ಥಾಲಿಯಮ್

ಥಾಲಿಯಮ್

ಥಾಲಿಯಮ್ ಒಂದು ಲೋಹ ಮೂಲಧಾತು. ಇದು ಬಹಳ ಮೃದುವಾದ ಲೋಹ. ವಿಷಕಾರಿಯಾಗಿರುವುದರಿಂದ ಇದನ್ನು ಮುಂಚೆ ಆರ್ಸೆನಿಕ್ ರೀತಿಯಲ್ಲಿ ಇಲಿ ಪಾಶಾಣವಾಗಿ ಉಪಯೋಗಿಸಲಾಗುತ್ತಿತ್ತು.[] ಈಗ ಇದನ್ನು ಗಾಜಿನ ಉತ್ಪಾದನೆಯಲ್ಲಿ,[] ಅರೆಸಂವಾಹಕಗಳಲ್ಲಿ, ಗಾಮ ವಿಕಿರಣವನ್ನು ಮತ್ತು ಬೆಳಕನ್ನು ಪತ್ತೆಹಚ್ಚುವ ಉಪಕರಣಗಳಲ್ಲಿ ಉಪಯೋಗಿಸಲಾಗುತ್ತದೆ.

ಈ ಲೋಹವನ್ನು ೧೮೬೧ರಲ್ಲಿ ವಿಲಿಯಮ್ ಕ್ರೂಕ್ಸ್ ಪತ್ತೆಹಚ್ಚಿದನು.[] ಇದು ವರ್ಣಪಂಕ್ತಿಯಲ್ಲಿ ಹಸಿರು ಗೆರೆಯನ್ನು ಮೂಡಿಸುವುದರಿಂದ ಇದರ ಹೆಸರು ಗ್ರೀಕ್ ಭಾಷೆಯ "ಹಸಿರು ಬಳ್ಳಿ" ಎಂಬ ಅರ್ಥ ಕೊಡುವ "ಥಾಲೋಸ್" ಪದದಿಂದ ಬಂದಿದೆ.[]

ಇದರ ಪ್ರತೀಕ TI, ಪರಮಾಣು ಸಂಖ್ಯೆ 81, ಸಾಪೇಕ್ಷ ಪರಮಾಣು ತೂಕ 204.37. ( ಆಧಾರದ ಮೇಲೆ), ಇದರ ಎಲೆಕ್ಟ್ರಾನಿಕ್ ವಿನ್ಯಾಸ 6s26p1 ಆವರ್ತ ಕೋಷ್ಟಕದಲ್ಲಿ ಇದರ ಸ್ಥಾನ III ನೆಯ ಗುಂಪಿನಲ್ಲಿರುವ B, AI, Ga, In ಗಳ ಕೆಳಗೆ 6ನೆಯ ಆವರ್ತದಲ್ಲಿ ಉಂಟು.

ಲಭ್ಯತೆ ಮತ್ತು ಉತ್ಪಾದನೆ

ನೈಸರ್ಗಿಕವಾಗಿ ಥ್ಯಾಲಿಯಮ್ ಭೂಮಿಯ 0.6x10-4 % ಭಾಗ ಮಾತ್ರ ಇದೆ ಅಷ್ಟೆ. ಇದರ ಖನಿಜಗಳು ಬಲು ಅಪೂರ್ವ. ಸಾಮಾನ್ಯವಾಗಿ ಇದು ಕಬ್ಬಿಣದ ಮತ್ತು ತಾಮ್ರದ ಸಲ್ಫೈಡ್ ಅದುರುಗಳಲ್ಲಿಯೂ ಸೆಲಿನೈಡ್ ಅದರುಗಳಲ್ಲಿಯೂ ಇರುವ ಒಂದು ಅಮುಖ್ಯ ಘಟಕವಾಗಿ ದೊರೆಯುತ್ತದೆ. ಇದನ್ನು ಕ್ಯಾಡ್ಮಿಯಮ್ ಮತ್ತು ಸೀಸ ಮುಂತಾದ ಇತರ ಲೋಹಗಳ ಶುದ್ಧೀಕರಣದಲ್ಲಿ ಉಪಪದಾರ್ಥವಾಗಿ ಪಡೆಯುತ್ತಾರೆ. ಈ ಅದುರುಗಳನ್ನು ಕುಲುಮೆಯಲ್ಲಿ ಕಾಸುವ ಕ್ರಿಯೆಯಲ್ಲಿ ಉಂಟಾಗುವ ಧೂಳುಕಣ ಸಂಗ್ರಹದಿಂದ ಥ್ಯಾಲಿಯಮ್ಮನ್ನು ಹೊರತೆಗೆಯುತ್ತಾರೆ. ಮತ್ತು ಸಲ್ಫೇಟ್ ದ್ರಾವಣಗಳ ವಿದ್ಯುತ್ ಅಪಕರ್ಷಣದಿಂದ ಇದನ್ನು ಲೋಹರೂಪದಲ್ಲಿ ಪಡೆಯುತ್ತಾರೆ.

