ಗೆಲಿಲಿಯೋ ಗೆಲಿಲಿ

ಗೆಲಿಲಿಯೋ ಗೆಲಿಲಿ
Portrait of Galileo Galilei by Giusto Sustermans
ಜನನ(೧೫೬೪-೦೨-೧೫)೧೫ ಫೆಬ್ರವರಿ ೧೫೬೪
ಪಿಸಾ, Duchy of Florence, Italy
ಮರಣ8 January 1642(1642-01-08) (aged 77)
Arcetri, Grand Duchy of Tuscany, Italy
ವಾಸಸ್ಥಳGrand Duchy of Tuscany, Italy
ರಾಷ್ಟ್ರೀಯತೆItalian (Tuscan)
ಕಾರ್ಯಕ್ಷೇತ್ರAstronomy, Physics and Mathematics
ಸಂಸ್ಥೆಗಳುಪಿಸಾ ವಿಶ್ವವಿದ್ಯಾನಿಲಯ
University of Padua
ಅಭ್ಯಸಿಸಿದ ವಿದ್ಯಾಪೀಠಪಿಸಾ ವಿಶ್ವವಿದ್ಯಾನಿಲಯ
ಶೈಕ್ಷಣಿಕ ಸಲಹೆಗಾರರುOstilio Ricci
ಗಮನಾರ್ಹ ವಿದ್ಯಾರ್ಥಿಗಳುBenedetto Castelli
Mario Guiducci
Vincenzio Viviani
ಪ್ರಸಿದ್ಧಿಗೆ ಕಾರಣKinematics
Dynamics
Telescopic observational astronomy
Heliocentrism
ಹಸ್ತಾಕ್ಷರ
ಟಿಪ್ಪಣಿಗಳು
His father was the musician Vincenzo Galilei. His mistress was Marina Gamba (1570-August 21, 1612?) was mother of Maria Celeste (Virginia 1600-1634) and Livia (1601-1659), who were nuns, and son Vincenzo (1606-1649) a lutenist. Gamba later married Giovanni Bartoluzzi.

ಗೆಲಿಲಿಯೊ ಗೆಲಿಲಿ (೧೫ ಫೆಬ್ರುವರಿ ೧೫೬೪ - ೮ ಜನವರಿ ೧೬೪೨) ಇಟಲಿಯ ಭೌತಶಾಸ್ತ್ರಜ್ಞ, ಗಣಿತಜ್ಙ, ಖಗೋಳಶಾಸ್ತ್ರಜ್ಙ ಮತ್ತು ತತ್ವಶಾಸ್ತ್ರಜ್ಞ. ಇವರು ವೈಜ್ಞಾನಿಕ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೆನೆಸಾನ್ಸ್‌ ಕಾಲದಲ್ಲಿ ಉಂಟಾದ ವಿಜ್ಞಾನ ಪುನರುಜ್ಜೀವನದ ಆದ್ಯ ಪ್ರವರ್ತಕರಲ್ಲೊಬ್ಬ. ಆಧುನಿಕ ವಿಜ್ಞಾನದ ಆಧಾರಸ್ತಂಭಗಳಲ್ಲೊಂದು ಎನಿಸಿರುವ ಪ್ರಯೋಗಮಾರ್ಗವನ್ನು ಅನುಷ್ಠಾನಕ್ಕೆ ತಂದವನೆಂದೂ ಯಂತ್ರಶಾಸ್ತ್ರದ (ಮೆಕ್ಯಾನಿಕ್ಸ್‌) ಮೂಲಪುರುಷನೆಂದೂ ಪ್ರಸಿದ್ಧಿ ಪಡೆದಿದ್ದಾನೆ. ಖಗೋಳೀಯ ಸಂಶೋಧನೆಗೆ ದೂರದರ್ಶಕವನ್ನು ಮೊತ್ತಮೊದಲ ಬಾರಿಗೆ ಬಳಸಿ ವಿವಿಧ ಆಕಾಶ ಕಾಯಗಳ ಬಗ್ಗೆ ಅನೇಕಾನೇಕ ಸ್ವಾರಸ್ಯಕರ ವಿಷಯಗಳನ್ನು ಸಂಗ್ರಹಿಸಿ ಕೊಪರ್ನಿಕಸ್ ಸಿದ್ಧಾಂತಕ್ಕೆ ಬೆಂಬಲ ನೀಡಿದ; ಮತ್ತು ಅದರಿಂದ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿದ.

ಬಾಲ್ಯ ಮತ್ತು ಜೀವನ

ಗೆಲಿಲಿಯೊ ಹುಟ್ಟಿದ್ದು ಪೀಸಾ ನಗರದಲ್ಲಿ, 1564 ರ ಫೆಬ್ರುವರಿ 15ರಂದು. ತಂದೆ ವಿನ್ಸೆನ್ಸಿಯೊ ಗೆಲೀಲಿ ಉಣ್ಣೆ ವ್ಯಾಪಾರಿ ಮತ್ತು ಹೆಸರುವಾಸಿಯಾದ ಸಂಗೀತಗಾರ. ಆತನ ಅಭಿಲಾಷೆಯಂತೆ ಗೆಲಿಲಿಯೊ ವೈದ್ಯಶಾಸ್ತ್ರ ಕಲಿಯಲೆಂದು ಪೀಸಾ ವಿಶ್ವವಿದ್ಯಾಲಯ ಸೇರಿದ. ಆದರೆ ಆಕಸ್ಮಿಕವಾಗಿ ಕೇಳಿದ ಒಂದು ಉಪನ್ಯಾಸದಿಂದ ಪ್ರಭಾವಿತನಾಗಿ ಗಣಿತಶಾಸ್ತ್ರದಲ್ಲಿ ಆಸಕ್ತನಾದ. ಕ್ರಮೇಣ ಗಣಿತದ ಗೀಳು ಹೆಚ್ಚಾಗಿ ವಿಶ್ವವಿದ್ಯಾಲಯವನ್ನು ಬಿಟ್ಟು ಮನೆಗೆ ಬಂದ. ಅವನ ಮುಂದಿನ ವಿದ್ಯಾಭ್ಯಾಸ ನಡೆದದ್ದು ಮನೆಯಲ್ಲಿಯೇ. ಬಹುಬೇಗ ಅಪಾರ ಪಾಂಡಿತ್ಯವನ್ನು ಸಂಪಾದಿಸಿ ಪೀಸಾ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕನಾದ.

ಸಂಶೋಧನೆಗಳು

ಸಾವಿರಾರು ವರ್ಷಗಳಿಂದ ಮಾನ್ಯತೆ ಪಡೆದಿದ್ದ ಅರಿಸ್ಟಾಟಲನ ಅನೇಕ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಅಲ್ಲಗಳೆದು ಸಹ ಪ್ರಾಧ್ಯಾಪಕರ ದ್ವೇಷ ಕಟ್ಟಿಕೊಂಡ. ಅವರ ಕಿರುಕುಳವನ್ನು ತಾಳಲಾರದೆ ಎರಡೇ ವರ್ಷಗಳಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಫ್ಲಾರೆನ್ಸ್‌ ನಗರಕ್ಕೆ ಓಡಿಹೋದ. 1592ರಲ್ಲಿ ಪಡೂವ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ, ಅಲ್ಲಿ ಹದಿನೆಂಟು ವರ್ಷ ಕಳೆದು, 1610 ರಲ್ಲಿ ಟಸ್ಕನಿ ಡ್ಯೂಕರ ಆಸ್ಥಾನ ವಿದ್ವಾಂಸನಾಗಿ ಸೇರಿಕೊಂಡ. ಈತ ಇತಿಹಾಸ ಪ್ರಸಿದ್ಧನಾಗಲು ಕಾರಣವಾದ ಈತನ ಮಹತ್ತ್ವಪೂರಿತ ಸಂಶೋಧನೆಗಳಲ್ಲಿ ಬಹುಪಾಲು ನಡೆದದ್ದು ಪಡೂವ ವಿಶ್ವವಿದ್ಯಾಲಯದಲ್ಲಿದ್ದ ಅವಧಿಯಲ್ಲೇ. ಯುರೋಪಿನ ಎಲ್ಲ ಭಾಗಗಳಿಗೂ ಈತನ ಕೀರ್ತಿ ಹಬ್ಬಿ ಎಲ್ಲ ದೇಶಗಳಿಂದಲೂ ವಿದ್ಯಾರ್ಥಿಗಳು ಅಲ್ಲಿಗೆ ಬರತೊಡಗಿದರು. ಜೊತೆಗೆ ಈತನ ಸಂಪ್ರದಾಯವಿರೋಧಿ ಬೋಧನೆಗಳ ಪರಿಣಾಮವಾಗಿ ಇವನ ವೈರಿಗಳ ಸಂಖ್ಯೆಯೂ ಬೆಳೆಯಿತು. ಇವನ ಬೋಧನೆಗಳು ಧರ್ಮಬಾಹಿರವಾದವೆಂದು ಪೋಪ್ ಐದನೆಯ ಪಯಸ್‍ರವರ ಮನ ಒಪ್ಪಿಸುವುದರಲ್ಲಿ ಈತನ ಶತ್ರುಗಳು ಯಶಸ್ವಿಯಾದರು. 1615 ರಲ್ಲಿ ಇವನನ್ನು ವಿಚಾರಣೆಗೆ ಗುರಿಪಡಿಸಿ ಇವನ ಬಾಯಿ ಮುಚ್ಚಿಸಿದರು.

ವಿರೋಧ

E pur si muove=ಮುರಿಲ್ಲೋಗೆ ಸೇರಿದ ಗೆಲಿಲಿಯೋನ ಭಾವಚಿತ್ರ=,"ಇ ಪರ್ ಸಿ ಮೊವ್" (ಮತ್ತು ಇನ್ನೂ ಅದು ಚಲಿಸುತ್ತಿದೆ ; ತಾನು 'ಸೂರ್ಯನ ಸುತ್ತ ಭೂಮಿ ಚಲಿಚಿಸುತ್ತಿದೆ ಎಂದು ಹೇಳಿದ್ದು ತಪ್ಪು ಎಂದು ನ್ಯಾಯವಿಚಾರಣೆಯಲ್ಲಿ ಹೇಳಿದ್ದರೂ, 'ಅದು ಚಲಿಸುತ್ತದೆ' ಎಂದು ಜೈಲಿನ ಗೋಡೆಯ ಮೇಲೆ ಗೀಚಿದ್ದಾನೆ) ಆತನ ಜೈಲು ಕೋಣೆಯ ಗೋಡೆಯ ಮೇಲೆ ಗೀಚಿದ ಅವನ ಬರೆಹ (ಈ ಚಿತ್ರದಲ್ಲಿ ಸ್ಪಷ್ಟವಾಗಿಲ್ಲ)

1623 ರಲ್ಲಿ ಗೆಲಿಲಿಯೊನ ಸ್ನೇಹಿತ ಬಾರ್ಬೆರಿನಿ ಎಂಬಾತ ಎಂಟನೆಯ ಅರ್ಬನ್ ಎಂಬ ಹೆಸರಿನಿಂದ ಪೋಪ್ ಪದವಿಗೇರಿದ. ತನಗೆ ಸತ್ಯವೆಂದು ತೋರಿದ್ದನ್ನು ಬಹಿರಂಗವಾಗಿ ಸಾರಲು ಇನ್ನು ಮುಂದೆ ಯಾವ ಅಡ್ಡಿಯೂ ಇರಲಾರದೆಂದು ಭಾವಿಸಿದ ಗೆಲಿಲಿಯೊ ‘ಎರಡು ಪ್ರಮುಖ ಸಿದ್ಧಾಂತಗಳನ್ನು ಕುರಿತ ಸಂವಾದ’ ಎಂಬ ಒಂದು ಗ್ರಂಥವನ್ನು ಪ್ರಕಟಿಸಿದ (1632). ಟಾಲೆಮಿ ಸಿದ್ಧಾಂತದ ಪರವಾಗಿ ವಾದಿಸುವ ಒಬ್ಬ, ಕೊಪರ್ನಿಕಸ್ ಸಿದ್ಧಾಂತದ ಪರ ವಾದಿಸುವ ಒಬ್ಬ ಮತ್ತು ಇನ್ನೊಬ್ಬ ಸಾಮಾನ್ಯ ಮನುಷ್ಯ-ಈ ಮೂವರ ಮಧ್ಯೆ ನಡೆಯುವ ಸಂಭಾಷಣೆಯ ರೂಪದಲ್ಲಿದ್ದ ಆ ಗ್ರಂಥದಲ್ಲಿ ಕೊಪರ್ನಿಕಸ್ ವಾದಿಯನ್ನು ಪ್ರತಿಭಾವಂತನಂತೆಯೂ ಟಾಲೆಮಿ ವಾದಿಯನ್ನು ಬೆಪ್ಪನಂತೆಯೂ ಚಿತ್ರಿಸಲಾಗಿತ್ತು. ಟಾಲೆಮಿ ವಾದಿಯ ಚಿತ್ರವನ್ನು ರಚಿಸುವಾಗ ಗೆಲಿಲಿಯೊ ಪೋಪ್‍ರವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಅವರನ್ನು ಗೇಲಿ ಮಾಡಿದ್ದಾನೆಂದು ಈತನ ವೈರಿಗಳು ಅಪಪ್ರಚಾರ ಮಾಡಲಾರಂಭಿಸಿದರು. 1633 ರಲ್ಲಿ ಈತ ಪುನಃ ವಿಚಾರಣೆಗೆ ಗುರಿಯಾದ. ಗೆಲಿಲಿಯೊ ತಪ್ಪಿತಸ್ಥನೆಂದು ನ್ಯಾಯಾಧೀಶ ಮಂಡಲಿ ತೀರ್ಮಾನವಿತ್ತಿತು. ಕೇವಲ ಮೂವತ್ತೆಂಟು ವರ್ಷಗಳ ಹಿಂದೆ ಅದೇ ಅಪರಾಧಕ್ಕೆ ಬ್ರೂನೊ ಎಂಬಾತನನ್ನು ಜೀವಸಹಿತ ಸುಡಲಾಗಿತ್ತು. ಆದರೆ ಗೆಲಿಲಿಯೊಗೆ ಮರಣದಂಡನೆ ವಿಧಿಸಲಿಲ್ಲ. ಇವನ ವಯಸ್ಸನ್ನು ಗಮನಿಸಿ ಕಡಿಮೆ ಶಿಕ್ಷೆ ಕೊಟ್ಟರು. ಆ ಕಾಲದ ಪದ್ಧತಿಯಂತೆ ಗೋಣಿಪಟ್ಟಿಯನ್ನುಟ್ಟು ಮೈಗೆ ಬೂದಿ ಬಳಿದುಕೊಂಡು ಮೊಣಕಾಲೂರಿ ಕುಳಿತು ‘ನಾನು ಅಪರಾಧಿ, ನಾನು ಬೋಧಿಸಿದುದೆಲ್ಲ ಸುಳ್ಳು, ಭೂಮಿ ಚಲಿಸುತ್ತಿಲ್ಲ ; ಸ್ಥಿರವಾಗಿ ನಿಂತಿದೆ’ ಎಂದು ಬಹಿರಂಗವಾಗಿ ಸಾರಬೇಕಾಯಿತು. ಮೇಲಕ್ಕೇಳುವಾಗ ತಗ್ಗಿಸಿದ ದನಿಯಲ್ಲಿ ‘ನಾನು ಏನೇ ಹೇಳಿರಲಿ ಅದು ಚಲಿಸಿಯೇ ಚಲಿಸುತ್ತದೆ’ ಎಂದು ಹೇಳಿದನೆಂದು ಕಥೆ.

ನಿಧನ

ಅಲ್ಲಿಂದ ಮುಂದೆ ಇವನು ಬಂಧನದಲ್ಲಿರಬೇಕಾಗಿ ಬಂತು. ಕೆಲವು ದಿವಸ ರೋಮ್ನಲ್ಲಿದ್ದ ಟಸ್ಕನಿ ಡ್ಯೂಕರ ಮನೆಯಲ್ಲಿಯೂ ಅನಂತರ ಆರ್ಸೆಟ್ರಿ ಎಂಬ ಹಳ್ಳಿಯಲ್ಲಿದ್ದ ತನ್ನದೇ ಮನೆಯಲ್ಲಿಯೂ ಗೃಹಬಂಧನದಲ್ಲಿದ್ದು 1642 ಜನವರಿ 8 ರಂದು ನಿಧನ ಹೊಂದಿದ. ತನ್ನ ಜೀವನದ ಕೊನೆಯ ನಾಲ್ಕು ವರ್ಷ ಸಂಪೂರ್ಣ ಕುರುಡನಾಗಿ ದಿನಗಳನ್ನು ಕಳೆದ.

ಸಾಧನೆಗಳು

ಗೆಲಿಲಿಯೊ ತನ್ನ ಮೊತ್ತಮೊದಲ ಪ್ರಮುಖ ಆವಿಷ್ಕಾರವನ್ನು ಮಾಡಿದ್ದು 1581 ರಲ್ಲಿ. ಆಗ ಇವನಿಗಿನ್ನೂ ಹದಿನೇಳು ವರ್ಷ: ಪೀಸಾ ವಿಶ್ವವಿದ್ಯಾಲಯದಲ್ಲಿ ವೈದ್ಯಶಾಸ್ತ್ರದ ವಿದ್ಯಾರ್ಥಿ. ಪೀಸಾ ನಗರದ ಕ್ಯಾತೆಡ್ರಲ್‍ನಲ್ಲಿ ಪ್ರಾರ್ಥನಾ ಸಭೆಯೊಂದರಲ್ಲಿ ಭಾಗವಹಿಸುತ್ತಿದ್ದಾಗ ಛಾವಣಿಯಿಂದ ನೇತಾಡುತ್ತಿದ್ದ ತೂಗುದೀಪವನ್ನು ನೋಡುತ್ತಿದ್ದ. ತೂಗಾಟದ ವಿಸ್ತಾರ ಎಷ್ಟೇ ಇರಲಿ, ದೀಪ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಹಿಡಿಸುತ್ತಿದ್ದ ಕಾಲ ಸ್ಥಿರ ಎಂಬುದನ್ನು ಇವನು ಗಮನಿಸಿದ. ಗಡಿಯಾರ ಅಥವಾ ಇನ್ನಾವುದೇ ನಿಷ್ಕೃಷ್ಟ ಕಾಲಮಾಪಕಗಳು ಆಗ ಇರಲಿಲ್ಲವಾದ್ದರಿಂದ ಕಾಲವನ್ನು ಅಳೆಯಲು ಇವನು ತನ್ನ ನಾಡಿಯ ಬಡಿತವನ್ನೇ ಬಳಸಿಕೊಂಡ. ಮನೆಗೆ ಹಿಂತಿರುಗಿದ ತರುವಾಯ ಒಂದು ಸರಳ ಲೋಲಕವನ್ನು ತಯಾರಿಸಿಕೊಂಡು ಅದರ ಉದ್ದವನ್ನು ಅವಲಂಬಿಸಿ ಆಂದೋಲನ ಕಾಲ ಹೇಗೆ ವ್ಯತ್ಯಾಸವಾಗುವುದೆಂಬುದನ್ನು ನಿರ್ಧರಿಸಿದ.

ಉಷ್ಣತೆಯನ್ನು ಅಳೆಯಲು ಪ್ರಯತ್ನಿಸಿದ ಗೆಲಿಲಿಯೊ 1593 ರಲ್ಲಿ ಒಂದು ಉಷ್ಣತಾಮಾಪಕವನ್ನು ನಿರ್ಮಿಸಿದ. ಇವನು ನಿರ್ಮಿಸಿದ್ದು ಅನಿಲ ಉಷ್ಣತಾಮಾಪಕ; ಅನಿಲದ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗಳ ಆಧಾರದ ಮೇಲೆ ಅದರ ಉಷ್ಣತೆಯನ್ನು ಅಳೆಯುವುದು ಇದರಿಂದ ಸಾಧ್ಯವಾಯಿತು.

ಮೇಲಿನಿಂದ ಬೀಳುವ ಕಾಯಗಳು ಹೇಗೆ ವರ್ತಿಸುವುವೆಂಬುದನ್ನು ಗೆಲಿಲಿಯೊ ಅಧ್ಯಯನ ಮಾಡತೊಡಗಿದ. ಬೇರೆಬೇರೆ ತೂಕವಿರುವ ಎರಡು ಕಾಯಗಳನ್ನು ಮೇಲಿನಿಂದ ಬಿಟ್ಟರೆ ಹೆಚ್ಚು ತೂಕವಿರುವ ವಸ್ತು ಹೆಚ್ಚು ವೇಗದಿಂದ ಚಲಿಸಿ ಇನ್ನೊಂದಕ್ಕಿಂತ ಮುಂಚಿತವಾಗಿ ಬೀಳುವುದೆಂದು ಅರಿಸ್ಟಾಟಲ್ ಬೋಧಿಸಿದ್ದ. ಅವನು ಮಡಿದು 1800 ವರ್ಷಗಳಾಗಿದ್ದರೂ ಅವನ ಅಭಿಪ್ರಾಯ ಸರಿಯೇ ತಪ್ಪೇ ಎಂಬುದನ್ನು ಪ್ರಶ್ನಿಸುವ ಗೋಜಿಗೆ ಯಾರೂ ಹೋಗಿರಲಿಲ್ಲ. ಎಲ್ಲರೂ ಅದು ನಿಜವೆಂದೇ ಭಾವಿಸಿದ್ದರು. ವಾಯು ಒಡ್ಡುವ ಅಡಚಣೆಯ ಕಾರಣ ಹಗುರವಾದ ಕಾಯಗಳ ವೇಗ ಕುಗ್ಗುವುದರಿಂದ ಈ ತಪ್ಪು ತೀರ್ಮಾನಕ್ಕೆ ದಾರಿಯಾಗಿದೆ ಎಂದು ಗೆಲಿಲಿಯೊ ಅಭಿಪ್ರಾಯಪಟ್ಟ. ನಿರ್ವಾತ ಪ್ರದೇಶದಲ್ಲಿ ಎಲ್ಲ ಕಾಯಗಳೂ ಒಂದೇ ವೇಗದಿಂದ ಭೂಮಿಗೆ ಬೀಳುವುದೆಂದು ಇವನು ವಿದ್ಯಾರ್ಥಿಗಳಿಗೆ ಬೋಧಿಸಿದ. ಅಷ್ಟೇ ಅಲ್ಲ, ವಾಯು ಒಡ್ಡುವ ಅಡಚಣೆಗೆ ಮಣಿಯದಷ್ಟು ತೂಕವಿರುವ ಎರಡು ಕಾಯಗಳನ್ನು ತೆಗೆದುಕೊಂಡದ್ದೇ ಆದರೆ, ಅವೆರಡರ ತೂಕಗಳಲ್ಲಿ ವ್ಯತ್ಯಾಸವಿದ್ದರೂ ಅವು ಒಂದೇ ವೇಗದಿಂದ ಭೂಮಿಗೆ ಬೀಳುವುವೆಂದು ಹೇಳಿದ. ಒಂದಕ್ಕಿಂತ ಇನ್ನೊಂದು ಹತ್ತರಷ್ಟು ಭಾರವಿರುವಂಥ ಎರಡು ಫಿರಂಗಿ ಗುಂಡುಗಳನ್ನು ಪೀಸಾದಲ್ಲಿರುವ ವಾಲುಗೋಪುರದ ಮೇಲಿನಿಂದ ಕೆಳಕ್ಕೆ ಬಿಟ್ಟು ತನ್ನ ಅಭಿಪ್ರಾಯವನ್ನು ಸಮರ್ಥಿಸಿದನೆಂದು ದಂತಕಥೆ.

ಕಾಯ ನೇರವಾಗಿ ಭೂಮಿಗೆ ಬೀಳುತ್ತಿರುವಾಗ ಅದರ ವೇಗ ಬಹಳವಾಗಿರುತ್ತದೆ. ಹೀಗಾಗಿ ಅದರ ಚಲನೆಯನ್ನು ವಿವರವಾಗಿ ಅಧ್ಯಯನ ಮಾಡಲು ನಿಷ್ಕೃಷ್ಟ ಕಾಲಮಾಪಕಗಳು ಬೇಕಾಗುತ್ತವೆ. ಅವು ಆಗ ಲಭ್ಯವಾಗಿರಲಿಲ್ಲವಾದ್ದರಿಂದ ಕಾಯದ ವೇಗವನ್ನು ತಗ್ಗಿಸುವುದಕ್ಕಾಗಿ ಗೆಲಿಲಿಯೊ ಇಳಿಜಾರು ಹಲಗೆಗಳನ್ನು ಬಳಸಿಕೊಂಡ. ಹಲಗೆಯನ್ನು ಕ್ಷಿತಿಜೀಯ ರೇಖೆಗೆ ಸ್ವಲ್ಪ ಮಾತ್ರ ಓರೆಯಾಗಿರುವಂತೆ ನಿಲ್ಲಿಸಿ, ಅದರ ಮೇಲೆ ಉರುಳುವ ಗುಂಡಿನ ವೇಗವನ್ನು ಸಾಕಷ್ಟು ಕಡಿಮೆ ಮಾಡುವುದು ಸಾಧ್ಯವಾಯಿತು. ಈ ವಿಧಾನವನ್ನು ಬಳಸಿಕೊಂಡು ಸಂಶೋಧನೆಗಳನ್ನು ಮುಂದುವರಿಸಿದ. ಭೂಮಿಯ ಗುರುತ್ವಬಲಕ್ಕೆ ಸತತವಾಗಿ ಒಳಗಾಗಿರುವ ಕಾಯದ ವೇಗ ಕ್ಲುಪ್ತ ದರದಲ್ಲಿ ಏರುವುದೆಂದೂ ಅದು ಚಲಿಸುವ ದೂರ ಕಾಲದ ವರ್ಗದ ಅನುಪಾತದಲ್ಲಿರುವುದೆಂದೂ ಒಂದು ಕಾಯದ ಮೇಲೆ ಪ್ರಯುಕ್ತವಾಗುತ್ತಿರುವ ಬಲವನ್ನು ನಿಲ್ಲಿಸಿಬಿಟ್ಟರೆ ಅಲ್ಲಿಂದ ಮುಂದೆ ಕಾಯ ಒಂದೇ ನೇರದಲ್ಲಿ ಸಮವೇಗದಿಂದ ಚಲಿಸುವುದೆಂದೂ ಇವನು ತೋರಿಸಿದ. ಕಾಯ ತನ್ನ ಚಲನೆಯಲ್ಲಿ ಮುಂದುವರಿಯುತ್ತಿರಲು ಬಲವನ್ನು ಸತತವಾಗಿ ಪ್ರಯುಕ್ತಿಸುತ್ತಿರುವುದು ಅಗತ್ಯವೆಂದು ಅದುವರೆಗೆ ಜನ ನಂಬಿದ್ದರು. ಅದು ತಪ್ಪು ಭಾವನೆ ಎಂಬುದನ್ನು ಗೆಲಿಲಿಯೊ ತೋರಿಸಿದಂತಾಯಿತು.

Galileo's geometrical and military compass, thought to have been made c. 1604 by his personal instrument-maker Marc'Antonio Mazzoleni

ಒಂದು ಕಾಯ ಏಕಕಾಲದಲ್ಲಿ ಎರಡು ಬೇರೆಬೇರೆ ಬಲಗಳಿಗೆ ಗುರಿಯಾದಾಗ, ಇಲ್ಲವೇ ಸಮವೇಗದಲ್ಲಿ ಚಲಿಸುತ್ತಿರುವ ಕಾಯದ ಮೇಲೆ ಬೇರೊಂದು ದಿಕ್ಕಿನಲ್ಲಿ ಬಲಪ್ರಯುಕ್ತವಾದಾಗ ಆ ಕಾಯ ಹೇಗೆ ವರ್ತಿಸುವುದೆಂಬುದನ್ನೂ ಗೆಲಿಲಿಯೊ ಪರಿಶೀಲಿಸಿದ. ಈ ಎಲ್ಲ ಅಧ್ಯಯನಗಳಿಗೂ ಇವನು ಗಣಿತವನ್ನು ಬಳಸಿದ. ಹೀಗಾಗಿ ಈತನನ್ನು ಗತಿವಿಜ್ಞಾನದ ಮೂಲಪುರುಷನೆಂದು ಪರಿಗಣಿಸಲಾಗಿದೆ.

A replica of the earliest surviving telescope attributed to Galileo Galilei, on display at the Griffith Observatory.
Galileo showed the Doge of Venice how to use the telescope (Fresco by Giuseppe Bertini)
It was on this page that Galileo first noted an observation of the moons of Jupiter. This observation upset the notion that all celestial bodies must revolve around the Earth. Galileo published a full description in Sidereus Nuncius in March 1610
The phases of Venus, observed by Galileo in 1610

ಪಡೂವದಲ್ಲಿದ್ದಾಗ ಗೆಲಿಲಿಯೊ ವಿಖ್ಯಾತ ಖಗೋಳವಿಜ್ಞಾನಿ ಕೆಪ್ಲರ್‍ನೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದ. ಅದರ ಫಲವಾಗಿ ಈತನಿಗೆ ಕೊಪರ್ನಿಕಸ್ ಸಿದ್ಧಾಂತದಲ್ಲಿ ನಂಬಿಕೆ ಹುಟ್ಟಿತು. ಆದರೆ ಕೆಲವು ಕಾಲ ತನ್ನ ಅಭಿಪ್ರಾಯಗಳನ್ನು ಬಹಿರಂಗಪಡಿಸಲಿಲ್ಲ. ಆದರೆ 1609 ರಲ್ಲಿ ಒಂದು ಸುದ್ದಿ ಬಂದಿತು: ದೂರದಲ್ಲಿರುವ ವಸ್ತುಗಳು ಹತ್ತಿರದಲ್ಲಿ ಕಾಣಿಸುವಂತೆ ಒಂದು ಉಪಕರಣವನ್ನು ಹಾಲೆಂಡಿನಲ್ಲಿ ಯಾರೋ ಒಬ್ಬರು ತಯಾರಿಸಿದ್ದಾರೆಂಬುದೇ ಆ ಸುದ್ದಿ. ಆರು ತಿಂಗಳು ಕಳೆಯುವುದರೊಳಗೆ ಗೆಲಿಲಿಯೊ ತನ್ನದೇ ದೂರದರ್ಶಕವನ್ನು ತಯಾರಿಸಿಕೊಂಡ. ಕಾಲಕ್ರಮದಲ್ಲಿ ತನ್ನ ಉಪಕರಣವನ್ನು ಉತ್ತಮ ಪಡಿಸುತ್ತ ಮುಂದುವರಿದು ಹೆಚ್ಚುಹೆಚ್ಚು ಪ್ರಬಲವಾದ ಹಲವಾರು ದೂರದರ್ಶಕಗಳನ್ನು ತಯಾರಿಸಿದ. ಖಗೋಳೀಯ ವೀಕ್ಷಣೆಗಳಿಗೆ ಅದು ಒಳ್ಳೆಯ ಸಾಧನವಾಯಿತು. ದೂರದರ್ಶಕದ ಸಹಾಯದಿಂದ ಗೆಲಿಲಿಯೊ ಆಕಾಶಕಾಯಗಳನ್ನು ಪರೀಕ್ಷಿಸಿ ಅನೇಕಾನೇಕ ಸ್ವಾರಸ್ಯಕರ ವಿಷಯಗಳನ್ನು ಪತ್ತೆಮಾಡಿದ. ಗುರುಗ್ರಹಕ್ಕೆ ಉಪಗ್ರಹಗಳಿರುವುದನ್ನೂ ಶುಕ್ರಗ್ರಹ ಚಂದ್ರಬಿಂಬದಂತೆ ನಿಶ್ಚಿತ ಅವಧಿಯಲ್ಲಿ ವೃದ್ಧಿಕ್ಷಯಗಳಿಗೆ ಒಳಗಾಗುವುದನ್ನೂ ಚಂದ್ರನ ಮೇಲ್ಮೈಯಲ್ಲಿ ಭೂಮಿಯ ಮೇಲಿರುವಂತೆ ಪರ್ವತ ಕಂದರಗಳಿರುವುದನ್ನೂ ಇವನು ಕಂಡುಹಿಡಿದು ಪ್ರಕಟಿಸಿದ. ಬರಿಯ ಕಣ್ಣಿಗೆ ಬಿಳಿಯ ಪಟ್ಟಿಯಂತೆ ಕಾಣಿಸುವ ಆಕಾಶಗಂಗೆ (ಮಿಲ್ಕಿ ವೇ) ನಿಜಕ್ಕೂ ಒತ್ತಾಗಿ ಸೇರಿಕೊಂಡಿರುವ ನಕ್ಷತ್ರಸಮೂಹವೆಂಬುದನ್ನು ತೋರಿಸಿಕೊಟ್ಟ. ತೇಜಸ್ಸಿನಿಂದ ಕಣ್ಣುಕೋರೈಸುವ ಸೂರ್ಯ ಬಿಂಬದ ಮೇಲೆ ಕಪ್ಪು ಕಲೆಗಳಿರುವುದನ್ನೂ ಅವು ಕಾಲಕಾಲಕ್ಕೆ ತಮ್ಮ ಸ್ಥಾನಗಳನ್ನು ಬದಲಾಯಿಸುವುದನ್ನೂ ಗುರುತಿಸಿ ಸೂರ್ಯಗೋಳ ತನ್ನ ಅಕ್ಷದ ಸುತ್ತ ಆವರ್ತಿಸುತ್ತಿ ರುವುದೆಂಬುದನ್ನು ಪತ್ತೆಮಾಡಿದ. ಈ ಎಲ್ಲ ಆವಿಷ್ಕಾರಗಳೂ ಕೊಪರ್ನಿಕಸ್‍ನ ಸಿದ್ಧಾಂತವನ್ನು ಪುಷ್ಟೀಕರಿಸಿದುವು.

ಬಾಹ್ಯ ಸಂಪರ್ಕಗಳು

By Galileo

On Galileo

Biography

Galileo and the Church

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: