ರಕ್ತಪೂರಣ
ರಕ್ತಪೂರಣ ಎಂದರೆ ಒಬ್ಬ ವ್ಯಕ್ತಿಯ ಪರಿಚಲನೆಯೊಳಗೆ ರಕ್ತದ ಉತ್ಪನ್ನಗಳನ್ನು ಅಂತರಭಿಧಮನಿರೀತ್ಯ ವರ್ಗಾಯಿಸುವ ಪ್ರಕ್ರಿಯೆ.[೧]
ರಕ್ತಪೂರಣೆ ಬೇಕಾಗುವ ಸಂದರ್ಭಗಳು
ರೋಗಿ ರಕ್ತದ ಆವಶ್ಯಕತೆಯನ್ನು, ಆಯಾ ವಿಭಾಗದ ವೈದ್ಯರೇ ನಿರ್ಧರಿಸುತ್ತಾರೆ. ರೋಗಿಗೆ ರಕ್ತ ಪೂರಣೆಯ ಆವಶ್ಯಕತೆ ಇರುವ ಸಂದರ್ಭಗಳೆಂದರೆ:
- ತೀವ್ರವಾದ ಅಪಘಾತಗಳಾಗಿ, ತುಂಬಾ ರಕ್ತಸ್ರಾವವಾದಾಗ,
- ತೀವ್ರವಾದ ರಕ್ತಹೀನತೆ
- ಗಂಭೀರ ಸ್ವರೂಪದ ಮಲೇರಿಯಾ ಜ್ವರದಲ್ಲಿ, ಬಹಳಷ್ಟು ಕೆಂಪು ರಕ್ತಕಣಗಳ ನಾಶವಾದಾಗ (ಫಾಲ್ಸಿಫಾರಮ್ ಮಲೇರಿಯಾ),
- ಥಾಲಸ್ಸೀಮಿಯಾ ರೋಗಿಗಳಲ್ಲಿ
- ಸಿಕಲ್ ಸೆಲ್ ರೋಗಿಗಳಲ್ಲಿ
- ಬದಲಿ ಪೂರಣೆ (exchange transfusion) ರಕ್ತಸ್ರಾವರೋಗದಲ್ಲಿ (ನವಜಾತ ಶಿಶುವಿನಲ್ಲಿ)
- ಶಸ್ತ್ರಚಿಕಿತ್ಸೆ ಮಾಡುವಾಗ ಅತಿಯಾದ ರಕ್ತಸ್ರಾವವಾದಾಗ,
- ಹೆರಿಗೆ ಸಮಯದಲ್ಲಿ ಅತಿಯಾದ ರಕ್ತಸ್ರಾವವಾದಾಗ,
- ಗರ್ಭಸ್ರಾವವಾದಾಗ.
ಹಾಗೂ, ಇನ್ನಿತರ ಅನೇಕ ಸಂದರ್ಭಗಳಲ್ಲಿ ರೋಗಿಗೆ ರಕ್ತ ಪೂರಣೆಯ ಅಗತ್ಯ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ಸಂಬಂಧಿಸಿದ ವೈದ್ಯರು ರಕ್ತನಿಧಿಯಲ್ಲಿರುವ ಬೇಡಿಕೆ ಪತ್ರ (Requisiton form) ದಲ್ಲಿ ರೋಗಿಯ ವಿವರಗಳನ್ನೆಲ್ಲ ತುಂಬಿ, ರೋಗಿಯ ರಕ್ತದ ಸ್ಯಾಂಪಲ್ಲಿನ ಜೊತೆ ಕಳುಹಿಸಿಕೊಡುತ್ತಾರೆ.
ರಕ್ತಪೂರಣೆಗೆ ಮೊದಲು
ರಕ್ತನಿಧಿಯಲ್ಲಿ,
- ಮೊದಲು ರೋಗಿಯ ರಕ್ತದ ಗುಂಪನ್ನು ಕಂಡುಹಿಡಿಯಲಾಗುತ್ತದೆ.
- ರೋಗಿಯ ರಕ್ತದ ಜೊತೆ, ರಕ್ತನಿಧಿಯಲ್ಲಿರುವ ಅದೇ ಗುಂಪಿನ ರಕ್ತದ ಜೊತೆ ಹೊಂದಾಣಿಕೆ ಆಗುತ್ತದೋ ಇಲ್ಲವೋ ಎಂದು ಪರೀಕ್ಷಿಸಿ ನೋಡಲಾಗುತ್ತದೆ. (cross matching)
- ರೋಗಿಯ ರಕ್ತದಲ್ಲಿ ಯಾವುದಾದರೂ ಅನಪೇಕ್ಷಿತ ಪ್ರತಿರೋಧಕಗಳು (unexpected antibodies) ಇವೆಯೋ ಎಂದು ಪರೀಕ್ಷಿಸಿ ನೋಡಲಾಗುತ್ತದೆ.[೨]
ತಾಜಾ ರಕ್ತ (fresh blood) ಅಂದರೆ 24 ಗಂಟೆಗಳ ಒಳಗಾಗಿ ಶೇಖರಿಸಿದ ರಕ್ತದ ಸಲುವಾಗಿ ಬಹಳ ಜನ ವೈದ್ಯರು ಬೇಡಿಕೆ ಸಲ್ಲಿಸುತ್ತಾರೆ. ಆದರೆ, ಆ ರಕ್ತದ ಗುಂಪನ್ನು ಪರೀಕ್ಷಿಸಿ, ನಂತರ ಹೆಚ್.ಐ.ವಿ, ಎಚ್.ಬಿ.ಎಸ್ ರೋಧಕ, ಹೆಪಟೈಟಿಸ್ ಸಿ, ಮಲೇರಿಯಾ ಮತ್ತು ಸಿಫಿಲಿಸ್ (ವಿಡಿಆರ್‌ಎಲ್) ಗಳಿಗಾಗಿ ಪರೀಕ್ಷಿಸಬೇಕು.[೩] ಮತ್ತೆ ಯಾವುದಾದರೂ ಪ್ರತಿರೋಧಕಗಳಿವೆಯೋ ಎಂದು ಪರೀಕ್ಷಿಸಬೇಕು. ನಂತರ ರೋಗಿಯ ರಕ್ತದ ಜೊತೆ ರಕ್ತದ ಹೊಂದಾಣಿಕೆಯಾಗಬೇಕು. ಇಷ್ಟೆಲ್ಲಾ ಆಗಲು ಕನಿಷ್ಠ ಒಂದು ದಿನವಾದರೂ ಬೇಕು. ಆದ್ದರಿಂದ ಇವೆಲ್ಲಾ ಪರೀಕ್ಷೆಗಳಿಗೆ ಒಳಪಟ್ಟ, ಒಳ್ಳೆಯ, ಯಾವ ರೋಗದ ಸೊಂಕೂ ಇಲ್ಲದ ಮತ್ತು ಯಾವ ಪ್ರತಿರೋಧಕಗಳೂ ಇಲ್ಲದ ರಕ್ತವನ್ನು ರೋಗಿಗೆ ಕೊಡುವುದು ಹೆಚ್ಚು ಸೂಕ್ತ.
ಸಂಬಂಧಿಕರ ರಕ್ತವನ್ನೇ ಪೂರಣೆಮಾಡಬೇಕೆಂಬ ತಪ್ಪು ಕಲ್ಪನೆ ಜನರಲ್ಲಿದೆ. ಆದರೆ, ಸಂಬಂಧಿಕರ ರಕ್ತವನ್ನು ನೀಡಿದರೆ, ಕಸಿ-ಅತಿಥೇಯ ರೋಗ (Graft Versus Host) (ಈ ರೋಗ) ಆಗುವ ಸಂಭವ ಹೆಚ್ಚೆಂದು ದೃಢಪಟ್ಟಿದೆ. ಮತ್ತು ಕೆಲವರು ತಮ್ಮ ಸಂಬಂಧಿಗಳಿಗೆ ರಕ್ತದಾನ ಮಾಡುವಾಗ, ತಮಗಿರುವ ಅಥವಾ ಹಿಂದೆ ಆಗಿರಬಹುದಾದ ಕಾಯಿಲೆಗಳನ್ನು ಮುಚ್ಚಿಡುವ ಸಂದರ್ಭಗಳೇ ಹೆಚ್ಚು. ಆದ್ದರಿಂದ ಸಂಬಂಧಿಕರಿಗೆ ರಕ್ತದಾನ ಮಾಡಬೇಕೆಂಬುದು ಒಂದು ತಪ್ಪು ಕಲ್ಪನೆ.
ರಕ್ತಪೂರಣೆಯ ಪರಿಣಾಮಗಳು
ರಕ್ತಪೂರಣೆಯಿಂದಾಗುವ ಕೆಲವು ಪರಿಣಾಮಗಳೆಂದರೆ, ಕೆಲವೇ ಕೆಲವರಲ್ಲಿ, ಅಂದರೆ ಶೇಕಡಾ 1 ರಿಂದ 2 ರಷ್ಟು ಜನರಲ್ಲಿ ಕೆಲವು ದುಷ್ಪರಿಣಾಮದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಲಕ್ಷಣಗಳು ರಕ್ತ ಪೂರಣೆ ಪ್ರಾರಂಭಿಸಿದ ಕೆಲವು ಕ್ಷಣಗಳಲ್ಲಿ ಕಾಣಿಸಿಕೊಳ್ಳಬಹುದು, ಅಥವಾ ಕೆಲವು ಗಂಟೆಗಳ ನಂತರ ಕಾಣಿಸಿಕೊಳ್ಳಬಹುದು. ಅವುಗಳೆಂದರೆ, ಮೈಯಲ್ಲಿ ದದ್ದೆ (urticarial rash) ಏಳುವುದು, ತುರಿಕೆಯುಂಟಾಗುವುದು, ಮೈ ಕೆಂಪಾಗುವುದು, ಜ್ವರ, ಚಳಿ, ತಲೆನೋವು, ಹೆಚ್ಚಾದ ಎದೆಬಡಿತ, ದಮ್ಮು ಬರುವುದು, ಸೊಂಟನೋವು, ಮೂತ್ರದಲ್ಲಿ ರಕ್ತಹೋಗುವುದು ಇತ್ಯಾದಿ. ಈ ಲಕ್ಷಣಗಳಲ್ಲಿ ಯಾವುದಾದರೂ ಒಂದು ಕಾಣಿಸಿಕೊಂಡರೂ ಕೂಡಲೇ ಸಂಬಂಧಿಸಿದ ವೈದ್ಯರು ರಕ್ತಪೂರಣೆಯನ್ನು ನಿಲ್ಲಿಸಿ, ಸೂಕ್ತಚಿಕಿತ್ಸೆಯನ್ನು ನೀಡಬೇಕು. ಮತ್ತು ಸಂಬಂಧಿಸಿದ ರಕ್ತನಿಧಿಯ ವೈದ್ಯಾಧಿಕಾರಿಗೆ ಅದರ ಬಗ್ಗೆ ತಿಳಿಸಬೇಕು. ಮತ್ತು ಅದಕ್ಕೆ ಕಾರಣವೇನೆಂದು ಪತ್ತೆ ಹಚ್ಚಬೇಕು.
ಮತ್ತೆ ಕೆಲವರಲ್ಲಿ, ಸುಮಾರು ರಕ್ತಪೂರಣೆಮಾಡಿದ 10-12 ದಿನಗಳ ನಂತರ ಕಸಿ-ಅತಿಥೇಯ ಪ್ರತಿಕ್ರಿಯೆ ಕಾಣಿಸಿಕೊಳ್ಳಬಹುದು. ಅದರ ಲಕ್ಷಣಗಳೆಂದರೆ, ಜ್ವರ, ಮೈಮೇಲೆ ಗುಳ್ಳೆಗಳೆದ್ದು ಚರ್ಮಸುಲಿಯುವುದು, ಭೇದಿಯಾಗುವುದು, ಕಾಮಾಲೆಯಾಗುವುದು ಹಾಗೂ ಎಲ್ಲಾ ರಕ್ತಕಣಗಳ ಸಂಖ್ಯೆ ತುಂಬಾ ಕಡಿಮೆಯಾಗುವುದು. ಇದು ಸಂಬಂಧಿಕರಿಂದ ರಕ್ತ ಪಡೆದವರಲ್ಲಿ, ಹಾಗೂ ರೋಗನಿರೋಧಕ ಶಕ್ತಿ ಕಡಿಮೆಯಾದವರಲ್ಲಿ ಕಾಣಿಸಿಕೊಳ್ಳುವುದು. ರಕ್ತಕಣಗಳನ್ನು ಗಾಮಾ ವಿಕಿರಣಕ್ಕೆ (Gamma Radiation) ಒಳಪಡಿಸಿದರೆ ಇದನ್ನು ತಡೆಗಟ್ಟಬಹುದು.
ರಕ್ತಪೂರಣದ ವಿಧಗಳು
ರಕ್ತವನ್ನು ಇಡಿಯಾಗಿ ಕೊಡಬಹುದಾದಂತಹ ಸಂದರ್ಭಗಳೆಂದರೆ, ಅಪಘಾತಗಳಾದಾಗ ಅಥವಾ ಹೆರಿಗೆಯಲ್ಲಿ ರಕ್ತಸ್ರಾವವಾದಾಗ ಅಥವಾ ಗರ್ಭಪಾತವಾದಾಗ, ಅಥವಾ ಮಗುವಿನಲ್ಲಿ ಬದಲಿಪೂರಣೆ ಮಾಡಬೇಕಾದಾಗ, ಅಂದರೆ, ರೋಗಿಯಲ್ಲಿ ರಕ್ತದ ಪ್ರಮಾಣ ಕಡಿಮೆಯಾದಾಗ. ಆದರೆ ಕೆಲವು ಸಂದರ್ಭಗಳಲ್ಲಿ ರಕ್ತವನ್ನು ಇಡಿಯಾಗಿ ಕೊಡುವುದಕ್ಕಿಂತ, ಅದರ ಘಟಕಗಳನ್ನು ಬೇರ್ಪಡಿಸಿ, ರೋಗಿಗೆ ಯಾವ ಅಂಶದ ಕೊರತೆಯಿದೆಯೋ ಅದನ್ನು ಮಾತ್ರ ಕೊಡಲಾಗುತ್ತದೆ. ದೊಡ್ಡ ದೊಡ್ಡ ನಗರಗಳ ದೊಡ್ಡ ರಕ್ತನಿಧಿ ಕೇಂದ್ರಗಳಲ್ಲಿ ಅಂತಹ ಸೌಲಭ್ಯಗಳಿವೆ. ಅಂತಹ ಕೇಂದ್ರಗಳಲ್ಲಿ 55 ಕೆ.ಜಿ.ಗಿಂತ ಹೆಚ್ಚಿನ ದೇಹತೂಕವಿರುವ ರಕ್ತದಾನಿಯಿಂದ 450 ಮಿಲಿ ರಕ್ತವನ್ನು ತೆಗೆದುಕೊಳ್ಳಲಾಗುತ್ತದೆ.
- ಕೆಂಪುರಕ್ತಕಣಗಳು ಮಾತ್ರ (Red cell concentrate): ಕೆಂಪು ರಕ್ತಕಣಗಳನ್ನು ಪ್ಲಾಸ್ಮಾ (Plasma) ದಿಂದ ಬೇರ್ಪಡಿಸಿ (ಅಂದರೆ 450 ಮಿಲಿ ರಕ್ತದಿಂದ, ಸುಮಾರು 150-200 ಮಿ.ಲಿ.ನಷ್ಟು ಕೆಂಪು ರಕ್ತಕಣಗಳನ್ನು) 2 ಡಿಗ್ರಿ ಸೆ. ರಿಂದ 6 ಡಿಗ್ರಿ ಸೆ.ನ ತಾಪಮಾನವಿರುವ ರೆಫ್ರಿಜರೇಟರ್‌ನಲ್ಲಿ (30 ದಿನಗಳವರೆಗೆ) ಸಂಗ್ರಹಿಸಿಡಲಾಗುತ್ತದೆ. ಇದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ತುಂಬಾ ಉಪಯೋಗವಾಗುತ್ತದೆ. ಮತ್ತು ಇದರಲ್ಲಿ ಪ್ಲಾಸ್ಮಾ ತುಂಬಾ ಕಡಿಮೆಯಿರುವುದರಿಂದ, ಪ್ರತಿರೋಧಕಗಳೂ ತುಂಬಾ ಕಡಿಮೆಯಿರುತ್ತದೆ. ABO ಮತ್ತು Rh ಹೊಂದಾಣಿಕೆ ಮಾಡಿ, ಇದನ್ನು ಕೊಡಬೇಕು.[೪]
- ಕೆಂಪು ರಕ್ತಕಣಗಳ ದ್ರಾವಣ (Red cell Suspension): 150-200 ಮಿಲಿ ಕೆಂಪುರಕ್ತಕಣಗಳನ್ನು ಪ್ಲಾಸ್ಮಾದಿಂದ ಬೇರ್ಪಡಿಸಿ, ನಂತರ ಅವುಗಳನ್ನು SAG-M ದ್ರಾವಣ- (Normal Saline, Ademine, glucose ಮತ್ತು Mannitol solution) -100 ಮಿ.ಲಿ ದೊಂದಿಗೆ ಬೆರೆಸಿ ಅದನ್ನು 2 ರಿಂದ 6 ಡಿಗ್ರಿ ಸೆ.ನ ತಾಪಮಾನವಿರುವ ರೆಫ್ರಿಜರೇಟರ್‌ನಲ್ಲಿ (30 ದಿನಗಳವರೆಗೆ) ಸಂಗ್ರಹಿಸಿಡಲಾಗುತ್ತದೆ. ಇದನ್ನು ಕೂಡ ABO ಮತ್ತು Rh ಹೊಂದಾಣಿಕೆಯಾಗುವ, ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೊಡಬಹುದು. ಇದರಲ್ಲೂ ಪ್ರತಿರೋಧಕಗಳು ತುಂಬಾ ಕಡಿಮೆಯಿರುತ್ತದೆ.
- ಬಿಳಿ ರಕ್ತಕಣಗಳಿಲ್ಲದಿರುವ ಕೆಂಪು ರಕ್ತಕಣಗಳು (Leucocyte-depleted red cells): ಕೆಂಪುರಕ್ತಕಣಗಳಿರುವ ದ್ರಾವಣವನ್ನು, ಬಿಳಿರಕ್ತಕಣಗಳನ್ನು ಬೇರ್ಪಡಿಸುವ ಸೋಸುಕದ ಮೂಲಕ ಹಾಯಿಸಿದಾಗ, ಬರೀ ಕೆಂಪುರಕ್ತಕಣಗಳು ಉಳಿಯುತ್ತವೆ. ಇದನ್ನು ಕೂಡ 2 ರಿಂದ 6 ಡಿಗ್ರಿ ಸೆ. ತಾಪಮಾನದಲ್ಲಿ (30 ದಿನಗಳವರೆಗೆ) ಸಂಗ್ರಹಿಸಿ ಇಡಬಹುದು. ಇದನ್ನು, ಹಿಂದೆ ಒಂದೆರಡು ಸಲ ರಕ್ತಪೂರಣೆಮಾಡಿದಾಗ, ಜ್ವರ ಬಂದಂತಹ ರೋಗಿಗಳಿಗೆ ಕೊಡಬಹುದು. ಇದರಿಂದ ಬಿಳಿರಕ್ತಕಣಗಳ ವಿರುದ್ಧ ಪ್ರತಿರೋಧಕಗಳು ತಯಾರಾಗದಂತೆ ತಡೆಯಬಹುದು.
- ಚಪ್ಪಟಿಕ (ಪ್ಲೇಟಲೆಟ್) ಗಳು ಮಾತ್ರ (Platelet concentrate): ಇವುಗಳನ್ನು ಒಬ್ಬ ದಾನಿಯಿಂದ ಪಡೆದ ರಕ್ತದಿಂದ ಬೇರ್ಪಡಿಸಿದರೆ-50ರಿಂದ 60 ಮಿಲಿ ಪ್ಲಾಸ್ಮಾದಲ್ಲಿ 55 x 109 ಚಪ್ಪಟಿಕಗಳು ಸಿಗುತ್ತವೆ. ಅಥವಾ, 4 ರಿಂದ 6 ದಾನಿಗಳಿಂದ ಪಡೆದ ರಕ್ತದಿಂದಲೂ ಬೇರ್ಪಡಿಸಬಹುದು. (ಆ ದಾನಿಗಳಿಂದ ಪಡೆದ ರಕ್ತದ ಗುಂಪು ಒಂದೇ ಆಗಿದ್ದರೆ ತುಂಬಾ ಒಳ್ಳೆಯದು). ಅಂತಹ ರಕ್ತದಿಂದ ಸುಮಾರು 240 x 109 ಪ್ಲೇಟಲೆಟ್ಸ್ ಸಿಗುತ್ತವೆ. ಇದನ್ನು 20 ಡಿಗ್ರಿ ಸೆ.ನಿಂದ 24 ಡಿಗ್ರಿ ಸೆ.ನ ತಾಪಮಾನದಲ್ಲಿಡಬೇಕು. ಅಂದರೆ ರೆಫ್ರಿಜರೇಟರ್‌ನಲ್ಲಿ ಇಡಬಾರದು. ದಾನಿ/ದಾನಿಗಳಿಂದ ಸ್ವೀಕರಿಸಿದ 72 ಗಂಟೆಗಳೊಳಗಾಗಿ ಅವುಗಳನ್ನು ಬೇರ್ಪಡಿಸಿ, ಅವುಗಳ ಕೊರತೆಯಿರುವ ರೋಗಿಗಳಿಗೆ ಪೂರಣೆಮಾಡಬೇಕು. ಸಾಧ್ಯವಾದಷ್ಟೂ, ABO ಮತ್ತು Rh ಹೊಂದಾಣಿಕೆಯಾಗುವ ರೋಗಿಗಳಿಗೆ ಅವುಗಳನ್ನು ಕೊಡಬೇಕು.
- ತಾಜಾ ಶೀತಲಿಕರಣದ ರಕ್ತರಸ (ಫ್ರೆಶ್ ಫ್ರೋಝನ್ ಪ್ಲಾಸ್ಮಾ) (Fresh frozen plasma): ಒಬ್ಬರೇ ದಾನಿಯಿಂದ ಸ್ವೀಕರಿಸಿದ ರಕ್ತ (450 ಮಿಲಿ) ವನ್ನು ಸ್ವೀಕರಿಸಿದ 6 ಗಂಟೆಗಳೊಳಗಾಗಿ, ಕೆಂಪು ರಕ್ತಕಣಗಳಿಂದ ಬೇರ್ಪಡಿಸಿದ ಪ್ಲಾಸ್ಮಾವನ್ನು -25 ಡಿಗ್ರಿ ಸೆಂ.ನ ತಾಪಮಾನ ಅಥವಾ ಅದಕ್ಕಿಂತಲೂ ಕಡಿಮೆಯಿರುವ ರೆಫ್ರಿಜರೇಟರ್‌ನಲ್ಲಿ ಸುಮಾರು ಒಂದು ವರ್ಷದವರೆಗೆ ಸಂಗ್ರಹಿಸಿಡಬಹುದು. ರೋಗಿಗೆ ಕೊಡುವುದಕ್ಕಿಂತ ಮೊದಲು ಅದನ್ನು 30 ರಿಂದ 37 ಡಿಗ್ರಿ ಸೆಂ.ನ ತಾಪಮಾನಕ್ಕೆ ತರಬೇಕು. ಇದನ್ನು ರಕ್ತ ಹೆಪ್ಪುಗಟ್ಟಲು ಬೇಕಾದ ಫ್ಯಾಕ್ಟರ್ (factor) ಗಳ ಕೊರತೆಯಿರುವ ರೋಗಿಗಳಿಗೆ, ಮತ್ತು ಅಂಗದೊಳಗೆ ರಕ್ತಹೆಪ್ಪುಗಟ್ಟುವ ರೋಗದ (Disseminated Intravascular coagulation) ರೋಗಿಗಳಿಗೆ ಕೊಡಲಾಗುವುದು. ABO ಹೊಂದಾಣಿಕೆಯಾದರೆ ಒಳ್ಳೆಯದು. ಹೊಂದಾಣಿಕೆ ಪರೀಕ್ಷೆ ಬೇಕಾಗಿಲ್ಲ.
- ಕ್ರಯೋಪ್ರಿಸಿಪಿಟೇಟ್ (Cryoprecipitate): ಇದನ್ನು fresh frozen plasma ದಿಂದ ತಯಾರಿಸಲಾಗುತ್ತದೆ. ಇದರಲ್ಲಿ ಫ್ಯಾಕ್ಟರ್ VIII (80-100 ಯೂನಿಟ್ಸ್) ಮತ್ತು ಫೈಬ್ರಿನೋಜೆನ್ (150-300 mg ) ನಷ್ಟು ಇರುತ್ತವೆ. ಬೇರೆ ಫ್ಯಾಕ್ಟರ್‌ಗಳು ಮತ್ತು ಆಲ್ಬುಮಿನ್ ಇರುವುದಿಲ್ಲ. ಇದನ್ನು ಕೂಡ 25 ಡಿಗ್ರಿ ಸೆಂ.ನಲ್ಲಿ ಸುಮಾರು ಒಂದು ವರ್ಷದವರೆಗೆ ಸಂಗ್ರಹಿಸಿಡಬಹುದು. ಇದನ್ನೂ ಹೀಮೋಫೀಲಿಯ ರೋಗಿಗಳಿಗೆ (ಫ್ಯಾಕ್ಟರ್- VIII ರ ಕೊರತೆ), Von Willebrand disease ಮತ್ತು ಫ್ಯಾಕ್ಟರ್ - XIII ರ ಕೊರತೆಯಿರುವ ರೋಗಿಗಳಿಗೆ ಕೊಡಲಾಗುವುದು. ABO ಹೊಂದಾಣಿಕೆಯಾದರೆ ಒಳ್ಳೆಯದು. ಹೊಂದಾಣಿಕೆ ಪರೀಕ್ಷೆ ಬೇಕಾಗಿಲ್ಲ.
- ಫ್ಯಾಕ್ಟರ್ - VIII ಕಾನ್ಸಂಟ್ರೇಟ್: ತುಂಬಾ ಜನ ದಾನಿಗಳಿಂದ ಸಂಗ್ರಹಿಸಿದ ರಕ್ತದಿಂದ, ಕೇವಲ ಫ್ಯಾಕ್ಟರ್ VIII ನ್ನು ಮಾತ್ರ ಬೇರ್ಪಡಿಸಿ, ಅದನ್ನು ಶೈತ್ಯಾಗಾರದಲ್ಲಿ ಒಣಗಿಸಿ, ಪೌಡರ್ ರೂಪದಲ್ಲಿ ಚಿಕ್ಕ ಗಾಜಿನ ಬಾಟಲಿಗಳಲ್ಲಿ 2 ರಿಂದ 6 ಡಿಗ್ರಿ ಸೆಂ.ನ ತಾಪಮಾನದಲ್ಲಿ ಸಂಗ್ರಹಿಸಿಡಲಾಗುವುದು. ಇದರಲ್ಲಿ ಸುಮಾರು 250 units ನಷ್ಟು ಫ್ಯಾಕ್ಟರ್- VIII ಇರುತ್ತದೆ. ಇದನ್ನು ಹೀಮೋಫಿಲಿಯ ರೊಗಿಗಳಿಗೆ ಕೊಡುವ ಮೊದಲು ಅದನ್ನು ದ್ರಾವಣ ಮಾಡಿ, ನಂತರ ಕೊಡಲಾಗುತ್ತದೆ.
ಹೀಗೆ ಇನ್ನೂ ಅನೇಕ ಘಟಕಗಳನ್ನು ಬೇರ್ಪಡಿಸಲಾಗುತ್ತದೆ. ರಕ್ತ ಪೂರಣೆಯು ನವೀನ, ವೈದ್ಯಕೀಯ ಚಿಕಿತ್ಸಾ ಪದ್ಧತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸರಿಯಾದ ರೀತಿಯಲ್ಲಿ ಉಪಯೋಗಿಸಿದರೆ, ರೋಗಿಯ ಪ್ರಾಣವನ್ನು ಉಳಿಸುತ್ತದೆ ಮತ್ತು ರೋಗಿಯ ದೈಹಿಕ ಸ್ಥಿತಿ ಉತ್ತಮಗೊಳಿಸುತ್ತದೆ. ಆದರೆ, ಕೆಲವು ಸಲ ರಕ್ತದಿಂದ ಹರಡಬಹುದಾದಂತಹ ರೋಗಗಳಿರುವುದರಿಂದ, ರೋಗಿಗೆ ರಕ್ತ ಪೂರಣೆ ಮಾಡುವ ಮೊದಲು, ನಿಜವಾಗಿಯೂ ರೋಗಿಗೆ ರಕ್ತವೇ ಬೇಕಾಗುತ್ತದೋ, ಅಥವಾ ಬೇರೆ ಔಷಧಗಳು ಅಥವಾ ದ್ರಾವಣಗಳಿಂದ (fluids) ರೋಗವನ್ನೂ ಗುಣಪಡಿಸಬಹುದೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಂತರ, ಅಧಿಕೃತ ಪರವಾನಿಗಿ ಪಡೆದ ರಕ್ತನಿಧಿ ಕೇಂದ್ರದಿಂದ ಮಾತ್ರ ರಕ್ತವನ್ನು ಪಡೆಯಬೇಕು.
ಇತಿಹಾಸ
ಆರೋಗ್ಯವಂತ ಯುವಕರ ರಕ್ತದಿಂದ, ವಯಸ್ಸಾದವರನ್ನೂ ಅಥವಾ ರೋಗಪೀಡಿತರನ್ನು ಮತ್ತೆ ಆರೋಗ್ಯವಂತ ಯುವಕರಂತೆ ಮಾಡಬಹುದು ಎಂಬ ನಂಬಿಕೆಯಿಂದ 1542ರಲ್ಲಿ, ಪೋಪ್ ಇನ್ನೊಸೆಂಟ್-8 (Pope Innocent VIII) ಗೆ, ಮೂವರು ಯುವಕರ ರಕ್ತ ಕೊಡಲಾಯಿತು. ಆದರೆ, ಅದರಿಂದ ಅವರು ನಾಲ್ವರೂ ತೀರಿಕೊಂಡರು. 1628ರಲ್ಲಿ, ಸರ್.ವಿಲಿಯಂ ಹಾರ್ವೆ, ಮಾನವನ ದೇಹದಲ್ಲಿ ರಕ್ತ ಚಲನೆಯ ವಿಧಾನವನ್ನು ಕಂಡುಹಿಡಿದನು. 17ನೆಯ ಶತಮಾನದಲ್ಲಿ ರಿಚರ್ಡ್ ಲೋವರ್ ಎಂಬುವನು, ನಾಯಿಗಳಲ್ಲಿ ರಕ್ತ ಪೂರಣೆಯ ಪ್ರಯೋಗ ಮಾಡಿದನು.[೫] ಜೀನ್ ಡೆನಿಸ್ ಎಂಬುವನು 1704ರಲ್ಲಿ ಪ್ರಾಣಿಗಳ ರಕ್ತವನ್ನು ಮಾನವರಿಗೆ ಕೊಡುವ ಪ್ರಯೋಗವನ್ನೂ ಮಾಡಿದನು.[೬] ಆದರೆ ಅದರಿಂದ ಆ ವ್ಯಕ್ತಿ ಮರಣಹೊಂದಿದನು.
ಮುಂದೆ ಹದಿನೆಂಟನೆಯ ಶತಮಾನದಲ್ಲಿ, ಜೇಮ್ಸ್ ಬ್ಲಂಡೆಲ್ ಮತ್ತು ಡಾ.ಲೀಕಾಕ್ ಎಂಬುವರು, ಕೇವಲ ಮಾನವರ ರಕ್ತವನ್ನೇ ಮಾನವರಿಗೆ ಕೊಡಬಹುದು ಎಂದು ಪ್ರತಿಪಾದಿಸಿದರು. ಹೆರಿಗೆಯ ನಂತರ ರಕ್ತಸ್ರಾವವಾದ ಸುಮಾರು ಹತ್ತು ಮಹಿಳೆಯರಿಗೆ ಡಾ.ಬ್ಲಂಡೆಲ್‌ನು ರಕ್ತ ಪೂರಣೆಯನ್ನು ಮಾಡಿದನು. ಅವರಲ್ಲಿ ಕೆಲವು ಮಹಿಳೆಯರು ಮೃತರಾದರು. ಆವಾಗ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ವಿಧಾನ ಕಂಡುಹಿಡಿದಿರಲಿಲ್ಲ.
1901ರಲ್ಲಿ ಮೊದಲ ಬಾರಿಗೆ, ಕಾರ್ಲ್ ಲ್ಯಾಂಡಸ್ಟೀನರ್ ಎಂಬುವನು, ರಕ್ತದ (ABO) ಎ, ಬಿ, ಓ ಎಂಬ ವರ್ಗೀಕರಣ ಮಾಡಿದನು. 1940ರಲ್ಲಿ, ವೀನರ್ ಎಂಬುವನ ಜೊತೆಗೂಡಿ, ರಕ್ತದ `ಆರ್‌ಎಚ್' (Rh) ವರ್ಗೀಕರಣವನ್ನೂ ಮಾಡಿದನು. ಈ ಮಧ್ಯೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ವಿಧಾನವನ್ನು ಕಂಡುಹಿಡಿಯಲಾಯಿತು. 1960ರ ವರೆಗೆ ರಕ್ತಸಂಗ್ರಹಣೆಯನ್ನು ಗಾಜಿನ ಬಾಟಲಿಯಲ್ಲಿ ಮಾಡುತ್ತಿದ್ದರು. ಮತ್ತು ಸಂಗ್ರಹಿಸಿದ ರಕ್ತವನ್ನು ಯಾವ ರೋಗದ ಸಲುವಾಗಿಯೂ ಪರೀಕ್ಷೆಗೆ ಒಳಪಡಿಸುತ್ತಿರಲಿಲ್ಲ. 1965ರಿಂದ, CPD-A ದ್ರಾವಣವಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ರಕ್ತವನ್ನು ಸಂಗ್ರಹಿಸಲಾಗುತ್ತಿದೆ.
ಉಲ್ಲೇಖಗಳು
- ↑ "Blood Transfusion | National Heart, Lung, and Blood Institute (NHLBI)". www.nhlbi.nih.gov. Retrieved 2019-06-16.
- ↑ Blood Processing. University of Utah. Available at: http://library.med.utah.edu/WebPath/TUTORIAL/BLDBANK/BBPROC.html. Accessed on: December 15, 2006.
- ↑ Screening donated blood for transfusion-transmissible infections: recommendations (PDF). World Health Organization. 2009. ISBN 978-92-4-154788-8. Archived (PDF) from the original on 2022-10-09.
- ↑ "Testing of donated blood". World Health Organization. Archived from the original on March 18, 2011. Retrieved 21 January 2016.
- ↑ Tubbs, R Shane; Loukas Marios; Shoja Mohammadali M; Ardalan Mohammad R; Oakes W Jerry (August 2008). "Richard Lower (1631–1691) and his early contributions to cardiology". Int. J. Cardiol. 128 (1). Netherlands: 17–21. doi:10.1016/j.ijcard.2007.11.069. PMID 18201782.
- ↑ "The First Blood Transfusion?". Heart-valve-surgery.com. 2009-01-03. Retrieved 2010-02-09.