ಗುಣಗಳು

ಥ್ಯಾಲಿಯಮ್ ಬಿಳಿ ಲೋಹ. ಚಾಕುವಿನಿಂದ ಇದನ್ನು ಸುಲಭವಾಗಿ ಕತ್ತರಿಸಬಹುದು. ಇದರ ಕರಗುವ ಬಿಂದು 302.50C, ಕುದಿ ಬಿಂದು 14600C ಮತ್ತು ಸಾಂದ್ರತೆ 11.83 ಗ್ರಾಮ್/ಸೆಂಮೀ3. ಅಯಾನಿಕ್ ತ್ರಿಜ್ಯಗಳು Tl+3 ಕ್ಕೆ 1.05Å ಮತ್ತು Tl+1 ಕ್ಕೆ 1.49Å. ವಾಯುವಿನಲ್ಲಿ ಇದು ಬಹಳ ಸುಲಭವಾಗಿ ಉತ್ಕರ್ಷಿಸುವುದರಿಂದ ಇದನ್ನು ಎಣ್ಣೆಯಲ್ಲಿ ಸಂಗ್ರಹಿಸಬೇಕಾಗುವುದು. Tl → Tl + e- ಕ್ರಿಯೆಗೆ ಪ್ರಮಾಣಕ ವಿದ್ಯುದಗ್ರ ವಿಭವ +0.3363 V ಇರುವುದರಿಂದ ಹೈಡ್ರೋಜನ್ ಆಯಾನುಗಳು ಈ ಲೋಹವನ್ನು ಉತ್ಕರ್ಷಿಸಬಲ್ಲವು. ಆದರೆ ಇವನ್ನು ಕರಗಿಸಲು ನೈಟ್ರಿಕ್ ಆಮ್ಲದಂಥ ಉತ್ಕರ್ಷಣಶೀಲ ಆಮ್ಲವನ್ನು ಬಳಸಬೇಕಾಗುವುದು; ಏಕೆಂದರೆ ಥ್ಯಾಲಿಯಮ್ ಕ್ಲೋರೈಡ್ ಮತ್ತು ಸಲ್ಫೇಟುಗಳು ಅಲ್ಪ ವಿಲೀನಕಗಳಾಗಿದ್ದು ಉತ್ಕರ್ಷಣಕ್ರಿಯೆಗೆ ಅಡ್ಡಿಯಾಗುತ್ತವೆ.

ಸಂಯುಕ್ತಗಳು

ಥ್ಯಾಲಿಯಮ್ ಎರಡು ಬಗೆಯ ಸಂಯುಕ್ತಗಳನ್ನು ಕೊಡುತ್ತದೆ. +1 ವೇಲೆನ್ಸಿ ಇರುವ ಥ್ಯಾಲಸ್ ಸಂಯುಕ್ತಗಳು ಮತ್ತು +3 ವೇಲೆನ್ಸಿ ಇರುವ ಥ್ಯಾಲಿಕ್ ಸಂಯುಕ್ತಗಳು. ಥ್ಯಾಲಸ್ ಸಂಯುಕ್ತಗಳು ಬೆಳ್ಳಿಯ ಸಂಯುಕ್ತಗಳನ್ನು ಹೋಲುತ್ತವೆ;  ಅದೇ ರೀತಿ TlF ವಿಲೀನಕವೂ ಇತರ ಹ್ಯಾಲೈಡುಗಳು ಅವಿಲೀನಕಗಳೂ ಆಗಿರುತ್ತವೆ. ಆದರೆ TlOH, ಕ್ಷಾರಲೋಹಗಳ ಹೈಡ್ರಾಕ್ಸೈಡ್‌ಗಳಂತೆ ಸಾರ ಕ್ಷಾರವಾಗಿರುತ್ತದೆ. ಥ್ಯಾಲಿಕ್ ಸಂಯುಕ್ತಗಳು ಸಾಮಾನ್ಯವಾಗಿ IIIನೆಯ ಗುಂಪಿನ ಇತರ ಸಂಯುಕ್ತಗಳಂತೆ ವರ್ತಿಸುತ್ತದೆ; ಇದಕ್ಕೆ ಅಪವಾದವೆಂದರೆ Tl(OH)3. ಇದು ಕ್ಷಾರೀಯ ದ್ರಾವಣದಲ್ಲಿ ಸ್ವಲ್ವವೂ ವಿಲೀನವಾಗುವುದಿಲ್ಲ. ಅಲ್ಲದೆ Tl+3 ಒಂದು ಉತ್ತಮ ಉತ್ಕರ್ಷಣಕಾರಿ.

Tl+ → Tl+3 + 2e-    -1.25 V

ಆಕ್ಸೈಡುಗಳಲ್ಲಿ Tl(I) ಆಕ್ಸೈಡ್ ಕಪ್ಪು ಪುಡಿ. ಇದು ನೀರಿನಲ್ಲಿ ವಿಲೀನಗೊಂಡಾಗ ಸಾರ ಕ್ಷಾರವಾದ TlOHನ್ನು ಕೊಡುತ್ತದೆ. Tl (III)ಯ ದ್ರಾವಣಕ್ಕೆ ಕ್ಷಾರವನ್ನು ಕೂಡಿಸಿದಾಗ ಒತ್ತರಗೊಳ್ಳುವ Tl2O3 ಕಂದುಬಣ್ಣವುಳ್ಳದ್ದು. ಇದಕ್ಕೆ ಅನುಗುಣವದ ಹೈಡ್ರಾಕ್ಸೈಡ್ ಇರುವದಿಲ್ಲ. Tl(III)ರ ಕಾರ್ಬೋನೇಟುಗಳು, ಸಲ್ಫೇಟುಗಳು ಫಾಸ್ಫೇಟುಗಳು ಮತ್ತು ಆಕ್ಸಲೇಟುಗಳು ಸಹ ಆವಿಲೀನಕಗಳಾಗಿರುತ್ತವೆ. 1000Cಯಲ್ಲಿ ಕಾಸಿದಾಗ Tl(III) ಆಕ್ಸೈಡ್ ವಿಭಜನೆ ಹೊಂದಿ Tl(I)  ಆಕ್ಸೈಡನ್ನು ಕೊಡುತ್ತದೆ. ಜಾಗರೂಕತೆಯಿಂದ Tl(III) ಹ್ಯಾಲೈಡುಗಳನ್ನು ಮಾಡುವುದರಿಂದ Tlನ ಮಿಶ್ರಉತ್ಕರ್ಷಕ ಸ್ಥಿತಿಗಳುಳ್ಳ ಸಂಯುಕ್ತಗಳನ್ನು ಪಡೆಯಬಹುದು. ಉದಾಹರಣೆಗೆ Tl3(TlCl6) ಮತ್ತು Tl(TlBr4) ಕ್ಷಾರೀಯ ಲೋಹಗಳ ಹ್ಯಾಲೈಡುಗಳೊಂದಿಗೆ ಋಣ ಆಯಾನಿನಲ್ಲಿ Tl(III) ವೇಲೆನ್ಸಿ ಸ್ಥಿತಿಯುಳ್ಳ ಜಲಯುಕ್ತ ಲವಣಗಳು ಉಂಟಾಗುತ್ತವೆ. ಉದಾಹರಣೆಗೆ NaTH4, KTlI4,  KTlBr4 ಮತ್ತು K3TlCl6.

R3Tl ಮತ್ತು R2TlX (X=ಹ್ಯಾಲೋಜನ್) ಎಂಬ ಸಾಮಾನ್ಯ ವರ್ಗಗಳ ಕಾರ್ಬನಿಕ ಲೋಹೀಯ ಸಂಯುಕ್ತಗಳನ್ನು ಥ್ಯಾಲಿಯಮ್ ಕೊಡಬಲ್ಲದು. ಉದಾಹರಣೆಗೆ, Et2TlCl ನ್ನು ಈಥೈಲ್ ಮೆಗ್ನೀಸಿಯಮ್ ಬ್ರೋಮೈಡ್ ಮತ್ತು Tl(III) ಕ್ಲೋರೈಡುಗಳ ಕ್ರಿಯೆಯಿಂದ ತಯಾರಿಸಬಹುದು. Et3Tlನ್ನು ಸೂಕ್ತವಾದ ಒಂದು ದ್ರಾವಕದಲ್ಲಿ ಲೀಥಿಯಮ್ ಈಥೈಲ್ ಮತ್ತು ಡೈಈಥೈಲ್ ಥ್ಯಾಲಿಯಮ್ ಕ್ಲೋರೈಡುಗಳ ಕ್ರಿಯೆಯಿಂದ ಪಡೆಯಬಹುದು. ಟ್ರೈ ಆಲ್ಕೈಲ್ ಸಂಯುಕ್ತಗಳು ಸಾಮಾನ್ಯವಾಗಿ ಡೈಆಲ್ಕೈಲ್ ಸಂಯುಕ್ತಗಳಿಗಿಂತಲೂ ಹೆಚ್ಚು ಸುಲಭವಾಗಿ ಉಷ್ಣದಿಂದ ವಿಭಜನೆ ಹೊಂದುವುವು. ಥ್ಯಾಲಿಯಮಿನ ಪ್ರಮಾಣವನ್ನು ರೋಹಿತದರ್ಶಕೀಯ ವಿಧಾನಗಳಿಂದಾಗಿ ದ್ರಾವಣದಲ್ಲಿ ಉತ್ಕರ್ಷಕ ಮಿತೀಯ ವಿಧಾನಗಳಿಂದಾಗಲಿ ನಿರ್ಧಾರ ಮಾಡಬಹುದು. ಥ್ಯಾಲಿಯಮ್ ಸಂಯುಕ್ತಗಳೆಲ್ಲವೂ ವಿಷ ಪದಾರ್ಥಗಳು. ಇವನ್ನು ಮೂಷಕ ನಿರ್ಮೂಲನಕ್ಕಾಗಿ ಉಪಯೋಗಿಸುವುದುಂಟು. ಈ ಸಂಯುಕ್ತಗಳಿಗೆ ಸದ್ಯದಲ್ಲಿ ಪ್ರಮುಖವಾದ ಉಪಯೋಗಗಳು ಅಷ್ಟಾಗಿಲ್ಲ.

ಉಲ್ಲೇಖಗಳು

  1. Hasan, Heather (2009). The Boron Elements: Boron, Aluminum, Gallium, Indium, Thallium. Rosen Publishing Group. p. 14. ISBN 978-1-4358-5333-1.
  2. "Chemical fact sheet – Thallium". Spectrum Laboratories. April 2001. Archived from the original on 2008-02-21. Retrieved 2008-02-02.
  3. * Crookes, William (March 30, 1861) "On the existence of a new element, probably of the sulphur group," Chemical News, vol. 3, pp. 193–194; reprinted in: Crookes, William (April 1861). "XLVI. On the existence of a new element, probably of the sulphur group". Philosophical Magazine. 21 (140): 301–305. doi:10.1080/14786446108643058. Archived from the original on 2014-07-01. Retrieved 2016-09-26.;
    • Crookes, William (May 18, 1861) "Further remarks on the supposed new metalloid," Chemical News, vol. 3, p. 303.
    • Crookes, William (June 19, 1862) "Preliminary researches on thallium," Proceedings of the Royal Society of London, vol. 12, pages 150–159.
    • Lamy, A. (May 16, 1862) "De l'existencè d'un nouveau métal, le thallium," Comptes Rendus, vol. 54, pages 1255–1262 Archived 2016-05-15 at the Portuguese Web Archive.
  4. Weeks, Mary Elvira (1932). "The discovery of the elements. XIII. Supplementary note on the discovery of thallium". Journal of Chemical Education. 9 (12): 2078. Bibcode:1932JChEd...9.2078W. doi:10.1021/ed009p2078.


ಹೊರಗಿನ ಕೊಂಡಿಗಳು