ಪೆಟ್ರೋಲ್ ಇಂಜಿನ್
ಉಷ್ಣಯಂತ್ರಗಳಲ್ಲಿ ಎರಡು ವಿಧಗಳಿವೆ:- ೧.ಬಹಿರ್ದಹನ ಯಂತ್ರಗಳು:- ಹಬೆ ಇಂಜಿನ್ ೨.ಅಂತರ್ದಹನ ಯಂತ್ರಗಳು.:- ಪೆಟ್ರೋಲ್ ಹಾಗೂ ಡಿಸಲ್ ಇಂಜಿನ್
ಪೆಟ್ರೋಲ್ ಇಂಜಿನ್
ಅಂತರ್ದಹನ ಎಂಜನ್ನಿನಲ್ಲಿ ಇಂಧನದ ದಹನ ಕ್ರಿಯೆಯು ಸಿಲಿಂಡರಿನೊಳಗೇ ನಡೆಯುತ್ತದೆ. ಪೆಟ್ರೋಲ್ ಇಂಜಿನ್ ನಲ್ಲಿ ಒಂದು ಸಿಲಿಂಡರಿನ ಒಳಗೆ ಸುಲಭವಾಗಿ ಚಲಿಸುವ ಪಿಸ್ಟನ್ ಇದೆ. ಸಿಲಿಂಡರಿನ ತಲೆಭಾಗದಲ್ಲಿ ಎರಡು ಕವಾಟಗಳು- ಆಗಮ ಕವಾಟ ಮತ್ತು ನಿರ್ಗಮ ಕವಾಟ ಇವೆ. ಹಾಗೂ ಒಂದು ಕಿದಿಬೆಣೆ(spark plug) ಇದೆ. ಪಿಸ್ಟನ್ ಅನ್ನು ವಕ್ರದಂಡವೊಂದಕ್ಕೆ ಬಂಧಿಸಲಾಗಿರುತ್ತದೆ. ವಕ್ರದಂಡವು ರೇಖೀಯ ಚಲನೆಯನ್ನು ಭ್ರಮಣೆಯಾಗಿ ಪರಿವರ್ತಿಸುತ್ತದೆ. ಇಂಜಿನ್ನನ್ನು ಒಂದು ಕಾರ್ಬೋರೇಟರ್ ಗೆ ಸಂಪರ್ಕಿಸಲಾಗಿರುತ್ತದೆ. ಪೆಟ್ರೋಲ್ ಮತ್ತು ಗಾಳಿ ಮಿಶ್ರಣವು ಸರಿಯಾದ ಪ್ರಮಾಣದಲ್ಲಿ ಇಂಜಿನ್ ಒಳಗೆ ಪ್ರವೇಶಿಸುವಂತೆ ಕಾರ್ಬೊರೇಟರ್ ಹೋಂದಿಸುತ್ತದೆ.
ಕಾರ್ಯನಿರ್ವಹಣೆ
ಇದು ನಾಲ್ಕು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ೧.ಭುಕ್ತಿ ಹೊಡೆತ ೨ಸಂಪೀಡನಾ ಹೊಡೆತ ೩.ವ್ಯಾಕೋಚನ ಹೊಡೆತ ೪.ನಿಷ್ಕಾಸ ಹೊಡೆತ
ಭುಕ್ತಿ ಹೊಡೆತ
ಪಿಸ್ಟನ್ ಸಿಲಿಂಡರಿನ ತಲೆಭಾಗದಿಂದ ದೂರ ಚಲಿಸುತ್ತದೆ. ಇದರಿಮ್ದ ಸಿಲಿಂಡರಿನ ಒಳಗಿನ ಒತ್ತಡ ಕಡಿಮೆಯಾಗಿ ಆಗಮ ಕವಾಟ ತೆರೆದುಕೊಳ್ಳುತ್ತದೆ. ಇಂಧನ ಮಿಶ್ರಣವು ಕಾರ್ಬರೇಟರಿನಿಂದ ಸಿಲಿಂಡರಿನೊಳಕ್ಕೆ ತುಂಬಿಕೊಂಡಿರುತ್ತದೆ.
ಸಂಪೀಡನ ಹೊಡೆತ
ಆಗಮ ಮತ್ತು ನಿರ್ಗಮ ಕವಾಟಗಳೆರಡೂ ಮುಚ್ಚಿರುತ್ತವೆ. ಪಿಸ್ಟನ್ ಸಿಲಿಂಡರಿನ ತಲೆಕಡೆಗೆ ಚಲಿಸಿ, ಒಳಗಿನ ಮಿಶ್ರಣವನ್ನು ಸಂಪೀಡಿಸುತ್ತದೆ.
ವ್ಯಾಕೋಚನ ಹೊಡೆತ
ಸಂಪೀಡಿತ ಮಿಶ್ರಣವನ್ನು ಸ್ಪಾರ್ಕ್ ಪ್ಲಗ್ ನಿಂದ ಹೊಮ್ಮುವ ಕಿಡಿಯು ಹೊತ್ತಿಸುತ್ತದೆ. ಮಿಶ್ರಣದ ದಹನ ಕ್ರಿಯೆಯಿಂದ ಹೆಚ್ಚು ಪ್ರಮಾಣದ ಉಷ್ಣ ಬಿಡುಗಡೆಯಾಗುತ್ತದೆ ದಹನ ಕ್ರಿಯೆಯ ಉತ್ಪನ್ನಗಳಾದ ಇಂಗಾಲದ ಡೈ ಆಕ್ಸೈಡ್ ಮತ್ತು ನೀರಿನ ಆವಿಗಳು ಥಟ್ಟನೆ ವ್ಯಾಕೋಚನ ಹೊಂದುತ್ತವೆ. ಪಿಸ್ಟನ್ ಹೆಚ್ಚು ಬಲದಿಂದ ಹೊರ ತಳ್ಳಲ್ಪಡುತ್ತದೆ.
ನಿಷ್ಕಾಸ ಹೊಡೆತ
ನಿರ್ಗಮ ದ್ವಾರ ಕವಾಟವು ತೆರೆದುಕೊಳ್ಳುತ್ತದೆ. ತ್ಯಾಜ್ಯ ಅನಿಲಗಳು ಇದರ ಮೂಲಕ ಸಿಲಿಂಡರ್ ನಿಂದ ಹೊರಕ್ಕೆ ತಳ್ಳಲ್ಪಡುತ್ತವೆ.
ಈ ನಾಲ್ಕು ಹೊದೆತಗಳು ಪುನರಾವರ್ತಿಸುತ್ತವೆ. ಪಿಸ್ಟನ್ ಹಿಂದಕ್ಕೂ ಮುಂದಕ್ಕು ವೇಗವಾಗಿ ಚಲಿಸುತ್ತದೆ. ಇದು ವಕ್ರದಂಡವನ್ನು ತಳ್ಳುತ್ತದೆ ಮತ್ತು ಅದನ್ನು ವೇಗವಾಗಿ ಭ್ರಮಿಸುವಂತೆ ಮಾಡುತ್ತದೆ. ಇಂಜಿನ್ನಿಗೆ ಅಗತ್ಯವಾದ ಆರಂಭಿಕ ಚಲನಶಕ್ತಿಯನ್ನು ವಿದ್ಯುತ್ ಪ್ರಾರಂಭಕ, ಒತ್ತು ಪ್ರಾರಂಭಕ ಅಥವಾ ನೂಕು ವಿಧಾನದಿಂದ ಒದಗಿಸಲಾಗುತ್ತದೆ