ಭೊಪಾಲ್

ಭೊಪಾಲ್
ಭೋಪಾಲ್
City
Government
 • ಮುಖ್ಯ ಮಂತ್ರಿಶಿವರಾಜ್ ಸಿಂಗ್ ಚೌಹಾಣ್
Area
 • Total೬೪೮.೨೪ km (೨೫೦.೨೯ sq mi)
Elevation
೫೦೦ m (೧,೬೦೦ ft)
Population
 (2011)
 • Total೧೭,೯೮,೨೧೮
 • Metro density೩,೯೦೦/km (೧೦,೦೦೦/sq mi)
Area code9175
Vehicle registrationMP-04
ಗೋಲ್ಘರ್

ಭೋಪಾಲ್ (ಹಿಂದಿ: भोपाल) ಮಧ್ಯ ಪ್ರದೇಶ ರಾಜ್ಯದ ಒಂದು ಜಿಲ್ಲೆ, ಮತ್ತು ಕೈಗಾರಿಕಾ ನಗರ ಹಾಗೂ ರಾಜಧಾನಿ ಮತ್ತು ಭೋಪಾಲ್ ಜಿಲ್ಲೆಯ ಆಡಳಿತ ಕೇಂದ್ರ. ಭೋಪಾಲ್ ಮಧ್ಯ ಪ್ರದೇಶದ ಅತ್ಯಂತ ದೊಡ್ಡ ನಗರವಾಗಿದೆ. ಭೋಪಾಲ್ ನಗರವು ಅನೇಕ ಕೆರೆಗಳನ್ನು ಹೊಂದಿದ್ದು ಅದನ್ನು ಕೆರೆಗಳ ನಗರ ಎಂದು ಕರೆಯಲಾಗುತ್ತದೆ.[][]

ಈ ಜಿಲ್ಲೆಯನ್ನು ಪೂರ್ವದಲ್ಲಿ ವಿದಿಶಾ, ರಾಯ್‍ಸೆನ್ ಜಿಲ್ಲೆಗಳೂ ಪಶ್ಚಿಮದಲ್ಲಿ ರಾಜಘರ್ ಮತ್ತು ಸೆಹೊರೆ ಜಿಲ್ಲೆಗಳೂ ಉತ್ತರದಲ್ಲಿ ವಿದಿಶಾ, ಗುನ ಜಿಲ್ಲೆಗಳೂ ದಕ್ಷಿಣದಲ್ಲಿ ರಾಯ್‍ಸೆನ್ ಮತ್ತು ಸೆಹೊರೆ ಜಿಲ್ಲೆಗಳೂ ಸುತ್ತುವರಿದಿವೆ. ಜಿಲ್ಲಾ ವಿಸ್ತೀರ್ಣ 2763 ಚಕಿಮೀ, ಜನಸಂಖ್ಯೆ 8,94,739(1981).

ಭೂಪಾಲ್ ನಗರ ಸಮುದ್ರ ಮಟ್ಟದಿಂದ ಸುಮಾರು 540 ಮೀಟರ್ ಎತ್ತರದಲ್ಲಿದೆ. ಉ.ಅ.23º 16' ಪೂ.ರೇ. 77º 36'ನಲ್ಲಿದೆ. ರಾಜ್ಯದ ಆಡಳಿತ ಕೇಂದ್ರ. ಜನಸಂಖ್ಯೆ 6,71,018 (1981). ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಮ್ ರಾಜ್ಯವೊಂದರ (ರಿಯಾಸತ್) ಕೇಂದ್ರವಾಗಿತ್ತು. ಧಾರಾನಗರದ ಪರಮಾರ ದೊರೆ ಭೋಜಪಾಲ (1010-53) ಈ ನಗರವನ್ನು ಕಟ್ಟಿದುದರಿಂದ ಇದಕ್ಕೆ ಭೂಪಾಲವೆಂದು ಹೆಸರು ಬಂದಿತೆಂದು ಪ್ರತೀತಿ.

