ Mappa Selenographica ವನ್ನು ಮತ್ತು Der Mond ಪುಸ್ತಕವನ್ನು ಪ್ರಕಾಶಿಸುವುದರಲ್ಲಿದ್ದರು. ಚಂದ್ರನ ಮೇಲೆ ನೀರು ಅಥವಾ ಗಮನಾರ್ಹವಾದ ವಾಯುಮಂಡಲಗಳು ಇಲ್ಲವೆಂದು ಇವು ದೃಢವಾಗಿ ಸಾಬೀತುಪಡಿಸಿದವು.
೧೯೫೯ರಲ್ಲಿ ಲೂನಾ ೩ ಶೋಧಕದ ಉಡಾವಣೆಗೆ ಮುನ್ನ ಚಂದ್ರನ ಹಿಮ್ಮುಖದ ಬಗ್ಗೆ ಏನೇನೂ ತಿಳಿದಿರಲಿಲ್ಲ. ೬೦ರ ದಶಕದ ಚಂದ್ರ ಪರಿಭ್ರಮಣಾ ಕಾರ್ಯಕ್ರಮವು ಈ ಮುಖವನ್ನು ವ್ಯಾಪಕವಾಗಿ ನಕ್ಷಿಸಿತು.
ಕಾನೂನು ರೀತ್ಯಾ ಸ್ಥಾನಮಾನ
ರಷ್ಯಾ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಹಲವು ಬಾವುಟಗಳನ್ನು ಸಾಂಕೇತಿಕವಾಗಿ ಚಂದ್ರನ ಮೇಲೆ ನೆಡಲಾಗಿದ್ದರೂ, ಈ ಎರಡು ದೇಶಗಳು ಚಂದ್ರನ ಯಾವುದೇ ಭಾಗವನ್ನು ತಮ್ಮದೆಂದು ಹೇಳಿಕೊಳ್ಳುವುದಿಲ್ಲ. ರಷ್ಯಾ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನಗಳೆರಡೂ ಸಹಿ ಹಾಕಿರುವ ಬಾಹ್ಯಾಕಾಶ ಒಪ್ಪಂದದ ಪ್ರಕಾರ, ಚಂದ್ರನ ನೆಲವು ಅಂತರರಾಷ್ಟ್ರೀಯ ಜಲ ವಲಯಗಳ ಆಡಳಿತ ವ್ಯಾಪ್ತಿಗೇ ಒಳಪಡುತ್ತದೆ. ಈ ಒಪ್ಪಂದವು ಚಂದ್ರನ ಬಳಕೆಯನ್ನು ಶಾಂತಿಯುತ ಕಾರಣಗಳಿಗೆ ಮಾತ್ರ ಮಿತಿಗೊಳಿಸುವುದಲ್ಲದೆ, ಪರಮಾಣು ಆಯುಧಗಳು ಸೇರಿದಂತೆ ಯಾವುದೇ ವಿನಾಶಕಾರಿ ಆಯುಧಗಳ ಹಾಗೂ ಸೇನಾ ಸ್ಥಾಪನೆಗಳನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ.
ಚಂದ್ರನ ಸಂಪನ್ಮೂಲಗಳನ್ನು ಯಾವುದೇ ಒಂದು ರಾಷ್ಟ್ರವು ಬಳಸಿಕೊಳ್ಳುವುದನ್ನು ತಪ್ಪಿಸಲು ಒಂದು ಚಂದ್ರ ಒಪ್ಪಂದವನ್ನು ಪ್ರತಿಪಾದಿಸಲಾಗಿದ್ದರೂ, ಬಾಹ್ಯಾಕಾಶದಲ್ಲಿ ಆಸಕ್ತಿಯುಳ್ಳ ಯಾವ ರಾಷ್ಟ್ರಗಳೂ ಇದಕ್ಕೆ ಸಹಿ ಹಾಕಿಲ್ಲ. ಹಲವು ವ್ಯಕ್ತಿಗಳು ಚಂದ್ರನನ್ನು ಪೂರ್ಣವಾಗಿ ಅಥವಾ ಭಾಗಶಃ ತಮ್ಮ ಆಸ್ತಿಯೆಂದು ಹೇಳಿಕೊಂಡಿದ್ದರೂ, ಇವು ಯಾವುವೂ ನಂಬಲರ್ಹವಾದ ಅಥವಾ ಕಾನೂನಿನ ಬೆಂಬಲವುಳ್ಳ ಹೇಳಿಕೆಗಳೆಂದು ಪರಿಗಣಿಸಲಾಗುವುದಿಲ್ಲ.
ಇವನ್ನೂ ನೋಡಿ
- ವ್ಯಾಪಕ ತಾಡಿಕೆ
- ಚಂದ್ರನ ಮೇಲಿರುವ ಕೃತಕ ವಸ್ತುಗಳ ಪಟ್ಟಿ
- ಚಂದ್ರನ ಕುಳಿಗಳ ಪಟ್ಟಿ
- ಚಂದ್ರನ ಮೇಲ್ಮೈ ವೈಶಿಷ್ಟ್ಯಗಳ ಪಟ್ಟಿ
- ಚಂದ್ರನ ಮಟ್ಟಸಗಳ ಪಟ್ಟಿ
- ಚಂದ್ರನ ಮೇಲಿನ ಪರ್ವತಗಳ ಪಟ್ಟಿ
- ಚಂದ್ರನ ಮೇಲಿನ ಕಣಿವೆಗಳ ಪಟ್ಟಿ
- ಮಾಸ
- ಚಾಂದ್ರ ವಿವರಣಾ ಶಾಸ್ತ್ರ
- ಬಾಹ್ಯಾಕಾಶದಲ್ಲಿ ಹವಾಕ್ರಿಯೆಗಳು
ಉಲ್ಲೇಖಗಳು
- ↑ ೧.೦ ೧.೧ ೧.೨ ೧.೩ ೧.೪ ೧.೫ ೧.೬ Spudis, Paul D. (2004). "Moon". World Book Online Reference Center, NASA. Archived from the original on 2013-07-03. Retrieved 2006-12-23.
- ↑ M. Braukus, B. Dickey, K. Humphries (December 4, 2006). "NASA Unveils Global Exploration Strategy and Lunar Architecture". NASA. Archived from the original on 2018-06-05. Retrieved 2006-08-10.
{cite web}
: CS1 maint: multiple names: authors list (link) - ↑ Alexander, M. E. (1973). "The Weak Friction Approximation and Tidal Evolution in Close Binary Systems". Astrophysics and Space Science. 23: 459–508.
- ↑ J. J. Gillis, P. D. Spudis (1996). "The Composition and Geologic Setting of Lunar Far Side Maria". Lunar and Planetary Science. 27: 413–404.
- ↑ ೫.೦ ೫.೧ ೫.೨ ೫.೩ Charles Shearer and 15 coauthors (2006). "Thermal and magmatic evolution of the Moon". Reviews in Mineralogy and Geochemistry. 60: 365–518.
{cite journal}
: CS1 maint: numeric names: authors list (link) - ↑ G. Jeffrey Taylor (August 31, 2000). "A New Moon for the Twenty-First Century".
- ↑ Lionel Wilson James W. Head (2003). "Lunar Gruithuisen and Mairan domes: Rheology and mode of emplacement". Journal of Geophysical Research. 108. Archived from the original on 2007-03-12. Retrieved 2007-03-09.
- ↑ "Lunar Orbiter: Impact Basin Geology" (in English). Lunar and Planetary Institute. October 3, 2000. Retrieved 2006-12-24.
{cite web}
: CS1 maint: unrecognized language (link) - ↑ ೯.೦ ೯.೧ Linda, Martel (June 4, 2003). "The Moon's Dark, Icy Poles".
- ↑ H. J. Melosh (1989). Impact cratering: A geologic process. Oxford Univ. Press.
- ↑ G. Jeffrey Taylor (1998). "The biggest hole in the Solar System".
- ↑ G. Heiken, D. Vaniman, and B. French (editors) (1991). Lunar Sourcebook, a user's guide to the Moon. Cambridge University Press, New York. pp. 736 pp.
{cite book}
:|last=
has generic name (help)CS1 maint: multiple names: authors list (link) - ↑ K. L. Rasmussen, P. H. Warren (1985). "Megaregolith thickness, heat flow, and the bulk composition of the moon". Nature. 313: 121–124.
- ↑ "Lunar Polar Composites" (GIF). Retrieved 2006-03-20.
- ↑ "Eureka! Ice found at lunar poles". August 31, 2001. Archived from the original on ಆಗಸ್ಟ್ 6, 2013. Retrieved ಮಾರ್ಚ್ 9, 2007.
- ↑ ೧೬.೦ ೧೬.೧ P. Lucey and 12 coauthors (2006). "Understanding the lunar surface and space-Moon interactions". Reviews in Mineralogy and Geochemistry. 60: 83–219.
{cite journal}
: CS1 maint: numeric names: authors list (link) - ↑ ೧೭.೦ ೧೭.೧ ೧೭.೨ ೧೭.೩ Mark Wieczorek and 15 coauthors (2006). "The constitution and structure of the lunar interior". Reviews in Mineralogy and Geochemistry. 60: 221–364.
{cite journal}
: CS1 maint: numeric names: authors list (link) - ↑ J. G. Williams, S. G. Turyshev, D. H. Boggs, J. T. Ratcliff (2006). "Lunar laser ranging science: Gravitational physics and lunar interior and geodesy". Advances in Space Research. 37 (1): 67–71.
{cite journal}
: CS1 maint: multiple names: authors list (link) - ↑ Paul Muller and William Sjogren (1968). "Masons: lunar mass concentrations". Science. 161: 680–684.
- ↑ Hood, L. L., and Z. Huang (1991). "Formation of magnetic anomalies antipodal to lunar impact basins: Two-dimensional model calculations". J. Geophys. Res. 96: 9837–9846.
{cite journal}
: CS1 maint: multiple names: authors list (link) - ↑ S. Lawson, W. Feldman, D. Lawrence, K. Moore, R. Elphic, and R. Belian (2005). "Recent outgassing from the lunar surface: the Lunar Prospector alpha particle spectrometer". J. Geophys. Res. 110: doi:10.1029/2005JE002433.
{cite journal}
: CS1 maint: multiple names: authors list (link) - ↑ S. Alan Stern (1999). "The Lunar atmosphere: History, status, current problems, and context". Rev. Geophys. 37: 453–491.
- ↑ Binder, A. B. (1974). "On the origin of the moon by rotational fission". The Moon. 11 (2): 53–76.
- ↑ Mitler, H. E. (1975). "Formation of an iron-poor moon by partial capture, or: Yet another exotic theory of lunar origin". Icarus. 24: 256–268.
- ↑ Stevenson, D. J. (1987). "Origin of the moon - The collision hypothesis". Annual review of earth and planetary sciences. 15: 271–315.
- ↑ R. Canup and E. Asphaug (2001). "Origin of the Moon in a giant impact near the end of the Earth's formation". Nature. 412: 708–712.
- ↑ Thorsten Kleine (2005). "Hf-W Chronometry of Lunar Metals and the Age and Early Differentiation of the Moon". Science. 310 (5754): 1671–1674. doi:10.1126/science.1118842. Archived from the original on 2007-09-27. Retrieved 2007-01-27.
{cite journal}
: Unknown parameter|coauthors=
ignored (|author=
suggested) (help) - ↑ James Papike, Grahm Ryder, and Charles Shearer (1998). "Lunar Samples". Reviews in Mineralogy and Geochemistry. 36: 5.1–5.234.
{cite journal}
: CS1 maint: multiple names: authors list (link) - ↑ H. Hiesinger, J. W. Head, U. Wolf, R. Jaumanm, and G. Neukum (2003). "Ages and stratigraphy of mare basalts in Oceanus Procellarum, Mare Numbium, Mare Cognitum, and Mare Insularum". J. Geophys. Res. 108: doi:10.1029/2002JE001985.
{cite journal}
: CS1 maint: multiple names: authors list (link) - ↑ G. Jeffrey Taylor (2006). "Recent Gas Escape from the Moon". Archived from the original on 2007-03-04. Retrieved 2007-03-10.
- ↑ P. H. Schultz, M. I. Staid, and C. M. Pieters (2006). "Lunar activity from recent gas release". Nature. 444: 184–186.
{cite journal}
: CS1 maint: multiple names: authors list (link) - ↑ Phillips, Tony (July 20, 2004). "What Neil & Buzz Left on the Moon". Science @ NASA. Archived from the original on 2007-05-29. Retrieved 2006-12-23.
- ↑ Ray, Richard (May 15, 2001). "Ocean Tides and the Earth's Rotation". IERS Special Bureau for Tides. Archived from the original on 2010-03-27. Retrieved 2006-12-23.
- ↑ "No, it's not our "second" moon!!!" (in English). Archived from the original on 2009-01-19. Retrieved 2006-10-10.
{cite web}
: CS1 maint: unrecognized language (link) - ↑ M. H. M. Morais, A. Morbidelli (2002). "The Population of Near-Earth Asteroids in Coorbital Motion with the Earth". Icarus. 160: 1–9.
- ↑ ೩೬.೦ ೩೬.೧ Jim Thieman and Shane Keating (May 2, 2006). "Eclipse 99, Frequently Asked Questions". NASA. Archived from the original on 2007-02-11. Retrieved 2007-01-04.
- ↑ Espenak, Fred (2000). "Solar Eclipses for Beginners". MrEclipse. Retrieved 2007-01-04.
- ↑ "Total Lunar Occultations". Royal Astronomical Society of New Zealand. Retrieved 2007-01-04.
- ↑ Spekkens, Kristine (2002). "Is the Moon seen as a crescent (and not a "boat") all over the world?". Curious About Astronomy. Retrieved 2006-03-20.
{cite web}
: Unknown parameter|month=
ignored (help) - ↑ J. Dickey, P. Bender, J. Faller, X. Newhall, R. Ricklefs, J. Ries, P. Shelus, C. Veillet, A. Whipple, J. Wiant, J. Williams, and C. Yoder (1994). "Lunar laser ranging: a continuing legacy of the Apollo program". Science. 265: 482–490.
{cite journal}
: CS1 maint: multiple names: authors list (link) - ↑ "President Bush Offers New Vision For NASA" (Press release). NASA. Dec. 14, 2004. Archived from the original on 2021-07-14. Retrieved 2021-07-21.
{cite press release}
: Check date values in:|date=
(help) - ↑ "NASA Unveils Global Exploration Strategy and Lunar Architecture" (Press release). NASA. Dec. 4, 2006. Archived from the original on 2018-06-05. Retrieved Dec. 4, 2006.
{cite press release}
: Check date values in:|accessdate=
and|date=
(help) - ↑ Craig Covault (June 4, 2006). "Russia Plans Ambitious Robotic Lunar Mission". Archived from the original on ಜೂನ್ 12, 2006. Retrieved ಮಾರ್ಚ್ 18, 2007.
- ↑ "Carved and Drawn Prehistoric Maps of the Cosmos". Space Today Online. Retrieved 2006-10-08.
- ↑ J. J. O'Connor, E. F. Robertson (February 1999). "Anaxagoras of Clazomenae". University of St Andrews. Retrieved 2007-01-04.
- ↑ C.S. Lewis, The Discarded Image, p ೧೦೮, Cambridge University Press, ೧೯೬೪, Cambridge ISBN ೦-೫೨೧೦೪೭೭೩೫-೨
- ↑ Van Helden, Al (1995). "The Moon". Galileo Project. Archived from the original on 2004-06-23. Retrieved 2007-01-12.
- ↑ Alex Boese (2002). "The Great Moon Hoax" (in English).
{cite web}
: CS1 maint: unrecognized language (link)
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |