ವಿಕಿಪೀಡಿಯ:ತಟಸ್ಥ ದೃಷ್ಟಿಕೋನ

ವಿಕಿಪೀಡಿಯ ನೀತಿಗಳು
ಲೇಖನಗಳ ಗುಣಮಟ್ಟ
ತಟಸ್ಥ ದೃಷ್ಟಿಕೋನ
ಪರಿಶೀಲನಾರ್ಹತೆ
ಸ್ವಂತ ಸಂಶೋಧನೆ ಸಲ್ಲದು
ಮೂಲಗಳ ಉಲ್ಲೇಖ
ವಿಕಿಪೀಡಿಯ ಏನಲ್ಲ
ಜೀವಂತವಾಗಿರುವರ ಆತ್ಮಚರಿತ್ರೆಗಳು
ಇತರರೊಡನೆ ಸಹಯೋಗ
ಸದುದ್ದೇಶವಿದೆಯೆಂದು ನಂಬಿ
ನಾಗರೀಕತೆ ಹಾಗು ಶಿಷ್ಟಾಚಾರ
ವೈಯುಕ್ತಿಕ ದಾಳಿ ಸಲ್ಲದು
ಬಿಕ್ಕಟ್ಟು ನಿವಾರಣೆ

ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ಹಾಕುವಾಗ ತಟಸ್ಥ ದೃಷ್ಟಿಕೋನವನ್ನು ಇಟ್ಟುಕೊಂಡಿರಬೇಕಾಗುತ್ತದೆ. ಅಂದರೆ ಒಂದು ವಿಷಯದ ಬಗ್ಗೆ ನಿಷ್ಪಕ್ಷಪಾತವಾಗಿ, ಎಲ್ಲಾ ರೀತಿಯ ಅಭಿಪ್ರಾಯಗಳಿಗೂ ಮನ್ನಣೆ ಸಿಗುವಂತೆ ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಅವಕಾಶ ಮಾಡಿಕೊಡಬೇಕು.

ತಟಸ್ಥ ದೃಷ್ಟಿಕೋನವು ವಿಕಿಪೀಡಿಯದ ಮತ್ತು ಇನ್ನಿತರ ವಿಕಿಮಿಡಿಯ ಯೋಜನೆಗಳ ಮೂಲಭೂತ ನೀತಿಯಾಗಿದೆ. ಇದು ವಿಕಿಪೀಡಿಯದ ಮೂರು ಅಡಕನೀತಿ (core content policy)ಗಳಲ್ಲಿ ಒಂದಾಗಿದೆ. ಅವುಗಳಲ್ಲಿ ಇನ್ನೆರಡಂದರೆ "ಪರಿಶೀಲನಾರ್ಹತೆ(Verifiability)" ಮತ್ತು "ಸ್ವಂತ ಸಂಶೋಧನೆ ಸಲ್ಲದು (No original research)". ಈ ಮೂರೂ ಜಂಟಿಯಾಗಿ ವಿಕಿಪೀಡಿಯ ಲೇಖನಗಳಲ್ಲಿರಬೇಕಾದ ವಿಷಯ ವಸ್ತುವಿನ ಬಗ್ಗೆ ಮತ್ತು ಗುಣಮಟ್ಟವನ್ನು ನಿಯಂತ್ರಿಸುತ್ತವೆ. ಸಂಪಾದಕರು ಈ ಮೂರೂ ನೀತಿಗಳನ್ನು ಚೆನ್ನಾಗಿ ತಿಳಿದುಕೊಂಡು ಅಳವಡಿಸಿಕೊಂಡಿರಬೇಕಾದ್ದು ಅತೀ ಮುಖ್ಯವಾಗಿದೆ.

ಈ ನೀತಿಯು ಸಂಧಾನರಹಿತ (non-negotiable) ಆಗಿದ್ದು, ಬೇರೆ ಯಾವುದೇ ಮಾರ್ಗದರ್ಶೀ ಸೂತ್ರಗಳು ಅಥವಾ ನೀತಿಗಳು ಈ ನೀತಿಯನ್ನು ಹಿಂದೆ ಹಾಕುವಂತಿಲ್ಲ. (ಸೂಪರ್ ಸೀಡ್ ಮಾಡುವಂತಿಲ್ಲ)

ತಟಸ್ಥ ದೃಷ್ಟಿಕೋನದ ವಿವರಣೆ

ವಿಕಿಪೀಡಿಯ ಸಮುದಾಯ ನಂಬಿರುವ ಪ್ರಕಾರ ತಟಸ್ಥ ದೃಷ್ಟಿಕೋನವನ್ನು ಸಾಧಿಸುವುದೆಂದರೆ, ವಿವಿಧ ಮೂಲಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸುವುದು ಮತ್ತು ಓದುಗರಿಗೆ ಅದರಲ್ಲಿರುವ ಮಾಹಿತಿಯನ್ನು ಸರಿಯಾಗಿ ಪೂರ್ವಗ್ರಹವಿಲ್ಲದೇ ತಲುಪಿಸುವ ಪ್ರಯತ್ನ ಮಾಡುವುದು. ವಿಕಿಪಿಡಿಯಾದಲ್ಲಿ ವಿವಾದಗಳನ್ನು ವಿವರಿಸುವುದು ಮುಖ್ಯವೇ ಹೊರತು ಅವುಗಳಲ್ಲಿ ತೊಡಗುವುದಲ್ಲ. ಸಂಪಾದಕರು, ಸಹಜವಾಗಿ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದರೂ ಸಹ, ಪೂರ್ಣಮಾಹಿತಿಯನ್ನು ನಿಯತ್ತಾಗಿ ಕೊಡಬೇಕು ಹೊರತು ಯಾವುದೇ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಹೆಚ್ಚು ಒತ್ತುಕೊಡುವುದಾಗಲೀ ಅಥವಾ ಪ್ರಚುರಪಡಿಸುವುದಾಗಲೀ ಮಾಡಬಾರದು. ತಟಸ್ಥ ದೃಷ್ಟಿಕೋನ ಅಂದರೆ ಕೆಲವು ದೃಷ್ಟಿಕೋನಗಳನ್ನು ಬಿಟ್ಟುಬಿಡುವುದಲ್ಲ, ಬದಲಾಗಿ ಸರಿಯಾದ ತಳಹದಿ ಆಧಾರಗಳನ್ನು ಹೊಂದಿರುವ ಎಲ್ಲಾ ಪರಿಶೀಲನಾರ್ಹ ದೃಷ್ಟಿಕೋನಗಳನ್ನು ಒಳಗೊಂಡಿರುವುದು. ವಿಶ್ವಕೋಶಕ್ಕೆ ಹೊಂದುವ ಮಟ್ಟದ ತಟಸ್ಥತೆಯನ್ನು ಸಾಧಿಸಲು ಈ ಕೆಳಗಿನ ನೀತಿಗಳನ್ನು ಗಮನಿಸಿ.

  • ಅಭಿಪ್ರಾಯಗಳನ್ನು ಸತ್ಯವೆಂಬಂತೆ ಉಲ್ಲೇಖಿಸಬೇಡಿ: ಸಾಮಾನ್ಯವಾಗಿ, ಲೇಖನಗಳಲ್ಲಿ ಆ ವಿಷಯದ ಬಗ್ಗೆ ವ್ಯಕ್ತವಾಗಿರುವ ಮುಖ್ಯ ಅಭಿಪ್ರಾಯಗಳಿರುತ್ತವೆ. ಆದರೆ ಈ ಅಭಿಪ್ರಾಯಗಳನ್ನು ವಿಕಿಪೀಡಿಯಾದ ಅಭಿಪ್ರಾಯ ಎಂಬಂತೆ ಬಿಂಬಿತವಾಗಿರಬಾರದು. ಅವು ಮುಖ್ಯ ಅನಿಸಿಕೆಯಂತೆ ಎಲ್ಲಿ ಸಮರ್ಥಿಸಲ್ಪಟ್ಟಿವೆ, ವಿರೋಧಿಸಲ್ಪಟ್ಟಿವೆ ಎಂದು ಮೂಲಗಳನ್ನು, ಆಧಾರಗಳನ್ನು ಉಲ್ಲೇಖಿಸಬೇಕು. ಉದಾಹರಣೆಗೆ, ಒಂದು ಲೇಖನದಲ್ಲಿ "ನರಹತ್ಯೆಯು ಒಂದು ಪೈಶಾಚಿಕ ಕೃತ್ಯ" ಎಂಬ ಹೇಳಿಕೆ ಇರಬಾರದು, ಬದಲಾಗಿ "ನರಹತ್ಯೆಯು ಒಂದು ಪೈಶಾಚಿಕ ಮನಸ್ಥಿತಿಯ ಉತ್ತುಂಗ" ಎಂದು John X ಅವರಿಂದ ವಿವರಿಸಲ್ಪಟ್ಟಿದೆ ಎಂದು ಇರಬೇಕು.
  • ಗಂಭೀರವಾದ ವಿರೋಧಗಳಿರುವ ನಿಶ್ಚಿತವಾಕ್ಯಗಳನ್ನು ಸತ್ಯವೆಂದು ಉಲ್ಲೇಖಿಸಬೇಡಿ: ಬೇರೆ ಬೇರೆ ನಂಬಲರ್ಹ ಮೂಲಗಳ ಆಧಾರಗಳು ಒಂದಕ್ಕೊಂದು ವಿರುದ್ಧವಾಗಿದ್ದರೆ, ಅವುಗಳನ್ನು ಸತ್ಯ ಆಧಾರಕ್ಕಾಗಿ ನೇರಹೇಳಿಕೆಗಳಂತೆ ಬಳಸುವ ಬದಲು ಅಭಿಪ್ರಾಯಗಳಂತೆ ಬಳಸಬಹುದು.
  • ಸತ್ಯಗಳನ್ನು ಅಭಿಪ್ರಾಯವೆಂಬಂತೆ ಉಲ್ಲೇಖಿಸಬೇಡಿ: ಯಾವು ವಿವಾದಗಳಿಲ್ಲದ ನಂಬಲರ್ಹ ಮೂಲಗಳಿಂದ ಪಡೆದಂತಹ ಸತ್ಯಾಂಶಗಳು ವಿಕಿಪೀಡಿಯಾದಲ್ಲಿ ಸಾಮಾನ್ಯವಾಗಿ ನೇರವಾಗಿ ಉಲ್ಲೇಖಿಸಲ್ಪಡುತ್ತವೆ.
  • ತೀರ್ಪಿನ ಭಾಷೆಯನ್ನು ಬಳಸಬೇಡಿ: ತಟಸ್ಥ ದೃಷ್ಟಿಕೋನವು ವಿಷಯದ ಬಗ್ಗೆ ಅಥವಾ ವಿಷಯದ ಉಲ್ಲೇಖಗಳಲ್ಲಿರುವ ದೃಷ್ಟಿಕೋನವನ್ನು ಬೆಂಬಲಿಸುವುದಿಲ್ಲ. ಅಂದರೆ ತೀರ್ಪುಕೊಡುವುದಿಲ್ಲ.
  • ವಿರುದ್ಧ ದೃಷ್ಟಿಕೋನಗಳ ಪ್ರಾಮುಖ್ಯಕ್ಕೂ ಆಸ್ಪದವಿರಲಿ: ಒಂದು ವಿಷಯದ ಬಗ್ಗೆ ಇರುವ ವಿವಿಧ ಆಬಿಪ್ರಾಯಗಳಿನ್ನು ವರದಿಮಾಡುವ ಮೂಲಕ ಯಾವುದೇ ಒಂದು ಅಭಿಪ್ರಾಯಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯ ಸಿಗದಂತೆ ನೋಡಿಕೊಳ್ಳಬೇಕು.

ತಟಸ್ಥ ದೃಷ್ಟಿಕೋನವನ್ನು ಸಾಧಿಸುವುದು

ಸಾಮಾನ್ಯ ನಿಯಮದಂತೆ ಯಾವುದೇ ಮಾಹಿತಿಯು ಕೇವಲ ಪಕ್ಷಪಾತವೆಂದು ಅನಿಸುತ್ತಿದೆ ಎಂಬ ಕಾರಣಕ್ಕಾಗಿ ಅಳಿಸಿಹಾಕಬಾರದು. ಬದಲಾಗಿ, ಆ ಪ್ಯಾರಾವನ್ನು ಅಥವಾ ವಿಭಾಗವನ್ನು ತಟಸ್ಥ ದೃಷ್ಟಿಕೋನವನ್ನು ಸಾಧಿಸುವಂತೆ ಪುನಃ ಬರೆಯಲು ಪ್ರಯತ್ನಿಸಿ. ಹೆಚ್ಚು ತಟಸ್ಥವಾದ ಧೋರಣೆಯನ್ನು ಹೊಂದಿರುವ ಮಾಹಿತಿಮೂಲವನ್ನು ಉಲ್ಲೇಖಿಸುವ ಮೂಲಕ ಪಕ್ಷಪಾತವಾಗಿ ಇರುವ ಮಾಹಿತಿಯನ್ನು ಸಮತೋಲನ ಸ್ಥಿತಿಗೆ ತರಬಹುದು. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಸಾಧ್ಯವಿರುವಾಗ ಸಾಮಾನ್ಯ ತಿದ್ದುಪಡಿ ಮೂಲಕ ಪಕ್ಷಪಾತ ಸಮಸ್ಯೆಗಳನ್ನು ಬಗೆಹರಿಸಬಹುದು. ಮಾಹಿತಿಯು ತಪ್ಪಾಗಿದೆ ಅಥವಾ ಓದುಗರನ್ನು ತಪ್ಪುದಾರಿಗೆಳೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ಕಾರಣ ಸಮೇತ ಖಚಿತತೆ ಇರುವಾಗ ಮತ್ತು ಅದನ್ನು ಪುನಃಬರೆಯುವುದರ ಮೂಲಕ ಸರಿಪಡಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾಗ ಮಾಹಿತಿಯನ್ನು ಅಳಿಸಿಹಾಕಬಹುದು. ಕೆಳಗಿನ ವಿಭಾಗವು ಸಾಮಾನ್ಯ ತೊಂದರೆಗಳಿಗೆ ನಿರ್ದಿಷ್ಟ ಮಾರ್ಗದರ್ಶನಗಳನ್ನು ಒದಗಿಸುತ್ತದೆ.

ಹೆಸರು/ಶೀರ್ಷಿಕೆ

ಕೆಲವು ಸಂದರ್ಭಗಳಲ್ಲಿ ಒಂದು ವಿಷಯದ ಶೀರ್ಷಿಕೆಯೇ ಪಕ್ಷಪಾತವಾಗಿ ತೋರಬಹುದು. ಸಾಮಾನ್ಯವಾಗಿ ತಟಸ್ಥ ಶೀರ್ಷಿಕೆಗಳಿಗೆ ಪ್ರಾಶಸ್ತ್ಯ ಇರುವುದು ನಿಜವಾದರೂ ಕೂಡ ಅವು ಸ್ಪಷ್ಟತೆ ಹೊಂದಿರಬೇಕಾಗುತ್ತದೆ. ಒಂದು ಹೆಸರು ಅಥವಾ ಶೀರ್ಷಿಕೆಯು ನಂಬಲರ್ಹ ಮೂಲಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಹಾಗೂ ಅದು ಓದುಗರಿಗೆ/ಜನರಿಗೆ ಹೆಚ್ಚು ಚಿರಪರಿಚಿತವಿರುವ ಸಂದರ್ಭಗಳಲ್ಲಿ ಕೆಲವರು ಅದು ಪಕ್ಷಪಾತ ಎಂದರೂ ಸಹ ಅದನ್ನು ಬಳಸಬಹುದು. ಒಂದು ವಿಷಯಕ್ಕೆ ಕೊಡುವ ಅತ್ಯುತ್ತಮ ಶೀರ್ಷಿಕೆಯು ಆ ವಿಷಯ ಯಾವ ಸಂದರ್ಭಕ್ಕೆ ತಕ್ಕುದಾಗಿ ವಿವರಿಸಲ್ಪಟ್ಟಿದೆ ಎಂಬುದರ ಮೇಲೆ ಆಧಾರವಾಗಿರಬಹುದು. ಹಾಗಾಗಿ ಆ ರೀತಿಯ ವಿವಾದಗಳಿರುವ ವಿಷಯವೇ ಮುಖ್ಯವಾಗಿರುವಾಗ ಅಂತಹ ವಿಷಯಕ್ಕೆ ಇರುವ ಇನ್ನಿತರ ಹೆಸರು/ಶೀರ್ಷಿಕೆಗಳನ್ನೂ ಮತ್ತು ಅದರ ಬಳಕೆಗೆ ಸಂಬಂಧಿಸಿದ ವಿವಾದಗಳನ್ನೂ ಸಹ ಉಲ್ಲೇಖಿಸುವುದು ಸೂಕ್ತವಾಗುತ್ತದೆ.

ಈ ಸಲಹೆ ವಿಶೇಷವಾಗಿ ಲೇಖನಗಳ/ಪುಟಗಳ ಶೀರ್ಷಿಕೆಗೆ ಅನ್ವಯವಾಗುತ್ತದೆ. ಒಂದೇ ವಿಷಯಕ್ಕೆ ಅನೇಕ ಹೆಸರುಗಳು ಬಳಕೆಯಲ್ಲಿದ್ದರೂ ಕೂಡ ಅಂತಿಮವಾಗಿ ಲೇಖನಕ್ಕೆ ಒಂದೇ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅದು ವಿಕಿಪೀಡಿಯ:ಲೇಖನ ಶೀರ್ಷಿಕೆ ನೀತಿಗೆ ಬದ್ಧವಾಗಿರಬೇಕು. ಪುಟದ ಶೀರ್ಷಿಕೆಯಲ್ಲೇ ಒಂದಕ್ಕಿಂತ ಹೆಚ್ಚು ಹೆಸರುಗಳನ್ನು ಬಳಸುವುದು ಸೂಕ್ತವಲ್ಲ. ಉದಾಹರಣೆಗೆ XXX ಅಥವಾ XXX, XXX/XXX, XXX (XXX) ಎಂಬಂತಹ ಶೀರ್ಷಿಕೆಗಳನ್ನು ಬಳಸಬಾರದು. (ಇಲ್ಲಿ XXX ಅನ್ನುವುದು ಲೇಖನದ/ಪುಟದ 'ಹೆಸರು'ಗಳನ್ನು ಸೂಚಿಸುತ್ತಿದೆ.) ಬದಲಾಗಿ, ಇನ್ನಿತರ ಹೆಸರುಗಳನ್ನು ಆ ಲೇಖನದಲ್ಲೇ ಉಲ್ಲೇಖಿಸಬಹುದು ಮತ್ತು ಸೂಕ್ತವಾಗಿ ಪುಟ ಮರುನಿರ್ದೇಶನ (ರೀಡೈರೆಕ್ಟ್) ಕೂಡ ಮಾಡಬಹುದು.

ಕೆಲವು ಪುಟ ಶೀರ್ಷಿಕೆಗಳು ಒಂದು ಪದದ ಹೆಸರಿನಂತಿರದೇ ಹಲವು ಪದಗಳಿಂದ ಕೂಡಿರಬಹುದು. ಅಂತಹ ಶೀರ್ಷಿಕೆಗಳು ಯಾವುದೇ ಅಭಿಪ್ರಾಯ, ದೃಷ್ಟಿಕೋನಗಳನ್ನು ಸೂಚಿಸದೇ ತಟಸ್ಥವಾಗಿರಬೇಕು ಅಥವಾ ಆ ಲೇಖನವು/ಪುಟವು ಅಂತಹ ಅಭಿಪ್ರಾಯ, ದೃಷ್ಟಿಕೋನಗಳ ವಿಷಯಕ್ಕೇ ಸೀಮಿತವಾಗಿರಬೇಕು. ಉದಾಹರಣೆಗೆ '‍‍‍XXX ವಿರುದ್ಧದ ಟೀಕೆಗಳು' ಎಂಬಂತಹ ಶೀರ್ಷಿಕೆಗಳ ಬದಲು 'XXX ಬಗ್ಗೆ ಸಮಾಜದ ಅಭಿಪ್ರಾಯಗಳು' ಎಂಬಂತಹ ಶೀರ್ಷಿಕೆಗಳ ಬಳಕೆ ಒಳ್ಳೆಯದು. ತಟಸ್ಥ ಶೀರ್ಷಿಕೆಗಳು ಅನೇಕ ದೃಷ್ಟಿಕೋನಗಳಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಅದನ್ನು ಒಂದು ಉತ್ತಮ ಜವಾಬ್ದಾರಿಯುತ ಲೇಖನವಾಗಿಸುತ್ತವೆ.

ಲೇಖನ ರಚನಾಕ್ರಮ/ಸ್ವರೂಪ

ಒಂದೇ ಅಭಿಪ್ರಾಯಕ್ಕೆ ಹೆಚ್ಚು ಒತ್ತುಕೊಡುವುದು ಮತ್ತು ಪರ/ವಿರೋಧ ಅಭಿಪ್ರಾಯಕ್ಕಾಗಿ ಬೇರೆಬೇರೆ ಪುಟಗಳನ್ನು ರಚಿಸುವಂತಹ ತೊಂದರೆಗಳಿಂದ ತಟಸ್ಥತೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಲೇಖನದ ರಚನಾಕ್ರಮ ಅಥವಾ ಸ್ವರೂಪದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಒಂದು ಲೇಖನದ ಸ್ವರೂಪದ ಬಗ್ಗೆ ಯಾವುದೇ ನಿಯಮ ಇಲ್ಲದಿದ್ದರೂ ಕೂಡ, ಆ ಲೇಖನದ ಪ್ರಸ್ತುತಿ ಒಟ್ಟಾರೆಯಾಗಿ ತಟಸ್ಥವಾಗಿ ಇರುವಂತೆ ಕಾಳಜಿ ವಹಿಸಬೇಕಾದ್ದು ಮುಖ್ಯ.

ಯಾವುದೇ ವಾದ-ವಿವಾದಗಳನ್ನು ಸಾರಾಂಶ ರೂಪದಲ್ಲಿ ನಿರೂಪಣೆ ಮಾಡಬೇಕೇ ಹೊರತು ಸಂಭಾಷಣೆ ರೀತಿಯಲ್ಲಿ ಅಥವಾ ವಿಭಾಗ-ಉಪವಿಭಾಗಗಳನ್ನು ಮಾಡುವ ರೀತಿಯಲ್ಲಿ ಪ್ರಸ್ತುತ ಪಡಿಸಿದರೆ ಅದು ವಿಶ್ವಕೋಶಕ್ಕೆ ತಕ್ಕುದಾದ ಶೈಲಿಯಾಗುವುದಿಲ್ಲ.

ಶೀರ್ಷಿಕೆ-ಉಪಶೀರ್ಷಿಕೆಗಳು, ಉಲ್ಲೇಖಗಳು ಮುಂತಾದ ಪುಟದ ಇತರ ವಿಭಾಗಗಳು ಒಂದು ದೃಷ್ಟಿಕೋನವನ್ನೇ ಎತ್ತಿ ತೋರಿಸದಂತೆ ಮತ್ತು ಓದುಗರಿಗೆ ಆ ಲೇಖನದಲ್ಲಿರುವ ವಿವಿಧ ದೃಷ್ಟಿಕೋನಗಳ ಬಗ್ಗೆ ಸಮಾನವಾಗಿ ಅರ್ಥೈಸಿಕೊಳ್ಳಲು ಕಷ್ಟವಾಗದಿರುವಂತೆ ಎಚ್ಚರ ವಹಿಸಬೇಕು.

ಅಗತ್ಯ ಮತ್ತು ಅನಗತ್ಯ ಒತ್ತುಕೊಡುವಿಕೆ

ವಿಶ್ವಾಸಾರ್ಹ ಮೂಲಗಳು ಪ್ರಕಟಿಸಿರುವಂತಹ ಎಲ್ಲಾ ಪ್ರಮುಖ ದೃಷ್ಟಿಕೋನಗಳನ್ನು ಪ್ರತಿಯೊಂದು ಲೇಖನವೂ ಹೊಂದಿರಬೇಕೆಂಬುದು ತಟಸ್ಥ ದೃಷ್ಟಿಕೋನದ ಅಗತ್ಯತೆಯಾಗಿರುತ್ತದೆ. ಅಗತ್ಯ ಒತ್ತುಕೊಡುವಿಕೆ ಮತ್ತು ಅನಗತ್ಯ ಒತ್ತುಕೊಡುವಿಕೆ ಅಂದರೆ ಯಾವುದೇ ಲೇಖನವು ಬಹುವಾಗಿ ಒಪ್ಪಿತವಾದಂತಹ ಅಭಿಪ್ರಾಯಗಳಿಗಿಂತ ಅಲ್ಪಸಂಖ್ಯಾತ ಅಭಿಪ್ರಾಯಗಳಿಗೆ ಹೆಚ್ಚಿನ ಮಹತ್ವವನ್ನು ಅಥವಾ ವಿವರಣೆಯನ್ನು ಹೊಂದಿರಬಾರದು. ನಗಣ್ಯ ಪ್ರಮಾಣದಲ್ಲಿರುವ ದೃಷ್ಟಿಕೋನಗಳನ್ನು ಉಲೇಖಿಸುವ ಅಗತ್ಯವಿರುವುದಿಲ್ಲ. ಅದನ್ನು 'ಇವುಗಳನ್ನೂ ನೋಡಿ' ಎಂಬ ವಿಭಾಗದಡಿ ಸೇರಿಸಬಹುದು. ಉದಾಹರಣೆಗೆ, 'ಭೂಮಿ' ಎಂಬ ವಿಕಿ ಪುಟದಲ್ಲಿ 'ಭೂಮಿ ಚಪ್ಪಟೆಯಾಗಿದೆ' ಎಂಬ ಅವೈಜ್ಞಾನಿಕ ವಿಭಿನ್ನ ಅಭಿಪ್ರಾಯವನ್ನು ಬರೆಯುವ ಅಗತ್ಯವಿಲ್ಲ. ಬರೆದರೆ ಅದು ಅನಗತ್ಯ ಒತ್ತುಕೊಡುವಿಕೆಯಾಗುತ್ತದೆ.

ಸಮತೋಲಿತ ಅಂಶಗಳು

ಒಂದು ಲೇಖನವು ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಅನಗತ್ಯವಾಗಿ ಹೆಚ್ಚಿನ ಒತ್ತು ಕೊಡಬಾರದು. ಬದಲಾಗಿ ಎಲ್ಲಾ ವಿಷಯಗಳಿಗೂ ಕೂಡ ಆ ಲೇಖನಕ್ಕೆ ತಕ್ಕಂತೆ ಪ್ರಾಧಾನ್ಯತೆ ಕೊಡಬೇಕು. ಉದಾಹರಣೆಗೆ ಕೆಲಘಟನೆಗಳು, ಟೀಕೆಗಳು ಅಥವಾ ಯಾವುದೋ ವಿಷಯದ ಬಗ್ಗೆ ಪತ್ರಿಕಾವರದಿಗಳು ಪರಿಶೀಲನಾರ್ಹವಾಗಿದ್ದರೂ ಸಹ ಆ ಲೇಖನಕ್ಕೆ ಅವುಗಳ ಅಗತ್ಯತೆ, ಪ್ರಾಮುಖ್ಯತೆ ಇಲ್ಲದಿರಬಹುದು. ಹೆಚ್ಚಾಗಿ ಪ್ರಚಲಿತವಾಗಿ ಸುದ್ದಿಯಲ್ಲಿರುವ ವಿದ್ಯಮಾನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಈ ಎಚ್ಚರಿಕೆ ವಹಿಸಬೇಕಾಗುತ್ತದೆ.

'ಸಮಾನ ಊರ್ಜಿತತ್ವ'ವು ತಪ್ಪು ಸಮತೋಲನ ಉಂಟುಮಾಡಬಲ್ಲುದು

ಎಲ್ಲಾ ದೃಷ್ಟಿಕೋನಗಳಿಗೆ ಪ್ರಾಮುಖ್ಯತೆ ಕೊಡಬೇಕಾದ್ದು ಮುಖ್ಯವಾದರೂ ಕೂಡ, ಮುಖ್ಯವಾಹಿನಿಯಲ್ಲಿ ಒಪ್ಪಿತವಾದ ದೃಷ್ಟಿಕೋನಗಳ ಜೊತೆ ಬೇರೆ ಎಲ್ಲಾ ಚಿಕ್ಕ ಚಿಕ್ಕ ದೃಷ್ಟಿಕೋನಗಳನ್ನು ಅಥವಾ ವಿಶೇಷ/ವಿಭಿನ್ನ ದೃಷ್ಟಿಕೋನಗಳನ್ನೂ ಸಮಾನ ಊರ್ಜಿತತೆಯಿಂದ ಪ್ರಸ್ತುತಪಡಿಸಬೇಕೆಂದು ವಿಕಿಪೀಡಿಯ ನೀತಿನಿಯಮಗಳು ಹೇಳುವುದಿಲ್ಲ. ಜಗತ್ತಿನಲ್ಲಿ ಹಲವಾರು ರೀತಿಯ ನಂಬಿಕೆಗಳು ಇರುತ್ತವೆ. ಉದಾಹರಣೆ: ಭೂಮಿ ಚಪ್ಪಟೆಯಾಗಿದೆ, ಚಂದ್ರನ ಮೇಲೆ ಮಾನವ ಕಾಲಿಟ್ಟಿದ್ದು ಸುಳ್ಳುಕತೆ ಇತ್ಯಾದಿ. ಪಿತೂರಿಯ ಸಿದ್ಧಾಂತಗಳು, ಹುಸಿವಿಜ್ಞಾನ, ಊಹಾಪೋಹದ ಇತಿಹಾಸ, ಮೇಲ್ನೋಟಕ್ಕೆ ಸರಿಯೆನಿಸುವ ಆದರೆ ಪ್ರಸ್ತುತ ಒಪ್ಪಿತವಲ್ಲದ ಸಿದ್ಧಾಂತಗಳನ್ನು ಹಾಕಬಾರದು. ವಿಶ್ವಕೋಶದ ಸಂಪಾದಕರಾಗಿ ನಾವು ಇಂತಹ ಮಾಹಿತಿಗಳನ್ನು ಹಾಕದೇ ಬಿಡುವುದರಿಂದ ಇಂತಹವುಗಳಿಗೆ ಮಾನ್ಯತೆ ದೊರೆಯುವುದನ್ನು ತಪ್ಪಿಸಬಹುದು. ಇಲ್ಲದಿದ್ದಲ್ಲಿ ಅವಶ್ಯಕತೆ ಇದ್ದಾಗ ಸರಿಯಾದ ರೀತಿಯಲ್ಲಿ, ಸಾಂದರ್ಭಿಕವಾಗಿ ವಿವರಿಸಬಹುದು.

ಒಳ್ಳೆಯ ಸಂಶೋಧನೆ

ಅಧಿಕೃತ, ನಂಬಲರ್ಹ ಮೂಲಗಳ ಆಧಾರದಲ್ಲಿ ಮಾಡುವ ಒಳ್ಳೆಯ ನಿಷ್ಪಕ್ಷವಾದ ಸಂಶೋಧನೆಯು ತಟಸ್ಥ ದೃಷ್ಟಿಕೋನವನ್ನು ಸಾಧಿಸಲು ಸಹಾಯಕಾರಿ. ಗಣ್ಯ ಪುಸ್ತಕಗಳು, ಪತ್ರಿಕೆ ಲೇಖನಗಳು ಮತ್ತು ವಿಶ್ವಾಸಾರ್ಹ ಆನ್ ಲೈನ್ ಮೂಲಗಳನ್ನು ಬಳಸಿಕೊಳ್ಳಬೇಕು. ಅಂತಹ ಉತ್ತಮ ಗುಣಮಟ್ಟದ ಮೂಲಗಳನ್ನು ಹುಡುಕಲು ಸಹಾಯ ಬೇಕಾದಲ್ಲಿ ಆಯಾ ಪುಟದ ಚರ್ಚೆಪುಟದಲ್ಲಿ ಇತರ ಸಂಪಾದಕರನ್ನು ಕೇಳಬಹುದು ಅಥವಾ Reference Deskನಲ್ಲಿ ಕೇಳಬಹುದು.

ಸಮತೋಲನ

ತಟಸ್ಥತೆಯು ದೃಷ್ಟಿಕೋನಗಳ ಪ್ರಾಧಾನ್ಯತೆಗೆ ತಕ್ಕಂತೆ ಒತ್ತುಕೊಡುವಿಕೆಯನ್ನು ಹೊಂದಿರುತ್ತದೆ. ಆದರೂ ನಂಬಲರ್ಹ ಮೂಲಗಳಲ್ಲೇ ವೈರುಧ್ಯತೆ ಇದ್ದಾಗ ಮತ್ತು ಆ ಮೂಲಗಳು ಸಮಾನ ಪ್ರಾಮುಖ್ಯ ಹೊಂದಿದ್ದಾಗ ಅವೆಲ್ಲವನ್ನೂ ವಿವರಿಸಿ ಸಮತೋಲನವನ್ನು ಸಾಧಿಸುವ ಕೆಲಸ ಮಾಡಬೇಕು. ಇತರ ಮೂಲಗಳ ಆಧಾರದಮೇಲೆ ವಿರುದ್ಧದ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವಿವರಿಸಬೇಕು.

ನಿಷ್ಪಕ್ಷಪಾತ ದನಿ

ವಿಕಿಪೀಡಿಯ ವಿವಾದಗಳ ಬಗ್ಗೆ ವಿವರಗಳನ್ನು ಕೊಡುತ್ತದೆಯೇ ಹೊರತು ವಿವಾದಗಳಲ್ಲಿ ತೊಡಗಿಕೊಳ್ಳುವುದಿಲ್ಲ. ವಿಕಿಪೀಡಿಯ ಲೇಖನಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುತ್ತಾ ವಿವಾದಗಳನ್ನು ವಿವರಿಸುವಾಗಲೂ ಕೂಡ ಒಂದು ತಟಸ್ಥ ದನಿ ಅಗತ್ಯವಾಗಿರುತ್ತದೆ. ಒಂದು ವಿಷಯವನ್ನು ಅಭಿಪ್ರಾಯಗಳ ಆಧಾರಕ್ಕಿಂತ ಸತ್ಯಮಾಹಿತಿಮೂಲಗಳ ಆಧಾರ ಮೇಲೆ ವಿವರಿಸಿದ್ದರೂ ಸಹ ಆ ಮಾಹಿತಿಮೂಲಗಳ ಆಯ್ಕೆ, ವಿಷಯದ ಪ್ರಸ್ತುತಿ ಮುಂತಾದವು ಸರಿಯಲ್ಲದ (ತಟಸ್ಥವಲ್ಲದ) ದನಿಯನ್ನು ಹೊರಡಿಸಬಹುದು. ತಟಸ್ಥ ಲೇಖನಗಳು ಎಂದಿಗೂ ಎಲ್ಲಾ ದೃಷ್ಟಿಯಲ್ಲೂ ನಿಖರವಾದ, ಪಕ್ಷಪಾತವಲ್ಲದ, ಸಮತೋಲಿತ ಮಾಹಿತಿಗಳನ್ನು ಒಳಗೊಂಡಿರಬೇಕು. ಯಾವುದೇ ದೃಷ್ಟಿಕೋನವನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ರೀತಿಯಲ್ಲಿ ಇರಬಾರದು. ವಿವಾದಾತ್ಮಕ ಮಾಹಿತಿಮೂಲಗಳಿಂದ ವಿಷಯವನ್ನು ನೇರವಾಗಿ ಉಲ್ಲೇಖಿಸುವುದರ ಬದಲು ಅವುಗಳ ಸಾರಾಂಶವನ್ನು ತಟಸ್ಥ ದನಿಯಲ್ಲಿ ವಿವರಿಸಬೇಕು.

ಅಭಿರುಚಿಗಳ ಬಗ್ಗೆ ಅಭಿಪ್ರಾಯ ವಿವರಣೆ

ಕಲೆ ಮುಂತಾದ ಸೃಜನಾತ್ಮಕ ವಿಷಯಗಳ (ಉದಾ:ಕಲಾವಿದರು, ಸಂಗೀತಕಾರರು, ಸಾಹಿತ್ಯ ಇತ್ಯಾದಿ) ಬಗೆಗಿನ ವಿಕಿಪೀಡಿಯ ಲೇಖನಗಳು ಭಾವೋದ್ರೇಕತೆ, ಉತ್ಪ್ರೇಕ್ಷೆ ಆಗುವ ಸಾಧ್ಯತೆ ಇರುತ್ತದೆ. ಇದು ವಿಶ್ವಕೋಶಕ್ಕೆ ತಕ್ಕುದಾದುದಲ್ಲ. ಇಂತಹ ವಿಷಯಗಳ ಬಗ್ಗೆ ಅಭಿಪ್ರಾಯಗಳು ವ್ಯಕ್ತಿನಿರ್ದಿಷ್ಟವಾಗಿರುತ್ತವೆ. ಜಗತ್ತಿನ ಶ್ರೇಷ್ಟ ಸಾಹಿತಿ ಯಾರು ಎಂಬುದಕ್ಕೆ ಎಲ್ಲರೂ ಒಪ್ಪುವಂತಹ ಒಂದು ವ್ಯಕ್ತಿ ಇರಲು ಸಾಧ್ಯವಿಲ್ಲ. ಆದರೆ ಒಬ್ಬ ಕಲಾವಿದನಿಗೆ ಅಥವಾ ಕಲಾವಸ್ತುವಿಗೆ ಸಾರ್ವಜನಿಕವಾಗಿ ಮತ್ತು ಪರಿಣಿತ ವರ್ಗದಲ್ಲಿ ಹೇಗೆ ಎಷ್ಟು ಮಾನ್ಯತೆ ಇದೆ, ಮೆಚ್ಚುಗೆ ಇದೆ ಎಂಬುದು ಗಮನಿಸಬೇಕಾದ ಅಂಶ. ಉದಾಹರಣೆಗೆ, "ಶಿವರಾಮ ಕಾರಂತರು ಕನ್ನಡ ಭಾಷೆಯ ಸಾಹಿತಿಗಳಲ್ಲಿ ಒಬ್ಬ ಶ್ರೇಷ್ಟ ಸಾಹಿತಿ ಎಂದು ಗುರುತಿಸಲ್ಪಡುತ್ತಾರೆ" ಎಂದು ಬರೆಯುವುದು ಒಪ್ಪಿತ. ಲೇಖನಗಳು ಸೃಜನಾತ್ಮಕ ಕೆಲಸಗಳ ಬಗ್ಗೆ ಸಾಮಾನ್ಯ ಅರ್ಥವಿವರಣೆಗಳ ಮೇಲ್ನೋಟವನ್ನು ಒಳಗೊಂಡಿರಬೇಕು. ಆ ವಿಷಯದ ಬಗ್ಗೆ ಪರಿಣಿತರ ವ್ಯಾಖ್ಯಾನಗಳನ್ನು ಹೊಂದಿರುವ ಮಾಹಿತಿಮೂಲಗಳನ್ನು ಉಲ್ಲೇಖಿಸುವುದು ಒಳ್ಳೆಯದು. ಸಾರ್ವಜನಿಕ ಹಾಗೂ ವಿದ್ವಾಂಸರ ವಿಮರ್ಶೆ ಅಭಿಪ್ರಾಯಗಳು ಕಲಾತ್ಮಕ/ಸೃಜನಾತ್ಮಕ ಕೆಲಸಗಳ ಬಗ್ಗೆ ಸಹಾಯವಾಗಬಲ್ಲ ನೋಟವನ್ನು ಒದಗಿಸುತ್ತವೆ.

ಎಚ್ಚರವಹಿಸಬೇಕಾದ ಪದಗಳು

ವಿಕಿಪೀಡಿಯದಲ್ಲಿ ಯಾವಯಾವ ರೀತಿಯ ಪದಗಳನ್ನು ಬಳಸಬಾರದು ಎಂಬುದಕ್ಕೆ ಯಾವುದೇ ನಿಯಮವಿಲ್ಲದಿದ್ದರೂ ಕೂಡ ತಟಸ್ಥತೆಯ ಕಾರಣದಿಂದ ಕೆಲವು ರೀತಿಯ ಪದಗಳನ್ನು ಬಳಸುವಾಗ ಎಚ್ಚರವಹಿಸಬೇಕಾಗುತ್ತದೆ. ಉದಾಹರಣೆಗೆ: "ರಾಮನು ಹಣ್ಣನ್ನು ತಿಂದಿಲ್ಲ ಎಂದು ಹೇಳಿದನು" ಎಂದು ಬರೆಯುವ ಬದಲು "ರಾಮನು ಹಣ್ಣನ್ನು ತಿಂದಿಲ್ಲ ಎಂದು ಸಾಧಿಸಿದನು" ಎಂದು ಬರೆಯುವುದರಿಂದ ವಿಷಯವು ಒಂದು ಕಡೆ ವಾಲುತ್ತದೆ. ಆತ ನಿಜವಾಗಿಯೂ ತಿಂದಿದ್ದಾನೆ ಎಂಬ ಅರ್ಥ ಹೊಮ್ಮಿಸಬಹುದು. ಹಾಗಾಗಿ ಆಕರ್ಷಣೀಯವಾಗುವಂತೆ ಮಾಡುವ, ಹೀಗಳೆಯುವ, ಅನಿಶ್ಚಿತೆಯ, ಕ್ಲೀಷೆಯುಳ್ಳ ಅಥವಾ ಒಂದು ದೃಷ್ಟಿಕೋನವನ್ನು ಅನುಮೋದಿಸುವ ಪದಗಳನ್ನು/ಅಭಿವ್ಯಕ್ತಿಯನ್ನು ಕಡಿಮೆಮಾಡಬೇಕು. (ಮುಖ್ಯವಾದ ಮಾಹಿತಿಮೂಲಗಳಿಂದ ಉಲ್ಲೇಖಿಸುವಾಗ ಅಂತಹ ಪದಗಳು ಅಲ್ಲಿ ಇದ್ದರೆ ಅವುಗಳ ಬಳಕೆಗೆ ಮಾಡಬಹುದು)

ಮಾಹಿತಿಮೂಲಗಳಲ್ಲಿ ಪಕ್ಷಪಾತ

ಪಕ್ಷಪಾತವಾಗಿ ಇರುವ ಮಾಹಿತಿಮೂಲಗಳ ಬಗೆಗಿನ ವಿವಾದದಲ್ಲಿ ಆ ಮಾಹಿತಿಮೂಲವು ಪಕ್ಷಪಾತವಾಗಿರುವ ಕಾರಣ ಬೇರೆ ಮೂಲಗಳಿಗೆ ಪ್ರಾಮುಖ್ಯತೆ ಕೊಡಬೇಕು ಎನ್ನುವ ವಾದ ಸಾಮಾನ್ಯ. ಆದರೆ ಪಕ್ಷಪಾತವಾಗಿದೆ ಎಂಬ ಒಂದೇ ಕಾರಣದಿಂದ ಆ ಮೂಲವನ್ನು ನಿರಾಕರಿಸಲು/ತೆಗೆದುಹಾಕಲು ಬರುವುದಿಲ್ಲ. ಅದರಲ್ಲಿ ಸಂಬಂಧಪಟ್ಟ ವಿಷಯದ ಬಗೆಗಿನ ಅಭಿಪ್ರಾಯಕ್ಕೆ ಎಷ್ಟು ಒತ್ತು ಇದೆ ಮತ್ತು ಒಟ್ಟಾರೆ ಆ ಮೂಲ ಏನು ಹೇಳುತ್ತಿದೆ ಎಂಬುದನ್ನು ನೋಡಿ ಇತರ ಅಭಿಪ್ರಾಯಗಳನ್ನು ಹೊಂದಿರುವ ಮಾಹಿತಿಮೂಲಗಳನ್ನೂ ಸೇರಿಸುವುದರ ಮೂಲಕ ತಟಸ್ಥತೆಯನ್ನು ಸಾಧಿಸಬೇಕಾಗುತ್ತದೆ. ಇದರ ಅರ್ಥ, ಪಕ್ಷಪಾತವಾಗಿ ಇರುವ ಮಾಹಿತಿಮೂಲಗಳನ್ನು ಬಳಸಬಹುದು ಎಂದಲ್ಲ, ಬದಲಾಗಿ ಆ ಲೇಖನದ ಪ್ರಸ್ತುತಿಗೆ ಇದರಿಂದ ಹೆಚ್ಚಿನ ಸಹಾಯವಾಗುವಂತಿದ್ದರೆ ಬಳಸಿಕೊಳ್ಳಬಹುದು.

ವಿವಾದಾತ್ಮಕ ವಿಷಯಗಳು

ಹೊರಜಗತ್ತಿನಲ್ಲಿ ಮತ್ತು ವಿಕಿಪೀಡಿಯ ಸಂಪಾದಕರ ನಡುವೆ ಆಗಾಗ ಅನೇಕ ವಿಷಯಗಳಲ್ಲಿ ತೀವ್ರ ಚರ್ಚೆಗಳುಂಟಾಗುವ ಸನ್ನಿವೇಶಗಳು ವಿಕಿಪೀಡಿಯದಲ್ಲಿ ನಡೆಯುತ್ತಿರುತ್ತವೆ. ವಿಕಿಪೀಡಿಯದ ಎಲ್ಲಾ ಕ್ಷೇತ್ರಗಳಲ್ಲೂ ತಟಸ್ಥ ದೃಷ್ಟಿಕೋನದ ಸರಿಯಾದ ಅರ್ಥೈಸಿಕೊಳ್ಳುವಿಕೆ ಮತ್ತು ಅನುಸರಿಯುವಿಕೆಯು ಅಗತ್ಯ.

ಅಮುಖ್ಯ ಸಿದ್ದಾಂತಗಳು ಮತ್ತು ಹುಸಿವಿಜ್ಞಾನ

ಹುಸಿವಿಜ್ಞಾನದ (pseudoscience) ಸಿದ್ಧಾಂತಗಳು ಅದರ ಪ್ರಚಾರಕರಿಂದ ವಿಜ್ಞಾನವೆಂಬಂತೆ ಪ್ರಸ್ತುತಪಡಿಸಲ್ಪಡುತ್ತವೆ. ಅವು ವೈಜ್ಞಾನಿಕ ಕ್ರಮಗಳಿಂದ ವಿಫಲವಾಗಿರುತ್ತವೆ. ಒಂದು ವಿಷಯದ ಬಗ್ಗೆ ವೈಜ್ಞಾನಿಕ ಒಮ್ಮತವೇ ವಿಜ್ಞಾನಿಗಳ ಬಹುಸಂಖ್ಯಾತ ದೃಷ್ಟಿಕೋನವಾಗಿರುತ್ತದೆ. ಹಾಗಾಗಿ ಹುಸಿವಿಜ್ಞಾನದ ಬಗ್ಗೆ ಮಾತಾಡುವಾಗ, ನಾವು ಈ ವಿರುದ್ಧ ಅಭಿಪ್ರಾಯಗಳಿಗೆ ಸಮಾನ ಮಾನ್ಯತೆ ಕೊಡುವಂತೆ ವಿವರಿಸಬಾರದು. ಕೆಲವೊಮ್ಮೆ ಹುಸಿವೈಜ್ಞಾನಿಕ ಅಭಿಪ್ರಾಯಗಳು ಲೇಖನದಲ್ಲಿ ಮುಖ್ಯವಾದರೂ ಕೂಡ ಅವು ಮುಖ್ಯವಾಹಿನಿಯ ವೈಜ್ಞಾನಿಕ ಸಮುದಾಯದ ಅಭಿಪ್ರಾಯ ವಿವರಣೆಗಳನ್ನು ಕೆಳಗೆ ತಳ್ಳುವಂತಿರಬಾರದು. ಹುಸಿವಿಜ್ಞಾನದ ಅಭಿಪ್ರಾಯಗಳಿಗೆ ಅನಗತ್ಯ ಒತ್ತುಕೊಡುವಿಕೆ ಇರಬಾರದು. ಇಂತಹ ಹುಸಿವಿಜ್ಞಾನದ ಅಭಿಪ್ರಾಯಗಳಿಗೆ ವಿಜ್ಞಾನಿಗಳು ಯಾವ ರೀತಿ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಮುಖ್ಯವಾಗಿ ಉಲ್ಲೇಖಿಸುವುದರ ಮೂಲ ವಿವಿಧ ದೃಶ್ಟಿಕೋನಗಳನ್ನು ಸರಿಯಾಗಿ ವಿವರಿಸಿದಂತೆ ಆಗುತ್ತದೆ. ಇದು ಇನ್ನಿತರ ವಿಷಯಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಪುರಾವೆಗಳಿಲ್ಲದ, ನಂಬಲರ್ಹ ಮೂಲಗಳಿಲ್ಲದ ಐತಿಹಾಸಿಕ ಪಿತೂರಿಯ ಘಟನೆಗಳು. ('ಪೋಪ್ ಜಾನ್ ಪಾಲ್ ೧ ಕೊಲೆ', 'ಚಂದ್ರನಲ್ಲಿ ಮಾನವ ಇಳಿದದ್ದು ಸುಳ್ಳು' ಎನ್ನುವ ಅಭಿಪ್ರಾಯಗಳು ಇತ್ಯಾದಿ)

ಧರ್ಮ

ನಂಬಿಕೆ ಮತ್ತು ಸಂಪ್ರದಾಯಗಳ ವಿಷಯದಲ್ಲಿ, ವಿಕಿಪೀಡಿಯಾದ ಲೇಖನದ ಮಾಹಿತಿಯು ಕೇವಲ ಆ ನಂಬಿಕೆ ಸಂಪ್ರದಾಯಗಳನ್ನು ಹೊಂದಿರುವ ವ್ಯಕ್ತಿಗಳು ಅದರ ಬಗ್ಗೆ ಹೇಗೆ ಪ್ರೇರಣೆ ಹೊಂದಿದ್ದಾರೆ ಎಂಬುದನ್ನು ಮಾತ್ರವಲ್ಲದೇ ಆ ನಂಬಿಕೆಗಳು ಆಚರಣೆಗಳು ಹೇಗೆ ಬೆಳೆದು ಬಂದವು ಎಂಬುದರ ಬಗ್ಗೆ ಮಾಹಿತಿಯನ್ನು ಒಳಗೊಂಡಿರಬೆಕು. ಇತಿಹಾಸ ಮತ್ತು ಧರ್ಮದ ಕುರಿತ ಲೇಖನಗಳ ಮಾಹಿತಿಯನ್ನು ಆ ಮತದ ಪವಿತ್ರ ಗ್ರಂಥಗಳಿಂದ, ಪ್ರಾಗಿತಿಹಾಸ ಸಂಶೋಧನೆಗಳಿಂದ, ಇತಿಹಾಸ ಮತ್ತು ವೈಜ್ಞಾನಿಕ ಮೂಲಗಳಿಂದ ಪಡೆಯಬಹುದು.

ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾಗುತ್ತದೆ ಎಂಬ ಕಾರಣಕ್ಕೆ ಕೆಲ ಮತಾನುಯಾಯಿಗಳು ತಮ್ಮ ಮತದ ಬಗೆಗಿನ ಇತಿಹಾಸದ ಸಂಶೋಧನೆಗಳು ಹೊರಹಾಕಿದ ಮಾಹಿತಿಯ ಬಗ್ಗೆ ವಿರೋಧವನ್ನು ಹೊಂದಿರಬಹುದು. ಅಂತಹ ಸಂದರ್ಭದಲ್ಲಿ ಅವರ ಅಭಿಪ್ರಾಯವನ್ನೂ ವಿಶ್ವಾಸಾರ್ಹ ಉಲ್ಲೇಖಗಳೊಂದಿಗೆ ಲೇಖನದಲ್ಲಿ ಅಳವಡಿಸಬೇಕು.

ಕೆಲವು ಪದಗಳು ಧಾರ್ಮಿಕ ಪಠ್ಯ ಮತ್ತು ಸಾಮಾನ್ಯ ಪಠ್ಯದಲ್ಲಿ ಬೇರೆ ಬೇರೆ ರೀತಿಯ ಅರ್ಥಗಳನ್ನು ಹೊಮ್ಮಿಸಬಹುದಾಗಿರುತ್ತವೆ. ಹಾಗಾಗಿ ಅಂತಹ ಪದಬಳಕೆಯ ಬಗ್ಗೆ ಎಚ್ಚರವಹಿಸಬೇಕು. ಉದಾ: ಮೂಲಭೂತವಾದ, ಪುರಾಣ ಇತ್ಯಾದಿ. ಹಾಗಿದ್ದರೂ ಕೂಡ ಲೇಖಕರು ಹೆಚ್ಚು ಪ್ರಚಲಿತದಲ್ಲಿರುವ ಪದಬಳಕೆಗಳನ್ನು ಮಾಡಬಹುದು.