ಚೀನಾಬ್
ಚೀನಾಬ್ - ಸಿಂಧೂ ನದಿಯ ಒಂದು ಉಪನದಿ, ಭಾರತ-ಪಾಕಿಸ್ತಾನಗಳ ಉಭಯ ಪಂಜಾಬ್ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವಾದ ಪಂಚನದಿಗಳ ಪೈಕಿ ಒಂದು.
ಹರಿವು
ಭಾರತದ ಹಿಮಾಚಲ ಪ್ರದೇಶದಲ್ಲಿ ಹಿಮಾಲಯದ ಬಾರಲಾಚಾ ಕಣಿವೆ ಹದಿಯ (16,047') ಆಗ್ನೇಯ ಮತ್ತು ವಾಯುವ್ಯಗಳಲ್ಲಿ ಅನುಕ್ರಮವಾಗಿ ಉಗಮಿಸುವ ಚಂದ್ರ ಮತ್ತು ಭಾಗಾ ನದಿಗಳು ಟಂಟಿ ಎಂಬಲ್ಲಿ ಪರಸ್ಪರ ಕೂಡಿಕೊಂಡು ಚಂದ್ರಭಾಗಾ ಅಥವಾ ಚಿನಾಬ್ ನದಿಯಾಗಿ ಪರಣಮಿಸುತ್ತವೆ. ಈ ನದಿ ಹಿಮಾಲಯ ಮತ್ತು ಪೀರ್ ಪಂಜಾಲ್ ಶ್ರೇಣಿಗಳ ನಡುವಣ ಕಣಿವೆಯಲ್ಲಿ ಸುಮಾರು 100 ಮೈ ದೂರ ವಾಯುವ್ಯಾಭಿಮುಖವಾಗಿ ಹರಿದು, ಕಾಶ್ಮೀರದ ಕಿಷ್‍ವಾರ್ ಬಳಿ ದಕ್ಷಿಣಕ್ಕೆ ತಿರುಗಿ ಪೀರ್ ಪಂಜಾಲ್ ಶ್ರೇಣಿಯ ಕೊರಕಲೊಂದರ ಮೂಲಕ ಅದನ್ನು ದಾಟಿ, ಆಖ್ನೂರ್ ಬಳಿ ಮೈದಾನಪ್ರವೇಶ ಮಾಡುತ್ತದೆ. ಬಾರಾ ಲಾಚಾದಿಂದ ಆಖ್ನೂರ್‍ವರೆಗಿನ 378 ಮೈ. ದೂರದಲ್ಲಿ ನದಿ 15,500' ಕೆಳಕ್ಕೆ ಇಳಿಯುತ್ತದೆ.
ಜಮ್ಮು ನಗರದ ಬದಿಯ ಜವಿ ಜಂಕ್ಷನ್‍ನ ಕೆಳಭಾಗದಲ್ಲಿ ಇದು ಪಾಕಿಸ್ತಾನದ ಪಂಜಾಬನ್ನು ಪ್ರವೇಶಿಸುತ್ತದೆ. ಟಿಮ್ಮು ಎಂಬಲ್ಲಿ ಝೇಲಂ ನದಿಯೂ ಸಿಂಧುವಿನ ಬಳಿಯಲ್ಲಿ ರಾವೀ ನದಿಯೂ ಇದನ್ನು ಕೂಡಿಕೊಳ್ಳುತ್ತವೆ, ಆನಂತರ ಇವು ತ್ರಿಮಾಬ್ ಎಂದು ಕರೆಸಿಕೊಳ್ಳುತ್ತದೆ. ಬಿಯಾಸ್ ನದಿಯನ್ನು ಕೂಡಿಸಿ ಕೊಂಡ ಸಟ್ಲಜ್ ನದಿ ಮಾಡ್ವಾಲಾ ಎಂಬಲ್ಲಿ ಚಿನಾಬನ್ನು ಸೇರುತ್ತದೆ. ಅಲ್ಲಿಂದ ಮುಂದೆ ಇದು ಪಂಜನದ ಎನಿಸಿಕೊಂಡು ಸಿಂಧೂ ನದಿಯನ್ನು ಸಂಗಮಿಸುತ್ತದೆ. ಪಂಜನದ ಭಾಗವನ್ನು ಬಿಟ್ಟು ಚಿನಾಬ್ ನದಿಯ ಬಿಟ್ಟು ಉದ್ದ 599 ಮೈಲು.
ಇತರ ಮಾಹಿತಿ
ಮಾರ್ಚ್ ತಿಂಗಳಿಂದ ನದಿಯಲ್ಲಿ ಪ್ರವಾಹ ಅಧಿಕವಾಗುತ್ತದೆ. ಗರಿಷ್ಠ ಪ್ರವಾಹ ಜುಲೈ-ಆಗಸ್ಟ್ ಅವಧಿಯಲ್ಲಿ. ನವೆಂಬರ್-ಫೆಬ್ರುವರಿಯಲ್ಲಿ ಪ್ರವಾಹದ ಮಟ್ಟ ಅತ್ಯಂತ ಕೆಳಗೆ ಇರುತ್ತದೆ. ಪ್ರವಾಹದಿಂದ ಅಕ್ಕಪಕ್ಕಗಳಲ್ಲಿ ಹೆಚ್ಚು ದೂರ ನೀರು ಆವರಿಸುವುದಿಲ್ಲ. ಆದರೆ ದಡಗಳು ಮರಳಿನಿಂದ ಕೂಡಿರುವುದರಿಂದ ಒಳನಾಡಿನಲ್ಲಿ ತುಂಬ ದೂರ ಅದರ ತೇವ ಹಬ್ಬುತ್ತದೆ. ಇದರಿಂದ ವ್ಯವಸಾಯಕ್ಕೆ ಅನುಕೂಲ. ಇದು ತಂದು ಎಸೆಯುವ ಮಣ್ಣಿನಲ್ಲಿ ಮರಳು ಹೆಚ್ಚು. ಪಂಜಾಬಿನ ಇತರ ನದಿಗಳ ಮಣ್ಣಿನಷ್ಟು ಇದು ಫಲವತ್ತಲ್ಲ. ಈ ನದಿಯಲ್ಲಿ ಸರಾಸರಿ 28,980.78 ಘನ ಮೀ. ನೀರು ಹರಿಯುವುದೆಂದು ಅಂದಾಜಿದೆ. ಪಂಜಾಬಿನ ಇತರ ನದಿಗಳಂತೆ ಈ ನದಿಯೂ ಆಗಿಂದಾಗ್ಗೆ ತನ್ನ ಪಾತ್ರ ಬದಲಿಸುತ್ತದೆ.
ಮೊಗಲರ ಕಾಲದಿಂದಲೂ ಈ ನದೀ ಪ್ರದೇಶದಲ್ಲಿ ಸುಯೋಜಿತ ನೀರಾವರಿ ವ್ಯವಸ್ಥೆ ಉಂಟು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದು ಮತ್ತಷ್ಟು ಅಭಿವೃದ್ಧಿ ಹೊಂದಿತು. ಚಿನಾಬ್ ಕೆಳದಂಡೆ ಕಾಲುವೆ (1882) ಮತ್ತು ಚಿನಾಬ್ ಮೇಲು ದಂಡೆ ಕಾಲುವೆ (1912-15)-ಇವೂ ಇತರ ಕಾಲುವೆಗಳೂ ಇಲ್ಲಿಯ ಬೇಸಾಯದ ಅಭಿವೃದ್ಧಿಗೆ ಕಾರಣವಾಗಿದೆ. ಗಜ್ರನ್‍ವಾಲ, ಝಂಗ್ ಮತ್ತು ಮಾಂಟ್ಗೋಮರಿ ಜಿಲ್ಲೆಗಳು ಸೇರಿ 1892ರಲ್ಲಿ ರಚನೆಗೊಂಡ ಚಿನಾಬ್ ನದೀ ವಸತಿ ಚಿನಾಬ್ ಮತ್ತು ರಾವಿ ನದಿಗಳ ನಡುವೆ ಇರುವ ರೇಚನಾ ದೋಆಬ್ ಪ್ರದೇಶದಲ್ಲಿದೆ. ಈ ವಸತಿಗೆ ಸಂಬಂಧಿಸಿದ 25 ಲಕ್ಷ ಎಕರೆ ಜಮೀನು ಚಿನಾಬ್ ನದೀ ನೀರಾವರಿಗೆ ಒಳಪಟ್ಟಿದೆ. ಈ ನದಿಯಿಂದಾಗಿ ಬಾರ್ ಮರಳುಗಾಡು ಸಸ್ಯಾಚ್ಛಾದಿತವಾಗಿದೆ. 1912ರಲ್ಲಿ ನಿರ್ಮಿಸಲಾದ ಚಿನಾಬ್ ಮೇಲ್ದಂಡೆ ಕಾಲುವೆಯಿಂದ 5 ಲಕ್ಷ ಎಕರೆ ನೆಲ ನೀರಾವರಿಗೆ ಒಳಪಟ್ಟಿದೆ. ಚಿನಾಬ್ ವಸತಿ ಪ್ರದೇಶದ ಮುಖ್ಯ ಪಟ್ಟಣ ಲಯಾಲ್‍ಪುರ. ಇದು ಈ ಪ್ರದೇಶದ ಮಹತ್ತ್ವದ ವ್ಯಾಪಾರ ಕೇಂದ್ರ.
ಚಿತ್ರ ಸಂಪುಟ
-
ಚಂದ್ರಾ ನದಿ.
-
ಭಾಗಾ ನದಿ.
-
ಗುಜ್ರತ್ ಬಳಿಯ ಚೀನಾಬ್ ನದಿಯ ನೋಟ
-
ಹಿಮಾಚಲಪ್ರದೇಶದಲ್ಲಿ ಚಂದ್ರಭಾಗಾ ನದಿ.