ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ

ಸುಂದರ್‌ಬನ್ಸ್ ರಾಷ್ಟ್ರೀಯ ಉದ್ಯಾನ*
UNESCO ವಿಶ್ವ ಪರಂಪರೆಯ ತಾಣ

ಸುಂದರಬನದಲ್ಲಿನ ಒಂದು ನದಿ
ಸುಂದರಬನದಲ್ಲಿನ ಒಂದು ನದಿ
ರಾಷ್ಟ್ರ Indiaಭಾರತ
ತಾಣದ ವರ್ಗ ಪ್ರಾಕೃತಿಕ
ಆಯ್ಕೆಯ ಮಾನದಂಡಗಳು ix, x
ಆಕರ 452
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1997  (21ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಸುಂದರಬನ ಅಥವಾ ಸುಂದರ್‌ಬನ್ಸ್ ವಿಶ್ವದ ಅತಿ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಲ್ಲಿ ಒಂದಾಗಿದೆ. ಸುಂದರಬನ ಹೆಸರಿನ ಅರ್ಥ ಸುಂದರವಾದ ಕಾಡು ಎಂಬುದಾಗಿದೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣ ಬರುವ ಸುಂದರಿ ಮರಗಳಿಂದ ಸಹ ಈ ಹೆಸರು ಬಂದಿರಬಹುದಾಗಿದೆ. ಸುಂದರಬನ ಅರಣ್ಯವು ಗಂಗಾನದಿಯ ಸಾಗರಮುಖದಲ್ಲಿದ್ದು ಬಾಂಗ್ಲಾದೇಶ ಮತ್ತು ಭಾರತ ದೇಶಗಳಲ್ಲಿ ಹರಡಿದೆ. ನದಿಯ ಮುಖಜಭೂಮಿಯ ಸಾಗರದಂಚಿನಲ್ಲಿ ವ್ಯಾಪಿಸಿರುವ ಸುಂದರಬನದ ಒಟ್ಟು ವಿಸ್ತೀರ್ಣ ೧೦೦೦೦ ಚ. ಕಿ.ಮೀ. ಗಳಷ್ಟಿದೆ.

ಸುಂದರಬನವು ಅತಿ ಸಂಕೀರ್ಣವಾದ ಕಡಲ್ಗಾಲುವೆಗಳನ್ನು ಹೊಂದಿದೆ. ಜೊತೆಗೆ ಕೆಸರಂಗಳಗಳು ಮತ್ತು ಮ್ಯಾಂಗ್ರೋವ್ ಅರಣ್ಯಗಳಿಂದ ಕೂಡಿದ ಸಣ್ಣಸಣ್ಣ ದ್ವೀಪಗಳನ್ನು ಬೃಹತ್ ಸಂಖ್ಯೆಯಲ್ಲಿ ಒಳಗೊಂಡಿದೆ. ಇಲ್ಲಿನ ಮ್ಯಾಂಗ್ರೋವ್ ಅರಣ್ಯಗಳು ಸಮುದ್ರದ ಉಪ್ಪುನೀರನ್ನು ಸಹಿಸಿಕೊಂಡು ಬೆಳೆಯಬಲ್ಲವಾಗಿವೆ. ಸುಂದರಬನವು ಬಂಗಾಳದ ಹುಲಿಯ ತವರು. ಜೊತೆಗೆ ಜಿಂಕೆ, ಮೊಸಳೆ, ಉರಗಗಳು ಮತ್ತು ಹಲವು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ. ಇಲ್ಲಿ ಸುಮಾರು ೫೦೦ ಬಂಗಾಳ ಹುಲಿ (ರಾಯಲ್ ಬೆಂಗಾಲ್ ಟೈಗರ್) ಗಳಿವೆಯೆಂದು ಅಂದಾಜು ಮಾಡಲಾಗಿದೆ.

ಸುಂದರಬನ ಪ್ರದೇಶದ ಒಂದು ಉಪಗ್ರಹ ಚಿತ್ರ. ಗಾಢ ಹಸಿರು ಬಣ್ಣದಲ್ಲಿ ಕಾಣುವುದು ಸುಂದರಬನ.
ಸುಂದರಬನದ ಮ್ಯಾಂಗ್ರೋವ್ ಅರಣ್ಯ

ಇತಿಹಾಸ

ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ( ೧೨೦೩-೧೫೩೮) ಇಲ್ಲಿನ ಅರಸರು ಸುಂದರಬನವನ್ನು ಗುತ್ತಿಗೆಗೆ ನೀಡೀದ್ದರು. ಈ ಪ್ರದೇಶವು ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ವೈಜ್ಞಾನಿಕವಾಗಿ ನಿಭಾಯಿಸಲ್ಪಟ್ಟ ಮ್ಯಾಂಗ್ರೋವ್ ಅರಣ್ಯವು ಸಹ ಆಗಿದೆ. ೧೭೫೭ರಲ್ಲಿ ಮೊಘಲ್ ಸಾಮ್ರಾಟ ಆಲಂಗೀರನಿಂದ ಸುಂದರಬನವನ್ನು ಈಸ್ಟ್ ಇಂಡಿಯಾ ಕಂಪೆನಿ ಗುತ್ತಿಗೆಗೆ ಪಡೆಯಿತು. ಮುಂದೆ ೧೮೬೦ರಲ್ಲಿ ಬಂಗಾಳ ಪ್ರಾಂತ್ಯದಲ್ಲಿ ಅರಣ್ಯ ಇಲಾಖೆಯ ಸ್ಥಾಪನೆಯಾಗಿ ಸುಂದರಬನದ ವ್ಯವಸ್ಥಿತ ನಿರ್ವಹಣೆ ಮೊದಲಾಯಿತು. ಈ ಪ್ರದೇಶವನ್ನು ೧೮೭೫-೭೬ರಲ್ಲಿ ಮೀಸಲು ಅರಣ್ಯವನ್ನಾಗಿ ಘೋಷಿಸಲಾಯಿತು.

ಇದರಲ್ಲಿ ಸುಮಾರು ೬೦೦೦ ಚ.ಕಿ.ಮೀ. ಪ್ರದೇಶವು ಬಾಂಗ್ಲಾದೇಶದಲ್ಲಿದ್ದು ಉಳಿಕೆ ಭಾರತದಲ್ಲಿದೆ. ಇದನ್ನು ೧೯೯೭ ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿಸಿತು. ಎರಡು ರಾಷ್ಟ್ರಗಳಲ್ಲಿ ಹರಡಿರುವ ಸುಂದರಬನವು ಒಂದೇ ಪ್ರಾಕೃತಿಕ ತುಣುಕಾಗಿದ್ದರೂ ಯುನೆಸ್ಕೋ ಬಾಂಗ್ಲಾದೇಶದಲ್ಲಿನ ಸುಂದರಬನವನ್ನು ಸುಂದರ್‌ಬನ್ಸ್ ವಿಶ್ವ ಪರಂಪರೆಯ ತಾಣ ಮತ್ತು ಭಾರತದಲ್ಲಿ ಸುಂದರಬನ ರಾಷ್ಟ್ರೀಯ ಉದ್ಯಾನ ವಿಶ್ವ ಪರಂಪರೆಯ ತಾಣವೆಂದು ಬೇರೆ ಬೇರೆಯಾಗಿ ಪರಿಗಣಿಸಿದೆ.

ಭೂ ರಚನೆ ಮತ್ತು ಪರಿಸರ

ಸುಂದರಬನದಲ್ಲಿ ಒಂದು ಕೆಸರಂಗಳ
ನೀಲ ಕಿವಿಯ ಕಿಂಗ್‌ಫಿಷರ್ ಹಕ್ಕಿ

ಸುಂದರಬನವು ಗಂಗಾನದಿಯ ಮುಖಜಭೂಮಿಯಾಗಿದ್ದು ಅತಿ ಸಂಕೀರ್ಣ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಸುಂದರಬನದ ೬೨% ಭಾಗವು ಬಾಂಗ್ಲಾದೇಶದ ಆಗ್ನೇಯ ಭಾಗದಲ್ಲಿ ಸಾಗರದಂಚಿನಲ್ಲಿದೆ. ಅರಣ್ಯದ ದಕ್ಷಿಣದಲ್ಲಿ ಬಂಗಾಳ ಕೊಲ್ಲಿಯಿದೆ. ಸುಂದರಬನದ ಪೂರ್ವದ ಗಡಿಯಲ್ಲಿ ಬಾಲೇಶ್ವರ್ ನದಿಯಿದ್ದು ಉತ್ತರದಲ್ಲಿ ಫಲವತ್ತಾದ ಸಾಗುವಳಿ ಪ್ರದೇಶವಿದೆ. ಮುಖ್ಯನದಿಗಳ ಹೊರತಾಗಿ ಇತರ ಹಳ್ಳ ಮತ್ತು ತೊರೆಗಳಿಗೆ ಹೆಚ್ಚಿನ ಕಡೆಯಲ್ಲಿ ಕಟ್ಟೆಗಳನ್ನು ನಿರ್ಮಿಸಲಾಗಿದ್ದು ಈ ಪ್ರದೇಶದಲ್ಲಿ ನೀರಿನ ಹರಿವು ಗಣನೀಯವಾಗಿ ಕುಸಿದಿದೆ.

ಇದರ ಪರಿಣಾಮವಾಗಿ ಸುಂದರಬನದ ವಿಸ್ತಾರವು ಸಹ ಕ್ರಮೇಣ ಇಳಿಮುಖವಾಗುತ್ತಿದೆ. ಇಲ್ಲಿನ ನದಿ, ಕಾಲುವಗಳು ಸಿಹಿನೀರು ಮತ್ತು ಸಾಗರದ ಉಪ್ಪು ನೀರಿನ ಸಂಗಮ ಸ್ಥಾನಗಳಾಗಿವೆ. ಈ ಪ್ರದೇಶದ ನೆಲವು ಸಮುದ್ರಮಟ್ಟದಿಂದ ೦.೯ ಮೀಟರ್‌ನಿಂದ ೨.೧೧ ಮೀ. ಗಳಷ್ಟು ಎತ್ತರದಲ್ಲಿದೆ.

ಕರಾವಳಿಯ ಭೌತಿಕ ಪರಿಸರದ ಬೆಳವಣಿಗೆಯು ಸಾಗರದ ಅಲೆಕಳ ಚಲನವಲನ, ಉಬ್ಬರವಿಳಿತ , ಮಳೆಮಾರುತ ಹಾಗೂ ತೀರದಲ್ಲಿನ ನೀರಿನ ಸೆಳೆತ ಮುಂತಾದವುಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇವುಗಳು ಆ ಪ್ರದೇಶದಲ್ಲಿನ ಭೂ ಸವೆತವನ್ನು ನಿರ್ಧರಿಸುತ್ತವೆ. ಆದರೂ ಸಹ ಸುಂದರಬನದ ಮ್ಯಾಂಗ್ರೋವ್ ಅರಣ್ಯಗಳು ಇಲ್ಲಿನ ಭೂಪ್ರದೇಶದಲ್ಲಿ ಸವಕಳಿಯನ್ನು ತಡೆಗಟ್ಟಿ ಭೂಸ್ಥಿರತೆಯನ್ನು ಒದಗಿಸುವಲ್ಲಿ ಪರಿಣಾಮಕಾರಿಯಾಗಿವೆ. ಮಳೆಗಾಲದ ಸಮಯದಲ್ಲಿ ಇಲ್ಲಿನ ಮುಖಜಭೂಮಿಯ ಬಹುಪಾಲು ನೀರಿನಲ್ಲಿ ಮುಳುಗಿರುತ್ತದೆ.

ಈ ಸಮಯದಲ್ಲಿ ಸಮುದ್ರದೆಡೆಗೆ ತಳ್ಳಲ್ಪಟ್ಟ ಮೆಕ್ಕಲುಮಣ್ಣಿನ ಹೆಚ್ಚಿನ ಭಾಗವು ಚಂಡಮಾರುತಗಳ ಪ್ರಕ್ರಿಯೆಯಿಂದಾಗಿ ಮತ್ತೆ ಹಿಂದಕ್ಕೆ ಒತ್ತರಿಸಲ್ಪಡುವುದು. ಹೀಗಾಗಿ ಸುಂದರಬನದ ಪ್ರದೇಶದಲ್ಲಿ ಫಲವತ್ತಾದ ಮೆಕ್ಕಲುಮಣ್ಣಿನ ಪರಿಮಾಣವು ಕಾಯ್ದುಕೊಳ್ಳಲ್ಪಡುತ್ತದೆ. ಇದರ ಹೊರತಾಗಿಯೂ ಇಲ್ಲಿನ ಭೂಮಟ್ಟವು ಕ್ರಮೇಣ ಕುಸಿಯುತ್ತಿರುವುದನ್ನು ಗಮನಿಸಲಾಗಿದೆ. ಸುಂದರಬನಕ್ಕೆ ಹರಿದುಬರುವ ಸಿಹಿನೀರಿನ ಪ್ರಮಾಣವು ಇಳಿಯತೊಡಗಿದ್ದು ಇದರಿಂದಾಗಿ ಈ ಪ್ರದೇಶದ ಅರಣ್ಯಪ್ರದೇಶವು ಕುಗ್ಗುತ್ತಿದೆ.

ಗಿಡಮರಗಳು ಕಡಿಮೆಯಾದಂತೆ ಮೆಕ್ಕಲುಮಣ್ಣನು ತಡೆದಿಟ್ಟುಕೊಳ್ಳುವ ಸಾಮರ್ಥ್ಯವು ಕುಸಿಯತೊಡಗಿದ್ದು ಫಲಸ್ವರೂಪವಾಗಿ ಭೂಸವೆತ ಹೆಚ್ಚುತ್ತಿದ್ದು ನೆಲೆದ ಮಟ್ಟ ಕುಸಿಯುತ್ತಿದೆ. ಈ ಶತಮಾನದ ಅಂಚಿಗೆ ಇಲ್ಲಿನ ಸಾಗರಮಟ್ಟವು ೪೫ ಸೆಂಟಿಮೀಟರ್ಗಳಷ್ಟು ಹೆಚ್ಚುವ ಅಂದಾಜಿದ್ದು ಇದರಿಂದಾಗಿ ಸುಂದರಬನಕ್ಕೆ ಮುಳುಗಡೆಯ ಅಪಾಯವಿದೆಯೆಂದು ಅಧ್ಯಯನಗಳು ತಿಳಿಸುತ್ತವೆ.

ಸಸ್ಯ ವೈವಿಧ್ಯ

ಸುಂದರಿ ವೃಕ್ಷ

ಸುಂದರಬನದಲ್ಲಿ ಸುಮಾರು ೨೪೫ ಸಸ್ಯವಂಶಗಳಿಗೆ ಸೇರಿದ ೩೩೪ ತಳಿಗಳ ಗಿಡಮರಗಳನ್ನು ಗುರುತಿಸಲಾಗಿದೆ. ಸುಂದರಬನವನ್ನು ತೇವಭರಿತ ಉಷ್ಣವಲಯದ ಕಾಡೆಂದು ವರ್ಗೀಕರಿಸಲಾಗಿದೆ. ಈ ಪ್ರದೇಶದ ನೀರಿನಲ್ಲಿರುವ ಉಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ೩ ಅರಣ್ಯ ವಲಯಗಳು ರೂಪುಗೊಂಡಿವೆ. ಸುಂದರಿ ವೃಕ್ಷಗಳು ಮತ್ತು ಗೇವಾ ಮರಗಳು ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ. ಜೊತೆಗೆ ಢುಂಡುಲ್ ಮತ್ತು ಕಂಕ್ರಾ ಮರಗಳು ಸಹ ಬಹಳಷ್ಟು ಇವೆ.

ಹಲವು ಜಾತಿಯ ಹುಲ್ಲುಗಳು ಮತ್ತು ತಾಳೆಯ ವಂಶಕ್ಕೆ ಸೇರಿದ ಹಲವು ಜಾತಿಯ ಮರಗಳು ಸಹ ಸುಂದರಬನದಲ್ಲಿ ನೆಲೆಯೂರಿವೆ. ಚುಕ್ಕೆ ಜಿಂಕೆಗಳಿಗೆ ಮುಖ್ಯ ಆಹಾರವಾಗಿರುವ ಕಿಯೋರಾ ಸಸ್ಯವು ಇಲ್ಲಿ ಬಹಳ ವ್ಯಾಪಕವಾಗಿದೆ. ಕರ್ನಾಟಕದ ಕುಂದಾಪುರದಲ್ಲಿ ಕಂಡು ಬರುತ್ತದೆ.

ಪ್ರಾಣಿಸಂಕುಲ

ಸುಂದರಬನದಲ್ಲಿನ ಪ್ರಾಣಿವೈವಿಧ್ಯ ಬಲು ವಿಸ್ತಾರವಾದುದು. ಇವುಗಳಲ್ಲಿ ಬಂಗಾಳದ ಹುಲಿ ಮತ್ತು ಡಾಲ್ಫಿನ್‌ಗಳು ಬಲು ಪ್ರಸಿದ್ಧವಾದವು. ಈ ಪ್ರದೇಶದಲ್ಲಿ ಹಲವು ವನ್ಯಧಾಮಗಳನ್ನು ರಚಿಸಲಾಗಿದ್ದು ಈ ವಲಯಗಳಲ್ಲಿ ಬೇಟೆಯಾಡುವಿಕೆ ಮತ್ತು ಅರಣ್ಯ ಉತ್ಪನ್ನಗಳ ಸಂಗ್ರಹಣೆಯನ್ನು ಸಂಪೂರ್ಣವಾಗಿ ಪ್ರತಿಬಂಧಿಸಲಾಗಿದೆ. ಇದರಿಂದಾಗಿ ಈಲ್ಲಿನ ಪ್ರಾಣಿಗಳಿಗ ತಕ್ಕಮಟ್ಟಿನ ರಕ್ಷಣೆ ಒದಗಿದೆ. ಸುಂದರಬನದಲ್ಲಿ ಒಟ್ಟು ೫೦೦ ಹುಲಿಗಳಿವೆಯೆಂದು ಅಂದಾಜು ಮಾಡಲಾಗಿದೆ.

ಹಲವು ತಳಿಯ ಕಡಲಾಮೆಗಳು, ಮಾನಿಟರ್‌ ಹಲ್ಲಿ, ಹೆಬ್ಬಾವು ಮುಂತಾದ ಜೀವಿಗಳು ಸಹ ಇಲ್ಲಿ ವ್ಯಾಪಕವಾಗಿ ಕಾಣಬರುತ್ತವೆ.

ಪ್ರಾಣಿಗಣತಿಯ ವರ್ಷ ಜಿಂಕೆ ರೀಸಸ್ ಕೋತಿ ಮಾನಿಟರ್ ಹಲ್ಲಿ ಕಾಡು ಹಂದಿ ದಕ್ಷಿಣ ೨೪ ಪರಗಣದಲ್ಲಿ ಹುಲಿಗಳ ಸಂಖ್ಯೆ ಸುಂದರ್‌ಬನ್ಸ್ ಹುಲಿ ಮೀಸಲು ಪ್ರದೇಶದಲ್ಲಿ ಹುಲಿಗಳ ಸಂಖ್ಯೆ
ಗಂಡು ಹೆಣ್ಣು ಮರಿ ಒಟ್ಟು ಗಂಡು ಹೆಣ್ಣು ಮರಿ ಒಟ್ಟು ಅಂದಾಜು
1973 ಅಪೂರ್ಣ ಗಣತಿ 50+ 50+
1976 66 72 43 181 181
1977 ತಿಳಿಯದು 205 205
1983 137 115 12 264 264
1989 30,886 126 109 34 269 269
1992 92 132 27 251 251
1993 30,978 37,691 10,272 11,869
1996 95 126 21 242 242
1997 13 16 6 35 99 137 27 263 298
1999 9 16 5 30 96 131 27 254 284
2001 7 13 6 26 93 129 23 245 271
2004 7 14 4 25 83 133 33 249 274

ಇವನ್ನೂ ನೋಡಿ

ಬಾಹ್ಯ ಸಂಪರ್ಕಕೊಂಡಿಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