ಭೂಪಾಲ ಸರೋವರಗಳ ನಗರ. ಶ್ಯಾಮಲ ಮತ್ತು ಈದ್‍ಗಾ ಬೆಟ್ಟಗಳ ನಡುವೆ ಇರುವ ಇಲ್ಲಿಯ ಭೂಪಾಲ ಸರೋವರದ ಸುತ್ತಳತೆ 11 ಕಿಮೀಗೂ ಹೆಚ್ಚು. ನಗರಕ್ಕೆ ನೀರು ಸರಬರಾಜು ಆಗುವುದು ಈ ಸರೋವರದಿಂದಲೇ. ಇದಲ್ಲದೆ 1794ರಲ್ಲಿ ಛೋಟೆಖಾನ್ ಎಂಬ ಮಂತ್ರಿಯೊಬ್ಬ ಕಟ್ಟಿಸಿದ ಅಣೆಕಟ್ಟಿನಿಂದ ರೂಪುಗೊಂಡ ಎರಡು ಸರೋವರಗಳು ಪ್ರೇಕ್ಷಣೀಯವಾದವು. ಕುದ್‍ಸಿಯಾ ಬೇಗಮ್ ಎಂಬ ನವಾಬಳು ಕಟ್ಟಿಸಿದ ಜಾಮಾಮಸೀದಿ ವಿಶಾಲವಾದ, ಕೆಂಪು ಕಣಶಿಲೆಯ ಸೊಗಸಾದ ಕಟ್ಟಡ. ನಗರದ ಯಾವುದೇ ಮೂಲೆಯಿಂದ ನೋಡಿದರೂ ಈ ಮಸೀದಿ ಕಾಣುತ್ತದೆ.

ಭೂಪಾಲದ ಅರಮನೆಗಳು ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ನವಾಬರಿಂದ ಸೇರ್ಪಡೆಯಾದ ಸಂಕೀರ್ಣ ಕಟ್ಟಡಗಳು. ಇವಕ್ಕೆ ನಿರ್ದಿಷ್ಟ ವಿನ್ಯಾಸವಿಲ್ಲ. ಬೇನಜೀರ್ ಅರಮನೆ, ತಾಜ್-ಉಲ್-ಮಸೀದಿ, ಮೋತಿ ಮಸೀದಿ ಹಾಗೂ ಸದರ್ ಮಂಜಿಲ್ ಇನ್ನಿತರ ಕೆಲವು ಪ್ರಮುಖ ಕಟ್ಟಡಗಳು. ಇಲ್ಲಿಯ ಫತೇಗಢ ಕೋಟೆಯನ್ನು 1728ರಲ್ಲಿ ದೋಸ್ತ್ ಮಹಮದ್ ಖಾನ್ ಕಟ್ಟಿಸಿದ. ಇಲ್ಲಿರುವ ಇತರ ಕಟ್ಟಡಗಳಲ್ಲಿ ಪರಮಾರ ಉದಯಾದಿತ್ಯನ (1059-80) ಪತ್ನಿ ಕಟ್ಟಿಸಿದೆನ್ನಲಾದ ಸಭಾಮಂಡಲ ಎನ್ನುವ ದೇಗುಲ ಬಹುಶಃ ಭೂಪಾಲದ ಪ್ರಾಚೀನತಮ ಕಟ್ಟಡ. ಈಚೆಗೆ ಬಿರ್ಲಾ ಕುಟುಂಬ ಕಟ್ಟಿಸಿದ ಲಕ್ಷ್ಮೀನಾರಾಯಣ ಮಂದಿರ ನೋಡುವಂಥದ್ದು.

ಹತ್ತಿ, ಗೋಧಿ, ಬೇಳೆ ಕಾಳುಗಳು, ಜೋಳ, ಕಬ್ಬು, ಎಳ್ಳು ಮುಂತಾದವು ಇಲ್ಲಿಯ ಮುಖ್ಯ ವ್ಯಾಪಾರಿ ಬೆಳೆಗೆಳು. ಮಗ್ಗದ ಬಟ್ಟೆಗಳು, ಯಂತ್ರಸಾಮಗ್ರಿ, ಪಾತ್ರೆ, ಕೈಚೀಲಗಳು, ಅಲಂಕರಣ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಭೂಪಾಲ ಕೈಗಾರಿಕಾರಂಗದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಇಲ್ಲಿಯ ಹೆವಿ ಎಲೆಕ್ಟ್ರಿಕಲ್ಸ್ (ಇಂಡಿಯಾ) ಲಿಮಿಟೆಡ್‍ನಲ್ಲಿ ಟರ್ಬೈನ್, ಸಿಚ್‍ಗಿಯರುಗಳನ್ನು ತಯಾರಿಸುತ್ತಾರೆ.

ಈಚೆಗೆ (1984) ಇಲ್ಲಿಯ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಉಂಟಾದ ಅನಿಲ ಸೋರುವಿಕೆಯ ಪರಿಣಾಮವಾಗಿ ಸಾವಿರಾರು ಜನ ಮೃತರಾದರು ಮತ್ತು ಇತರ ಸಾವಿರಾರು ಜನ ರೋಗರುಜಿನಗಳಿಗೆ ತುತ್ತಾದರು.

ಭೂಪಾಲ ನಗರ ರೈಲ್ವೆ ನಿಲ್ದಾಣ ಕೇಂದ್ರ. ವಿಮಾನ ನಿಲ್ದಾಣವೂ ಇದೆ. ರಾಷ್ಟ್ರೀಯ ಹೆದ್ದಾರಿ ಈ ನಗರದ ಮೂಲಕವೇ ಹಾಯ್ದು ಹೋಗಿದೆ. ಇಲ್ಲಿ ಭೂಪಾಲ ವಿಶ್ವವಿದ್ಯಾಲಯವಿದೆ. ಜೊತೆಗೆ ಆಧುನಿಕ ನಗರ ಸೌಕರ್ಯಗಳೆಲ್ಲ ಇವೆ. ಇದರ ಸುತ್ತಲ ಪ್ರೇಕ್ಷಣೀಯ ಸ್ಥಳಗಳಲ್ಲಿ ಸುಮಾರು 45 ಕಿಮೀ ದೂರದಲ್ಲಿ ಪ್ರಸಿದ್ಧ ಬೌದ್ಧ ಕೇಂದ್ರವಾಗಿದ್ದ ಸಾಂಚಿ ಇದೆ. ಶೈವಕ್ಷೇತ್ರ ಉಜ್ಜಯಿನಿಯೂ ಹತ್ತಿರದಲ್ಲಿದೆ. ಭೂಪಾಲದಿಂದ 6.4ಕಿಮೀ ದೂರದ ನಿಯೋರಿ ಎಂಬಲ್ಲಿ 11ನೆಯ ಶತಮಾನದ ಶಿವದೇವಾಲಯವಿದೆ. 11ಕಿಮೀ ದೂರದಲ್ಲಿರುವ ಇಸ್ಲಾಮ್‍ಪುರದಲ್ಲಿ ಹಳೆಯ ಅರಮನೆ, ತೋಟ ನೋಡಬಹುದಾದವು. ಸುಮಾರು 28ಕಿಮೀ ದೂರದಲ್ಲಿರುವ ಭೋಜಪುರ ಬೇತ್ವಾನದಿ ದಡದ ಮೇಲಿದೆ. ಇಲ್ಲಿಯ ಶಿಲ್ಪಗಳು ಹೆಸರಾದವು ಮತ್ತು ಇದನ್ನು ಉತ್ತರ ಭಾರತದ ಸೋಮನಾಥಪುರವೆಂದು ಕರೆಯುತ್ತಾರೆ.

ಇತಿಹಾಸ

ಇದನ್ನು ಭೋಜ ಮಹಾರಾಜ 11ನೆಯ ಶತಮಾನದಲ್ಲಿ ಕಟ್ಟಿದನೆಂದು ಹೇಳುವರು.

ದೆಹಲಿಯಲ್ಲಿ ಬಹಾದ್ದುರ್ ಷಾ ಆಳುತ್ತಿದ್ದಾಗ ಉದ್ಯೋಗ ಅರಸಿ ಬಂದ ಪಠಾಣ ಯೋಧ ದೋಸ್ತ್ ಮಹಮದ್ ಖಾನ್ 1709ರಲ್ಲಿ ಬಿರ್ಸಿಯಾ ಪರಗಣದ ರಾಜ್ಯಪಾಲನಾಗಿ ನೇಮಿತನಾದ. ಕ್ರಮೇಣ ಸ್ವತಂತ್ರನಾದ ಈತ 1723ರಲ್ಲಿ ಭೂಪಾಲರಾಜ್ಯವನ್ನು ಸ್ಥಾಪಿಸಿದ. 1740ರಲ್ಲಿ ಈತನ ಮರಣಾನಂತರ ಅಧಿಕಾರಕ್ಕೆ ಬಂದ ಮಹಮ್ಮದ್‍ಖಾನ್ ಬಹುಕಾಲ ಬಾಳಲಿಲ್ಲ. ಹೀಗಾಗಿ ದೋಸ್ತ್ ಮಹಮದನ ಇನ್ನೊಬ್ಬ ಮಗ ಯಾರ್‍ಮಹಮದ್‍ಖಾನ್ ಆಡಳಿತ ಸೂತ್ರಗಳನ್ನು ವಹಿಸಿಕೊಂಡ. 1754ರಲ್ಲಿ ಯಾರ್‍ಮಹಮ್ಮದ್‍ಖಾನನ ಮರಣಾನಂತರ ಆತನ ಮಗ ಫೈಜ್ ಮಹಮದ್‍ಖಾನ್ ನವಾಬನಾದ. ಸುಮಾರು 210ಸೆಂಮೀ ಎತ್ತರದ, ದೃಢಕಾಯನಾದ ಈತ ಧರ್ಮ ಭೀರು, ಏಕಾಂತಪ್ರಿಯ, ರಾಜಪದವಿಗೆ ಅನರ್ಹನಾಗಿದ್ದ. ಈತನ ಕಾಲದಲ್ಲಿ, ರಾಜ್ಯದ ಅರ್ಧಭಾಗ ಪೇಷ್ವೆಗಳ ಅಧೀನವಾಯಿತು. 1777ರಲ್ಲಿ ಈತನ ಸೋದರ ಹಯಾತ್ ಮಹಮದಖಾನ್ ನವಾಬನಾದ. ಮೊದಲ ಮರಾಠ ಯುದ್ಧದಲ್ಲಿ ಈತ ಜನರಲ್ ಥಾಮಸ್ ಗೊಡಾರ್ಡ್‍ನಿಗೆ ಸಹಾಯ ನೀಡಿ ಬ್ರಿಟಿಷರ ಸ್ನೇಹ ವಿಶ್ವಾಸಗಳಿಗೆ ಪಾತ್ರನಾದ. 1798ರಿಂದ ಈತನ ರಾಜ್ಯ ಪಿಂಡಾರಿ ಹಾಗೂ ಮರಾಠರ ಸತತ ಧಾಳಿಗಳಿಗೆ ತುತ್ತಾಯಿತು. ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ಈತನ ಸೋದರ ವಜೀರ್ ಮಹಮದ್‍ಖಾನ್ ಆಡಳಿತ ಸೂತ್ರಗಳನ್ನು ವಹಿಸಿಕೊಂಡ. ಪಿಂಡಾರಿಗಳ ಸರದಾರ ಕರೀಮಖಾನನಿಗೆ ನೌಕರಿ ನೀಡಿ ತನ್ನ ರಾಜ್ಯದ ಸ್ಥಿತಿಯನ್ನು ಸುಧಾರಿಸಿದ. 1807ರಲ್ಲಿ ಹಯಾತ್‍ಮಹಮದ್‍ಖಾನ್ ಮೃತನಾದ. ಅನಂತರ ನವಬ ಪದವಿ ವಜೀರ್‍ಮಹಮದ್‍ಖಾನನಿಗೆ ವಿದ್ಯುಕ್ತವಾಗಿ ಬಂತು. 1816ರಲ್ಲಿ ಈತನ ಮಗ ನಜೀರ್ ಮಹಮದ್‍ಖಾನ್ ನವಾಬನಾದ. ಈತ ಹಯಾತ್ ಮಹಮದ್ ಖಾನನ ಮಗ ಗೌಸ್‍ಮಹಮದ್‍ಖಾನನಿಗೆ ತನ್ನ ಮಗಳು ಕುದ್‍ಸಿಯಾ ಬೇಗಮಳನ್ನಿತ್ತು ಮದುವೆ ಮಾಡಿದ. ಈತ ಪಿಂಡಾರಿಗಳ ವಿರುದ್ಧ ಬ್ರಿಟಿಷರು ನಡೆಸುತ್ತಿದ್ದ ಹೋರಾಟಗಳಲ್ಲಿ, ಬ್ರಿಟಿಷರಿಗೆ ನೆರವು ನೀಡಿ ತನ್ನ ನವಾಬ ಪದವಿಯನ್ನು ಬಲಪಡಿಸಿಕೊಂಡ. ಹೀಗಾಗಿ 1818ರಲ್ಲಿ ಬ್ರಿಟಿಷರೊಡನೆ ಒಪ್ಪಂದ ಏರ್ಪಟ್ಟು ಅವರಿಂದಲೇ ಈತ ನವಾಬನೆಂದು ಘೋಷಿತನಾದ. ಈತ ಇಸ್ಲಾಮ್ ನಗರದ ಜೀರ್ಣೋದ್ಧಾರ ಮಾಡಿದ. 1820ರಲ್ಲಿ ನಜಿóರ್ ಮಹಮ್ಮದ್ ಅನಿರೀಕ್ಷಿತವಾಗಿ ಮೃತನಾದ. ಮದ್ದುಗುಂಡು ತುಂಬಿದ್ದ ಪಿಸ್ತೂಲನ್ನು ಮಗು ಅಕಸ್ಮಾತ್ತಾಗಿ ಮುಟ್ಟಿದಾಗ ಸಿಡಿದ ಗುಂಡು ಈತನನ್ನು ಬಲಿ ತೆಗೆದುಕೊಂಡಿತು. ಈತನ ತರುವಾಯ ಕುದ್‍ಸಿಯ್ ಬೇಗಮ್ ತನ್ನ ಪುತ್ರಿ ಸಿಕಂದರ್ ಬೇಗಮಳ ಹೆಸರಿನಲ್ಲಿ ರಾಜ್ಯವಾಳಿದಳು. 1837ರಲ್ಲಿ ಸಿಕಂದರ್ ಬೇಗಮಳ ಪತಿ ಜಹಾಂಗಿರ್ ಮಹಮದ್ ಇಂಗ್ಲಿಷರ ನೆರವಿನಿಂದ ನವಾಬನಾದ. 1844ರಲ್ಲಿ ಈತ ಮೃತನಾದ ಅನಂತರ ಈತನ ಮಗ ಸುಲ್ತಾನ ಷಾಹಜಹಾನ್ ಉತ್ತರಾಧಿಕಾರಿಯಾದರು ವಾಸ್ತವವಾಗಿ ರಾಜ್ಯಾಡಳಿತವನ್ನು ನಡೆಸಿದ್ದು ಪತ್ನಿ ಸಿಕಂದರ್ ಬೇಗಮಳೇ. ಆಗಿನಿಂದ 1936ರ ತನಕ ಮಹಿಳೆಯೇ ನವಾಬಳಾಗಿ ರಾಜ್ಯಾಧಿಕಾರ ನಡೆಸಿದ್ದು ಈ ರಾಜ್ಯದ ಒಂದು ವಿಶೇಷ.

ಸಿಕಂದರ್ ಬೇಗಮ್ ಪ್ರಭಾವಶಾಲಿ ಹಾಗೂ ಸಮರ್ಥ ಆಡಳಿತಗಾರಳು. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಈಕೆ ಬ್ರಿಟಿಷರಿಗೆ ನೆರವು ನೀಡಿದುದರಿಂದ, ಈಕೆಯ ಆಡಳಿತಕ್ಕೆ ಇನ್ನಷ್ಟು ಪ್ರದೇಶ ಸೇರಿತು. 1868ರಲ್ಲಿ ಷಾಹಜಹಾನ್ ಬೇಗಮ್ ನವಾಬಳಾಗಿ ಸಮರ್ಥವಾಗಿ ಆಡಳಿತ ನಡೆಸಿದಳು. ಈ ಕಾಲದಲ್ಲಿ ಕಾನೂನುಗಳು ಕಾಲಕ್ಕೆ ತಕ್ಕಂತೆ ಪರಿಷ್ಕøತವಾದುವು. ಈಕೆ ಭೂಪಾಲದ ಇತಿಹಾಸವನ್ನು ಉರ್ದುವಿನಲ್ಲಿ ಬರೆಸಿದಳು. 1897ರ ದ್ವಿತೀಯ ಆಫ್‍ಘನ್ ಯುದ್ಧದಲ್ಲಿ ಈಕೆ ಬ್ರಿಟಿಷರಿಗೆ ನೆರವಿತ್ತಳು. ತಾಜ್-ಉಲ್-ಮಸೀದಿ, ಕೆಂಪುಕೋಟೆ, ಬಾರಾಮಹಲ್, ತಾಜ್‍ಮಹಲ್ ಈ ಕಾಲದಲ್ಲಿ ನಿರ್ಮಿತವಾದ ಕೆಲವು ಕಟ್ಟಡಗಳು.

1901ರಲ್ಲಿ ಷಾಹಜಹಾನ್ ಬೇಗಮಳ ಮಗಳು ಸುಲ್ತಾನ ಜಹಾಂಬೇಗಮ್ ಅಧಿಕಾರಕ್ಕೆ ಬಂದಳು. ಈಕೆಯೂ ಸಮರ್ಥಳಾಗಿದ್ದು ತಾಯಿ ಮಾಡಿದ ಸುಧಾರಣೆಗಳನ್ನು ಇನ್ನಷ್ಟು ವಿಸ್ತರಿಸಿದಳು. ಈಕೆಯ ಮೊದಲ ಮಹಾಯುದ್ಧಕಾಲದಲ್ಲಿ ಬ್ರಿಟಿಷರಿಗೆ ಸಹಾಯಮಾಡಿದಳು. 1936ರಲ್ಲಿ ಈಕೆಯ ಮಗ ಮಹಮದ್ ಹಮೀದುಲಾಖಾನ್ ನವಾಬನಾದ. ಈತನೂ ಸಮರ್ಥ ಆಡಳಿತಗಾರನಾಗಿದ್ದ. 1947ರಲ್ಲಿ ಭಾರತ ಸ್ವತಂತ್ರವಾದಾಗ ಭೂಪಾಲರಾಜ್ಯ ಭಾರತ ಗಣರಾಜ್ಯದಲ್ಲಿ ವಿಲೀನವಾಯಿತು. 1949ರಲ್ಲಿ ಈತ ಸರ್ಕಾರದ ರಾಜಧನವನ್ನು ಒಪ್ಪಿಕೊಂಡ. ಮುಂದೆ ರಾಜ್ಯ ಪುನರ್ವಿಂಗಡಣೆಯ ಕಾಲದಲ್ಲಿ (1956) ಭೂಪಾಲ ಮಧ್ಯಪ್ರದೇಶದಲ್ಲಿ ಸೇರಿಹೋಗಿ ಅದರ ರಾಜಧಾನಿಯಾಯಿತು.

ಉಲ್ಲೇಖಗಳು

  1. Pilgrimage Centers of India by Brajesh Kumar. Page 104. ISBN 978-81-7182-185-3.
  2. "City of Lakes". Retrieved 2007-04-12.

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: